Tag: Poor

  • ಡ್ಯಾನ್ಸರ್, ಸ್ಲಂ ನಿವಾಸಿಗಳಿಗೆ ತುಪ್ಪದ ಬೆಡಗಿಯ ಸಹಾಯ ಹಸ್ತ

    ಡ್ಯಾನ್ಸರ್, ಸ್ಲಂ ನಿವಾಸಿಗಳಿಗೆ ತುಪ್ಪದ ಬೆಡಗಿಯ ಸಹಾಯ ಹಸ್ತ

    – ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ವಿತರಣೆ

    ಬೆಂಗಳೂರು: ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ನಿರಾಶ್ರಿತರಿಗೆ, ಬಡವರಿಗೆ ಆಹಾರ ಪದಾರ್ಥ, ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ನೀಡುವ ಮೂಲಕ ನೆರವಾಗುತ್ತಿದ್ದಾರೆ.

    ತಮ್ಮ ಆರ್‍ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ದ್ವಿವೇದಿ ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆಯನ್ನು ಮಾಡಿದ್ದಾರೆ.

    ಕೆಲ ಮಹಿಳಾ ಹಾಸ್ಟೆಲ್‍ಗಳಿಗಳಲ್ಲಿರುವ ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ವಿತರಿಸುವ ಮೂಲಕ ಮಹಿಳೆಯರ ಸಹಾಯಕ್ಕೂ ರಾಗಿಣಿ ನಿಂತಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಬಡವರಿಗೆ, ನಿರಾಶ್ರಿತರಿಗೆ ರಾಗಿಣಿ ಸಹಾಯ ಮಾಡುತ್ತಿದ್ದು, ಹಲವು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಕೊರೊನಾ ವಾರಿಯರ್ಸ್‍ಯಿಂದ ಹಿಡಿದು ಬಡ ಜನರ ವರೆಗೆ ರಾಗಿಣಿ ಸಹಾಯ ಮಾಡುತ್ತಿದ್ದಾರೆ.

    ಈ ಹಿಂದೆ ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ಪೊಲೀಸ್, ಪೌರ ಕಾರ್ಮಿಕರಿಗೆ ಊಟ ವಿತರಿಸಿದ್ದಾರೆ. ಹಲವು ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಸ್ವತಃ ಅವರೇ ಆಹಾರದ ಕಿಟ್ ವಿತರಿಸಿದ್ದಾರೆ. ಈ ಮೂಲಕ ಬಡವರ ಸಹಾಯಕ್ಕೆ ನಿಂತಿದ್ದಾರೆ. ಇಷ್ಟು ಮಾತ್ರವಲ್ಲದೆ ಬೀದಿ ನಾಯಿಗಳು, ಪ್ರಾಣಿಗಳಿಗೂ ರಾಗಿಣಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ಮಹಿಳೆಯರಿಗೆ, ಡ್ಯಾನ್ಸರ್ಸ್‍ಗೆ ಹಾಗೂ ಸ್ಲಂ ನಿವಾಸಿಗಳಿಗೆ ನೆರವಾಗುತ್ತಿದ್ದಾರೆ.

    ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ರೀಲ್ ಜೀವನವನ್ನು ನಾವು ತುಂಬಾ ಇಷ್ಟಪಡುತ್ತೇವೆ. ಅಂತೆಯೇ ಇದೀಗ ರಿಯಲ್ ಜೀವನ ತುಂಬಾ ಅಪ್ಯಾಯಮಾನವಾಗಿದ್ದು, ಇದಕ್ಕೆ ಗೌರವ ಸಲ್ಲಿಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ಇದೇ ರೀತಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ಅಡುಗೆ ಮಾಡುವುದು, ಫುಡ್ ಕುರಿತ ಅಪ್‍ಡೇಟ್‍ಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಮಾನವೀಯ ಗುಣಗಳನ್ನು ತೋರಿಸುವ ಕೆಲಸಗಳ ಕುರಿತು ಸಹ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಶಲೋಪರಿ ವಿಚಾರಿಸಿದ್ದರು. ಇದೀಗ ಸ್ವತಃ ಅವರೇ ಬಡವರ ಸಹಾಯಕ್ಕೆ ನಿಂತಿದ್ದಾರೆ.

  • ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದ ಎಚ್‍ಡಿಡಿ

    ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದ ಎಚ್‍ಡಿಡಿ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಇಂದು ಬೆಂಗಳೂರು ಹೊರವಲಯ ಹೆಗ್ಗನಹಳ್ಳಿಗೆ ಭೇಟಿ ನೀಡಿ ಹಸಿದವರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿ ಖುಷಿ ಪಟ್ಟಿದ್ದಾರೆ.

    ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸ್ಥಳೀಯ ಜೆಡಿಎಸ್ ಮುಖಂಡ ಗಂಗಾಧರ್ ನೇತೃತ್ವದಲ್ಲಿ 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸ್ವತಃ ದೇವೇಗೌಡರೇ ಜನರಿಗೆ ಹೋಳಿಗೆ, ಪಲಾವ್, ಬಜ್ಜಿ ಬಡಿಸಿದರು. ಆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

    ಈ ಬಗ್ಗೆ ಮಾತನಾಡಿದ ಎಚ್‍ಡಿಡಿ, ಈ ಭಾಗದಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಹಾಗೂ ಬಡ ವರ್ಗದ ಜನರು ಇದ್ದಾರೆ. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ಈ ಜನರಿಗೆ ನಮ್ಮ ಗಂಗಾಧರ್ ಹಾಗೂ ದಾಸರಹಳ್ಳಿಯ ಶಾಸಕ ಮಂಜುನಾಥ್ ಸಹಾಯ ಮಾಡಿ ಜನರ ಹಸಿವನ್ನ ನೀಗಿಸುವ ಕೆಲಸ ಮಾಡುತ್ತಿದ್ದಾರೆ, ಇದು ಬಹಳ ಸಂತಸ ತಂದಿದೆ ಎಂದು ಹೇಳಿದರು.

    ಬಳಿಕ ಕಾರ್ಮಿಕರ ಸ್ಥಳಾಂತರ ವಿಚಾರದಲ್ಲಿ ಶನಿವಾರ ರಾಜ್ಯ ಸರ್ಕಾರ ತಪ್ಪು ಮಾಡಿದೆ. ರೈಲಿನಲ್ಲಿ 1,200 ಕಾರ್ಮಿಕರನ್ನು ಕಳುಹಿಸಿದ್ದಾರೆ. ಕಾರ್ಮಿಕರು ಊಟ, ವಸತಿ ಇಲ್ಲದೆ ಹಸಿವಿನಿಂದ ಬಳಲಿದ್ದಾರೆ. ಜನರ ಪ್ರತಿಭಟನೆ ಹಿನ್ನೆಲೆ ಇಂದು ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ. ಬಹುಶಃ ಇನ್ನೂ ಹೆಚ್ಚಿನ ರೈಲಿನ ವ್ಯವಸ್ಥೆ ಮಾಡಬಹುದು ಎಂದರು. ಇದೇ ವೇಳೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಹೆಚ್ಚು ಪ್ರತಿಕ್ರಿಯಿಸದೆ, ಅವರು ಯಾಕೆ ಪ್ರತಿಭಟನೆ ಮಾಡಬೇಕಿತ್ತು ನನಗೆ ಗೊತ್ತಿಲ್ಲ ಎಂದು ಎಚ್‍ಡಿಡಿ ಸುಮ್ಮನಾದರು.

  • ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ನವದೆಹಲಿ: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ 65,000 ಕೋಟಿ ರೂ. ಮೀಸಲಿಡಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಆರ್ಥಿಕ ಪರಿಸ್ಥಿತಿ ಸುಧಾರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಕೊರೊನಾದಿಂದ ಭಾರತದ ಆರ್ಥಿಕತೆ ಪೆಟ್ಟು ತಿಂದಿದೆ. ಆರ್ಥಿಕತೆಯ ಪುನರಾರಂಭಿಸಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಇಂಥ ಘಟನೆಗಳಿಂದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಕೂಡ ಇದ್ದು, ಪರಿಸ್ಥಿತಿಯ ಲಾಭ ಪಡೆಯುವ ಹಲವು ಮಾರ್ಗಗಳಿದ್ದು ಅವುಗಳನ್ನು ಸರ್ಕಾರ ಬಳಸಿಕೊಳ್ಳಬೇಕಿದೆ ಎಂದು ರಾಜನ್ ಹೇಳಿದ್ದಾರೆ.

    ಜಾಗತಿಕ ಆರ್ಥಿಕತೆ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಭಾರತದಲ್ಲಿ ಸಾಕಷ್ಟು ಸಂಪನ್ಮೂಲಗಳಿದೆ ನಮ್ಮ ಸೀಮಿತ ಸಾಮರ್ಥ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಆರ್ಥಿಕತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇಗೆ ಎಂದು ನಿರ್ಧರಿಸಬೇಕು. ಲಾಕ್‍ಡೌನ್ ಮುಗಿದ ಬಳಿಕ ಸಮಸ್ಯೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ದೇಶದ ಪರಿಸ್ಥಿತಿ ಇನ್ನಷ್ಟು ದುರ್ಬಲಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲಿ ನಿರ್ವಹಿಸಬೇಕು ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಜೊತೆಗೆ ಜನರಿಗೆ ಜೀವನೋಪಾಯ ತೆರೆಯುವ ಬಗ್ಗೆ ಸರ್ಕಾರ ಚಿಂತಿಸಬೇಕು ಜನರನ್ನು ಸಾಯಲು ಬಿಡಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೊರೊನಾ ಪರಿಸ್ಥಿತಿ ನಿಯಂತ್ರಣ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತಮ ಕೆಲಸ ಮಾಡುತ್ತಿವೆ. ದಕ್ಷಿಣ ರಾಜ್ಯಗಳಲ್ಲಿ ವಿಕೇಂದ್ರೀಕರಣ ಪದ್ಧತಿ ಇದೆ ಜನರಿಗೆ ಏನು ಮಾಡಬೇಕೆಂದು ಯೋಚಿಸುವ ಶಕ್ತಿ ಇದೆ ಎಂದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ‘ಏನೇ ಆಗ್ಲಿ 1 ರೂಪಾಯಿಗೇ ಇಡ್ಲಿ ಮಾರುತ್ತೇನೆ’ – ಲಾಕ್‍ಡೌನ್‍ನಲ್ಲೂ ಬಡವರಿಗಾಗಿ ಶ್ರಮಿಸುತ್ತಿರೋ ಅಜ್ಜಿ

    ‘ಏನೇ ಆಗ್ಲಿ 1 ರೂಪಾಯಿಗೇ ಇಡ್ಲಿ ಮಾರುತ್ತೇನೆ’ – ಲಾಕ್‍ಡೌನ್‍ನಲ್ಲೂ ಬಡವರಿಗಾಗಿ ಶ್ರಮಿಸುತ್ತಿರೋ ಅಜ್ಜಿ

    – ಸಾಮಗ್ರಿ ದುಬಾರಿ ಎಂದು ಇಡ್ಲಿ ಬೆಲೆ ಏರಿಕೆ ಮಾಡಲ್ಲ
    – ಇಳಿ ವಯಸ್ಸಲ್ಲೂ ಮಾನವೀಯತೆ ಮೆರೆಯುತ್ತಿರುವ ಅಜ್ಜಿ

    ಚೆನ್ನೈ: ಲಾಕ್‍ಡೌನ್‍ನಲ್ಲಿ ಅಡುಗೆ ಸಾಮಗ್ರಿ ಬೆಲೆ, ದಿನ ಬಳಿಕೆಯ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಹಲವರು ಇದೇ ಒಳ್ಳೆಯ ಅವಕಾಶ ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿ ಹಣ ಮಾಡೋಣ ಅಂತ ಪ್ಲಾನ್ ಹಾಕಿ, ಹಣ ಗಳಿಸುತ್ತಿದ್ದಾರೆ. ಆದರೆ ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ ‘ಇಡ್ಲಿ ಪಾಟಿ'(ಇಡ್ಲಿ ಅಜ್ಜಿ) ಎಂದೇ ಖ್ಯಾತಿಗಳಿಸಿರುವ 85 ವರ್ಷದ ವೃದ್ಧೆ ಕಮಲಥಾಲ್ ಅವರು ಲಾಕ್‍ಡೌನ್‍ನಲ್ಲಿಯೂ ಕೇವಲ 1 ರೂಪಾಯಿಗೇ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಸಾಮಗ್ರಿ ಬೆಲೆ ದುಬಾರಿಯಾದರೂ ಬಡವರ ಹಸಿವು ನೀಗಿಸಲು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಾ ಮಾನವೀಯತೆ ಮೆರೆದಿದ್ದಾರೆ.

    ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತಮ್ಮ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ 1 ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ. ಇದನ್ನೂ ಓದಿ: ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಲಾಕ್‍ಡೌನ್ ಅವಧಿಯಲ್ಲಿ ಅಡುಗೆ ಸಾಮಗ್ರಿ ಬೆಲೆ ಏರಿಕೆಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಹೆಚ್ಚು ಹಣ ಕೊಟ್ಟು ಆಹಾರ ಪಡೆಯಲು ಕಷ್ಟವಾಗುತ್ತದೆ. ಸಾಮಗ್ರಿ ಬೆಲೆ ಹೆಚ್ಚಾದರೂ ನಾನು ಒಂದು ಇಡ್ಲಿಗೆ 1 ರೂಪಾಯಿ ತೆಗೆದುಕೊಳ್ಳುತ್ತೇನೆ. ಲಾಭಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಬಡವರಿಗೆ, ಹಸಿದವರಿಗೆ ಆಹಾರ ನೀಡಬೇಕು ಎನ್ನುವುದು ನನ್ನ ಆಶಯ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.

    ಸಾಮಗ್ರಿ ಬೆಲೆಯೆಲ್ಲಾ ದುಬಾರಿಯಾಗಿದೆ. ಇಡ್ಲಿ ತಯಾರಿಸಲು ಕಷ್ಟವಾಗುತ್ತಿದೆ. ಆದರೆ ಕೆಲವರು ನನಗೆ ದಿನಸಿ ಸಾಮಗ್ರಿ, ತರಕಾರಿಗಳನ್ನು ತಂದುಕೊಟ್ಟು ಸಹಾಯ ಮಾಡುತ್ತಿದ್ದಾರೆ. ಉದ್ದಿನ ಬೇಳೆ ಬೆಲೆ ಕೆಜಿಗೆ 100 ರೂಪಾಯಿಂದ 150 ರೂಪಾಯಿ ಆಗಿದೆ. ಮೆಣಸು ಕೆಜಿಗೆ 150 ರೂಪಾಯಿಂದ 200 ರೂಪಾಯಿ ಆಗಿದೆ. ಆದರೂ ನಾನು ಇಡ್ಲಿ ಬೆಲೆ ಏರಿಕೆ ಮಾಡಲ್ಲ. ಹೇಗೋ ಈ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಅಜ್ಜಿ ತಿಳಿಸಿದ್ದಾರೆ.

    ಸದ್ಯ ಅಜ್ಜಿ ದಿನಕ್ಕೆ 300ಕ್ಕೂ ಹೆಚ್ಚು ಮಂದಿಗೆ ಆಹಾರ ನೀಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಇಡ್ಲಿ ಪಾರ್ಸಲ್ ನೀಡುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ಬಂದ ಜನರು ಲಾಕ್‍ಡೌನ್‍ನಿಂದ ಇಲ್ಲೇ ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ತನ್ನಿಂದ ಸಹಾಯವಾಗಲಿ ಎಂದು ಅಜ್ಜಿ ಇಂದಿಗೂ 1 ರೂಪಾಯಿಗೆ ಇಡ್ಲಿ ಮಾರುತ್ತಾ ಮನವೀಯತೆ ಮೆರೆದಿದ್ದಾರೆ.

  • ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

    ಕೊಡಗಿನ ಬಡವರ ಕಷ್ಟಕ್ಕೆ ಮಾಧ್ಯಮ ‘ಸ್ಪಂದನ’

    ಮಡಿಕೇರಿ: ಸಮಾಜದಲ್ಲಿ ಪತ್ರಕರ್ತರಿಂದ ಹೆಚ್ಚು ಪ್ರಚಾರಗಿಟ್ಟಿಸಿಕೊಳ್ಳುವವರೇ ಹೆಚ್ಚು. ಅದರಲ್ಲೂ ಈ ಲಾಕ್‍ಡೌನ್ ಸಮಯದಲ್ಲಿ ಬಡ ಜನರಿಗೆ ಸೇವೆ ಮಾಡುವ ಅನೇಕ ಸಂಘ ಸಂಸ್ಥೆಗಳು ಮಾಧ್ಯಮದವರು ಹಾಗೂ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಪ್ರಚಾರ ಪಡೆದುಕೊಳ್ಳುತ್ತಾರೆ.

    ಪ್ರಚಾರ ಕೊಡುವ ಪತ್ರಕರ್ತರೇ ಯಾರಿಗೂ ತಿಳಿಯದಂತೆ ಸಂಕಷ್ಟದಲ್ಲಿ ಇರುವವರಿಗೆ ಮಾಧ್ಯಮ ಸ್ಪಂದನ ತಂಡ ಕಟ್ಟಿಕೊಂಡು ಜಿಲ್ಲೆಯ ವಿವಿಧೆಡೆ ತಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡುತ್ತಿದ್ದಾರೆ. ಹೌದು, ಕೊಡಗಿನಲ್ಲಿ ಹಲವಾರು ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಊಟದ ವ್ಯವಸ್ಥೆಗೂ ಆಹಾರ ಪದಾರ್ಥಗಳು ಸಿಗುವುದು ಕಷ್ಟವಾಗಿದೆ. ಇದರಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸೇರಿ ಸಂಕಷ್ಟದಲ್ಲಿರುವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

    ಪತ್ರಕರ್ತರು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳ ಮೂಲಕ ಸಮಸ್ಯೆಯನ್ನು ಪರಿಹಾರ ಮಾಡಿಸಿಕೊಡುತ್ತಿದ್ದಾರೆ. ಸಮಸ್ಯೆ ಇರುವ ಕಡೆಗಳಿಂದ ಕರೆ ಬಂದರೆ ತಕ್ಷಣ ಮಾಧ್ಯಮದವರ ತಂಡ ನೆರವಿಗೆ ಬರುತ್ತಿದೆ. ಈಗಾಗಲೇ ಜಿಲ್ಲೆಯ ಹಲವು ಬಡ ಕುಟುಂಬಗಳಿಗೆ ಮಾಧ್ಯಮ ತಂಡದ ಸದಸ್ಯರು ಮನೆಗೆ ನೇರವಾಗಿ ತೆರಳಿ ಆಹಾರ ಪದಾರ್ಥಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯ ವಿವಿಧೆಡೆ ಇರುವ ಪತ್ರಕರ್ತರು ತಮ್ಮ ವೃತ್ತಿಯೊಂದಿಗೆ ಈ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೋಟದಲ್ಲಿ ಕೂಲಿ ಮಾಡುವ ಕಾರ್ಮಿಕರು, ಅನಾರೋಗ್ಯ ಪೀಡಿತರು ಹಾಗೂ ಬಡವರಿಗೆ ಗರ್ಭಿಣಿಯರಿಗೆ ಮಾಧ್ಯಮ ಸ್ಪಂದನಾ ತಂಡ ನೆರವಾಗುತ್ತಿದೆ. ತಮ್ಮ ಕಾಯಕದ ನಡುವೆಯೂ ಕೊಡಗಿನ ಮಾಧ್ಯಮದ ವರದಿಗಾರರು ಈ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.

  • ಬಡವರ ಆತ್ಮಗೌರವ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ: ಪಿ.ಚಿದಂಬರಂ

    ಬಡವರ ಆತ್ಮಗೌರವ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ: ಪಿ.ಚಿದಂಬರಂ

    ನವದೆಹಲಿ: ಲಾಕ್‍ಡೌನ್‍ನಿಂದಾಗಿ ಕೆಲಸ ಕಳೆದುಕೊಂಡು, ಹಸಿವಿನಿಂದ ಬಳಲುತ್ತಿರುವ ಬಡವರ ಆತ್ಮಗೌರವವನ್ನು ಕಾಪಾಡುವಲ್ಲಿ ಸರ್ಕಾರ ಎಡವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹರಿಹಾಯ್ದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ, ತುಂಬಾ ಜನರ ಬಳಿ ಹಣವೇ ಇಲ್ಲದಂತಾಗಿದ್ದು, ಬಹುತೇಕರು ಉಚಿತವಾಗಿ ಹಂಚುತ್ತಿರುವ ಊಟಕ್ಕಾಗಿ ಸಾಲು ನಿಲ್ಲುತ್ತಿದ್ದಾರೆ. ಇಂತಹವರಿಗೆ ಸರ್ಕಾರ ಹಣ ನೀಡಬೇಕು ಹಾಗೂ ಉಚಿತ ಆಹಾರ ಪದಾರ್ಥಗಳನ್ನು ನೀಡಬೇಕು. ಕೇವಲ ಹೃದಯವಿಲ್ಲದ ಸರ್ಕಾರ ಮಾತ್ರ ಏನೂ ಮಾಡದಿರಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸರ್ಕಾರ ಪ್ರತಿ ಬಡ ಕುಟುಂಬಕ್ಕೆ ಹಣ ನೀಡುವ ಮೂಲಕ ಜನರನ್ನು ಹಸಿವಿನಿಂದ ಯಾಕೆ ಕಾಪಾಡುತ್ತಿಲ್ಲ ಹಾಗೂ ಅವರ ಗೌರವವನ್ನೇಕೆ ಉಳಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ 77 ಮಿಲಿಯನ್ ಟನ್ ಧಾನ್ಯಗಳಿದ್ದು, ಅದರಲ್ಲಿ ಸಣ್ಣ ಪ್ರಮಾಣವನ್ನು ಸರ್ಕಾರ ಬಡವರಿಗೇಕೆ ಹಂಚುತ್ತಿಲ್ಲ ಎಂದು ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಎರಡು ಟ್ವೀಟ್‍ಗೆ ಪ್ರತಿಯಾಗಿ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಈ ಎರಡು ಆರ್ಥಿಕತೆ ಹಾಗೂ ನೈತಿಕತೆಯ ಪ್ರಶ್ನೆಗಳಾಗಿದ್ದು, ಇವೆರಡಕ್ಕೂ ಉತ್ತರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಫಲರಾಗಿದ್ದಾರೆ ಎಂದು ಅವರನ್ನು ಟ್ಯಾಗ್ ಮಾಡಿದ್ದಾರೆ. ಇಡೀ ದೇಶ ಇದನ್ನು ಅಸಹಾಯಕತೆಯಿಂದ ವಿಕ್ಷೀಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ದೇಶಾದ್ಯಂತ 15 ಸಾವಿರಕ್ಕೂ ಅಧಿಕ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 500ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ್ದರ ಕುರಿತು ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

  • ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ಶಿವಮೊಗ್ಗ: ಕೊರೊನಾ ಮಹಾಮಾರಿ ಸೋಂಕು ರೈತರಿಗೂ ಬೆಂಬಿಡದೇ ಕಾಡುತ್ತಿದ್ದು, ತಾವು ಬೆಳೆದ ಬೆಳೆ, ಹಣ್ಣುಗಳನ್ನು ಮಾರಾಟ ಮಾಡಲಾಗದೇ ರೈತರು ಒದ್ದಾಡುತ್ತಿದ್ದಾರೆ. ಈ ವೇಳೆ ಸರ್ಕಾರವೇನಾದರೂ ಸಹಾಯ ಮಾಡಲಿ ಎಂದು ಗೋಗರೆಯುತ್ತಿದ್ದಾರೆ.

    ಈ ರೀತಿಯ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಬೆಂಬಲವಾಗಿ ನಿಂತಿದ್ದು, ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ತಾವೇ ಸ್ವಂತ ಹಣದಿಂದ ಖರೀದಿ ಮಾಡಿದ್ದಾರೆ. ಜೊತೆಗೆ ಇದನ್ನು ಸಾರ್ವಜನಿಕರಿಗೆ ವಿತರಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.

    ಹಣ್ಣು ಬೆಳೆಗಾರರಿಗೆ ನಷ್ಟವುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಚಿವರು ತಾವೇ ಖರೀದಿಸಿ, ರೈತರ ಕೈ ಹಿಡಿದಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಣ್ಣು ಬೆಳೆಗಾರರು ವಿವಿಧ ಹಣ್ಣುಗಳನ್ನು ಬೆಳೆದು ಕೆಲವು ಕಡೆಗಳಲ್ಲಿ ನಾಶ ಮಾಡಿದ್ದರು. ಆದರೆ ಕೆಲವು ಭಾಗದಲ್ಲಿ ಕಲ್ಲಂಗಡಿ ಬೆಳೆದು ಮಾರಾಟ ಮಾಡಲಾಗದೆ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದ ಬೆಳಗಾರರಿಗೆ ಸಚಿವ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ವಿವಿಧ ಬೆಳೆಗಾರರಿಂದ ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

    ಅದರಂತೆ ಇಂದು ಈ ಹಣ್ಣುಗಳ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಬಳಿ ಹಣ್ಣುಗಳು ತುಂಬಿದ್ದ ವಾಹನಗಳಿಗೆ ಚಾಲನೆ ನೀಡಿದರು. ನಗರದ 35 ವಾರ್ಡ್ ಗಳಿಗೆ ತೆರಳಿ ಅಲ್ಲಿನ ಅರ್ಹ ಬಡವರಿಗೆ ಈ ಹಣ್ಣನ್ನು ಉಚಿತವಾಗಿ ಹಂಚುವ ಕಾರ್ಯವನ್ನು ಇಂದು ಸಚಿವ ಈಶ್ವರಪ್ಪ ಮಾಡುತ್ತಿದ್ದಾರೆ.

  • ಬಡ ರೈತರ ಬೆನ್ನಿಗೆ ನಿಂತ ಮಾಜಿ ಶಾಸಕ- ತರಕಾರಿ, ಅಕ್ಕಿ, ಜೋಳ ಖರೀದಿಸಿ ಹಂಚಿಕೆ

    ಬಡ ರೈತರ ಬೆನ್ನಿಗೆ ನಿಂತ ಮಾಜಿ ಶಾಸಕ- ತರಕಾರಿ, ಅಕ್ಕಿ, ಜೋಳ ಖರೀದಿಸಿ ಹಂಚಿಕೆ

    ಬಳ್ಳಾರಿ: ಕೊರೊನಾ ವೈರಸ್ ನಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಈ ವರ್ಷ ಉತ್ತಮ ಇಳುವರಿ ಬಂದರೂ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ತಾವೇ ಸ್ವತಃ ತಮ್ಮ ಕೈಯಾರೆ ನಾಶಮಾಡುವ ಸ್ಥಿತಿ ಬಂದೊದಗಿದೆ.

    ಸರಿಯಾದ ಬೆಲೆ ಸಿಗದೆ ಬೆಳೆಗಳನ್ನು ನಾಶ ಮಾಡುತ್ತಿರುವ ಬಡ ರೈತರ ಬೆನ್ನಿಗೆ ಕಾಂಗ್ರೆಸ್ ಮುಖಂಡ ಸಿರಾಜ್ ಶೇಕ್ ನಿಂತಿದ್ದಾರೆ. ಬಳ್ಳಾರಿ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಾಧ್ಯವಾಗದೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡ ಮಾಜಿ ಶಾಸಕರು ಬಡ ರೈತರ ತೋಟಕ್ಕೆ ತಾವೇ ಸ್ವತಃ ತೆರಳಿ ಅವುಗಳನ್ನು ಖರೀದಿ ಮಾಡಿ ಮಾರುಕಟ್ಟೆಯ ಬೆಲೆ ನೀಡುತ್ತಿದ್ದಾರೆ. ಬಳಿಕ ಖರೀದಿ ಮಾಡಿದ್ದನ್ನು ಜಿಲ್ಲೆಯ ಬಡ ಜನರಿಗೆ ಹಂಚಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ಸುತ್ತಮುತ್ತಲಿನ ಬಡ ರೈತರನ್ನು ಆಯ್ಕೆ ಮಾಡಿ ಅವರ ತೋಟಕ್ಕೆ ತೆರಳಿ ಅವರು ಬೆಳೆದ ಈರುಳ್ಳಿ, ತರಕಾರಿಗಳನ್ನು ಕೊಂಡುಕೊಂಡು ಸೂಕ್ತ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಬಡ ರೈತರಿಗೂ ಹಾಗೂ ಆಹಾರ ಇಲ್ಲದೇ ಹಸಿವಿನಿಂದ ಇರುವ ಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಇದೇ ರೀತಿಯಲ್ಲಿ ಸ್ಥಳೀಯ ನಾಯಕರು ಬಡ ರೈತರ ಬೆಳೆಗಳನ್ನು ಖರೀದಿ ಮಾಡಿ ಬಡ ಜನರಿಗೆ ಹಂಚಿದ್ರೆ ಇಬ್ಬರಿಗೂ ಅನುಕೂಲವಾಗಲಿದೆ ಎಂದಿದ್ದಾರೆ. ಸರ್ಕಾರ ಸಹ ಇದೇ ರೀತಿಯಲ್ಲಿ ಯೋಜನೆ ಜಾರಿ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ.

  • 25 ಸಾವಿರ ಬ್ಯಾಗ್ ಪಡಿತರ ವಿತರಿಸಲಿದ್ದಾರೆ ಪ್ರಜ್ವಲ್ ರೇವಣ್ಣ

    25 ಸಾವಿರ ಬ್ಯಾಗ್ ಪಡಿತರ ವಿತರಿಸಲಿದ್ದಾರೆ ಪ್ರಜ್ವಲ್ ರೇವಣ್ಣ

    – ಮಗನ ಕೆಲಸಕ್ಕೆ ತಾಯಿ ಭವಾನಿ ರೇವಣ್ಣ ಸಾಥ್

    ಹಾಸನ: ಕೊರೊನಾ ಲಾಕ್‍ಡೌನ್‍ನಿಂದ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ನೇತೃತ್ವದಲ್ಲಿ ಸುಮಾರು 25 ಸಾವಿರ ದವಸ, ಧಾನ್ಯದ ಬ್ಯಾಗ್ ರೆಡಿ ಮಾಡಲಾಗುತ್ತಿದೆ.

    ಪ್ರತಿ ಬ್ಯಾಗ್‍ನಲ್ಲಿ ಅಕ್ಕಿ, ಸಕ್ಕರೆ, ಎಣ್ಣೆ ಸೇರಿದಂತೆ ಸುಮಾರು 10 ದಿನಸಿ ಪದಾರ್ಥಗಳು ಇರಲಿವೆ. ಸೋಮವಾರದಿಂದ 25 ಸಾವಿರ ಆಹಾರ ಧಾನ್ಯದ ಬ್ಯಾಗ್‍ಗಳನ್ನು ಜಿಲ್ಲೆಯಾದ್ಯಂತ ಹಂಚಲು ತೀರ್ಮಾನಿಸಲಾಗಿದೆ. ಒಂದೊಂದು ಬ್ಯಾಗ್‍ನಲ್ಲೂ ಸುಮಾರು ನಾಲ್ಕು ಜನರಿಗೆ ಹತ್ತು ದಿನಕ್ಕೆ ಆಗುವಷ್ಟು ದವಸ ಧಾನ್ಯ ಇರಲಿದ್ದು ಸುಮಾರು ಒಂದು ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ.

    ಒಂದು ವೇಳೆ ಕೊರೊನಾ ಲಾಕ್‍ಡೌನ್ ಏಪ್ರಿಲ್ 14ರ ನಂತರ ಮುಂದುವರಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದವಸ ಧಾನ್ಯ ಒದಗಿಸಲು ವ್ಯವಸ್ಥೆ ಮಾಡುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಭವಾನಿ ರೇವಣ್ಣ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಹೀಗಾಗಲೇ ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ಧವಸ ಧಾನ್ಯ ತುಂಬಿದ 25 ಸಾವಿರ ಚೀಲಗಳನ್ನು ಪ್ಯಾಕ್ ಮಾಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿರುವ ಶಾಸಕ

    ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿರುವ ಶಾಸಕ

    – ಬೆಲೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ನೆರವು
    – ಅಕ್ಕಿ, ಬೇಳೆ ಜೊತೆ ರೈತರಿಂದ ಖರೀದಿಸಿದ ತರಕಾರಿ ಹಂಚಿಕೆ

    ಕೋಲಾರ: ಕೊರೊನಾ ಲಾಕ್‍ಡೌನ್‍ನಿಂದಾಗಿ ರೈತರು ಬೆಳೆಗಳನ್ನು ಮಾರಾಟ ಮಾಡಲಾಗದೆ ಕಂಗಾಲಾಗಿದ್ದು, ಬೆಲೆ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ ಕ್ಷೇತ್ರದ ರೈತರು ಹಾಗೂ ಹಸಿದವರಿಗೆ ನೆರವಾಗಿದ್ದಾರೆ.

    ದೇಶದ ಅದೆಷ್ಟೋ ರೈತರು ತಾವು ಬೆಳೆದ ಬೆಳೆಗಳನ್ನು ಬೀದಿಗೆ ಸುರಿದು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನರಿತ ಕೋಲಾರ ಜಿಲ್ಲೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ತಮ್ಮ ಕ್ಷೇತ್ರದ ರೈತರ ನೆರವಿಗೆ ನಿಲ್ಲಬೇಕೆಂದು ನಿರ್ಧರಿಸಿ ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ತಾವೇ ಖರೀದಿ ಮಾಡಿ ಅದನ್ನು ತಮ್ಮ ಕ್ಷೇತ್ರದಲ್ಲಿನ ಬಿಪಿಎಲ್ ಕಾರ್ಡುದಾರರಿಗೆ ಹಂಚಲು ನಿರ್ಧರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಸ್ವತಃ ಶಾಸಕರೇ ತಮ್ಮ ಕ್ಷೇತ್ರದಲ್ಲಿ ತರಕಾರಿ ಬೆಳೆದಿರುವ ರೈತರ ತೋಟಗಳಿಗೆ ತೆರಳಿ ಎಲೆಕೋಸು, ಟೊಮ್ಯಾಟೋ, ಕುಂಬಳಕಾಯಿ, ಸೇರಿದಂತೆ ಹಲವು ಬೆಳೆಗಳನ್ನು ರೈತರಿಗೂ ನಷ್ಟವಾಗದಂತೆ, ಬೆಳೆಯೂ ಹಾಳಾಗದಂತೆ ಖರೀದಿಸಿ ಜನರಿಗೆ ಹಂಚಲು ನಿರ್ಧರಿಸಿದ್ದಾರೆ.

    ಈ ಮೂಲಕ ಶಾಸಕ ನಂಜೇಗೌಡ ವಿಭಿನ್ನವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ರೈತರಿಗೂ ಅನುಕೂಲವಾಗಬೇಕು ಜೊತೆಗೆ ಹಸಿದವರ ಹೊಟ್ಟೆಯೂ ತುಂಬಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಮಾಲೂರು ತಾಲೂಕಿನ ಅನಿಗಾನಹಳ್ಳಿ, ಓಬಟ್ಟಿ, ಟೇಕಲ್‍ನ ವಿವಿಧ ರೈತರ ತೋಟಗಳಿಗೆ ತೆರಳಿ ತರಕಾರಿ ಖರೀದಿಸಿದ್ದಾರೆ. ಇದರಿಂದ ರೈತರಿಗೂ ಅನುಕೂಲ ವಾಗಿದ್ದು, ಹಾಳಾಗುತ್ತಿದ್ದ ಬೆಳೆಯಿಂದ ಕೊನೆ ಪಕ್ಷ ನಾವು ಹಾಕಿದ ಬಂಡವಾಳವಾದರೂ ಸಿಕ್ಕರೆ ಸಾಕು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಬಡವರ ಹೊಟ್ಟೆ ಸಹ ತುಂಬುತ್ತಿದೆ.