Tag: Poor people

  • ಒಂದು ಫೋನ್ ಕಾಲ್‌- ಇದ್ದಲ್ಲಿಗೆ ಬರುತ್ತೆ ಶುಚಿ ರುಚಿ ಊಟ, ಶುದ್ಧ ನೀರು

    ಒಂದು ಫೋನ್ ಕಾಲ್‌- ಇದ್ದಲ್ಲಿಗೆ ಬರುತ್ತೆ ಶುಚಿ ರುಚಿ ಊಟ, ಶುದ್ಧ ನೀರು

    – ಯುವಕರ ಕಾರ್ಯಕ್ಕೆ ಜನರ ಮೆಚ್ಚುಗೆ

    ಯಾದಗಿರಿ: ಕೊರೊನಾ ವೈರಸ್‍ನಿಂದಾಗಿ ಘೋಷಣೆಯಾಗಿರುವ ಲಾಕ್‍ಡೌನ್‍ನಿಂದಾಗಿ ಜನ ತುತ್ತು ಅನ್ನಕ್ಕೂ ಸಹ ಪರದಾಡುವಂತಾಗಿದೆ. ಬಡವರಿಗೆ ನಿರ್ಗತಿಕರಿಗೆ ವಿವಿಧ ಸಂಘ ಸಂಸ್ಥೆಗಳು ಉಚಿತ ಊಟದ ವ್ಯವಸ್ಥೆ ಸಹ ಮಾಡಿವೆ. ಯಾದಗಿರಿಯ ಸತೀಶ್ ಕಂದಕೂರ ಅಭಿಮಾನಿಗಳ ಬಳಗ ಮತ್ತು ವೀರಶೈವ ಮಹಾಸಭಾದ ಕೆಲ ಯುವಕರು ಒಂದು ವಿಭಿನ್ನ ರೀತಿಯಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

    ಒಂದು ಫೋನ್ ಕಾಲ್ ಮಾಡಿದ್ರೆ ಸಾಕು ಇದ್ದಲ್ಲಿಗೆ ಶುಚಿ ರುಚಿ ಊಟ ಹಾಗೂ ಶುದ್ಧ ಕುಡಿಯುವ ನೀರಿನ ಕೊಡುವ ವ್ಯವಸ್ಥೆಯನ್ನು ಯುವಕರು ಮಾಡಿದ್ದಾರೆ. ಕಳೆದ 25 ದಿನಗಳಿಂದ ಸಮಾಜ ಸೇವಕ ಸತೀಶ್ ಅಭಿಮಾನಿ ಬಳಗದ ಯುವಕರು ನಗರದ ಬಡವರಿಗೆ ಮೂರು ಹೊತ್ತು ಉಚಿತ ಊಟ ನೀಡುತ್ತಿದ್ದಾರೆ. ಇದರ ಜೊತೆ ಜಿಲ್ಲಾಧಿಕಾರಿ ಕಚೇರಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಹ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ಯಾದಗಿರಿಯ ವಿವಿಧ ಕಚೇರಿಗಳಿಗೆ ಮಧ್ಯಾಹ್ನ ಸ್ವತಃ ಯುವಕರೇ ಊಟವನ್ನು ತಲುಪಿಸುತ್ತಾರೆ. ಆಹಾರ ತಯಾರಿಸುವಾಗ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ. ಈ ಯುವ ಪಡೆ, ವಿವಿಧ ಇಲಾಖೆಗಳ ಸಿಬ್ಬಂದಿ ಕರೆ ಮಾಡಿ ಅವರ ಊಟದ ಬಗ್ಗೆ ವಿಚಾರಸಿ ಆಹಾರ ತಲುಪಲಿಸುವ ಕೆಲಸ ಮಾಡುತ್ತಿದ್ದಾರೆ.

    ಯುವಕರ ಈ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುತ್ತಿರುವ ಯುವಕರಿಗೆ ಅನೇಕರು ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ.

  • ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ  ಪಾಲನೆಯಾಗದ ಸಾಮಾಜಿಕ ಅಂತರ

    ಆಹಾರ ಕಿಟ್‍ಗಾಗಿ ನೂಕು ನುಗ್ಗಲು- ಲಾಕ್‍ಡೌನ್ ವಿಸ್ತರಣೆಯಾದ್ರೂ ಪಾಲನೆಯಾಗದ ಸಾಮಾಜಿಕ ಅಂತರ

    ರಾಯಚೂರು: ಕೊರೊನಾ ಮಹಾಮಾರಿ ತಲ್ಲಣ ಉಂಟು ಮಾಡಿದ್ದು ಎಷ್ಟೇ ಕಠೀಣ ನಿರ್ಧಾರ ಕೈಗೊಂಡರೂ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಲಾಕ್‍ಡೌನ್ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದ್ದಾರೆ. ಇಷ್ಟಾದರೂ ಬುದ್ಧಿ ಕಲಿಯದ ಜನ ಮಾತ್ರ ಆಹಾರ ಕಿಟ್‍ಗಾಗಿ ಮುಗಿಬಿದ್ದಿದ್ದಾರೆ.

    ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಆಹಾರ ಕಿಟ್‍ಗಾಗಿ ಜನ ನೂಕುನುಗ್ಗಲು ಮಾಡಿ ಕಿತ್ತಾಡಿಕೊಂಡಿದ್ದಾರೆ. ಇದರಿಂದಾಗಿ ಆಹಾರ ಕಿಟ್ ವಿತರಣೆಯನ್ನೇ ನಿಲ್ಲಿಸಲಾಯಿತು.

    ಕೆಲ ದಾನಿಗಳು ನಗರದ ಎಪಿಎಂಸಿಯಲ್ಲಿ ಹಮಾಲರು ಸೇರಿ 1,500 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಮುಂದಾಗಿದ್ದರು. ಆದರೆ ಕೆಲಸವಿಲ್ಲದೆ ಕಾಲ ಕಳೆಯುತ್ತಿದ್ದ ಹಮಾಲರು ಹಾಗೂ ಅವರ ಕುಟುಂಬ ಆಹಾರ ಕಿಟ್‍ಗಾಗಿ ನೂಕುನುಗ್ಗಲು ಮಾಡಿದರು. ಕಿಟ್ ಪಡೆಯಲು ಮಹಿಳೆಯರು ಹಾಗೂ ಪುರುಷರು ಗುಂಪು ಸೇರಿ ಸಾಮಾಜಿಕ ಅಂತರವನ್ನೇ ಮರೆತರು. ಎಪಿಎಂಸಿ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಆಹಾರ ಕಿಟ್ ಗಾಗಿ ಕಿತ್ತಾಡಿದರು. ಇದರಿಂದಾಗಿ ಕೆಲಕಾಲ ಆಹಾರ ವಿತರಣೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು.

  • ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ, ಫೋಟೋ ತೆಗೆದರೆ ಎಫ್‍ಐಆರ್

    ಜೈಪುರ: ನಿರ್ಗತಿಕರಿಗೆ ಆಹಾರ ನೀಡುವಾಗ ಸೆಲ್ಫಿ ತೆಗೆಯುವುದು ವಿಡಿಯೋ ಮಾಡುವುದು ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಂಡು ಎಫ್‍ಐಆರ್ ದಾಖಲಿಸಲಾಗುವುದು ಎಂದು ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಕೊರೊನಾ ವೈರಸ್ ಭೀತಿಗೆ ದೇಶ ಲಾಕ್‍ಡೌನ್ ಆಗಿ 15ಕ್ಕೂ ಹೆಚ್ಚಿನ ದಿನಗಳಾಗಿವೆ. ಈ ನಡುವೆ ಕೆಲವರಿಗೆ ಊಟ ನೀರು ಸಿಗದೆ ಪರಾದಾಡುತ್ತಿದ್ದಾರೆ. ಈ ರೀತಿಯ ನಿರ್ಗತಿಕರಿಗೆ ಕೆಲವರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಅಜ್ಮೀರ್ ಜಿಲ್ಲೆಯ ಡಿಸಿ ವಿಶ್ವ ಮೋಹನ್ ಶರ್ಮಾ ಆದೇಶ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಡಿಸಿ ವಿಶ್ವ ಮೋಹನ್ ಶರ್ಮಾ, ಲಾಕ್‍ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಬಡವರಿಗೆ ಆಹಾರ ನೀಡುವುದು ಒಳ್ಳೆಯ ಕೆಲಸ. ದೇಶ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದ ಪರಿಸ್ಥಿತಿಯಲ್ಲಿ ಸಹಾಯ ಮಾಡುವ ಜನರಿಗೆ ನಾವು ಪ್ರೋತ್ಸಾಹ ನೀಡುತ್ತೇವೆ. ಆದರೆ ಇದನ್ನೇ ಮುಂದೆ ಇಟ್ಟುಕೊಂಡು ಬಡವರಿಗೆ ಸಹಾಯ ಮಾಡಿ ಅದರ ಫೋಟೋ ತಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

    ಊಟವಿಲ್ಲದವರಿಗೆ ಆಹಾರ ನೀಡಿ ಈ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ಇದರಿಂದ ಅವರಿಗೇ ಅವಮಾನ ಮಾಡಿದ ರೀತಿಯಲ್ಲಿ ಆಗುತ್ತದೆ. ಆದ್ದರಿಂದ ಈ ರೀತಿಯ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡುಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಜೊತೆಗೆ ಎಫ್‍ಐಆರ್ ಕೂಡ ಹಾಕಲಾಗುವುದು ಎಂದು ಡಿಸಿ ವಾರ್ನಿಂಗ್ ನೀಡಿದ್ದಾರೆ.

    ಕಳೆದ 16 ದಿನಗಳಿಂದ ದೇಶದಲ್ಲಿ ಹಲವಾರು ಜನರು ಸಂಸ್ಥೆಗಳು ಸೆಲೆಬ್ರಿಟಿಗಳು ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿವೆ. ಆದರೆ ಇದರ ಜೊತೆ ಕೆಲ ಜನರು ಮಾಡಿರುವ ಸಹಾಯವನ್ನು ಫೋಟೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಜ್ಮೀರ್ ಜಿಲ್ಲೆಯಲ್ಲಿ ಆಹಾರವಿಲ್ಲದವರಿಗೆ ಎರಡು ಬಾಳೆಹಣ್ಣು ನೀಡಿ ಫೋಟೋ ತೆಗದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಈ ಕಾರಣದಿಂದ ಡಿಸಿ ಈ ಆದೇಶ ಹೊರಡಿಸಿದ್ದಾರೆ.

  • ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ನಿರ್ಗತಿಕರಿಗೆ ಉಚಿತವಾಗಿ ಅಗತ್ಯ ವಸ್ತುಗಳ ವಿತರಣೆ – ರಾಜ್ಯಕ್ಕೆ ಮಾದರಿಯಾದ ಗ್ರಾಮ ಪಂಚಾಯ್ತಿ

    ರಾಮನಗರ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ದೇಶವೇ ಲಾಕ್‍ಡೌನ್ ಮಾಡಲಾಗಿದೆ. ಇದರಿಂದ ನಿರ್ಗತಿಕರು, ಬಡವರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನು ಮನಗಂಡ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯ್ತಿ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.

    ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ಪಿಡಿಓ ಯತೀಶ್ ತಮ್ಮ ಪಂಚಾಯ್ತಿಯ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ನಡೆಸಿ ಇಂತಹದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

    ಚಕ್ಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತೀ ಬಡವರು, ನಿರ್ಗತಿಕರನ್ನು ಗುರುತಿಸಲಾಗಿದ್ದು, ಮೊದಲ ಹಂತವಾಗಿ 146 ಕುಟುಂಬದವರಿಗೆ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಹುರುಳಿ ಕಾಳು, ರವೆ, ಸಕ್ಕರೆ ಸೇರಿದಂತೆ ಸುಮಾರು 600 ರೂ. ಮೌಲ್ಯದ ವಸ್ತುಗಳನ್ನು ವಿತರಣೆ ಮಾಡಿದ್ದಾರೆ.

    ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗ ಅರಸಿ ಬಂದಿರುವ ಕೂಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸ್ಥಿತಿವಂತರನ್ನು ಬಿಟ್ಟು ಉಳಿದವರಿಗೆಲ್ಲಾ ಅಗತ್ಯ ವಸ್ತುಗಳ ವಿತರಣೆ ಮಾಡುವುದಾಗಿ ಪಂಚಾಯ್ತಿ ಪಿಡಿಓ ಯತೀಶ್ ತಿಳಿಸಿದರು.

  • ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಪ್ರತಿನಿತ್ಯ 60 ಸಾವಿರ ಜನರಿಗೆ ಊಟ ಕಲ್ಪಿಸಿದ ಮುನಿರತ್ನ

    ಬೆಂಗಳೂರು: ಇಡೀ ಭೂಮಂಡಲವೇ ಮಹಾಮಾರಿ ಕೊರೋನಾ ವೈರಸ್‍ಗೆ ತತ್ತರಿಸಿ ಹೋಗಿದ್ದು, ದೇಶದಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಕೆಲ ಬಡ ಜನತೆ ಊಟ, ಅಗತ್ಯ ವಸ್ತುಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಬಿಜೆಪಿ ಮುಖಂಡ ಮುನಿರತ್ನ ಅವರು ಬಡವರ ಹೊಟ್ಟೆ ತುಂಬಿಸುತ್ತಿದ್ದು, ನಿತ್ಯ 60 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

    ತಮ್ಮ ಕ್ಷೇತ್ರದ 50 ರಿಂದ 60 ಸಾವಿರ ಜನರಿಗೆ ಪ್ರತಿನಿತ್ಯ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಮತ್ತಿಕೆರೆಯ ಕಲ್ಯಾಣ ಮಂಟಪದಲ್ಲಿ 60 ಜನರ ಬಾಣಸಿಗರ ತಂಡ ಊಟ ತಯಾರು ಮಾಡುತ್ತಿದೆ.

    ಪ್ರತಿನಿತ್ಯ 5 ಸಾವಿರ ಕೆ.ಜಿ ಅಕ್ಕಿ ಬಳಸಿಕೊಂಡು ಆಹಾರ ತಯಾರು ಮಾಡುತ್ತಿದ್ದು, ಕ್ಷೇತ್ರದ ಬಡವರಿಗೆ, ಕೂಲಿ ಕಾರ್ಮಿಕರಿಗೆ ಊಟದ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬಡ ಜನತೆ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಕೇಂದ್ರ ಸರ್ಕಾರ ಎಪ್ರಿಲ್ 14ರ ವರಗೆ ದೇಶಾದ್ಯಂತ ಲಾಕ್ ಡೌನ್ ಮಾಡಿದೆ. ಜನ ಅನವಶ್ಯಕವಾಗಿ ರಸ್ತೆಗೆ ಬರದೇ ತಮ್ಮ ಮನೆಗಳಲ್ಲೇ ಇದ್ದು ಸೋಂಕು ತಗುಲದಂತೆ ಕಟ್ಟೆಚ್ಚರವಹಿಸಬೇಕಾಗಿದೆ. ದೇಶ ಲಾಕ್ ಡೌನ್ ಆಗಿ ಇವತ್ತಿಗೆ 6 ನೇ ದಿನ. ಉಳ್ಳವರು ಹೇಗೋ ಜೀವನ ಸಾಗಿಸುತ್ತಿದ್ದಾರೆ. ಅದರೆ ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

  • ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    ತಿರುವನಂತಪುರಂ: ಕೇರಳದ ವ್ಯಕ್ತಿಯೊಬ್ಬರು ಹಣ್ಣು ಮಾರಾಟ ಮಾಡಿ ಪ್ರತಿದಿನ 200 ಬಡ ಜನರಿಗೆ ಊಟ ಹಾಕುತ್ತಿದ್ದಾರೆ.

    ಜಿಲ್ಲೆಯ ವಡುಕಾರದಲ್ಲಿ ಹಲವು ವರ್ಷಗಳಿಂದ ಮುಚ್ಚಲಾಗಿರುವ ಬಸ್ ಶೆಲ್ಟರ್ ನಲ್ಲಿ ಮನೆ ಇಲ್ಲದೆ ಇರುವವರು ಹಾಗೂ ನಿರ್ಗತಿಕರಿಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಅಲ್ಲಿ ಊಟ ನೀಡಲಾಗುತ್ತದೆ. ಈ ಕೆಲಸವನ್ನು ಹಣ್ಣುಗಳನ್ನು ಮಾರಾಟ ಮಾಡುವ ಜೈಸನ್ ಪಾಲ್ ಅವರು ಪ್ರಾರಂಭಿಸಿದ್ದರು.

    ಮದರ್ ತೆರೇಸಾ ಅವರೇ ನನಗೆ ಈ ಕೆಲಸ ಮಾಡಲು ಸ್ಫೂರ್ತಿ ಎಂದು 37 ವರ್ಷದ ಜೈಸನ್ ತಿಳಿಸಿದ್ದಾರೆ. ಈಗ ಅವರ ಒಂದು ತಂಡವಿದ್ದು, ಆ ತಂಡ ಪ್ರತಿದಿನ ಜೈಸನ್ ಜೊತೆ ಸೇರಿ 175 ರಿಂದ 200 ಬಡ ಜನರಿಗೆ ಊಟ ನೀಡುತ್ತಿದ್ದಾರೆ. ಅಗತ್ಯವಿರುವವರಿಗೆ ಶುದ್ಧ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುವುದು ಅವರ ತಂಡದ ಉದ್ದೇಶವಾಗಿದೆ.

    ಜೈಸನ್ ಹೊರತುಪಡಿಸಿ ಈ ಕೆಲಸದಲ್ಲಿ ಅವರ ಪತ್ನಿ ಬೀನೂ ಮಾರಿಯಾ, ಆಟೋ ಡ್ರೈವರ್ ಶ್ರೀಜಿತ್, ಮಾಜಿ ಬಸ್ ಡ್ರೈವರ್ ಶೈನ್ ಜೇಮ್ಸ್ ಸೇರಿದಂತೆ ಹಲವು ಮಂದಿ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಎಲ್ಲರೂ ಈ ಕೆಲಸ ಮಾಡುತ್ತಿದ್ದಾರೆ. ಅವರ ಅಭಿಯಾನ ಸೋಮವಾರದಿಂದ ಶನಿವಾರದವರೆಗೂ ನಡೆಯುತ್ತದೆ.

    ಜೈಸನ್ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅಲ್ಲದೆ ಪ್ರತಿ ತಿಂಗಳು ಈ ಟ್ರಸ್ಟ್ ಗಾಗಿ ಹಣ ಉಳಿತಾಯ ಮಾಡುತ್ತಾರೆ. ಮೊದಲು ಜೈಸನ್ ಬಡಜನರಿಗೆ ಅನ್ನ ಮತ್ತು ಗಂಜಿ ಆಹಾರವಾಗಿ ನೀಡುತ್ತಿದ್ದರು. ಆದರೆ ಈಗ ಅವರು ಅನ್ನ-ಸಾಂಬಾರ್, ಫಿಶ್ ಕರಿ, ತರಕಾರಿಗಳು, ಉಪ್ಪಿನಕಾಯಿ ಹಾಗೂ ಸಲಾಡ್‍ಗಳನ್ನು ನೀಡುತ್ತಾರೆ.

    ಈ ತಂಡಕ್ಕೆ ಸಹಾಯ ಮಾಡಲು ಜನರು ದಾನ ಕೂಡ ಮಾಡುತ್ತಿದ್ದಾರೆ. ಕೆಲವರು ಹಣ ನೀಡಿದರೆ ಮತ್ತೆ ಕೆಲವರು, ಅಕ್ಕಿ, ಬೇಳೆ, ತರಕಾರಿ ನೀಡುತ್ತಾರೆ. ಆಹಾರವನ್ನು ವ್ಯರ್ಥ ಮಾಡಬಾರದು ಎಂಬುದು ತಂಡದ ಉದ್ದೇಶವಾಗಿದೆ. ಅಲ್ಲದೆ ಅವರು ಪ್ಲಾಸ್ಟಿಕ್ ಸಹ ಬಳಸುವುದಿಲ್ಲ. ಜೈಸನ್ ಜನರಿಗೆ ಬಾಳೆ ಎಲೆಗಳಲ್ಲಿ ಊಟ ಹಾಕುತ್ತಾರೆ.

  • ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಸೇವೆಯ ಬೀಜಾಂಕುರವಾಗಿದ್ದು 1913 ರಲ್ಲಿ. ಸಿದ್ದಗಂಗಾ ಶ್ರೀಗಳ ಧರ್ಮಸ್ವೀಕಾರದ ನಂತರ ಸರಸ್ವತಿ ಶಾಶ್ವತವಾಗಿ ನೆಲೆಸಿದಳು. ವಿದ್ಯಾಬಿಕ್ಷೆ ಕೊಟ್ಟ ಶ್ರೀಗಳು ಲಕ್ಷ ಲಕ್ಷ ಜನರ ಪಾಲಿಗೆ ಜ್ಞಾನ ಗಂಗೆಯನ್ನು ಧರೆಗಿಳಿಸಿದ ದೇವರಾದರು.

    ಸಂಸ್ಕೃತವೆಂದರೆ ಒಂದು ವರ್ಗದರಿಗೆ ಮಾತ್ರ ಎಂಬಂತೆ ಇದ್ದ ಸನ್ನಿವೇಶದಲ್ಲಿ ಸಿದ್ದಗಂಗೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಜಾತಿ ಮತ ಧರ್ಮ ಪಂಥ ಎಲ್ಲವನ್ನು ಮೀರಿ ಸಂಸ್ಕೃತಾಭ್ಯಾಸಕ್ಕೆ ಅವಕಾಶ ಕಲಿಸಿಕೊಟ್ಟಿರುವುದು ಒಂದು ದಾಖಲೆ. 20 ವಿದ್ಯಾರ್ಥಿಗಳಿಂದ ಆರಂಭಿಸಿದ ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಇದು ಬಹುಶಃ ದೊಡ್ಡದಾದ ಮಹಾವಿದ್ಯಾಲಯವಾಗಿ ಬೆಳೆದಿರುವುದೇ ಇದಕ್ಕೆ ಸಾಕ್ಷಿ. ಇದನ್ನೂ ಓದಿ:2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

    ಶ್ರೀಮಠದ ಸೇವೆಗೆ ಸಿದ್ದಗಂಗಾ ಶ್ರೀ ನಿಂತ ನಂತರ ಸಿದ್ದಗಂಗಾ ಕ್ಷೇತ್ರದ ಶಿಕ್ಷಣ ಸೇವೆ ಮಹಾ ವೃಕ್ಷವಾಗಿ ಬೆಳೆಯತೊಡಗಿತ್ತು. ಗ್ರಾಮೀಣ ಜನರ ಬದುಕಿನ ಸುಧಾರಣೆ ಆಗಬೇಕಾದರೆ ಶಿಕ್ಷಣವೊಂದೇ ತಾರಕ ಮಂತ್ರ ಅಂತ ಶ್ರೀಗಳು ಅರಿತರು. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶ ಒದಗಿಸಿದರು. ಇದನ್ನೂ ಓದಿ: ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಜೋಳಿಗೆ ಹಿಡಿದು ಬಿಕ್ಷಾಟನೆಗೆ ಹೋಗುತ್ತಿದ್ದ ಶ್ರೀಗಳು ಗ್ರಾಮಾಂತರ ಭಾಗದಲ್ಲಿ ಶಾಲೆಗೆ ಹೋಗಬೇಕಾಗಿದ್ದ ಪುಟಾಣಿ ಮಕ್ಕಳು ಕೂಲಿಗೆ ಹೋಗುತ್ತಿದ್ದ ದೃಶ್ಯ ಶ್ರೀಗಳನ್ನು ಬಹುವಾಗಿ ಕಾಡಿತ್ತು. ಅಲ್ಲಿಂದಲೇ ಶಿಕ್ಷಣ ಕ್ರಾಂತಿಯ ಮಂತ್ರ ಪಠಿಸಿಯೇ ಬಿಟ್ಟರು. ಭಿಕ್ಷಾ ಜೋಳಿಗೆಯ ಬಲದಿಂದಲೇ ಶಾಲೆ ಆರಂಭಿಸಿ ಅನಾಥಲಾಯದ ಸೇವೆ ವಿಸ್ತರಿಸಿದ್ರು.

    ಶ್ರೀಮಠದ ಎಲ್ಲಾ ಶಾಲಾ ಕಾಲೇಜುಗಳಿಗೆ ಪೂಜ್ಯರೇ ಅಧ್ಯಕ್ಷರಾಗಿ ಶಿಕ್ಷಣ ಕ್ರಾಂತಿಯನ್ನು ಪಸರಿಸುವ ಕಾರ್ಯವನ್ನು ಅವಿರತವಾಗಿ ಶುರುಮಾಡಿದರು. ಈ ಶಾಲೆಗೆ ಸೇರಲು ಬಡತನವೊಂದೆ ಸರ್ಟಿಫಿಕೇಟ್. ಎಲ್ಲ ಜಾತಿ ಧರ್ಮಗಳನ್ನು ಮೀರಿದ ಶಿಕ್ಷಣ ಇಲ್ಲಿ ಲಭ್ಯ.

    ಹಿರಿಯ ಸಾಹಿತಿ ಗೊ.ರು ಚೆನ್ನಬಸಪ್ಪ ಹೇಳಿದಂತೆ ಒಂದು ಬಾರಿ ಮಠದ ಅವರಣದಲ್ಲಿ ಪುಟಾಣಿ ಬಡ ಮುಸ್ಲಿಂ ಬಾಲಕನೊಬ್ಬ ವಿದ್ಯಾಭ್ಯಾಸ ಕಲಿಯಲು ಶ್ರೀಗಳ ಅನುಮತಿಗಾಗಿ ಕಾಯುತ್ತ ನಿಂತಿದ್ದಾನಂತೆ. ಆತನ ಪೋಷಕರಿಗೆ ಒಳಗೊಳಗೆ ಭಯ. ಅಯ್ಯೋ ಶ್ರೀಗಳು ನಮ್ಮನ್ನೆಲ್ಲ ಭೇಟಿಯಾಗ್ತಾರಾ? ಯಾರ ರಾಜಕೀಯ ನಾಯಕರ ದೊಡ್ಡವರ ರೆಫರೆನ್ಸ್ ಇಲ್ಲದೇ ಶ್ರೀಗಳನ್ನು ಭೇಟಿಯಾಗೋದಾದ್ರೂ ಹೇಗೆ ಅಂತಾ ಭಯ ಪಡುತ್ತಿದ್ದರಂತೆ. ಆಗಲೇ ಅಲ್ಲೊಬ್ಬ ಪುಟಾಣಿ ಮಠದ ವಿದ್ಯಾರ್ಥಿ ಸಿಕ್ಕಾಗ ಶ್ರೀಗಳು ಭೇಟಿ ಮಾಡೋದಾದ್ರೇ ಯಾರಿಂದ ಶಿಪಾರಸ್ಸು ಮಾಡಬೇಕು ಏನಾದ್ರೂ ಗೊತ್ತಿದ್ಯಾ? ನೀವೆಲ್ಲ ಹೇಗೆ ಬಂದ್ರಿ ಇಲ್ಲಗೆ ಅಂದ್ರಂತೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಬಡತನ, ಕಲಿಯುವ ಹಪಾಹಪಿಯೊಂದೆ ಸರ್ಟಿಫಿಕೇಟು ಶ್ರೀಗಳು ಎಲ್ಲಾ ಭಕ್ತರನ್ನು ಭೇಟಿಯಾಗ್ತಾರೆ. ಅವರ ಭೇಟಿಗೆ ಬೇರೆಯವರ ಶಿಫಾರಸು ಯಾಕೆ ಅಂತಾ ಚೋಟುದ್ಧ ಬಾಲಕ ಹೇಳಿ ಹೋದನಂತೆ.

    ಥೇಟು ಬಾಲಕ ಹೇಳಿದಂತೆ ದೈವಸ್ವರೂಪಿ ಶ್ರೀಗಳು ಈ ಬಡ ಮುಸ್ಲಿಂ ಬಾಲಕನ ಪೋಷಕರನ್ನು ಭೇಟಿಯಾಗಿ ಸುಮಾರು ಅರ್ಧಗಂಟೆ ಮಾತಾನಾಡಿ ಶಾಲೆಗೆ ಸೇರಿಸಿಕೊಂಡರಂತೆ. ಹೀಗೆ ಬಡಮಕ್ಕಳಿಗೆ , ಗ್ರಾಮೀಣ ಭಾಗದ ಮಕ್ಕಳಿಗಷ್ಟೇ ಇಲ್ಲಿ ಮೊದಲ ಆದ್ಯತೆಯನ್ನು ಗುರುಗಳು ಕೊಡುತ್ತಿದ್ದರು. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಸಿದ್ದಗಂಗಾ ಕ್ಷೇತ್ರ ಕನ್ನಡ ನಾಡಿನ ಬೃಹತ್ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಬೇಸಗೆಯ ರಜೆಯ ನಂತರ ಶಾಲೆಗಳ ಪುನಾರಾರಂಭದಲ್ಲಿ ಸಿದ್ದಗಂಗಾ ಕ್ಷೇತ್ರವನ್ನು ನೋಡಬೇಕು. ಸಿದ್ದಗಂಗಾ ಸುತ್ತಮುತ್ತಿನ ಅಷ್ಟೇ ಅಲ್ಲದೇ ದೂರದ ಬೀದರ್ ಬೆಳಗಾವಿ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಬಡಮಕ್ಕಳು ತಮ್ಮ ತಂದೆ ತಾಯಿಗಳೊಡನೆ ತಲೆಯ ಮೇಲೆ ಪುಟ್ಟ ಪೆಟ್ಟಿಗೆ ಹೊತ್ತು ಬರುವ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿ. ಸಿದ್ದಗಂಗಾ ಮಠಕ್ಕೆ ತಮ್ಮ ಮಕ್ಕಳು ಸೇರಿದವರೆಂದರೆ ಹೆತ್ತವರಿಗೆ ಆ ಮಕ್ಕಳನ್ನು ತಾಯಿ ಮಡಿಲಲ್ಲಿ ಇಟ್ಟಷ್ಟು ನೆಮ್ಮದಿ.

    ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಆಡಳಿತ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕೇಂದ್ರ, ನರ್ಸಿಂಗ್ ಕಾಲೇಜ್, ಕೈಗಾರಿಕಾ ತರಬೇತಿ ಕೇಂದ್ರ, ಅಂಧ ಮಕ್ಕಳ ಶಾಲೆ, ಸಂಸ್ಕೃತ ಪಾಠಶಾಲೆ ಫಾರ್ಮಸಿ ಕಾಲೇಜು ಹೀಗೆ ಶ್ರೀಮಠದ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಒಟ್ಟು 125 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ.

    ಶಿಕ್ಷಕರ ತರಬೇತಿ ಕೇಂದ್ರವಿರಲಿ, ಗ್ರಂಥ ಭಂಡಾರವಿರಲಿ, ಪಾಠ ಶಾಲೆಯಿರಲಿ, ಆಟದ ಮೈದಾನವಿರಲಿ, ಎಲ್ಲರೂ ಕೂಡಿ ಬದುಕುವ ಕಮ್ಮಟವಾಗಿದೆ ಸಿದ್ದಗಂಗಾ ಕ್ಷೇತ್ರ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv