Tag: Poor Children

  • ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    ಟೀ ಮಾರಿ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದ ವ್ಯಾಪಾರಿ

    – ಸಲಾಂ ಎಂದ ವಿವಿಎಸ್ ಲಕ್ಷ್ಮಣ್

    ಲಕ್ನೋ: ಉತ್ತರ ಪ್ರದೇಶದ ಚಹಾ ವ್ಯಾಪಾರಿಯೋಬ್ಬರು ಚಹಾ ಮಾರಾಟದಲ್ಲಿ ಬಂದ ಶೇ. 80ರಷ್ಟು ಲಾಭವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್(45) ಅನೇಕ ವರ್ಷಗಳಿಂದ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸುಮಾರು 40 ಮಂದಿ ಮಕ್ಕಳಿಗೆ ಉಚಿತ ಶಿಕ್ಷಣ, ಪಠ್ಯ-ಪುಸ್ತಕ ಹಾಗೂ ಓದಲು ಬೇಕಾಗುವ ವಸ್ತುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಚಹಾ ಮಾರಾಟದಲ್ಲಿ ಸಿಗುವ ಲಾಭದಲ್ಲಿ ಶೇ.80ರಷ್ಟು ಭಾಗ ಬಡಮಕ್ಕಳ ಶಿಕ್ಷಣಕ್ಕೆ ಮಲಿಕ್ ನೀಡುತ್ತಿದ್ದಾರೆ. ಈ ಬಗ್ಗೆ ತಿಳಿದು ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮಲಿಕ್ ಕಾರ್ಯವನ್ನು ಹೊಗಳಿ, ಎಂಥಹ ಪ್ರೇರಣೆ ಎಂದು ಬರೆದು ಟ್ವೀಟ್ ಮಾಡಿ ಮಲಿಕ್‍ಗೆ ಸಲಾಂ ಎಂದಿದ್ದಾರೆ.

    ಬಡ ಕುಟುಂಬದಲ್ಲಿ ಬೆಳೆದ ಮಲಿಕ್ ಅವರಿಗೆ ಪ್ರೌಢಶಾಲೆ ಬಳಿಕ ಓದಲು ಸಾಧ್ಯವಾಗಲಿಲ್ಲ. ಕುಟುಂಬದ ಆರ್ಥಿತ ಪರಿಸ್ಥಿತಿಯಿಂದ ಹೆಚ್ಚಿನ ಶಿಕ್ಷಣ ಪಡೆಯಲು ಆಗಲಿಲ್ಲ. ಆದ್ದರಿಂದ ಶಿಕ್ಷಣದಿಂದ ವಂಚಿತರಾಗಿ ಬಡ ಮಕ್ಕಳು ಕೆಲಸಕ್ಕೆ ಹೋಗುವುದನ್ನ ನೋಡಿದರೆ ನನಗೆ ನನ್ನ ಬಾಲ್ಯ ನೆನಪಾಗುತ್ತೆ. ನನ್ನ ರೀತಿ ಈ ಮಕ್ಕಳು ಶಿಕ್ಷಣ ಪಡೆಯಲಾಗದೆ ಕೊರಗಬಾರದು. ಹೀಗಾಗಿ ನನ್ನ ಸಂಪಾದನೆಯಲ್ಲಿ ಈ 40 ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದೇನೆ. ಇದರಲ್ಲಿ ನನಗೆ ಖುಷಿ ಸಿಗುತ್ತಿದೆ ಎಂದು ಮಲಿಕ್ ತಿಳಿಸಿದ್ದಾರೆ.

    2017ರಲ್ಲಿ ‘ಮಾ ತುಜೆ ಸಲಾಂ’ ಹೆಸರಿನಲ್ಲಿ ಎನ್‍ಜಿಓ ಆರಂಭಿಸಿದೆ. ಚಹಾ ಮಾರಾಟ ಮಾಡಿ ಬರುವ ಲಾಭದ ಶೇ.80ರಷ್ಟು ಹಣವನ್ನು ನಾನು 40 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ಶಾಲೆಗೆ ಖರ್ಚು ಮಾಡುತ್ತಿದ್ದೇನೆ. ಮಕ್ಕಳಿಗಾಗಿ ತಿಂಗಳಿಗೆ ಸುಮಾರು 20 ಸಾವಿರ ಹಣ ಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕಾನ್ಪುರದ ಚಹಾ ವ್ಯಾಪಾರಿ ಮೊಹಮದ್ ಮೆಹಬೂಬ್ ಮಲಿಕ್ 40 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಅವರು ಚಿಕ್ಕ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ. ಅದರಿಂದ ಬಂದ ಶೇ. 80ರಷ್ಟು ಲಾಭವನ್ನು ಈ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡುತ್ತಾರೆ, ಎಂಥಹ ಪ್ರೇರಣೆ! ಎಂದು ಬರೆದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಮಲಿಕ್ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇತ್ತ ನೆಟ್ಟಿಗರು ಕೂಡ ಮಲಿಕ್ ಕಾರ್ಯಕ್ಕೆ ಮನ ಸೋತಿದ್ದಾರೆ.

  • ಬಡಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸಿ ದೀಪಾವಳಿ ಆಚರಿಸಿದ ಪಟ್ವಾರಿ

    ಬಡಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸಿ ದೀಪಾವಳಿ ಆಚರಿಸಿದ ಪಟ್ವಾರಿ

    ಭೋಪಾಲ್: ಮಧ್ಯಪ್ರದೇಶದ ಸಚಿವ ಜಿತು ಪಟ್ವಾರಿ ಅವರು ಭಾನುವಾರ ಮಧ್ಯಾಹ್ನ ಬಡ ಮಕ್ಕಳಿಗೆ 5 ಸ್ಟಾರ್ ಹೋಟೆಲಿನಲ್ಲಿ ಊಟ ಕೊಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು.

    ಬೆಳಕಿನ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಸಚಿವ ಜಿತು ಪಟ್ವಾರಿ ಅವರು ಕೂಡ ತಮ್ಮ ಕುಟುಂಬಸ್ಥರೊಂದಿಗೆ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದರು. ದೀಪಾವಳಿ ಕೇವಲ ತಮ್ಮ ಬದುಕಲ್ಲಿ ಮಾತ್ರವಲ್ಲ ಎಲ್ಲರ ಬದುಕಲ್ಲೂ ಬೆಳಕು ತರಲಿ ಎಂದು ಶುಭಕೋರಿದರು.

    ಹಬ್ಬದ ಖುಷಿ ತಮಗೆ ಮಾತ್ರ ಸೀಮೀತವಾಗುವುದು ಬೇಡವೆಂದು ಯೋಚಿಸಿದ ಪಟ್ವಾರಿ, ಬಡಮಕ್ಕಳಿಗೆ ಇಂಧೋರ್‍ನ ಐಷಾರಾಮಿ 5 ಸ್ಟಾರ್ ಹೋಟೆಲಿನಲ್ಲಿ ಔತಣಕೂಟ ಏರ್ಪಡಿಸದರು. ಈ ಮೂಲಕ ಮುಗ್ಧ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದರು. ಸಚಿವರ ಈ ಕಾರ್ಯ ಎಲ್ಲರ ಮನಗೆದ್ದಿದ್ದು, ಬಡಮಕ್ಕಳ ಜೊತೆ ದೀಪಾವಳಿಯನ್ನು ಆಚರಿಸಿದ ಸಚಿವರನ್ನು ಜನರು ಹಾಡಿ ಹೊಗಳಿದ್ದಾರೆ.

    ಇತ್ತ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಭಾನುವಾರ ಭುವನೇಶ್ವರದಲ್ಲಿರುವ ಎಸ್‍ಓಎಸ್ ಚಿಲ್ಡ್ರನ್ಸ್ ವಿಲೇಜ್ ಎನ್‍ಜಿಓಗೆ ಭೇಟಿ ಕೊಟ್ಟು, ಮಕ್ಕಳೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು. ತಾವು ಮಾತ್ರವಲ್ಲದೆ ಸಿಎಂ ಕಚೇರಿ, ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಎಸಿಪಿ ಹೀಗೆ ಅನೇಕ ಅಧಿಕಾರಿಗಳಿಗೆ ಮಕ್ಕಳ ಪಾಲನ ಕೇಂದ್ರಗಳಿಗೆ ಭೇಟಿ ಕೊಟ್ಟು ದೀಪಾವಳಿಯನ್ನು ಆಚರಿಸುವಂತೆ ತಿಳಿಸಿದ್ದರು.

    ಹಾಗೆಯೇ ಒಡಿಶಾದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲಿ ಇರುವ ಮಕ್ಕಳ ಪಾಲನಾ ಕೇಂದ್ರಗಳಿಗೆ ಭೇಟಿಕೊಟ್ಟು, ಅಲ್ಲಿನ ವ್ಯವಸ್ಥೆ ಸೌಲಭ್ಯಗಳ ಕುರಿತು ತಿಳಿಯುವಂತೆ ಸೂಚಿಸಿದ್ದರು. ಜೊತೆಗೆ ಡಿಜಿಪಿ(ಪೊಲೀಸ್ ಮಹಾನಿರ್ದೇಶಕರು) ಸೇರಿದಂತೆ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಸ್‍ಪಿಗಳು ಬೆಟಾಲಿಯನ್‍ಗಳಲ್ಲಿ ಸಮಯ ಕಳೆದು, ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ದೀಪಾವಳಿಯನ್ನು ಆಚರಿಸುವಂತೆ ಸೂಚಿಸಿದ್ದರು.

  • ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಅಂಗಡಿ ಮಾಲೀಕ ಪಾಠ

    ಮೆಟ್ರೋ ಸೇತುವೆ ಕೆಳಗೆ 300 ಬಡ ಮಕ್ಕಳಿಗೆ ಅಂಗಡಿ ಮಾಲೀಕ ಪಾಠ

    ನವದೆಹಲಿ: ದಿನಸಿ ಅಂಗಡಿ ಮಾಲೀಕರೊಬ್ಬರು ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೆ, ಕಳೆದ 13 ವರ್ಷಗಳಿಂದ 300 ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಉತ್ತರಪ್ರದೇಶ ಮೂಲದ ರಾಜೇಶ್ ಅವರು ದೆಹಲಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ ಇವರು ಯಮುನಾ ನದಿ ತಟದಲ್ಲಿರುವ ಮೆಟ್ರೋ ರೈಲು ಸೇತುವೆ ಕೆಳಗೆ ಬಡ ಮಕ್ಕಳಿಗಾಗಿ ಉಚಿತ ಶಾಲೆ ನಡೆಸುತ್ತಿದ್ದಾರೆ. ರಾಜೇಶ್ ಅವರು ಕಳೆದ 13 ವರ್ಷದಿಂದ ಈ ಉಚಿತ ಶಾಲೆಯನ್ನು ನಡೆಸಿಕೊಂಡು ಬಂದಿದ್ದಾರೆ. ಯಮುನಾ ತಟದಲ್ಲಿ ಜೋಪಡಿಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿರುವ ಬಡ ಕುಟುಂಬಗಳು ಹೊತ್ತು ಊಟಕ್ಕಾಗಿ ಕೂಲಿ ಮಾಡಿಕೊಂಡು ಕಷ್ಟ ಪಡುತ್ತಾರೆ. ಹೀಗಿರುವಾಗ ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡೋದು ಬಡ ಪೋಷಕರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಡ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ರಾಜೇಶ್ ಈ ಶಾಲೆ ನಡೆಸುತ್ತಿದ್ದಾರೆ.

    ಬೆಳಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಎರಡು ಪಾಳಿಯಲ್ಲಿ ಮಕ್ಕಳಿಗೆ ರಾಜೇಶ್ ಅವರು ಪಾಠ ಹೇಳಿಕೊಡುತ್ತಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಅಕ್ಕ-ಪಕ್ಕದಲ್ಲಿ ವಾಸವಾಗಿರೋ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ.

    ಇದೊಂದು ಓಪನ್ ಹೌಸ್ ಸ್ಕೂಲ್ ಆಗಿದ್ದು, ಮೆಟ್ರೋ ಸೇತುವೆಯೇ ಇದಕ್ಕೆ ಸೂರಾಗಿದೆ. ಮೆಟ್ರೋ ಕಾಂಪ್ಲೆಕ್ಸ್‌ನ ಗೋಡೆಗೆ ಕಪ್ಪು ಬಣ್ಣ ಬಳಿದು ಅದನ್ನೇ ಬರೆಯುವ ಬೋರ್ಡ್ ಮಾಡಲಾಗಿದೆ. ನೆಲದ ಮೇಲೆ ಕಾರ್ಪೆಟ್ ಹಾಕಿ ಅದರ ಮೇಲೆ ಮಕ್ಕಳನ್ನು ಕೂರಿಸಿ ಇಲ್ಲಿ ಪಾಠ ಮಾಡಲಾಗುತ್ತದೆ. ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ರಾಜೇಶ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ.

    ಅಲ್ಲದೆ ಈ ಶಾಲೆ ಬಗ್ಗೆ ತಿಳಿದ ಕೆಲ ಎನ್‍ಜಿಒ ಹಾಗೂ ಸಾರ್ವಜನಿಕರು ಶಾಲೆಗೆ ನೆರವು ನೀಡಲು ಬರುತ್ತಾರೆ. ಅವರಿಗೆ ನೀವು ಹಣಕ್ಕಿಂತ ಮಕ್ಕಳಿಗೆ ಆಹಾರ, ಅಗತ್ಯ ಪಠ್ಯಪುಸ್ತಕಗಳನ್ನು ನೀಡಿ ಸಹಾಯ ಮಾಡಿ ಎಂದು ಹೇಳುತ್ತಾರೆ. ಜೊತೆಗೆ ಹಲವರು ಇಲ್ಲಿಗೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಶಾಲೆಯ ಮಕ್ಕಳ ಜೊತೆ ಆಚರಿಸಿಕೊಂಡು ಖುಷಿಪಡುತ್ತಾರೆ. ಇನ್ನು ಕೆಲವರು ಹಾಗೆ ಸುಮ್ಮನೆ ಬಂದು ಮಕ್ಕಳ ಜೊತೆ ಬೆರೆದು ಸಮಯ ಕಳೆಯುತ್ತಾರೆ.

    2006ರಿಂದ ರಾಜೇಶ್ ಅವರು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಈ ಬಡ ಮಕ್ಕಳಿಗೂ ಉತ್ತಮ ಜೀವನ ನಡೆಸುವ ಹಕ್ಕಿದೆ. ಶಿಕ್ಷಣದಿಂದ ಈ ಮಕ್ಕಳು ಮುಂದೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತೆ. ಆದ್ದರಿಂದ ಶಾಲೆಯ ಸುತ್ತಮುತ್ತಲು ಇರುವ ಬಡ ಕುಟುಂಬಗಳ ಮಕ್ಕಳಿಗೆ ಓದುವ ಆಸಕ್ತಿಯಿದ್ದರೆ ಅವರನ್ನು ಕರೆದುಕೊಂಡು ಬಂದು ಪಾಠ ಮಾಡಲಾಗುತ್ತದೆ. ಇದರಿಂದ ಮುಂದೆ ಈ ಮಕ್ಕಳು ಸಾಮಾಜದಲ್ಲಿ ಉತ್ತಮ ಜೀವನ ನಡೆಸಲು ನೆರವಾಗುತ್ತೆದೆ ಎಂದು ರಾಜೇಶ್ ಶಾಲೆ ನಡೆಸುತ್ತಿದ್ದಾರೆ.