Tag: Pondicherry

  • ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ

    ಲಾರಿ ಡಿಕ್ಕಿ – ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಏಳು ಲಕ್ಷ ಮೌಲ್ಯದ ಮದ್ಯ

    ಕಾರವಾರ: ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಗೆ ಹಿಂದಿನಿಂದ ಬಾಕ್ಸೈಟ್ ಅದಿರು ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಏಳು ಲಕ್ಷ ಮೌಲ್ಯದ ಗೋವಾ (Goa) ಮದ್ಯದ ಬಾಟಲಿಗಳು ರಸ್ತೆಗೆ ಬಿದ್ದು ನಾಶವಾದ ಘಟನೆ ಅಂಕೋಲ (Ankola) ತಾಲೂಕಿನ ತೊಡೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

    ಗೋವಾದಿಂದ ಪಾಂಡಿಚೆರಿಗೆ (Pondicherry) ಕೊಂಡೊಯ್ಯುತಿದ್ದ ಗೋವಾ ಮದ್ಯದ ಲಾರಿಗೆ ಮಂಗಳೂರು (Mangaluru) ಕಡೆ ತೆರಳುತಿದ್ದ ಬಾಕ್ಸೈಟ್ (Bauxite) ಅದಿರು ತುಂಬಿದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.

    ಘಟನೆಯಲ್ಲಿ ಅದೃಷ್ಟವಶಾತ್ ಚಾಲಕ ಸಹಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಲಿಂಗಕಾಮಿಗಳು ಅಂತಾ ಹೇಳಿಕೊಂಡ್ರೆ ಮರಣದಂಡನೆ – ಮಸೂದೆ ಪಾಸ್‌ ಮಾಡಿದ ಉಗಾಂಡ

  • ಸಂಸ್ಕೃತಿ ಅರಿಯಲು ಪಾಂಡಿಚೇರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಹೊರಟ ಯುವಕ, ಯುವತಿ

    ಸಂಸ್ಕೃತಿ ಅರಿಯಲು ಪಾಂಡಿಚೇರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಹೊರಟ ಯುವಕ, ಯುವತಿ

    – ಹಣ, ಮೊಬೈಲ್ ಇಲ್ಲದೇ 1400 ಕಿ.ಮೀ ಪಯಣ

    ರಾಮನಗರ: ದೇಶವು ಸಾಕಷ್ಟು ವಿಭಿನ್ನ ಸಂಸ್ಕೃತಿಯನ್ನ ಒಳಗೊಂಡಿದ್ದು, ರಾಜ್ಯದಿಂದ ರಾಜ್ಯಕ್ಕೆ ಸಂಸ್ಕೃತಿ, ಕಲೆ, ಭಾಷೆಗಳು ವಿಭಿನ್ನವಾಗಿದೆ. ಇದನ್ನು ತಿಳಿಯಲು ಯುವಕ, ಯುವತಿ ಪಾಂಡೀಚೆರಿಯಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ಪಯಣ ಬೆಳೆಸಿದ್ದು, ಮೊಬೈಲ್ ಇಲ್ಲದೇ, ಹಣವೂ ಇಲ್ಲದೆ 70 ದಿನಗಳು 1400 ಕಿ.ಮೀ ಪಯಣ ನಡೆಸುತ್ತಿದ್ದಾರೆ.

    ಉತ್ತರಾಖಂಡ್ ರಾಜ್ಯದ ಸಮಾಜ ಸೇವಕ ಅಂಕಿತ್ ದಾಸ್ ಹಾಗೂ ಮಹಾರಾಷ್ಟ್ರದ ಲೇಖಕಿ ನೈನಿಕ ಭಟ್ಯ ಕಾಲ್ನಡಿಗೆಯಲ್ಲಿ ಪಯಣ ನಡೆಸುತ್ತಿದ್ದಾರೆ. ಈಗಾಗಲೇ ನೈನಿಕ ಭಟ್ಯ ಹಾಗೂ ಅಂಕಿತ್ ದಾಸ್ 550 ಕಿ.ಮೀ ಪಯಣ ಮುಗಿಸಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಹಾದು ಬಂದು ಕರ್ನಾಟಕ ತಲುಪಿದ್ದಾರೆ. ತಮಿಳುನಾಡು ಮತ್ತು ಆಂಧ್ರದಲ್ಲಿ ಇವರಿಗೆ ಉತ್ತಮ ಸ್ಪಂದನೆ ಜನಗಳಿಂದ ಸಿಕ್ಕಿದ್ದು, ಈಗ ಕರ್ನಾಟಕದಿಂದ ಪಯಣ ಆರಂಭ ಮಾಡಿರುವ ಜೋಡಿ ಬೆಂಗಳೂರಿನಿಂದ ಮಾಗಡಿಗೆ ಆಗಮಿಸಿ ಕುಣಿಗಲ್ ಮಾರ್ಗದ ಮೂಲಕ ಪಯಣ ಬೆಳೆಸಿದ್ದಾರೆ.

    1400 ಕಿಲೋ ಮೀಟರ್ ಪಯಣ ನಡೆಸುತ್ತಿರುವ ಅಂಕಿತ್ ದಾಸ್ ಹಾಗೂ ನೈನಿಕ ಭಟ್ಯ ಬಳಿ ನಯಾಪೈಸೆ ಹಣವಿಲ್ಲ. ಮೊಬೈಲ್ ಸಹ ಇಲ್ಲ. ಯಾವುದೇ ಮ್ಯಾಪ್ ಇಲ್ಲದೆ, 2 ಬ್ಯಾಗ್, ನೀರಿನ ಬಾಟಲಿ, ಹಾಕಿಕೊಳ್ಳಲು ಕೆಲವು ಬಟ್ಟೆಗಳು, 2 ತಟ್ಟೆಯನ್ನು ಹಿಡಿದು ಪಯಣ ಬೆಳೆಸಿದ್ದಾರೆ. ಪಯಣದ ದಾರಿಯಲ್ಲಿ ಯಾರು ಇವರಿಗೆ ಊಟ ಹಾಕುತ್ತಾರೋ ಅಲ್ಲೆ ಇವರಿಗೆ ಊಟ, ಕತ್ತಲಾದ ಮೇಲೆ ಯಾರು ಇವರಿಗೆ ಮಲಗಲು ಜಾಗ ಕೊಡುತ್ತಾರೋ ಅಲ್ಲೆ ಇವರ ನಿದ್ರೆ. ಯಾರೂ ಇವರಿಗೆ ಆಶ್ರಯ ಕೊಡದಿದ್ದರೆ ದೇವಸ್ಥಾನ, ಶಾಲೆಗಳಲ್ಲಿ ಮಲಗಿ ಬೆಳಗ್ಗೆ ಎದ್ದು ತಮ್ಮ ಪಯಣ ಆರಂಭಿಸುತ್ತಾರೆ.

    ನಾವು ಪಯಣಿಸಿರುವ ಎಲ್ಲಾ ಕಡೆಯು ಸಾರ್ವಜನಿಕರು ಅತಿಥಿಗಳನ್ನು ಸ್ವಾಗತಿಸುವಂತೆ ಸ್ವಾಗತಿಸಿದ್ದು, ಪ್ರತಿ ದಿನವು 3 ಹೊತ್ತು ಊಟ ಸಿಕ್ಕಿದೆ. ಒಂದೊಂದು ದಿನ ಹೆಚ್ಚಿಗೆ ಊಟ ಸಿಕ್ಕಿ ಅದನ್ನು ನಾವು ಎತ್ತುಕೊಂಡು ಹೋದ ಪ್ರಸಂಗವು ಇದೆ ಎಂದು ಅಂಕಿತ್ ದಾಸ್ ತಿಳಿಸುತ್ತಾರೆ.

    ಕರ್ನಾಟಕದ ಕನ್ನಡಿಗರು ವಿಶಾಲ ಹೃದಯದವರು ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಕರ್ನಾಟಕದಲ್ಲಿ ಪಯಣ ಆರಂಭಿಸಿರುವ ಅಂಕಿತ್, ನೈನಿಕ ಕರ್ನಾಟಕ ಜನತೆಯ ಪ್ರೀತಿ, ಇಲ್ಲಿನ ಸಂಸ್ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೇಪರ್, ಟಿವಿಗಳಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತವಿಲ್ಲ ಎಂಬ ಸುದ್ದಿಗಳನ್ನು ಕೇಳುತ್ತಿದ್ದೆವು. ಆದರೆ ನಮಗೆ ಎಲ್ಲೂ ಕೂಡ ಅಪಾಯ ಬಂದಿಲ್ಲ. ಇಲ್ಲಿನ ಜನತೆ ನಮ್ಮನ್ನು ಪ್ರೀತಿಯಿಂದ ಕಾಣುತ್ತಿದ್ದಾರೆ. ಜನಗಳು ಈ ಪ್ರದೇಶ ಅಪಾಯಕಾರಿ ಎಂದು ಹೇಳಿದರೆ ನಾವು ಅಲ್ಲಿಗೆ ಹೋಗುವುದಿಲ್ಲ. ಎಲ್ಲಾ ಕಡೆಯೂ ನಮ್ಮನ್ನು ಪ್ರೀತಿಯಿಂದಲೇ ಕಾಣುತ್ತಿದ್ದಾರೆಂದು ನೈನಿಕ ಹೇಳಿದ್ದಾರೆ.

    ಅಂಕಿತ್ ಅವರು ತಮ್ಮ ಗೆಳತಿ ಪ್ರಿಯಾನ್ಷಾರವರಿಗೆ ತಾವು ಹೋಗುವ ಸ್ಥಳದಿಂದ ಬೇರೆಯವರ ಮೊಬೈಲ್‍ನಿಂದ ವಾಟ್ಸಾಪ್ ಮೂಲಕ ಎಲ್ಲಿ ಇದ್ದೇವೆಂದು ತಿಳಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಬೇರೆಯವರ ಮೊಬೈಲ್​ನಲ್ಲಿ ರೂಟ್ ಮ್ಯಾಪ್‍ನ್ನು ನೋಡಿ ಪಯಣ ಬೆಳೆಸುತ್ತಿರುವುದು ವಿಶೇಷವಾಗಿದೆ.

    ಇದರ ಜೊತೆಗೆ ತಾವು ಹೋಗುವ ಸ್ಥಳಗಳ ಸಂಸ್ಕೃತಿ, ವಿಶೇಷತೆಗಳ ಚಿತ್ರಗಳನ್ನು ಸೆರೆಹಿಡಿದು ಡೈರಿಯಲ್ಲಿ ಮಾಹಿತಿ ದಾಖಲಿಸಿಕೊಳ್ತಿದ್ದಾರೆ. ಇವರ ಜೊತೆ ಇರುವ ಸಾರ್ವಜನಿಕರ ಫೋಟೋಗಳನ್ನು ಬೇರೆಯವರ ಮೊಬೈಲ್‌ನಿಂದ ವಾಟ್ಸಾಪ್ ಮಾಡಿಸಿಕೊಂಡು ಪಯಣ ಮುಂದುವರೆಸಿದ್ದಾರೆ. ಇಂಗ್ಲೀಷ್, ಹಿಂದಿ ಬಿಟ್ಟರೆ ಇವರಿಗೆ ಬೇರೆ ಭಾಷೆ ಗೊತ್ತಿಲ್ಲ. ಕರ್ನಾಟಕಕ್ಕೆ ಬಂದಿರುವ ನೈನಿಕ ಭಟ್ಯ ಸ್ವಲ್ಪ ಸ್ವಲ್ಪ ಕನ್ನಡವನ್ನು ಕಲಿತು ಜನಗಳ ಜೊತೆ ಸಂಪರ್ಕ ಮಾಡಿ ತಮ್ಮ ಉದ್ದೇಶವನ್ನು ತಿಳಿಸಿ, ಊಟ ಮತ್ತು ಮಲಗಲು ಆಶ್ರಯ ಪಡೆಯುತ್ತಿದ್ದಾರೆ. ಆದರೆ ಕೆಲವೇ ದಿನಗಳಿಂದ ಕರ್ನಾಟಕದ ಸಂಪರ್ಕವನ್ನು ಹೊಂದಿರುವ ನೈನಿಕ ಭಟ್ಯ ಕನ್ನಡ ಕಲಿತಿರುವುದು ಹೆಮ್ಮೆಯ ವಿಚಾರವಾಗಿದೆ.

  • 9 ರನ್‍ಗಳಿಗೆ ಆಲೌಟ್ – 9 ಜನರು ಶೂನ್ಯಕ್ಕೆ ಪೆವಿಲಿಯನ್‍ನತ್ತ ಹೆಜ್ಜೆ

    9 ರನ್‍ಗಳಿಗೆ ಆಲೌಟ್ – 9 ಜನರು ಶೂನ್ಯಕ್ಕೆ ಪೆವಿಲಿಯನ್‍ನತ್ತ ಹೆಜ್ಜೆ

    ಪುದುಚೇರಿ: ಕ್ರಿಕೆಟ್‍ನಲ್ಲಿ ಟಿ20 ಅತ್ಯಂತ ರೋಚಕ ಪಂದ್ಯ ಎಂದೇ ಹೇಳಲಾಗುತ್ತದೆ. ಮೂರು ಮಾದರಿಯ ಕ್ರಿಕೆಟ್ ನಲ್ಲಿ ಟಿ20 ಪಂದ್ಯಗಳನ್ನು ನೋಡಲು ಬಹುತೇಕರು ಇಷ್ಟಪಡುತ್ತಾರೆ. ಈ ಪಂದ್ಯಗಳಲ್ಲಿ ಆಟಗಾರರು ಹಲವು ದಾಖಲೆಗಳನ್ನು ಬರೆಯುತ್ತಾರೆ. ಹಾಗೆಯೇ ಕೆಲವೊಂದು ಬಾರಿ ಹೀನಾಯ ಸೋಲು ಕಾಣುವ ಮೂಲಕ ಕಳಪೆ ದಾಖಲೆಗಳನ್ನು ಟಿ20 ಚುಟುಕು ಪಂದ್ಯಗಳು ಕಂಡಿವೆ. ಪುದುಚೇರಿ ಮಹಿಳೆಯರ ಟಿ20 ಪಂದ್ಯದಲ್ಲಿ ತಂಡವೊಂದು ಕೇವಲ 9 ರನ್ ಗಳಿಗೆ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 9 ಆಟಗಾರ್ತಿಯರು ಶೂನ್ಯ ಸುತ್ತಿದ್ದಾರೆ.

    ಪುದುಚೇರಿ ಪ್ಲಮೀರಾ ಕ್ರಿಕೆಟ್ ಗ್ರೌಂಡ್ ನಲ್ಲಿ ಮಹಿಳೆಯರ ಸೀನಿಯರ್ ಟಿ20 ಪಂದ್ಯ ನಡೆದಿತ್ತು. ಮಿಜೋರಾಂ ಮತ್ತು ಮಧ್ಯ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ ಮೀಜೋರಾಂ ವನಿತೆಯರು 9 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಒಂಬತ್ತು ಆಟಗಾರ್ತಿಯರು ಖಾತೆಯನ್ನ ತೆರೆಯದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ.

    14.5 ಓವರ್ ಎದುರಿಸಿದ ಮೀಜೋರಾಂ ಮಹಿಳಾ ಪಡೆ ಕೇವಲ 9 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. 25 ಬಾಲ್ ಎದುರಿಸಿದ ಅಪೂರ್ವ ಭಾರಧ್ವಾಜ್, ಒಂದು ಬೌಂಡರಿ ಸೇರಿದಂತೆ 6 ರನ್ ಹೊಡೆದರೆ ಇತರೇ ರೂಪದಲ್ಲಿ 3 ರನ್ ಸೇರಿ ತಂಡದ ಒಟ್ಟಾರೆ ಮೊತ್ತ 9 ಆಗಿತ್ತು. ಮಧ್ಯಪ್ರದೇಶದ ತಂಡದಲ್ಲಿ 7 ಮಂದಿ ಬೌಲಿಂಗ್ ಮಾಡಿದ್ದು, ಆರು ಬೌಲರ್ ಗಳು ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬೌಲರ್ ತರಂಗ ಜಾ 25 ಎಸೆತ ಹಾಕಿ 1 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು.

    ನಂತರ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶದ ವನಿತೆಯರು ಕೇವಲ ಒಂದು ಓವರ್ ನಲ್ಲಿಯೇ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಫೆಬ್ರವರಿ 20ರಂದು ನಡೆದಿದ್ದ ಟಿ20 ಮ್ಯಾಚ್ ನಲ್ಲಿ ಮೀಜೋರಾಂ ವನಿತೆಯರನ್ನು ಕೇರಳದ ಆಟಗಾರ್ತಿಯರು 24 ರನ್ ಗಳಿಗೆ ಅಲೌಟ್ ಮಾಡುವ ಮೂಲಕ 10 ವಿಕೆಟ್ ಗಳ ಜಯವನ್ನು ದಾಖಲಿಸಿದ್ದರು.

    ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಚೀನಾ ತಂಡ ಯುಎಇ ಎದುರು 14 ರನ್‍ಗಳಿಗೆ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದೂವರೆಗಿನ ಕನಿಷ್ಟ ಸ್ಕೋರ್ ಇದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv