Tag: Polling booth

  • ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ಬೆಂಗಳೂರು: ಈ ಬಾರಿ ಮತ ಹಾಕಬೇಕು. ಆದರೆ ಮತಗಟ್ಟೆ (Polling Booth) ಯಾವುದು ಅಂತ ತಿಳಿಯುತ್ತಿಲ್ಲ ಎಂಬ ಚಿಂತೆಯಲ್ಲಿ ನೀವಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ನೀವು ಮನಸ್ಸು ಮಾಡಿದರೆ ಕೆಲ ನಿಮಿಷದಲ್ಲೇ ನಿಮ್ಮ ಮೊಬೈಲ್‌ನಲ್ಲೇ ಮತಗಟ್ಟೆಯ ವಿವರವನ್ನು ತಿಳಿಯಬಹುದು.

    ಮತದಾರರು ಮೂರು ರೀತಿಯಲ್ಲಿ ಮತಗಟ್ಟೆಯನ್ನು ವಿವರವನ್ನು ಪಡೆದುಕೊಳ್ಳಬಹುದು. ಒಂದನೇಯದು ಮೊಬೈಲ್‌ ಅಪ್ಲಿಕೇಶನ್‌, ಎರಡನೇಯದ್ದು ವೆಬ್‌ಸೈಟ್‌, ಮೂರನೇಯದ್ದು ಕಾಲ್‌ ಸೆಂಟರ್‌ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಬಹುದು.

    1. ಚುನಾವಣಾ ಅಪ್ಲಿಕೇಶನ್‌
    ಚುನಾವಣಾ ಆಯೋಗ ʼಚುನಾವಣಾʼ ಹೆಸರಿನಲ್ಲಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಓಪನ್‌ ಮಾಡಿದಾಗ Search by Epic No ಅಥವಾ Search by Name ಎಂಬ ಎರಡು ಆಯ್ಕೆ ಸಿಗುತ್ತದೆ.

    Search by Epic No ಆಯ್ಕೆ ಮಾಡಿದರೆ ವೋಟರ್‌ ಐಡಿ ನಂಬರ್‌ ಹಾಕಿದರೆ ಸಾಕಾಗುತ್ತದೆ. Search by Name ಆಯ್ಕೆ ಆರಿಸಿದರೆ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಬಂಧಿಯ ಹೆಸರು, ಲಿಂಗ ಆಯ್ಕೆ ಮಾಡಿ ಹುಡುಕಬಹುದು. ಇಷ್ಟೇ ಅಲ್ಲದೇ ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಮೂಲಕವೂ ಮತಗಟ್ಟೆಯನ್ನು ಹುಡುಕಬಹುದು.

    ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಿChunavana
    ಐಒಎಸ್‌ ಆಪ್‌ ಡೌನ್‌ಲೋಡ್‌ ಮಾಡಿChunavana

    2. ವೆಬ್‌ಸೈಟ್‌
    ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಸಾಧ್ಯವಾಗದವರು ವೆಬ್‌ಸೈಟ್‌ ಮೂಲಕ ಮತಗಟ್ಟೆಯನ್ನು ಹುಡುಕಬಹುದು. ಆಪ್‌ನಲ್ಲಿ ಹೇಗೆ ವೈಯಕ್ತಿಕ ಡೇಟಾ ಎಂಟ್ರಿ ಮಾಡುತ್ತಿರೋ ಅದೇ ರೀತಿಯ ವಿವರಗಳನ್ನು ಸಲ್ಲಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು.

     ಚುನಾವಣಾ ಆಯೋಗದ ವೆಬ್‌ಸೈಟ್‌ ಕ್ಲಿಕ್‌ ಮಾಡಿ: www.kgis.ksrsac.in

    3. ದೂರವಾಣಿ
    ಆಪ್‌ ಮತ್ತು ವೆಬ್‌ಸೈಟ್‌ ಮೂಲಕ ಮತಗಟ್ಟೆಯ ಮಾಹಿತಿ ಪಡೆಯಲು ಸಾಧ್ಯವಾಗದವರು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡಿ ಮತಗಟ್ಟೆಯ ವಿವರ ತಿಳಿದುಕೊಳ್ಳಬಹುದು. ಇದನ್ನೂ ಓದಿ: ನನಗೆ ಗಗನಯಾತ್ರಿ ಆಗಬೇಕೆಂಬ ಆಸೆ: SSLC ಫಸ್ಟ್ ರ‍್ಯಾಂಕ್ ವಿದ್ಯಾರ್ಥಿನಿ

    ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್‌ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ತಿಳಿಯಬಹುದು.

    ವೋಟರ್‌ ಐಡಿ ಇಲ್ಲದಿದ್ದರೆ ಏನು?
    ಚುನಾವಣೆ ಸಮಯದಲ್ಲಿ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಒಂದು ವೇಳೆ ವೋಟರ್‌ ಐಡಿ ಇಲ್ಲದೇ ಇದ್ದರೂ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್‌ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ,ಆಧಾರ್ ಕಾರ್ಡ್‌ ಬಳಕೆ ಮಾಡಿಯೂ ಮತ ಹಾಕಬಹುದು.

    ಪ್ರತಿ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಚುನಾವಣಾ ಆಯೋಗ ಮತದಾರರಿಗೆ ಸುಲಭವಾಗಿ ಮತಗಟ್ಟೆಯ ವಿವರ ತಿಳಿದುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಿದೆ.

  • ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

    ಭೋಪಾಲ್: ದೇಶದಲ್ಲಿ ಲೋಕಸಭಾ ಚುನಾವಣೆಯ ಬ್ಯುಸಿ ಮಧ್ಯೆಯೂ ಹಳದಿ ಬಣ್ಣದ ಸಾರಿ ಹಾಗೂ ನೀಲಿ ಬಣ್ಣದ ಗೌನ್ ಧರಿಸಿ ಇವಿಎಂ ಮೆಷಿನ್ ಹಿಡಿದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಒಬ್ಬರು ನೀಲಿ ಬಣ್ಣದ ಗೌನ್ ಧರಿಸಿದರೆ, ಮತ್ತೊಬ್ಬರು ಹಳದಿ ಬಣ್ಣದ ಸೀರೆ ಉಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಮ್ಮ ಎರಡೂ ಕೈಗಳಲ್ಲೂ ಇವಿಎಂ ಹಿಡಿದುಕೊಂಡ ಇಬ್ಬರು ಮಹಿಳೆಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ನೀಲಿ ಬಣ್ಣದ ಗೌನ್ ಧರಿಸಿರುವ ಮಹಿಳೆಯೇ ಪ್ರತಿಕ್ರಿಯಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

    ಹೌದು. ಗೌನ್ ಧರಿಸಿದವರ ಹೆಸರು ಯೋಗೇಶ್ವರಿ ಗೋಹೈಟ್ ಆದರೆ, ಮತ್ತೊಬ್ಬರ ಹೆಸರು ರೀನಾ ದ್ವಿವೇದಿ ಎಂಬುದಾಗಿದೆ. ಯೋಗೇಶ್ವರಿಯವರು ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಫೇಸ್ ಬುಕ್ ನಲ್ಲಿ ಸಾವಿರಾರು ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಆರಂಭಿಸಿದ್ದಾರಂತೆ. ಹೀಗಾಗಿ ಅವರು ತನ್ನ ಖಾತೆಯನ್ನು ಮರೆಮಾಚಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

    ಗೋಹೈಟ್ ಅವರು ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ನಡೆದ ಚುನಾವಣಾ ಸಮಯದಲ್ಲಿ ಅವರನ್ನು ಭೋಪಾಲ್ ನ ಗೋವಿಂದಪುರ ಕ್ಷೇತ್ರದಲ್ಲಿ ಮತಗಟ್ಟೆಯ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಅವರು ಮತಗಟ್ಟೆಗೆ ಬರುತ್ತಿದ್ದಂತೆಯೇ ಫೋಟೋಗ್ರಾಫರ್ ಗಳು ಝೂಮ್ ಮಾಡಿ ಫೋಟೋ ತೆಗೆಯಲು ಆರಂಭಿಸಿದ್ದಾರೆ. ಅಧಿಕಾರಿ ನೀಲಿ ಬಣ್ಣದ ಗೌನ್ ಧರಿಸಿ, ಒಂದು ಕೈನಲ್ಲಿ ಟ್ರೆಂಡಿ ಬ್ಯಾಗ್ ಹಾಗೂ ಇನ್ನೊಂದು ಕೈಯಲ್ಲಿ ಬ್ಯಾಲೆಟ್ ಪೇಪರ್ ಹಿಡಿದುಕೊಂಡು ಹೋಗುತ್ತಿದ್ದಾಗ ಸುತ್ತಮುತ್ತ ಇದ್ದವರೆಲ್ಲ ಒಂದು ಬಾರಿ ಕತ್ತೆತ್ತಿ ನೋಡಿದ್ದಾರೆ. ಇದೇ ವೇಳೆ ಫೋಟೋಗ್ರಾಫರ್ ಗಳು ಮುಗಿಬಿದ್ದು ಫೋಟೋ ತೆಗೆಯಲು ಆರಂಭಿಸಿದರು. ಇದನ್ನು ಗಮನಿಸಿದ ಅಧಿಕಾರಿಗೆ ಇರುಸುಮುರುಸು ಉಂಟಾಗಿದ್ದು, ಆದರೂ ಕ್ಯಾಮೆರಾಗಳಿಗೆ ಒಂದು ಸಣ್ಣ ನಗೆ ಬೀರಿ ಅಲ್ಲಿಂದ ಮುಂದೆ ಹೋಗಿದ್ದಾರೆ.

    ಆದರೆ ಮಧ್ಯಾಹ್ನದ ಬಳಿಕ ಅಧಿಕಾರಿ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಹಿಳೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ಕಾರಣ ಅವರು ಮಾತನಾಡಲು ನಿರಾಕರಿಸಿದ್ದಾರೆ.  ಕರ್ತವ್ಯ ಮಗಿದ ಬಳಿಕವೂ ಅಧಿಕಾರಿ ಪತ್ರಕರ್ತರ ಜೊತೆ ಮಾತನಾಡಲು ನಿರಾಕರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಮತದಾನದ ಮರುದಿನ ಅಂದರೆ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅಧಿಕಾರಿ, ಎಲ್ಲರೂ ನನ್ನ ಕಡೆಯೇ ಗಮನ ಹರಿಸಿದ್ದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯ್ತು. ನನ್ನಷ್ಟದಂತೆ ನಾನು ಡ್ರೆಸ್ ಮಾಡಿಕೊಂಡಿದ್ದೇನೆ. ನಾನು ಯಾವುದೇ ಮಾಡೆಲ್ ಅಲ್ಲ. ಅಲ್ಲದೆ ಯಾವುದೇ ಫ್ಯಾಶನ್ ಮಾಡಿಕೊಂಡು ಮತಗಟ್ಟೆಗೆ ಬಂದಿಲ್ಲ. ಹೀಗಾಗಿ ನಾವು ಧರಿಸುವ ಬಟ್ಟೆಯಿಂದ ನಮ್ಮನ್ನು ವ್ಯಾಖ್ಯಾನ ಮಾಡಬೇಡಿ. ಇದು ನಮ್ಮ ವೃತ್ತಿಯಾಗಿದೆ. ಇಲ್ಲಿನ ನೀತಿ ನಿಯಮಗಳಷ್ಟೇ ನಮಗೆ ಮುಖ್ಯವಾಗುತ್ತದೆ ಎಂದು ಖಾರವಾಗಿಯೇ ಪ್ರತಿಕ್ರಿಯಸಿದ್ದಾರೆ.

    ಅಧಿಕಾರಿ ಸೋಮವಾರ ಕರ್ತವ್ಯದಿಂದ ತೆರಳಿದ್ದಾರೆ. ಆ ಬಳಿಕ ಮಾಧ್ಯಮದವರು ಭೋಪಾಲ್ ನಲ್ಲಿರುವ ಅವರ ಮನೆ ವಿಳಾಸವನ್ನು ಕಂಡು ಹಿಡಿದು ಅಲ್ಲಿಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಮಹಿಳಾ ಅಧಿಕಾರಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

    2011ರ ಜವರಿಯಲ್ಲಿ ಗೋಹೈಟ್ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇರಿಕೊಂಡಿದ್ದಾರೆ. 7 ವರ್ಷದ ಹಿಂದೆ ದೆವೆನ್ ಓಂಕಾರ್ ಎಂಬವರನ್ನು ವರಿಸಿರುವ ಅಧಿಕಾರಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ನನ್ನದು ಒಂದು ಪುಟ್ಟ ಪಾತ್ರವಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

  • 87 ವರ್ಷದ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ

    87 ವರ್ಷದ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದ ಮಗ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಗನೊಬ್ಬ ವಿಕಲಚೇತನ ತಾಯಿಯನ್ನು ಎತ್ತಿಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿಸಿದ್ದಾರೆ.

    ಪಶ್ಚಿಮ ಬಂಗಾಳದ ಮಾಲ್ಡಾ ಸೇರಿದಂತೆ 5 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಮಾಲ್ಡಾ ಮತಕ್ಷೇತ್ರ ವ್ಯಾಪ್ತಿಯ ಕೊಟ್ವಾಲಿಯಲ್ಲಿ ಯುವಕ ತಾಯಿಯನ್ನು ಹೊತ್ತು ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಕರೆ ತಂದಿದ್ದಾನೆ. ಇದನ್ನು ಓದಿ: ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!

    ಯುವಕ ತಾಯಿಯನ್ನು ಹೊತ್ತುಕೊಂಡು ಮತಗಟ್ಟೆಗೆ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 18ರಂದು ನಡೆಸಿದ್ದ ಚುನಾವಣೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ರಾಯ್‍ಗಂಜ್ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮೊಹಮ್ಮದ್ ಸಲಿಂ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆದಿತ್ತು. ಅಷ್ಟೇ ಕೆಲವು ಕಡೆಗಳಲ್ಲಿ ಗಲಾಟೆ, ಹಲ್ಲೆ ಹಾಗೂ ಬಲವಂತವಾಗಿ ಮತದಾನ ಮಾಡಿಸಲಾಗಿತ್ತು.

    ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಆರಂಭವಾಗಿದೆ. 13 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 18 ಕೋಟಿ 85 ಲಕ್ಷ ಜನರು ಇಂದು 1,640 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

    ಅಸ್ಸಾಂನ ಹೈಲಾಕಂಡಿ ಜಿಲ್ಲೆಯ ಸುರ್ಗಲ್ ಬಿಬಿ ಅವರು 102 ವರ್ಷದವರಾಗಿದ್ದು, 1950 ರಿಂದಲೂ ಯಾವುದೇ ಮತದಾವನ್ನು ತಪ್ಪಿಸಿಲ್ಲ. ಅಸ್ಸಾಂನಲ್ಲಿ ಇಂದು ಅವರು ಮತದಾನ ಮಾಡಲಿದ್ದಾರೆ.

  • ಬಿಜೆಪಿ ಶಾಲ್ ಹಾಕಿಕೊಂಡು ಮತಗಟ್ಟೆಗೆ ಬಂದ ಸಂಸದರಿಗೆ ಗೃಹ ಬಂಧನ

    ಬಿಜೆಪಿ ಶಾಲ್ ಹಾಕಿಕೊಂಡು ಮತಗಟ್ಟೆಗೆ ಬಂದ ಸಂಸದರಿಗೆ ಗೃಹ ಬಂಧನ

    ಲಕ್ನೋ: ಬಿಜೆಪಿ ಚಿಹ್ನೆಯ ಶಾಲ್ ಹಾಕಿಕೊಂಡು ಮತಗಟ್ಟೆಗೆ ಆಗಮಿಸಿದ್ದ ಅಭ್ಯರ್ಥಿ, ಹಾಲಿ ಸಂಸದರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಗೃಹಬಂಧನಲ್ಲಿ ಇರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಬುಲಂದ್‍ಶಹರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ಭೋಲಾ ಸಿಂಗ್ ಅವರು ಬಿಜೆಪಿ ಚಿಹ್ನೆ ಇರುವ ಕೇಸರಿ ಶಾಲ್ ಹಾಕಿಕೊಂಡು ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ್ದರು. ಪಕ್ಷದ ಚಿಹ್ನೆಯೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿರುವುದು ನೀತಿಸಂಹಿತೆ ಉಲ್ಲಂಘನೆಯಾಗಿತ್ತು. ಇದರಿಂದಾಗಿ ಚುನಾವಣಾ ಅಧಿಕಾರಿಗಳು ಕೆಲ ಹೊತ್ತು ಗೃಹ ಬಂಧನದಲ್ಲಿ ಇರುವಂತೆ ಸಂಸದರಿಗೆ ಆದೇಶಿಸಿದರು.

    ಮತಗಟ್ಟೆಯಲ್ಲಿದ್ದ ಭದ್ರತಾ ಸಿಬ್ಬಂದಿ ಸಂಸದರನ್ನು ಕೆಲ ಹೊತ್ತು ಗೃಹ ಬಂಧನದಲ್ಲಿ ಇರಿಸಿದರು. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಭೋಲಾ ಸಿಂಗ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‍ಪಿಯ ಪ್ರದೀಪ್ ಕುಮಾರ್ ಜಾದವ್ ಅವರ ವಿರುದ್ಧ 4,21,973 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಈ ಬಾರಿ ಭೋಲಾ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ ಬನ್ಸಿ ಲಾಲ್ ಪಹಾಡಿಯ ಮತ್ತು ಎಸ್‍ಪಿ – ಬಿಎಸ್‍ಪಿ ಮೈತ್ರಿ ಅಭ್ಯರ್ಥಿ ಯೋಗೇಶ್ ವರ್ಮ ಅವರ ವಿರುದ್ಧ ಕಣಕ್ಕೆ ಇಳಿದಿದ್ದಾರೆ.

  • ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ

    ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ

    – ಕಾಂಗ್ರೆಸ್‍ಗೆ ಯಾರು ಮತ ಹಾಕಿದ್ರು ಅಂತ ತಿಳಿಯುತ್ತೆ

    ಗಾಂಧಿನಗರ: ಕಾಂಗ್ರೆಸ್‍ಗೆ ಯಾರು ಮತ ಹಾಕಿದರು ಅಂತ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ ಎಂದು ಗುಜರಾತ್‍ನ ಬಿಜೆಪಿ ಶಾಸಕ ರಮೇಶ್ ಕಟಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಾಹೊದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿನ್ಹಾ ಬಾಭೋರ್ ಅವರ ಪರ ಶಾಸಕರು ಪ್ರಚಾರ ಮಾಡುತ್ತಿದ್ದರು. ಈ ವೇಳೆ ಗ್ರಾಮವೊಂದರಲ್ಲಿ ಮಾತನಾತನಾಡಿದ ಶಾಸಕರು, ನೀವು ಮತದಾನ ಮಾಡುವಾಗ ಮತಯಂತ್ರ (ಇವಿಎಂ)ದಲ್ಲಿರುವ ಜಸ್ವಂತ್ ಸಿನ್ಹಾ ಬಾಭೋರ್ ಅವರ ಭಾವಚಿತ್ರ ಹಾಗೂ ಕಮಲದ ಚಿಹ್ನೆಯ ಪಕ್ಕದಲ್ಲೇ ಹಸಿರು ಗುಂಡಿ ಇರುತ್ತದೆ. ಅದನ್ನು ನೀವು ಒತ್ತಬೇಕು. ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಯಾರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

    ನೀವು ಯಾರಿಗೆ ಮತ ಹಾಕುತ್ತೀರಿ ಎನ್ನುವುದನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕಾಂಗ್ರೆಸ್‍ಗೆ ಮತ ಹಾಕಿದ ಮತದಾರರಿಗೆ ಉದ್ಯೋಗ ಸೇರಿದಂತೆ ಯಾವುದೇ ಸೌಕರ್ಯಗಳು ಸಿಗುವುದಿಲ್ಲ. ಆದರೆ ಬಿಜೆಪಿಗೆ ಮತದಾನ ಮಾಡಿದವರಿಗೆ ಎಲ್ಲ ರೀತಿಯ ಸೌಕರ್ಯಗಳು ಸಿಗಲಿವೆ ಎಂದು ಹೇಳಿದ್ದಾರೆ.

    ರಮೇಶ್ ಕಾತ್ರಾ ಅವರು ದಾಹೊದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಫತೇಪುರ್ ಶಾಸಕರಾಗಿದ್ದಾರೆ. ಹೀಗಾಗಿ ತಮ್ಮ ಪಕ್ಷದ ಅಭ್ಯರ್ಥಿ ಜಸ್ವಂತ್ ಸಿನ್ಹಾ ಬಾಭೋರ್ ಅವರ ಪರ ಪ್ರಚಾರ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಬಗ್ಗೆ ಶಾಸಕರು ನೀಡಿರುವ ಹೇಳಿಕೆಯ ಬಗ್ಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮೊದಲು ಸುಲ್ತಾನಪುರದ ಬಿಜೆಪಿ ಅಭ್ಯರ್ಥಿಯಾಗಿರುವ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.