Tag: politics

  • ಚುನಾವಣೆ ಬರುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್?

    ಚುನಾವಣೆ ಬರುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್?

    ರಾಮನಗರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಶುರುವಾಯ್ತಾ? ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತವಾದ ಅಭ್ಯರ್ಥಿ ಇಲ್ವಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

    ಹೌದು. ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದ್ದು ಭಾನುವಾರ ಚನ್ನಪಟ್ಟಣದಲ್ಲಿ ನಡೆದ ಕನಕನ ಹಬ್ಬ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದ ಯೋಗೇಶ್ವರ್ ಅವರನ್ನು ತೆಗಳಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೇ ಅನಿತಾ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ, ಟೆಂಪರರಿ ನಾಯಕರು ಬರುತ್ತಾರೆ ಹೋಗುತ್ತಾರೆ. ಆದರೆ ನಿಮ್ಮ ಜೊತೆ ನಾವು ಶಾಶ್ವತವಾಗಿ ಇರುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಅನಿತಾ ಕುಮಾರಸ್ವಾಮಿಯವರು ನಿಮ್ಮಲ್ಲೆರನ್ನು ನಂಬಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ನಿಮ್ಮ ಜೊತೆಯಲ್ಲಿ ಯಾರು ಇಲ್ಲದೇ ಇದ್ದರೂ ನಾವಿದ್ದೇವೆ. ನಿಮ್ಮ ಹೆಣವನ್ನು ಹೊರುವವರು ನಾವೇ. ನಿಮ್ಮ ಪಲ್ಲಕ್ಕಿಯನ್ನ ಹೊರುವವರು ನಾವೇ ಎಂದು ಹೇಳುವ ಮೂಲಕ ಶಾಸಕ ಯೋಗೇಶ್ವರ್ ಅವರಿಗೆ ವೇದಿಕೆಯಲ್ಲೇ ಡಿಕೆಶಿ ಟಾಂಗ್ ನೀಡಿದರು.

    ಕೆರೆ ಬಾಗಿನ ಕಾರ್ಯಕ್ರಮಗಳಲ್ಲಿ ಅವರ ಒಂದು ಫೋಟೋ ಕೂಡ ಹಾಕಿಲ್ಲ. ನಮಗೆ ಯಾರು ಸಹಾಯ ಮಾಡಿರುತ್ತಾರೆ ಅವರನ್ನು ನೆನೆಯಬೇಕು. ಸಹಾಯ ಮಾಡಿದವರನ್ನು ಸ್ಮರಿಸಬೇಕು. ನಾಲಿಗೆ ತಪ್ಪಬಾರದು ಆವಾಗ ಒಳ್ಳೆಯ ಮನುಷ್ಯ ಎನ್ನುತ್ತಾರೆ ಎಂದರು.

    ನಾನು ರಾಜಕೀಯವನ್ನು ಬಿಡುವುದಿಲ್ಲ, ಚನ್ನಪಟ್ಟಣವನ್ನು ಬಿಡುವುದಿಲ್ಲ. ಯಾಕೆಂದರೆ ಚನ್ನಪಟ್ಟಣವನ್ನು ರಾಜಕೀಯವಾಗಿ ಮದುವೆ ಮಾಡಿಕೊಂಡಿದ್ದೇನೆ. ‘ನಾನು’ ಎಂದ ಎಲ್ಲಾ ಚಕ್ರವರ್ತಿಗಳು ಬಿದ್ದು ಹೋಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿ ಮತ್ತೊಮ್ಮೆ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಅನಿತಾ ಕುಮಾರಸ್ವಾಮಿ ಅಭ್ಯರ್ಥಿ?
    ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ನೀಡಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ ಈ ಚುನಾವಣೆಯಲ್ಲಿ ಯೋಗೇಶ್ವರ್ ಅವರನ್ನು ಸೋಲಿಸಲು ಡಿಕೆಶಿ ಸರ್ವಪ್ರಯತ್ನ ನಡೆಸುತ್ತಿದ್ದು, ಈ ತಂತ್ರದ ಭಾಗವಾಗಿ ಅನಿತಾ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಅನಿತಾರನ್ನೇ ಬೆಂಬಲಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಡಿಕೆಶಿ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಿಂದ ಕೇಳಿಬಂದಿದೆ.

    ಇದನ್ನೂ ಓದಿ: ದೇವೇಗೌಡ್ರ ಕುಟುಂಬದಲ್ಲಿ ಮತ್ತೊಬ್ರು ಕಣಕ್ಕಿಳಿಯಲು ಸಿದ್ಧತೆ- ತೆರೆಮರೆಯಲ್ಲಿ ಸಜ್ಜಾಗುತ್ತಿದ್ದಾರಾ ಅನಿತಾ ಕುಮಾರಸ್ವಾಮಿ?

    2013ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಅನಿತಾ ಕುಮಾರ ಸ್ವಾಮಿ ವಿರುದ್ಧ 6,464 ಮತಗಳ ಅಂತರಿಂದ ಗೆದ್ದಿದ್ದರು. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರಿಗೆ 80,099 ಮತಗಳು ಬಿದ್ದಿದ್ದರೆ, ಅನಿತಾ ಕುಮಾರಸ್ವಾಮಿ ಅವರಿಗೆ 73,635 ಮತಗಳು ಬಿದ್ದಿತ್ತು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸದತ್ ಅಲಿ ಖಾನ್ ಅವರಿಗೆ 8,134 ಮತಗಳು ಸಿಕ್ಕಿತ್ತು.

    2014ರ ಲೋಕಸಭಾ ಚುನಾವಣೆ ವೇಳೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೇ ಅಕ್ಟೋಬರ್ ನಲ್ಲಿ ಪಕ್ಷದ ವರಿಷ್ಠರ ನಿರ್ಧಾರದಿಂದ ಬೇಸತ್ತು ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದ್ದರು.

    ಕೆಲ ದಿನಗಳಿಂದ ಅನಿತಾ ಕುಮಾರಸ್ವಾಮಿ ಅವರು ಪದೇ ಪದೇ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿದ್ದು, ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಚನ್ನಪಟ್ಟಣದಿಂದ ಕಣಕ್ಕೆ ಇಳಿಯುವ ಆಸೆ ಇದೆ ಎಂದು ತಿಳಿಸಿದ್ದರು.

  • ರಾಜಕೀಯಕ್ಕೆ ಇಳಿಯುತ್ತಾರಾ ಡಿಕೆ ರವಿ ತಾಯಿ ಗೌರಮ್ಮ?- ಇಂದು ಸಿಗಲಿದೆ ಉತ್ತರ

    ರಾಜಕೀಯಕ್ಕೆ ಇಳಿಯುತ್ತಾರಾ ಡಿಕೆ ರವಿ ತಾಯಿ ಗೌರಮ್ಮ?- ಇಂದು ಸಿಗಲಿದೆ ಉತ್ತರ

    ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ತಾಯಿ ಗೌರಮ್ಮ ರಾಜಕೀಯಕ್ಕಿಳಿಯುತ್ತಾರೆ ಎಂಬ ಮಾತುಗಳು ಬಹುದಿನಗಳಿಂದ ಕೇಳಿಬರ್ತಿದೆ. ಇದಕ್ಕೆಲ್ಲ ಗೌರಮ್ಮ ಅವರೇ ಇವತ್ತು ಉತ್ತರ ನೀಡಲಿದ್ದಾರೆ.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಯಲಿದ್ದು ಈ ವೇಳೆ ಗೌರಮ್ಮ ರಾಜಕೀಯಕ್ಕೆ ಎಂಟ್ರಿ ಆಗ್ತಾರಾ ಇಲ್ವಾ ಎಂಬ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಕ್ಕಿಲ್ಲ ಎನ್ನುತ್ತಿರುವ ತಾಯಿ ಗೌರಮ್ಮ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗುತ್ತಿದ್ದಾರೆ. ಈ ಬಗ್ಗೆ ಇಂದು ಮಾಹಿತಿ ನೀಡಲಿದ್ದಾರೆ.

    ಡಿವೈಎಸ್ಪಿ ಗಣಪತಿ ಸಾವಿಗೆ ಕೊನೆಗೂ ನ್ಯಾಯ ಸಿಗುತ್ತಿದೆ. ಆದ್ರೆ ತಮ್ಮ ಮಗನ ಸಾವಿಗೆ ಸಿಬಿಐ ನವರೂ ನ್ಯಾಯ ಒದಗಿಸಿಲ್ಲ ಎಂದು ಆರೋಪಿಸುತ್ತಿರುವ ಗೌರಮ್ಮ ಸುಪ್ರೀಂ ಕೋರ್ಟ್ ಮೊರೆ ಹೋಗುವ ಚಿಂತನೆಯಲ್ಲಿದ್ದಾರೆ.

  • ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸ್ತಾರಾ ರಮ್ಯಾ?

    ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸ್ತಾರಾ ರಮ್ಯಾ?

    ಮಂಡ್ಯ: ನಟಿ ರಮ್ಯಾ ರಾಜ್ಯ ರಾಜಕಾರಣಕ್ಕೆ ಆಗಮಿಸಿ ಮುಂಬರುವ ಚುನಾವಣೆಯಲ್ಲಿ ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ.

    ರಮ್ಯಾ ಮತ್ತು ಅಂಬರೀಷ್ ಇಬ್ಬರೂ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಅಂಬರೀಷ್ ಮತ್ತು ರಮ್ಯಾ ನಡುವೆ ಶೀತಲ ಸಮರ ಶುರುವಾಗಿದೆ. ಶೀತಲ ಸಮರದಿಂದ ಮಂಡ್ಯದಲ್ಲಿ ಕಾಂಗ್ರೆಸ್ ನೆಲಕಚ್ಚೋದು ಖಚಿತ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬಂದಿತ್ತು.

    ಇದಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿರುವ ಕಾಂಗ್ರೆಸ್, ಅಂಬರೀಷ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಿ ರಮ್ಯಾಗೆ ಮೇಲುಕೋಟೆ ಕ್ಷೇತ್ರದ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಏಕೆಂದರೆ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತ ಸಂಘ ಪ್ರಬಲ ಪಕ್ಷಗಳಾಗಿವೆ. ಒಂದು ವೇಳೆ ಮೇಲುಕೋಟೆ ಕ್ಷೇತ್ರದಿಂದ ರಮ್ಯಾ ಅವರಿಗೆ ಟಿಕೆಟ್ ನೀಡಿದರೆ ಅಲ್ಲಿ ಕಾಂಗ್ರೆಸ್ ಗೆ ಬಲ ತುಂಬಿದಂತಾಗುತ್ತೆ.

    ಅಷ್ಟೇ ಅಲ್ಲದೇ ಮಂಡ್ಯ ಸಂಸದರಾಗಿರುವ ಪುಟ್ಟರಾಜು ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರನ್ನು ಸೋಲಿಸಿದ್ದರು. ಇದೀಗ ಮತ್ತೆ ಸಂಸದ ಪುಟ್ಟರಾಜು ಅವರು ಮೇಲುಕೋಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ನಿಂದ ರಮ್ಯಾ ಅವರಿಗೆ ಟಿಕೆಟ್ ನೀಡಿದರೆ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ರಮ್ಯಾ ಅವರಿಗೆ ಉತ್ತಮ ಅವಕಾಶ ಎನ್ನಲಾಗುತ್ತಿದೆ. ಇದಕ್ಕೆ ರಮ್ಯಾ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಜೊತೆಗೆ ಜಿಲ್ಲೆಯಲ್ಲಿ ಅಂಬರೀಷ್ ಮತ್ತು ರಮ್ಯಾ ಇಬ್ಬರೂ ಸ್ಪರ್ಧಿಸೋದ್ರಿಂದ ಕಾಂಗ್ರೆಸ್ ಒಳ ಜಗಳಕ್ಕೆ ಫುಲ್ ಸ್ಟಾಪ್ ಬಿದ್ದು, ಜೆಡಿಎಸ್ ನಾಗಾಲೋಟವನ್ನು ತಪ್ಪಿಸಬಹುದು ಎಂಬುದು ಕಾಂಗ್ರೆಸ್ ನ ಲೆಕ್ಕಾಚಾರವಾಗಿದೆ.

    https://www.youtube.com/watch?v=8VR-KdTHelg

    https://www.youtube.com/watch?v=lbFsTiNrw1s

  • ರಾಜಕಾರಣಿಗಳನ್ನು ಹಾಳು ಮಾಡಿದ್ದೇ ಮತದಾರರು: ಎಂಬಿ ಪಾಟೀಲ್

    ರಾಜಕಾರಣಿಗಳನ್ನು ಹಾಳು ಮಾಡಿದ್ದೇ ಮತದಾರರು: ಎಂಬಿ ಪಾಟೀಲ್

    ವಿಜಯಪುರ: ಚುನಾವಣೆ ವೇಳೆಯಲ್ಲಿ ರಾಜಕಾರಣಿಗಳು ನೀಡುವ ಹಣದ ಆಸೆಗೆ ಬಲಿಯಾಗಿ, ಮತದಾರರು ರಾಜಕಾರಣಿಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ತಾಲೂಕಿನ ಅಡವಿ ಸಂಗಾಪುರ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕಾರಣಿಗಳು ಮತದಾರರಿಗೆ ಹಣ ನೀಡುತ್ತಾರೆ. ದೇವಸ್ಥಾನಕ್ಕೆ, ದರ್ಗಾಗಳಿಗೆ ಹಣ ಕೊಡುತ್ತಾರೆ ಅದರಲ್ಲಿ ನಾನೂ ಕೊಟ್ಟಿದ್ದೇನೆ. ಎಲ್ಲಿಯವರೆಗೆ ಮತದಾರರು ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಸುಧಾರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

    ಶಾಲಾ ಕಾಲೇಜುಗಳಿಗೆ ಯಾರೂ ದುಡ್ಡು ಕೊಡುವುದಿಲ್ಲ ಯಾರೂ ಕೇಳುವುದಿಲ್ಲ. ಹೀಗಾಗಿ ಮತದಾರರೇ ರಾಜಕಾರಣಿಗಳನ್ನು ದಾರಿ ತಪ್ಪಿಸಿದ್ದಾರೆ. ಎಲ್ಲಿಯವರೆಗೆ ಮತದಾರರು ದೇವಸ್ಥಾನ ಹಾಗೂ ದರ್ಗಾಗಳಿಗೆ ಹಣ ಕೇಳುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಶಾಲಾ ಕಾಲೇಜುಗಳು ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣಿಗಳು ಶೈಕ್ಷಣಿಕ ಅಭಿವೃದ್ಧಿಗೆ ಹಣ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

  • ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಕಗ್ಗೊಲೆ

    ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಕಗ್ಗೊಲೆ

    ತಿರುವನಂತಪುರಂ: ಕೇರಳದಲ್ಲಿ ರಾಜಕೀಯ ಸಂಘರ್ಷದ ಸರಣಿ ಕೊಲೆ ಮುಂದುವರೆದಿದ್ದು, ಇಂದು ಆರ್‍ಎಸ್‍ಎಸ್ ಸಂಘಟನೆಯ ಕಾರ್ಯಕರ್ತರೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

    28 ವರ್ಷದ ವಾಡೆಕೆತಲಾ ಆನಂದನ್ ಕೊಲೆಯಾದ ಆರ್‍ಎಸ್‍ಎಸ್ ಕಾರ್ಯಕರ್ತ. ಆನಂದನ್ ಸಿಪಿಐಎಂ ಪಕ್ಷದ ಸದಸ್ಯ ಮೊಹಮ್ಮದ್ ಕಾಸಿಮ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ವೇವಾಲಯ್ಡ್ ಪ್ರದೇಶದ ಗುರುವೂರು ದೇವಾಲಯ ಬಳಿ ಬೈಕ್ ನಲ್ಲಿ ಆನಂದ್ ಹೋಗುತ್ತಿದ್ದ ವೇಳೆ ಆನಂದನ್‍ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿಂದೆ ನಡೆದ ಸಿಪಿಐಎಂ ಕಾರ್ಯಕರ್ತರೊಬ್ಬರ ಕೊಲೆಯ ದ್ವೇಷದ ಹಿನ್ನೆಲೆಯಲ್ಲಿ ಅನಂದನ್ ಕೊಲೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅನಂದನ್ ಕೊಲೆಯನ್ನು ಖಂಡಿಸಿ ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆಯನ್ನು ನಡೆಸಲು ನಿರ್ಧಾರಿಸಿದ್ದಾರೆ. ಘಟನಾ ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಹೇಳಿದ್ದಾರೆ.

    ರಾಜ್ಯ ವ್ಯಾಪಿ ನಡೆಯುತ್ತಿರುವ ಆರ್‍ಎಸ್‍ಎಸ್ ಹಾಗೂ ಬಿಜೆಪಿ ನಾಯಕರ ಕೊಲೆಗಳನ್ನು ಜಿಹಾದಿ ಭಯೋತ್ಪದನೆ ಎಂದು ಆರೋಪಿಸಿ ಕೆಲ ದಿನಗಳ ಹಿಂದೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಕುಮ್ಮಮಾನಂ ರಾಜಶೇಖರನ್ ಅವರು ರಾಜ್ಯಾದ್ಯಂತ ಜನರಕ್ಷಾ ಯಾತ್ರೆಯನ್ನು ನಡೆಸಲಾಗಿತ್ತು. ಈ ಯಾತ್ರೆಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು. ಈ ಯಾತ್ರೆಯಲ್ಲಿ ಪಾಲ್ಗೊಂಡು ಅಮಿತಾ ಶಾ ದೇವರನಾಡಲ್ಲಿ ರಾಕ್ಷಸರ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿದ್ದರು.

     

  • ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳ್ತಾರಾ ಉಪೇಂದ್ರ?

    ಸಿನಿಮಾ ರಂಗಕ್ಕೆ ಗುಡ್‍ಬೈ ಹೇಳ್ತಾರಾ ಉಪೇಂದ್ರ?

    ಬೆಂಗಳೂರು: ನಾನೇ ಬೇರೆ ನನ್ನ ರೂಟೇ ಬೇರೆ ಅಂತ ಸ್ಯಾಂಡಲ್‍ವುಡ್‍ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಕಲಾವಿದ ರಿಯಲ್ ಸ್ಟಾರ್ ಉಪೇಂದ್ರ. ಡಿಫರೆಂಟ್ ಯೋಚನೆ, ಯೋಜನೆಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಸೂಪರ್ ಸ್ಟಾರ್, ರಿಯಲ್ ಸ್ಟಾರ್ ಅಂತ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ.

    ಸದ್ಯ ಹೋಮ್ ಮಿನಿಸ್ಟರ್ ಸಿನಿಮಾಗೆ ಬಣ್ಣ ಹಚ್ಚಿರುವ ಉಪ್ಪಿ ಗಾಂಧಿನಗರ ಬಿಟ್ಟು ವಿಧಾನಸೌಧದಲ್ಲಿ ಸೀಟ್ ಫಿಕ್ಸ್ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಪ್ರಜಾಕೀಯದ ಮೂಲಕ ಸಮಾಜದ ಬದಲಾವಣೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈಗಷ್ಟೇ ಕೆಪಿಜೆಪಿ ಪಾರ್ಟಿಯ ಆ್ಯಪ್ ರಿಲೀಸ್ ಮಾಡಿ ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗ್ತಿರೋ ಉಪ್ಪಿ ಬಣ್ಣದ ಲೋಕದಿಂದ ಸ್ವಲ್ಪ ದೂರ ಆಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನ ಮಾಡುತ್ತಿದ್ದ ಉಪೇಂದ್ರರ ಕೈಯಲ್ಲಿ ಉಳಿದಿರೋದು ಮೂರೇ ಮೂರು ಸಿನಿಮಾಗಳು ಮಾತ್ರ. ಅದರಲ್ಲಿ `ಉಪ್ಪಿ ಮತ್ತೆ ಬಾ’ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ.

    ಇನ್ನು ಬುದ್ಧಿವಂತ ಬಣ್ಣ ಹಚ್ಚಿರೋ ಉಪ್ಪಿರುಪ್ಪಿ ಸಿನಿಮಾ ಭಾಗಶಃ ಮುಗಿದಿದೆ. ಇನ್ನು ಉಳಿದಿರೋದು ಹೋಮ್‍ಮಿನಿಸ್ಟರ್ ಸಿನಿಮಾ ಮಾತ್ರ. ಇದೂ ಒಂದು ಹಂತಕ್ಕೆ ಚಿತ್ರೀಕರಣ ಪೂರ್ತಿ ಮಾಡಿಕೊಂಡಿದೆ. ಹೈದರಾಬಾದ್‍ನಲ್ಲಿ ಮತ್ತೊಂದು ಶೆಡ್ಯೂಲ್‍ಗೆ ಪ್ಲಾನ್ ಮಾಡಲಾಗಿದೆ. ಹೋಮ್‍ಮಿನಿಸ್ಟರ್ ಕಥೆ ಮುಗಿದ್ರೆ ಗಾಂಧಿನಗರದಲ್ಲಿ ಉಪ್ಪಿಯವರ ಎಲ್ಲಾ ಕಮಿಟ್ಮೆಂಟ್‍ಗಳು ಕಂಪ್ಲೀಟ್ ಆಗುತ್ತವೆ. ಈ ಚಿತ್ರದ ಬಳಿಕ ಸಿನಿರಂಗದಲ್ಲಿ ರಿಯಲ್ ಸ್ಟಾರ್ ಉಪ್ಪಿ ಯಾವುದೇ ಸಿನಿಮಾಮಗಳನ್ನು ಒಪ್ಪಿಕೊಂಡಿಲ್ಲ.

    ಅದು ಎಲ್ಲಿವರೆಗೆ ಅನ್ನೋದು ಮಾತ್ರ ಸಸ್ಪೆನ್ಸು. ಯಾಕೆಂದರೆ ಎಂಟು ವರ್ಷ ರಾಜಕಾರಣಿಯಾಗಿ ಮೆರೆದು, ನಂತರ ಮೆಗಾಸ್ಟಾರ್ ಚಿರಂಜೀವಿ ಮತ್ತೆ ಬಣ್ಣ ಹಚ್ಚಿರುವ ಉದಾಹರಣೆಗಳು ನಮ್ಮ ಮುಂದಿವೆ. ಉಪ್ಪಿಯೂ ಹಾಗೆ ಮಾಡುತ್ತಾರಾ ಅಥವಾ ಪ್ರಜಾಕೀಯದಲ್ಲಿಯೇ ಶಾಶ್ವತವಾಗಿಯೇ ಉಳಿಯುತ್ತಾರಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿವೆ.

  • ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ರಾಜಕೀಯಕ್ಕೆ ಬರ್ತಾರಾ?

    ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ರಾಜಕೀಯಕ್ಕೆ ಬರ್ತಾರಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಜಗದೀಶ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿಗಳು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿಗೆ ಪುಷ್ಠಿ ಎಂಬಂತೆ ಅಮೂಲ್ಯ ಅವರು ಕೂಡ ಇತ್ತೀಚೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

    ನಟಿ ಅಮೂಲ್ಯ ಮದುವೆ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಪತಿ ಜಗದೀಶ್ ಅವರೊಂದಿಗೆ ಸಾಮಾಜಿಕ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಆರ್.ಆರ್.ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿಯೂ ಅಮೂಲ್ಯ ಕಾಣಿಸಿಕೊಂಡಿದ್ದರು.

    ರಾಜಕೀಯ ಹಿನ್ನೆಲೆ: ಅಮೂಲ್ಯರ ಮಾವ ರಾಮಚಂದ್ರ ಅವರು ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಆರ್.ಆರ್. ನಗರದ ಬಿಜೆಪಿಯ ಪ್ರಬಲ ನಾಯಕರಾಗಿದ್ದಾರೆ. ಹೀಗಾಗಿ ತಂದೆಯವರಂತೆ ಜಗದೀಶ್ ಕೂಡ ರಾಜಕೀಯ ವಲಯಕ್ಕೆ ಎಂಟ್ರಿ ನೀಡಲಿದ್ದು, ಇದಕ್ಕೆ ಪತ್ನಿ ಅಮೂಲ್ಯ ಕೂಡ ಸಾಥ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಮೂಲ್ಯ ಅವರು ಸದ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ನೀಡಲ್ಲ. ಒಂದು ವೇಳೆ ಪತಿ ಜಗದೀಶ್ ರಾಜಕೀಯಕ್ಕೆ ಎಂಟ್ರಿ ನೀಡಿದರೆ ಮಾತ್ರ ಅಮೂಲ್ಯ ಬರಬಹುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಏನೇ ಇರಲಿ ಅಭಿಮಾನಿಗಳು ಮಾತ್ರ ಅಮೂಲ್ಯರನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಕಾತುರರಾಗಿದ್ದಾರೆ. ಮೇ 12ರಂದು ಅಮೂಲ್ಯ ಮತ್ತು ಜಗದೀಶ್ ಮದುವೆ ಆಗಿತ್ತು.

    ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದಂತೆ ಸ್ಯಾಂಡಲ್‍ವುಡ್ ನಟ-ನಟಿಯರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದು, ಕಳೆದ ವಾರವಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಹೊಸ ಕೆಪಿಜೆಪಿ ಪಕ್ಷಕ್ಕೆ ಚಾಲನೆ ನೀಡಿದ್ದರು.

  • ಉಪ್ಪಿ ರಾಜಕೀಯ ಪಕ್ಷದ ಹೆಸ್ರು ಇಂದು ಅಧಿಕೃತ ಘೋಷಣೆ- ಪಕ್ಷದ ಸ್ವರೂಪ, ಪ್ರಣಾಳಿಕೆಗೂ ಮುಹೂರ್ತ ಫಿಕ್ಸ್

    ಉಪ್ಪಿ ರಾಜಕೀಯ ಪಕ್ಷದ ಹೆಸ್ರು ಇಂದು ಅಧಿಕೃತ ಘೋಷಣೆ- ಪಕ್ಷದ ಸ್ವರೂಪ, ಪ್ರಣಾಳಿಕೆಗೂ ಮುಹೂರ್ತ ಫಿಕ್ಸ್

    ಬೆಂಗಳೂರು: ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಇವತ್ತು ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಜೊತೆಗೆ ಪಕ್ಷದ ಹೆಸರು ಕೂಡ ಇಂದು ಘೋಷಣೆಯಾಗಲಿದೆ.

    ಇವತ್ತು ರಾಜಕೀಯ ಪಕ್ಷದ ಹೆಸರು, ಸ್ವರೂಪ, ಪ್ರಣಾಳಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಶಿವಾನಂದ ಸರ್ಕಲ್ ಬಳಿಯ ಗಾಂಧಿಭವನದಲ್ಲಿ ಪಕ್ಷದ ಹೆಸರು ಘೋಷಣೆಯಾಗಲಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಪಾತ್ರ, ಕಾರ್ಯಕಾರಿ ಸಮಿತಿ ಮತ್ತು ಪಕ್ಷದ ಪ್ರಣಾಳಿಕೆಯನ್ನೂ ಉಪೇಂದ್ರ ಘೋಷಿಸಲಿದ್ದಾರೆ.

    ಇತ್ತೀಚೆಗಷ್ಟೇ ಉಪೇಂದ್ರ ಅವರ ಪಕ್ಷದ ಹೆಸರು ಫೊಷಣೆಯಾಗಿದ್ದು, ಅವರ ಪಕ್ಷದ ಹೆಸರು ಪ್ರಜಾಕಾರಣ ಅಲ್ಲ, ಪ್ರಜಾಕೀಯವೂ ಅಲ್ಲ. ಬದಲಾಗಿ `ಉತ್ತಮ ಪ್ರಜಾ ಪಾರ್ಟಿ’ ಎಂದು ತಿಳಿಸಿದ್ದರು. ಸದಸ್ಯತ್ವ ನೋಂದಣಿ ಅರ್ಜಿಯಲ್ಲೂ ಉಪ್ಪಿ ಪಕ್ಷದ ಹೆಸರು ಬಹಿರಂಗವಾಗಿತ್ತು.

    ಪ್ರಜಾಕೀಯ ಆಂದೋಲನದಿಂದ ಸುದ್ದಿ ಮಾಡುತ್ತಿರುವ ಉಪ್ಪಿಯ ಹೊಸ ರಾಜಕೀಯ ಪಕ್ಷದ ಹೆಸರು ತೀವ್ರ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಸಿನಿಮಾ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಉಪ್ಪಿ ಸೇವೆ ಸಲ್ಲಿದ್ದಾರೆ. ಈಗ ಪ್ರಜಾ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿದ್ದಾರೆ.

    ಈಗಾಗಲೇ ತಮ್ಮ ಆಪ್ತರ ಜೊತೆ ಸರಣಿ ಸಭೆ ನಡೆಸುತ್ತಿರುವ ಉಪೇಂದ್ರ, ತಮ್ಮ ಹೊಸ ಪಕ್ಷದ ಸದಸ್ಯತ್ವ ಪಡೆಯಲು ಬಯಸುವವರಿಗೆ ಅರ್ಜಿ ರೆಡಿ ಮಾಡಿದ್ದಾರೆ. ಶೀಘ್ರವೇ ರಾಜ್ಯದ ವಿವಿಧೆಡೆ ಸುತ್ತಾಡಿ ಜನರ ಅಭಿಪ್ರಾಯ ಸಂಗ್ರಹಿಸಲು ಉಪೇಂದ್ರ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

  • ಇದೇ ಕೊನೆಯ ಚುನಾವಣೆ ಎಂದ ಪರಮೇಶ್ವರ್- ರಾಜಕೀಯಕ್ಕೆ ಗುಡ್ ಬೈ?

    ಇದೇ ಕೊನೆಯ ಚುನಾವಣೆ ಎಂದ ಪರಮೇಶ್ವರ್- ರಾಜಕೀಯಕ್ಕೆ ಗುಡ್ ಬೈ?

    ಬೆಂಗಳೂರು: ಇದೇ ನನ್ನ ಕೊನೆ ಚುನಾವಣೆ. ಮುಂದಿನ ಚುನಾವಣೆಯಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎಂದು ಹೇಳಲಾಗ್ತಿದೆ.

    ಪರಮೇಶ್ವರ್ ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳಲು ನಿರ್ಧಾರ ತೆಗೆದುಕೊಂಡಿದ್ದಾರೆ. 2018ರಲ್ಲಿ ನಡೆಯುವ ಚುನಾವಣೆಯಲ್ಲಿ ಕೊರಟಗೆರೆಯಿಂದಲೇ ಸ್ಪರ್ಧಿಸಿ, 2023ಕ್ಕೆ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಲಿದ್ದೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಅತ್ತ ಎಐಸಿಸಿ ಅಧ್ಯಕ್ಷ ಗಾದಿಗೆ ಏರೋ ರಾಹುಲ್ ಗಾಂಧಿ ಕನಸು ದೀಪಾವಳಿ ಬಳಿಕ ನನಸಾಗುವ ಲಕ್ಷಣ ಕಾಣಿಸ್ತಾ ಇದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಅಕ್ಟೋಬರ್ 24 ರಂದು ನಡೆಯಲಿದ್ದು, ಇದೇ ಸಭೆಯಲ್ಲಿ ರಾಹುಲ್‍ಗೆ ಪಟ್ಟಾಭಿಷೇಕ ಘೋಷಣೆಯಾಗುವ ಸಾಧ್ಯತೆ ಇದೆ. ಪಕ್ಷದ ಹಲವು ಘಟಕಗಳಿಗೆ ಆಂತರಿಕ ಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಪ್ರಕಿಯೆಗಳನ್ನು ಡಿಸೆಂಬರ್ ಒಳಗಾಗಿ ಮುಗಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್‍ಗೆ ಪಕ್ಷದ ಅಧ್ಯಕ್ಷ ಗಾದಿ ನೀಡಿ ಚುನಾವಣೆ ಎದುರಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ.

    ಶೀಘ್ರದಲ್ಲೇ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದರೆ ಎಂದು ಸ್ವತಃ ಸೋನಿಯಾ ಗಾಂಧಿ ಕಳೆದ ವಾರ ಹೇಳಿದ್ದರು.

  • “ಪೊಲೀಸ್ ಆಗಿದ್ದಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದ್ರು, ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡಲು ಹೊರಟಿದ್ದೇನೆ”

    “ಪೊಲೀಸ್ ಆಗಿದ್ದಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದ್ರು, ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡಲು ಹೊರಟಿದ್ದೇನೆ”

    ಉಡುಪಿ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹೊಸ ರಾಜಕೀಯ ಪಕ್ಷವನ್ನು ಕಟ್ಟುವ ಘೋಷಣೆಯನ್ನು ಮಾಡಿದ್ದಾರೆ. ಭಷ್ಟ ರಾಜಕೀಯ ವ್ಯವಸ್ಥೆಯ ಒಳಗೆ ಹೊಕ್ಕಿ ಪೊಲೀಸಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಪಮಾ ಶೆಣೈ, ಸಮಾನ ಮನಸ್ಕರೊಂದಿಗೆ ಒಂದು ಸುತ್ತಿನ ಮಾತುಕತೆ ಮಾಡಿದ್ದೇನೆ. ಒಂದು ತಿಂಗಳೊಳಗೆ ಅಭಿಪ್ರಾಯಗಳನ್ನು ಪಡೆದುಕೊಂಡು ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದರು.

    ಪೊಲೀಸಿಂಗ್ ಕೆಲಸ ಮಾಡುವಾಗ ನನ್ನ ಮೇಲೆ ರಾಜಕೀಯ ಪ್ರಯೋಗ ಮಾಡಿದರು. ಈಗ ರಾಜಕಾರಣಿಗಳ ಮೇಲೆ ಪೊಲೀಸಿಂಗ್ ಪ್ರಯೋಗ ಮಾಡೋಣ ಎಂದು ಹೊರಟಿದ್ದೇನೆ. ಮೂರು ಧ್ಯೇಯಗಳಿವೆ. ಎಂಎಲ್‍ಎಗಳ ಗ್ರೂಪನ್ನು ತಯಾರು ಮಾಡಬೇಕೆಂದಿದ್ದೇನೆ. ರಾಜಕಾರಣಿಗಳು ವಿಧಾನಸೌಧದ ಒಳಗೆ ಪೊಲೀಸರ ಥರ ಕೆಲಸ ಮಾಡಬೇಕಾಗಿದೆ. ಒಂದಷ್ಟು ಎಂಎಲ್‍ಎ ಗಳು ಸರ್ಕಾರ ರಚಿಸುವ ಮತ್ತು ಉರುಳಿಸಲು ಶಕ್ತಿಯಿರುವವರಾಗಬೇಕು ಎಂದು ಹೇಳಿದರು.

    ಕಿಂಗ್ ಮೇಕರ್ಸ್ ಪಾರ್ಟಿಗಳು ಆಗಬಾರದು. ಜನರು ಆ ಶಕ್ತಿಯನ್ನು ಹೊಂದಬೇಕು. ಬೇರೆ ರಾಜಕೀಯ ಪಕ್ಷದ ಜೊತೆ ಸೇರಲ್ಲ. ಕೆಲವು ಸೀಟುಗಳು ಚುನಾವಣೆಯಲ್ಲಿ ಬಂದರೆ ಯಾರಿಗೆ ಬೆಂಬಲಿಸುತ್ತೇವೆಂದು ಆಮೇಲೆ ಹೇಳುತ್ತೇವೆ ಎಂದರು. ಎಲ್ಲಾ ಅಂದುಕೊಂಡಂತೆ ಆದ್ರೆ ಬಳ್ಳಾರಿಯಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಅಲ್ಲೇ ನನಗೆ ಹೆಚ್ಚು ಜನರ ಬೆಂಬಲವಿದೆ ಎಂದು ಹೇಳಿದರು.

    ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಭೇಟಿ ಮಾಡಿ ಮಾತನಾಡದ್ದೇನೆ. ರಾಜ್‍ನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಕೆಲ ದೂರು ನೀಡಿದ್ದೇನೆ. ಜನರ ದನಿಯಾಗುವ ಪಕ್ಷ ರಾಜ್ಯದಲ್ಲಿ ಇಲ್ಲ. ಅಧಿಕಾರಕ್ಕೆ ಬೆಂಬಲಿಸುವ- ಬೆಂಬಲ ವಾಪಾಸ್ ಪಡೆದರೆ ಸರ್ಕಾರ ಬೀಳುವ ರೀತಿಯ ಪಕ್ಷ ಕಟ್ಟುವ ಕನಸಿದೆ ಎಂದು ಅನುಪಮಾ ಶೆಣೈ ಹೇಳಿದರು. ಕೇಜ್ರಿವಾಲ್ ಅವರ ಹೆಸರನ್ನು ಎರಡು ಪಕ್ಷಗಳು ಕೆಡಿಸಿದೆ. ಆಪ್‍ಗೆ ಸೇರುವ ಸಾಧ್ಯತೆ ಕಮ್ಮಿ ಅಂದ್ರು.

    ರಾಜೀನಾಮೆ ನೀಡಿದ ನಂತರ ಹಲವಾರು ಮಂದಿ ಭೇಟಿ ಮಾಡಿದ್ದರು. ಫೋನ್ ಮೂಲಕ ಮಾತನಾಡಿದ್ದರು ಹೊಸ ಪಕ್ಷದ ಬಗ್ಗೆಯೂ ಜನರೇ ಐಡಿಯಾ ಕೊಟ್ಟದ್ದು. ಗಾಂಧಿ ಜಯಂತಿ ದಿನವೇ ಮೊದಲ ಮೀಟಿಂಗ್ ಮಾಡಿದ್ದೇವೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಕನಸು ನನ್ನದು ಎಂದರು. ಪರಮೇಶ್ವರ್ ನಾಯ್ಕ್ ವಿರುದ್ಧ ಸ್ಪರ್ಧೆ ಮಾಡುತ್ತೇನೆ. ಜನ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರ ಮೇಲೆ ನಿರ್ಧಾರ ನಿಂತಿದೆ ಎಂದು ಹೇಳಿದರು. ಪತ್ರಕರ್ತರನ್ನು ಕೂಡಾ ಆಹ್ವಾನ ಮಾಡುತ್ತೇನೆ. ಮಾಧ್ಯಮ ಪ್ರಬಲವಾಗಿದೆ. ಮಾಧ್ಯಮದ ಮಂದಿಗೂ ಶಕ್ತಿ ತುಂಬುವ ಅವಶ್ಯಕತೆಯಿದೆ ಎಂದು ಹೇಳಿದರು.