Tag: politics

  • ಕರ್ನಾಟಕದಲ್ಲಿ ಪವನ್ ಕಲ್ಯಾಣ್ ಪಕ್ಷದ ಮೊದಲ ಅಭ್ಯರ್ಥಿ ಆಗ್ತಾರಾ ನವೀನ್ ಕಿರಣ್?

    ಕರ್ನಾಟಕದಲ್ಲಿ ಪವನ್ ಕಲ್ಯಾಣ್ ಪಕ್ಷದ ಮೊದಲ ಅಭ್ಯರ್ಥಿ ಆಗ್ತಾರಾ ನವೀನ್ ಕಿರಣ್?

    ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆವಿ ಕ್ಯಾಂಪಸ್ ಗೆ ಆಗಮಿಸಿದ ನಟ ಪವನ್‍ಕಲ್ಯಾಣ್ ಅವರಿಗೆ ಅಭಿಮಾನಿಗಳು ಹೂ ಮಳೆಯನ್ನು ಸುರಿಸಿದ್ದಾರೆ.

    ನಟ ಪವನ್ ರಾಜ್ಯಕ್ಕೆ ಆಗಮಿಸಿದ್ದರಿಂದ ರಾಜ್ಯದ ತೆಲುಗು ಪ್ರಭಾವ ಹೊಂದಿರುವ ಕ್ಷೇತ್ರಗಳಲ್ಲಿ ಜನಸೇನಾ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತಾರೆ ಎನ್ನಲಾಗಿದೆ. ಪ್ರಮುಖವಾಗಿ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನ ಪಾವಗಡ, ರಾಯಚೂರು, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರಗಳ್ಲಿ ಪವನ್ ಪಾಲಿಟಿಕ್ಸ್ ಆರಂಭವಾಲಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಜನಸೇನಾ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿಂತನೆ ನಡೆಸಲಾಗುತ್ತದೆ ಎನ್ನಲಾಗಿದ್ದು ಪವನ್ ಕಲ್ಯಾಣ್ ನಡೆಯಿಂದ ರಾಷ್ಟ್ರೀಯ ಪಕ್ಷಗಳಲ್ಲಿ ತಳಮಳ ಶುರುವಾಗಿದೆ.

    ಇಂದು ಸಂಜೆ ಚಿಕ್ಕಬಳ್ಳಾಪುರದ ಕೆವಿ ಕ್ಯಾಂಪಸ್ ನ ಆವರಣಕ್ಕೆ ಆಗಮಿಸಿದ್ದರು. ಇದಕ್ಕೂ ಮುನ್ನ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ತೀರ್ಮಾನಿಸಿರುವ ಕೆವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ನವೀನ್ ಕಿರಣ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಕೆಲ ಕಾಲ ಮಾತುಕತೆ ನಡೆಸಿದರು.

    ಪ್ರಸ್ತುತ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕರಾಗಿರುವ ಸುಧಾಕರ್ ಅವರನ್ನು ಸೋಲಿಸುವ ತಂತ್ರ ಎಂದೇ ಪವನ್ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ನವೀನ್ ಕಿರಣ್ ಅವರ ರಾಜಕೀಯ ಮಹತ್ವಕಾಂಕ್ಷಿಗೆ ಪವನ್ ಕಲ್ಯಾಣ್ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಜನಸೇನಾ ಪಕ್ಷದಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮುನ್ಸೂಚನೆಯಾಗಿದೆ.

    ಪ್ರಸ್ತುತ ಪವನ್ ಕಲ್ಯಾಣ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಂತೆ ಕಾಣುತ್ತಿದ್ದು, ರಾಜಕೀಯದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. 2014 ಮಾರ್ಚ್ ನಲ್ಲಿ ತಮ್ಮದೇ `ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದ ಪವನ್ ಕಲ್ಯಾಣ್ ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ ಜನಸೇನಾ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.

    https://www.youtube.com/watch?v=dxqHOQ9lLic

  • ಕರ್ನಾಟಕ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ನಟ ಪವನ್ ಕಲ್ಯಾಣ್?

    ಕರ್ನಾಟಕ ರಾಜಕೀಯ ಅಖಾಡಕ್ಕೆ ಧುಮುಕ್ತಾರಾ ನಟ ಪವನ್ ಕಲ್ಯಾಣ್?

    ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ರಾಜಕೀಯ ವಲಯದಲ್ಲಿ ಇಂದು ಹೊಸ ಸಂಚಲನ ಮೂಡಲಿದೆ. ಇದಕ್ಕೆ ಕಾರಣ ತೆಲುಗು ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವರ್ ಸ್ಟಾರ್ ಪವನ್ ಕಲ್ಯಾಣ್ ಜಿಲ್ಲೆಗೆ ಆಗಮಿಸಿತ್ತಿರುವುದು.

    ಪ್ರಸ್ತುತ ಆಂಧ್ರ ಪ್ರದೇಶದ ಹಿಂದೂಪುರಂ ನಲ್ಲಿ ಜನಸೇನಾ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿರುವ ನಟ ಪವನ್ ಕಲ್ಯಾಣ್ ಸಂಜೆ 5 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿದ್ದಾರೆ. ನಗರದ ಹೊರವಲಯದ ಕೆ ವಿ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಸಮಾರಂಭ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿದೆ.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೆ ವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ ವಿ ನವೀನ್ ಕಿರಣ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ. ನವೀನ್ ಕಿರಣ್ ಜೊತೆ ಪವನ್ ಕಲ್ಯಾಣ್ ಮಾತುಕತೆ ನಡೆಸಲಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ವಿಧಾನಸಭಾಕ್ಷೇತ್ರದ ರಾಜಕೀಯ ವಲಯದಲ್ಲಿ ನಟ ಪವನ್ ಕಲ್ಯಾಣ್ ಭೇಟಿ ಸಂಚಲನ ಮೂಡಿಸಿದೆ. ಹಿಂದೂಪುರಂ ನಲ್ಲಿ ಸಮಾವೇಶ ಮುಗಿದ ಬಳಿಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಪವನ್ ಕಲ್ಯಾಣ್ ಆಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    ಈಗಾಗಲೇ ಪವನ್ ಕಲ್ಯಾಣ್ ಗೆ ಸ್ವಾಗತ ಕೋರಲು ಅಭಿಮಾನಿಗಳು ಸನ್ನದ್ಧರಾಗಿದ್ದಾರೆ. ಕೆವಿ ಕ್ಯಾಂಪಸ್ ನ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಆದರೆ ಈ ಸಮಾರಂಭದ ಕುರಿತು ಮಾತನಾಡಿದ ನವೀನ್ ಕುಮಾರ್ ಕೇವಲ ಅಭಿಮಾನದ ಭೇಟಿ ಅಷ್ಟೇ, ರಾಜಕೀಯದ ಭೇಟಿ ಅಲ್ಲ ಎಂದು ತಿಳಿಸಿದ್ದಾರೆ.

    ಈ ಹಿಂದೆ ಜೆಡಿಎಸ್ ಪಕ್ಷದ ಪರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಾರೆ ಎಂದು ಜೆಡಿಎಸ್ ಮೂಲಗಳಿಂದ ತಿಳಿದು ಬಂದಿತ್ತು. ಈ ಕುರಿತು ಮಾಹಿ ಸಿಎಂ ಕುಮಾರಸ್ವಾಮಿ ಹಾಗೂ ಪವನ್ ಅವರ ನಡುವೆ ಮೂರು ಸುತ್ತಿನ ಮಾತುಕತೆ ಸಹ ನಡೆದಿದೆ ಎನ್ನಲಾಗಿತ್ತು. ಕರ್ನಾಟಕ ಹಾಗೂ ಆಂಧ್ರ ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಕೋಲಾರ, ತುಮಕೂರು, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪು ಜಿಲ್ಲೆಗಳಲ್ಲಿ ಪ್ರಚಾರ ನಡೆಸುವ ಮಾಹಿತಿ ಲಭಿಸಿತ್ತು.

    ಪವನ್ ಕಲ್ಯಾಣ್ ಸಿನಿಮಾ ಜೊತೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು, 2014 ಮಾರ್ಚ್ ನಲ್ಲಿ ತಮ್ಮದೇ `ಜನ ಸೇನಾ’ ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದಾರೆ. ಪಕ್ಷದ ಮೂರನೇ ವರ್ಷದ ವಾರ್ಷಿಕೋತ್ಸವದಲ್ಲಿ `ಜನಸೇನಾ’ 2019ರ ವಿಧಾನಸಭಾ ಚುನವಾಣೆಯಲ್ಲಿ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಸಹೋದರ ಚಿರಂಜೀವಿ `ಜನಸೇನಾ’ ಪಕ್ಷಕ್ಕೆ ಸೇರ್ಪಡೆಯಾಗಲ್ಲ. ರಾಜಕೀಯವಾಗಿ ನನ್ನ ಆಲೋಚನೆಗಳು ಅವರೊಂದಿಗೆ ಹೊಂದಾಣಿಕೆ ಆಗುವುದಿಲ್ಲ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಶೇ.60ರಷ್ಟು ಕ್ಷೇತ್ರಗಳಲ್ಲಿ ಯುವಕರು ಸ್ಪರ್ಧಿಸಲಿದ್ದು, ನಾನು ಅನಂತಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದ್ದರು.

  • ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

    ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

    ಚಿಕ್ಕಬಳ್ಳಾಪುರ: ವಿವಿಧ ಭಾಷೆ, ಧರ್ಮ, ಜಾತಿ, ಮತ, ಪಂಥ ಗಳನ್ನು ಮೀರಿದ ಏಕತೆಯ ರೂಪವಾಗಿ ಭವ್ಯ ಭಾರತವನ್ನು ಕಾಣಬಹುದು. ಆದರೆ ಇತ್ತೀಚೆಗೆ ಜಾತಿ-ಜಾತಿ, ಧರ್ಮಗಳ ನಡುವೆಯೇ ರಾಜಕೀಯ ವ್ಯಕ್ತಿಗಳು ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆಗೆ ಸ್ಪಷ್ಟ ಸಾಕ್ಷಿ ಎಂಬಂತೆ ಇಲ್ಲೊಂದು ಗ್ರಾಮದ ಜನರಿಗೆ ಜಾತಿ-ಧರ್ಮಗಳಿಗಿಂತ ರಾಜಕೀಯ ಪಕ್ಷವೇ ಶ್ರೇಷ್ಠವಾಗಿದೆ. ತಮ್ಮ ಒಣ ಪ್ರತಿಷ್ಠೆಗಾಗಿ ಗ್ರಾಮದ ದೇವರಿಗೆ ಪ್ರತ್ಯೇಕ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.

    ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹುಜಗೂರು ಗ್ರಾಮದಲ್ಲಿ ಇಂತಹ ಬೆಳವಣಿಗೆ ಸಾಕ್ಷಿಯಾಗಿದ್ದು, ಈ ಗ್ರಾಮದಲ್ಲಿ ವಾಸಿಸುವ 130 ಕುಟುಂಬ ಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ರಾಜಕೀಯ ಸಂಘರ್ಷಕ್ಕೆ ಹೆಸರು ಪಡೆದಿದೆ. ಗ್ರಾಮದ 130 ಕುಟುಂಬಗಳ ಪೈಕಿ 74 ಕುಟುಂಬಗಳು ಜೆಡಿಎಸ್ ಪಕ್ಷ ಬೆಂಬಲಿಸಿದರೆ, ಉಳಿದ 56 ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಈ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತರ ಮನೆಗಳು ಇರುವ ಬೀದಿಗೆ ಕಾಂಗ್ರೆಸ್ ನವರು ಹೆಜ್ಜೆ ಇಡಲ್ಲ. ಕಾಂಗ್ರೆಸ್ ಬೆಂಬಲಿತರ ಮನೆಯ ಇರುವ ಕಡೆಗೆ ಜೆಡಿಎಸ್ ನವರು ಹೆಜ್ಜೆ ಹಾಕಲ್ಲ. ಅಷ್ಟೇ ಅಲ್ಲದೇ ಪರಸ್ಪರರು ಮಾತಾಡೋದು ಅಷ್ಟಕ್ಕಷ್ಟೇ.

    ಗ್ರಾಮದ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೂ ಅವರ ಪಕ್ಷದವರು ಇವರ ಮನೆಯ ಬಳಿ ಹೋಗಲ್ಲ. ಕೊನೆಗೆ ಶುಭ ಸಮಾರಂಭಗಳಿಗೂ ಹೋಗಲ್ಲ. ಚುನಾವಣೆ ಬರಲಿ – ಮುಗಿಯಲಿ, ವರ್ಷ ಪೂರ್ತಿಯೂ ಹಾವು ಮುಂಗುಸಿಯಂತೆ ಇರುತ್ತಾರೆ ಈ ಗ್ರಾಮದ ಕುಟುಂಬಗಳು.

    ಇವರ ಪಕ್ಷ ರಾಜಕೀಯ ಕಾದಾಟ ಕೇವಲ ಬರೀ ಮಾತಿನಲ್ಲಿ ನಿಲ್ಲದೇ ಹಬ್ಬ ಹರಿದಿನಗಳ ದೇವರ ಕಾರ್ಯದಲ್ಲೂ ನಡೆಯುತ್ತದೆ. ಯಾವುದೇ ಹಬ್ಬ, ರಾಷ್ಟ್ರೀಯ ಆಚರಣೆಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನವನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಗ್ರಾಮದಲ್ಲಿ ನಡೆಯುವ ಗಣೇಶ ಹಬ್ಬದಂದು ಬೇರೆ ಬೇರೆಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಸಂಕ್ರಾಂತಿ ಹಬ್ಬದಂದು ಪ್ರತ್ಯೇಕ ದೇವರ ಗುಡಿಗಳನ್ನು ನಿರ್ಮಿಸಿ ರಾಸುಗಳಿಗೆ ಕಿಚ್ಚು ಹಾಯಿಸಿ ಪೂಜೆ ನೇರವೇರಿಸಿದ್ದಾರೆ.

    ಈ ಗ್ರಾಮದಲ್ಲಿರುವ ಆಂಜನೇಯಸ್ವಾಮಿಗೆ ಶನಿವಾರ ಜೆಡಿಎಸ್ ಬೆಂಬಲಿತರು ಪೂಜೆ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತರು ಸೋಮವಾರ ಪೂಜೆ ಸಲ್ಲಿಸುತ್ತಾರೆ. ವಿಶೇಷ ಏನೆಂದರೆ ಕಾಂಗ್ರೆಸ್ ನವರು ಪ್ರತಿಷ್ಠಾಪಿಸಿರುವ ನವಗ್ರಹ ಕಲ್ಲುಗಳಿಗೆ ಜೆಡಿಎಸ್ ನವರು ನಮಸ್ಕಾರ ಹಾಕುವುದು ವಿರಳಾತಿ ವಿರಳ. ಅಲ್ಲದೇ ಆಟೋಗಳ ಮೂಲಕ ಪಟ್ಟಣಕ್ಕೆ ತೆರಳುವಾಗಲೂ ಸಹ ನಾವು ಕಾಂಗ್ರೆಸ್ ನೀವು ಜೆಡಿಎಸ್ ಎನ್ನುವ ಬೇಧ ಭಾವ ಕಾಣಸಿಗುತ್ತದೆ. ಇಂತಹ ಭೇದ ಭಾವಗಳು ಸದ್ಯ ಶಾಲೆಗೆ ಹೋಗುವ ಸಣ್ಣ ಮಕ್ಕಳಿಗೂ ತಟ್ಟಿದ್ದು ಅವರು ಕೂಡ ನಾವು ಜೆಡಿಎಸ್, ನಾವು ಕಾಂಗ್ರೆಸ್ ಪಕ್ಷ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

    ಮನೆಯೊಂದು ಮೂರು ಬಾಗಿಲು ಎಂಬಂತೆ ಗ್ರಾಮವೊಂದು ಎರಡು ಮನಸ್ಥಿತಿಗಳು ಎಂಬಂತಾಗಿ ಕಾಂಗ್ರೆಸ್, ಜೆಡಿಎಸ್ ಎಂದು ವಿಭಜನೆಯಾಗಿದೆ. ಆದರೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಗ್ರಾಮದ ಮುಂದಿನ ಮಕ್ಕಳ ಭವಿಷ್ಯ ಸ್ಥಿತಿ ಏನಾಗಬಹುದು ಎಂಬುದು ಹಲವರ ಚಿಂತೆ. ಆದರೆ ರಾಜಕೀಯ ಪಕ್ಷಗಳಿಗೆ ಮಾತ್ರ ಈ ಗ್ರಾಮದಲ್ಲಿ ಚುನಾವಣೆಗಾಗಿ ಹಣ ಖರ್ಚು ಮಾಡುವುದು ಬೇಡ, ಚುನಾವಣಾ ಪ್ರಚಾರ ಮಾಡುವುದು ಬೇಡ. ಗ್ರಾಮಸ್ಥರ ಮತಗಳು ತಮ್ಮ ಪಕ್ಷಕ್ಕೆ ಬಂದೇ ಬರುತ್ತವೆ ಎನ್ನುವ ಲೆಕ್ಕಾಚಾರ ರಾಜಕೀಯ ಪಕ್ಷಗಳ ನಾಯಕರದ್ದು. ಆದರೆ ರಾಜಕೀಯ ಬೇಗುದಿಯ ವಿಷ ಬೀಜ ಬೆಳೆಯುತ್ತಿರುವ ಮಕ್ಕಳಲ್ಲಿ ಮೂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.

  • ಕರ್ನಾಟಕ ಕುರುಕ್ಷೇತ್ರಕ್ಕೆ ಬಹುತೇಕ ಮುಹೂರ್ತ ಫಿಕ್ಸ್ – ಒಂದೇ ಹಂತದ ಮತದಾನಕ್ಕೆ ಸರ್ಕಾರದ ಅಪಸ್ವರ

    ಕರ್ನಾಟಕ ಕುರುಕ್ಷೇತ್ರಕ್ಕೆ ಬಹುತೇಕ ಮುಹೂರ್ತ ಫಿಕ್ಸ್ – ಒಂದೇ ಹಂತದ ಮತದಾನಕ್ಕೆ ಸರ್ಕಾರದ ಅಪಸ್ವರ

    ಬೆಂಗಳೂರು: ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ನಡುವೆ, ಕರ್ನಾಟಕ ಕುರುಕ್ಷೇತ್ರಕ್ಕೆ ಮುಹೂರ್ತ ಬಹುತೇಕ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ಆಸಕ್ತಿ ತೋರಿದ್ದು, ಮೇ 10 ರಂದು ಮತದಾನಕ್ಕೆ ದಿನಾಂಕ ನಿಗದಿ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

    ರಾಜ್ಯ ಸರ್ಕಾರ ಒಂದೇ ಹಂತದ ಚುನಾವಣೆ ನಡೆಸಲು ಅಪಸ್ವರ ಎತ್ತಿದ್ದು, ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮನವಿ ಮಾಡಿಕೊಂಡಿದೆ. ಆದರೆ ಈ ವಿಚಾರ ನಮ್ಮ ಕೈಯಲ್ಲಿ ಇಲ್ಲ. ಮುಖ್ಯ ಚುನಾವಣಾ ಆಯುಕ್ತರೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉಪ ಆಯುಕ್ತ ಉಮೇಶ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

    ಒಂದು ವೇಳೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಚುನಾವಣಾ ಆಯೋಗ ಸ್ಪಂದಿಸಿದರೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಮೊದಲನೇ ಹಂತದ ಚುನಾವಣೆ ನಡೆದರೆ ಮೇ 10ರಂದು ಎರಡನೇ ಹಂತದ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೇ 14ರಂದು ಮತ ಎಣಿಕೆ ನಡೆಯುವ ಸಂಭವ ಇದೆ.

    ಅಭ್ಯರ್ಥಿಯ ಚುನಾವಣೆ ವೆಚ್ಚವನ್ನು ಏಳೂವರೆ ಲಕ್ಷದಿಂದ 28 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಪ್ರತಿಯೊಂದು ಮತಗಟ್ಟೆ ಬಳಿ ಅಶಕ್ತರು, ವೃದ್ಧರಿಗೆ ನೆರವಾಗಲು ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ನೀಡಲಾಗಿರುವ ಜನವರಿ 12ರ ಗಡುವನ್ನು ವಿಸ್ತರಿಸಲು ಆಯೋಗ ಚಿಂತನೆ ನಡೆಸಿದೆ. ಕಾಂಗ್ರೆಸ್ ಪಕ್ಷ ಬ್ಯಾಲೆಟ್ ಪೇಪರ್ ಬಳಕೆ ಮನವಿಯನ್ನು ತಳ್ಳಿಹಾಕಿರುವ ಆಯೋಗ ಇವಿಎಂ ಜೊತೆಗೆ ವಿವಿ ಪ್ಯಾಟ್ ಅಳವಡಿಸಲಿದೆ.

  • ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

    ದೀಪಕ್ ರಾವ್ ಹತ್ಯೆ ಪ್ರಕರಣ- ಪೊಲೀಸರ ಕೆಲಸವನ್ನು ಶ್ಲಾಘಿಸಿದ ಸಚಿವ ಆಂಜನೇಯ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕೆಲಸ ಶ್ಲಾಘನೀಯ ಎಂದು ಸಚಿವ ಆಂಜನೇಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರು, ಹತ್ಯೆ, ಸಾವು ಯಾವುದೂ ಆಗಬಾರದು. ಕೊಲೆ ಹಿಂದಿನ ಸತ್ಯ ತನಿಖೆಯಲ್ಲಿ ಬೆಳಕಿಗೆ ಬರುತ್ತೆ. ಸಾವಿನಲ್ಲಿ ಯಾವುದೇ ರಾಜಕೀಯ ಮಾಡಬಾರದು. ಘಟನೆಯಾದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದೆ ಅಂದ್ರು.

    ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರುತ್ತದೆ. ಬಳಿಕ ತಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿದೆ ಅಂತ ಅವರು ಹೇಳಿದ್ರು.

    ಇದೇ ವೇಳೆ ತನ್ನ ರಾಜಕೀಯ ನಡೆಯ ಬಗ್ಗೆ ಮಾತನಾಡಿದ ಅವರು, ನಾನು ಕ್ಷೇತ್ರ ಬದಲಾವಣೆ ಮಾಡುವುದಿಲ್ಲ. ಹೊಳಲ್ಕೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನನ್ನ ಜಿಲ್ಲೆ ಚಿತ್ರದುರ್ಗ. 44 ವರ್ಷದಿಂದ ಇಲ್ಲೆ ರಾಜಕೀಯ ಮಾಡಿದ್ದೇನೆ. ಸೋಲು, ಗೆಲುವು ಮಂತ್ರಿ ಸ್ಥಾನ ಎಲ್ಲವನ್ನು ಇದೇ ಕ್ಷೇತ್ರ ಕೊಟ್ಟಿದೆ. ನನ್ನ ಅಭಿಮಾನಿಗಳು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕೇಳಿಕೊಳ್ತಿದ್ದಾರೆ. ಆದ್ರೆ ನಾನು ಕ್ಷೇತ್ರ ಬದಲಾಯಿಸೊಲ್ಲ. ಹೀಗಾಗಿ ಹೊಳಲ್ಕೆರೆಯಿಂದಲೇ ಈ ಬಾರಿ ಸ್ಪರ್ಧೆ ಮಾಡಿ ಗೆಲ್ತೀನಿ ಅಂತ ತಿಳಿಸಿದ್ರು.

    ಬಹುಮಾನ ಘೋಷಣೆ: ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಎಡಿಜಿಪಿ ಕಮಲ್ ಪಂತ್ ಅವರು ಪ್ರಶಂಸಿಸಿದ್ದು, ರೂ.1,20,000 ಬಹುಮಾನ ಘೋಷಣೆ ಮಾಡಿದ್ದಾರೆ. ದೀಪಕ್ ಹತ್ಯೆ ನಡೆದ 5 ಗಂಟೆಗಳ ಒಳಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬುಧವಾರ ಬಂಧನಕ್ಕೊಳಪಡಿಸಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿ ಹರೀಶ್ ಸೇರಿದಂತೆ ಒಟ್ಟು 6 ಮಂದಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

  • ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ಬೆಂಗಳೂರು: ಕನ್ನಡ ಶಾಲೆಗಳನ್ನು ಮುಚ್ಚಲ್ಲ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಸರ್ಕಾರ ಇದೀಗ ನಟ ವಿಷ್ಣುವರ್ಧನ್ ಓದಿದ ಶಾಲೆಯನ್ನೇ ಮುಚ್ಚಲು ಹೊರಟಿದೆ.

    ಚಾಮರಾಜಪೇಟೆಯಲ್ಲಿರೋ ಸರ್ಕಾರಿ ಅನುದಾನಿತ ಮಾಡಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿಯಲು ಸರ್ಕಾರ ಮುಂದಾಗಿದೆ. ಈ ಹಿಂದೆ ಈ ಶಾಲೆಗೆ ಸೇರಬೇಕಾದ್ರೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರಬೇಕಿತ್ತು ಅಥವಾ ರಾಜಕಾರಣಿಗಳ ರೆಕಮೆಂಡ್ ಬೇಕಿತ್ತು.

    ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹಲವು ಬಾರಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಶಿಕ್ಷಕರ ನೇಮಕಕ್ಕೆ ಮುಂದಾಗದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 2 ತಿಂಗಳ ಹಿಂದೆ ಪ್ರೌಢಶಾಲೆಯನ್ನು ಮುಚ್ಚಿದ್ದ ಸರ್ಕಾರ ಈಗ ಮಕ್ಕಳ ಕೊರತೆಯನ್ನೇ ನೆಪವಾಗಿಟ್ಟುಕೊಂಡು ಪ್ರಾಥಮಿಕ ಶಾಲೆಯನ್ನು ಮುಚ್ಚಲು ಮುಂದಾಗಿದೆ ಎನ್ನಲಾಗಿದೆ.

  • ಮಂಗ್ಳೂರಲ್ಲಿ ಆಣೆ ಪ್ರಮಾಣ ರಾಜಕೀಯ- ಸಚಿವರ ಸವಾಲು ಸ್ವೀಕರಿಸಿದ ಜನಾರ್ದನ ಪೂಜಾರಿ ಆಪ್ತರು

    ಮಂಗ್ಳೂರಲ್ಲಿ ಆಣೆ ಪ್ರಮಾಣ ರಾಜಕೀಯ- ಸಚಿವರ ಸವಾಲು ಸ್ವೀಕರಿಸಿದ ಜನಾರ್ದನ ಪೂಜಾರಿ ಆಪ್ತರು

    ಮಂಗಳೂರು: ಒಂದು ಕಾಲದಲ್ಲಿ ರಮಾನಾಥ ರೈ ಪಾಲಿಗೆ ರಾಜಕೀಯ ಗುರುವಾಗಿದ್ದ ಜನಾರ್ದನ ಪೂಜಾರಿಯವರನ್ನೇ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದರೆಂಬ ಆರೋಪ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.  ಇದನ್ನೂ ಓದಿ: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!

    ಸಾರ್ವಜನಿಕ ವೇದಿಕೆಯಲ್ಲಿ ಪೂಜಾರಿಯವರು ಕಣ್ಣೀರು ಹಾಕಿದ್ದು, ಬಿಲ್ಲವರನ್ನು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ರೈ ವಿರುದ್ಧ ಟೀಕೆ ಎದ್ದುಬಂದಿತ್ತು. ಆದರೆ ಮತ್ತೆ ಪೂಜಾರಿಯವರ ಕಣ್ಣೀರಿಗೆ ಪ್ರತಿಯಾಗಿ ರಮಾನಾಥ ರೈ ಕೂಡ ಕಣ್ಣೀರು ಹಾಕಿದ್ದಲ್ಲದೆ, ಆಣೆ ಪ್ರಮಾಣಕ್ಕೆ ಕರೆದಿದ್ದು ಪೂಜಾರಿ ಆಪ್ತರನ್ನು ಕೆರಳಿಸಿತ್ತು.  ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು

    ಇದೀಗ ಸವಾಲನ್ನು ಸ್ವೀಕರಿಸಿರುವ ಪೂಜಾರಿ ಆಪ್ತರಾದ ಹರಿಕೃಷ್ಣ ಬಂಟ್ವಾಳ್ ಮತ್ತು ಅರುಣ್ ಕುವೆಲ್ಲೋ ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೆ ಧರ್ಮಸ್ಥಳಕ್ಕೆ ಜನಾರ್ದನ ಪೂಜಾರಿ ಯಾಕೆ ಬರಬೇಕು. ನಾವೇ ಬರ್ತೀವಿ. ಯಾಕಂದ್ರೆ ರಮಾನಾಥ ರೈ ಪೂಜಾರಿಯವರನ್ನು ನಿಂದಿಸಿದಾಗ ಅರುಣ್ ಕುವೆಲ್ಲೋ ಸಾಕ್ಷಿಯಾಗಿದ್ರು ಅಂತಾ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!

    https://www.youtube.com/watch?v=d0ABn6LEi-w

    https://www.youtube.com/watch?v=3tD5oKIc3EY

     

  • ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಮಂಡ್ಯ ಜನರಿಗೆ ಹೊಸ ಕ್ಯಾಂಟೀನ್ ಭಾಗ್ಯ

    ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಮಂಡ್ಯ ಜನರಿಗೆ ಹೊಸ ಕ್ಯಾಂಟೀನ್ ಭಾಗ್ಯ

    ಮಂಡ್ಯ: 2018 ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕ್ಯಾಂಟೀನ್ ಪಾಲಿಟಿಕ್ಸ್ ಜೋರಾಗಿದೆ. 10 ರೂಪಾಯಿಗೆ ಆಹಾರ ನೀಡುವ ಅಣ್ಣಾ ಕ್ಯಾಂಟೀನ್ ಇಂದು ಮಂಡ್ಯದಲ್ಲಿ ನೂತನವಾಗಿ ಆರಂಭವಾಗಿದೆ.

    ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ರವಿಕುಮಾರ್ ಹೆಸರಲ್ಲಿ ನಗರದ ಹೊಸಹಳ್ಳಿ ವೃತ್ತದಲ್ಲಿ ಅಣ್ಣಾ ಕ್ಯಾಂಟೀನ್ ಆರಂಭವಾಗಿದೆ. ರವಿಕುಮಾರ್ ಅಭಿಮಾನಿ ರಾಜು ಎಂಬವರು ಕ್ಯಾಂಟೀನ್ ಆರಂಭಿಸಿದ್ದು, 10 ರೂಪಾಯಿಗೆ ವಿವಿಧ ಬಗೆಯ ಊಟ, ಉಪಹಾರ ನೀಡುತ್ತಿದ್ದಾರೆ. ಬಡವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕ್ಯಾಂಟಿನ್ ಆರಂಭಿಸಲಾಗಿದೆ ಎನ್ನಲಾಗಿದೆ.

    ಮಂಡ್ಯದಲ್ಲಿ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರ ಅಭಿಮಾನಿಗಳು 10 ರೂಪಾಯಿಗೆ ಊಟ ತಿಂಡಿ ನೀಡುವ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ. ಇದಾದ ನಂತರದಲ್ಲಿ ಕೆಲ ದಿನಗಳ ಹಿಂದೆ ರಮ್ಯಾ ಅಭಿಮಾನಿಯೊಬ್ಬರು 10 ರೂಪಾಯಿಗೆ ಊಟ ತಿಂಡಿ ನೀಡುವ ರಮ್ಯಾ ಕ್ಯಾಂಟಿನ್ ಆರಂಭಿಸಿದ್ದರು.

    ಪ್ರಸ್ತುತ ಅಪ್ಪಾಜಿ ಕ್ಯಾಂಟಿನ್, ರಮ್ಯಾ ಕ್ಯಾಂಟೀನ್ ಸಾಲಿಗೆ ಅಣ್ಣಾ ಕ್ಯಾಂಟೀನ್ ಕೂಡ ಸೇರ್ಪಡೆಯಾಗಿದೆ. ಇದರ ನಡುವೆಯೇ ಬಿಜೆಪಿಯವರು ನಾವೇನು ಕಡಿಮೆಯಿಲ್ಲ ಎಂಬಂತೆ ಯಡಿಯೂರಪ್ಪ ಕ್ಯಾಂಟೀನ್ ಆರಂಭಿಸಲು ಭರದಿಂದ ಸಿದ್ಧತೆ ನಡೆಸಿದ್ದಾರೆ. ಮಂಡ್ಯದ ಸುಭಾಷ್ ನಗರದಲ್ಲಿ ಕ್ಯಾಂಟೀನ್ ಆರಂಭಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಬಿಜೆಪಿಯವರು ಉಳಿದ ಮೂರು ಕ್ಯಾಂಟೀನ್‍ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಮೂರು ರೂಪಾಯಿಗೆ ಯಡಿಯೂರಪ್ಪ ಕ್ಯಾಂಟೀನ್‍ನಲ್ಲಿ ಊಟ, ಉಪಹಾರ ನೀಡುವುದಾಗಿ ಹೇಳುತ್ತಿದ್ದು, ಸದ್ಯದಲ್ಲೇ ಆರಂಭವಾಗಲಿದೆ ಎನ್ನುತ್ತಿದ್ದಾರೆ.

    ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷದ ಮುಖಂಡರು ಕಡಿಮೆ ಬೆಲೆಯ ಕ್ಯಾಂಟೀನ್ ಆರಂಭಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

     

  • ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ : ಟಿಟಿವಿ ದಿನಕರನ್

    ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ : ಟಿಟಿವಿ ದಿನಕರನ್

    ಚೆನ್ನೈ: ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ ಅದು ಜಯಲಲಿತಾ. ರಜನಿ ಮೇನಿಯಾ ಎಂಬುವುದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ಇಲ್ಲಿ ಇವೆಲ್ಲ ನಡೆಯುವುದಿಲ್ಲ ಎಂದು ಎಐಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.

    ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಸಂಬಂಧ ಘೋಷಣೆ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ದಿನಕರನ್, ತಮಿಳುನಾಡಿನಲ್ಲಿ ರಜನಿ ಮೇನಿಯಾ ನಡೆಯುವುದಿಲ್ಲ. ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮ. ಅಲ್ಲದೇ ಎಂಜಿಆರ್ ಮತ್ತು ಅಮ್ಮ ಅವರೊಂದಿಗೆ ನೀವು ಯಾರನ್ನು ಬೇಕಾದರೂ ಹೋಲಿಕೆ ಮಾಡಬಾರದು. ಜಯಲಲಿತ ಅವರ ನಿಷ್ಠಾವಂತ ಬೆಂಬಲಿಗ ಮುಂದೆ ಯಾರು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಜಯಲಲಿತಾ ಸಾವಿನಿಂದ ತೆರವಾಗಿದ್ದ ರಾಧಾಕೃಷ್ಣ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿನಕರನ್, ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು.

    ರಜನಿ ನಿರ್ಧಾರ ಖುಷಿ ತಂದಿದೆ: ತಮಿಳುನಾಡಿನಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಅವರ ಅಭಿಮಾನಿಗಳಲ್ಲಿ ಹರುಷವನ್ನು ಮೂಡಿಸಿದೆ. ರಜನಿ ಅವರ ಸಮಕಾಲೀನ ನಟ ಕಮಲ್ ಹಾಸನ್ ಈ ಕುರಿತು ತಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಿದ್ದು, ರಜನಿ ಅವರ ರಾಜಕೀಯ ಪ್ರವೇಶ ಖುಷಿ ತಂದಿದೆ. ಸಹೋದರ ರಜನಿಕಾಂತ್ ಅವರ ಸಾಮಾಜಿಕ ಪ್ರಜ್ಞೆ ಬಗ್ಗೆ ನನಗೆ ತಿಳಿದಿದೆ. ಹೀಗಾಗಿ ಅವರಿಗೆ ನಾನು ಶುಭ ಕೋರುತ್ತೇನೆ ಎಂದು ಹೇಳಿದ್ದಾರೆ.