Tag: Political Retirement

  • ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ ಸೋನಿಯಾ

    ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ ಸೋನಿಯಾ

    ರಾಯಪುರ: ಛತ್ತೀಸ್‌ಗಢದ ರಾಜಧಾನಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ (Congress) ನಾಯಕಿ ಸೋನಿಯಾ ಗಾಂಧಿ (Sonia Gandhi) ಕೊನೆಗೂ ತಮ್ಮ ರಾಜಕೀಯ ನಿವೃತ್ತಿಯ (Political Retirement) ಸುಳಿವು ನೀಡಿದ್ದಾರೆ.

    ಭಾರತ್ ಜೋಡೋ ಯಾತ್ರೆ (Bharat Jodo Yatra) ಕುರಿತು ಮಾತನಾಡುತ್ತಾ, ಡಾ. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ 2004 ಮತ್ತು 2009ರಲ್ಲಿನ ನಮ್ಮ ಗೆಲುವುಗಳು ನನಗೆ ವೈಯಕ್ತಿಕವಾಗಿ ತೃಪ್ತಿ ತಂದಿದೆ. ಆದರೆ ನನಗೆ ಹೆಚ್ಚು ಸಂತಸ ನೀಡಿರುವುದು ಕಾಂಗ್ರೆಸ್‌ಗೆ ಮಹತ್ತರ ತಿರುವಾಗಿರುವ ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯಗೊಳ್ಳುವ ಸಾಧ್ಯತೆ ಇರುವುದು ಎಂದಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳಿಗೆ ಹಾಹಾಕಾರ ಸಾಧ್ಯತೆ

    ನನಗೆ ಅತ್ಯಂತ ತೃಪ್ತಿ ಕೊಟ್ಟಿರುವ ವಿಚಾರವೆಂದರೆ, ನನ್ನ ಇನ್ನಿಂಗ್ಸ್ ಭಾರತ್ ಜೋಡೋ ಯಾತ್ರೆಯೊಂದಿಗೆ ಅಂತ್ಯಗೊಳ್ಳಬಹುದಾಗಿದೆ. ಯಾತ್ರೆಯು ದೊಡ್ಡ ತಿರುವಾಗಿ ಪರಿಣಮಿಸಿದೆ. ಭಾರತದ ಜನರು ಸೌಹಾರ್ದತೆ, ಸಹಿಷ್ಣುತೆ ಮತ್ತು ಸಮಾನತೆಯನ್ನು ಸಂಪೂರ್ಣವಾಗಿ ಬಯಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಇದು ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯವಾಗಿದೆ. ಬಿಜೆಪಿ-ಆರ್‌ಎಸ್‌ಎಸ್ (BJP-RSS) ದೇಶದ ಪ್ರತಿಯೊಂದು ಸಂಸ್ಥೆಯನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ದೇಶವನ್ನೇ ಬುಡಮೇಲು ಮಾಡಿವೆ. ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಮೂಲಕ ಆರ್ಥಿಕ ವಿನಾಶಕ್ಕೆ ಕಾರಣವಾಗಿವೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಮತ್ತು ಬುಡಕಟ್ಟು ಸಮುದಾಯಗಳನ್ನು ಟಾರ್ಗೆಟ್ ಮಾಡುತ್ತಿದೆ. ಆದ್ದರಿಂದ ಜನರಿಗೆ ನಮ್ಮ ಸಂದೇಶವನ್ನು ಮನವರಿಕೆ ಮಾಡಿಕೊಡುವ ಮೂಲಕ ಈ ಬಾರಿ ಬಿಜೆಪಿ ಆಡಳಿತವನ್ನು ಉರುಳಿಸಬೇಕು ಎಂದು ಕರೆ ನೀಡಿದ್ದಾರೆ.

  • ನನಗೆ ನೀವು ಕೊಟ್ಟಿರುವ ಪೊಷಿಷನ್‌ ಸಾಕು, ಇನ್ಯಾವುದೂ ಬೇಡ – ಡಿಕೆಶಿ ರಾಜಕೀಯ ನಿವೃತ್ತಿ ಸುಳಿವು!

    ನನಗೆ ನೀವು ಕೊಟ್ಟಿರುವ ಪೊಷಿಷನ್‌ ಸಾಕು, ಇನ್ಯಾವುದೂ ಬೇಡ – ಡಿಕೆಶಿ ರಾಜಕೀಯ ನಿವೃತ್ತಿ ಸುಳಿವು!

    ರಾಮನಗರ: (Ramanagara) ನನಗೆ ನೀವು ಕೊಟ್ಟಿರುವ ಪೊಷಿಷನ್ ಸಾಕು, ಇನ್ಯಾವ ಪೊಷಿಷನ್ ಬೇಡ. ನನಗೆ ಇದೀಗ 60 ವರ್ಷ ತುಂಬಿದೆ ಎಂದು ರಾಜಕೀಯ ನಿವೃತ್ತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಸುಳಿವು ನೀಡಿದ್ದಾರೆ.

    ಆಯುಧ ಪೂಜೆ ದಿನ ಕನಕಪುರದ ತಮ್ಮ ನಿವಾಸದಲ್ಲಿ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿರುವ ವೀಡಿಯೋ ವೈರಲ್‌ ಆಗಿದೆ. ನಾನು ಇನ್ನು 8-10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ರಾಜಕೀಯ ಮಾಡಲು ಆಗಲ್ಲ. ಕನಕಪುರ ಕ್ಷೇತ್ರದ ಜನರು ನನಗೆ ಮತ ನೀಡಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ರಾಜಕೀಯ ನಿವೃತ್ತಿ ಪಡೆಯುವುದರ ಒಳಗಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ನಾನು ಯಾವುದೇ ಪ್ರತಿಫಲ ನಿರೀಕ್ಷೆ ಮಾಡುವುದಿಲ್ಲ. ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ತಾಲೂಕಿನಲ್ಲಿ ಯಾವುದೇ ವಿಚಾರಕ್ಕೂ ಯಾರ ಮುಂದೆಯೂ ಕೈಚಾಚಿಲ್ಲ. ಯಾವುದೇ ಕಾಮಗಾರಿಯಲ್ಲೂ ಕಮಿಷನ್ ಪಡೆದಿಲ್ಲ. ಜಾತಿ ಮೇಲೆ ನನಗೆ ನಂಬಿಕೆ ಇಲ್ಲ. ನೀತಿಯ ಮೇಲೆ ನನಗೆ ನಂಬಿಕೆ ಇದೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಶಾಸಕ ಸಿಂಧ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವರು ರಾಜಕೀಯ ಮಾಡಿದ್ದಾರೆ. ಆದರೆ ಅವರ‍್ಯಾರು ಶಿಕ್ಷಣ ಸಂಸ್ಥೆಗೆ ಅಷ್ಟು ಕೆಲಸ ಮಾಡಿಲ್ಲ. ನಾನು ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನುಳಿದದ್ದನ್ನ ಈಗ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಕಳೆದ 25 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಈಗಿನ ಶಿಕ್ಷಣ ಸಂಸ್ಥೆ ಬಗ್ಗೆ ನಂಬಿಕೆ ಇಲ್ಲ. ಅದನ್ನು ಬದಲಾಯಿಸಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ: ಅಶ್ವತ್ಥ್‌ನಾರಾಯಣ  ಟಾಂಗ್

    ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ: ಅಶ್ವತ್ಥ್‌ನಾರಾಯಣ ಟಾಂಗ್

    ಬೆಳಗಾವಿ: ದಾವಣಗೆರೆಯಲ್ಲಿ ನಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ 75ನೇ ಜನ್ಮದಿನಕ್ಕೆ ಶುಭಕೋರುತ್ತಲೇ ಅವರಿಗೆ ಸಚಿವ ಅಶ್ವತ್ಥ್‌ನಾರಾಯಣ ಟಾಂಗ್ ನೀಡಿದರು.

    ನಗರದಲ್ಲಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೀಬೇಕಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನೂರಕ್ಕೆ ನೂರು ರಿಟೈರ್‌ಮೆಂಟ್ ಪಡೆಯಬೇಕು. ಇವರ ಬಾರವನ್ನು ಹೊತ್ತುಕೊಂಡು ಎಲ್ಲಿಗೆ ಹೋಗಬೇಕು. ಇವರ ಮೋಜು ಮಸ್ತಿ ಏನ್ರಿ, ಎಲ್ಲವನ್ನೂ ಮರೆತಿದ್ದಾರೆ. ಇವರ ಕಥೆ ಏನ್ರಿ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ:  ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು 

    ಇವತ್ತು ಇಂತಹ ಮಹಾಪುರುಷರ ಜನುಮ ದಿನ ಆಗ್ತಿದೆ. ಯಾವ ಕಾರಣಕ್ಕೆ ಜನ್ಮದಿನ ಆಗ್ತಿದೆ ಗೊತ್ತಿಲ್ಲ. ಏನ್ ಕೊಡುಗೆ ಕೊಟ್ಟಿದ್ದಾರೆ ಗೊತ್ತಿಲ್ಲ. ಅವರ ಭಾವನೆಗಳಿಗೆ ನಾನು ಅಗೌರವ ಕೊಡುವಂತದ್ದು ಆಗಬಾರದು. ಒಟ್ಟಾರೆ ಇದು ಅಪ್ರಸ್ತುತ, ಇಂದು ಅವರು ನಿವೃತ್ತಿ ಘೋಷಣೆ ಮಾಡಲಿ ಅಂತಾ ವಿನಂತಿಸುತ್ತೇನೆ ಎಂದರು.

    ಸಿದ್ದರಾಮಯ್ಯ ಅಮೃತ ಮಹೋತ್ಸವ ವಿಚಾರಕ್ಕೆ, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರ ಜನ್ಮದಿನಕ್ಕೆ ಹೃದಯಪೂರ್ವಕ ಶುಭಾಶಯಗಳು. ಸಿದ್ದರಾಮಯ್ಯ ಅವರಿಗೆ ಭಗವಂತ ಆಯುರಾರೋಗ್ಯ ಎಲ್ಲ ಕರುಣಿಸಲಿ ಅಂತಾ ಪ್ರಾರ್ಥಿಸುತ್ತೇನೆ.ಸಮಾಜದಲ್ಲಿ ರಾಜಕೀಯ ಪಕ್ಷದ ನಾಯಕನ ಯಾವುದೇ ಕಾರ್ಯಕ್ರಮ ಇದ್ದರೂ ರಾಜಕೀಯ ಕಾರ್ಯಕ್ರಮವೇ ಆಗುತ್ತದೆ ಎಂದು ತಿಳಿಸಿದರು.

    ಸಿದ್ದರಾಮಯ್ಯರ ಶಕ್ತಿ ಪ್ರದರ್ಶನವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ, ಎಲ್ಲರೂ ಶಕ್ತಿ ಪ್ರದರ್ಶನ ಮಾಡಬೇಕು. ಮಾಡ್ತಾರೆ ಏನ್ ತಪ್ಪೇನಿಲ್ಲ. ಜನರ ವಿಶ್ವಾಸ ಪಡೆದು ಜನರ ಆಶೀರ್ವಾದ, ಬೆಂಬಲ ಪಡೆಯಬೇಕು. ಇದೊಂದು ಶುಭ ಸಂದರ್ಭ 75ನೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಹಿಂದೆ ಆಗಿಬಿಟ್ಟಿದ್ದಾರೆ. ಇನ್ಮುಂದೆ ಆಗಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡ ಪಕ್ಷ. ಪ್ರಸ್ತುತವಾದ ಪಕ್ಷ ಅಲ್ಲ. ವಿಚಾರ, ಧ್ಯೇಯೋದ್ದೇಶಗಳ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುವಂತಹ ಪಕ್ಷವಾಗಿದೆ. ಇಂದು ಇಡೀ ದೇಶದಲ್ಲಿ ಉತ್ತಮವಾದ ಬುನಾದಿ ಹಾಕದೇ ಇದ್ದ ಪಕ್ಷ ಕಾಂಗ್ರೆಸ್. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲಪುರುಷರು, ಕಾರಣಿಕರ್ತರು ಕಾಂಗ್ರೆಸ್ ಪಕ್ಷದವರು. ಭ್ರಷ್ಟಾಚಾರ ಸಂಸ್ಕøತಿ ತಂದಿದ್ದಾರೆ. ಅದನ್ನ ಕ್ಲೀನ್ ಮಾಡಬೇಕು ಎಂದು ಆರೋಪಿಸಿದರು. ಇದನ್ನೂ ಓದಿ: ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಕೈಬಿಡಿ – ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ 

    ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಒಗ್ಗಟ್ಟಿನ ಜಪ ವಿಚಾರಕ್ಕೆ, ಅವರ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಅವರ ಪಕ್ಷ ಸಂಪೂರ್ಣ ನೆಲೆ, ವಿಶ್ವಾಸ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಕೆಲವೇ ವರ್ಷಗಳಲ್ಲಿ ಮ್ಯೂಸಿಯಂ ಸೇರಿಕೊಳ್ಳುತ್ತದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಇತ್ತಪ್ಪಾ ಅಂತಾ ಮ್ಯೂಸಿಯಂ ಸೇರೋ ಕಾಲ ಬಂದಿದೆ ಎಂದು ಟೀಕಿಸಿದರು.

    ಡಿಕೆಶಿ, ಸಿದ್ದರಾಮಯ್ಯ ಒಂದಾಗ್ತಾರಾ? ಯಾವ ವಿಚಾರದಲ್ಲಿ ಒಂದು ಆಗ್ತಾರೆ? ಯಾವ ತತ್ವ, ಯಾವ ಮೌಲ್ಯದ ಮೇಲೆ ಆಗ್ತಾರೆ. ಎಲ್ಲರೂ ನಾನು ನಾನು ಅಂತಾ ಅರ್ಜಿ ಹಾಕಿದ್ದಾರೆ. ವಯಸ್ಸಾದವರು, ಯುವಕರು, ಮಧ್ಯಮ ವಯಸ್ಸಿನವರು ಅರ್ಜಿ ಹಾಕಿದ್ದಾರೆ. ಈಗಿನ ಕಾಲಕ್ಕೆ ಇವರೆಲ್ಲ ಸಂಪೂರ್ಣವಾಗಿ ಅಪ್ರಸ್ತುತರಾಗಿದ್ದಾರೆ. ಇವರು ಈಗ ಮಾರ್ಗದರ್ಶಿಗಳಾಗಿ ಆಶೀರ್ವಾದ ಮಾಡಿಕೊಂಡು ಇರಬೇಕು ಎಂದು ಟಾಂಗ್ ಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ: ಉಮೇಶ್ ಕತ್ತಿ

    ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ: ಉಮೇಶ್ ಕತ್ತಿ

    ಮಡಿಕೇರಿ: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.

    ಅಲ್ ಖೈದಾ ಮುಖ್ಯಸ್ಥ ಮಸ್ಕಾನ್‍ನನ್ನು ಹೊಗಳಿದ ವೀಡಿಯೋ ಆರ್‍ಎಸ್‍ಎಸ್ ಬಿಡುಗಡೆ ಮಾಡಿದೆ ಎಂಬ ಸಿದ್ದರಾಮಯ್ಯ ಹೇಳಿಕೆಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಮುಖ್ಯಮಂತ್ರಿ ಆಗಿ ಒಳ್ಳೆಯ ಕೆಲಸ ಮಾಡಿದ್ದವರು. ಆದರೆ ಈಗ ರಾಜಕೀಯ ನಿವೃತ್ತಿ ಪಡೆದುಕೊಂಡರೆ ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

    Siddaramaiah

    ಮುಸಲ್ಮಾನ ಶಿಲ್ಪಿಗಳು ಕೆತ್ತಿದ ಮೂರ್ತಿಗಳ ತಿರಸ್ಕರಿಸುವಂತೆ ಒತ್ತಾಯಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೂರ್ತಿ ಕೆತ್ತನೆ ಬಗ್ಗೆ ಕುಮಾರಸ್ವಾಮಿ ಅವರ ಬಳಿಯೇ ಕೇಳಬೇಕು. ಅವರು ಕೂಡ ಸಿಎಂ ಆಗಿದ್ದವರು. ಈಗಾಗಲೇ ಕೆತ್ತನೆ ಆಗಿರುವ ವಿಗ್ರಹಗಳು ಪೂಜಿಸಲ್ಪಪಡುತ್ತಿವೆ. ಆದ್ದರಿಂದ ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡಬೇಕು ಎಂದರು. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು

    ಹಿಂದೂಪರ ಸಂಘಟನೆಗಳು ಮೂರ್ತಿ ತ್ಯಜಿಸುವಂತೆ ಒತ್ತಾಯಿಸುತ್ತಿರುವ ವಿಚಾರ ಹಿನ್ನೆಲೆ ಅದು ಹಿಂದಿನಿಂದಲೂ ವಿರೋಧ ಇದೆ. ಆ ವಿರೋಧ ಸದ್ಯಕ್ಕೆ ನಿಲ್ಲುವುದಿಲ್ಲ. ಇನ್ನು 10 ವರ್ಷಗಳಾದರೂ ಇರುತ್ತದೆ. ಇದರ ಬಗ್ಗೆ ರಾಜಕೀಯ ಮಾಡುವ ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಇಬ್ಬರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.

    ಸಮಾಜದಲ್ಲಿ ಆಗುತ್ತಿರುವ ಗಲಭೆಗೆ ಸರ್ಕಾರ ಮಧ್ಯಸ್ಥಿಕೆ ವಹಿಸದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಎಲ್ಲದಕ್ಕೂ ಮಧ್ಯಸ್ಥಿಕೆ ವಹಿಸಲಾಗುವುದಿಲ್ಲ. ಅಂತಹ ಸಂದರ್ಭ ಬಂದರೆ ಮುಖ್ಯಮಂತ್ರಿಗಳೇ ಮಧ್ಯಸ್ಥಿಕೆ ವಹಿಸುತ್ತಾರೆ ಎಂದು ತಿಳಿಸಿದರು.

  • ರಾಜಕಾರಣದ ಆಸೆ ಇಟ್ಟುಕೊಂಡಿಲ್ಲ: ನಿವೃತ್ತಿ ಸುಳಿವು ನೀಡಿದ್ರಾ ಅನಂತಕುಮಾರ್ ಹೆಗಡೆ?

    ರಾಜಕಾರಣದ ಆಸೆ ಇಟ್ಟುಕೊಂಡಿಲ್ಲ: ನಿವೃತ್ತಿ ಸುಳಿವು ನೀಡಿದ್ರಾ ಅನಂತಕುಮಾರ್ ಹೆಗಡೆ?

    ಕಾರವಾರ: ಇಷ್ಟು ದಿನ ರಾಜಕಾರಣದಲ್ಲಿ ಇದ್ದದ್ದೇ ನಮ್ಮ ಪುಣ್ಯ, ಮುಂದಿನ ದಿನಗಳಲ್ಲಿ ರಾಜಕಾರಣದ ಬಗ್ಗೆ ನಾವು ಆಸೆಯನ್ನು ಇಟ್ಟುಕೊಂಡಿಲ್ಲ ಎಂದು ರಾಜಕೀಯ ವೈರಾಗ್ಯದ ಮಾತುಗಳನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಆಡಿದ್ದಾರೆ‌.

    ಕುಮಟಾ ತಾಲೂಕಿನ ಕಂದವಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ವಿವಿಧ ರಸ್ತೆ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಹಾಗೆ ಇರಬೇಕು, ಹೀಗೆ ಆಗಬೇಕು ಎಂಬ ಕನಸು ನನಗಿಲ್ಲ. ಇಷ್ಟು ವರ್ಷ ಪ್ರೀತಿ ವಿಶ್ವಾಸ ತೋರಿಸಿದ್ದೀರಿ, ಅದೇ ದೊಡ್ಡ ಸಂತೋಷ. ನಿಮ್ಮ ಪ್ರೀತಿಗೆ ನಾನು ಇಲ್ಲಿಂದಲೇ ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳು ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ: ಕೆ.ಗೋಪಾಲಯ್ಯ

    ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ವಿರೋಧ ಎದುರಾದರೂ ಪರವಾಗಿಲ್ಲ. ಜಿಲ್ಲೆಗೆ ಬಂದರು, ನ್ಯಾಷನಲ್ ಹೈವೇ, ಏರ್ಪೋರ್ಟ್, ರೈಲ್ವೆ ಅಭಿವೃದ್ಧಿ ಕೆಲಸಗಳು ಆಗಬೇಕಿವೆ. ಜಿಲ್ಲೆ ಇನ್ನು ನೂರು ವರ್ಷ ಅಭಿವೃದ್ಧಿ ಕಡೆಗೆ ತಿರುಗಿಯೂ ನೋಡಬಾರದು. ಆ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ನಾವೇನು ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಷ್ಟು ದಿನ ರಾಜರಾಣದಲ್ಲಿ ಇದ್ದದ್ದೇ ಪುಣ್ಯ. ಮುಂದೆ ಈ ಯಾವ ಆಸೆಯೂ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೃತ ಕೋವಿಡ್ ಕುಟುಂಬಗಳಿಗೆ ಸರ್ಕಾರ ಕೊಟ್ಟ ಚೆಕ್ ಬೌನ್ಸ್ – ಬ್ಯಾಂಕುಗಳಲ್ಲಿ ನಗದು ಆಗ್ತಿಲ್ಲ ಚೆಕ್

  • ಮಾನವಂತರ‌್ಯಾರು ರಾಜಕಾರಣ ಮಾಡಬಾರದಾ?- ನಿವೃತ್ತಿ ಸುದ್ದಿಗೆ ರಮೇಶ್‍ ಕುಮಾರ್ ಸ್ಪಷ್ಟನೆ

    ಮಾನವಂತರ‌್ಯಾರು ರಾಜಕಾರಣ ಮಾಡಬಾರದಾ?- ನಿವೃತ್ತಿ ಸುದ್ದಿಗೆ ರಮೇಶ್‍ ಕುಮಾರ್ ಸ್ಪಷ್ಟನೆ

    ಕೋಲಾರ: ಮಾನವಂತರು ಯಾರು ರಾಜಕಾರಣ ಮಾಡಬಾರದಾ ಎಂದು ಪ್ರಶ್ನಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ನಿವೃತ್ತಿ ಸುದ್ದಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ವಿಷಯ ಹರಿದಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಸಭೆ ಸಮಾರಂಭ ಮಾಡಿ ಹೇಳಿಲ್ಲ. ಹೀಗಿರುವಾಗ ದಾಖಲೆಗಳಿಲ್ಲದೆ ಈ ರೀತಿ ವದ್ದಂತಿ ಹಬ್ಬಿಸುವುದು ಸರಿಯೇ ಎಂದು ಪ್ರಶ್ನಿಸಿದರು.

    ಜನರು ಎಲ್ಲಾ ನನ್ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟು ಅಮೇಲೆ ನಿವೃತ್ತಿಯಾಗುವೆ. ಏಕಾಏಕಿ ನಿವೃತ್ತಿಯಾಗಲು ನಾನು ಸರ್ವಾಧಿಕಾರಿ ಅಲ್ಲ. ನಿವೃತ್ತಿಯಾಗಲು ಫ್ರೀಯಾಗಿರುವ ಮನುಷ್ಯ ನಾನಲ್ಲ. ಜನರ ಪ್ರೀತಿಯ ಬಂಧನದಲ್ಲಿದ್ದೇನೆ. ಮಾನವಂತರು ಯಾರೂ ರಾಜಕಾರಣ ಮಾಡಬಾರದಾ?. ಹೀಗೆ ಮಾಡಿದ್ರೆ ಮನಸ್ಸಿಗೆ ನೋವಾಗುತ್ತೆ ಎಂದರು.

    ನಾನು ದೇವರಾಜ ಅರಸು ಕಾಲದಿಂದ ರಾಜಕೀಯದಲ್ಲಿ ಸಕ್ರಿಯನಾಗುದ್ದು, ಗೌರವವಾಗಿ ಬದುಕುತ್ತಿದ್ದೇನೆ. ನಾನು ಸರ್ಕಾರಿ ಸೇವೆಯಲ್ಲಿದ್ರೆ ವಿಅರ್ ಎಸ್ ಕೊಡಬಹುದು. ಆದ್ರೆ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಾನು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ನಿವೃತ್ತಿ ಸುದ್ದಿಯನ್ನ ಅಲ್ಲಗಳೆದರು.

  • ‘ಶ್ರೀರಾಮಚಂದ್ರನಾ ಇಲ್ಲ, ರಾಜಕಾರಣಿನಾ? ಇನ್ನೂ ತೀರ್ಮಾನ ಮಾಡಿಲ್ಲ’- ರಾಜಕೀಯ ನಿವೃತ್ತಿ ಕುರಿತು ರಮೇಶ್ ಕುಮಾರ್ ಸ್ಪಷ್ಟನೆ

    ‘ಶ್ರೀರಾಮಚಂದ್ರನಾ ಇಲ್ಲ, ರಾಜಕಾರಣಿನಾ? ಇನ್ನೂ ತೀರ್ಮಾನ ಮಾಡಿಲ್ಲ’- ರಾಜಕೀಯ ನಿವೃತ್ತಿ ಕುರಿತು ರಮೇಶ್ ಕುಮಾರ್ ಸ್ಪಷ್ಟನೆ

    ಕೋಲಾರ: ಈ ಹಿಂದೆ ಇದೆ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದೆ ನಿಜ. ಈಗಲೂ ನೆನಪಿದೆ. ಆದರೆ ಶ್ರೀ ರಾಮಚಂದ್ರನಾ, ರಾಜಕಾರಣಿನಾ ಎಂಬುವುದನ್ನು ನಾನಿನ್ನೂ ತೀರ್ಮಾನ ಮಾಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ನಿವೃತ್ತಿ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನ್ ರಾಜಕಾರಣಿಗಳೆಲ್ಲಾ ಹೇಳಿದಂಗೆ ನಡೆದುಕೊಳ್ಳಬೇಕಿದಿಯಾ ಹೆಂಗೆ. ಹೇಳಿದಂಗೆ ನಡೆದುಕೊಂಡರೆ ಶ್ರೀ ರಾಮಚಂದ್ರ ಆಗಿ ಬಿಡ್ತಾ ಇದ್ದೆ. ನಡೆದುಕೊಳ್ಳದೆ ಇದ್ದರೆ ರಾಜಕಾರಣಿ ಆಗುತ್ತೇನೆ. ನಾನು ಇನ್ನೂ ನಿವೃತ್ತಿ ಬಗ್ಗೆ ತೀರ್ಮಾನ ಮಾಡಿಲ್ಲ. ಶ್ರೀರಾಮಚಂದ್ರನಾ ಅಥವಾ ರಾಜಕಾರಣಿನಾ ಅಂತಾ ನೋಡೋಣ. ಅದಕ್ಕೆ ಇನ್ನೂ 3 ವರ್ಷ ಸಮಯ ಇದೆ ಎಂದು ನಿವೃತ್ತಿ ವಿಚಾರದ ಚರ್ಚೆಗೆ ತೆರೆ ಎಳೆದರು.

    ಸದ್ಯಕ್ಕೆ ನನ್ನ ಜಮೀನಿನಲ್ಲಿ ನಾನು, ನನ್ನ ಚಾಲಕ, ಮಗ ಎಲ್ಲರೂ ಸೇರಿ ತೋಟದ ಕೆಲಸ ಮಾಡಿಕೊಂಡಿದ್ದೇವೆ. 300 ಕುರಿ ಇದೆ, ಕೊಳವೆ ಬಾವಿ ಬತ್ತಿದೆ. ಕೋಳಿ ಫಾರ್ಮ್ ಮಾಡುತ್ತಿದ್ದೇನೆ. ಸದ್ಯಕ್ಕೆ ನೀರಿಲ್ಲ, ಎಲ್ಲಾ ಬೆಳೆ ಒಣಗಿದೆ. ಹಾಗಾಗಿ ಮೇವು ಬೆಳೆಯುತ್ತಾ ಇದ್ದೀನಿ ಎಂದರು.