Tag: Polio

  • ಕಾಲಿಲ್ಲದಿದ್ರೂ ಎದೆಗುಂದಲಿಲ್ಲ, ಪಂಚರ್ ಶಾಪ್ ನಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಬಳ್ಳಾರಿಯ ರಮೇಶ್

    ಕಾಲಿಲ್ಲದಿದ್ರೂ ಎದೆಗುಂದಲಿಲ್ಲ, ಪಂಚರ್ ಶಾಪ್ ನಲ್ಲಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಬಳ್ಳಾರಿಯ ರಮೇಶ್

    ಬಳ್ಳಾರಿ: ಕೆಲವರು ಕೈ ಕಾಲು ನೆಟ್ಟಗಿದ್ದರು ದುಡಿದು ತಿನ್ನದೇ ಇನ್ನೊಬ್ಬರ ಮುಂದೆ ಕೈ ಚಾಚುತ್ತಾರೆ. ಆದರೆ ಇಲ್ಲಿ ನಾಲ್ವರು ಪೋಲಿಯೋದಿಂದ ಕಾಲುಗಳ ಸ್ವಾಧೀನ ಇಲ್ಲದಿದ್ದರು ನಡು ಬಗ್ಗಿಸಿ ದುಡಿದು ಇತರೆ ವಿಕಲಚೇತನರಿಗೆ ಮಾದರಿಯಾಗಿದ್ದಾರೆ.

    ಹೌದು. ನಮ್ಮ ಕಾಲುಗಳಿಗೆ ಸ್ವಾಧೀನ ಇಲ್ಲ. ಹೇಗೆ ದುಡಿಯೋದು ಅಂದುಕೊಂಡಿದ್ದರೆ ಇವತ್ತು ಇವರಿಂದ ಏನೂ ಆಗುತ್ತಿರಲಿಲ್ಲ. ಅಂದಹಾಗೆ ರಮೇಶ್ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದವರು. ಪೋಲಿಯೋ ಸಮಸ್ಯೆಯಿಂದ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

    ಮಾಲತೇಶ್ ಎಂಬವರ ಬಳಿ ಪಂಕ್ಚರ್ ಕೆಲಸ ಕಲಿತು ನಂತರ ತಮ್ಮ ಸ್ನೇಹಿತ ರವೀಂದ್ರ ಜೊತೆ ಕೈ ಜೋಡಿಸಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿಯ ಬಸವೇಶ್ವರ ಸರ್ಕಲ್‍ನಲ್ಲಿ ಪಂಚರ್ ಶಾಪ್ ಆರಂಭ ಮಾಡಿ ಈಗ ನಿಂಗರಾಜ ಹಾಗೂ ರಾಯಪ್ಪ ಅನ್ನೋ ಇನ್ನಿಬ್ಬರು ವಿಕಲಚೇತನ ಸ್ನೇಹಿತರಿಗೂ ಕೆಲಸ ಕೊಟ್ಟಿದ್ದಾರೆ.

    ಪಿಯುಸಿ ಓದಿರೋ ರಮೇಶ್ ಅಂಡ್ ಟೀಂ ಸೈಕಲ್, ಬೈಕ್ ರಿಪೇರಿ ಹಾಗೂ ಪಂಚರ್ ಹಾಕುವ ಕೆಲಸ ಮಾಡುತ್ತಿದ್ದು ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಪಾದರಸದಂತೆ ಕೆಲಸ ಮಾಡೋ ಇವರನ್ನು ಕಂಡು ಇಡೀ ಹಗರಿಬೊಮ್ಮನಹಳ್ಳಿ ಜನರೇ ಖುಷಿ ಪಡುತ್ತಾರೆ. ಸದ್ಯ ಶಾಪ್ ಬಾಡಿಗೆ ಪಡೆದಿರೋ ರಮೇಶ್, ಬ್ಯಾಂಕ್ ಸಾಲ ಪಡೆದು ಸ್ವಂತಕ್ಕೆ ದೊಡ್ಡ ಪಂಚರ್ ಶಾಪ್ ಓಪನ್ ಮಾಡೋ ಉತ್ಸಾಹದಲ್ಲಿದ್ದಾರೆ.