Tag: Polio

  • ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ವಿಜ್ಞಾನ-ತಂತ್ರಜ್ಞಾನ (Science And Technology) ಬೆಳೆದಂತೆ ಮನುಷ್ಯ ಹೊಸ ಹೊಸ ಆವಿಷ್ಕಾರಗಳಿಗೆ ಮುಂದಾಗುತ್ತಿರುವುದು ಅಚ್ಚರಿಯೇನಲ್ಲ. ವೈದ್ಯಕೀಯ ಲೋಕದಲ್ಲೂ ಹೊಸ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನ ಅಳವಡಿಕೆಯಿಂದಾಗಿ ಮನುಷ್ಯ ತನ್ನ ಜೀವಿತಾವಧಿಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅಂದ್ರೆ 60 ವರ್ಷ ಜೀವಿತಾವಧಿ ಹೊಂದಿದ ಮನುಷ್ಯ ಕನಿಷ್ಠ ಐದತ್ತು ವರ್ಷ ಆರೊಗ್ಯದಲ್ಲಿ ಸುಧಾರಣೆ ಕಾಣಬಹುಗಿದೆ.

    ಈ ಹಿಂದೆ ಹಲವಾರು ಮಾರಣಾಂತಿಕ ಕಾಯಿಲೆಗಳು ವಿಶ್ವವನ್ನು ಕಾಡಿವೆ. ಅದರಲ್ಲಿ ಪೋಲಿಯೋ (Polio) ಸಹ ಒಂದು. ಈಗಿನ ಮಟ್ಟಿಗೆ ಪೋಲಿಯೋಗೆ ಲಸಿಕೆ ಲಭ್ಯವಿದ್ದರೂ ಈ ಹಿಂದೆ ಜನರನ್ನ ಬಲಿ ಪಡೆದ ಉದಾಹರಣೆಯೂ ಇದೆ.

    ಪೋಲೀಯೋ ಸಾಮಾನ್ಯ ಲಕ್ಷಣ ಹೊಂದಿದವರು ಸಾಮಾನ್ಯವಾಗಿ 1-2 ವಾರಗಳಲ್ಲಿ ಗುಣಮುಖರಾಗುತ್ತಾರೆ. ಕೆಲವೊಮ್ಮೆ ಪೋಲಿಯೋ ಪೀಡಿತರು ನಿರ್ದಿಷ್ಟ ಕಾಲಾವಧಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇದ್ದರೆ, 30-40 ವರ್ಷಗಳ ನಂತರ ಅಂಗವೈಕಲ್ಯ ಕಾಣಿಸಿಕೊಳ್ಳಬಹುದು ಎಂದು ಈ ಹಿಂದೆಯೇ ತಜ್ಞರು ಹೇಳಿದ್ದಾರೆ. ಇದರ ಮರಣ ಪ್ರಮಾಣ ಮಕ್ಕಳಲ್ಲಿ 15% ರಿಂದ 30% ವರೆಗೆ ಇರುತ್ತದೆ. 1940 ಮತ್ತು 1950ರ ನಡುವೆ ಪೋಲಿಯೋ ಮರಣ ಪ್ರಮಾಣ ಹೆಚ್ಚಾಗಿ ಕಂಡುಬಂದಿತ್ತು. ಈ ಸಮಯದಲ್ಲಿ ಪ್ರತಿ ವರ್ಷ ಸರಿ ಸುಮಾರು 5 ಲಕ್ಷ ಜನ ಪೋಲಿಯೋಗೆ ತುತ್ತಾಗುತ್ತಿದ್ದರು, ಕೆಲವರು ಪೋಲಿಯೋದಿಂದ ಅಂಗವೈಕಲ್ಯ ಅನುಭವಿಸಿದ್ರೆ ಇನ್ನೂ ಕೆಲವರು ಸಾವನ್ನಪ್ಪುತ್ತಿದ್ದರು. 1916ರಲ್ಲಿ ನ್ಯೂಯಾರ್ಕ್‌ನಲ್ಲಿ 2,000 ಮಂದಿ, 1952ರಲ್ಲಿ ಅಮೆರಿಕದಾದ್ಯಂತ ಒಟ್ಟು 3,000 ಮಂದಿ ಸಾವನ್ನಪ್ಪಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

    ಆದ್ರೆ ಅಮೆರಿಕದ ವ್ಯಕ್ತಿಯೊಬ್ಬರು ಚಿಕ್ಕ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ಅಂಗಾಗ ಸ್ವಾಧೀನ ಕಳೆದುಕೊಂಡರೂ ಕಬ್ಬಿಣದ ಶ್ವಾಸಕೋಶದ (Iron Lungs) ಮೂಲಕ ಉಸಿರಾಡುತ್ತಾ, ಪವಾಡವನ್ನೇ ಸೃಸ್ಟಿಸಿದ್ದಾರೆ. ಹೌದು. ಅಮೆರಿಕದ ಟೆಕ್ಸಾಸ್ ನಿವಾಸಿ ಪೌಲ್ ಅಲೆಕ್ಸಾಂಡರ್ ಎಂಬವರು ಅವರು ತನ್ನ 6ನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾದರು. ಈ ಕಾರಣದಿಂದಾಗಿ, 1952 ರಿಂದ ಅವರ ದೇಹದ ಒಂದೊಂದೇ ಭಾಗ ಸ್ವಾಧೀನ ಕಳೆದುಕೊಳ್ಳಲಾರಂಭಿಸಿತು. ಕುಟುಂಬಸ್ಥರು ಅವರನ್ನು ವೈದ್ಯರ ಬಳಿ ಕರೆದೊಯ್ದರು. ನಂತರ ಅಲ್ಲಿನ ವೈದ್ಯರು ಅವರಿಗೆ ‘ಟ್ರಾಕಿಯೊಸ್ಟೊಮಿ’ ಎಂಬ ಆಪರೇಷನ್ ಮಾಡಿದರು. ಆಗ ಪಾಲ್ ಅಲೆಕ್ಸಾಂಡರ್‌ಗೆ ಸಿಲಿಂಡರ್‌ ಆಕಾರದ ‘ಕಬ್ಬಿಣದ ಶ್ವಾಸಕೋಶ’ವನ್ನು ಅಳವಡಿಸಲಾಯಿತು. ಸದ್ಯ ಇಂದಿಗೂ ಅವರು ಇದೇ ಕಬ್ಬಿಣದ ಶ್ವಾಸಕೋಶವನ್ನು ಬಳಸಿಕೊಂಡು ಉಸಿರಾಡುತ್ತಿದ್ದಾರೆ.

    ಅಷ್ಟಕ್ಕೂ ಏನಿದು ಕಬ್ಬಿಣದ ಶ್ವಾಸಕೋಶ, ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಂದಿಗೂ ಅದು ಯಾವ ದೇಶದಲ್ಲಿ ಬಳಕೆಯಲ್ಲಿದೆ ಎಂಬುದನ್ನ ತಿಳಿಯುವ ಮುನ್ನ ಪೋಲಿಯೋ ಎಂದರೇನು? ಅದಕ್ಕೆ ಚಿಕಿತ್ಸೆ ಏನು? ಮಾನವನ ಶ್ವಾಸಕೋಶ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ…..

    ಪೋಲಿಯೋ ಎಂದರೇನು?
    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪೋಲಿಯೋ ಅಥವಾ ಪೋಲಿಯೋಮೈಲಿಟಿಸ್ ಅನ್ನು ಹೆಚ್ಚು ಸಾಂಕ್ರಾಮಿಕ ವೈರಲ್ ಕಾಯಿಲೆಯೆಂದು ವ್ಯಾಖ್ಯಾನಿಸುತ್ತದೆ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಮತ್ತು ಕೆಲವೊಮ್ಮೆ ಕಲುಷಿತ ನೀರು ಆಹಾರದ ಮೂಲಕ ಹರಡುತ್ತದೆ. ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನಂತರದಲ್ಲಿ ಇದು ಮಕ್ಕಳ ಅಂಗವಿಕಲತೆಗೆ ಕಾರಣವಾಗುತ್ತದೆ.

    ಪೊಲೀಯೋಗೆ ಚಿಕಿತ್ಸೆ ಏನು?
    ವೈರಸ್ ಸೋಂಕು ಎಂದಿಗೂ ಬೇರು ಬಿಡದಂತೆ ತಡೆಯಲು ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಪೋಲಿಯೋಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ, ಲಸಿಕೆ ಪಡೆಯದಿದ್ದರೆ ಚಿಕಿತ್ಸೆಯು ಇತರ ವೈರಲ್ ಸೋಂಕುಗಳಿಗೆ ಹೋಲುತ್ತದೆ. ಇದರರ್ಥ ಜ್ವರ ಮತ್ತು ದೇಹದ ನೋವು ಕಡಿಮೆ ಮಾಡಲು ನೋವು ನಿವಾರಕಗಳು ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದು, ದ್ರವಗಳ ಹೆಚ್ಚಳ, ಸೌಮ್ಯ ಜ್ವರ ತರಹದ ರೋಗಲಕ್ಷಣಗಳನ್ನು ನಿರ್ವಹಿಸಲು ಬೆಡ್ ರೆಸ್ಟ್ ಮತ್ತು ಅಂಗವೈಕಲ್ಯ ಮತ್ತು ಪಾರ್ಶ್ವವಾಯು ಅಪಾಯದಲ್ಲಿರುವವರಲ್ಲಿ ಸ್ನಾಯುವಿನ ಚಲನಶೀಲತೆಯನ್ನು ಸುಧಾರಿಸಲು ದೈಹಿಕ ಚಿಕಿತ್ಸೆ. ಉಸಿರಾಡಲು ತೊಂದರೆ ಇರುವವರಿಗೆ ವೆಂಟಿಲೇಶನ್‌ನ ಅಗತ್ಯ ಬೀಳಬಹುದು.

    ಶ್ವಾಸಕೋಶ ಎಂದರೇನು?
    ಶ್ವಾಸಕೋಶ ಎನ್ನುವುದು ಮನುಷ್ಯನ ದೇಹಕ್ಕೆ ಉಸಿರಾಟ ಪೂರೈಸುವ ಪ್ರಮುಖವಾದ ಅಂಗ. ಇದು ವಾತಾವರಣದಿಂದ ಮಾನವನ ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಜೊತೆಗೆ ಮಾನವನ ದೇಹದಲ್ಲಿರುವ ಇಂಗಾಲದ ಡೈ ಆಕ್ಸೈಡ್‌ ಅನ್ನು ವಾತಾವರಣಕ್ಕೆ ಹೊರಸೂಸುತ್ತದೆ. ಇದರ ಕಾರ್ಯ ಚಟುವಟಿಕೆ ಚೆನ್ನಾಗಿದ್ದರೆ, ಮನುಷ್ಯ ಕೂಡ ಆರೋಗ್ಯವಾಗಿ ಇರುತ್ತಾನೆ.

    ಕಬ್ಬಿಣದ ಶ್ವಾಸಕೋಶ ಎಂದರೇನು?
    ಹೆಸರೇ ಹೇಳುವಂತೆ ಶವ ಪೆಟ್ಟಿಗೆಯನ್ನೇ ಹೋಲುವ ಹಾಗೂ ಕಬ್ಬಿಣದಿಂದ ಸಿದ್ಧಪಡಿಸಲಾದ ಒಂದು ಸಾಧನ. 1955ರಲ್ಲಿ ಪೊಲೀಯೋ ಲಸಿಕೆ ಕಂಡು ಹಿಡಿಯುವ ಮೊದಲು ಪೊಲೀಯೋ ಅಮೆರಿಕದಲ್ಲಿ ಸಾವಿರಾರು ಜನರನ್ನ ಬಲಿ ಪಡೆದಿತ್ತು. ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು, ಅಂದಿನ ಪರಿಸ್ಥಿತಿ ಊಹಿಸುವುದಕ್ಕೂ ಕಷ್ಟಕರವಾಗಿತ್ತು. ಜ್ವರದ ಲಕ್ಷಣಗಳೊಂದಿಗೆ ಸ್ನಾಯು ಬಿಗಿತ, ಪಾರ್ಶ್ವವಾಯು (ಸ್ಟ್ರೋಕ್‌) ಉಂಟು ಮಾಡುತ್ತಿತ್ತು ಎಂದು ತಜ್ಞರು ಹೇಳುತ್ತಾರೆ. ಪೋಲಿಯೋ ರೋಗಪೀಡಿತರಲ್ಲಿ ಹೆಚ್ಚಿನವರು ಮಕ್ಕಳೇ ಆಗಿರುತ್ತಿದ್ದರು. ಅದಕ್ಕೆ ಚಿಕಿತ್ಸೆ ಫಲಿಸದೇ ಇದ್ದಾಗ ಅದು ವಯಸ್ಕರಾದವರಿಗೂ ತಗುಲುತ್ತಿತ್ತು. ಹಾಗಾಗಿ ಸ್ನಾಯು ಶಕ್ತಿ ಕಳೆದುಕೊಳ್ಳುತ್ತಿದ್ದರು. ಇದರ ಚೇತರಿಕೆಗಾಗಿ ಕನಿಷ್ಠ ಎರಡು ವಾರಗಳ ವರೆಗೆ ದೀರ್ಘ ಉಸಿರಾಟದ ಅವಶ್ಯಕತೆಯಿತ್ತು. ಅದನ್ನು ಪೂರೈಸಲು ಕಂಡುಹಿಡಿದಿದ್ದೇ ಈ ಐರಲ್‌ ಲಂಗ್ಸ್‌ (ಕಬ್ಬಿಣದ ಶ್ವಾಸಕೋಶ).

    ಕಬ್ಬಿಣದ ಶ್ವಾಸಕೋಶವು ಹೇಗೆ ಕೆಲಸ ಮಾಡುತ್ತದೆ?
    ಕಬ್ಬಿಣದ ಶ್ವಾಸಕೋಶವನ್ನು 1927ರಲ್ಲಿ ಫಿಲಿಪ್ ಡ್ರಿಂಕರ್ ಅಮೆರಿಕದಲ್ಲಿ ಅಭಿವೃದ್ಧಿಪಡಿಸಿದರು. ಮೊದಲಬಾರಿಗೆ 1928ರಲ್ಲಿ ಕ್ಲಿನಿಕಲ್‌ ಪ್ರಯೋಗಕ್ಕೆ ಬಳಸಲಾಯಿತು, ಈ ವಿಧಾನದಿಂದ ಒಂದು ಹುಡುಗಿಯ ಜೀವವೂ ಉಳಿಯಿತು. ನಂತರ ತಜ್ಞರು ಪೋಲಿಯೋ ಪೀಡಿತರಿಗೆ ಕೃತಕ ಉಸಿರಾಟ ಕಲಿಸಲು ಇದು ಸಹಾಯಕವಾಗಲಿದೆ ಎಂಬುದನ್ನು ಕಂಡುಕೊಂಡರು.

    ರೋಗಿಯನ್ನು ಇದರೊಳಗೆ ಇರಿಸಲು ಉಕ್ಕಿನಿಂದ ಸಿದ್ಧಪಡಿಸಲಾದ ಗಾಳಿಯಾಡದ ಕೋಣೆ ಒಳಗೊಂಡಿರುತ್ತದೆ. ಎಲೆಕ್ಟ್ರಿಕ್‌ ಮೋಟಾರ್‌ ಹಾಗೂ ವ್ಯಾಕ್ಯೂಮ್‌ ಕ್ಲೀನರ್‌ನಂತಹ ಏರ್‌ಪಂಪ್‌ಗಳಿಂದ ಚಾಲಿತವಾಗಿರುತ್ತದೆ. ಮುಂಭಾಗದಲ್ಲಿರುವ ದ್ವಾರವನ್ನು ರಬ್ಬರ್‌ ಡಾಲರ್‌ ಎಂದು ಕರೆಯಲಾಗುತ್ತದೆ. ತಲೆ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗವನ್ನು ಈ ದ್ವಾರ ಮುಚ್ಚಿಕೊಳ್ಳುತ್ತದೆ. ವ್ಯಕ್ತಿಯನ್ನು ಇದರ ಒಳಗೆ ಇರಿಸಿ, ಚಾಲನೆ ಮಾಡಿದಾಗ ಇದು ಇಂಭಾಗದ ರಬ್ಬರ್‌ ಅನ್ನು ಪಂಪ್‌ ಮಾಡುವ ಮೂಲಕ‌ ವ್ಯಕ್ತಿಯ ದೇಹಕ್ಕೆ ಕೃತಕ ಉಸಿರಾಟ ಕಲ್ಪಿಸುತ್ತದೆ. ಬಳಿಕ ಬರುವ ಗಾಳಿಯನ್ನು ವ್ಯಕ್ತಿಯ ದೇಹ ಹೀರಿಕೊಂಡು ಶ್ವಾಸಕೋಶಕ್ಕೆ ಆಮ್ಲಜನಕ ಸಿಗುವಂತೆ ಮಾಡುತ್ತದೆ. ಇದರಿಂದ ರೋಗಿಯ ಅಂಗಾಗಗಳು ಸ್ವಾಧೀನ ಕಳೆದುಕೊಂಡಿದ್ದರೂ ಶ್ವಾಸಕೋಶಕ್ಕೆ ಉಸಿರಾಟ ಪೂರೈಕೆ ಮಾಡಲಿದ್ದು, ರೋಗಿಯನ್ನೂ ಜೀವಂತವಾಗಿರಿಸಬಹುದು ಎಂದು ತಜ್ಞರ ವರದಿ ಹೇಳಿದೆ.

    ಈಗ ಬಳಕೆಯಲ್ಲಿದೆಯೇ?
    ಸದ್ಯ ಇದು ಭಾರತದಲ್ಲಿ ಬಳಕೆಯಲ್ಲಿರುವ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಅಮೆರಿಕದಲ್ಲಿ ಬಳಕೆಯಲ್ಲಿದೆ. ಪಾಲ್‌ ಅಲೆಕ್ಸಾಂಡರ್‌ ಅವರು ಬದುಕುಳಿಯಲು ಕಬ್ಬಿಣದ ಶ್ವಾಸಕೋಶ ಬಳಸಿಕೊಂಡಿದ್ದಾರೆ. ಇದು ಆಧುನಿಕ ವೆಂಟಿಲೇಟರ್‌ಗಳಿಗಿಂತಲೂ ಉತ್ತಮ ಚಿಕಿತ್ಸಾ ಸೌಕರ್ಯಗಳನ್ನು ನೀಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • 10 ವರ್ಷಗಳ ನಂತರ ನ್ಯೂಯಾರ್ಕ್‌ನಲ್ಲಿ ಮೊದಲ ಪೋಲಿಯೊ ಪ್ರಕರಣ ದೃಢ

    10 ವರ್ಷಗಳ ನಂತರ ನ್ಯೂಯಾರ್ಕ್‌ನಲ್ಲಿ ಮೊದಲ ಪೋಲಿಯೊ ಪ್ರಕರಣ ದೃಢ

    ವಾಷಿಂಗ್ಟನ್‌: ಸುಮಾರು ಒಂದು ದಶಕದ ನಂತರ ಅಮೆರಿಕದಲ್ಲಿ ಮೊದಲ ಪೋಲಿಯೊ ಪ್ರಕರಣ ದೃಢಪಟ್ಟಿದೆ. ನ್ಯೂಯಾರ್ಕ್‌ನ ರಾಕ್‌ಲ್ಯಾಂಡ್ ಕೌಂಟಿಯಲ್ಲಿ ಪೋಲಿಯೊ ಪ್ರಕರಣ ವರದಿಯಾಗಿದೆ ಎಂದು ಸ್ಥಳೀಯ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳು ಘೋಷಿಸಿದ್ದಾರೆ.

    ಜೂನ್‌ನಲ್ಲಿ 20 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಪೋಲಿಯೊ ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಪೋಲಿಯೊ ಸೋಂಕಿಗೆ ಒಳಗಾದವರಲ್ಲಿ ಶೇ.95 ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೂ ಅವರು ಇನ್ನೂ ವೈರಸ್ ಅನ್ನು ಹರಡಬಹುದು ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಯುಎಸ್ ಅಧ್ಯಕ್ಷ ಜೋ ಬೈಡನ್‍ಗೆ ಕೋವಿಡ್ ಪಾಸಿಟಿವ್

    ಕೌಂಟಿ ಹೆಲ್ತ್ ಕಮಿಷನರ್ ಡಾ. ಪೆಟ್ರಿಸಿಯಾ ಷ್ನಾಬೆಲ್ ರಪ್ಪರ್ಟ್, ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕೌಂಟಿ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ನ್ಯೂಯಾರ್ಕ್‌ ರಾಜ್ಯ ಆರೋಗ್ಯ ಇಲಾಖೆ ಹಾಗೂ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಪೋಲಿಯೊ ನಿಯಂತ್ರಣಕ್ಕೆ ಲಸಿಕೆ ಕಂಡುಹಿಡಿದಿದ್ದರೂ ಅದನ್ನು ಸಂಪೂರ್ಣ ಮುಕ್ತ ಮಾಡಲು ಸಾಧ್ಯವಾಗಿಲ್ಲ. ನಿಮ್ಮ ಮಗು ಮತ್ತು ಸಮುದಾಯದ ಒಳಿತಿಗಾಗಿ ಸೂಕ್ತ ಕೆಲಸ ಮಾಡಿ. ನಿಮ್ಮ ಮಗುವಿಗೆ ಈಗಲೇ ಲಸಿಕೆ ಹಾಕಿಸಿ ಎಂದು ಕೌಂಟಿ ಎಕ್ಸಿಕ್ಯೂಟಿವ್ ಎಡ್ ಡೇ ತಿಳಿಸಿದ್ದಾರೆ. ಇದನ್ನೂ ಓದಿ: ಇಟಲಿ ಪ್ರಧಾನಿ ದ್ರಾಘಿ ರಾಜೀನಾಮೆ

    ರೋಗಿಯು ಡಿಸ್ಚಾರ್ಜ್ ಆಗಿದ್ದು, ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ವ್ಯಕ್ತಿಯು ನಿಲ್ಲಲು ಸಾಧ್ಯವಾಗುತ್ತದೆ. ಆದರೆ ನಡೆಯಲು ಕಷ್ಟಪಡುತ್ತಾನೆ ಎಂದು ತಿಳಿಸಿದೆ.

    ಪೋಲಿಯೊ ಒಂದು ವೈರಲ್ ಕಾಯಿಲೆಯಾಗಿದ್ದು, ನರಕೋಶ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇದು ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಪಾರ್ಶ್ವವಾಯು ಅಥವಾ ಸಾವಿಗೆ ಕಾರಣವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಪೋಲಿಯೋ ಬದಲು ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಆರೋಗ್ಯ ಸಿಬ್ಬಂದಿ!

    ಪೋಲಿಯೋ ಬದಲು ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಆರೋಗ್ಯ ಸಿಬ್ಬಂದಿ!

    – ಮೂವರು ಕಾರ್ಯಕರ್ತರ ಅಮಾನತು

    ಮುಂಬೈ: ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 12 ಮಂದಿ ಮಕ್ಕಳ ಸ್ಥಿತಿ ಗಂಭೀರವಾಗಿರುವ ಘಟನೆ ಮಹಾರಾಷ್ಟ್ರದ ಯುವತ್ಮಾಲ್ ಜಿಲ್ಲೆಯ ಕಾಪ್ಸಿಕೊಪ್ರಿ ಗ್ರಾಮವೊಂದರಲ್ಲಿ ನಡೆದಿದೆ. ಭನ್ಬೋರಾ ಪಿಎಚ್‍ಸಿ(ಪ್ರಾಥಮಿಕ ಆರೋಗ್ಯ ಕೇಂದ್ರ)ದಲ್ಲಿ ಭಾನುವಾರ 1-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ವ್ಯಾಕ್ಸಿನೇಷನ್ ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಮಕ್ಕಳಿಗೆ ಪೋಲಿಯೋ ಡ್ರಾಪ್ಸ್ ಬದಲು ಸ್ಯಾನಿಟೈಸರ್ ಹಾಕಿ ಆರೋಗ್ಯ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಪರಿಣಾಮ ಪರಿಣಾಮ 12 ಮಂದಿ ಮಕ್ಕಳ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆ ಸಂಬಂಧ ಮೂವರು ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

    ಗಂಭೀರ ಸ್ಥಿತಿಯಲ್ಲಿರುವ ಮಕ್ಕಳೆಲ್ಲರೂ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಸದ್ಯ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ ಮಕ್ಕಳ ಸ್ಥಿತಿ ಸುಧಾರಿಸುತ್ತಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಕ್ಕಳಿಗೆ ಪೋಲಿಯೊ ಹನಿಗಳ ಬದಲಿಗೆ ಎರಡು ಹನಿ ಸ್ಯಾನಿಟೈಸರ್ ನೀಡಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗಿದ್ದು, ಮಕ್ಕಳ ಸ್ಥಿತಿಗೆ ಕಾರಣರಾದ ಆರೋಗ್ಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಯವತ್ಮಾಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ತಿಳಿಸಿದ್ದಾರೆ.

  • ಮಗನಿಗೆ ಪೋಲಿಯೋ ಲಸಿಕೆ – ಖುಷಿ ವ್ಯಕ್ತಪಡಿಸಿದ ಮೇಘನಾ ರಾಜ್

    ಮಗನಿಗೆ ಪೋಲಿಯೋ ಲಸಿಕೆ – ಖುಷಿ ವ್ಯಕ್ತಪಡಿಸಿದ ಮೇಘನಾ ರಾಜ್

    ಬೆಂಗಳೂರು: ಚಿರಂಜೀವಿ ಸರ್ಜಾ ಪತ್ನಿ, ಮೇಘನಾ ರಾಜ್ ತನ್ನ ಮಗನಿಗೆ ಪೋಲಿಯೋ ಲಸಿಕೆ ಹಾಕಿಸಿದ್ದಾರೆ. ಮಗುವಿನ ಬೆರಳಿಗೆ ಹಾಕಿರುವ ಇಂಕ್‍ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.

    ಮೇಘನಾ ರಾಜ್ ತನ್ನ ಪುಟ್ಟ ಕಂದಮ್ಮನಿಗೆ ಪೋಲಿಯೋ ಹನಿ ಹಾಕಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಮಗುವಿನ ಪುಟ್ಟ ಕೈಗಳಿಗೆ ಮೊದಲ ಬಾರಿಗೆ ಇಂಕ್ ಸವರಲಾಗಿದ್ದು ಇದು ಪೋಲಿಯೋ ಹಾಕಿಸಿಕೊಂಡ ಗುರುತು ಎಂದು ಬರೆದುಕೊಂಡಿದ್ದಾರೆ.

    2020ರ ಅಕ್ಟೋಬರ್ 22ರಂದು ಮೇಘನಾ ರಾಜ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

    ಈ ಮೂಲಕ ಪತಿ ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಕ್ಕೆ ಸ್ವತಃ ಚಿರು ಮತ್ತೆ ಹುಟ್ಟಿ ಬಂದಷ್ಟು ಸಂತಸವಾಗಿತ್ತು. ಇದೀಗ ಮೇಘನಾ ರಾಜ್ ತಮ್ಮ ಗಂಡು ಮಗುವನ್ನು ಬಹಳ ಮುದ್ದಾಗಿ ಬೆಳೆಸುತ್ತಿದ್ದಾರೆ.

  • ಪೋಲಿಯೋ ಪೀಡಿತೆಯ ಬಾಳಲ್ಲಿ ಬೆಳಕು ಮೂಡಿಸಿದ ಸಂದೀಪ್

    ಪೋಲಿಯೋ ಪೀಡಿತೆಯ ಬಾಳಲ್ಲಿ ಬೆಳಕು ಮೂಡಿಸಿದ ಸಂದೀಪ್

    ಉಡುಪಿ: ಆಕೆ ನನ್ನ ಜೀವನ ಒಂಟಿಯಾಗಿಯೇ ಮುಗಿದು ಬಿಡುತ್ತೆ ಅಂದುಕೊಂಡಿದ್ದಳು. ಮದುವೆ ವಯಸ್ಸಾದ್ರೂ ಬಲಹೀನ ಕಾಲಿಗೆ ಶಕ್ತಿಕೊಡುವ ಜಂಟಿ ಜೀವನ ನನಗಿಲ್ಲ ಅಂತ ಮರುಗಿಕೊಂಡು ಕೂತಿದ್ದಳು. ಆದರೆ ದುಬೈ ವರನೊಬ್ಬ ಮಂಕಾದ ಆಕೆಯ ಬಾಳಿಗೆ ಹಸ್ತ ಚಾಚಿ ಹಸೆಮಣೆಗೇರಿಸಿದ್ದಾನೆ.

    ಹೌದು. ಉಡುಪಿಯ ಸುನಿತಾ ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳಲ್ಲಿ ಶಕ್ತಿಯಿಲ್ಲದ ಯುವತಿ. ಆದರೂ ಈಕೆಯ ಕಾಲಿಗೆ ಮದರಂಗಿ, ಹಣೆಗೆ ಬಾಸಿಂಗ ಕಟ್ಟುವ ಅವಕಾಶ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂದೀಪ್, ಸುನೀತಾ ಬಾಳಿಗೆ ಬೆಳಕು ನೀಡಿದ್ದಾರೆ.

    ಪಿಯುಸಿ ಓದಿ ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ದುಬೈನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುವ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ.

    ವಧು ಸುನಿತಾ ಸಹೋದರಿ ಅರುಣ ಮಾತನಾಡಿ, ನನ್ನ ತಂಗಿಗೆ ವಿವಾಹ ಭಾಗ್ಯ ಇಲ್ಲವೆಂದೇ ನಾವೆಲ್ಲ ಅಂದುಕೊಂಡಿದ್ದೆವು. ದೇವರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇದೆ. ಇದಕ್ಕಿಂತ ಇನ್ನೊಂದು ಖುಷಿ ಬೇರೆ ಇಲ್ಲ ಎಂದರು.

    ಉಡುಪಿಯ ಕರಂಬಳ್ಳಿ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಯುವತಿಯ ನ್ಯೂನ್ಯತೆ ಸಂದೀಪ್ ಗೆ ಅಡ್ಡಬರಲಿಲ್ಲ. ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ. ಕೊರಗುತ್ತಿದ್ದ ಸುನಿತಾ ಕುಟುಂಬ ಖುಷಿಯಾಗಿದೆ.

    ಸಂಬಂಧಿ ಸದಾಶಿವ ಮಾತನಾಡಿ, ಸುನಿತಾಳನ್ನು ಯಾರು ಕೂಡ ಮದುವೆಯಾಗಲು ಮುಂದೆ ಬರುತ್ತಿರಲಿಲ್ಲ. ದುಬೈಯಲ್ಲಿ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂದೀಪ್, ನಮ್ಮ ಕುಟುಂಬ ಸಂಪರ್ಕ ಮಾಡಿ ಮದುವೆಯಾಗುವುದಾಗಿ ಮುಂದೆ ಬಂದಿದ್ದಾರೆ. ನಮಗೆಲ್ಲ ಬಹಳ ಖುಷಿ ಎಂದರು.

    ಮದುವೆ ನಂತರ ಇಬ್ಬರೂ ದುಬೈಗೆ ಹಾರಲಿದ್ದಾರೆ. ನಾನೇನು ಸಾಧನೆ ಮಾಡಿಲ್ಲ. ಪ್ರಚಾರ ಬೇಡ. ನಾನು ಮಾತನಾಡಲ್ಲ ಅಂತ ಸಂದೀಪ್ ಹೇಳಿದ್ದಾರೆ. ಸುನಿತಾ ಹೊಸಜೀವನಕ್ಕೆ ಸಂದೀಪ್ ದೀಪ ಬೆಳಗಲಿ ಎಂಬೂದು ಎಲ್ಲರ ಹಾರೈಕೆ.

  • ಪೋಲಿಯೋ ಅಭಿಯಾನಕ್ಕೆ ಅಮಿತ್ ಶಾ ಚಾಲನೆ

    ಪೋಲಿಯೋ ಅಭಿಯಾನಕ್ಕೆ ಅಮಿತ್ ಶಾ ಚಾಲನೆ

    ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಳೆದ ರಾತ್ರಿ ಜನಿಸಿದ ಮೂವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

    ಹುಬ್ಬಳ್ಳಿಯಲ್ಲಿಂದು ಮುಂಜಾನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಗೆ ಅಮಿತ್ ಶಾ ಉಪಹಾರಕ್ಕೆ ಆಗಮಿಸಿದ್ದರು. ಈ ವೇಳೆ ಅಮಿತ್ ಶಾ ಅವರು ಜೋಶಿ ಮನೆಯಲ್ಲಿ ಮೂವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದರು.

    2 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಪೋಲಿಯೋ ಲಸಿಕೆ ಹಾಕಿದ ಅಮಿತ್ ಶಾ ಮತ್ತೊಂದು ಮಗುವಿಗೆ ಲಸಿಕೆ ಹಾಕಿ ಮಾತನಾಡಿಸಿ, ಮಕ್ಕಳನ್ನ ಮುದ್ದು ಮಾಡಿದರು. ಹುಬ್ಬಳ್ಳಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಶರೀಫಾ ಕಳ್ಳಿಭಾವಿ, ಶಂಕುತಲಾ ಸೊಂಳಕೆ, ಮರಿಯಮ್ಮ ಬಳ್ಳಾರಿ ಎಂಬ ತಾಯಂದಿರ ಮಕ್ಕಳಿಗೆ ಅಮಿತ್ ಶಾ ಪೋಲಿಯೋ ಲಸಿಕೆ ಹಾಕಿದ್ದು ವಿಶೇಷವಾಗಿತ್ತು.

    ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ನಂದಕುಮಾರ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

  • ಪೋಲಿಯೋ ಬಾಧಿಸಿದರೂ ಎದೆಗುಂದಲಿಲ್ಲ – ಛಲದಲ್ಲಿ ಬದುಕು ಕಟ್ಟಿಕೊಂಡ ವಿಕಲಚೇತನ

    ಪೋಲಿಯೋ ಬಾಧಿಸಿದರೂ ಎದೆಗುಂದಲಿಲ್ಲ – ಛಲದಲ್ಲಿ ಬದುಕು ಕಟ್ಟಿಕೊಂಡ ವಿಕಲಚೇತನ

    ದಾವಣಗೆರೆ: ಹುಟ್ಟಿದ 9 ತಿಂಗಳಿಗೆ ಪೊಲೀಯೋಗೆ ತುತ್ತಾಗಿದ್ದರೂ ಇಂದು 14 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆದು ದಾವಣಗೆರೆಯ ರೈತ ಎಲ್ಲರಿಗೂ ಆದರ್ಶವಾಗಿದ್ದಾರೆ.

    ದಾವಣಗೆರೆ ಜಿಲ್ಲೆಯ ಕುಕ್ಕವಾಡ ಗ್ರಾಮದ ನಿವಾಸಿ ಚಂದ್ರಶೇಖರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಚಂದ್ರಶೇಖರ್ ಕೋಲಿನ ಸಹಾಯದಿಂದ ತೋಟದಲ್ಲಿ ಕೆಲಸ ಮಾಡುತ್ತಾರೆ. ಪೊಲೀಯೋದಿಂದ ಬಳಲುತ್ತಿದ್ದರೂ, ಯಾವುದನ್ನೂ ಲೆಕ್ಕಿಸದೆ, ಯಾರ ಹಂಗಿಗೂ ಒಳಗಾಗದೆ ತನಗಿದ್ದ 14 ಎಕರೆ ಹೊಲದಲ್ಲಿ ವಿವಿಧ ಬೆಳೆ ಬೆಳೆದು ಜಿಲ್ಲೆಗೆ ಆದರ್ಶ ರೈತರಾಗಿದ್ದಾರೆ.

    ಇವರು ಬೆಳೆದ ಅಡಿಕೆ, ಮೆಣಸು, ಸೇರಿದಂತೆ ವಿವಿಧ ಬೆಳೆಗಳಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದ ಪ್ರಶಂಸೆ ಸಂದಿದೆ. ಸಂಘ ಸಂಸ್ಥೆಗಳು ಚಂದ್ರಶೇಖರ್ ಅವರಿಗೆ ಸನ್ಮಾನ ಮಾಡಿವೆ. ಕಾಳು ಮೆಣಸು ಬೆಳೆಗಾರರ ಸಂಘ ಕಟ್ಟಿ ಮಾರುಕಟ್ಟೆಯಲ್ಲಿ ಹೇಗೆ ಲಾಭಗಳಿಸಬೇಕು ಎಂದು ರೈತರಿಗೆ ಅರಿವು ಮೂಡಿಸುತ್ತಿದ್ದಾರೆ.

    ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ ತಮ್ಮಂದಿರು ಬೇರೆಯಾದರೂ, ಹೆತ್ತವರನ್ನ ಚಂದ್ರಶೇಖರ್ ಅವರೇ ನೋಡಿಕೊಳ್ಳುತ್ತಿದ್ದಾರೆ. ಮಡದಿ ಮತ್ತು ಮಕ್ಕಳು ಚಂದ್ರಶೇಖರ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

    https://www.youtube.com/watch?v=hf8JpkAo49w

  • ವಿಕಲ ಚೇತನರಾದರೂ ವಿಶಿಷ್ಟ ಚೈತನ್ಯ – ಅಂದದ ಬದುಕಿಗೆ ಅಂಗವಿಕಲತೆ ಅಡ್ಡಿಯಲ್ಲ ಅಂತ ತೋರಿಸಿದ ಸಾಧಕಿ

    ವಿಕಲ ಚೇತನರಾದರೂ ವಿಶಿಷ್ಟ ಚೈತನ್ಯ – ಅಂದದ ಬದುಕಿಗೆ ಅಂಗವಿಕಲತೆ ಅಡ್ಡಿಯಲ್ಲ ಅಂತ ತೋರಿಸಿದ ಸಾಧಕಿ

    ಚಿಕ್ಕಬಳ್ಳಾಪುರ: ಪೋಲಿಯೋದಿಂದ ಎರಡು ಕಾಲು ಕಳೆದುಕೊಂಡರೂ ರಹಮತ್ ಬದುಕುವ ಛಲ ಬಿಟ್ಟಿಲ್ಲ.

    ಬಾಲ್ಯದಲ್ಲೇ ಪೊಲೀಯೋ ರೋಗಕ್ಕೆ ತುತ್ತಾಗಿ ಎರಡೂ ಕಾಲನ್ನು ಕಳೆದುಕೊಂಡಿರೋ ರಹಮತ್ ಅವರೇ ನಮ್ಮ ಪಬ್ಲಿಕ್ ಹೀರೋ. ಇವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಹೈದರಾಲಿ ನಗರ ನಿವಾಸಿಯಾಗಿದ್ದು, ಕೈಗಳನ್ನೇ ಕಾಲುಗಳಂತೆ ನೆಲಕ್ಕೂರಿ ನಡೆಯೋ ಇವರಿಗೆ ಈ ಅಂಗವೈಕಲ್ಯವನ್ನೇ ಮೆಟ್ಟಿ ನಿಂತ ಖುಷಿ ಇದೆ.

    ರಹಮತ್ ಕೈಲಾಗದವಳು ಅಂತ ಯಾರೂ ನನ್ನತ್ತ ಬೊಟ್ಟು ತೋರಬಾರದು ಎಂದು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಅಗರ್‍ಬತ್ತಿ ತಯಾರಿಕೆ, ಮನೆ ಕೆಲಸದ ಮಾಡುತ್ತಲೇ ಆಟೋ ಖರೀದಿಸಿ, ಈಗ ಆಟೋದಲ್ಲಿ ಅಂದದ ಬದಕು ಕಟ್ಟಿಕೊಂಡಿದ್ದಾರೆ.

    ರಹಮತ್ ಭಿಕ್ಷೆ ಬೇಡೋದಕ್ಕಿಂತ ದುಡಿದು ತಿನ್ನೋದರಲ್ಲಿ ಸಂಭ್ರಮ ಪಡುತ್ತಿದ್ದಾರೆ. ಅಂಗವಿಕಲರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ತಾವೇ ಮುಂದೆ ನಿಂತು ಸಹಾಯ ಮಾಡ್ತಾರೆ. ಈ ಮೂಲಕ ಸಮಾಜಮುಖಿಯಾಗಿಯೂ ಗುರುತಿಸಿಕೊಂಡಿದ್ದಾರೆ.

    ಅಂಗವಿಕಲೆಯಾದರೂ ಅಬಲೆಯಲ್ಲ ಎಂದು ಬದುಕ್ತಿರೋ ರಹಮತ್ ನಿಜವಾಗಿಯೂ ಮಾದರಿಯೇ ಸರಿ.

    https://www.youtube.com/watch?v=Fe53ndu7-SE

  • 20 ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿರೋ ವ್ಯಕ್ತಿಗೆ ಬೇಕಿದೆ ಬೆಳಕು

    20 ವರ್ಷಗಳಿಂದ ಮೂವರು ಮಕ್ಕಳೊಂದಿಗೆ ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿರೋ ವ್ಯಕ್ತಿಗೆ ಬೇಕಿದೆ ಬೆಳಕು

    ತುಮಕೂರು: ಅಂಗೈ ಅಗಲ ಜಾಗದಲ್ಲಿ ಇವರು ಮಲಗಿದ್ದನ್ನು ಕಂಡರೆ ಎಂಥವರ ಮನಸ್ಸೂ ಕೂಡಾ ಕರಗದೇ ಇರಲಾರದು. ಮಂಜುನಾಥ್ ಎಂಬ ಅಂಗವಿಕಲ ಕಳೆದ 20 ವರ್ಷಗಳಿಂದ ತುಮಕೂರು ವಿಶ್ವವಿದ್ಯಾಲಯದ ಪಕ್ಕದ ಬಿ.ಎಚ್. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲೇ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.

    ಚಮ್ಮಾರಿಕೆ ವೃತ್ತಿ ಮಾಡುವ ಇವರು ಮಳೆ-ಬಿಸಿಲು-ಚಳಿ ಎನ್ನದೆ 5 ಅಡಿ ಅಗಲ, 6 ಅಡಿ ಉದ್ದ ಇರುವ ಪುಟ್ಟ ಅಂಗಡಿಯಲ್ಲೇ ಜೀವನ ಸಾಗಿಸ್ತಾ ಇದ್ದಾರೆ. ಮಕ್ಕಳು ಮೇಣದ ಬತ್ತಿಯ ಬೆಳಕಿನಲ್ಲಿ ಓದುವ ಪರಿಸ್ಥಿತಿ. ಪತ್ನಿ ಜಯಲಕ್ಷ್ಮಿ ಎರಡು ವರ್ಷದ ಹಿಂದೆ ತೀರಿಹೋಗಿದ್ದರಿಂದ ಸಂಸಾರದ ಸಂಪೂರ್ಣ ಭಾರ ಮಂಜುನಾಥರ ಮೇಲೆ ಬಿದ್ದಿದೆ. ಚಮ್ಮಾರಿಕೆ ವೃತ್ತಿಯಿಂದ ಬಂದಂತಹ ಅಲ್ಪಸ್ವಲ್ಪ ಹಣದಿಂದ ಮಕ್ಕಳನ್ನು ಓದಿಸ್ತಾರೆ.

    ಹುಟ್ಟುತ್ತಲೇ ಇವರ ಬಲಗಾಲು ಪೋಲಿಯೋಗೆ ತುತ್ತಾಗಿದೆ. ಹಾಗಾಗಿ ಓಡಾಡಲು ಹಾಗೂ ಕಷ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆ ಮಾಡಿಕೊಂಡಿದ್ದರೆ ಮಕ್ಕಳ ವಿದ್ಯಾಭ್ಯಾಸ, ಊಟ-ಬಟ್ಟೆಗೆ ಹಣ ಹೊಂದಿಸೋದು ಕಷ್ಟ. ಹಾಗಾಗಿ ಕಳೆದ 20 ವರ್ಷಗಳಿಂದ ಇದೇ ಪೆಟ್ಟಿಗೆ ಅಂಗಡಿಯಲ್ಲಿ ವಾಸ ಇದ್ದಾರೆ. ಆದ್ರೂ ಇವರಿಗೆ ಸರ್ಕಾರದ ಅಂಗವಿಕಲ ಭತ್ಯೆಯಾಗಲಿ, ಇನ್ನಿತರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ದಿಬ್ಬೂರಿನಲ್ಲಿ ಸರ್ಕಾರದಿಂದ ಕಟ್ಟಿದ ವಸತಿ ಸಂಕೀರ್ಣದಲ್ಲೂ ಇವರಿಗೆ ಮನೆ ಸಿಕ್ಕಿಲ್ಲ. ಸಚಿವ ಜಯಚಂದ್ರ, ಎಸ್ಪಿ, ಡಿಸಿಗಳು ಈ ಹೆದ್ದಾರಿಯಲ್ಲೇ ಸಂಚರಿಸ್ತಾರೆ. ಆದ್ರೂ ಈ ಬಡಪಾಯಿಯ ಕಷ್ಟ ಇವರ ಕಣ್ಣಿಗೆ ಬಿದ್ದಿಲ್ಲ.

    ಮಂಜುನಾಥರಿಗೆ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಅವರ ತಂದೆ-ತಾಯಿಗಳು ಕೂಡಾ ಬೀದಿ ಬದಿಯಲ್ಲಿ ಜೀವನ ಸಾಗಿಸ್ತಾ ಇದ್ರು. ಆದ್ರೆ ತಾನೂ ಹೇಗಾದ್ರು ಮಾಡಿ ಸೂರೊಂದನ್ನು ಕಟ್ಟಿಕೊಳ್ಳಬೇಕು ಎಂಬ ಹಂಬಲ ಇದೆ. ಜತೆಗೆ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಛಲವು ಇವರಲ್ಲಿದೆ. ಬಡತನ ಎಲ್ಲದಕ್ಕೂ ಅಡ್ಡಿಯಾಗಿದೆ.

    https://www.youtube.com/watch?v=xQxmghst0Ps

  • ಕಾಲು, ಸೊಂಟಕ್ಕೆ ಸ್ವಾಧೀನ ಇಲ್ಲದಿದ್ರೂ ಬದುಕುವ ಛಲ-ಬಡವರು, ನಿರ್ಗತಿಕರ ಪಾಲಿನ ಸೇವಕ

    ಕಾಲು, ಸೊಂಟಕ್ಕೆ ಸ್ವಾಧೀನ ಇಲ್ಲದಿದ್ರೂ ಬದುಕುವ ಛಲ-ಬಡವರು, ನಿರ್ಗತಿಕರ ಪಾಲಿನ ಸೇವಕ

    ನೆಲಮಂಗಲ: ಇವರು ಹುಟ್ಟು ವಿಕಲಚೇತನ. ಎರಡೂ ಕಾಲು ಹಾಗೂ ಸೊಂಟದ ಸ್ವಾಧೀನ ಇಲ್ಲ. ಆದರೆ ಅಂಗವಿಕಲತೆ ಸಮಾಜ ಸೇವೆ ಮಾಡೋದಕ್ಕೆ ಯಾವತ್ತೂ ಅಡ್ಡಿಯಾಗಿಲ್ಲ. ತೆವಳಿಕೊಂಡೇ ಓಡಾಡುತ್ತಾ ಸಮಾಜಸೇವೆ ಮಾಡೋ ನೆಲಮಂಗಲದ ಗಂಗಾಧರ್ ನಮ್ಮ ಪಬ್ಲಿಕ್ ಹೀರೋ.

    ಹೀಗೆ ರಸ್ತೆಯಲ್ಲಿ ತೆವಳಿಕೊಂಡು ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿರುವ ಈ ಯುವಕನ ಹೆಸರು ಗಂಗಾಧರ. 7ನೇ ತರಗತಿಯವರೆಗೆ ಓದಿದ್ದಾರೆ. ಆದರೆ ಪೊಲಿಯೋ ಅಟ್ಯಾಕ್ ಆಗಿ ಕಾಲು, ಹಾಗೂ ಸೊಂಟದ ಸ್ವಾಧೀನ ಇಲ್ಲ. ಮೂಲತಃ ಆಂಧ್ರ್ರದವರು ಆದರೆ ಅಪ್ಪಟ ಕನ್ನಡಿಗ. ಬೆಂಗಳೂರು ಹೊರವಲಯ ನೆಲಮಂಗಲದ ಚನ್ನಪ್ಪ ಕಲ್ಯಾಣಿಯ ನಿವಾಸಿ. ಯಾರು ಯಾವುದೇ ಕೆಲಸ ಹೇಳಿದ್ದರು ಚಾಚುತಪ್ಪದೇ ಮಾಡುತ್ತಾರೆ.

    ಜೀವನೋಪಾಯಕ್ಕಾಗಿ ವಾಟರ್ ಟ್ಯಾಂಕ್ ಹಾಗೂ ನೀರಿನ ಸಂಪ್ ಕ್ಲೀನ್ ಮಾಡಿಸುತ್ತಾರೆ. ಇವರ ಜೊತೆ 8 ಮಂದಿ ಯುವಕರ ತಂಡವಿದೆ. ಗಂಗಾಧರ್ ಅವರಿಗೆ ಬಡವರಿಗೆ, ಅಸಹಾಯಕರಿಗೆ, ಅವಿದ್ಯಾವಂತರಿಗೆ ಏನಾದರೂ ಸಹಾಯ ಮಾಡೋ ದೊಡ್ಡ ಮನಸ್ಸಿದೆ. ಹೀಗಾಗಿ ತಾಲೂಕು ಕಚೇರಿಯಲ್ಲಿ ಜನರಿಗೆ ಸಿಗಬೇಕಾದ ಪಾಣಿ, ಮುಟೇಷನ್‍ಗಳನ್ನು ಕೊಡಿಸುತ್ತಾರೆ. ವಿಧವಾ ವೇತನ, ವಿಕಲಚೇತನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸಲು ಸಹಾಯ ಮಾಡುತ್ತಾರೆ.

    ಒಟ್ಟಾರೆ ದುಡಿದು ಜೀವನ ನಡೆಸುವ ಹಂಬಲದಲ್ಲಿರುವ ಗಂಗಾಧರ್ ಯಾರ ಮುಂದೆನೂ ಕೈ ಚಾಚಿಲ್ಲ. ಇವರ ಸ್ವಾಭಿಮಾನ, ಛಲ ಬದುಕು ಕಟ್ಟಿಕೊಂಡ ಪರಿ ಇತರೆ ವಿಕಲಚೇತನರಿಗೆ ಮಾದರಿಯಾಗಿದೆ.