Tag: policewoman

  • ತಾಯಿ ಬಿಟ್ಟು ಹೋದ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ

    ತಾಯಿ ಬಿಟ್ಟು ಹೋದ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ

    ಹೈದರಾಬಾದ್: ತಾಯಿ ಬಿಟ್ಟು ಹೋಗಿದ್ದ ಪುಟ್ಟ ಮಗುವಿಗೆ ಆಂಧ್ರ ಪ್ರದೇಶದ ಮಹಿಳಾ ಪೇದೆಯೊಬ್ಬರು ಹಾಲುಣಿಸಿ ಮಾತೃ ಕಾಳಜಿ ತೋರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪೇದೆ ಕೆ.ಪ್ರಿಯಾಂಕ ಹಾಗೂ ಆಕೆಯ ಪತಿ ರವೀಂದರ್ ಮಗುವಿನ ಬಗ್ಗೆ ಕಾಳಜಿ ತೋರಿದ್ದಾರೆ. ಈ ಪೊಲೀಸ್ ದಂಪತಿಯ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಉಸ್ಮಾನಿಯಾ ಆಸ್ಪತ್ರೆ ಬಳಿ ಮದ್ಯದ ಮತ್ತಿನಲ್ಲಿದ್ದ ಶಬನಾ ಬೇಗಂ ಎಂಬ ಮಹಿಳೆ ತನ್ನ ಎರಡು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಗೆ ಕೊಟ್ಟು, ಕೆಲವೇ ನಿಮಿಷದಲ್ಲಿ ಮರಳಿ ಬರುವುದಾಗಿ ಹೇಳಿ ಹೋಗಿದ್ದಾಳೆ. ಆಕೆಯ ಮಾತು ನಂಬಿದ ವ್ಯಕ್ತಿ ಮಗುವನ್ನು ಎತ್ತಿಕೊಂಡಿದ್ದಾನೆ. ಆದರೆ ಮಗು ಕೊಟ್ಟು ಹೋದ ಮಹಿಳೆ ಬಹಳ ಸಮಯ ಕಳೆದರೂ ಮಹಿಳೆ ಬಾರದೇ ಇದ್ದಾಗ ಆತ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಿದ್ದಾನೆ. ಆದರೆ ಅದು ಕುಡಿಯದೇ ಜೋರಾಗಿ ಅಳಲು ಪ್ರಾರಂಭಿಸಿದೆ. ಮಗುವನ್ನು ತನ್ನ ಬಳಿ ಇಟ್ಟುಕೊಳ್ಳುವುದು ಅಪರಾಧ ಎಂದು ಅರಿತ ವ್ಯಕ್ತಿ ಸೋಮವಾರ ಸಮೀಪದ ಅಫ್ಜಲ್‍ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾನೆ.

    ಠಾಣೆಯಲ್ಲಿಯೂ ಮಗು ಅಳುವುದನ್ನು ಕಂಡ ಸಿಬ್ಬಂದಿ ಸಮಾಧಾನ ಮಾಡಲು ಹರಸಾಹಸ ಪಟ್ಟಿದ್ದಾರೆ. ಆದರೆ ಮಗು ಮಾತ್ರ ತನ್ನ ಅಳುವನ್ನು ನಿಲ್ಲಿಸಿರಲಿಲ್ಲ. ಹಾಲು ಕುಡಿಸಲು ಮುಂದಾದರೂ ಕುಡಿಯುತ್ತಿರಲಿಲ್ಲ. ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದರ್ ಎಂಬವವರು ಮಗುವಿನ ವಿಚಾರವಾಗಿ ಪತ್ನಿ ಪ್ರಿಯಾಂಕಾ ಅವರಿಗೆ ಹೇಳಿದ್ದಾರೆ. ಮಗುವಿನ ವಿಚಾರ ಕೇಳಿದ ಪ್ರಿಯಾಂಕ ರಾತ್ರಿ 10.30ರ ವೇಳೆಗೆ ಠಾಣೆಗೆ ಬಂದು ಮಗುವಿಗೆ ಹಾಲುಣಿಸಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv