Tag: police

  • ಬೆಂಗಳೂರಿನಲ್ಲಿ ಅಟ್ಟಾಡಿಸಿ ಯುವಕನ ಕೊಲೆ; ಪೊಲೀಸ್‌ ಠಾಣೆ ಕೂಗಳತೆ ದೂರದಲ್ಲೇ ಮರ್ಡರ್‌!

    ಬೆಂಗಳೂರಿನಲ್ಲಿ ಅಟ್ಟಾಡಿಸಿ ಯುವಕನ ಕೊಲೆ; ಪೊಲೀಸ್‌ ಠಾಣೆ ಕೂಗಳತೆ ದೂರದಲ್ಲೇ ಮರ್ಡರ್‌!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಹಾಡಹಗಲೇ ಯುವಕನ್ನ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹೊಡೆದು ರಸ್ತೆ ಮಧ್ಯೆ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

    ಶೇಷಾದ್ರಿಪುರಂ ಪೊಲೀಸ್ ಠಾಣೆಯ ಕೂಗಳೆತೆ ದೂರದಲ್ಲಿರುವ ರಸೆಲ್ದಾರ್ ಸ್ಟ್ರೀಟ್‌ನಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ್ ಗ್ಯಾಂಗ್ ಮನಬಂದಂತೆ ಲಾಂಗು ಮಚ್ಚುಗಳಿಂದ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದೆ. ಇದನ್ನೂ ಓದಿ: ರೇವಣ್ಣ ಸೂಚನೆ ಮೇರೆಗೆ ಸಂತ್ರಸ್ತೆ ಕಿಡ್ನ್ಯಾಪ್‌ – ರೇವಣ್ಣ, ಭವಾನಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ಅಜಿತ್ ಕುಮಾರ್ (27) ಕೊಲೆಯಾದ ಯುವಕ. ಅಜಿತ್ ಕುಮಾರ್ 2022 ರಲ್ಲಿ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ. ಇತ್ತೀಚಿಗಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದಿದ್ದ. ಬಳಿಕ ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಜಿತ್ ಕುಮಾರ್ ಊಟ ಮುಗಿಸಿಕೊಂಡು ರಸೆಲ್ದಾರ್ ಸ್ಟ್ರೀಟ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಹಂತಕರು ಬಂದು ಕೊಲೆ ಮಾಡಿದ್ದಾರೆ.

    ನೂರು ಮೀಟರ್ ಅಷ್ಟು ದೂರ ಅಟ್ಟಾಡಿಸಿ ತಲೆ ಭಾಗ ಸೇರಿ ಹಲವು ಕಡೆ ದಾಳಿ ಮಾಡಿ ಹತ್ಯೆಗೈದು ಹಂತಕರು ತಲೆಮರೆಸಿಕೊಂಡಿದ್ದಾರೆ. ಘಟನೆ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ರಾಜಾರೋಷವಾಗಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕದ್ದೊಯ್ದ ಕಳ್ಳರು

    ಕೊಲೆಯಾಗಿರುವ ವ್ಯಕ್ತಿ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹಾಗಾಗಿ ಹಳೆ ದ್ವೇಷ ಇಟ್ಟುಕೊಂಡವರೇ ಅಜಿತ್ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಿಶೇಷ ತಂಡಗಳನ್ನು ರಚಿಸಿದ್ದು, ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

    ದರ್ವೇಶ್ ಗ್ರೂಪ್‌ನಿಂದ ವಂಚನೆ – ಸಿಐಡಿ ದಾಳಿ ವೇಳೆ ಕೋಟ್ಯಂತರ ರೂ. ಪತ್ತೆ

    ರಾಯಚೂರು: ನಗರದ ದರ್ವೇಶ್ ಗ್ರೂಪ್‌ನ (Darvesh Group) ಬಹುಕೋಟಿ ವಂಚನೆ ಪ್ರಕರಣದ ಸಿಐಡಿ (CID) ತನಿಖೆ  ಚುರುಕುಗೊಂಡಿದೆ. ಪ್ರಮುಖ ಆರೋಪಿಗಳಾದ ಮೊಹಮ್ಮದ್ ಸುಜಾ, ಮಿಸ್ಕಿನ್, ಸೈಯದ್ ವಾಸಿಮ್ ಮನೆ ಮೇಲೆ ದಾಳಿ ಮಾಡಿ ತೀವ್ರ ಶೋಧ ಮಾಡಿದ್ದಾರೆ.

    ಸಿಐಡಿ ಎಸ್‌ಪಿ ಪುರುಷೋತ್ತಮ್ ನೇತೃತ್ವದಲ್ಲಿ ತನಿಖೆ ನಡೆದಿದ್ದು ಮೂವರು ಆರೋಪಿಗಳ ಮನೆಗಳಲ್ಲಿ ಶೋಧ ಕಾರ್ಯ ಮಾಡಲಾಗಿದೆ. ಪರಿಶೀಲನೆ ವೇಳೆ ಕೋಟ್ಯಂತರ ರೂ. ನಗದು ಹಣ ಪತ್ತೆಯಾಗಿದೆ. ರಾಯಚೂರಿನ (Raichuru) ಎಲ್‌ಬಿಎಸ್ ನಗರದಲ್ಲಿರುವ ಆರೋಪಿ ವಾಸಿಮ್ ಮನೆಯಲ್ಲಿ ಹಣ ಪತ್ತೆಯಾಗಿದೆ. ಹೂಡಿಕೆದಾರರ ಬಾಂಡ್‌, ಅಕ್ರಮ ಕುರಿತ ಇತರ ದಾಖಲೆಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಮನೆಗೆ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದ ವಿನೋದ್ ರಾಜ್ 

    ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಅಜರ್, ಬಬ್ಲೂ, ಮೋಸಿನ್ ಹಾಗೂ ಫಾರುಕ್‌ ಸೇರಿ ನಾಲ್ಕು ಜನರನ್ನ ಇಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಪುನಃ ಆರೋಪಿಗಳನ್ನ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ಪಂದ್ಯ ಗೆದ್ದ ಲಕ್ಷ್ಯಗೆ ಶಾಕ್‌ – ಗೆದ್ದರೂ ಪಂದ್ಯ ಡಿಲೀಟ್‌

    ಸಿಐಡಿ ಎಸ್‌ಪಿ ಪುರುಷೋತ್ತಮ, ಡಿವೈಎಸ್‌ಪಿಗಳಾದ ಯತಿರಾಜ್‌, ಶ್ರೀನಿವಾಸ ನೇತೃತ್ವದ ಆರು ಜನ ಅಧಿಕಾರಿಗಳ ತಂಡ ದರ್ವೇಶ್ ಗ್ರೂಪ್‌ನ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನ ನಡೆಸುತ್ತಿದೆ.

     

  • ಬೆಂಗ್ಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ – ಆಹಾರ ಸುರಕ್ಷತಾ ಅಧಿಕಾರಿಗಳಿಂದ ಸ್ಯಾಂಪಲ್ಸ್‌ ಸಂಗ್ರಹ

    ಬೆಂಗ್ಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ – ಆಹಾರ ಸುರಕ್ಷತಾ ಅಧಿಕಾರಿಗಳಿಂದ ಸ್ಯಾಂಪಲ್ಸ್‌ ಸಂಗ್ರಹ

    – ಟೆಸ್ಟಿಂಗ್‌ಗೆ ಹೈದರಾಬಾದ್‌ ಪ್ರಯೋಗಾಲಯಕ್ಕೆ ಮಾಂಸ ಮಾದರಿ ರವಾನೆ
    – ಯಾವ ಪ್ರಾಣಿಯ ಮಾಂಸ ಅಂತ ಪತ್ತೆ ಹಚ್ಚುವುದು ಹೇಗೆ?

    ಬೆಂಗಳೂರು: ನಗರದಲ್ಲಿ ನಾಯಿ ಮಾಂಸ (Dog Meat) ದಂಧೆ ಆರೋಪ ಕೇಳಿ ಬಂದಿದೆ. ರಾಜಸ್ಥಾನದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದಕೂಡಲೇ ಪೊಲೀಸರು ಹಾಗೂ ಆಹಾರ ಸುರಕ್ಷತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಕ್ಸ್‌ನಲ್ಲಿ ತರಿಸಲಾಗಿದ್ದ ಮಾಂಸವನ್ನ ಜಪ್ತಿ ಮಾಡಿದ್ದು, ಅಂಗಾಂಗ ಮಾದರಿಗಳನ್ನ ಹೈದರಾಬಾದ್‌ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.

    ಆಹಾರ ಸುರಕ್ಷತೆ ಅಧಿಕಾರಿಗಳು ಹೇಳಿದ್ದೇನು?
    ಆಹಾರ ಸುರಕ್ಷತೆ ಅಧಿಕಾರಿ ಸುಬ್ರಮಣ್ಯ ಮಾತನಾಡಿ, ನಾವು ಒಟ್ಟು ನಾಲ್ಕು ಬಾಕ್ಸ್ ಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ್ದೇವೆ. ವಿವಿಧ ಭಾಗಗಳಿಂದ ಮಾಂಸವನ್ನು ಸ್ಯಾಂಪಲ್ ಆಗಿ ಪಡೆದಿದ್ದೇವೆ. ಇದನ್ನು ವಿಸಿಕ್ಸ್ ಎನ್ನುವ ಲ್ಯಾಬ್‌ಗೆ ರವಾನಿಸಿ ಪರೀಕ್ಷಿಸಲಾಗುತ್ತೆ. ಇದರ ವರದಿ ಬರೋದಕ್ಕೆ 14 ದಿನಗಳ ಕಾಲಾವಕಾಶ ಬೇಕು. ಮೇಲ್ನೋಟಕ್ಕೆ ನೋಡಿ ಇದು ಯಾವ ಮಾಂಸ ಎಂದು ಹೇಳಲಾಗುವುದಿಲ್ಲ. ಈ ಮಾಂಸದ ಗುಣಮಟ್ಟ ಹಾಗೂ ಯಾವುದರ ಮಾಂಸ ಎಂಬ ದೃಢೀಕರಣ ಟೆಸ್ಟಿಂಗ್ ನಲ್ಲಿ ಗೊತ್ತಾಗುತ್ತೆ. ಒಂದು ವೇಳೆ ಇದು ದೂರುದಾರರ ದೂರಿನಂತೆ ನಾಯಿ ಮಾಂಸ ಆಗಿದ್ದರೇ ಮಾಲೀಕನ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕುರಿ ಮಾಂಸವೇ ಆಗಿದ್ದರೆ ದೂರುದಾರನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಹೇಳಿದ್ದಾರೆ.

    ಬಳಿಕ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು, ಸದ್ಯಕ್ಕೆ ಬೆಂಗಳೂರಿನಲ್ಲಿ ಮಾಂಸ ಯಾವ ಪ್ರಾಣಿದು ಅಂತ ಪತ್ತೆ ಮಾಡೋಕೆ ಲ್ಯಾಬ್ ಇಲ್ಲ. ಆದಕಾರಣ ಕುರಿ ಮಾಂಸನಾ, ಬೇರೆ ಮಾಂಸನಾ? ಪತ್ತೆ ಮಾಡಲು ಹೈದರಾಬಾದ್‌ಗೆ ಮಾಂಸದ ಮಾದರಿ ಸಂಗ್ರಹವನ್ನ ರವಾನೆ ಮಾಡಲಾಗುತ್ತದೆ. ಕನಿಷ್ಠ 8 ರಿಂದ 10 ದಿನದ ಬಳಿಕ ಮಾಂಸ. ಯಾವ ಪ್ರಾಣಿಯದ್ದು ಅಂತ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

    ಯಾವ ಪ್ರಾಣಿಯದ್ದು ಮಾಂಸ ಅಂತ ಹೇಗೆ ಗೊತ್ತಾಗಲಿದೆ?
    * ಮಾಂಸದ ಪೀಸ್‌ಗಳಿಗೆ ಕೆಮಿಕಲ್ ಹಾಕಿದಾಗ ಕಲರ್ ಬರುತ್ತದೆ.
    * ಕುರಿ ಮಾಂಸ, ಮೇಕೆ ಮಾಂಸ ಮತ್ತು ನಾಯಿ ಮಾಂಸ ಆದರೆ ಬೇರೆ ಬೇರೆ ಕಲರ್ ಬರಲಿದೆ.
    * ಕಲರ್ ಮುಖಾಂತರ ಯಾವ ಪ್ರಾಣಿಯ ಮಾಂಸ ಅಂತ ತಜ್ಞರು ಪತ್ತೆಮಾಡುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

    ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡ ಆರೋಪಿದ್ದರು. ಶುಕ್ರವಾರ ರಾತ್ರಿ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಭಾರೀ ಹೈಡ್ರಾಮ ಸೃಷ್ಟಿಸಿದ್ದರು. ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪೊಲೀಸರು ಪುನೀತ್‌ರ ಕೆರೆಹಳ್ಳಿಯನ್ನ ವಶಕ್ಕೆ ಪಡೆದರು.

  • ರಾಜಸ್ಥಾನದಿಂದ ನಾಯಿ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಆರೋಪ – ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಹೈಡ್ರಾಮ

    ರಾಜಸ್ಥಾನದಿಂದ ನಾಯಿ ಮಾಂಸ ತಂದು ಬೆಂಗಳೂರಿನಲ್ಲಿ ಮಾರಾಟ ಆರೋಪ – ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಹೈಡ್ರಾಮ

    ಬೆಂಗಳೂರು: ನಗರದಲ್ಲಿ ನಾಯಿ ಮಾಂಸ (Dog Meat) ದಂಧೆ ಆರೋಪ ಕೇಳಿ ಬಂದಿದೆ. ರಾಜಸ್ಥಾನದಿಂದ (Rajasthan) ಬೆಂಗಳೂರು (Bengaluru) ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ತಂಡ ಆರೋಪಿಸಿದೆ. ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಸಿ, ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ.

    ಇದೇ ವೇಳೆ ಸ್ಥಳಕ್ಕಾಗಮಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜೊತೆಗೂ ವಾಕ್ಸಮರ ನಡೆಸಿದ್ದಾರೆ. ಆರೋಪ ಅಲ್ಲಗಳೆದಿರುವ ಅಬ್ದುಲ್ ರಜಾಕ್, 2 ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 12 ವರ್ಷದಿಂದ ಈ ವ್ಯವಹಾರ ನಡೀತಿದೆ. ರಾಜಸ್ಥಾನ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅಂತಿದ್ದಾರೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡ್ತೇನೆ ಅಂದಿದ್ದಾರೆ. ಅಬ್ದುಲ್ ರಜಾಕ್ ಸಂಬಂಧಿ ಮಾಂಸ ಸಾಗಾಟದ ಲೈಸೆನ್ಸ್ ಪಡೆದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ: ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ರಾಗಾ ದಿಢೀರ್ ಭೇಟಿ

     

    ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಪುನೀತ್‌ ಕೆರೆಹಳ್ಳಿ, ಜೈಪುರದಿಂದ ಫಿಶ್ ಮಾಂಸ ಅಂತ ಹೇಳಿ ಬೇರೆ ಮಾಂಸ ತಂದಿದ್ದಾರೆ. ಬೇರೆ ಮಾಂಸದ ಜೊತೆ ನಾಯಿ ಮಾಂಸವನ್ನೂ ತಂದಿದ್ದಾರೆ. ಇದು ರಸಲ್ ಮಾರ್ಕೆಟ್‌ಗೆ ಇದು ಹೋಗುತ್ತೆ ಅಂತಾ ಆರೋಪಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೂ ಏನನ್ನೂ ನಿರಾಕರಿಸಿಲ್ಲ, ಹಣ ತರಬೇಕೆಂದು ತೆರಿಗೆ ಹೆಚ್ಚಿಸಿಲ್ಲ: ನಿರ್ಮಲಾ ಸೀತಾರಾಮನ್‌

    ಮೀನು ಅಂತಾ ಬೋರ್ಡ್ ಹಾಕಿಕೊಂಡು ಮಾಂಸ ಸಾಗಾಟ ಮಾಡ್ತಿದ್ದಾರೆ. ಮೀನು ತಂದಿದ್ದರೇ ಮೀನು ಅಂತಾ ಬೋರ್ಡ್‌ ಇರಬೇಕಿತ್ತು. ಮಾಂಸ ತಂದು ಅದಕ್ಕೆ ಮೀನು ಅಂತಾ ಯಾಕೇ ಬೋರ್ಡ್‌ ಹಾಕಿದ್ದಾರೆ. ನಾಯಿ ಮಾಂಸವೇ ಇರಬೇಕು ಅನ್ನೋ ಅನುಮಾನ, ಬಿಬಿಎಂಪಿ ಅಧಿಕಾರಿಗಳು ಬರಬೇಕು. ಇಲ್ಲೇ ಮಾಂಸ ಸೀಜ್ ಮಾಡಬೇಕು. ಯಾವ ಮಾಂಸ ಅಂತಾ ಗೊತ್ತಾಗಬೇಕು. ಕನಿಷ್ಠ 4 ದಿನದ ಹಿಂದೆ ಕಟ್ ಮಾಡಿರೋ ಮಾಂಸವಿದು. ಇದನ್ನ ಐಸ್ ಬಾಕ್ಸ್‌ನಲ್ಲಿ ತಂದಿರೋದಕ್ಕೆ ಅನುಮತಿ ಇದೆಯಾ? ಇದರ ಬಗ್ಗೆ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ: ಪರಮೇಶ್ವರ್

    ಇದು ಕುರಿ ಮಾಂಸ ಅನ್ನೋದರ ಬಗ್ಗೆ ಅನುಮಾನ ಇದೆ, ಮರಿ ಮಾಂಸವನ್ನ 550 ರೂಪಾಯಿಗೆ ಹೇಗೆ ಕೊಡಲು ಸಾಧ್ಯ? ಅಬ್ದುಲ್ ರಜಾಕ್ ಇದು ನಂದು ಅಂತಾ ಬಂದಿದ್ದಾರೆ. ಅದ್ರೇ ಬಿಲ್ ಬಂದಿರೋದು ಬೇರೆಯವರ ಹೆಸರಿನಲ್ಲಿ. ಕೇವಲ 550 ರೂಪಾಯಿಗೆ ಮಾಂಸ ಗ್ರಾಹಕರಿಗೆ ನೀಡ್ತಾರೆ ಅಂದ್ರೆ ಇವರಿಗೆ ಎಷ್ಟಕ್ಕೆ ಸಿಗುತ್ತೆ? ಎಂದೆಲ್ಲಾ ಪುನೀತ್‌ ಕೆರೆಹಳ್ಳಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ – ಪರಮೇಶ್ವರ್ ತಿರುಗೇಟು

  • ಬೆಂಗ್ಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ ಮೃತದೇಹ ಪತ್ತೆ ಮಾಡಿದ್ದೇ ರೋಚಕ

    ಬೆಂಗ್ಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ ಮೃತದೇಹ ಪತ್ತೆ ಮಾಡಿದ್ದೇ ರೋಚಕ

    – ಬರೋಬ್ಬರಿ 250 ಸಿಸಿಟಿವಿ ಪರಿಶೀಲನೆ

    ಬೆಂಗಳೂರು: ಇಲ್ಲಿನ ಮಡಿವಾಳ (Madiwala) ಪೊಲೀಸ್ ಕಾನ್ಸ್‌ಟೇಬಲ್ (Police Constable) ಆತ್ಮಹತ್ಯೆ ಪ್ರಕರಣದಲ್ಲಿ ಶಿವರಾಜ್ ಮೃತದೇಹ ಪತ್ತೆ ಮಾಡಿದ್ದೇ ರೋಚಕವಾಗಿದೆ. ಶಿವರಾಜ್ ಮೃತದೇಹ ಪತ್ತೆ ಮಾಡೋಕೆ ಬರೋಬ್ಬರಿ 250 ಸಿಸಿಟಿವಿಯನ್ನು ಮಡಿವಾಳ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

    ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್‌ಗಾಗಿ ಹುಡುಕಾಟ ನಡೆದಿತ್ತು. ಆದರೆ ಮಡಿವಾಳ ಪೊಲೀಸ್ ಸಿಬ್ಬಂದಿಯಾದ ಹಿನ್ನೆಲೆ ಇನ್ಸ್ಪೆಕ್ಟರ್ ಸೂಚನೆ ಮೇರೆಗೆ ಮಡಿವಾಳ ಪೊಲೀಸರೇ ಹುಡುಕಾಟ ಶುರು ಮಾಡಿದ್ದರು. ಸುಬ್ರಹ್ಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ವರೆಗೂ ಸಿಸಿಟಿವಿ ಪರಿಶೀಲನೆ ಮಾಡಲಾಗಿತ್ತು. ಸತತ ಐದು ದಿನಗಳಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಮಡಿವಾಳ ಪೊಲೀಸರು ಕೊನೆಗೆ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ಗೆ ಬಂದು ತಲುಪಿದ್ದಾರೆ. ಈ ವೇಳೆ ಮೆಟ್ರೊ ಸ್ಟೇಷನ್ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದ ಶಿವರಾಜ್ ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಒಳಗೆ ನಡೆದು ಬಂದಿದ್ದರು. ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

    ಶಿವರಾಜ್ ಬೆಂಗಳೂರು ವಿವಿ ಒಳಗೆ ನಡೆದು ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಬೆಂಗಳೂರು ವಿವಿ ಆವರಣದೊಳಗೆ ಹುಡುಕಾಡಿದ್ದ ಸಂದರ್ಭ ಆವರಣದ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಶಿವರಾಜ್ ಅವರದು ಕೊಲೆಯಲ್ಲ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿರೋದು ಬೆಳಕಿಗೆ ಬಂದಿದೆ. ಸಿಸಿಟಿಯಲ್ಲಿ ಒಬ್ಬನೇ ಬಂದಿರುವುದರಿಂದ ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಇದನ್ನೂ ಓದಿ: ಮಂಗಳೂರು ಜೈಲಿನಲ್ಲಿ ಮಾರಾಮಾರಿ- ಇಬ್ಬರಿಗೆ ಗಾಯ

  • ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ: ಪರಮೇಶ್ವರ್‌

    ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ: ಪರಮೇಶ್ವರ್‌

    ಬೆಂಗಳೂರು: ಕಾನ್‌ಸ್ಟೇಬಲ್‌ನಿಂದ (Constable) ಹಿಡಿದು ಅಧಿಕಾರಿಗಳವರೆಗೂ ಹೊಸ ಅಪರಾಧ ಕಾನೂನಿನ (New Criminal Laws) ಬಗ್ಗೆ ತರಬೇತಿ ನೀಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್‌ (Parameshwara) ಹೇಳಿದ್ದಾರೆ.

    ಇಂದಿನಿಂದ 3 ದೇಶಿ ಕಾನೂನು ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಅಪ್ಲಿಕೇಶನ್‌ ಸಿದ್ಧಪಡಿಸಿದ್ದೇವೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಅಪ್ಲಿಕೇಶನ್‌ ನೋಡಿಕೊಂಡು ಕೆಲಸ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು

     

    ಇದು ಒಂದು ರೀತಿಯಲ್ಲಿ ಟೆಸ್ಟಿಂಗ್ ಸಮಯ. ಇಡೀ ದೇಶದಲ್ಲಿ ಜಾರಿಯಾಗಿದೆ. ಪ್ರತಿಕ್ರಿಯೆ ನೋಡಿಕೊಂಡು ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು. ಇವತ್ತಿನಿಂದ ಯಾವೆಲ್ಲ ಪ್ರಕರಣಗಳು ದಾಖಲಾಗುತ್ತದೋ ಅವೆಲ್ಲವೂ ಈ ಹೊಸ ಕಾನೂನಿನ ಅಡಿ ದಾಖಲಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ

    ಹೊಸ ಕಾನೂನುಗಳ ಪರಿಣಾಮ ಏನು ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸ್ವಲ್ಪ ದಿನಗಳ ನಂತರ ಇದರ ಸಕ್ಸಸ್ ಬಗ್ಗೆ ಗೊತ್ತಾಗಲಿದೆ ಎಂದರು.

  • ವಾಲ್ಮೀಕಿ ನಿಗಮ ಹಗರಣ; ನಕಲಿ ಅಕೌಂಟ್‌ನ ಅಸಲಿ ಮಾಲೀಕರ ಪತ್ತೆ ಮಾಡಿದ ಸಿಐಡಿ

    ವಾಲ್ಮೀಕಿ ನಿಗಮ ಹಗರಣ; ನಕಲಿ ಅಕೌಂಟ್‌ನ ಅಸಲಿ ಮಾಲೀಕರ ಪತ್ತೆ ಮಾಡಿದ ಸಿಐಡಿ

    – ಹಗರಣದ ಮತ್ತೋರ್ವ ಆರೋಪಿ ಬಂಧನ

    ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Development Corporation) ಹಗರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.

    ಶ್ರೀನಿವಾಸ್ ಬಂಧಿತ ಆರೋಪಿ. ನಕಲಿ ಅಕೌಂಟ್‌ಗಳನ್ನು ಸೃಷ್ಟಿಸಿ ವಹಿವಾಟುಗಳನ್ನು ಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ. ಕೋಟಿ ಕೋಟಿ ಹಣ ವಹಿವಾಟು ಮಾಡಲು ಆರೋಪಿ ಸಹಾಯ ಮಾಡಿದ್ದ ಎನ್ನಲಾಗಿದೆ.

    ಹಗರಣ ಪ್ರಕರಣದ ಆರೋಪಿಗಳು ಒಂದೊಂದೇ ಸತ್ಯ ಬಾಯಿಬಿಡುತ್ತಿದ್ದಾರೆ. ವಾಲ್ಮೀಕಿ ನಿಗಮದ ಕೋಟ್ಯಂತರ ಹಣವನ್ನು ವಹಿವಾಟಿಗೆ 193 ಅಕೌಂಟ್‌ಗಳನ್ನು ಬಳಸಿಕೊಂಡಿದ್ದರು ಎನ್ನುವುದು ಬಯಲಾಗಿದೆ. ಹೈದರಾಬಾದ್ ಮೂಲದ ಸತ್ಯನಾರಾಯಣ ವರ್ಮ ಈ ಎಲ್ಲಾ ಯೋಜನೆಗೆ ಮಾಸ್ಟರ್ ಮೈಂಡ್ ಆಗಿದ್ದ.

    ಖಾತೆಯಿಂದ ಹೊರಗೆ ಬಂದಿದ್ದ ಹಣವನ್ನು 193 ನಕಲಿ ಖಾತೆಗಳಿಗೆ ವಹಿವಾಟು ಮಾಡಿದ್ದಾರೆ. ಬಾರ್‌ನ ಮಾಲೀಕರ ಅಕೌಂಟ್‌ಗಳಿಗೆ ಹಣ ಕಳುಹಿಸಿ ಪರ್ಸಂಟೇಜ್ ಲೆಕ್ಕದಲ್ಲಿ ಕೋಟಿ ಕೋಟಿ ಹಣವನ್ನು ಡ್ರಾ ಮಾಡಿ ಕೊಟ್ಟಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ಹಗರಣದ ತನಿಖೆಯಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ. ಯಾರದ್ದೋ ಕಂಪನಿ ಹೆಸರಿನಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಅಸಲಿ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ವಂಚನೆ ಮಾಡಲಾಗಿದೆ. ಅದೇ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು ಮಾಡಲಾಗಿದೆ. ನಕಲಿ ಅಕೌಂಟ್‌ನ ಅಸಲಿ ಮಾಲೀಕರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

    ಅಸಲಿ ಮಾಲೀಕರನ್ನ ಕರೆಸಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಅಸಲಿ ಮಾಲೀಕರಿಗೆ ತಮ್ಮ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವುದು ಗೊತ್ತಿಲ್ಲ. ಅದರಲ್ಲೂ ಆ ಖಾತೆಯಲ್ಲಿ ಕೋಟಿ ಕೋಟಿ ಹಣ ಇತ್ತೆ ಎಂದು ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಸಲಿ ಕಂಪನಿ ಮಾಲೀಕರಿಂದ ನಾಲ್ಕು ಎಫ್‌ಐಆರ್ ದಾಖಲಾಗಿದೆ.

    ವಿಜಯ್ ಕೃಷ್ಣ ಹಾಗೂ ನವೀನ್‌ರಿಂದ ಕೆಪಿ ಅಗ್ರಹಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜೊತೆಗೆ ವಿಜಯನಗರ ಠಾಣೆಯಲ್ಲಿ ರಾಘವೆಂದ್ರ ಹಾಗೂ ರೇಖಾ ಎಂಬವರು ದೂರು ದಾಖಲಿಸಿದ್ದಾರೆ. ಒಂದೊಂದು ಅಕೌಂಟ್‌ನಲ್ಲಿ ಸುಮಾರು 5 ಕೋಟಿಯಂತೆ 20 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದೆ. ಹಣ ವರ್ಗಾವಣೆ ಮತ್ತೆ ಆ ಖಾತೆಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಈ ಖಾತೆಗಳಿಗೆ ವಾಲ್ಮೀಕಿ ನಿಗಮದ ಅಧಿಕೃತ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಸದ್ಯ ಈ ನಾಲ್ಕು ಎಫ್‌ಐಆರ್‌ಗಳ ಮೂಲ ಕಂಪನಿ ಮಾಲೀಕರು ಮಾಡಿಸಿದ್ದು, ಈ ಎಫ್‌ಐಆರ್‌ಗಳು ಎಸ್‌ಐಟಿಗೆ ವರ್ಗಾವಣೆಯಾಗಿದೆ.

  • ಗೃಹ ಸಚಿವರ ತವರಿನಲ್ಲೇ ಮಕ್ಕಳ ಮಾರಾಟ ಜಾಲ – ಮಾರಾಟವಾಗಿದ್ದ 9 ಮಕ್ಕಳು ಪತ್ತೆ

    ಗೃಹ ಸಚಿವರ ತವರಿನಲ್ಲೇ ಮಕ್ಕಳ ಮಾರಾಟ ಜಾಲ – ಮಾರಾಟವಾಗಿದ್ದ 9 ಮಕ್ಕಳು ಪತ್ತೆ

    ತುಮಕೂರು: ಕಿಡ್ನಾಪ್ ಮಾಡಿ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ (Child Sale) ಜಾಲವನ್ನು ತುಮಕೂರು ಪೊಲೀಸರು (Tumakuru Police) ಯಶಸ್ವಿಯಾಗಿ ಭೇದಿಸಿದ್ದು, ಮಾರಾಟವಾಗಿದ್ದ 9 ಮಕ್ಕಳನ್ನು ಪತ್ತೆಹಚ್ಚಿದ್ದಾರೆ.

    ಗುಬ್ಬಿಯಲ್ಲಿ 11 ತಿಂಗಳ ಮಗು ಕಿಡ್ನಾಪ್ (Kidnap) ಪ್ರಕರಣದ ಬೆನ್ನತ್ತಿದಾಗ ಈ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 5 ಮಂದಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ 1 ಮಗು ಸಾವನ್ನಪ್ಪಿದ್ದು, 3 ಮಕ್ಕಳಿಗಾಗಿ ಶೋಧ ನಡೆಸುತ್ತಿದ್ದಾರೆ. ಗರ್ಭ ಧರಿಸಿದ ಅವಿವಾಹಿತ ಮಹಿಳೆಯರು ಹಾಗೂ ಅನೈತಿಕ ಗರ್ಭ ಧರಿಸಿದವರಿಂದ ಮಕ್ಕಳನ್ನು ಖರೀದಿ ಮಾಡಿ 2ರಿಂದ 3 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇದನ್ನೂ ಓದಿ: ಮಾಜಿ ಮಂತ್ರಿ ನಾಗೇಂದ್ರ ಆಪ್ತರಿಂದ ಬೆದರಿಕೆ – ಜಡ್ಜ್‌ ಮುಂದೆಯೇ ಹೇಳಿಕೆ ನೀಡಿದ ಪ್ರಮುಖ ಆರೋಪಿ

    ಹುಳಿಯಾರಲ್ಲಿ ಮೆಹಬೂಬ್ ಪಾಷಾ ಎಂಬಾತನ ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ಕೊಳ್ಳುವವರನ್ನು ಗರ್ಭಿಣಿಯರೆಂದು ದಾಖಲಿಸಿಕೊಂಡು ಅವರಿಗೆ ಹುಟ್ಟಿದ ಮಗುವೆಂದು ಸರ್ಟಿಫಿಕೇಟ್ ನೀಡಲಾಗುತ್ತಿತ್ತು. ಎಸ್‌ಪಿ ಕೆ.ವಿ.ಅಶೋಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ನಡೆಸಿದ್ದು, ಮಹೇಶ್ ಯುಡಿ, ಮೆಹಬೂಬ್ ಪಾಷಾ, ಕೆ.ಎನ್.ರಾಮಕೃಷ್ಣ, ಹನುಮಂತರಾಜು, ಮುಬಾರಕ್ ಪಾಷಾ, ಪೂರ್ಣಿಮಾ ಎನ್. ಹಾಗೂ ಸೌಜನ್ಯ ಎಂಬವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಸಿಎಂ ಆದಮೇಲೆ ಒಂದು ಡಜನ್ ಡಿಸಿಎಂ ಮಾಡಲಿ: ಶಾಸಕ ಬಸವರಾಜು ಶಿವಗಂಗಾ

    ಇನ್ನು ಪ್ರಕರಣದಲ್ಲಿ ಡಾಕ್ಟರ್ ಹಾಗೂ ನರ್ಸ್‌ಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಬಂಧಿತರ ಪೈಕಿ ಪೂರ್ಣಿಮಾ ದೊಡ್ಡೇರಿ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿದ್ದು, ಸೌಜನ್ಯ ಶಿರಾನಗರದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೌಜನ್ಯ ಮೇಲೆ ಈ ಹಿಂದೆ ಭ್ರೂಣ ಹತ್ಯೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಾರಿಗೆ ಬಸ್ ಡಿಕ್ಕಿ: ಕೆಪಿಟಿಸಿಎಲ್ ಇಂಜಿನಿಯರ್ ದುರ್ಮರಣ

  • ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು

    ಬಿಯರ್ ಬಾಟಲಿಯಿಂದ ಹಲ್ಲೆಗೈದು ಎಸ್ಕೇಪ್ ಆಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು

    ತುಮಕೂರು: ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಬಿಯರ್ ಬಾಟೆಲ್‍ನಿಂದ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಮಧುಗಿರಿ ಪೊಲೀಸರು (Madhugiri Police) ಗುಂಡೇಟು ನೀಡಿದ್ದಾರೆ.

    ಬಂಧಿತ ಆರೋಪಿಯನ್ನು ಆಂಧ್ರಪ್ರದೇಶದ ಹಿಂದೂಪುರ ಮೂಲದ ರಿಜ್ವಾನ್ ಎಂದು ಗುರುತಿಸಲಾಗಿದೆ. ಆರೋಪಿ ಒಟ್ಟು 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಳೆದ ಒಂದು ವಾರದ ಹಿಂದೆ ಎ1 ಆರೋಪಿ ಚಿನ್ನಾ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಇಂದು (ಜೂ.24) ಖಚಿತ ಮಾಹಿತಿ ಮೇರೆಗೆ ಪೊಲಿಸರು ಎ2 ಆರೋಪಿ ರಿಜ್ವಾನ್‍ನನ್ನ ಈಜೀಹಳ್ಳಿ ಕ್ರಾಸ್ ಬಳಿ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ, ಪೊಲೀಸ್ ಸಿಬ್ಬಂದಿ ರಮೇಶ್ ಎಂಬವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಪವಿತ್ರಾಗೌಡಗೆ ಕೋಟಿ ಕೋಟಿ ಹಣ ಕೊಟ್ಟಿದ್ರಾ ಸೌಂದರ್ಯ ಜಗದೀಶ್?

    ಬಳಿಕ ಆರೋಪಿಗೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಆರೋಪಿ ಶರಣಾಗಲು ನಿರಾಕರಿಸಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಒಟ್ಟು 15ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿದ್ದ. ಮಧುಗಿರಿ 3, ಮಿಡಗೇಶಿ 4, ಬಡವನಹಳ್ಳಿ 2, ಕೊರಟಗೆರೆ 1, ಕೊಡಿಗೇನಹಳ್ಳಿ 2 ಮಡಕಶಿರಾ 1, ಪಟ್ಟನಾಯಕನಹಳ್ಳಿ 2, ಗೌರಿಬಿದನೂರು 1 ಸೇರಿದಂತೆ ಹಲವು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರತ್ಯೇಕವಾಗಿ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.

    ಗಾಯಾಳು ಪೊಲೀಸ್ ಸಿಬ್ಬಂದಿ ರಮೇಶ್‍ಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಹಾಗೂ ಆರೋಪಿ ರಿಜ್ವಾನ್‍ಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕೇಸ್‌ – ಪ್ರತ್ಯೇಕ ತನಿಖೆ ಆರಂಭಿಸಿದ ED

  • ರಾಹುಲ್‌ ವಿರುದ್ಧ ವಿಡಿಯೋ – ಯೂಟ್ಯೂಬರ್‌ ಬಂಧನಕ್ಕೆ ನೋಯ್ಡಾಗೆ ತೆರಳಿ ಬರಿಗೈಯಲ್ಲಿ ಕರ್ನಾಟಕ ಪೊಲೀಸರು ವಾಪಸ್‌

    ರಾಹುಲ್‌ ವಿರುದ್ಧ ವಿಡಿಯೋ – ಯೂಟ್ಯೂಬರ್‌ ಬಂಧನಕ್ಕೆ ನೋಯ್ಡಾಗೆ ತೆರಳಿ ಬರಿಗೈಯಲ್ಲಿ ಕರ್ನಾಟಕ ಪೊಲೀಸರು ವಾಪಸ್‌

    – ಪತ್ರಕರ್ತ ಅಜಿತ್‌ ಭಾರ್ತಿ ಮನೆ ಮುಂದೆ ಭಾರೀ ಹೈಡ್ರಾಮಾ

    ಲಕ್ನೋ: ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಅವಹೇಳನಕಾರಿ ವಿಡಿಯೋ ಮಾಡಿದ್ದಕ್ಕೆ ಕರ್ನಾಟಕ ಪೊಲೀಸರು (Karnataka Police) ಯೂಟ್ಯೂಬರ್‌ನನ್ನು ಬಂಧಿಸಲು ಉತ್ತರ ಪ್ರದೇಶದ ನೋಯ್ಡಾಕ್ಕೆ ತೆರಳಿದಾಗ ಭಾರೀ ಹೈಡ್ರಾಮಾ ನಡೆದಿದೆ.

    ಪತ್ರಕರ್ತ ಅಜಿತ್‌ ಭಾರ್ತಿ (Ajeet Bharti) ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಇಂದು ನೋಟಿಸ್‌ ನೀಡಲು ಮೂವರು ಕರ್ನಾಟಕ ಪೊಲೀಸರು ನೋಯ್ಡಾ ನಿವಾಸಕ್ಕೆ ಆಗಮಿಸಿದ್ದರು. ಅಜಿತ್ ಭಾರ್ತಿ ಮನೆ ಮುಂದೆ ಕಾದ ಕರ್ನಾಟಕದ ಪೊಲೀಸರು ನೋಯ್ಡಾ ಪೊಲೀಸರ ಮಧ್ಯಪ್ರವೇಶದ ಬಳಿಕ ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ‌.

    ನಡೆದಿದ್ದು ಏನು?
    ಅಜಿತ್ ಭಾರ್ತಿ ನಿವಾಸಕ್ಕೆ ತೆರಳಿದ್ದ ಪೊಲೀಸರು ನೋಟಿಸ್ ನೀಡಲು ಆಗಮಿಸಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರನ್ನು ಮನೆಯೊಳಗೆ ಸೇರಿಸದ ಅಜಿತ್ ಭಾರ್ತಿ ಸ್ಥಳಿಯ ಠಾಣೆಗೆ ಮಾಹಿತಿ ನೀಡಿ ಅಕ್ರಮವಾಗಿ ಬಂಧಿಸಲು ಕರ್ನಾಟಕ ಪೊಲೀಸ್ ಆಗಮಿಸಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರನ್ನು ಟ್ಯಾಗ್ ಮಾಡಿದ್ದಾರೆ.

    ಸ್ಥಳಕ್ಕೆ ಬಂದ ನೋಯ್ಡಾ ಪೊಲೀಸರು ಕರ್ನಾಟಕ ಪೊಲೀಸರನ್ನು ವಿಚಾರಣೆ ನಡೆಸಿದ್ದಾರೆ. ನಮಗೆ ಮಾಹಿತಿ ನೀಡದೇ ಬಂಧಿಸಲು ಆಗಮಿಸಿದ್ದಕ್ಕೆ  ಅಜಿತ್ ಭಾರ್ತಿ ಬಂಧನಕ್ಕೆ ಅನುಮತಿ ನೀಡದೇ ವಾಪಸ್‌ ಕಳುಹಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಜಿತ್ ಭಾರ್ತಿ, ಗ್ಯಾರಂಟಿ ಯೋಜನೆ ನೀಡಲು ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ. ಆದರೆ ನನ್ನನ್ನು ಬಂಧಿಸಲು ನೊಯ್ಡಾವರೆಗೂ ಬಂದಿದ್ದಾರೆ. ಇದೊಂದು ಸಣ್ಣ ಪ್ರಕರಣ ಆದರೆ ಬೆದರಿಸುವ ಮೂಲಕ ಮಾಧ್ಯಮವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಧ್ಯಪ್ರವೇಶದ ಮಾಡಿದ ನೊಯ್ಡಾ ಪೊಲೀಸ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಜೈಲುಪಾಲಾದ ಅಮ್ಮನ ಕಂಡು ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ ಮಗಳು

    ಕರ್ನಾಟಕ ಪೊಲೀಸರು ಅಜಿತ್‌ ಭಾರ್ತಿಗೆ ನೋಟಿಸ್‌ ನೀಡಿ 7 ದಿನದ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತೆರಳಿದರು. ಈಗ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಪೊಲೀಸರ ನಡೆಯನ್ನು ಹಲವು ಮಂದಿ ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಕರ್ನಾಟಕ ಪೊಲೀಸರನ್ನು ಪ್ರಶ್ನಿಸುತ್ತಿರುವ ನೋಯ್ಡಾ ಪೊಲೀಸರು

    ಕರ್ನಾಟಕ ಪೊಲೀಸರನ್ನು ಪ್ರಶ್ನಿಸುತ್ತಿರುವ ನೋಯ್ಡಾ ಪೊಲೀಸರು

    ಏನಿದು ವಿಡಿಯೋ ವಿವಾದ?
    ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಜಿತ್‌ ಭಾರ್ತಿ ಅವರು ಅಯೋಧ್ಯೆಯ ರಾಮ ಮಂದಿರ (Ram Mandir) ನಿರ್ಮಾಣಗೊಂಡ ಜಾಗದಲ್ಲಿ ಬಾಬ್ರಿ ಮಸೀದಿಯನ್ನು (Babri Masjid) ಮರಳಿ ತರುವುದು ರಾಹುಲ್ ಗಾಂಧಿಯವರ ಭವಿಷ್ಯದ ಯೋಜನೆ ಎಂದು ಹೇಳಿದ್ದರು.

    ಈ ಹೇಳಿಕೆಯ ಆಧಾರದ ಮೇಲೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಕಾರ್ಯದರ್ಶಿಯಾಗಿರುವ ಬಿಕೆ ಬೋಪಣ್ಣ ಅವರ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 153ಎ ಮತ್ತು 505 (2) ಅಡಿ ಎಫ್‌ಐಆರ್ ದಾಖಲಾಗಿತ್ತು.