Tag: police

  • ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

    ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು

    – ಹಲ್ಲೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

    ಮೈಸೂರು: ಕೊಟ್ಟ ಸಾಲ (Loan) ಮರಳಿ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ ನಡೆದಿದೆ.

    ಮೂಡಲಕೊಪ್ಪಲು ನಿವಾಸಿ ನಾಗೇಶ್ ಹಲ್ಲೆಗೊಳಗಾದವರು. ಜಯಣ್ಣ, ಸುದೀಪ್ ಹಾಗೂ ಲೋಕೇಶ್ ಎಂಬವರು ಹಲ್ಲೆ ಮಾಡಿದ್ದಾರೆ. ಆರೋಪಿಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ನಾಗೇಶ್‍ರಿಂದ ಕಾಡನಕೊಪ್ಪಲಿನ ಜಯಣ್ಣ ಎಂಬಾತ 25,000 ರೂ. ಹಣ ಸಾಲ ಪಡೆದಿದ್ದ. ಬಳಿಕ 15 ಸಾವಿರ ಹಣ ವಾಪಸ್ ಕೊಟ್ಟು 10,000 ರೂ. ಬಾಕಿ ಉಳಿಸಿಕೊಂಡಿದ್ದ. ಗ್ರಾಮದ ಬಾರ್‌ ಬಳಿ ಜಯಣ್ಣ ಸಿಕ್ಕಾಗ ಬಾಕಿ ಹಣವನ್ನು ನಾಗೇಶ್ ಕೇಳಿದ್ದಾರೆ. ಈ ವೇಳೆ ಜಯಣ್ಣ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

    ಈ ಸಂಬಂಧ ಗಾಯಾಳು ನಾಗೇಶ್ ಪುತ್ರ ಅಭಿಷೇಕ್ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು (Police) ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಮತ್ತೆ ಮುಜುಗರ ಭೀತಿ – ಮಾಧ್ಯಮಗಳನ್ನು ಹೊರಗಿಟ್ಟು ನಾಗಮಂಗಲದಲ್ಲಿ ಶಾಂತಿ ಸಭೆಗೆ ಪ್ಲ್ಯಾನ್‌

    ಮತ್ತೆ ಮುಜುಗರ ಭೀತಿ – ಮಾಧ್ಯಮಗಳನ್ನು ಹೊರಗಿಟ್ಟು ನಾಗಮಂಗಲದಲ್ಲಿ ಶಾಂತಿ ಸಭೆಗೆ ಪ್ಲ್ಯಾನ್‌

    ಮಂಡ್ಯ: ನಾಗಮಂಗಲದಲ್ಲಿ (Nagamangala) ಇಂದು ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಸಭೆಗೆ ಮಾಧ್ಯಮಗಳನ್ನ (Media) ನಿರ್ಬಂಧಿಸಲು ಪ್ಲ್ಯಾನ್‌ ಮಾಡಲಾಗಿದೆ. ಈ ಮೂಲಕ ಓಲೈಕೆ ರಾಜಕಾರಣಕ್ಕೆ ಸರ್ಕಾರ ಮುಂದಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ಜಿಲ್ಲಾಡಳಿತ, ಉಸ್ತುವಾರಿ ಸಚಿವರ ಈ ನಡೆ‌ ಮತ್ತೆ ಅನುಮಾನಕ್ಕೆ ಕಾರಣವಾಗಿದೆ. ಸಭೆಯಲ್ಲಿ ವಸ್ತು ಸ್ಥಿತಿ ಬಯಲಾಗಬಹುದು ಎಂಬ ಭಯ‌ಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಜಿಲ್ಲಾಡಳಿತ ಮುಂದಾಗಿದ್ಯಾ ಎಂಬ ಪ್ರಶ್ನೆ  ಎದ್ದಿದೆ. ಇದನ್ನೂ ಓದಿ: ನಾಗಮಂಗಲ ಕೋಮು ಗಲಭೆ ತಡೆಯೋ ಅವಕಾಶವಿದ್ರೂ ವಿಫಲವಾದ ಇಲಾಖೆಗಳು

     

    ಯಾಕೆ ನಿರ್ಬಂಧ?
    ಗುರುವಾರ ನಾಗಮಂಗಲಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಂಧಿತರ ಕುಟುಂಬಸ್ಥರು ಚಲುವರಾಯಸ್ವಾಮಿಗೆ ಫುಲ್ ಕ್ಲಾಸ್‌ ತೆಗೆದುಕೊಂಡಿದ್ದರು.‌ ಕಲ್ಲು, ಪೆಟ್ರೋಲ್ ಬಾಂಬ್ ಎಸೆದವರನ್ನು ಬಂಧಿಸಿಲ್ಲ‌‌. ತಪ್ಪನ್ನೇ ಮಾಡದ ಅಮಾಯಕರನ್ನು ಯಾಕೆ ಬಂಧಿಸಿದ್ದೀರಿ? ಇಷ್ಟೊಂದು ಒಲೈಕೆ ರಾಜಕರಾಣ ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಜನರು ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾದ ಚಲುವರಾಯಸ್ವಾಮಿಗೆ ಭಾರೀ ಮುಜುಗರವಾಗಿತ್ತು.

    ಇಂದು ನಡೆಯುವ ಸಭೆಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ವಿರುದ್ಧ ಜನರು ಮತ್ತೆ ತರಾಟೆ ತೆಗೆದುಕೊಳ್ಳುವ ಸಾಧ್ಯತೆ‌ಯಿದೆ. ಬಂಧಿತ ಕುಟುಂಬಸ್ಥರು ಸಹ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸುವುದು ಖಚಿತ. ಆ ಮುಜುಗರ ತಪ್ಪಿಸಿಕೊಳ್ಳಲು ಮಾಧ್ಯಮಗಳನ್ನ ಸಭೆಯಿಂದ ದೂರ ಇಡಲು ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

     

  • ನಾಗಮಂಗಲ ಕೋಮು ಗಲಭೆ ತಡೆಯೋ ಅವಕಾಶವಿದ್ರೂ ವಿಫಲವಾದ ಇಲಾಖೆಗಳು

    ನಾಗಮಂಗಲ ಕೋಮು ಗಲಭೆ ತಡೆಯೋ ಅವಕಾಶವಿದ್ರೂ ವಿಫಲವಾದ ಇಲಾಖೆಗಳು

    ಬೆಂಗಳೂರು: ನಾಗಮಂಗಲದಲ್ಲಿ (Nagamangala) ಗಣೇಶ ವಿಸರ್ಜನೆ (Ganesh Procession) ವೇಳೆ ನಡೆದ ಕೋಮು ಗಲಭೆಗೆ ಪೊಲೀಸ್‌ (Police) ಮತ್ತು ಗುಪ್ತಚರ ಇಲಾಖೆ (Intelligence Bureau) ವೈಫಲ್ಯವೇ ಕಾರಣ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

    ಹೌದು. ಕಳೆದ ವರ್ಷವೇ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ನಡೆದಿದ್ದ ಕಾರಣ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕಿತ್ತು. ಆದರೆ ಮುನ್ನೆಚ್ಚರಿಕೆ ವಹಿಸದ ಕಾರಣ ಈ ಗಲಭೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ವೈಫಲ್ಯ ಹೇಗೆ?
    ನಾಗಮಂಗಲದ ಸ್ಥಿತಿಗತಿ ಗಮನಿಸಿದರೆ ಇದು ಪೂರ್ವನಿಯೋಜಿತ ಕೃತ್ಯ ಎನ್ನುವುದು ತಿಳಿಯುತ್ತದೆ. ಇದಕ್ಕೆ ಸಾಕ್ಷಿ ಪೆಟ್ರೋಲ್ ಬಾಂಬ್, ಕಲ್ಲು, ತಲವಾರ್‌ಗಳು. ಭಾರೀ ಪ್ರಮಾಣದಲ್ಲಿ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಇದರ ಜೊತೆ ಪೆಟ್ರೋಲ್‌ ಬಾಂಬ್‌ ಸಂಗ್ರಹಿಸುವ ಮೂಲಕ ಮೊದಲೇ ಗಲಭೆಗೆ ಬೇಕಾದ ವಸ್ತುಗಳನ್ನು ರಹಸ್ಯವಾಗಿ ಇಟ್ಟುಕೊಂಡಿದ್ದರು. ಜೊತೆಗೆ ಭಾರೀ ಸಂಖ್ಯೆಯಲ್ಲಿ ಯುವಕರು ಮಸೀದಿ ರಸ್ತೆಯಲ್ಲಿ ಸೇರಿದ್ದರು. ಇಷ್ಟೆಲ್ಲಾ ಪೂರ್ವಭಾವಿ ಸಿದ್ಧತೆ ಮಾಡಿದ್ದರೂ ಗುಪ್ತಚರ ಇಲಾಖೆ ಈ ವಿಚಾರ ತಿಳಿಯುವಲ್ಲಿ ವಿಫಲವಾಗಿತ್ತು. ಈ ಪೂರ್ವಭಾವಿ ವಿಚಾರ ಗೊತ್ತಾಗಿದ್ದರೆ ಗಲಭೆಯನ್ನು ಮಟ್ಟ ಹಾಕಬಹುದಿತ್ತು. ಇದನ್ನೂ ಓದಿ: ನಾನಿನ್ನೂ ವೆಬ್‌ಸೀರಿಸ್‌ ನೋಡಿಲ್ಲ, ಮಾಡುವವರು ಸರ್ಕಾರವನ್ನು ಒಳ್ಳೆಯ ರೀತಿಯಲ್ಲಿ ತೋರಿಸಲ್ಲ: ಎಸ್.ಜೈಶಂಕರ್

    ಗಲಭೆಗೂ ಮುನ್ನವೇ ಪೊಲೀಸ್ ಇಲಾಖೆ ಮೈ ಮರೆತಿತ್ತು. ಬದ್ರಿಕೊಪ್ಪಲು ಗ್ರಾಮದಿಂದ ಹೊರಟ ಮೆರವಣಿಗೆ ಮಂಡ್ಯ ವೃತ್ತಕ್ಕೆ ಬಂದಾಗ ಅನ್ಯಕೋಮಿನ ಯುವಕರು ಕ್ಯಾತೆ ಎತ್ತಿದ್ದರು. ಈ ವೇಳೆ ಮೆರವಣಿಗೆಯ ದಾರಿಯನ್ನು ಬದಲಿಸಿದರು. ಈ ಸಂದರ್ಭದಲ್ಲೇ ಪ್ರತಿಭಟನಾ ಯುವಕರಿಗೆ ತಿಳಿ ಹೇಳಬಹುದಿತ್ತು. ಆದರೆ ಪೊಲೀಸರು ಆ ಕೆಲಸ ಮಾಡಿರಲಿಲ್ಲ.

    ಪೊಲೀಸರು ಮತ್ತೆ ಮಸೀದಿ ಇರುವ ರಸ್ತೆಯಲ್ಲಿ ಮೆರವಣಿಗೆಗೆ ಅವಕಾಶ ನೀಡಿದ್ದರು. ಈ ವೇಳೆ ಜೈ ಗಣಪತಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದಾಗಿ ಪ್ರತಿಯಾಗಿ ಅಲ್ಲಾ-ಹು ಅಕ್ಬರ್ ಘೋಷಣೆ ಕೂಗಿ ಕಲ್ಲು ತೂರಿದ್ದಾರೆ.

    ಕಳೆದ ಬಾರಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಯಾವ ದಾರಿಯಲ್ಲಿ ಮೆರವಣಿಗೆ ಹೋಗುತ್ತದೆ? ಎಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜಿಸಬೇಕು ಎನ್ನುವುದು ತಿಳಿದಿರಬೇಕಿತ್ತು. ಎರಡನೆಯದಾಗಿ ಪ್ರತಿಭಟನಾ ಯುವಕರಿಗೆ ಪೊಲೀಸರು ತಿಳಿ ಹೇಳಬೇಕಿತ್ತು. ಪೊಲೀಸರು ಈ ಎರಡು ಕೆಲಸ ಸರಿಯಾಗಿ ಮಾಡಿದ್ದರೆ ಗಲಭೆ ಆಗುತ್ತಿರಲಿಲ್ಲ ಎಂಬ ಮಾತು ಕೇಳಿ ಬಂದಿದೆ.

    ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್‌ ಅಧಿಕಾರಿ ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ಅವರನ್ನು ಎತ್ತಗಂಡಿ ಮಾಡಲಾಗಿದೆ. ಇದರ ಜೊತೆ ನಾಗಮಂಗಲ ‌ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಅಶೋಕ್ ಕುಮಾರ್ (Ashok Kumar) ಅವರನ್ನು ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ ಅವರು ಅಮಾನತು ಮಾಡಿ ಆದೇಶ ಪ್ರಕಟಿಸಿದ್ದಾರೆ.

     

  • ಕ್ಷುಲ್ಲಕ ಕಾರಣಕ್ಕೆ ವಾಟರ್‌ಮ್ಯಾನ್‌ಗೆ ಚಾಕು ಇರಿದು ಹತ್ಯೆಗೈದ ರೌಡಿಶೀಟರ್‌

    ಕ್ಷುಲ್ಲಕ ಕಾರಣಕ್ಕೆ ವಾಟರ್‌ಮ್ಯಾನ್‌ಗೆ ಚಾಕು ಇರಿದು ಹತ್ಯೆಗೈದ ರೌಡಿಶೀಟರ್‌

    ಹಾಸನ: ಪಾನಮತ್ತನಾಗಿ ಬಂದ ರೌಡಿಶೀಟರ್‌ ವಾಟರ್‌ಮ್ಯಾನ್‌ಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗಣೇಶ್ (27) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಚೀಕನಹಳ್ಳಿ ಗ್ರಾಮದಲ್ಲಿ ವಾಟರ್‌ಮ್ಯಾನ್ ಆಗಿದ್ದ ಗಣೇಶ್ ಶುಕ್ರವಾರ ರಾತ್ರಿ ಗ್ರಾಮದ ಆಟೋ ನಿಲ್ದಾಣದ ಬಳಿ ನಿಂತಿದ್ದ. ಈ ವೇಳೆ ಕಂಠ ಪೂರ್ತಿ ಕುಡಿದು ಸ್ಥಳಕ್ಕೆ ಬಂದಿದ್ದ ರೌಡಿಶೀಟರ್ ಮಧು ಕ್ಷುಲ್ಲಕ ಕಾರಣಕ್ಕೆ ಗಣೇಶ್ ಜೊತೆ ಜಗಳ ತೆಗೆದಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಬಳಿಕ ಆರೋಪಿ ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಣೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದ ರೌಡಿಶೀಟರ್ ಮಧು ಗೌರಿ-ಗಣೇಶ ಹಬ್ಬಕ್ಕೆ ಗ್ರಾಮಕ್ಕೆ ಬಂದಿದ್ದ. ಹತ್ಯೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಸ್ಫೋಟಕ್ಕೆ ಉಗ್ರರ ಸಂಚು – ಮಲ್ಲೇಶ್ವರ ಬಿಜೆಪಿ ಕಚೇರಿಗೆ ಪೊಲೀಸ್‌ ಭದ್ರತೆ ಹೆಚ್ಚಳ

    ಸ್ಫೋಟಕ್ಕೆ ಉಗ್ರರ ಸಂಚು – ಮಲ್ಲೇಶ್ವರ ಬಿಜೆಪಿ ಕಚೇರಿಗೆ ಪೊಲೀಸ್‌ ಭದ್ರತೆ ಹೆಚ್ಚಳ

    ಬೆಂಗಳೂರು: ಸುರಕ್ಷತೆ ದೃಷ್ಟಿಯಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ (Malleswaram BJP Office) ಪೊಲೀಸ್ ಭದ್ರತೆಯನ್ನು (Police Security) ಹೆಚ್ಚಿಸಲಾಗಿದೆ.

    ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟಕ್ಕೆ ಉಗ್ರರ ಸಂಚು ರೂಪಿಸಿದ ವಿಚಾರ ರಾಷ್ಟ್ರೀಯ ತನಿಖಾ ದಳ (NIA) ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾದ ಬೆನ್ನಲ್ಲೇ ಬಿಜೆಪಿ ಕಚೇರಿ ಎದುರು ಮೆಟಲ್ ಡಿಟೆಕ್ಟರ್ (Metal Detector) ಅಳವಡಿಕೆ ಮಾಡಲಾಗಿದೆ.

    ಮೆಟಲ್ ಡಿಟೆಕ್ಟರ್ ಮೂಲಕವೇ ಬಿಜೆಪಿ ಕಚೇರಿಗೆ ಭೇಟಿಗೆ ಬರುವವರ ಒಳ ಪ್ರವೇಶ ಕಡ್ಡಾಯ ಮಾಡಲಾಗಿದೆ. ಇದರ ಜತೆಗೆ ಪ್ರವೇಶ ದ್ವಾರದ ಎದುರು 3-4 ಜನ ಹೆಚ್ಚುವರಿ ಪೊಲೀಸರನ್ನು ನಿಯೋಜಿಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು| ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ – ವೈದ್ಯರ ಮೇಲೆ ಮಹಿಳೆ ಚಪ್ಪಲಿಯಿಂದ ಹಲ್ಲೆ

    ನಿತ್ಯ ಬಿಜೆಪಿ ಕಚೇರಿಗೆ ಮಲ್ಲೇಶ್ವರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್‌ ಭೇಟಿ ಮಾಡಿ ಭದ್ರತೆ ಪರಿಶೀಲನೆ ಮಾಡಲಿದ್ದಾರೆ.

    ಯಾಕೆ ಭದ್ರತೆ?
    ಅಯೋಧ್ಯೆಯಲ್ಲಿ ಬಾಲ ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ದಿನವೇ ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸುವ ಸಂಚನ್ನು ಐಸಿಸ್‌ ಶಂಕಿತ ಉಗ್ರರು ರೂಪಿಸಿದ್ದರು ಎಂಬ ಶಾಕಿಂಗ್‌ ವಿಚಾರ ಎನ್‌ಐಎ ತನಿಖೆಯಲ್ಲಿ ಬಯಲಾಗಿತ್ತು.

    ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ (Rameshwaram Cafe Blast Case) ಪ್ರಕರಣದ ಆರೋಪಿಗಳಾದ ಮುಸ್ಸಾವಿರ್‌ ಹುಸೇನ್‌ ಶಾಜಿದ್‌, ಅಬ್ದುಲ್‌ ಮತೀನ್‌ ತಾಹ, ಮಾಜ್‌ ಮುನೀರ್‌ ಅಹಮದ್‌, ಮುಜಾಮಿಲ್‌ ಷರೀಫ್‌ ವಿರುದ್ಧ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ.

     

  • ಕಾರ್ಕಳ ರೇಪ್‌ ಕೇಸ್ ತನಿಖೆ ಚುರುಕು – ಮಾದಕ ವಸ್ತುಗಳ ಜಾಲದ ಬೆನ್ನು ಬಿದ್ದ ಖಾಕಿ

    ಕಾರ್ಕಳ ರೇಪ್‌ ಕೇಸ್ ತನಿಖೆ ಚುರುಕು – ಮಾದಕ ವಸ್ತುಗಳ ಜಾಲದ ಬೆನ್ನು ಬಿದ್ದ ಖಾಕಿ

    ಉಡುಪಿ: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣಕ್ಕೆ (Karkala Rape) ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರೆದಿದೆ. ಕೇಸ್ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳು ಜೈಲು ಕಂಬಿ ಎಣಿಸುತ್ತಿದ್ದು, ತನಿಖಾಧಿಕಾರಿಗಳು ಮಾದಕ ಜಾಲದ ಬೆನ್ನು ಬಿದ್ದಿದ್ದಾರೆ. ಡ್ರಗ್ಸ್ (Drugs) ಜಾಲದ ಸರಪಳಿ ಕಾರ್ಕಳದಿಂದ ಬೆಂಗಳೂರು, ಬೆಂಗಳೂರಿಂದ ಆಂಧ್ರಪ್ರದೇಶಕ್ಕೆ ಲಿಂಕ್ ಆಗಿರುವುದು ಬಯಲಾಗಿದೆ. ಹಾಗಾಗಿ ಹಣ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆಗಳ ಮೇಲೆ ಪೊಲೀಸರು ನಿಗಾ ಇಟ್ಟು ತನಿಖೆ ಮುಂದುವರಿಸಿದ್ದಾರೆ.

    ಆರೋಪಿ ಅಲ್ತಾಫ್‌ನ ಬೆನ್ನತ್ತಿದ್ದ ಪೊಲೀಸರಿಗೆ ಡ್ರಗ್ಸ್ ಜಾಲದ ನಿಜ ದರ್ಶನವಾಗಿದೆ. ಪ್ರಕರಣದ ಆಳ ಬಗೆದಷ್ಟು ಹೊಸ ಹೊಸ ಹೆಸರುಗಳು, ಅಮಲು ಪದಾರ್ಥಗಳು ಪತ್ತೆಯಾಗುತ್ತಿವೆ. ಆರೋಪಿಗೆ ಡ್ರಗ್ಸ್ ಎಲ್ಲಿಂದ ಬಂತು? ಅಮಲು ಪದಾರ್ಥಗಳನ್ನು ಕೊಟ್ಟವರು ಯಾರು? ಎಂಬ ಪ್ರಶ್ನೆಗಳನ್ನಿಟ್ಟುಕೊಂಡೇ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಪೊಲೀಸರು ಬೆಂಗಳೂರಿಗೆ ಎಂಟ್ರಿಯಾಗಿದ್ದು, ಮತ್ತೋರ್ವ ಆರೋಪಿ ಮೂಲದ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: Apple iPhone 16 series launched – ಭಾರತದಲ್ಲಿ ಎಷ್ಟು ದರ? ಬೇರೆ ದೇಶಗಳಲ್ಲಿ ಎಷ್ಟು ದರ?

    ಅಲ್ತಾಫ್‌ಗೆ ಡ್ರಗ್ಸ್ ನೀಡಿದ್ದ ವ್ಯಕ್ತಿ ಅಭಯ್. ಈತನ ಜೊತೆ ಡ್ರಗ್ಸ್ ದಂಧೆಯಲ್ಲಿದ್ದವರು ಗಿರಿರಾಜ್, ಜಾನ್ ಶಂಕರಪುರ ಹಾಗೂ ಕಾರ್ಕಳದ ಶಾಹಿದ್. ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಹಾಗೂ ಆರೋಪಿಗಳನ್ನು ಸೆರೆ ಹಿಡಿಯುವಾಗ ಸಿಕ್ಕ ಮಾದಕ ವಸ್ತುಗಳು ನಿಷೇಧಿತ ಎಂಡಿಎಂಎ ಎಂಬುದು ದೃಢಪಟ್ಟಿದೆ. ಬೆಂಗಳೂರಿನ ಆ ವ್ಯಕ್ತಿಯಿಂದಲೇ ಆರೋಪಿಗಳು ಡ್ರಗ್ಸ್ ಖರೀದಿಸಿದರು ಎಂಬುದು ತನಿಖೆ ವೇಳೆ ಬಯಲಾಗಿದೆ. ಜೊತೆಗೆ ಎಂಡಿಎಂಎ ಮಾದಕ ದ್ರವ್ಯಕ್ಕೆ ಕರಾವಳಿಯಲ್ಲಿ ಭಾರೀ ಬೇಡಿಕೆ ಇರುವುದೂ ಬಹಿರಂಗವಾಗಿದೆ. ಹೀಗಾಗಿ ಬೆಂಗಳೂರು ಮೂಲದ ಡ್ರಗ್ ಪೆಡ್ಲರ್ ಬೆನ್ನು ಹತ್ತಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ? – ಎಳೆಎಳೆಯಾಗಿ ಬಿಚ್ಚಿಟ್ಟ ಪವಿತ್ರಾಗೌಡ

    ಬೆಂಗಳೂರಿನ ಡ್ರಗ್ ಪೆಡ್ಲರ್‌ನನ್ನು ವಶಕ್ಕೆ ಪಡೆದ ಬೆನ್ನಲ್ಲೇ ಮಾದಕ ಜಾಲದ ಮೂಲಕ್ಕೆ ಪೊಲೀಸರು ಕೈ ಹಾಕಿದ್ದಾರೆ. ಆರು ಮಂದಿ ಆರೋಪಿಗಳ ಬಂಧನ ಆಗುತ್ತಿದ್ದಂತೆ ಅವರ ಲಿಂಕ್‌ನಲ್ಲಿರುವ ಮತ್ತಷ್ಟು ಪೆಡ್ಲರ್‌ಗಳು, ಗ್ರಾಹಕರ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಪೊಲೀಸರ ತನಿಖೆಗೆ ಈ ಬೆಳವಣಿಗೆ ಕೊಂಚ ಹಿನ್ನಡೆಯಾಗಿದ್ದು, ಕೇಸ್ ಸಂಬಂಧ ಕೆಲವು ವರದಿಗಳಿಗಾಗಿ ಪೊಲೀಸರು ಕಾದು ಕುಳಿತಿದ್ದಾರೆ.

  • ರಾಜಸ್ಥಾನ ಪೊಲೀಸ್‌ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ

    ರಾಜಸ್ಥಾನ ಪೊಲೀಸ್‌ ಅಧೀನ ಸೇವೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ

    ಜೈಪುರ: ರಾಜಸ್ಥಾನ ಪೊಲೀಸ್ ಅಧೀನ ಸೇವೆಗಳಲ್ಲಿ (Rajasthan Police Subordinate Services) ಮಹಿಳೆಯರಿಗೆ 33% ರಷ್ಟು ಮೀಸಲಾತಿ (33% Quota Announced for Women) ನೀಡಲು ರಾಜಸ್ಥಾನ ಕ್ಯಾಬಿನೆಟ್ ( Rajasthan Cabinet) ಬುಧವಾರ ನಿರ್ಧರಿಸಿದೆ.

    ಮೀಸಲಾತಿ ಸಂಬಂಧ ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು 1989ಕ್ಕೆ ತಿದ್ದುಪಡಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಪರೀಕ್ಷೆ ದಿನಾಂಕ ಮುಂದೂಡಿಕೆ ಇಲ್ಲ: ಕೆಇಎ

    ರಾಜಸ್ಥಾನ ಸಿಎಂ ಭಜನ್‌ ಲಾಲ್‌ ಶರ್ಮಾ
    ರಾಜಸ್ಥಾನ ಸಿಎಂ ಭಜನ್‌ ಲಾಲ್‌ ಶರ್ಮಾ

    ಅತ್ಯುತ್ತಮ ಅಭ್ಯರ್ಥಿಗಳು ರಾಜಸ್ಥಾನ ಭಾಷೆ ಮತ್ತು ಗ್ರಂಥಾಲಯ ಮತ್ತು ರಾಜಸ್ಥಾನ ಅಬಕಾರಿ ಪ್ರಯೋಗಾಲಯ ಇಲಾಖೆಗಳು ನಡೆಸುವ ನೇಮಕಾತಿಯಲ್ಲಿ 2% ಮೀಸಲಾತಿಯನ್ನು ಸಹ ಪಡೆಯಲಿದ್ದಾರೆ.

    ಈ ಹಿಂದೆ, ರಾಜಸ್ಥಾನ ಸರ್ಕಾರ ಗ್ರೇಡ್ 3 ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು 30% ರಿಂದ 50% ಕ್ಕೆ ಹೆಚ್ಚಿಸಿತ್ತು. ಚುನಾವಣಾ ಸಮಯದಲ್ಲಿ ಬಿಜೆಪಿ ಮಹಿಳಾ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು.

     

  • ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಡಿಲೀಟ್‌ ಮಾಡಿದ್ರೂ ಸಿಕ್ತು ವಿಡಿಯೋ – ಸ್ಫೋಟಕ FSL ವರದಿಯಲ್ಲಿ ಏನಿದೆ?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ (FSL Report) ದರ್ಶನ್‌ ಗ್ಯಾಂಗ್‌ ಡಿಲೀಟ್‌ ಮಾಡಿದ್ದ ದೃಶ್ಯ ಸಿಕ್ಕಿದೆ.

    ದರ್ಶನ್ ಮತ್ತು ಇತರರಿಂದ ಸ್ವಾಧೀನಪಡಿಸಿಕೊಂಡ ರಕ್ತದ ಕಲೆಗಳಿದ್ದ ಬಟ್ಟೆ, ಚಪ್ಪಲಿಗಳನ್ನು, ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

    ಇಷ್ಟೇ ಅಲ್ಲದೇ ಡಿಲೀಟ್ ಮಾಡಿದ್ದ ಮೊಬೈಲ್, ಸಿಸಿಟಿವಿ ಡಿವಿಆರ್‌ಗಳನ್ನು ರಿಟ್ರೀವ್‌ ಮಾಡಲು ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ವರದಿ ನೀಡಿತ್ತು. ಈ ಬಗ್ಗೆಯೂ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

     

    ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?
    ದರ್ಶನ್ ಮನೆಯಲ್ಲಿದ್ದ ಲಾಠಿ, ರಿಪೀಸ್ ಪಟ್ಟಿ, ದೊಣ್ಣೆ, ಬೆಲ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿತ್ತು. ನಟಿ ಪವಿತ್ರಾಗೌಡ ಚಪ್ಪಲಿ ಮೇಲೆಯೂ ರಕ್ತದ ಕಲೆ ಸಿಕ್ಕಿತ್ತು. ಡಿಎನ್‌ಎ ಪರೀಕ್ಷೆಯಿಂದ ಪತ್ತೆಯಾದ ರಕ್ತ ಮಾದರಿ ರೇಣುಕಾಸ್ವಾಮಿಯದ್ದೇ ಎನ್ನುವುದು ದೃಢಪಟ್ಟಿದೆ. ಇದನ್ನೂ ಓದಿ: ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್‌

    ರೇಣುಕಾ ಕೊಲೆ ಬಳಿಕ ದರ್ಶನ್, ಪವಿತ್ರಾಗೌಡ ಮಾತನಾಡಿದ್ದರು. ಆದರೆ ಸಿಕ್ಕಿಬೀಳುವ ಭಯದಲ್ಲಿ ಸಿಸಿಟಿವಿ ವಿಡಿಯೋವನ್ನು ದರ್ಶನ್ ಗ್ಯಾಂಗ್‌ ಡಿಲೀಟ್‌ ಮಾಡಿತ್ತು. ಸಿಸಿಟಿವಿ ಡಿವಿಆರ್‌ಗಳ ರಿಟ್ರೀವ್‌ ಮಾಡಿದಾಗ ದರ್ಶನ್ ಡಿಲೀಟ್ ಮಾಡಿಸಿದ ದೃಶ್ಯಗಳು ಪತ್ತೆಯಾಗಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಲ್ಲಿ ಆರೋಪಿ ದೀಪಕ್ ಕೂದಲು ಪತ್ತೆಯಾಗಿದೆ.

    ಇಡೀ ಪ್ರಕರಣ ತನಿಖೆಯಲ್ಲಿ ಹೈದರಾಬಾದ್ ಎಫ್‌ಎಸ್‌ಎಲ್‌ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

  • ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್‌

    ದರ್ಶನ್ ಸೇರಿ 14 ಮಂದಿ ವಿರುದ್ಧ ಕೊಲೆ ಕೇಸ್ – ಅಂಕಿಗಳಲ್ಲಿ ಚಾರ್ಜ್‌ಶೀಟ್‌

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು (Renukaswamy) ಅಪಹರಿಸಿ, ಟಾರ್ಚರ್ ಕೊಟ್ಟು ಭಯಾನಕವಾಗಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Darshan) ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ (Chargesheet) ಸಲ್ಲಿಕೆಯಾಗಿದೆ.

    ರೇಣುಕಾಸ್ವಾಮಿ ಕೊಲೆ ನಡೆದ 84 ದಿನಗಳ ನಂತರ ಬೆಂಗಳೂರಿನ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ 3991 ಪುಟಗಳ ಆರೋಪಪಟ್ಟಿಯನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ. 10 ಕಡತ, 7 ಸಂಪುಟಗಳ ದೋಷಾರೋಪಪಟ್ಟಿಯನ್ನು ವಿಸ್ತೃತವಾಗಿ ಪರಿಶೀಲಿಸುವುದಾಗಿ ಮ್ಯಾಜಿಸ್ಟ್ರೇಟ್‌ ಎಸ್ ನಿರ್ಮಲಾ ಅವರು, ಪ್ರಾಸಿಕ್ಯೂಷನ್ ಪರ ವಕೀಲರಿಗೆ ತಿಳಿಸಿದ್ದಾರೆ.

    ರೇಣುಕಾಸ್ವಾಮಿ ಮಾಡುತ್ತಿದ್ದ ಅಶ್ಲೀಲ ಮೆಸೇಜ್‌ಗಳಿಂದ ಹಿಡಿದು ಕಿಡ್ನಾಪ್, ಟಾರ್ಚರ್, ಮರ್ಡರ್, ಸಾಕ್ಷ್ಯನಾಶ ಯತ್ನ, ಆರೋಪಿಗಳ ಬಂಧನದ ತನಕ ಇಡೀ ಪ್ರಕರಣವನ್ನು ಚಾರ್ಜ್‌ಶೀಟ್‌ನಲ್ಲಿ ಇಂಚಿಂಚಾಗಿ ವಿವರಿಸಲಾಗಿದೆ. ದರ್ಶನ್ ಗ್ಯಾಂಗ್ ಪೈಶಾಚಿಕವಾಗಿ ವರ್ತಿಸಿದ ರೀತಿಯನ್ನು ತನಿಖಾತಂಡ ವಿವರಿಸಿದೆ. ಇದನ್ನೂ ಓದಿ: Shivamogga Airport| 20 ದಿನಕ್ಕಷ್ಟೇ ಲೈಸೆನ್ಸ್‌- ಷರತ್ತು ಪೂರೈಸದಿದ್ದರೆ ವಿಮಾನ ಹಾರಾಟಕ್ಕೆ ತೊಡಕು

     

     

    ಆರೋಪಿಗಳ ವಿರುದ್ಧ ಅಪಹರಣ, ಕೊಲೆ, ಸಾಕ್ಷ್ಯನಾಶ, ಒಳಸಂಚು ದರೋಡೆ, ಕಾನೂನುಬಾಹಿರವಾಗಿ ಗುಂಪು ಸೇರುವಿಕೆ ಹೀಗೆ ಹಲವು ಆರೋಪಗಳನ್ನು ಹೊರಿಸಲಾಗಿದೆ. ಆದರೆ ಇದು ಪ್ರಾಥಮಿಕ ದೋಷಾರೋಪ ಪಟ್ಟಿ ಅಷ್ಟೇ. ತನಿಖೆ ಇನ್ನೂ ಬಾಕಿಯಿದೆ. ತನಿಖೆ ಪೂರ್ಣಗೊಂಡ ಬಳಿಕ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಅಂಕಿಗಳಲ್ಲಿ ಚಾರ್ಜ್‌ಶೀಟ್‌
    * 17 ಆರೋಪಿಗಳ ಬಂಧನ
    * ಪವಿತ್ರಗೌಡ ಎ-1 ಆರೋಪಿ
    * ದರ್ಶನ್ ಎ-2 ಆರೋಪಿ
    * 14 ಜನರ ವಿರುದ್ಧ ಅಪಹರಣ ಮತ್ತು ಕೊಲೆ ಆರೋಪ
    * ಮೂವರು ಆರೋಪಿಗಳ ಮೇಲೆ ಸಾಕ್ಷ್ಯನಾಶ ಕೇಸ್(ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ )
    * 3991 ಪುಟಗಳು  ಇದನ್ನೂ ಓದಿ: 231 ಸಾಕ್ಷಿ ಕೇಳಿ ಜೈಲಿನಲ್ಲಿ ದರ್ಶನ್‌ ಶಾಕ್‌!

     

    * ಏಳು ಸಂಪುಟ
    * 10 ಕಡತ
    * ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ
    * 97 ಸಾಕ್ಷಿಗಳಿಂದ 164/161 ಹೇಳಿಕೆ
    * 59 ಕಡೆ ಪಂಚನಾಮೆ
    * 231 ಸಾಕ್ಷಿ ಸಂಗ್ರಹ

    * 8 ಎಫ್‌ಎಸ್‌ಎಲ್, ಸಿಎಫ್‌ಎಸ್‌ಎಲ್‌ವರದಿ
    * 8 ಸರ್ಕಾರಿ ಅಧಿಕಾರಿಗಳ ಸಾಕ್ಷಿ
    * ತನಿಖೆಯಲ್ಲಿ 56 ಪೊಲೀಸರು ಭಾಗಿ

     

  • ಮಕ್ಕಳ ಅಶ್ಲೀಲ ಚಿತ್ರ ಸರ್ಚಿಂಗ್‌ – ಕೇರಳದ 455 ಕಡೆ ದಾಳಿ, 6 ಬಂಧನ

    ಮಕ್ಕಳ ಅಶ್ಲೀಲ ಚಿತ್ರ ಸರ್ಚಿಂಗ್‌ – ಕೇರಳದ 455 ಕಡೆ ದಾಳಿ, 6 ಬಂಧನ

    ತಿರುವನಂತಪುರಂ: ಇಂಟರ್‌ನೆಟ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ (Child Pornography) ಹುಡುಕಾಟ, ಸಂಗ್ರಹ ಮತ್ತು ಹಂಚಿಕೊಳ್ಳುವವರ ವಿರುದ್ಧ ರಾಜ್ಯಾದ್ಯಂತ ಬೃಹತ್ ದಾಳಿ ಆರಂಭಿಸಿದ ಕೇರಳ ಪೊಲೀಸರು (Kerala Police) 37 ಪ್ರಕರಣಗಳನ್ನು ದಾಖಲಿಸಿ ವಿವಿಧ ಜಿಲ್ಲೆಗಳಲ್ಲಿ ಆರು ಮಂದಿಯನ್ನು ಬಂಧಿಸಿದ್ದಾರೆ.

    ಪಿ-ಹಂಟ್ ಎಂಬ ಕಾರ್ಯಾಚರಣೆಯ ಭಾಗವಾಗಿ ಕಳೆದ ಕೆಲವು ದಿನಗಳಿಂದ 455 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

    ತಿರುವನಂತಪುರಂ ಗ್ರಾಮಾಂತರ, ಕೊಲ್ಲಂ ನಗರ, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್ ಗ್ರಾಮಾಂತರ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ತೋಳಗಳ ಹತ್ಯೆಗೆ ಕಂಡಲ್ಲಿ ಗುಂಡು – ಯೋಗಿ ಸರ್ಕಾರ ಆದೇಶ

    ಅತಿ ಹೆಚ್ಚು ದಾಳಿ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿ 60 ಸ್ಥಳಗಳನ್ನು ಶೋಧಿಸಿ 23 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿರುವನಂತಪುರಂ ಗ್ರಾಮಾಂತರ ಪೊಲೀಸ್ ಜಿಲ್ಲೆಯಲ್ಲಿ ಒಟ್ಟು 39 ಸ್ಥಳಗಳ ಮೇಲೆ ದಾಳಿ ನಡೆಸಿ 29 ಸಾಧನ ವಶಕ್ಕೆ ಪಡೆಯಲಾಗಿದೆ.

    ತಿರುವನಂತಪುರಂ ನಗರದಲ್ಲಿ ಪೊಲೀಸರು 22 ಕಡೆ ತಪಾಸಣೆ ನಡೆಸಿ ಐದು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

    ಪತ್ತನಂತಿಟ್ಟ 8, ಆಲಪ್ಪುಳ 8, ಕೊಲ್ಲಂ 7, ಕಾಸರಗೋಡು 5, ಪಾಲಕ್ಕಾಡ್ 4, ಮತ್ತು ತ್ರಿಶೂರ್ ಗ್ರಾಮಾಂತರ, ತ್ರಿಶೂರ್ ನಗರ, ವಯನಾಡ್‌ನಲ್ಲಿ ತಲಾ 3 ಪ್ರಕರಣ ದಾಖಲಾಗಿದೆ.

    ತಿರುವನಂತಪುರಂ ಗ್ರಾಮಾಂತರ, ಪತ್ತನಂತಿಟ್ಟ, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಲಯಾಳ ಚಿತ್ರರಂಗದಲ್ಲಿನ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತ ನ್ಯಾ. ಹೇಮಾ ವರದಿಯ ಜೊತೆ ಈಗ ಮಕ್ಕಳ ಅಶ್ಲೀಲ ಚಿತ್ರಗಳ ಹಂಚಿಕೊಳ್ಳುವ ಬೃಹತ್ ಜಾಲ ಪತ್ತೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.