Tag: police

  • ಚುನಾವಣಾಧಿಕಾರಿಗೆ ಕಪಾಳಮೋಕ್ಷ – ಶರಣಾಗುವುದಿಲ್ಲ ಎನ್ನುತ್ತಿದ್ದಾಗಲೇ ಅಭ್ಯರ್ಥಿ ಅರೆಸ್ಟ್‌!

    ಚುನಾವಣಾಧಿಕಾರಿಗೆ ಕಪಾಳಮೋಕ್ಷ – ಶರಣಾಗುವುದಿಲ್ಲ ಎನ್ನುತ್ತಿದ್ದಾಗಲೇ ಅಭ್ಯರ್ಥಿ ಅರೆಸ್ಟ್‌!

    ಜೈಪುರ್‌: ರಾಜಸ್ಥಾನದ (Rajasthan) ಡಿಯೋಲಿ-ಉನಿಯಾರಾ ಅಸೆಂಬ್ಲಿಯ ಉಪಚುನಾವಣೆಯ (By Poll) ವೇಳೆ ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ್ದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ (Naresh Meena) ಅವರನ್ನು ಪೊಲೀಸರು (Police) ಬಂಧಿಸಿದ್ದಾರೆ.

    ನರೇಶ್ ಮೀನಾ ಬಂಧನಕ್ಕೂ ಕೆಲವೇ ನಿಮಿಷಗಳ ಮೊದಲು ʻನಾನು ಪೊಲೀಸರಿಗೆ ಶರಣಾಗುವುದಿಲ್ಲʼ ಎಂದು ಮಾಧ್ಯಮಗಳ ಮುಂದೆ ಘೋಷಿಸಿದ್ದರು.

    ಬುಧವಾರ ಸಂರವತ ಮತಗಟ್ಟೆಗೆ ತೆರಳಿದ್ದ ಮೀನಾ ಅವರು, ಚುನಾವಣಾ ಕರ್ತವ್ಯದಲ್ಲಿದ್ದ ಎಸ್‌ಡಿಎಂ ಅಮಿತ್ ಚೌಧರಿ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಅವರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗೆ ಕಪಾಳಮೋಕ್ಷ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ಮಾಡದಂತೆ ತಡೆದಿದ್ದರು.

    ಬುಧವಾರ ರಾತ್ರಿ ಅವರ ಬಂಧನಕ್ಕೆ ತೆರಳಿದ್ದಾಗ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದರು. ಅಲ್ಲದೇ ಕೆಲವೆಡೆ ಬೆಂಕಿ ಹಚ್ಚಲಾಗಿತ್ತು. ಗಲಭೆಯಲ್ಲಿ ಸುಮಾರು 8 ಕಾರುಗಳು ಮತ್ತು 24 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ 60 ಜನರನ್ನು ಬಂಧಿಸಲಾಗಿದೆ. ಇಂದು (ಗುರುವಾರ) ಅವರ ಬಂಧನಕ್ಕೆ ತೆರಳುವಾಗ ಬೆಂಬಲಿಗರ ವಿರೋಧವನ್ನು ಎದುರಿಸಲು ಸೂಕ್ತ ಕ್ರಮಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಕ್ಷದ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ಮೀನಾ ಅವರನ್ನು ಕಳೆದ ವಾರ ಕಾಂಗ್ರೆಸ್‌ ಅಮಾನತುಗೊಳಿಸಿತ್ತು.

  • ಉತ್ತರ ಪ್ರದೇಶ | ವೈದ್ಯರ ಯಡವಟ್ಟು – ಎಡಗಣ್ಣಿನ ಆಪರೇಷನ್‌ಗೆ ಬಂದಿದ್ದ ಬಾಲಕನಿಗೆ ಬಲಗಣ್ಣಿನ ಆಪರೇಷನ್‌!

    ಉತ್ತರ ಪ್ರದೇಶ | ವೈದ್ಯರ ಯಡವಟ್ಟು – ಎಡಗಣ್ಣಿನ ಆಪರೇಷನ್‌ಗೆ ಬಂದಿದ್ದ ಬಾಲಕನಿಗೆ ಬಲಗಣ್ಣಿನ ಆಪರೇಷನ್‌!

    ಲಕ್ನೋ: ಎಡಗಣ್ಣಿನ ಶಸ್ತ್ರಚಿಕಿತ್ಸೆಗೆ ಹೋದ 7 ವರ್ಷದ ಬಾಲಕನಿಗೆ ವೈದ್ಯರು ಬಲಗಣ್ಣಿನ ಶಸ್ತ್ರಚಿಕಿತ್ಸೆ (Eye Surgery) ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ (Hospital) ನಡೆದಿದೆ.

    ನ.12 ರಂದು ಸೆಕ್ಟರ್ ಗಾಮಾ 1 ರ ಆನಂದ್ ಸ್ಪೆಕ್ಟ್ರಮ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬಾಲಕನ ಎಡಗಣ್ಣಿನಿಂದ ಆಗಾಗ ನೀರು ಬರುತ್ತಿತ್ತು. ಇದಕ್ಕಾಗಿ ಬಾಲಕನ ತಂದೆ ನಿತಿನ್ ಭಾಟಿ ಆತನನ್ನು ಆಸ್ಪತ್ರೆಗೆ ತೋರಿಸಿದ್ದರು. ವೈದ್ಯರು ತಪಾಸಣೆ ನಡೆಸಿದ ನಂತರ, ಬಾಲಕನ ಕಣ್ಣಿನಲ್ಲಿ ಪ್ಲಾಸ್ಟಿಕ್ ತರಹದ ವಸ್ತುವಿದೆ. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ತಿಳಿಸಿದ್ದರು.

    ಆಸ್ಪತ್ರೆಗೆ 45,000 ರೂ. ಹಣ ಪಾವತಿಸಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಬಳಿಕ ಬಾಲಕನನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಆತನ ತಾಯಿ ಬಲಗಣ್ಣಿನ ಶಸ್ತ್ರಚಿಕಿತ್ಸೆ ಮಾಡಿರುವುದನ್ನು ಗಮನಿಸಿದ್ದಾರೆ. ಮತ್ತೆ ವೈದ್ಯರನ್ನು ಸಂಪರ್ಕಿಸಿ ವಿಚಾರಿಸಿದಾಗ, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಸಂಬಂಧ ಬಾಲಕನ ತಂದೆ, ಗೌತಮ್ ಬುದ್ಧ ನಗರದ ಮುಖ್ಯ ವೈದ್ಯಕೀಯ ಅಧಿಕಾರಿಗೆ (CMO) ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ವೈದ್ಯರ ಪರವಾನಿಗೆಯನ್ನು ರದ್ದುಪಡಿಸಿ, ಆಸ್ಪತ್ರೆಯನ್ನು ಬಂದ್‌ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಸಂಬಂಧ ತನಿಖೆ ಆರಂಭವಾಗಿದ್ದು, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು (Police) ತಿಳಿಸಿದ್ದಾರೆ.

  • ಸಿದ್ದಿಕಿ ಸಾವು ಖಚಿತಪಡಿಸಿಕೊಳ್ಳಲು ಅರ್ಧಗಂಟೆ ಆಸ್ಪತ್ರೆಯಲ್ಲೇ ಇದ್ದ ಹಂತಕ ಗೌತಮ್‌!

    ಸಿದ್ದಿಕಿ ಸಾವು ಖಚಿತಪಡಿಸಿಕೊಳ್ಳಲು ಅರ್ಧಗಂಟೆ ಆಸ್ಪತ್ರೆಯಲ್ಲೇ ಇದ್ದ ಹಂತಕ ಗೌತಮ್‌!

    ಮುಂಬೈ: ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಗೌತಮ್ (Shiv Kumar Gautam) ಗುಂಡಿನ ದಾಳಿ ಬಳಿಕ ಸಿದ್ದಿಕಿ ಸಾವನ್ನು ಖಚಿತಪಡಿಸಿಕೊಳ್ಳಲು ಅರ್ಧಗಂಟೆ ಕಾಲ ಆಸ್ಪತ್ರೆಯ ಹೊರಗೆ ಕಾದು ನಿಂತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ದಾಳಿ ನಡೆಸಿದ್ದ ಪ್ರಮುಖ ಆರೋಪಿ ತಾನೂ ಧರಿಸಿದ್ದ ಅಂಗಿಯನ್ನು ತಕ್ಷಣ ಬದಲಿಸಿಕೊಂಡು ಜನರ ಗುಂಪಿನಲ್ಲಿ ಸೇರಿಕೊಂಡಿದ್ದ. ಬಳಿಕ ಆಸ್ಪತ್ರೆಯ ಹೊರಗೆ 30 ನಿಮಿಷ ಕಾದು, ಸಿದ್ದಿಕಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದ ಬಳಿಕ ಅಲ್ಲಿಂದ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಮುಖ ಆರೋಪಿ ಅರೆಸ್ಟ್‌ ಆಗಿದ್ದು ಹೇಗೆ?
    ಗೌತಮ್‌ನ ನಾಲ್ವರು ಸ್ನೇಹಿತರು ರಾತ್ರಿಯ ವೇಳೆ ಮೊಬೈಲ್ ಫೋನ್‌ಗಳಲ್ಲಿ ನಡೆಸಿದ್ದ ಸಂಭಾಷಣೆಗಳು ಮುಂಬೈ ಪೊಲೀಸರಿಗೆ ಆತನನ್ನು ಪತ್ತೆಹಚ್ಚಲು ಪ್ರಮುಖ ಪಾತ್ರವಹಿಸಿದೆ.

    ಮುಂಬೈ (Mumbai) ಕ್ರೈಂ ಬ್ರಾಂಚ್ ಮತ್ತು ಉತ್ತರ ಪ್ರದೇಶ (Uttar Pradesh) ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗೌತಮ್‌ನ ಸ್ನೇಹಿತರಾದ ಅನುರಾಗ್ ಕಶ್ಯಪ್, ಜ್ಞಾನ್ ಪ್ರಕಾಶ್ ತ್ರಿಪಾಠಿ, ಆಕಾಶ್ ಶ್ರೀವಾಸ್ತವ ಮತ್ತು ಅಖಿಲೇಂದ್ರ ಪ್ರತಾಪ್ ಸಿಂಗ್ ಎಂಬವರನ್ನು ನೇಪಾಳ ಗಡಿಯ ಬಳಿ ಬಂಧಿಸಿತ್ತು. ಈ ವೇಳೆ ಮೊಬೈಲ್‌ ಪರಿಶೀಲನೆ ವೇಳೆ ಆರೋಪಿಗಳು ಗೌತಮ್‌ ಜೊತೆ ಇಂಟರ್‌ನೆಟ್‌ ಕರೆ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅಲ್ಲದೇ ಆತನನ್ನು ಅರಣ್ಯ ಪ್ರದೇಶದಲ್ಲಿ ಭೇಟಿಯಾಗಲು ಯೋಜನೆ ಹಾಕಿಕೊಂಡಿದ್ದರು. ಈ ಮೂಲಕ ಆತನಿಗೆ ದೇಶದಿಂದ ಪರಾರಿಯಾಗಲು ಸಹಾಯಕ್ಕೆ ಮುಂದಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಈ ವಿಚಾರ ತಿಳಿದ ಬಳಿಕ ಗೌತಮ್ ಬಂಧನಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಬಳಿಕ ಉತ್ತರ ಪ್ರದೇಶದ ಕುಗ್ರಾಮವೊಂದರಲ್ಲಿ ಆತನನ್ನು ಬಂಧಿಸಲಾಗಿತ್ತು.

    ಗುಂಡು ಹಾರಿಸಿದ ನಂತರ ಗೌತಮ್ ಪುಣೆಗೆ ಪರಾರಿಯಾಗಿದ್ದ. ಅಲ್ಲಿ ಮೊಬೈಲ್ ಫೋನ್ ಎಸೆದಿದ್ದಾನೆ ಎಂದು ವರದಿಯಾಗಿದೆ. ಒಂದು ವಾರ ಅಲ್ಲೇ ಇದ್ದು, ಬಳಿಕ ಉತ್ತರ ಪ್ರದೇಶದ ಝಾನ್ಸಿ ಮತ್ತು ಲಕ್ನೋಗೆ ತೆರಳಿದ್ದ. ಬಳಿಕ ನನ್ಪಾರಾ ಪಟ್ಟಣದಿಂದ ಸುಮಾರು 10 ಕಿಮೀ ದೂರದಲ್ಲಿರುವ 10 ರಿಂದ 15 ಗುಡಿಸಲುಗಳ ಕುಗ್ರಾಮದಲ್ಲಿ ಅಡಗಿಕೊಂಡಿದ್ದ.

    ಆರೋಪಿಗಳ ಆರಂಭಿಕ ಯೋಜನೆಯ ಪ್ರಕಾರ, ತಮ್ಮ ಸಹಚರರಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್‌ನನ್ನು ಉಜ್ಜಯಿನಿ ರೈಲು ನಿಲ್ದಾಣದಲ್ಲಿ ಭೇಟಿಯಾಗಬೇಕಿತ್ತು. ಅಲ್ಲಿ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi) ಸದಸ್ಯನೊಬ್ಬ ಆರೋಪಿಗಳನ್ನು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು. ಕಶ್ಯಪ್ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಈ ಯೋಜನೆ ವಿಫಲವಾಗಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಅ.12 ರಂದು ರಾತ್ರಿ 9:11 ಗಂಟೆ ವೇಳೆಗೆ ಬಾಂದ್ರಾದಲ್ಲಿ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.

  • ಹಾಸನ| ರೀಲ್ಸ್‌ಗಾಗಿ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿ ಹುಚ್ಚಾಟ – ವಿದ್ಯಾರ್ಥಿಗಳ ವಿರುದ್ಧ ಕೇಸ್‌

    ಹಾಸನ| ರೀಲ್ಸ್‌ಗಾಗಿ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿ ಹುಚ್ಚಾಟ – ವಿದ್ಯಾರ್ಥಿಗಳ ವಿರುದ್ಧ ಕೇಸ್‌

    ಹಾಸನ: ರೀಲ್ಸ್‌ಗಾಗಿ ವಿದ್ಯಾರ್ಥಿಗಳು (Students) ಪೆಟ್ರೋಲ್ ಬಾಂಬ್ (Petrol Bomb) ಸ್ಪೋಟಿಸಿ ಎಲ್ಲೆ ಮೀರಿ ವರ್ತಿಸಿರುವ ಘಟನೆ ಹಾಸನ (Hassana) ಹೊರವಲಯದ ಬೊಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

    ಆರ್ಯುವೇದ ಕಾಲೇಜಿನಲ್ಲಿ ಓದುತ್ತಿರುವ ಹಾಸನ ನಗರದ ಇಬ್ಬರು, ಕುಣಿಗಲ್ ತಾಲ್ಲೂಕಿನ ಓರ್ವ ವಿದ್ಯಾರ್ಥಿ ರಾತ್ರಿ ವೇಳೆ ಕಾಲೇಜಿನ ಎದುರಿನ ರಸ್ತೆಯಲ್ಲಿ ಪ್ಲಾಸ್ಟಿಕ್‌ ಕವರ್‌ಗೆ ಪೆಟ್ರೋಲ್ ತುಂಬಿ, ಅದರ ಮೇಲೆ ಪಟಾಕಿ ಬಾಂಬ್ ಇಟ್ಟು ಬೆಂಕಿ ಹಚ್ಚಿದ್ದಾರೆ. ಪರಿಣಾಮ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಇದನ್ನೂ ಓದಿ: ಹೆಚ್‌ಡಿಕೆಗೆ ಕರಿಯ ಎಂದಿದ್ದ ಜಮೀರ್‌ಗೆ ಜೀವ ಬೆದರಿಕೆ – ಪುನೀತ್‌ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ

     

    ಪೆಟ್ರೋಲ್ ಬಾಂಬ್ ಸ್ಪೋಟಗೊಂಡ ಅನತಿ ದೂರದಲ್ಲಿ ಪೆಟ್ರೋಲ್ ಟ್ಯಾಂಕರ್ ನಿಂತಿದ್ದು ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ (HPCL) ಸಮೀಪವೇ ಪೆಟ್ರೋಲ್ ಬಾಂಬ್ ಸ್ಪೋಟಿಸಿ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.  ಇದನ್ನೂ ಓದಿ: ಕೊಡಗು| ಪತ್ನಿ ಜೊತೆ ರಿಯಲ್‌ ಎಸ್ಟೇಟ್‌ ಉದ್ಯಮಿ ನೇಣಿಗೆ ಶರಣು

    ವಿದ್ಯಾರ್ಥಿಗಳ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಿ ದಂಡ ವಿಧಿಸಿದ್ದಾರೆ.

  • ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

    ಬೀದಿ ನಾಯಿ ಜೊತೆ ಅಸಭ್ಯ ವರ್ತನೆ – ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

    ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಬೀದಿ ನಾಯಿ (Dog) ಜೊತೆ ಅಸಭ್ಯ ವರ್ತನೆ ಮಾಡಿದ ಪ್ರಕರಣ ಕೊಪ್ಪ (Koppa) ತಾಲೂಕಿನ ಜಯಪುರದಲ್ಲಿ (Jayapur) ನಡೆದಿದೆ.

    ಕಳೆದ ಅ.18ರಂದು ಜಯಪುರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಅಸಭ್ಯ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಶಿವರಾಜ್ ಎಂಬ ಯುವಕನನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ ನ.9ರಂದು ಜಯಪುರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿತ್ತು. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಾಣಿಗಳೊಂದಿಗಿನ ಅಸಭ್ಯ ನಡವಳಿಕೆಯನ್ನು ಅಸ್ವಾಭಾವಿಕ ಎಂದು ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಶಿಕ್ಷೆ ವಿಧಿಸಬಹುದಾಗಿದೆ.

  • ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ – 100ಕ್ಕೆ ಕರೆ ಮಾಡಿ ಬಚಾವ್‌ ಆದ ಚಾರಣಿಗರು

    ಭದ್ರತಾ ಪಡೆ, ಉಗ್ರರ ನಡುವೆ ಗುಂಡಿನ ಚಕಮಕಿ – 100ಕ್ಕೆ ಕರೆ ಮಾಡಿ ಬಚಾವ್‌ ಆದ ಚಾರಣಿಗರು

    ಶ್ರೀನಗರ: ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ (Indian Army) ನಡುವೆ ನಡೆದ ಎನ್‌ಕೌಂಟರ್‌ನ ವೇಳೆ ಇಬ್ಬರು ಚಾರಣಿಗರು ಸಿಕ್ಕಿಕೊಂಡ ಘಟನೆ ಜಮ್ಮು ಮತ್ತು ಜಬರ್ವಾನ್‌ನಲ್ಲಿ ನಡೆದಿದೆ. ಚಾರಣಿಗರು ಪೊಲೀಸ್‌ (Police) ಕಂಟ್ರೋಲ್‌ ರೂಮ್‌ ಸಂಖ್ಯೆ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಚಾರಣಿಗರನ್ನು (Trekkers) ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

    ಭಯೋತ್ಪಾದಕರ ಇರುವಿಕೆಯ ಗುಪ್ತಚರ ಮಾಹಿತಿ ಆಧಾರದ ಮೇಲೆ ಪೊಲೀಸರು ಮತ್ತು ಭದ್ರತಾ ಪಡೆಗಳು ಜಬರ್ವಾನ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಈ ವೇಳೆ ಚಾರಣಿಗರು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಬಳಿಕ ಅವರು ಬಂಡೆಗಳ ನಡುವೆ ಅಡಗಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ಭದ್ರತಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅವರನ್ನು ರಕ್ಷಿಸಲಾಗಿದೆ.

    ಈ ಘಟನೆಯ ಬಳಿಕ ಪ್ರತಿಕ್ರಿಯಿಸಿರುವ ಕಾಶ್ಮೀರ ಪೊಲೀಸ್ ಮುಖ್ಯಸ್ಥ ವಿಧಿ ಕುಮಾರ ಬಿರ್ಡಿಯವರು, ಚಾರಣಿಗರು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು. ವಿಶೇಷವಾಗಿ ಭದ್ರತಾ ಕಾರ್ಯಾಚರಣೆಗಳು ಇರುವ ಪ್ರದೇಶಗಳಲ್ಲಿ ಈ ಅನಿರೀಕ್ಷಿತ ಘಟನೆಗಳು ಸಂಭವಿಸಿದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ತ್ವರಿತವಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

    ಸ್ಥಳೀಯರು, ಪ್ರವಾಸಿಗರು ಮತ್ತು ವಿಶೇಷವಾಗಿ ಚಾರಣಿಗರು ಸಂಕಷ್ಟದಲ್ಲಿದ್ದಾಗ 100ಕ್ಕೆ ಅಥವಾ ನೇರವಾಗಿ ಪೊಲೀಸ್ ಠಾಣೆಗೆ ತಲುಪುವುದು ಸೇರಿದಂತೆ ಸಹಾಯವಾಣಿ ಸೇವೆಗಳನ್ನು ಬಳಸಲು ನಾವು ಪ್ರೋತ್ಸಾಹಿಸುತ್ತೇವೆ. ಈ ಮೂಲಕ ಪೊಲೀಸರ ತ್ವರಿತ ಸಹಾಯವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಸಂಕಷ್ಟದಲ್ಲಿ ಸಿಲುಕಿದ ವೇಳೆ ಚಾರಣಿಗನೊಬ್ಬ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಸಂಪರ್ಕಿಸಿದ್ದಾನೆ. ಈ ವೇಳೆ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸುವಲ್ಲಿ ಪಿಸಿಆರ್‌ನ ತ್ವರಿತ ಸಮನ್ವಯ ಸಂಭವನೀಯ ದುರಂತವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪ್ರೇಯಸಿ ತಾಯಿಗಾಗಿ ಚೈನ್ ಕಳ್ಳತನ – ಡ್ಯಾನ್ಸ್ ಮಾಸ್ಟರ್ ಅರೆಸ್ಟ್

    ಪ್ರೇಯಸಿ ತಾಯಿಗಾಗಿ ಚೈನ್ ಕಳ್ಳತನ – ಡ್ಯಾನ್ಸ್ ಮಾಸ್ಟರ್ ಅರೆಸ್ಟ್

    ಬೆಂಗಳೂರು: ಪ್ರೇಯಸಿಯ ತಾಯಿಯ ಚಿಕಿತ್ಸೆಗಾಗಿ ಚೈನ್ ಕದಿಯುತ್ತಿದ್ದ ಡ್ಯಾನ್ಸ್ ಮಾಸ್ಟರ್‌ನನ್ನು ಜಿಗಣಿ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹುಲ್ಲೂರು ನಿವಾಸಿ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ (25) ಎಂದು ಗುರುತಿಸಲಾಗಿದೆ. ನಡಾಫ್‍ನ ಪ್ರೇಯಸಿಯ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಆರೋಪಿ ಚೈನ್ ಕಳ್ಳತನಕ್ಕೆ ಇಳಿದಿದ್ದ ಎಂದು ತಿಳಿದು ಬಂದಿದೆ.

    ಕಳೆದ ಆಗಸ್ಟ್‌ನಲ್ಲಿ ಆರೋಪಿ ಜಿಗಣಿಯ ರತ್ನಮ್ಮ ಎಂಬವರ ಸರವನ್ನು ಕಳ್ಳತನ ಮಾಡಿದ್ದ. ಬುಲೆಟ್ ಬೈಕ್‍ನಲ್ಲಿ ಬಂದು ಸಿಗರೇಟ್ ಖರೀದಿಸುವ ನೆಪದಲ್ಲಿ ಮಾಂಗಲ್ಯದ ಸರ ಎಗರಿಸಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಬಂಧಿತ ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ.

    ಈ ಹಿಂದೆ ಆರೋಪಿ ಕಳ್ಳತನ ಕೇಸ್‍ನಲ್ಲಿ ಗದಗದಲ್ಲಿ ಬಂಧಿತನಾಗಿದ್ದು, ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ. ಈ ವೇಳೆ ಗದಗ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಆತನ ವಿರುದ್ಧ ಹುಳಿಮಾವು, ಜೆಪಿ ನಗರ, ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳಿವೆ.

  • ಚೆಕ್ ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

    ಚೆಕ್ ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಬಾಲಕ ನೀರಲ್ಲಿ ಮುಳುಗಿ ಸಾವು

    ದಾವಣಗೆರೆ: ಚೆಕ್ ಡ್ಯಾಂನಲ್ಲಿ ಈಜಾಡಲು (Swimming) ಹೋಗಿದ್ದ ಬಾಲಕ ನೀರು ಪಾಲಾದ ಘಟನೆ ಜಗಳೂರು (Jagaluru) ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು ಸೂರಗೊಂಡನಹಳ್ಳಿ ಗ್ರಾಮದ ಅಜಯ್ (15) ಎಂದು ಗುರುತಿಸಲಾಗಿದೆ. ಆತ ಸಿದ್ದಯ್ಯನಕೋಟೆಯ ಸಂಬಂಧಿಕರ ಮನೆಗೆ ಬಂದಿದ್ದ. ಈ ವೇಳೆ ಚಕ್ ಡ್ಯಾಂನಲ್ಲಿ ಈಜಾಡಲು ತೆರಳಿದ್ದಾಗ ಈ ಅವಘಡ ನಡೆದಿದೆ.

    ಬಾಲಕನ ಮೃತದೇಹವನ್ನು ಸ್ಥಳೀಯರು ನೀರಿನಿಂದ ಹೊರ ತೆಗೆದಿದ್ದಾರೆ. ಈ ಸಂಬಂಧ ಬೀಳಚೋಡು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆರೋಲ್ ಮೇಲೆ ಹೊರಬಂದಿದ್ದ ಕೊಲೆ ಅಪರಾಧಿಗೆ ಗುಂಡಿಕ್ಕಿ ಹತ್ಯೆ – ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಹಚರರ ಬಂಧನ

    ಪೆರೋಲ್ ಮೇಲೆ ಹೊರಬಂದಿದ್ದ ಕೊಲೆ ಅಪರಾಧಿಗೆ ಗುಂಡಿಕ್ಕಿ ಹತ್ಯೆ – ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಹಚರರ ಬಂಧನ

    ಭೋಪಾಲ್‌: ಪೆರೋಲ್ ಮೇಲೆ ಜೈಲಿಂದ ಹೊರಬಂದಿದ್ದ ಕೊಲೆ ಅಪರಾಧಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ.

    ಗುಂಡಿನ ದಾಳಿಯಲ್ಲಿ ಬಲಿಯಾದ ವ್ಯಕ್ತಿಯನ್ನು ಜಸ್ವಂತ್ ಸಿಂಗ್ ಗಿಲ್ (45) ಎಂದು ಗುರುತಿಸಲಾಗಿದೆ. ಆತ 2016 ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಇತ್ತೀಚೆಗೆ ಪೆರೋಲ್‌ ಮೇಲೆ ಜೈಲಿಂದ ಆತ ಹೊರಬಂದಿದ್ದ. ಆತನ ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಗಿಲ್ ತನ್ನ ಮನೆಯ ಹೊರಗೆ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದ. ಆಗ ಇಬ್ಬರು ಬೈಕ್‌ನಲ್ಲಿ ಬಂದಿದ್ದಾರೆ. ಈ ವೇಳೆ ಅದರಲ್ಲಿ ಒಬ್ಬ ಗಿಲ್‌ಗೆ ಗುಂಡಿಕ್ಕಿ ಕೊಂದಿದ್ದಾನೆ. ಗಿಲ್ ಸತ್ತಿದ್ದಾನೆ ಎಂದು ಖಚಿತವಾಗುವವರೆಗೆ ಶೂಟರ್ ಗುಂಡು ಹಾರಿಸುತ್ತಲೇ ಇದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ಕೆನಡಾ ಮೂಲದ ದರೋಡೆಕೋರ ಅರ್ಷದೀಪ್ ಸಿಂಗ್ ದಲ್ಲಾನ (Arshdeep Singh Dalla) ಇಬ್ಬರು ಸಹಚರರನ್ನು ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್‌ನಲ್ಲಿ ಬಂಧಿಸಲಾಗಿದೆ. ತನಿಖೆ ವೇಳೆ ಅರ್ಷದೀಪ್ ಸಿಂಗ್ ದಲ್ಲಾ ಎರಡು ಕೊಲೆಗಳನ್ನು ನಡೆಸುವಂತೆ ಆರೋಪಿಗಳಿಗೆ ಸೂಚನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ – ಖತರ್ನಾಕ್ ಕಳ್ಳರ ಬಂಧನ

    ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ ಕಳ್ಳತನ – ಖತರ್ನಾಕ್ ಕಳ್ಳರ ಬಂಧನ

    ದಾವಣಗೆರೆ: ಕಲ್ಯಾಣ ಮಂಟಪಕ್ಕೆ ನುಗ್ಗಿ ಚಿನ್ನಾಭರಣ (Gold) ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ದಾವಣಗೆರೆಯ (Davanagere) ಶಾಂತಿನಗರ ನಿವಾಸಿಗಳಾದ ಕಿರಣ್ ನಾಯ್ಕ್ (25), ವಿನೋದ್ ನಾಯ್ಕ್ (23) ಎಂದು ಗುರುತಿಸಲಾಗಿದೆ. ಆರೋಪಿಗಳು ಮದುವೆ ನಡೆಯುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ನಿಜಲಿಂಗಪ್ಪ ಬಡಾವಣೆಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆ ನುಗ್ಗಿ ಕಳ್ಳತನ ಮಾಡಿದ್ದರು ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಆರೋಪಿಗಳು ಸುಮಾರು 73 ಗ್ರಾಂ ತೂಕದ ಮಾಂಗಲ್ಯ ಸರ, ಚೈನ್ ಹಾಗೂ ಒಂದು ಜೊತೆ ಚಿಕ್ಕ ಜುಮುಕಿ ಕಳ್ಳತನ ಮಾಡಿಕೊಂಡು ಬಂದಿದ್ದರು. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬಂಧಿತರಿಂದ ಅಂದಾಜು 7,83,000 ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಕಿರಣ್ ನಾಯ್ಕ್ ಈ ಹಿಂದೆ 12 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ.