Tag: police

  • ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – 10 ನಕ್ಸಲರು ಬಲಿ ‌

    ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – 10 ನಕ್ಸಲರು ಬಲಿ ‌

    ರಾಯ್ಪುರ್: ಛತ್ತೀಸ್‌ಗಢದ (Chhattisgarh) ಕೊಂಟಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ತು ಮಾವೋವಾದಿಗಳು (Maoists) ಹತ್ಯೆಗೀಡಾಗಿದ್ದಾರೆ. ಮುಂಜಾನೆ ಭೇಜ್ಜಿ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸ್ (Police) ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.

    ನಕ್ಸಲರು ಒಡಿಶಾ ಮೂಲಕ ಛತ್ತೀಸ್‌ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಕಾರ್ಯಾಚರಣೆ ನಡೆಸಿದೆ. ಈ ವೇಳೆ 10 ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಭದ್ರತಾ ಪಡೆಗಳು ಮೂರು ಸ್ವಯಂಚಾಲಿತ ಬಂದೂಕುಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಕಾರ್ಯಾಚರಣೆ ವೇಳೆ ಗಾಯಗೊಂಡವರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

    ಕಳೆದ ತಿಂಗಳು ಛತ್ತೀಸ್‌ಗಢದ ನಾರಾಯಣಪುರ-ದಂತೇವಾಡ ಗಡಿಯ ಅರಣ್ಯದಲ್ಲಿ ಭದ್ರತಾ ಪಡೆಗಳು 31 ಮಾವೋವಾದಿಗಳನ್ನು ಹೊಡೆದುರುಳಿಸಿದ್ದರು. ಈ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.

  • ಖಾಸಗಿ ಫೋಟೋ ಕಳಿಸಿ ಸರ್ಕಾರಿ ನೌಕರನಿಂದ 2.5 ಕೋಟಿ ವಸೂಲಿ – ನಾಲ್ವರು ಅರೆಸ್ಟ್

    ಖಾಸಗಿ ಫೋಟೋ ಕಳಿಸಿ ಸರ್ಕಾರಿ ನೌಕರನಿಂದ 2.5 ಕೋಟಿ ವಸೂಲಿ – ನಾಲ್ವರು ಅರೆಸ್ಟ್

    ಬೆಂಗಳೂರು: ಖಾಸಗಿ ವಿಡಿಯೋ ಇದೆ ಎಂದು ಬೆದರಿಸಿ ಕೇಂದ್ರ ಸರ್ಕಾರದ ಸಂಸ್ಥೆಯೊಂದರ ನೌಕರನಿಂದ 2.5 ಕೋಟಿ ರೂ. ಹಣ ವಸೂಲಿ ಮಾಡಿದ್ದ ಹನಿಟ್ರ್ಯಾಪ್ (Honey Trap) ಗ್ಯಾಂಗ್ ಸಿಸಿಬಿ ಪೊಲೀಸರ (Police) ಬಲೆಗೆ ಬಿದ್ದಿದೆ.

    ಬಂಧಿತ ಆರೋಪಿಗಳನ್ನು ತಬ್ಸಂ ಬೇಗಂ, ಅಜೀಮ್ ಉದ್ದಿನ್, ಆನಂದ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ವಂಚನೆಗೊಳಗಾದ ವ್ಯಕ್ತಿಯನ್ನು ಆರ್‌ಟಿ ನಗರದ ಜಿಮ್ ಒಂದರಲ್ಲಿ ಆರೋಪಿ ತಬ್ಸಂ ಬೇಗಂ ಪರಿಚಯ ಮಾಡಿಕೊಂಡಿದ್ದಳು. ನಂತರದ ದಿನಗಳಲ್ಲಿ, ಮಗು ಒಂದನ್ನು ದತ್ತು ಪಡೆದಿದ್ದೇನೆ ಎಂದು ಅವರೊಂದಿಗೆ ಸಹಾಯ ಪಡೆದಿದ್ದಳು.

    ಬಳಿಕ ವಾಟ್ಸಾಪ್ ಮೂಲಕ ಖಾಸಗಿ ಫೋಟೊ ಕಳಿಸಿ ಅವರಿಗೆ ಗ್ಯಾಂಗ್ ಬೆದರಿಸಿತ್ತು. ಪೊಲೀಸ್ ಹಾಗೂ ವಕೀಲ ಎಂದು ಹೇಳಿ ಹೆದರಿಸಿ, 2021ರಿಂದ ನಿರಂತರವಾಗಿ ಹಂತ ಹಂತವಾಗಿ 2.5 ಕೋಟಿ ರೂ. ಹಣ ವಸೂಲಿ ಮಾಡಿದ್ದರು.

    ಈ ಸಂಬಂಧ 3 ವರ್ಷಗಳ ನಂತರ ಸಂತ್ರಸ್ತ ವ್ಯಕ್ತಿ ಸಿಸಿಬಿಗೆ ದೂರು ನೀಡಿದ್ದರು. ಈ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

  • ಬಸ್ ಸಿಗದಿದ್ದಕ್ಕೆ ವಾಹನಗಳ ಮೇಲೆ ಕಲ್ಲು ತೂರಾಟ – ಆರೋಪಿ ಅರೆಸ್ಟ್

    ಬಸ್ ಸಿಗದಿದ್ದಕ್ಕೆ ವಾಹನಗಳ ಮೇಲೆ ಕಲ್ಲು ತೂರಾಟ – ಆರೋಪಿ ಅರೆಸ್ಟ್

    ರಾಯಚೂರು: ಊರಿಗೆ ಹೋಗಲು ಬಸ್ (Bus) ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹಟ್ಟಿ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಲಿಂಗಸುಗೂರಿನ (Lingsugur) ಗೋಲಪಲ್ಲಿಯ ತಿಮ್ಮಣ್ಣ ಎಂದು ಗುರುತಿಸಲಾಗಿದೆ. ಗ್ರಾಮದ ಬಳಿ ನ.19ರ ಬೆಳಗಿನ ಜಾವ 2ರ ವೇಳೆ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿದ್ದವು. ಅಲ್ಲದೇ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

    ಈ ಘಟನೆ ಪೊಲೀಸರಿಗೆ ತಲೆನೋವಾಗಿತ್ತು. ಕಳ್ಳತನ ಮಾಡಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

    ಬಂಧಿತ ಆರೋಪಿ ತನ್ನ ಅಕ್ಕ, ಬಾವನನ್ನ ಬೆಂಗಳೂರಿಗೆ ಕಳುಹಿಸಲು ಬಸ್ ಸಿಗದೆ ಬೇಸರಗೊಂಡಿದ್ದ. ಬಳಿಕ ತನ್ನ ಮೂರು ಜನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಬೆಳಗಿನ ಜಾವ ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಉಳಿದ ಮೂವರು ಆರೋಪಿಗಳಾದ ಅಂಬರೀಶ್, ತಿಮ್ಮಣ್ಣ, ಆಂಜನೇಯ ತಲೆಮರೆಸಿಕೊಂಡಿದ್ದಾರೆ.

  • ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ – ಮೂವರಿಗೆ ಚಾಕುವಿನಿಂದ ಹಲ್ಲೆ

    ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ ಮಾರಾಮಾರಿ – ಮೂವರಿಗೆ ಚಾಕುವಿನಿಂದ ಹಲ್ಲೆ

    ಬೆಂಗಳೂರು: ಬೈಕ್ ಪಾರ್ಕಿಂಗ್ ವಿಚಾರಕ್ಕೆ ವಿದ್ಯಾರ್ಥಿಗಳ (Students) ನಡುವಿನ ಗಲಾಟೆಯಲ್ಲಿ ಮೂವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ರಾಜಾನುಕುಂಟೆ (Rajanukunte) ಬಳಿಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

    ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮತ್ತೋರ್ವನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಾಲೇಜಿನ ವಿದ್ಯಾರ್ಥಿಯೊಬ್ಬ ಆತನ ಸ್ನೇಹಿತರೊಂದಿಗೆ ಸೇರಿಕೊಂಡು, ಮತ್ತೊಂದು ವಿದ್ಯಾರ್ಥಿಗಳ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಲ್ಮೆಟ್‍ಗಳಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ.

    ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • Uttar Pradesh | ಮತದಾರರಿಗೆ ಬೆದರಿಕೆ ಆರೋಪ – 7 ಜನ ಪೊಲೀಸರ ಅಮಾನತು

    Uttar Pradesh | ಮತದಾರರಿಗೆ ಬೆದರಿಕೆ ಆರೋಪ – 7 ಜನ ಪೊಲೀಸರ ಅಮಾನತು

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಉಪಚುನಾವಣೆಯಲ್ಲಿ (UP By Election) ಮತದಾರರ ಗುರುತಿನ ಚೀಟಿ ಪರೀಕ್ಷಿಸಿ ಮತ್ತು ಮತದಾನ ಮಾಡದಂತೆ ತಡೆದ ಆರೋಪದ ಮೇಲೆ 7 ಜನ ಪೊಲೀಸರ (Police) ಅಮಾನತು ಅಮಾನತು ಮಾಡಲಾಗಿದೆ.

    ಉತ್ತರ ಪ್ರದೇಶದ 9 ಸ್ಥಾನಗಳಿಗಾಗಿ ನಡೆದ ಉಪಚುನಾವಣೆಯಲ್ಲಿ ಹಲವು ಸ್ಥಳಗಳಲ್ಲಿ ಪೊಲೀಸರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ. ಈ ಸಂಬಂಧ ದೂರಿನ ಅಡಿ ಚುನಾವಣಾ ಆಯೋಗವು (Election Commission) 7 ಪೊಲೀಸರನ್ನು ಅಮಾನತುಗೊಳಿಸಿದೆ.

    ಸಿಸಾಮಾವ್‌ನಲ್ಲಿ ಇಬ್ಬರು ಇನ್ಸ್‌ಪೆಕ್ಟರ್‌ಗಳಾದ ಅರುಣ್ ಸಿಂಗ್ ಮತ್ತು ರಾಕೇಶ್ ನಾಡರ್ ಅವರನ್ನು ಮತದಾರರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ.

    ಕಾನ್ಪುರದಲ್ಲಿ ಐವರು ಪೊಲೀಸರ ಅಮಾನತು
    ಕಾನ್ಪುರ ಪೊಲೀಸ್ ಕಮಿಷನರ್ ಅಖಿಲ್ ಕುಮಾರ್ ಮಾಹಿತಿ ನೀಡಿ, ಕೆಲವು ಪೊಲೀಸರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ. ಈ ಸಂಬಂಧ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಚುನಾವಣೆ ರದ್ದಿಗೆ ಎಸ್‌ಪಿ ಆಗ್ರಹ
    ಇದೇ ವೇಳೆ, ಎಸ್‌ಪಿ ಅಭ್ಯರ್ಥಿ ಹಾಜಿ ರಿಜ್ವಾನ್ ಕೂಡ ಕುಂದರ್ಕಿ ಉಪಚುನಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು, ಚುನಾವಣೆ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

  • ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿಯ ಹತ್ಯೆ – ವಿಷ ಕುಡಿದು ಪತಿಯಿಂದ ಆತ್ಮಹತ್ಯೆ ಯತ್ನ

    ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿಯ ಹತ್ಯೆ – ವಿಷ ಕುಡಿದು ಪತಿಯಿಂದ ಆತ್ಮಹತ್ಯೆ ಯತ್ನ

    ದಾವಣಗೆರೆ: ತವರು ಮನೆಯಿಂದ ವರದಕ್ಷಿಣೆ (Dowry Case) ತರುವಂತೆ ಚಿತ್ರಹಿಂಸೆ ನೀಡಿ ಮೂರು ತಿಂಗಳ ಗರ್ಭಿಣಿಯನ್ನು ಪತಿಯೇ ಕೊಲೆಗೈದ ಘಟನೆ ಚನ್ನರಾಯಪಟ್ಟಣ (Channarayapatna) ನೊರನಕ್ಕಿ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯನ್ನು ನಯನ (24) ಎಂದು ಗುರುತಿಸಲಾಗಿದೆ. ಆಕೆಯ ಪತಿ ಅಯ್ಯಪ್ಪ ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆಯ ಬಳಿಕ ಆರೋಪಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಮೂರು ವರ್ಷಗಳ ಹಿಂದೆ ನೊರನಕ್ಕಿ ಗ್ರಾಮದ ಅಯ್ಯಪ್ಪ ಹಾಗೂ ನಯನ ಮದುವೆಯಾಗಿದ್ದರು. ಮದುವೆಯಾದ ಒಂದು ವರ್ಷದವರೆಗೆ ಗಂಡ-ಹೆಂಡತಿ ಚೆನ್ನಾಗಿಯೇ ಇದ್ದರು. ನಂತರದಲ್ಲಿ ತವರು ಮನೆಯಿಂದ ವರದಕ್ಷಿಣೆ ರೂಪದಲ್ಲಿ ಜಮೀನು, ಹಣ, ಒಡವೆ ತರುವಂತೆ ಅಯ್ಯಪ್ಪ ಹಿಂಸೆ ನೀಡಲು ಆರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಹಲವಾರು ಬಾರಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು.

    ಈ ನಡುವೆ ನಯನ ಗರ್ಭಿಣಿಯಾಗಿದ್ದರಿಂದ ಒಂದು ತಿಂಗಳಿನಿಂದ ತವರು ಮನೆಯಲ್ಲೇ ಉಳಿದುಕೊಂಡಿದ್ದಳು. ನ.17 ರ ರಾತ್ರಿ ಅಯ್ಯಪ್ಪ, ಮಾವನ ಮನೆಗೆ ಬಂದು ಅಲ್ಲಿಯೇ ಉಳಿದುಕೊಂಡಿದ್ದ. ಮರುದಿನ ಬೆಳಿಗ್ಗೆ ನಯನಾಳನ್ನು ಮಲ್ಲಪ್ಪನ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಅಂದಿನಿಂದ ನಯನ ತವರು ಮನೆಯವರ ಫೋನ್ ರಿಸೀವ್ ಮಾಡಿರಲಿಲ್ಲ. ಸೋಮವಾರ ರಾತ್ರಿ ಅಯ್ಯಪ್ಪ ಸಂಬಂಧಿ ಶೃತಿ ಎಂಬುವವರು ನಯನಾಳ ತಾಯಿಗೆ ಕರೆ ಮಾಡಿ, ನಿಮ್ಮ ಮಗಳಿಗೆ ಆರೋಗ್ಯ ಸರಿ ಇಲ್ಲ ಎಂದು ತಿಳಿಸಿದ್ದಾರೆ.

    ವಿಚಾರ ತಿಳಿದ ನಯನ ತಾಯಿ ಕರೆ ಮಾಡಿದಾಗ, ಅಯ್ಯಪ್ಪ ಕರೆ ಸ್ವೀಕರಿಸಿ, ನಿಮ್ಮ ಮಗಳನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಕರೆ ಕಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

    ವರದಕ್ಷಿಣೆಗಾಗಿ ನಿತ್ಯ ಕಿರುಕುಳದಿಂದ ರೋಸಿ ಹೋಗಿದ್ದ ನಯನ ಎರಡು ಬಾರಿ ಪೊಲೀಸ್ ಠಾಣೆಗೂ ದೂರು ನೀಡಿದ್ದಳು. ಆದರೂ ಯಾವುದೇ ಕ್ರಮ ಆಗಿರಲಿಲ್ಲ. ಇದೀಗ ಪತ್ನಿಯನ್ನೇ ಆತ ಕೊಂದು ಹಾಕಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನಯನ ಪೋಷಕರು ಒತ್ತಾಯಿಸಿದ್ದಾರೆ.

    ಚನ್ನರಾಯಪಟ್ಟಣ ತಹಸೀಲ್ದಾರ್ ವಿ.ಎಸ್.ನವೀನ್‍ಕುಮಾರ್ ಶವಾಗಾರಕ್ಕೆ ಭೇಟಿ ನೀಡಿ ಮೃತಳ ಪೋಷಕರಿಂದ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನ – ಐವರು ಆರೋಪಿಗಳು ಅರೆಸ್ಟ್

    ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನ – ಐವರು ಆರೋಪಿಗಳು ಅರೆಸ್ಟ್

    ಶಿವಮೊಗ್ಗ: ಲಕ್ಷಾಂತರ ಮೌಲ್ಯದ ಅಡಿಕೆ (Arecanut) ಕಳ್ಳತನ ಮಾಡಿದ್ದ ಐವರು ಕಳ್ಳರನ್ನು ಶಿವಮೊಗ್ಗ (Shivamogga) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತರನ್ನು ಆರ್.ಅನಿಲ್ ಅಲಿಯಾಸ್ ಜಾಕ್(26), ಲೋಕೇಶ್ ಅಲಿಯಾಸ್ ವಿಜಯ್(27), ಮನೋಜ್ ಅಲಿಯಾಸ್ ಮುರಗೋಡು(20), ಪಿ.ನವೀನ್ ಅಲಿಯಾಸ್ ನುಗ್ಗೆ (23) ಹಾಗೂ ಎಸ್.ಚಂದು ಅಲಿಯಾಸ್ ಸುಣ್ಣ (20) ಎಂದು ಗುರುತಿಸಲಾಗಿದೆ.

    ಆರೋಪಿಗಳು ಹಾಡೋನಹಳ್ಳಿ ಗ್ರಾಮದ ಗೋಡೌನಲ್ಲಿ ಸಂಗ್ರಹಿಸಿದ್ದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಪ್ರತ್ಯೇಕ ಮೂರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು 7.35 ಲಕ್ಷ ರೂ. ಮೌಲ್ಯದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು.

    ಬಂಧಿತರಿಂದ 7.35 ಲಕ್ಷ ರೂ. ಮೌಲ್ಯದ ಅಡಿಕೆ ಸೇರಿದಂತೆ 10.25 ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಲಾಗಿದೆ. ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

  • ಕಾಂಗ್ರೆಸ್ ಮುಖಂಡನ ಪುತ್ರನಿಂದ ಹಿಟ್ & ರನ್ ಕೇಸ್ – ಆರೋಪಿ ಅರೆಸ್ಟ್

    ಕಾಂಗ್ರೆಸ್ ಮುಖಂಡನ ಪುತ್ರನಿಂದ ಹಿಟ್ & ರನ್ ಕೇಸ್ – ಆರೋಪಿ ಅರೆಸ್ಟ್

    ಉಡುಪಿ: ಜಿಲ್ಲೆಯ (Udupi) ಕಾಪುವಿನಲ್ಲಿ ನಡೆದ ಹಿಟ್ & ರನ್ ಕೇಸ್‍ನಲ್ಲಿ (Hit and Run Case) ಜೀಪ್ ಚಾಲಕನನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿ ಕಾರು ಚಲಾಯಿಸುತ್ತಿದ್ದ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ನಡೆದ ಬೆನ್ನಲ್ಲೇ ಪ್ರಜ್ವಲ್ ಶೆಟ್ಟಿ ತಲೆಮರೆಸಿಕೊಂಡಿದ್ದ. ಪೊಲೀಸರು ಹಿಟ್ & ರನ್ ಕೇಸ್ ದಾಖಲು ಮಾಡಿದ್ದರು. ಈ ಸಂಬಂಧ ಆರೋಪಿಯನ್ನ ಶಿರ್ವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವನ್ನಪ್ಪಿದ ಮೊಹಮ್ಮದ್ ಹುಸೇನ್ ತಂದೆ ಉಮ್ಮರಬ್ಬ ಪ್ರತಿಕ್ರಿಯಿಸಿ, ನನ್ನ ಮಗ ಮುಂಜಾನೆ ಕೆಲಸಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಒಂದು ಗಂಟೆ ರಕ್ತದ ಮಡುವಿನಲ್ಲಿಯೇ ಒದ್ದಾಡುತ್ತಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ. ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗಬೇಕು, ಆರೋಪಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

    ಕಾಪುವಿನಲ್ಲಿ ಅತೀ ವೇಗವಾಗಿ ಬಂದ ಜೀಪ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಬೆಳಪು ನಿವಾಸಿ ಮಹಮ್ಮದ್ ಹುಸೇನ್ (39) ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.

  • ಸಾಲ ಬಾಧೆ – ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ

    ಸಾಲ ಬಾಧೆ – ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ

    ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ (Police) ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ಕಾರಿನೊಳಗೆ (Car) ಬೆಂಕಿ ಹಚ್ಚಿಕೊಂಡು  ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ.

    ಮೃತನನ್ನು ನಾಗರಬಾವಿ ನಿವಾಸಿ ಪ್ರದೀಪ್ (42) ಎಂದು ಗುರುತಿಸಲಾಗಿದೆ. ಅವರು ಬಸವನಗುಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಧ್ಯಾಹ್ನ ಬ್ಯಾಡರಹಳ್ಳಿ ಬಂದಿರುವ ಪ್ರದೀಪ್, ಅನ್ನಪೂರ್ಣೇಶ್ವರಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ 4 ಲೀಟರ್ ಪೆಟ್ರೋಲ್ ಖರೀದಿಸಿದ್ದರು. ನಂತರ ಮುದ್ದಿನಪಾಳ್ಯದ ನಿರ್ಜನ ಪ್ರದೇಶಕ್ಕೆ ಬಂದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

    ಪೆಟ್ರೋಲ್ ಬಂಕ್‍ನಲ್ಲಿ ಸ್ಕೋಡಾ ಕಾರ್‍ನಲ್ಲಿ ಬಂದು ಬಾಟೆಲ್ ನೀಡಿ ಪೆಟ್ರೋಲ್ ಹಾಕಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪ್ರದೀಪ್ ಪತ್ನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ.

    ಎಎಸ್‍ಐ ಶ್ರೀನಿವಾಸಮೂರ್ತಿಯವರು ನೀಡಿದ ದೂರಿನ ಆಧಾರದ ಮೇಲೆ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ.

  • ಹಾಸನ | ಟ್ರ್ಯಾಕ್ಟರ್, ಬೈಕ್‌ ನಡುವೆ ಡಿಕ್ಕಿ – ಎಮ್‌ಸಿಎಫ್‌ ಸಿಬ್ಬಂದಿ ಸಾವು

    ಹಾಸನ | ಟ್ರ್ಯಾಕ್ಟರ್, ಬೈಕ್‌ ನಡುವೆ ಡಿಕ್ಕಿ – ಎಮ್‌ಸಿಎಫ್‌ ಸಿಬ್ಬಂದಿ ಸಾವು

    ಹಾಸನ: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿ (Accident) ಸಂಭವಿಸಿ ಬಾಹ್ಯಾಕಾಶ ಮುಖ್ಯ ನಿಯಂತ್ರಣ ಸೌಲಭ್ಯ ಕೇಂದ್ರದ (MCF) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಹಾಸನದ (Hassan) ಜಯನಗರ ಸರ್ಕಲ್‌ನಲ್ಲಿ ನಡೆದಿದೆ.

    ಮೃತರನ್ನು ಅರವಿಂದ್ (51) ಎಂದು ಗುರುತಿಸಲಾಗಿದೆ. ಅವರು MCFನಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೆಲಸ ಮುಗಿಸಿ ಸ್ಕೂಟಿಯಲ್ಲಿ ಹಾಸನ ನಗರಕ್ಕೆ ಬಂದಿದ್ದರು. ವಾಪಾಸ್ ಮನೆಗೆ ತೆರಳುವಾಗ ಅಪಘಾತ ನಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅಪಘಾತ ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.