ಗಾಂಧಿನಗರ: ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರ ನೀಡಿ, ನಕಲಿ ವೈದ್ಯರನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಗುಜರಾತ್‌ನ ಸೂರತ್ (Surat) ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ನಕಲಿ ಪದವಿ ಪಡೆದು ಆಸ್ಪತ್ರೆ ನಡೆಸುತ್ತಿದ್ದ 10 ಮಂದಿಯನ್ನು ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ವಿವಿಧ ಸ್ಥಳಗಳಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಬಂಧಿತರ ವಿರುದ್ಧ ಗುಜರಾತಿನ ಮೆಡಿಕಲ್ ಪ್ರಾಕ್ಟೀಷನರ್ಸ್ ಆಕ್ಟ್ (ಜಿಎಂಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂರು ಜನ ಆರೋಪಿಗಳು ಸೂರತ್‌ನಲ್ಲಿ ನಕಲಿ ಬ್ಯಾಚುಲರ್ ಆಫ್ ಎಲೆಕ್ಟ್ರೋ-ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ (ಬಿಇಎಂಎಸ್) ಪದವಿ ಪ್ರಮಾಣಪತ್ರವನ್ನು ಜನರಿಗೆ ನೀಡುತ್ತಿದ್ದರು. ದಾಳಿ ವೇಳೆ ನಕಲಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ಕ್ಲಿನಿಕ್‌ಗಳಿಂದ ಅಲೋಪತಿ ಮತ್ತು ಹೋಮಿಯೋಪತಿ ಔಷಧಗಳು, ಚುಚ್ಚುಮದ್ದು, ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಮೂವರು ಆರೋಪಿಗಳು ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ನಡೆಸುತ್ತಿದ್ದರು. ಅದರಲ್ಲಿ ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರವನ್ನು 70,000 ರೂ.ಗೆ ಮಾರಾಟ ಮಾಡುತ್ತಿದ್ದರು. ಸುಮಾರು 1,500 ಮಂದಿಗೆ ಇಂತಹ ಪ್ರಮಾಣಪತ್ರ ಮಾರಾಟ ಮಾಡಿದ್ದಾರೆ. ಇವುಗಳಲ್ಲಿ ಕೇವಲರು 10ನೇ ತರಗತಿ ತೇರ್ಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಾಂಡೇಸರ ಪೊಲೀಸರು ಬಮ್ರೋಲಿ ಪ್ರದೇಶದ ವಿವಿಧ ವೈದ್ಯಕೀಯ ಚಿಕಿತ್ಸಾಲಯಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.
ಹಾಸನ: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ಸ್ಥಳೀಯರೇ ದಾಳಿ ನಡೆಸಿ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ (Police) ಒಪ್ಪಿಸಿದ ಘಟನೆ ಹಾಸನ ನಗರದ (Hassan) ಬಾಹರ್‌ಪೇಟೆಯಲ್ಲಿ ನಡೆದಿದೆ.
ಪ್ರಮುಖ ಆರೋಪಿ ಫಜಲ್ ಹಾಗೂ ಆತನ ಜೊತೆಗಿದ್ದವರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ದಾಳಿ ನಡೆಸಿದ್ದಾರೆ. ಬಳಿಕ ಫಜಲ್ ಗ್ಯಾಂಗ್‍ನ ಸಹಚರರಿಗೆ ಥಳಿಸಿ ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಾರ್ವಜನಿಕರು ದಾಳಿ ಮಾಡುತ್ತಿದ್ದಂತೆ ಪ್ರಮುಖ ಆರೋಪಿ ಫಜಲ್ ಪರಾರಿ ಆಗಿದ್ದಾನೆ. ಫಜಲ್ ಮಾದಕ ವಸ್ತುಗಳ ಮಾರಾಟ ಜಾಲದ ಕಿಂಗ್‍ಪಿನ್ ಆಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪೆನ್‍ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆನೇಕಲ್: ಪತ್ನಿಯನ್ನು (Wife) ಕೊಲೆಗೈದು ಬಿಹಾರದಲ್ಲಿ ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ವ್ಯಕ್ತಿಯನ್ನು ಮದುವೆ ಮನೆಯಲ್ಲೇ ಸರ್ಜಾಪುರ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ (Bihar) ಮೂಲದ ಮಹಮದ್ ನಸೀಮ್ (39) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಎರಡನೇ ಪತ್ನಿ ರುಮೇಶ್ ಖಾತುನ್‍ಳನ್ನು (22) ಕೊಲೆಗೈದು ಹಗ್ಗದಿಂದ ಕೈ ಕಾಲು ಕಟ್ಟಿ, ಚರಂಡಿಗೆ ಎಸೆದಿದ್ದ. ಬಳಿಕ ಬಿಹಾರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.
ಶವ ಕೊಳೆತು ದುರ್ವಾಸನೆ ಬಂದ ಬಳಿಕ ಸ್ಥಳೀಯರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಜಾಡು ಹಿಡಿದು ಪೊಲೀಸರು ಬಿಹಾರಕ್ಕೆ ತೆರಳಿದ್ದರು. ಅಲ್ಲಿ ಆರೋಪಿ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಅಲ್ಲಿಂದಲೇ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಆರೋಪಿ ತನ್ನ ಹೆಂಡತಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ. ಕಳೆದ ತಿಂಗಳು 11ರ ರಾತ್ರಿ ಸಹ ಇದೇ ವಿಚಾರಕ್ಕೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದ.
ನವದೆಹಲಿ: ದಕ್ಷಿಣ ದೆಹಲಿಯ (Delhi) ನೆಬ್ ಸರಾಯ್‌ನಲ್ಲಿ ನಡೆದ ದಂಪತಿ ಮತ್ತು ಅವರ ಮಗಳ ಭೀಕರ ಹತ್ಯೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ. ದಂಪತಿಯ ಪುತ್ರನೇ ಹತ್ಯೆಗೈದ ಆರೋಪಿ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಹತ್ಯೆಯಾದ ದಂಪತಿಯ ಪುತ್ರ ಅರ್ಜುನ್‌ನನ್ನು (20) ಪೊಲೀಸರು ಬಂಧಿಸಿದ್ದಾರೆ. ಆತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದ. ವಿಚಾರಣೆ ವೇಳೆ ಆತ ಕೊಲೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ತಂದೆಯಿಂದ ಅವಮಾನಕ್ಕೊಳಗಾಗಿದ್ದಕ್ಕೆ ಮತ್ತು ಆಸ್ತಿಯನ್ನು ತನ್ನ ಸಹೋದರಿಗೆ ಬಿಟ್ಟುಕೊಡುವ ಉದ್ದೇಶವನ್ನು ಆತನ ಪೋಷಕರು ಹೊಂದಿದ್ದರಿಂದ ಕೊಲೆ ಮಾಡಿರುವುದಾಗಿ ಆತ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಪ್ಪ, ಅಮ್ಮ ಹಾಗೂ ಸಹೋದರಿ ನಿದ್ರೆಯಲ್ಲಿದ್ದಾಗ ಆರೋಪಿ ಇರಿದು ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳಿಂದ ಆರೋಪಿ ಕೊಲೆಗೆ ಯೋಜನೆ ರೂಪಿಸಿದ್ದ. ಪೋಷಕರ ವಿವಾಹ ವಾರ್ಷಿಕೋತ್ಸವದಂದು ಹತ್ಯೆ ಮಾಡಲು ನಿರ್ಧರಿಸಿದ್ದ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ ಮಗಳು ಕವಿತಾ (23) ಅವರ ಶವಗಳು ನೆಬ್ ಸರೈನಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಅರ್ಜುನ್, ಅಪ್ಪ, ಅಮ್ಮ ತಮ್ಮ 27ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ತಾನು ಮುಂಜಾನೆ 5:30ರ ಸುಮಾರಿಗೆ ಪೋಷಕರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್ ಹೋಗಿದ್ದೆ. ಈ ಸಂದರ್ಭದಲ್ಲಿ ಕೊಲೆ ನಡೆದಿದೆ ಎಂದು ಕತೆ ಕಟ್ಟಿದ್ದ.
ಪ್ರಕರಣ ಸಂಬಂಧ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕುಟುಂಬದ ಹೊರಗಿನವರು ಯಾರೂ ಮನೆಗೆ ಪ್ರವೇಶಿಸಿಲ್ಲ ಎಂಬುದು ತಿಳಿದು ಬಂದಿದೆ. ಅಲ್ಲದೇ ಮನೆಯಲ್ಲಿ ಕಳ್ಳತನ ನಡೆದಿರಲಿಲ್ಲ. ಅರ್ಜುನ್‌ನ ಹೇಳಿಕೆಗಳು ಅನುಮಾನಾಸ್ಪದವಾಗಿರುವುದನ್ನು ಗಮನಿಸಿ, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ: ಇಲ್ಲಿನ (Davanagere) ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‍ಐ ಲಂಚ (Bribe) ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.
ಚಾರ್ಜ್‌ಶೀಟ್‍ನಿಂದ ಹೆಸರು ತೆಗೆಯಲು ಎಎಸ್‍ಐ ಈರಣ್ಣ, ಸರಸ್ವತಿ ನಗರದ ಮಣಿಕಂಠ ಆಚಾರ್ಯ ಎಂಬವರಿಗೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಇದರಂತೆ 50 ಸಾವಿರ ರೂ. ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಮಣಿಕಂಠ ಅವರ ತಾಯಿ ಮತ್ತು ಪತ್ನಿ ನಡುವೆ ಜಗಳವಾಗಿ ಎಫ್‍ಐಆರ್ ಆಗಿತ್ತು. ಚಾರ್ಜ್‌ಶೀಟ್‍ನಲ್ಲಿ ಇಬ್ಬರ ಹೆಸರನ್ನು ಕೈ ಬಿಡಲು ಎಎಸ್‍ಐ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಪೊಲೀಸ್ ಠಾಣೆಯ ಹೊರಗಡೆ ಲಂಚ ಸ್ವೀಕರಿಸುವಾಗ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಡಿಎಸ್‍ಪಿ ಕಲಾವತಿ ಇನ್ಸ್‌ಪೆಕ್ಟರ್ ಮಧುಸೂದನ್ ಹಾಗೂ ಪ್ರಭು ದಾಳಿಯಲ್ಲಿ ಭಾಗಿಯಾಗಿದ್ದರು.
ಪೋರ್ಟ್ ಬ್ಲೇರ್: ಅಂಡಮಾನ್ (Andaman) ಮತ್ತು ನಿಕೋಬಾರ್‌ನಲ್ಲಿ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡ 360 ಶತಕೋಟಿ ರೂ. ಮೌಲ್ಯದ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಮಾಹಿತಿ ಕಲೆ ಹಾಕಲು ಅಂಡಮಾನ್ ಪೊಲೀಸರು ಎಲೋನ್ ಮಸ್ಕ್‌ನ (Elon Musk) ಸ್ಟಾರ್‌ಲಿಂಕ್ (Starlink) ಮೊರೆ ಹೋಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸಮುದ್ರ ಗಡಿಗೆ ಮಾದಕವಸ್ತು ತರಲು ಆರೋಪಿಗಳು ಉಪಗ್ರಹ ಆಧಾರಿತ ಇಂಟರ್ನೆಟ್ ಸಾಧನವನ್ನು ಬಳಸಿದ್ದಾರೆ. ಅವರ ಮಾಹಿತಿ ಕಲೆಹಾಕಲು ಪೊಲೀಸರು ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲಿದ್ದಾರೆ ಎಂದು ಅಂಡಮಾನ್ ದ್ವೀಪದ ಉನ್ನತ ಪೊಲೀಸ್ ಅಧಿಕಾರಿ ಹರಗೋಬಿಂದರ್ ಎಸ್. ಧಲಿವಾಲ್ ತಿಳಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಮ್ಯಾನ್ಮಾರ್ ಬೋಟ್‌ನಲ್ಲಿ ಸಾಗಿಸುತ್ತಿದ್ದ 6,000 ಕೆಜಿ ಗಿಂತ ಹೆಚ್ಚಿನ ಮಾದಕ ವಸ್ತು ಮೆತ್‌ನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಆರು ಮ್ಯಾನ್ಮಾರ್ ಪ್ರಜೆಗಳನ್ನು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಮೊದಲ ಬಾರಿಗೆ ಸ್ಟಾರ್‌ಲಿಂಕ್‌ನ ಸಾಧನವನ್ನು ಭಾರತೀಯ ಜಲಭಾಗವನ್ನು ತಲುಪಲು ಆರೋಪಿಗಳು ಬಳಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಸ್ಟಾರ್‌ಲಿಂಕ್ ಉಪಗ್ರಹ ಆಧಾರಿತ ಇಂಟರ್‌ನೆಟ್ ಒದಗಿಸುತ್ತದೆ. ಅಲ್ಲದೇ ಅಂತರರಾಷ್ಟ್ರೀಯ ಸಂಪರ್ಕವನ್ನು ಇದು ಒದಗಿಸುತ್ತದೆ. ಈ ಸಾಧನವನ್ನು ಯಾರು ಮತ್ತು ಯಾವಾಗ ಖರೀದಿಸಿದ್ದಾರೆ ಎಂದು ಸ್ಟಾರ್‌ಲಿಂಕ್‌ನಿಂದ ವಿವರಗಳನ್ನು ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ (Seat Block) ಮಾಡುವ ದಂಧೆಯಲ್ಲಿ ತೊಡಗಿದ್ದ 10 ಆರೋಪಿಗಳನ್ನು ಮಲ್ಲೇಶ್ವರಂ (Malleshwaram) ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಮಾಡುತ್ತಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕೌನ್ಸಲಿಂಗ್‌ಗೆ ಹಾಜರಾಗಿ ಕಾಲೇಜು ಆಯ್ಕೆಯಾಗದೇ ಇರುವವರನ್ನು ಗುರಿಯಾಗಿಸಿಕೊಂಡಿದ್ದರು. ಈ ರೀತಿ ನಾನಾ ಕಾರಣಗಳಿಂದ 2,625 ವಿದ್ಯಾರ್ಥಿಗಳು ಸೀಟ್ ರಿಜೆಕ್ಟ್ ಮಾಡಿದ್ದರು.
ಕೆಇಎ (KEA) ನೌಕರ ಅವಿನಾಶ್‌ನ ಸಹಾಯದಿಂದ ಪಡೆದ ಪಾಸ್‌ವರ್ಡ್‌ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡುತ್ತಿದ್ದರು. ಆ ಸೀಟ್‌ಗಳನ್ನು ಲಕ್ಷಾಂತರ ರೂ.ಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತ್ತಿದ್ದರು. ಕಾಲೇಜಿನ ಮ್ಯಾನೇಜ್‌ಮೆಂಟ್ ಹಾಗೂ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡುವುದರಲ್ಲಿ ತೊಡಗಿದ್ದರು.
ಆರೋಪಿ ಪ್ರಕಾಶ್ ದೂರು ದಾಖಲಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮ ಬಳಿಯಿದ್ದ ಲ್ಯಾಪ್‌ಟಾಪ್‌ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟುಹಾಕಿ ಸಾಕ್ಷಿ ನಾಶ ಮಾಡಿದ್ದ. ಸದ್ಯ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.ಇದನ್ನೂ ಓದಿ: ಹುಟ್ಟೂರಿಗೆ ಶೋಭಿತಾ ಮೃತದೇಹ – ಇಂದು ಅಂತ್ಯಕ್ರಿಯೆ
ದಾವಣಗೆರೆ: ಆಸ್ತಿ ವಿಚಾರಕ್ಕೆ (Property Dispute) ವ್ಯಕ್ತಿಯೊಬ್ಬ ತನ್ನ ಮಗನೊಂದಿಗೆ ಸೇರಿಕೊಂಡು ತಮ್ಮನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪ್ರಕರಣ ದಾವಣಗೆರೆಯಲ್ಲಿ (Davanagere) ನಡೆದಿದೆ.
ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಎಂಬವರು ಕೊಲೆಯಾದ ದುರ್ದೈವಿ. ಸಿದ್ದಲಿಂಗಪ್ಪ ಬೋರ್ ಪಾಯಿಂಟ್ ಮಾಡಲು ತೆರಳಿದ್ದವರು ವಾಪಸ್ ಮನೆಗೆ ಬಂದಿರಲಿಲ್ಲ. ಅವರ ಮೃತದೇಹ ನಲ್ಲೂರು ಸಮೀಪದ ಭದ್ರಾ ಉಪ ನಾಲೆಯಲ್ಲಿ ಅ.22 ರಂದು ಪತ್ತೆಯಾಗಿತ್ತು. ಈ ಬಗ್ಗೆ ಅನುಮಾನಗೊಂಡ ಸಿದ್ದಲಿಂಗಪ್ಪ ಅವರ ಸೊಸೆ ದೊಡ್ಡಮ್ಮ ಇದು ಕೊಲೆ ಎಂದು ದೂರು ನೀಡಿದ್ದರು.
– ಕೊಲೆಯಾದ ಸಿದ್ದಲಿಂಗಪ್ಪ
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರು (Police) ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್, ಪ್ರಭು, ಪ್ರಶಾಂತ್ ನಾಯ್ಕ, ಸುಜಾತ ಹಾಗೂ ಶಿವಮೂರ್ತಪ್ಪ ಎಂಬವವರನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಸಿದ್ದಲಿಂಗಪ್ಪ ಅವರಿಗೆ ಪರಮೇಶ್ವರಪ್ಪ ಹಾಗೂ ಶಿವಮೂರ್ತಪ್ಪ ಎಂಬ ಇಬ್ಬರು ಸಹೋದರರಿದ್ದರು. ಆಸ್ತಿ ವಿಚಾರವಾಗಿ ಸಿದ್ದಲಿಂಗಪ್ಪ ಹಾಗೂ ಶಿವಮೂರ್ತಪ್ಪ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಬಗ್ಗೆ ಕೋರ್ಟ್‍ನಲ್ಲಿ ವಿಚಾರಣೆ ಕೂಡ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಶಿವಮೂರ್ತಪ್ಪ ತನ್ನ ಪುತ್ರ ಸತೀಶ್‍ಗೆ ಚಿಕ್ಕಪ್ಪ ಸಿದ್ದಲಿಂಗಪ್ಪನನ್ನ ಹೇಗಾದರೂ ಮಾಡಿ ಮುಗಿಸು ಎಂದು ಹೇಳಿದ್ದ. ಅದರಂತೆ ಸತೀಶ್ ಸಂಚೊಂದನ್ನ ರೂಪಿಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಲಿಂಗದಳ್ಳಿಯ ಪ್ರಭು ಹಾಗೂ ದಾವಣಗೆರೆಯ ನಿಟ್ಟುವಳ್ಳಿಯ ಪ್ರಶಾಂತ್ ನಾಯ್ಕ ಎಂಬವವರನ್ನ ಭೇಟಿ ಮಾಡಿದ್ದ ಸತೀಶ್ 1 ಲಕ್ಷ ರೂ. ಕೊಟ್ಟು ಚಿಕ್ಕಪ್ಪನನ್ನ ಕೊಲೆ ಮಾಡಲು ತಿಳಿಸಿದ್ದ. ಅದರಂತೆ ಅ.21 ರಂದು ದಾವಣಗೆರೆ ತ್ರಿಶೂಲ್ ಚಿತ್ರಮಂದಿರದ ಬಳಿ ಆಟೋಗೆ ಗ್ಯಾಸ್ ತುಂಬಿಸಿ ಅವರಿಗೆ ಒಂದು ಸಾವಿರ ರೂ. ಅಡ್ವಾನ್ಸ್ ಕೂಡ ಸತೀಶ್ ನೀಡಿದ್ದ.
ಹಣ ಪಡೆದ ಪ್ರಭು ಹಾಗೂ ಪ್ರಶಾಂತ್ ಸೇರಿ ಸಿದ್ದಲಿಂಗಪ್ಪ ಅವರಿಗೆ ಬೋರ್ ಪಾಯಿಂಟ್ ಇದೆ ಎಂದು ಹೇಳಿ ತೊಗಲೆರೆ ಕ್ರಾಸ್ ಬಳಿ ಆಟೋದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದರು. ಅವರನ್ನು ಸುಮ್ಮನೆ ಆಟೋದಲ್ಲಿ ಓಡಾಡಿಸಿದ್ದಾರೆ. ಆಗ ಸಿದ್ದಲಿಂಗಪ್ಪ ಅವರಿಗೆ ಅನುಮಾನ ಬಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಿದ್ದಲಿಂಗಪ್ಪರನ್ನು ಇಬ್ಬರೂ ಸೇರಿ ಟವಲ್‍ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಕೈಕಾಲು ಕಟ್ಟಿ ನಾಲೆಗೆ ಎಸೆದಿದ್ದಾರೆ. ಅಷ್ಟೇ ಅಲ್ಲದೇ ಮೃತ ದೇಹದ ಮೇಲೆ ಕಲ್ಲನ್ನು ಇಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಮೃತ ದೇಹದ ಫೋಟೋವನ್ನು ಸತೀಶ್‍ಗೆ ಕಳುಹಿಸಿದ್ದರು. ಈ ವೇಳೆ ಆತ 10,000 ರೂ. ಹಣವನ್ನು ಕಳಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.
ಹೈದರಾಬಾದ್: ತೆಲಂಗಾಣ (Telangana) ಪೊಲೀಸ್ (Police) ಇಲಾಖೆಯ ಮಹಿಳಾ ಕಾನ್‌ಸ್ಟೆಬಲ್ ಒಬ್ಬರನ್ನು ನಡುರಸ್ತೆಯಲ್ಲಿಯೇ ಆಕೆಯ ಸಹೋದರ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೈದರಾಬಾದ್‌ನ ಇಬ್ರಾಹಿಂಪುರದಲ್ಲಿ ನಡೆದಿದೆ.
ಇತ್ತೀಚೆಗೆ ಪ್ರೇಮ ವಿವಾಹವಾಗಿದ್ದ ಮಹಿಳಾ ಕಾನ್‌ಸ್ಟೆಬಲ್ ಹಯಾತ್‌ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ವೇಳೆ ಈ ಹತ್ಯೆ ನಡೆದಿದ್ದು, ಈ ಕೊಲೆಯನ್ನು ಮರ್ಯಾದಾ ಹತ್ಯೆ ಪ್ರಕರಣವೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಬಂದಿದ್ದ ಆರೋಪಿ ಹಿಂದಿನಿಂದ ಮಹಿಳೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಆಕೆ ಕೆಳಗೆ ಬಿದ್ದಾಗ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಇದು ಮರ್ಯಾದಾ ಹತ್ಯೆಯ ಪ್ರಕರಣವೇ ಎಂಬುವುದರ ತನಿಖೆ ನಡೆಸುತ್ತಿದ್ದೇವೆ. ಮೃತ ಮಹಿಳೆ ಮತ್ತು ಸಹೋದರನ ನಡುವೆ ಜಮೀನಿನ ವಿಚಾರವಾಗಿ ಗಲಾಟೆ ನಡೆದಿರುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾವು ಮದುವೆಯಾದರೆ ಕೊಲೆ ಮಾಡುವುದಾಗಿಯೂ ಆಕೆಯ ಸಹೋದರ ಬೆದರಿಕೆ ಹಾಕಿದ್ದ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ. ಇಂದು (ಸೋಮವಾರ) ಕೆಲಸಕ್ಕೆ ತೆರೆಳಿದ ಬಳಿಕ ಪತ್ನಿಗೆ ನಾನು ಕರೆ ಮಾಡಿದ್ದೆ. ಈ ವೇಳೆ ನನ್ನ ಸಹೋದರ ನನ್ನನ್ನು ಕೊಲ್ಲಲು ಬಂದಿದ್ದಾನೆ ಎಂದು ಅವಳು ನನಗೆ ಕರೆಯಲ್ಲಿ ಹೇಳಿದ್ದಳು. ಅದಾದ ಬಳಿಕ ಸಂಪರ್ಕ ಕಡಿತಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.
– ವೃತ್ತಿ ಜೀವನದ ಆರಂಭದಲ್ಲೇ ಇದೆಂಥಾ ವಿಧಿಯಾಟ?
– ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದ ಹರ್ಷಬರ್ದನ್
ಹಾಸನ: ಜೀಪ್ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಸಾವಿಗೀಡಾದ ಘಟನೆ ಪ್ರಕರಣ ಸಂಬಂಧ ಹಾಸನ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪ್ ಚಾಲಕ ಮಂಜೇಗೌಡ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಹೌದು. ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಕಾಡೆಮಿಲ್ಲಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ವೇಳೆ ಯುವ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಮೈಸೂರಿನಿಂದ (Mysuru) ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದ ವೇಳೆ ಜೀಪ್ ಟಯರ್ ಸಿಡಿದು ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದ 26 ವರ್ಷದ ಹರ್ಷಬರ್ದನ್ ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯುವ ಐಪಿಎಸ್ ಅಧಿಕಾರಿಯನ್ನು (IPS Officer) ಉಳಿಸಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ಶತಾಯಗತಾಯ ಹೋರಾಟ ನಡೆಸಿದರು ವಿಧಿ ಮೇಲಾಟ ನಡೆಸಿದೆ.
ಸಾವು ಎಲ್ಲಿ ಹೇಗೆ ಬರುತ್ತೆ? ಅಂತ ಒಂದು ಸಣ್ಣ ಸುಳಿವು ಆ ಯಮರಾಯ ಕೊಡಲ್ಲ. ಧೊಪ್ಪನೇ ಅಂತ ಜವರಾಯ ಎದುರುಗಡೆ ಬಂದು ಬಿಡ್ತಾನೆ. ಈ ಫೋಟೋದಲ್ಲಿರುವವರ ಹೆಸರು ಹರ್ಷಬರ್ದನ್ ಪ್ರೊಬೆಷನರಿ ಐಪಿಎಸ್ ಅಧಿಕಾರಿ. ಡ್ಯೂಟಿಗೆ ರಿಪೋರ್ಟ್ ಮಾಡಲು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ 25 ವರ್ಷದ ಹರ್ಷಬರ್ಧನ್ ಜೀವನದಲ್ಲಿ ವಿಧಿಯಾಟ ಕ್ರೂರ ನರ್ತನವಾಡಿದ್ದಾನೆ.
ಹಾಸನನದ ಕಿತ್ತಾನೆ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಯುವ ಅಧಿಕಾರಿ ಹರ್ಷಬರ್ದನ್ ದುರಂತ ಅಂತ್ಯ ಕಂಡಿದ್ದಾರೆ. ಅವಘಾತದಲ್ಲಿ ತಲೆ ತೀವ್ರವಾಗಿ ಗಾಯಗೊಂಡ ಹರ್ಷಬರ್ದನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷಬರ್ದನ್ ಅಸುನೀಗಿದ್ದಾರೆ.
ಹರ್ಷಬರ್ಧನ್ ನಿನ್ನೆಯಷ್ಟೇ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೇನಿಂಗ್ ಮುಗಿಸಿದ್ದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಇವತ್ತು ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಡಿವೈಎಸ್‌ಪಿಯಾಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ಐಜಿಪಿ ಬೋರಲಿಂಗಯ್ಯ ರಿಪೋರ್ಟ್ ಮಾಡಿಕೊಂಡು ಹಾಸನಕ್ಕೆ ಜೀಪ್‌ನಲ್ಲಿ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ದುರಂತ ಸಂಭವಿಸಿದೆ.
ಹಾಸನದ ಕಿತ್ತಾನೆ ಬಳಿ ಸಂಜೆ 4.30ರ ವೇಳೆಗೆ ಜೀಪ್‌ನ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಜೀಪ್ ಮೂರು ಸುತ್ತು ಉರುಳಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ. ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ರಕ್ತಸ್ರಾವವಾಗಿ ಬಿದ್ದಿದ್ದ ಅಧಿಕಾರಿ ಮತ್ತು ಚಾಲಕನನ್ನು 108 ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ, ಹರ್ಷಬರ್ಧನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಬದಲಾಗಿ ಕ್ಷಣಕ್ಷಣಕ್ಕೂ ಆರೋಗ್ಯ ಹದಗೆಡುತ್ತಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಚಿಂತನೆ ಮಾಡಿ ಆಂಬ್ಯುಲೆನ್ಸ್ ಸಹ ಕರೆಸಲಾಗಿತ್ತು. ಏನೆಲ್ಲ ಪ್ರಯತ್ನ ಮಾಡಿದರೂ ವಿಧಿಯಾಟದ ಮುಂದೆ ಏನೂ ನಡೀಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಹರ್ಷಬರ್ದನ್ ಪ್ರಾಣಪಕ್ಷಿ ಹಾರಿಹೋಗಿದೆ.
ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್:
ಅಂದ್ಹಾಗೆ ಐಎಎಸ್, ಐಪಿಎಸ್ ಆಗಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಯುಪಿಎಸ್‌ಸಿ ಪಾಸಾಗೊದು ಅಷ್ಟೊಂದು ಸುಲಭವಲ್ಲ. ಅದಕ್ಕೆ ತಕ್ಕಂತೆ ಗುರಿ ಇರಬೇಕು. ಛಲ ಬೇಕು. ಹರ್ಷಬರ್ದನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಹಗಲು ರಾತ್ರಿ ಎನ್ನದೇ ಓದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದರು. ಮೂಲತಃ ಬಿಹಾರದ ಹರ್ಷಬರ್ದನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 2022-23ರ ಐಪಿಎಸ್ ಬ್ಯಾಚ್‌ನಲ್ಲಿ 153ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದರು. ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು. ಮೃತರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನವೆಂಬರ್ 4ರಿಂದ ಪೊಲೀಸ್ ತರಬೇತಿ ಶುರುವಾಗಿ ಟ್ರೇನಿಂಗ್ ಮುಗಿಸಿ ಇವತ್ತು ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಯಮನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇತ್ತ ಮಗನ ಸಾವಿನಿಂದ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ದೊಡ್ಡ ಅಧಿಕಾರಿಯಾಗಿ ಹೆಸರು ಮಾಡಬೇಕೆನ್ನುವ ಕನಸು ಕಂಡು ಅದೇ ದಾರಿಯಲ್ಲಿದ್ದ ಹರ್ಷಬರ್ಧನ್ ದುರಂತ ಅಂತ್ಯ ಕಂಡಿದ್ದಾರೆ.