Tag: police

  • ಹಾಸನ | ಹಾಡಹಗಲೇ ಮನೆ ಬೀಗ ಒಡೆದು 15 ಲಕ್ಷ ನಗದು, 130 ಗ್ರಾಂ ಚಿನ್ನಾಭರಣ ಕಳ್ಳತನ

    ಹಾಸನ | ಹಾಡಹಗಲೇ ಮನೆ ಬೀಗ ಒಡೆದು 15 ಲಕ್ಷ ನಗದು, 130 ಗ್ರಾಂ ಚಿನ್ನಾಭರಣ ಕಳ್ಳತನ

    ಹಾಸನ: ನಗರದ (Hassan) ಹೊಸ ಬಸ್ ನಿಲ್ದಾಣದ ಎದುರಿನ ಕೆಹೆಚ್‍ಬಿ ಬಡಾವಣೆಯ ಮನೆಯೊಂದರಲ್ಲಿ ಸುಮಾರು 15 ಲಕ್ಷ ರೂ. ನಗದು (Money) ಹಾಗೂ 7 ಲಕ್ಷ ರೂ. ಬೆಲೆ ಬಾಳುವ 130 ಗ್ರಾಂ. ಚಿನ್ನಾಭರಣವನ್ನು (Gold) ಕೇವಲ 20 ನಿಮಿಷದಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

    ಬಡಾವಣೆಯ ಸಚಿನ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸಚಿನ್ ಅವರ ಪತ್ನಿ ಸರ್ಕಾರಿ ನೌಕರರಾಗಿದ್ದು ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ನಂತರ ಪತಿ ಸಚಿನ್ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ, ಸಂಜೆ ಮನೆಗೆ ವಾಪಸ್ ಬಂದಿದ್ದಾರೆ. ಈ ವೇಳೆ ಮನೆಯ ಮುಂದಿನ ಬಾಗಿಲು ತೆರೆದಿತ್ತು. ಆತಂಕದಿಂದ ಒಳಗೆ ಹೋಗಿ ನೋಡಿದಾಗ ಎರಡೂ ರೂಮ್‍ಗಳಲ್ಲಿದ್ದ ವಾಲ್ಡ್‍ರೂಬ್‍ಗಳೂ ತೆರೆದು ಕೊಂಡಿದ್ದವು. ಒಂದು ರೂಮಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಲು ಹಣ ಹೊಂದಿಸಿ 15 ಲಕ್ಷ ರೂ. ಇಡಲಾಗಿತ್ತು. ಮತ್ತೊಂದು ರೂಮಿನಲ್ಲಿ 38 ಗ್ರಾಂ ಚಿನ್ನದ ಸರ, 32 ಗ್ರಾಂ ತೂಕದ ಚಿನ್ನದ ಬಳೆ, 15 ಗ್ರಾಂ ತೂಕದ ಚಿನ್ನದ ಓಲೆ, 5 ಗ್ರಾಂ ಡೈಮಂಡ್ ಓಲೆ, 15 ಗ್ರಾಂ ತೂಕದ ಚಿನ್ನದ ಬಳೆ ಸೇರಿದಂತೆ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಕಳ್ಳ ಪರಾರಿಯಾಗಿದ್ದಾನೆ.

    ಹೆಲ್ಮೆಟ್ ಧರಸಿ ಬಂದಿರುವ ಕಳ್ಳ ಮನೆಯ ಮುಂಬಾಗಿಲನ್ನು ಸಲಾಕೆಯಿಂದ ಮೀಟಿ ಒಳ ನುಗ್ಗಿದ್ದು ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ಇಲ್ಲದ ಜಾಗವನ್ನು ನೋಡಿ ಆ ಕಡೆಯಿಂದ ಕಳ್ಳ ಒಳಗೆ ಬಂದಿದ್ದಾನೆ. ಕಳ್ಳತನ ಮಾಡಿಕೊಂಡು ಬೈಕ್ ಹತ್ತಿ ಪರಾರಿಯಾಗುವ ದೃಶ್ಯ ಕೆಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಬಾಗಲಕೋಟೆ ಪೊಲೀಸರ ನಾಕಾ ಬಂದಿಯಿಂದ ಬ್ಯಾಂಕ್‌ ದರೋಡೆಕೋರರು ಅರೆಸ್ಟ್‌!

    ಬಾಗಲಕೋಟೆ ಪೊಲೀಸರ ನಾಕಾ ಬಂದಿಯಿಂದ ಬ್ಯಾಂಕ್‌ ದರೋಡೆಕೋರರು ಅರೆಸ್ಟ್‌!

    ಬಾಗಲಕೋಟೆ: ಬ್ಯಾಂಕ್‌ ದರೋಡೆಗೆ ಯತ್ನಿಸಿ ಅರ್ಧದಲ್ಲೇ ಪರಾರಿಯಾಗಿದ್ದ ದರೋಡೆಕೋರರನ್ನು ಬಾಗಲಕೋಟೆ ಗ್ರಾಮೀಣ ಠಾಣೆಯ ಪೊಲೀಸರು (Bagalkot Rural Police) ಸೆರೆ ಹಿಡಿದು ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ದರೋಡೆಗೆ ಯತ್ನ:
    ನ. 25ರ ರಾತ್ರಿ ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (Karnataka Vikas Grameena Bank ) ದರೋಡೆಗೆ  ತಂಡವೊಂದು ಸ್ಕೆಚ್‌ ಹಾಕಿತ್ತು. ಬೀಗ ಮುರಿದು ಒಳಗೆ ನುಗ್ಗಿದ್ದ ಗ್ಯಾಂಗ್‌ ಸೈರನ್ ಬಂದ್ ಮಾಡಿ, ನಂತರ ಸಿಸಿ ಕ್ಯಾಮೆರಾ ಒಡೆದು, ಅಡುಗೆ ಅನಿಲ‌ ಸಿಲಿಂಡರ್, ಗ್ಯಾಸ್ ಕಟ್ಟರ್‌ ಗನ್‌ನಿಂದ ಬರೋಬ್ಬರಿ ಒಂದೂವರೆ ತಾಸು ಸ್ಟ್ರಾಂಗ್ ರೂಮ್ ಒಡೆಯಲು ವಿಫಲ ಯತ್ನ ನಡೆಸಿತ್ತು. ಆದರೆ ಅದು ಸಾಧ್ಯವಾಗದೇ ಇದ್ದಾಗ ಅಷ್ಟಕ್ಕೆ ಬಿಟ್ಟು ಪರಾರಿಯಾಗಿದ್ದರು. ಕಳ್ಳತನಕ್ಕೆ ವಿಫಲ ಯತ್ನ ನಡೆದ ನಂತರ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಭಿಸಿದ್ದರು. ಒಂದು ಸಿಸಿಟಿವಿ ಒಡೆಯದ ಕಾರಣ ಆ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳತನದ ದೃಶ್ಯವನ್ನು ಆಧಾರಿಸಿ ತನಿಖೆ ಚುರುಕುಗೊಳಿಸಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಡಿ. 11 ರಂದು ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಕ್ರಾಸ್ ಬಳಿ ಪೊಲೀಸರು ನಾಕಾ ಬಂದಿ ಹಾಕಿ ಎಂದಿನಂತೆ ಪರಿಶೀಲನೆ ನಡೆಸುತ್ತಿದ್ದರು. ಆ ದಿನ ರಾತ್ರಿ 1:05ರ ವೇಳೆ ಒಂದು ಕಾರು ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಸಂಶಯ ಬಂದು ಪೊಲೀಸರು ಕಾರು ತಪಾಸಣೆ ಮಾಡಿದಾಗ ಕಾರಿನಲ್ಲಿ ಸಿಲಿಂಡರ್, ಗ್ಯಾಸ್ ಕಟ್ಟರ್‌, ಖಾರದಪುಡಿ, ಕಬ್ಬಿಣದ ರಾಡ್‌, ಸ್ಕ್ರೂ ಡ್ರೈವರ್, ಮಂಕಿ ಕ್ಯಾಪ್‌ಗಳು ಪತ್ತೆಯಾಗಿದ್ದವು.

    ಗ್ರಾಮೀಣ ಠಾಣೆ ಪೊಲೀಸರು ಸಂಶಯಾಸ್ಪದ ವ್ಯಕ್ತಿಗಳನ್ನ ಠಾಣೆಗೆ ತಂದು ಬೆಂಡೆತ್ತಿ ವಿಚಾರಣೆ ನಡೆಸಿದಾಗ ಬಾಗಲಕೋಟೆಯ ತಾಲೂಕಿನ ಶಿರೂರು ಕೆನರಾ ಬ್ಯಾಂಕ್ ದರೋಡೆಗೆ ಹೊರಟಿದ್ದಾಗಿ ಖದೀಮರು ತಿಳಿಸಿದ್ದಾರೆ. ಪೊಲೀಸರ ಮತ್ತಷ್ಟು ವಿಚಾರಣೆ ನಡೆಸಿದಾಗ ರಾಂಪುರ ಬ್ಯಾಂಕ್ ದರೋಡೆ ವಿಫಲ ಯತ್ನದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ.

    ನವನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ ಆರೋಪದ ಅಡಿ ಹುಲಗಪ್ಪ ಎಂಬಾತನ ಮೇಲೆ ಕೇಸ್‌ ದಾಖಲಾಗಿತ್ತು. ಆತನ ಕಾಲಿಗೆ ಗಾಯ ಆಗಿ ನಡೆಯುವ ಸ್ಟೈಲ್‌ ಬದಲಾಗಿತ್ತು. ಸಿಕ್ಕಿಬಿದ್ದ ದರೋಡೆಕೋರರಲ್ಲಿ ಒಬ್ಬಾತನ ನಡೆಯುವ ಸ್ಟೈಲ್ ಆರೋಪಿ ಹುಲಗಪ್ಪನ ರೀತಿಯೇ ಇತ್ತು. ಆ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ನಾನೇ ಆ ವ್ಯಕ್ತಿ ಎಂದು ಹೇಳಿದ್ದಾನೆ. ಈ ಆರೋಪಿಗಳು ಹತ್ತಾರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯವಿದ್ದು ತನಿಖೆ ಮುಂದುವರೆದಿದೆ.

     

  • ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್‍ 3 ದಿನ ಪೊಲೀಸ್‌ ಕಸ್ಟಡಿಗೆ

    ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್‍ 3 ದಿನ ಪೊಲೀಸ್‌ ಕಸ್ಟಡಿಗೆ

    ತುಮಕೂರು: ಸೋಡಿಯಂ ಮೆಟಲ್ (Chemical Blast) ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್‍ನನ್ನು (Drone Prathap) ಮಧುಗಿರಿಯ ಜೆಎಂಎಫ್‍ಸಿ ನ್ಯಾಯಾಲಯ (Court) ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಪ್ರಕರಣ ಸಂಬಂಧ ಡ್ರೊಣ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಮಿಡಿಗೇಶಿ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಫೋಟ ನಡೆಸಿದ್ದ ಸ್ಥಳ ಮಹಜರು ನಡೆಸಿದ್ದಾರೆ.

    ಏನಿದು ಪ್ರಕರಣ?
    ನೀರಿಗೆ ಕೆಮಿಕಲ್ ಹಾಕಿ ಡ್ರೋನ್ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾನೆ. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದಾನೆ. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದಾನೆ.

    ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದ. ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದರು.

    ಈ ರೀತಿಯ ಪ್ರಯೋಗ ಅಪಾಯಕಾರಿ ಮತ್ತು ಕಾನೂನು ಬಾಹಿರವಾದದ್ದು. ಈ ಬ್ಲಾಸ್ಟ್ ವಿಡಿಯೋ ಮಾಡುವ ಮುನ್ನ ಕನಿಷ್ಟ ಪಕ್ಷ ಡ್ರೋನ್ ಪ್ರತಾಪ್ ಯೋಚನೆ ಮಾಡಬೇಕಾಗಿತ್ತು ಇದ್ಯಾವ ಸೀಮೆ ವಿಜ್ಞಾನದ ಬಗ್ಗೆ ಮಾಹಿತಿ ಕೊಡ್ತಾ ಇರೋದು ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

  • ಛತ್ತೀಸ್‌ಗಢ | ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ 7 ನಕ್ಸಲರು ಬಲಿ

    ಛತ್ತೀಸ್‌ಗಢ | ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ 7 ನಕ್ಸಲರು ಬಲಿ

    ರಾಯ್ಪುರ್: ಛತ್ತೀಸ್‌ಗಢದ (Chhattisgarh) ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಏಳು ಮಾವೋವಾದಿಗಳು (Maoists) ಹತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌

    ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಜಂಟಿ ತಂಡವು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ದಕ್ಷಿಣ ಅಬುಜ್‌ಮದ್‌ನ ಕಾಡಿನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 7 ಮಂದಿ ನಕ್ಸಲರು ಹತರಾಗಿದ್ದಾರೆ.

    ಸಿಆರ್‌ಪಿಎಫ್ ತಂಡಗಳಲ್ಲದೆ ನಾರಾಯಣಪುರ, ದಾಂತೇವಾಡ, ಬಸ್ತಾರ್ ಮತ್ತು ಕೊಂಡಗಾಂವ್ ಜಿಲ್ಲೆಗಳ ಪೊಲೀಸ್‌ನ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗುಂಡಿನ ಚಕಮಕಿ ಬಳಿಕ ಸಮವಸ್ತ್ರ ಧರಿಸಿದ್ದ ಏಳು ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ

    ಜೈಲಿಂದ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ಹತ್ಯೆ – ಮೃತದೇಹ ಕತ್ತರಿಸಿ ನದಿಗೆಸೆದ ಹಂತಕ

    ಭುವನೇಶ್ವರ: ಬಾಲಕಿಯ (Girl) ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿದ್ದ ವ್ಯಕ್ತಿಯೊಬ್ಬ ಜಾಮೀನಿನ ಮೇಲೆ ಹೊರಬಂದು ಸಂತ್ರಸ್ತೆಯನ್ನು ಹತ್ಯೆಗೈದು ಆಕೆಯ ದೇಹವನ್ನು ಕತ್ತರಿಸಿ ನದಿಗೆ ಎಸೆದಿರುವ ಘಟನೆ ಒಡಿಶಾದ (Odisha) ಸುಂದರ್‌ಗಢ್‌ನಲ್ಲಿ ನಡೆದಿದೆ.

    ಹತ್ಯೆಗೈದ ಆರೋಪಿಯನ್ನು ಕುನು ಕಿಸ್ಸಾನ್ ಎಂದು ಗುರುತಿಸಲಾಗಿದೆ. ಆರೋಪಿ ಕಳೆದ ವರ್ಷ ಆಗಸ್ಟ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಆತನ ವಿರುದ್ಧ ಧರೂದಿಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತನನ್ನು ಬಂಧಿಸಲಾಗಿತ್ತು. ಆತ ಜಾಮೀನಿನ ಮೇಲೆ ಹೊರಗೆ ಬಂದು ಸಂತ್ರಸ್ತೆಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಬಾಲಕಿ ಸುಂದರ್‌ಗಢ್ ಜಿಲ್ಲೆಯವಳಾಗಿದ್ದು, ಜರ್ಸುಗುಡಾ ಪಟ್ಟಣದಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದಳು. ಡಿಸೆಂಬರ್ 7 ರಂದು ಬಾಲಕಿಯ ಕುಟುಂಬದಿಂದ ಆಕೆ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದ ಪೊಲೀಸರು, ಬಾಲಕಿ ಇಬ್ಬರು ವ್ಯಕ್ತಿಗಳೊಂದಿಗೆ ಬೈಕ್‌ನಲ್ಲಿ ತೆರಳಿದ್ದನ್ನು ಪತ್ತೆ ಹಚ್ಚಿದ್ದರು. ಅವರು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಕುನು ಕಿಸ್ಸಾನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿಗಳು ರೂರ್ಕೆಲಾ ಮತ್ತು ದಿಯೋಗರ್‌ನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 143ರಲ್ಲಿ ಚಾಕುವಿನಿಂದ ಸಂತ್ರಸ್ತೆಯ ಕತ್ತು ಸೀಳಿ, ಆಕೆಯ ದೇಹದ ಭಾಗಗಳನ್ನು ಬ್ರಹ್ಮಣಿ ನದಿಯ ತಾರ್ಕೆರಾ ನಲಿ ಮತ್ತು ಬಲುಘಾಟ್‌ನಲ್ಲಿ ಎಸೆದಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಸಹಾಯದಿಂದ ಪೊಲೀಸರು ಬ್ರಹ್ಮಣಿ ನದಿಯಲ್ಲಿ ದೇಹದ ಭಾಗಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಗಂಟೆಗಳ ಕಾಲ ಶೋಧ ಕಾರ್ಯಾಚರಣೆಯ ನಂತರ ಬಾಲಕಿಯ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗದಗ| ಹಾಡಹಗಲೇ ನಡುಬೀದಿಯಲ್ಲಿ ಚಾಕು ಸಮೇತ ಹೊಡೆದಾಡಿದ ಯುವಕರು

    ಗದಗ| ಹಾಡಹಗಲೇ ನಡುಬೀದಿಯಲ್ಲಿ ಚಾಕು ಸಮೇತ ಹೊಡೆದಾಡಿದ ಯುವಕರು

    ಗದಗ: ಹಾಡಹಗಲೇ ನಡುಬೀದಿಯಲ್ಲಿ ಇಬ್ಬರು ಯುವಕರು ಚಾಕು ಸಮೇತ ಹೊಡೆದಾಡಿದ ಘಟನೆ ಗದಗ (Gadag) ನಗರದ ಚೆನ್ನಮ್ಮ ಸರ್ಕಲ್ ಬಳಿ ನಡೆದಿದೆ.

    ಹಣಕಾಸು (Finance) ಹಾಗೂ ಕೌಟುಂಬಿಕ (Family) ವಿಚಾರವಾಗಿ ಫಕೀರೇಶ ನಂದಿಹಳ್ಳಿ ಹಾಗೂ ಗಂಗಾಧರ ಹಿರೇಮಠ ಕಿತ್ತಾಡಿದ್ದಾರೆ. ಈ ಇಬ್ಬರು ಮೂಲತಃ ಮುಂಡರಗಿ ತಾಲೂಕಿನ ಚಿರ್ಚಿಹಾಳ ಗ್ರಾಮದ ನಿವಾಸಿಗಳು. ಕಳೆದ ನಾಲ್ಕೈದು ವರ್ಷಗಳಿಂದ ಗದಗ ನಗರದ ಹುಡೋ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಇಬ್ಬರು ನಡುವೆ ಹಣಕಾಸು ವಿಚಾರವಾಗಿ ಆಗಾಗ ಗಲಾಟೆ ಆಗುತ್ತಿತ್ತು. ಇದರ ಜೊತೆಗೆ ಫಕೀರೇಶನ ಮಗಳು ಗಂಗಾಧರನ ಮನೆಗೆ ಬಂದು ತಂದೆ ಬಗ್ಗೆ ದೂರು ಹೇಳಿದ್ದಾಳೆ.

     

    ನನ್ನ ತಾಯಿ ಹಾಗೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ವಿನಾಕಾರಣ ಕಿರುಕುಳ ಕೊಡ್ತಿದ್ದಾನೆ ಎಂದು ದೂರಿದ್ದಾಳೆ. ಇದರಿಂದ ಕೊಪಿತಗೊಂಡ ಗಂಗಾಧರ್ ಫಕೀರೇಶನೊಂದಿಗೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ನಂತರ ಒಬ್ಬರನೊಬ್ಬರು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಚುನಾವಣೆಗೆ ಕಾಂಗ್ರೆಸ್ ಜೊತೆ ಆಪ್ ಮೈತ್ರಿ ಇಲ್ಲ – ಅರವಿಂದ್ ಕೇಜ್ರಿವಾಲ್

    ಗಲಾಟೆಯಲ್ಲಿ ಫಕೀರೇಶನ ಕುತ್ತಿಗೆ, ಮುಖ, ಎದೆಗೆ ಗಂಗಾಧರ್ ಎಂಬಾತ ಚಾಕು ಇರಿದಿದ್ದಾನೆ. ಫಕೀರೇಶನಿಗೆ ಗಂಭೀರ ಗಾಯವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರು ಯಾವುದೇ ಭಯವೇ ಇಲ್ಲದೇ ಇಬ್ಬರು ಹೊಡೆದಾಡಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನಿಯಮ ಗಮನಿಸದೆ ಪಿಡಿಒ ಪರೀಕ್ಷೆಗೆ ಹಾಜರು – ಅಭ್ಯರ್ಥಿಗಳ ಶರ್ಟ್‍ಗೆ ಅಧಿಕಾರಿಗಳಿಂದ ಕತ್ತರಿ!

    ನಿಯಮ ಗಮನಿಸದೆ ಪಿಡಿಒ ಪರೀಕ್ಷೆಗೆ ಹಾಜರು – ಅಭ್ಯರ್ಥಿಗಳ ಶರ್ಟ್‍ಗೆ ಅಧಿಕಾರಿಗಳಿಂದ ಕತ್ತರಿ!

    ಹಾಸನ: ಪಿಡಿಒ (PDO) ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಗೆ ತುಂಬು ತೋಳಿನ ಅಂಗಿ ತೊಟ್ಟು ಹಾಜರಾದ ಅಭ್ಯರ್ಥಿಗಳ ಅಂಗಿಯ ತೋಳುಗಳನ್ನು ಹಾಸನದ (Hassan) ಪರೀಕ್ಷಾ ಕೇಂದ್ರದ ಸಿಬ್ಬಂದಿ ಅರ್ಧ ತೋಳಿನವರೆಗೆ ಕತ್ತರಿಸಿದ್ದಾರೆ.

    ನಗರದ ಎಲ್‍ವಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ನೂರಾರು ಯುವಕ-ಯುವತಿಯರು ಆಗಮಿಸಿದ್ದರು. ಕೆಲ ಯುವತಿಯರು ತುಂಬುತೋಳು ಬಟ್ಟೆ ಧರಿಸಿ ಬಂದಿದ್ದರು. ಇದರಿಂದ ಪರೀಕ್ಷಾ ಕೇಂದ್ರದೊಳಗೆ ಅಭ್ಯರ್ಥಿಗಳನ್ನು ಬಿಡಲು ಅಧಿಕಾರಿಗಳು ನಿರಾಕರಿಸಿದರು. ಪರೀಕ್ಷೆಗೆ ಸಮಯವಾಗುತ್ತಿದೆ ಒಳಗೆ ಬಿಡಿ ಎಂದು ಮನವಿ ಮಾಡಿದರು ಅವಕಾಶ ನೀಡಲಿಲ್ಲ.

    ಕೊನೆಗೆ ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಯಿತು. ಈ ವೇಳೆ ಅಧಿಕಾರಿಗಳು ಹಾಗೂ ಪರೀಕ್ಷಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ, ವಸ್ತ್ರಸಂಹಿತೆ ನಿಯಮವಿದೆ, ಹಾಲ್ ಟಿಕೆಟ್‍ನಲ್ಲಿ ನಿಯಮಗಳನ್ನು ಹಾಕಲಾಗಿದೆ. ಆದರೆ ನೀವು ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ ಪರೀಕ್ಷೆ ಬರೆಯಲು ಬಂದಿದ್ದೀರಾ? ನಮ್ಮ ಕರ್ತವ್ಯ ನಾವು ಮಾಡಲೇಬೇಕು ಎಂದು ಅಧಿಕಾರಿ ಉತ್ತರ ನೀಡಿದ್ದಾರೆ.

    ಕಡೆಗೆ ಕರ್ತವ್ಯನಿರತ ಸಿಬ್ಬಂದಿ ಕತ್ತರಿಯಿಂದ ಅರ್ಧತೋಳಿನವರೆಗೆ ಬಟ್ಟೆ ಕತ್ತರಿಸಿ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.

  • ದರೋಡೆಯಂತೆ ಬಿಂಬಿಸಿ ತಾಯಿಯ ಹತ್ಯೆ – ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮಗನಿಂದಲೇ ಕೃತ್ಯ

    ದರೋಡೆಯಂತೆ ಬಿಂಬಿಸಿ ತಾಯಿಯ ಹತ್ಯೆ – ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮಗನಿಂದಲೇ ಕೃತ್ಯ

    ನವದೆಹಲಿ: ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ತಾಯಿಯನ್ನು ಕೊಲೆಗೈದು ದರೋಡೆಯಂತೆ ಬಿಂಬಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಮಹಿಳೆಯನ್ನು ಹತ್ಯೆಗೈದ ಆರೋಪದ ಮೇಲೆ ಆಕೆಯ ಮಗ ಸಾವನ್‌ (22) ಎಂಬಾತನನ್ನು ಬಂಧಿಸಲಾಗಿದೆ. ತಾನು ಇಷ್ಟ ಪಟ್ಟ ಯುವತಿಯನ್ನು ಮದುವೆಯಾಗಲು ತಾಯಿ ನಿರಾಕರಿಸಿದ್ದಕ್ಕೆ ಯುವಕ ಈ ಕೃತ್ಯ ಎಸಗಿದ್ದಾನೆ. ಕೊಲೆಯ ಬಳಿಕ ಆಕೆಯ ಕಿವಿ ಓಲೆಗಳನ್ನು ಸಾವನ್‌ ತೆಗೆದಿದ್ದ. ಈ ಮೂಲಕ ದರೋಡೆಯಂತೆ ಬಿಂಬಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಹತ್ಯೆಯ ಬಳಿಕ ದೆಹಲಿ ಪೊಲೀಸರಿಗೆ ಕರೆ ಮಾಡಿ ತನ್ನ ತಾಯಿಯನ್ನು ಕೊಂದು ಆಕೆಯ ಕಿವಿಯೋಲೆಗಳನ್ನು ಕದ್ದಿರುವುದಾಗಿ ತಿಳಿಸಿದ್ದ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ದರೋಡೆ ನಡೆದಿರುವ ಕುರುಹುಗಳು ಪತ್ತೆಯಾಗಿಲ್ಲ. ಮನೆಯಲ್ಲಿ ಇತರ ಬೆಲೆಬಾಳುವ ವಸ್ತುಗಳು ಸಹ ಪತ್ತೆಯಾಗಿದ್ದು, ಸಾವನ್‌ ಮೇಲೆ ಶಂಕೆ ಮೂಡಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಯಲಾಗಿದೆ.

    ಸಾವನ್‌ನ ಹಿರಿಯ ಸಹೋದರ ಕಪಿಲ್ (27) ಎಂಬಾತನ ವಿವಾಹ ನಿಶ್ಚಯವಾಗಿತ್ತು. ಇದೇ ವೇಳೆ ಸಾವನ್‌ ತನಗೆ ಪರಿಚಯವಿದ್ದ ಯುವತಿಯನ್ನು ಮದುವೆಯಾಗಲು ಬಯಸಿರುವುದಾಗಿ ತನ್ನ ತಾಯಿಗೆ ತಿಳಿಸಿದ್ದಾನೆ. ಆದರೆ, ಆತನ ತಾಯಿ ಗದರಿಸಿ ನಿರಾಕರಿಸಿದ್ದಾಳೆ. ಅಲ್ಲದೇ ಮತ್ತೊಮ್ಮೆ ವಿಷಯ ಪ್ರಸ್ತಾಪಿಸಿದರೆ, ಆಸ್ತಿಯಲ್ಲಿ ಯಾವುದೇ ಪಾಲನ್ನು ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾಳೆ. ಇದೇ ಕಾರಣಕ್ಕೆ ಆತ ತಾಯಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    ಹುಬ್ಬಳ್ಳಿ: ರಾತ್ರಿ ವೇಳೆ ಮನೆಯ ಆವರಣಕ್ಕೆ ನುಗ್ಗಿ ಒಣಗಿಸಿದ್ದ ಮಹಿಳೆಯರ ಒಳ ಉಡುಪನ್ನು ಕಳ್ಳತನ ಮಾಡುತ್ತಿದ್ದ ಸೈಕೋ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ (Police) ಒಪ್ಪಿಸಿದ ಘಟನೆ ಹುಬ್ಬಳ್ಳಿಯ (Hubballi) ನೇಕಾರ ನಗರದಲ್ಲಿ ನಡೆದಿದೆ.

    ಕಳೆದ ಕೆಲವು ದಿನಗಳಿಂದ ನಗರದ ಹಲವು ಮನೆಗಳ ಹೊರಗೆ ಒಣಗಿಸಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆಯಾಗುತ್ತಿದ್ದವು. ಅಲ್ಲದೇ ಕೆಲವು ಮನೆಗಳಲ್ಲಿ ಹಣ ಕೂಡಾ ಕಳ್ಳತನ ಆಗುತ್ತಿತ್ತು. ಹೀಗಾಗಿ ಕೆಲವರು ತಮ್ಮ ತಮ್ಮ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿಡಿದ್ದರು.

    ಗುರುವಾರ ಮಧ್ಯರಾತ್ರಿ ಸೈಕೋ ಕಳ್ಳ ಮನೆಯೊಂದರ ಮುಂದಿನ ಗೇಟ್ ಹಾರಿ ಬಂದು, ಒಳ ಉಡುಪುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದ. ಈ ವೇಳೆ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಕಂಡ ಮನೆಯವರು ಏರಿಯಾ ನಿವಾಸಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳೀಯರೆಲ್ಲ ಸೇರಿ ಕಳ್ಳನನ್ನು ಹಿಡಿದು ಥಳಿಸಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ತರಗತಿಗೆ ಪದೇ ಪದೇ ಗೈರು – ಬುದ್ಧಿ ಹೇಳಿದ್ದಕ್ಕೆ ಪ್ರಿನ್ಸಿಪಾಲರ ತಲೆಗೆ ಗುಂಡಿಕ್ಕಿ ಹತ್ಯೆಗೈದ ವಿದ್ಯಾರ್ಥಿ!

    ತರಗತಿಗೆ ಪದೇ ಪದೇ ಗೈರು – ಬುದ್ಧಿ ಹೇಳಿದ್ದಕ್ಕೆ ಪ್ರಿನ್ಸಿಪಾಲರ ತಲೆಗೆ ಗುಂಡಿಕ್ಕಿ ಹತ್ಯೆಗೈದ ವಿದ್ಯಾರ್ಥಿ!

    ಭೂಪಾಲ್‌: ತರಗತಿಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರನ್ನು ಕರೆಸಿ ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿಯೊಬ್ಬ (Student) ಪ್ರಾಂಶುಪಾಲರನ್ನೇ (Principal ) ಗುಂಡಿಕ್ಕಿ ಹತ್ಯೆಗೈದ ಘಟನೆ ‌ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರದಲ್ಲಿ ನಡೆದಿದೆ.

    ಧಮೋರಾದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದ ಪ್ರಾಂಶುಪಾಲರನ್ನು ಸುರೇಂದ್ರ ಕುಮಾರ್ ಸಕ್ಸೇನಾ ಎಂದು ಗುರುತಿಸಲಾಗಿದೆ. ಅವರು ಹತ್ಯೆಗೈದ ವಿದ್ಯಾರ್ಥಿಗೆ ಕಾಲೇಜಿಗೆ ಸರಿಯಾಗಿ ಬರುತ್ತಿರಲಿಲ್ಲ ಎಂದು ಛೀಮಾರಿ ಹಾಕಿದ್ದರು. ಇದೇ ಕಾರಣಕ್ಕೆ ಶಾಲೆಗೆ ನುಗ್ಗಿ ಶೌಚಾಲಯದಲ್ಲಿದ್ದ ಪ್ರಾಂಶುಪಾಲರ ತಲೆಗೆ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರಾಂಶುಪಾಲರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

    ಕಾಲೇಜಿನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಆರೋಪಿಗಳ ಕೃತ್ಯ ಸೆರೆಯಾಗಿದೆ. ಹತ್ಯೆ ಬಳಿಕ ಪ್ರಾಂಶುಪಾಲರ ಸ್ಕೂಟರ್ ಸಮೇತ ಆರೋಪಿ ಹಾಗೂ ಆತನ ಸ್ನೇಹಿತ ಇಬ್ಬರೂ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಪೊಲೀಸರು (Police) ಮಾಹಿತಿ ಸಂಗ್ರಹಿಸಿದ್ದಾರೆ. ಈ ವೇಳೆ ಆರೋಪಿ ಗೂಂಡಾ ಸ್ವಭಾವದವನು ಎಂದು ತಿಳಿದು ಬಂದಿದೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.