Tag: police

  • ಮುಂಬೈ | ಅಪ್ರಾಪ್ತನ ಅತಿ ವೇಗದ ಕಾರು ಚಾಲನೆಗೆ ಬಾಲಕ ಬಲಿ

    ಮುಂಬೈ | ಅಪ್ರಾಪ್ತನ ಅತಿ ವೇಗದ ಕಾರು ಚಾಲನೆಗೆ ಬಾಲಕ ಬಲಿ

    ಮುಂಬೈ: ಅಪ್ರಾಪ್ತನೋರ್ವ ಕಾರನ್ನು (Car) ಮಿತಿ ಮೀರಿದ ವೇಗದಲ್ಲಿ ಚಲಾಯಿಸಿ ನಾಲ್ಕು ವರ್ಷದ ಬಾಲಕನ ಮೇಲೆ ಹರಿಸಿದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಡಾಲ ಪ್ರದೇಶದ ಅಂಬೇಡ್ಕರ್ ಕಾಲೇಜು ಬಳಿ ಈ ಅಪಘಾತ (Accident) ಸಂಭವಿಸಿದೆ. ಮೃತ ಬಾಲಕನನ್ನು ಆಯುಷ್ ಲಕ್ಷ್ಮಣ್ ಕಿನ್ವಾಡೆ ಎಂದು ಗುರುತಿಸಲಾಗಿದೆ. ಬಾಲಕನ ಕುಟುಂಬ ಫುಟ್‌ಪಾತ್‌ನಲ್ಲಿ ವಾಸವಾಗಿತ್ತು. ಆತನ ತಂದೆ ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರು ಚಾಲನೆ ಮಾಡುತ್ತಿದ್ದ ಸಂದೀಪ್ ಗೋಲೆ (19) ಎಂಬಾತನನ್ನು ಬಂಧಿಸಲಾಗಿದೆ. ಆತ ವಿಲೇ ಪಾರ್ಲೆ ನಿವಾಸಿಯಾಗಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರವೂ ಸೇರಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ವಾರ ಹೇಳಿತ್ತು. ಇದರ ಬೆನ್ನಲ್ಲೇ ಅಪ್ರಾಪ್ತ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣನಾದ ಘಟನೆ ನಡೆದಿದೆ.

    ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ದತ್ತಾಂಶವನ್ನು ಆಧರಿಸಿದ ವರದಿಯಲ್ಲಿ 2018-2022ರ ಅವಧಿಯಲ್ಲಿ ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿಲಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತದಿಂದ ಸಾವುಗಳು ಸಂಭವಿಸಿವೆ (1,08,882), ತಮಿಳುನಾಡು (84,316) ಮತ್ತು ಮಹಾರಾಷ್ಟ್ರ (66,370) ನಂತರದ ಸ್ಥಾನದಲ್ಲಿವೆ.

  • ಕಬ್ಬನ್‌ ಪಾರ್ಕ್‌ – ಯಾವುದೇ ಗುಂಪು ಚಟುವಟಿಕೆಗೆ ಅನುಮತಿ ಕಡ್ಡಾಯ

    ಕಬ್ಬನ್‌ ಪಾರ್ಕ್‌ – ಯಾವುದೇ ಗುಂಪು ಚಟುವಟಿಕೆಗೆ ಅನುಮತಿ ಕಡ್ಡಾಯ

    ಬೆಂಗಳೂರು: ಇನ್ನು ಮುಂದೆ ಕಬ್ಬನ್ ಪಾರ್ಕ್‌ನಲ್ಲಿ (Cubbon Park) ನಡೆಯುವ ಯಾವುದೇ ಗುಂಪು ಚಟುವಟಿಕೆಗಳಿಗೆ ತೋಟಗಾರಿಕಾ ಇಲಾಖೆ (Horticulture Department) ಮತ್ತು ಪೊಲೀಸ್‌ ಇಲಾಖೆಯ (Police Department) ಅನುಮತಿ ಅಗತ್ಯ.

    ಅನುಮತಿ ಇಲ್ಲದೇ ಕಬ್ಬನ್ ಪಾರ್ಕ್‌ನಲ್ಲಿ ಸಂಘಟನೆಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದು ಇದು ಅಲ್ಲಿಗೆ ಬರುವ ಜನರಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ಕಬ್ಬನ್‌ ಪಾರ್ಕ್‌ ಆಡಳಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    20 ಜನರನ್ನು ಮೀರುವ ಕೂಟಗಳಿಗೆ ಮುಂಗಡ ಅನುಮೋದನೆಯ ಅಗತ್ಯವಿದೆ. ತೋಟಗಾರಿಕೆ ಇಲಾಖೆಯಿಂದ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯ ಅನುಮತಿಯನ್ನು ಪಡೆಯಬೇಕು. ಇದನ್ನೂ ಓದಿ: ಅಮಿತ್ ಶಾ ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ: ಜೋಶಿ ವಿರುದ್ಧ ಹರಿಪ್ರಸಾದ್ ಕಿಡಿ

    ಯಾಕೆ ಈ ಮಾರ್ಗಸೂಚಿ?
    ಶನಿವಾರ ಕಬ್ಬನ್‌ ಪಾರ್ಕ್‌ನಲ್ಲಿ ಪೂರ್ವಾನುಮತಿ ಇಲ್ಲದೆ ಸೀಕ್ರೇಟ್‌ ಸಂತ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ  ಗದ್ದಲ ಉಂಟು ಮಾಡಿದ್ದಾರೆ ಎಂಬ ದೂರು ಬಂದಿತ್ತು.

    ಇತ್ತೀಚಿನ ದಿನಗಳಲ್ಲಿ ಕಬ್ಬನ್‌ ಪಾರ್ಕ್‌ಗೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಇಲ್ಲಿ ಹಲವು ಪುಸ್ತಕ ಪ್ರೇಮಿಗಳು, ಸಾಹಿತ್ಯ ಆಸಕ್ತರು ಸಣ್ಣ ಸಣ್ಣ ಗುಂಪುಗಳೊಂದಿಗೆ ಬರುತ್ತಿದ್ದಾರೆ. ಆದರೆ ಈಗ 20ಕ್ಕೂ ಹೆಚ್ಚು ಜನರು ಇರುವ ಗುಂಪುಗಳು ಹೆಚ್ಚಾಗಿದ್ದು ಗದ್ದಲವನ್ನು ಸೃಷ್ಟಿಸುತ್ತಿದ್ದಾರೆ. ಈ ಕಾರಣಕ್ಕೆ ಈಗ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

     

  • ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ

    ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ

    ಮಂಡ್ಯ: ತೋಟದ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮರ ಕತ್ತರಿಸುವ ಯಂತ್ರದಲ್ಲಿ ಮನೆಯ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

    ಕ್ಯಾತನಹಳ್ಳಿಯ ರಮೇಶ್ ಎಂಬುವವರ ತೋಟದ ಮನೆಗೆ ಅನಾಮಧೇಯ ವ್ಯಕ್ತಿ ಸಂಜೆ ಬಂದಿದ್ದಾನೆ. ಈ‌ ವೇಳೆ ರಮೇಶ್ ಪತ್ನಿ ಹಾಗೂ ರಮೇಶ್ ಮನೆಯ ಒಳ ಭಾಗದಲ್ಲಿ ಇದ್ದು, ಅವರ ಮಗ ಸಂತೋಷ್ ಹಾಲನ್ನು ಡೈರಿಗೆ ಹಾಕಲು ತೆರಳಿದ್ದ. ಆಗ ಮನೆಯ ಬಾಗಿಲು ತಟ್ಟಿದ ಶಬ್ಧ ಕೇಳಿ, ಯಶೋಧಮ್ಮ ಮನೆಯ ಬಾಗಿಲನ್ನು ತೆರೆಯುತ್ತಾರೆ. ನಂತರ ಅಪರಿಚಿತ ವ್ಯಕ್ತಿ ಬ್ಯಾಗ್ ತೆಗೆದು ಮರ ಕತ್ತರಿಸುವ ಯಂತ್ರ ತೆಗೆದು ನಿಮ್ಮ‌ ಮನೆಯಿಂದ ಆರ್ಡರ್‌ ಬಂದಿತ್ತು ತಗೋಳಿ ಎನ್ನುತ್ತಾನೆ. ಈ ವೇಳೆ‌ ಯಶೋಧಮ್ಮ ನಾವು ಯಾವ ಆರ್ಡರ್ ಮಾಡಿಲ್ಲ ಹೋಗಿ ಎಂದು ಆತನನ್ನು ಕಳಿಸಲು ಮುಂದಾಗುತ್ತಾರೆ.

    ಈ ವೇಳೆ, ಆ ಕಿರಾತಕ ಮರ ಕತ್ತರಿಸುವ ಯಂತ್ರವನ್ನು ಆನ್ ಮಾಡಿ ಯಶೋಧಮ್ಮ ಮುಖದ ಭಾಗಕ್ಕೆ ಹಿಡಿದಿದ್ದಾನೆ. ಅವರ ಕೆನ್ನೆ ಕೊಯ್ದು ರಕ್ತ ಚಲ್ಲುತ್ತದೆ, ನಂತರ ಯಶೋಧಮ್ಮ ಪ್ರಜ್ಞೆ ತಪ್ಪಿ ಬೀಳುತ್ತಾರೆ. ಬಳಿಕ ಮನೆಯ ಒಳ ಭಾಗಕ್ಕೆ ಹೋಗಿ ಮಲಗಿದ್ದ ರಮೇಶ್ ಅವರ ಕುತ್ತಿಗೆಗೆ ಮರ ಕತ್ತರಿಸುವ ಯಂತ್ರವನ್ನು ಹಿಡಿಯುತ್ತಾನೆ. ನಂತರ ರಮೇಶ್ ಕೈ ಭಾಗಕ್ಕೆ ಎಲ್ಲಾ ಹಿಡಿದು ಬರ್ಬರವಾಗಿ ಹತ್ಯೆ ಮಾಡುತ್ತಾನೆ. ಈ‌ ವೇಳೆ ಪ್ರಜ್ಞೆ ತಪ್ಪಿದ್ದ ಯಶೋಧಮ್ಮ ಎಚ್ಚರಗೊಂಡು ಮನೆಯ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿ, ನಂತರ ಸ್ಥಳೀಯರನ್ನು ಕರೆಯುತ್ತಾರೆ. ಈ ವೇಳೆ ಮರ ಕತ್ತರಿಸುವ ಯಂತ್ರದ ಮೂಲಕ ಬಾಗಿಲನ್ನು ಕೊಯ್ಯಲು ಸಹ ಆತ ಯತ್ನಿಸಿದ್ದಾನೆ.

    ಆತನನ್ನು ಹಿಡಿದು ಸ್ಥಳೀಯರು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಕೊಲೆಗಡುಕ ರಮೇಶ್ ಅವರ ಮನೆಗೆ ಬರುವ ಮುನ್ನೆ ಪಕ್ಕದ ಗ್ರಾಮವಾದ ಕೆನ್ನಾಳು ಗ್ರಾಮವೊಂದರ ಮನೆ ಹೋಗಿ ಅಲ್ಲೂ ಸಹ ಮರದ ಯಂತ್ರ ಬಂದಿದೆ ತಗೊಳಿ ಎಂದು ಸಹ ಹೇಳಿದ್ದಾನೆ. ಅಲ್ಲಿ‌ ಜನ ಹೆಚ್ಚಿದ್ದ ಕಾರಣ ಅಲ್ಲಿಂದ ವಾಪಸ್ಸು ಬಂದು ಇಲ್ಲಿ ಕೃತ್ಯ ಮಾಡಿದ್ದಾನೆ. ಸದ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದು, ಯಶೋಧಮ್ಮ ಅವರಿಗೆ ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • 45,000 ರೂ. ಸಾಲ ವಾಪಸ್ ಕೇಳಿದ್ದಕ್ಕೆ ಇರಿದು ಕೊಂದ್ರು!

    45,000 ರೂ. ಸಾಲ ವಾಪಸ್ ಕೇಳಿದ್ದಕ್ಕೆ ಇರಿದು ಕೊಂದ್ರು!

    ನವದೆಹಲಿ: ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ದೆಹಲಿಯ ನರೇಲಾದಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಉತ್ತರ ದೆಹಲಿಯ ನರೇಲಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಯುವಕನನ್ನು ಇರಿದು ಕೊಂದಿದ್ದಾರೆ. ಕೊಲೆಯಾದ ಯುವಕನನ್ನು ಹಿಮಾಂಶು (26) ಎಂದು ಗುರುತಿಸಲಾಗಿದೆ. ಆತ ಕಳೆದ ನಾಲ್ಕು ತಿಂಗಳಿನಿಂದ ತನ್ನ ಸ್ನೇಹಿತ ಸುಮಿತ್ ಕೌಶಿಕ್ ಎಂಬವರ ಜೊತೆ ವಾಸವಾಗಿದ್ದ. ಸಂಜೆ 6:28ಕ್ಕೆ ಪೊಲೀಸರು ಆತನ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

    ಕೊಲೆಯನ್ನು ಸುಮಿತ್ ಕೌಶಿಕ್ ಪ್ರತ್ಯಕ್ಷವಾಗಿ ನೋಡಿದ್ದು, ಆರೋಪಿಗಳು ಸಂಜೆ 6 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿ ಹಿಮಾಂಶು ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆ ಆರೋಪಿ ರವಿ ಎಂಬಾತ ಸುಮಿತ್ ಕೌಶಿಕ್ ಅವರಿಂದ 45,000 ರೂ. ಸಾಲ ಪಡೆದಿದ್ದ ಮತ್ತು ಅದನ್ನು ಹಿಂದಿರುಗಿಸಲು ವಿಫಲನಾಗಿದ್ದ. ಸಫಿಯಾಬಾದ್‌ನಲ್ಲಿರುವ ರವಿಯ ನಿವಾಸಕ್ಕೆ ಹಿಮಾಂಶು ಭೇಟಿ ನೀಡಿ ಮರುಪಾವತಿಗೆ ಒತ್ತಾಯಿಸಿ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದ. ಇದೇ ವಿಚಾರಕ್ಕೆ ಸೇಡು ತೀರಿಸಿಕೊಳ್ಳಲು ರವಿ ತನ್ನ ಸಹಚರರೊಂದಿಗೆ ಸೇರಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಪೊಲೀಸರು ರವಿ (30), ಸಾಹಿಲ್ (24), ಮತ್ತು ಆಶಿಶ್ (26) ಎಂಬವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಅಕ್ಷಯ್ ಖತ್ರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ

    ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ

    ಶಿವಮೊಗ್ಗ: ಟಿವಿ ರಿಮೋಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಾಲಕಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸೂಳೆಬೈಲಿನಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ಸಹನಾ (16) ಎಂದು ಗುರುತಿಸಲಾಗಿದೆ. ಟಿವಿ ರಿಮೋಟ್‍ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮೊಮ್ಮಗಳಿಗೆ ಅಜ್ಜಿ ಬೈದಿದ್ದಾರೆ. ಇದಕ್ಕಾಗಿ ಮನನೊಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉದ್ಯೋಗಿಗಳಿಗೆ ವಂಚನೆ – ರಾಬಿನ್‌ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

    ಉದ್ಯೋಗಿಗಳಿಗೆ ವಂಚನೆ – ರಾಬಿನ್‌ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

    ಬೆಂಗಳೂರು: ಉದ್ಯೋಗಿಗಳಿಗೆ ಸರ್ಕಾರಕ್ಕೆ ವಂಚನೆ ಎಸಗಿದ ಆರೋಪದಲ್ಲಿ ಟೀಂ‌ ಇಂಡಿಯಾ (Team India) ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin Uthappa) ಬಂಧನಕ್ಕೆ ವಾರೆಂಟ್ (Arrest Warrent) ಜಾರಿಯಾಗಿದೆ.

    ಪಿಎಫ್ಓ ರಿಜಿನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪುಲಕೇಶಿ ನಗರ ಪೊಲೀಸರಿಗೆ (Pulakeshinagar Police Station) ಪತ್ರ ಬರೆದಿದ್ದಾರೆ. ಇದೇ ತಿಂಗಳು ನಾಲ್ಕರಂದು ಅರೆಸ್ಟ್‌ ವಾರೆಂಟ್ ಜಾರಿಯಾಗಿದ್ದು ರಾಬಿನ್‌ ಉತ್ತಪ್ಪ ಪುಲಕೇಶಿ ನಗರದ ನಿವಾಸಿಯಾಗಿರುವ ಕಾರಣ ಅಲ್ಲಿನ ಠಾಣೆಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಂಧನ

    ಏನಿದು ಆರೋಪ?
    ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯನ್ನು ಉತ್ತಪ್ಪ ನಡೆಸುತ್ತಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಫಿಎಫ್ ಹಣ ಪಾವತಿಸಿಲ್ಲ.

    ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿಕೊಂಡು ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂ. ಪಿಎಫ್ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  • ಶಿವಮೊಗ್ಗ | ಅಭಿವೃದ್ಧಿ ಕಾರ್ಯ ಸಹಿಸದೆ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

    ಶಿವಮೊಗ್ಗ | ಅಭಿವೃದ್ಧಿ ಕಾರ್ಯ ಸಹಿಸದೆ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

    ಶಿವಮೊಗ್ಗ: ಗ್ರಾಮ ಪಂಚಾಯ್ತಿ (Gram Panchayat) ಸದಸ್ಯನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಹೊಸನಗರ (Hosanagar) ತಾಲೂಕಿನ ನಿಟ್ಟೂರಿನಲ್ಲಿ ನಡೆದಿದೆ.

    ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಹಳೆಯ ದ್ವೇಷ ಹಾಗೂ ಅಭಿವೃದ್ಧಿ ಕಾರ್ಯ ಸಹಿಸದೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

    ದೇವರಾಜ್ ಎಂಬಾತ ವಿಶ್ವನಾಥ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ವಿಶ್ವನಾಥ್ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಾಗೋಡಿ ವಿಶ್ವನಾಥ್‌ ಕಾಂಗ್ರೆಸ್‌ ಬೆಂಬಲಿತನಾಗಿದ್ದು, ಹಲ್ಲೆ ನಡೆಸಿದ ದೇವರಾಜ್  ಬಿಜೆಪಿ ಬೆಂಬಲಿತನಾಗಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

  • ಪೊಲೀಸರ ಮೇಲೆ ದಾಳಿ – ಆರೋಪಿ ಕಾಲಿಗೆ ಗುಂಡೇಟು

    ಪೊಲೀಸರ ಮೇಲೆ ದಾಳಿ – ಆರೋಪಿ ಕಾಲಿಗೆ ಗುಂಡೇಟು

    ಆನೇಕಲ್: ಆರೋಪಿಯ ಕಾಲಿಗೆ ಪೊಲೀಸರು (Police) ಗುಂಡೇಟು ನೀಡಿ ಬಂಧಿಸಿದ ಘಟನೆ ಮಾಯಸಂದ್ರದ ಬಳಿ ನಡೆದಿದೆ.

    ಬೆಸ್ತಮಾನಹಳ್ಳಿ ಲೋಕೇಶ್ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಈತ ರೌಡಿಶೀಟರ್ ಮನೋಜ್ ಎಂಬಾತನ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ. ಆರೋಪಿ ಊರಿಗೆ ಬರುತ್ತಿರುವ ಮಾಹಿತಿ ಮೇರೆಗೆ ಬಂಧಿಸಲು ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರ ತಂಡ ತೆರಳಿತ್ತು.

    ಲೊಕೇಶ್ ಮಾಯಸಂದ್ರದ ಬಳಿ ನಿರ್ಮಾಣ ಆಗುತ್ತಿರುವ ರಸ್ತೆಯಲ್ಲಿ ಬರುತ್ತಿದ್ದ. ಈ ವೇಳೆ ಆತನಿಗೆ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಆರೋಪಿ ಪೊಲೀಸರ ಮಾತನ್ನು ಲೆಕ್ಕಿಸದೆ ಪೊಲೀಸ್ ಸಿಬ್ಬಂದಿ ಚೆನ್ನಬಸವ ಎಂಬವರ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಮಂಜುನಾಥ್ ಲೋಕೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ಆರೊಪಿಯನ್ನು ಹಾಗೂ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್‌ ತಂದೆ

    ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್‌ ತಂದೆ

    ನವದೆಹಲಿ: ಹೆಂಡತಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು, ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ (Atul Subhash) ಅವರ ತಂದೆ ತಮ್ಮ ಮೊಮ್ಮಗ ಎಲ್ಲಿ ಎಂದು ಪ್ರಶ್ನೆ ಎತ್ತಿದ್ದಾರೆ.

    ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅತುಲ್ ಸುಭಾಷ್ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಎಂಬವರನ್ನು ಬಂಧಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಅತುಲ್ ತಂದೆ ಪವನ್ ಕುಮಾರ್, ಅತುಲ್ ಅವರ ಮಗ ಎಲ್ಲಿದ್ದಾನೆ ಎಂದು ಪ್ರಶ್ನಿಸಿದ್ದಾರೆ.

    ಆರೋಪಿಗಳನ್ನು ಬಂಧಿಸಿದ್ದಕ್ಕಾಗಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ ಅವರು, ನಿಕಿತಾ ನಮ್ಮ ಮೊಮ್ಮಗನನ್ನು ಎಲ್ಲಿ ಇರಿಸಿದ್ದಾಳೆಂದು ನಮಗೆ ತಿಳಿದಿಲ್ಲ. ಅವನು ಕೊಲೆಯಾಗಿದ್ದಾನೋ ಅಥವಾ ಬದುಕಿದ್ದಾನೋ? ಅವನ ಬಗ್ಗೆ ನಮಗೆ ಏನೂ ತಿಳಿದಿಲ್ಲ. ನನ್ನ ಮೊಮ್ಮಗ ನಮ್ಮೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ ಎಂದು ಭಾವುಕರಾಗಿದ್ದಾರೆ.

    ನ್ಯಾಯ ಸಿಗುವವರೆಗೆ ಅತುಲ್ ಚಿತಾಭಸ್ಮವನ್ನು ವಿಸರ್ಜನೆ ಮಾಡದಿರಲು ಕುಟುಂಬ ನಿರ್ಧರಿಸಿದೆ. ಇದೇ ವೇಳೆ, ʻಜೌನ್‌ಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಅತುಲ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಭ್ರಷ್ಟರಾಗಿದ್ದಾರೆʼ ಎಂದು ಆರೋಪಿಸಿದ್ದಾರೆ.

    ನಾವು ನಮ್ಮ ಮೊಮ್ಮಗನಿಗಾಗಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಮನವಿ ಮಾಡುತ್ತೇವೆ ಎಂದು ಭಾವುಕರಾಗಿದ್ದಾರೆ.

    ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

    ಏನಿದು ಪ್ರಕರಣ?
    ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಖಿನ್ನತೆಗೆ ಒಳಗಾಗಿ 40ಕ್ಕೂ ಹೆಚ್ಚು ಪುಟಗಳ ಡೆತ್ ನೋಟ್ ಬರೆದಿಟ್ಟು ಡಿ.9 ರಂದು ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಡೆಪ್ಯೂಟಿ ಮ್ಯಾನೇಜರ್‌ ಆಗಿದ್ದ ಇವರು ಸುಮಾರು 40 ಪುಟಗಳ ಡೆತ್ ನೋಟ್ ಬರೆದಿದ್ದರು. ಆತ್ಮಹತ್ಯೆಗೂ ಮುನ್ನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರಿಂದ ತಾನು ಅನುಭವಿಸಿದ್ದ ಸಂಕಷ್ಟಗಳನ್ನು ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸಿದ್ದರು.

  • ಅತ್ತೆ ಮೇಲೆ ಮಚ್ಚು ಬೀಸಿ ಪರಾರಿಯಾಗುತ್ತಿದ್ದ ಅಳಿಯನನ್ನು ಬೆನ್ನಟ್ಟಿ ಹಿಡಿದ ಪೊಲೀಸರು

    ಅತ್ತೆ ಮೇಲೆ ಮಚ್ಚು ಬೀಸಿ ಪರಾರಿಯಾಗುತ್ತಿದ್ದ ಅಳಿಯನನ್ನು ಬೆನ್ನಟ್ಟಿ ಹಿಡಿದ ಪೊಲೀಸರು

    ಮಡಿಕೇರಿ: ವ್ಯಕ್ತಿಯೊಬ್ಬ ತನ್ನ ಅತ್ತೆ ಹಾಗೂ ಸಂಬಂಧಿ ಮಹಿಳೆಯೊಬ್ಬರ ಮೇಲೆ ಮಚ್ಚು ಬೀಸಿದ ಘಟನೆ ನಾಪೋಕ್ಲು ಸಮೀಪದ ಅಯ್ಯಂಗೆರಿ ಗ್ರಾಮದಲ್ಲಿ ನಡೆದಿದೆ.

    ಹಲ್ಲೆ ನಡೆಸಿದ ಆರೋಪಿಯನ್ನು ಮಡಿಕೇರಿ ನಿವಾಸಿ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಆರೋಪಿ ಅಯ್ಯಂಗೇರಿ ಗ್ರಾಮದಲ್ಲಿದ್ದ ಅತ್ತೆ ಮನೆಗೆ ತೆರಳಿ, ಮನೆಯ ಮುಂಭಾಗದ ಬಾಗಿಲಿನ ಚಿಲಕ ಹಾಕಿ, ಹಿಂಬದಿ ಬಾಗಿಲನ್ನು ಒಡೆದು ಒಳ ನುಗ್ಗಿದ್ದಾನೆ. ಬಳಿಕ ಇಬ್ಬರು ಮಹಿಳೆಯರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

    ದಾಳಿಯಿಂದ ಆರೋಪಿಯ ಅತ್ತೆ ಐಸಮ್ಮ ಮತ್ತು ಸಂಬಂಧಿ ಕದೀಜ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕೃತ್ಯ ಎಸಗಿ ಆರೋಪಿ ಆಟೋದಲ್ಲಿ ಪರಾರಿಯಾಗಲು ಯತ್ನಿಸಿದ್ದು, ಮಾಹಿತಿ ತಿಳಿದ ನಾಪೋಕ್ಲು ಪೊಲೀಸರು (Police) ಬೆನ್ನಟ್ಟಿ ಹುದ್ದೂರು ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.