ಬೀದರ್: ಎಸ್‌ಬಿಐ ಬ್ಯಾಂಕ್ ( SBI) ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 93 ಲಕ್ಷ ರೂ. ಹಣ ದೋಚಿ ಪರಾರಿಯಾದ ಘಟನೆ ಬೀದರ್‌ನ (Bidar) ಮುಖ್ಯ ಎಸ್‌ಬಿಐ ಕಚೇರಿ ಮುಂದೆ ನಡೆದಿದೆ.
ಗುಂಡಿನ ದಾಳಿಯಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದುಷ್ಕರ್ಮಿಗಳು, ಬ್ಯಾಂಕ್ ಹಾಗೂ ಎಟಿಎಂಗೆ (ATM) ಹಣ ಹಾಕುವ ಪಿಎಸ್‌ಸಿ ವಾಹನದ ಮೇಲೆ ದಾಳಿ ಮಾಡಿ, ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಹಣ ದೋಚಿ ಪರಾರಿಯಾಗಿದ್ದಾರೆ.
ಇಬ್ಬರು ಮುಸುಕುಧಾರಿಗಳು ಸಿಬ್ಬಂದಿಗಳ ಮೇಲೆ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ: ಮದ್ಯ ಸೇವಿಸಿದ ವಿಚಾರಕ್ಕೆ ಪ್ರಿಯಕರ ಹಾಗೂ ಪ್ರಿಯತಮೆ ನಡುವೆ ಗಲಾಟೆಯಾಗಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೀಳಗಿ (Bilagi) ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಅಜಯ್ (24) ಎಂದು ಗುರುತಿಸಲಾಗಿದೆ. ಅಜಯ್ ಪ್ರೇಯಸಿ ಅನು ಜೊತೆ ಸ್ನೇಹಿತನ ಊರಾದ ನಿಂಗಾಪುರಕ್ಕೆ ತೆರಳಿದ್ದ. ಈ ವೇಳೆ ಸ್ನೇಹಿತ ನವೀನ್ ಎಂಬಾತನ ಜೊತೆ ಸೇರಿ ಅಜಯ್ ಮದ್ಯ ಸೇವಿಸಿದ್ದ. ಈ ವಿಚಾರಕ್ಕೆ ಪ್ರೇಯಸಿ ಕೋಪಗೊಂಡಿದ್ದಾಳೆ. ಬಳಿಕ ಅಲ್ಲಿಂದ ಊರಿಗೆ ಬಿಟ್ಟು ಬರುವಂತೆ ಪಟ್ಟು ಹಿಡಿದು, ನವೀನ್ ಜೊತೆ ಬೈಕಲ್ಲಿ ತೆರಳಿದ್ದಳು.
ನವೀನ್ ಅನುವನ್ನು ಬೈಕ್‌ನಲ್ಲಿ (Bike) ಕರೆದೊಯ್ಯುತ್ತಿದ್ದ ವೇಳೆ, ನನ್ನ ಬಿಟ್ಟು ಹೊರಟರೆ ನೇಣು ಹಾಕಿಕೊಂಡು ಸಾಯುವುದಾಗಿ ಅಜಯ್ ವಿಡಿಯೋ ಕಾಲ್ ಮಾಡಿದ್ದ. ಬಳಿಕ ಅನು ಹಾಗೂ ನವೀನ್ ವಾಪಸ್ ಬರುವಷ್ಟರಲ್ಲಿ ಆತ ನೇಣು ಹಾಕಿಕೊಂಡಿದ್ದ. ನೇಣು ಬಿಡಿಸಿ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಅಜಯ್ ಸಾವನ್ನಪ್ಪಿದ್ದಾನೆ. ಬಳಿಕ ನವೀನ್ ತನ್ನ ಮೇಲೆ ಆಪಾದನೆ ಬರುತ್ತದೆ ಎಂದು ಅನು ಹಾಗೂ ಶವವನ್ನು ಬಿಟ್ಟು ಓಡಿ ಹೋಗಿದ್ದ.
ಈ ಸಂಬಂಧ, ಬೀಳಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ: ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಮಡಿಕೇರಿ (Madikeri) ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ.
ಸಾವಿಗೀಡಾದ ವ್ಯಕ್ತಿಯನ್ನು ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಎಂದು ಗುರುತಿಸಲಾಗಿದೆ. ಒಂಟಿ ನಳಿಗೆ ಬಂದೂಕಿನಿಂದ ಗುಂಡು ಹಾರಿ ಈ ದುರ್ಘಟನೆ ಸಂಭವಿಸಿದೆ. ಬಂದೂಕು ಕೆಳಕ್ಕೆ ಬಿದ್ದು ಗುಂಡು ಹಾರಿರುವ ಶಂಕೆ ವ್ಯಕ್ತವಾಗಿದೆ.
ಚಂಗಪ್ಪ ಅವರು ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿದ್ದರು. ವೈನ್ ಶಾಪ್ ಎದುರಿನಲ್ಲೇ ಮಧ್ಯರಾತ್ರಿ 12 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಗೃಹ ಸಚಿವರ ಮನೆಮುಂದೆ ಬಿಜೆಪಿ (BJP) ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಡಾ.ಜಿ. ಪರಮೇಶ್ವರ್ (G Parameshwar) ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಹಿನ್ನೆಲೆ ತುಮಕೂರಿನ (Tumakuru) ಹೆಗ್ಗೆರೆ ಬಳಿಯ ಸಿದ್ದಾರ್ಥ ನಗರದಲ್ಲಿರುವ ಪರಮೇಶ್ವರ್ ಮನೆಮುಂದೆ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ನಡೆಸಲು ಜಿಲ್ಲಾ ಬಿಜೆಪಿ ಘಟಕ ಕರೆ ನೀಡಿದೆ. ಪ್ರತಿಭಟನೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಮೊಣಕಾಲಿನಲ್ಲೇ ತಿರುಪತಿ ದೇವಾಲಯದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಯುವ ಕ್ರಿಕೆಟಿಗ
ಬಳ್ಳಾರಿ: ಐದು ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿದ ಪ್ರಕರಣ ತೋರಣಗಲ್‍ನಲ್ಲಿ (Toranagallu) ನಡೆದಿದೆ.
ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ದುಷ್ಕರ್ಮಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಗುವಿಗೆ ಆಂತರಿಕ ಗಾಯವಾಗಿ, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಮಗುವಿಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಮಗು ಪಾರಾಗಿದೆ. ಪರೀಕ್ಷೆ ವೇಳೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.
ಈ ಸಂಬಂಧ ತೋರಣಗಲ್ ಪೊಲೀಸ್ (Police) ಠಾಣೆಯಲ್ಲಿ ಪೋಕ್ಸೋ ಪ್ರಕರಣ (POCSO Case) ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಹುಬ್ಬಳ್ಳಿ: ಪ್ರೇಯಸಿಯೊಂದಿಗೆ ಮನಸ್ತಾಪ ಮಾಡಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ನಡೆದಿದೆ.
ಮೃತನನ್ನು ನವನಗರದ ನಿವಾಸಿ ಸಂದೇಶ್ ಯಾರ್ಕಡ್ (30) ಎಂದು ಗುರುತಿಸಲಾಗಿದೆ. ಯುವಕ ಹುಬ್ಬಳ್ಳಿಯ (Hubballi) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಪ್ರೇಯಸಿಯ ಜೊತೆಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡು ಏಕಾಏಕಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದಾವಣಗೆರೆ: ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ತವರು ಸೇರಿದ್ದ ಪತ್ನಿಯನ್ನು (Wife) ಪತಿಯ ಕುಟುಂಬಸ್ಥರು ಅಮಾನವೀಯವಾಗಿ ಎಳೆದೊಯ್ದ ಘಟನೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ನಡೆದಿದೆ.
ಕೊಪ್ಪ ಬಳಿಯ ನರಸೀಪುರದ ನಿವಾಸಿ ಕಾರ್ತಿಕ್ ಎಂಬಾತನಿಗೆ ದಿಡಗೂರಿನ ಅನುಂಧತಿ ಎಂಬಾಕೆಯನ್ನು 4 ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಇತ್ತೀಚೆಗೆ ಪತಿಯ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಆರೋಪ ಮಾಡಿ ಅನುಂಧತಿ ತವರು ಮನೆ ಸೇರಿದ್ದಳು.
ಮಂಗಳವಾರ ಬೆಳಗ್ಗೆ ಅನುಂಧತಿಯನ್ನು ಪತಿ ಹಾಗೂ ಆತನ ಕುಟುಂಬಸ್ಥರು ಅಮಾನುಷವಾಗಿ ಎಳೆದು ಕಾರಿನಲ್ಲಿ ಅಪಹರಿಸಿದ್ದಾರೆ. ಈ ವೇಳೆ ತಡೆಯಲು ಬಂದ ಅನುಂಧತಿ ಕುಟುಂಬಸ್ಥರ ಮೇಲೆ ಪತಿ ಹಾಗೂ ಆತನ ಕುಟುಂಬಸ್ಥರು ಹಲ್ಲೆಗೂ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕಿಡ್ಯ್ನಾಪ್‍ನ ಭಯನಾಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹೊನ್ನಾಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎನ್ನುವ ಕಾರಣಕ್ಕೆ ತಮ್ಮನನ್ನೇ ಆತನ ಅಣ್ಣ ಹಾಗೂ ಪತ್ನಿ (Wife) ಸೇರಿ ಕೊಲೆಗೈದ ಘಟನೆ ಹಾಸನದ (Hassan) ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅನಂದ (36) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ದೊಡ್ಡಪ್ಪನ ಪುತ್ರ ಸೋಮಶೇಖರ ಹಾಗೂ ಆನಂದನ ಪತ್ನಿ ಕೊಲೆಗೈದ ಆರೋಪಿಗಳಾಗಿದ್ದಾರೆ. ಆರೋಪಿಗಳು ಆನಂದನನ್ನು ಕೊಲೆ ಮಾಡಿ ತಮಗೇನು ಗೊತ್ತಿಲ್ಲದಂತೆ ನಾಟವಾಡಿದ್ದರು. ಇಬ್ಬರು ಸೇರಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಬಿಂಬಿಸಲು ಹೊರಟಿದ್ದರು. ಆದರೆ ಗ್ರಾಮಸ್ಥರು ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ, ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
10 ವರ್ಷಗಳ ಹಿಂದೆ ಆನಂದ ವಿವಾಹವಾಗಿದ್ದು, ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ಮುಕುಂದೂರು ಹೊಸಳ್ಳಿ ಗ್ರಾಮದಲ್ಲಿ ವಾಸವಿದ್ದರು. ಆನಂದನ ಪಕ್ಕದ ಮನೆಯಲ್ಲಿಯೇ ಅಣ್ಣ ಸೋಮಶೇಖರ ಕುಟುಂಬ ನೆಲೆಸಿದ್ದು, ಕಳೆದ ಮೂರು ವರ್ಷಗಳ ಹಿಂದೆ ಆತನ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿ ಮರಣದ ಬಳಿಕ ಸೋಮಶೇಖರ ತಮ್ಮನ ಮನೆಗೆ ಬಂದು ತಿಂಡಿ, ಊಟ ಮಾಡುತ್ತಿದ್ದ. ಈ ವೇಳೆ ನಾದಿನಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ. ಈ ವಿಷಯ ಆನಂದನಿಗೆ ತಿಳಿದು, ಆಪ್ತರ ಜೊತೆ ದುಃಖ ತೋಡಿಕೊಂಡಿದ್ದ. ವಿಷಯ ಹೊರಗೆ ಗೊತ್ತಾದರೆ ಮರ್ಯಾದೆ ಹೋಗುತ್ತದೆ ಎಂದು ಪತ್ನಿಗೆ ತಿಳುವಳಿಕೆ ಹೇಳಿ ಸಂಸಾರ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದ್ದ. ಆದರೆ ಅಕ್ರಮ ಸಂಬಂಧಕ್ಕೆ ಆನಂದ ಅಡ್ಡಿಯಾಗುತ್ತಿದ್ದ ಆತನನ್ನು ಮುಗಿಸಲು ಸೋಮಶೇಖರ್ ಹಾಗೂ ಹಾಗೂ ಕೊಲೆಯಾದವನ ಪತ್ನಿ ಸಂಚು ಮಾಡಿದ್ದರು.
ಕಳೆದ ವರ್ಷ ಡಿ.26 ರಂದು ಆನಂದ ಬೈಕ್‍ಗೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆಂದು ಹಂಗರಹಳ್ಳಿ ಗ್ರಾಮದ ಪೆಟ್ರೋಕ್ ಬಂಕ್‍ಗೆ ಹೋಗಿದ್ದವನು ವಾಪಾಸ್ ಮನೆಗೆ ಬಂದಿರಲಿಲ್ಲ. ಆನಂದನನ್ನು ಹುಡುಕಾಡಿದ ತಾಯಿ ಹಾಗೂ ಪತ್ನಿ, ಗೊರೂರು ಪೊಲೀಸ್ ಠಾಣೆಗೆ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದರು.
ಡಿ.28 ರಂದು ಹೊಳೆನರಸೀಪುರ ತಾಲ್ಲೂಕಿನ, ದೊಡ್ಡಕುಂಚೆವು ಗ್ರಾಮದ ಕೆರೆಯಲ್ಲಿ ಆನಂದನ ಶವ ಪತ್ತೆಯಾಗಿತ್ತು. ಪತ್ನಿ ಅಕ್ರಮ ಸಂಬಂಧದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಆನಂದನ ಸಂಬಂಧಿಕರು ಹಾಗೂ ಗ್ರಾಮಸ್ಥರು ಭಾವಿಸಿದ್ದರು. ಆದರೆ ಆನಂದ ಮೃತದೇಹ ನೋಡಿದ ನಂತರ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಆನಂದನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಳಿಕ ಪೊಲೀಸರು (Police) ಸೋಮಶೇಖರ ಹಾಗೂ ಆನಂದನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ, ಆತನಿಗೆ ಕಂಠಪೂರ್ತಿ ಕುಡಿಸಿ, ನಾಲೆಗೆ ತಳ್ಳಿ ಮನೆಗೆ ತೆರಳಿದ್ದ ವಿಚಾರ ಬಯಲಾಗಿತ್ತು. ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಹುಬ್ಬಳ್ಳಿ: ಆಸ್ತಿಗಾಗಿ ತಂದೆ ಹಾಗೂ ಮಲತಾಯಿಯನ್ನು ಕೊಲೆ ಮಾಡಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗಂಗಾಧರ ಎಂದು ಗುರುತಿಸಲಾಗಿದೆ. ಶುಕ್ರವಾರ ಹುಬ್ಬಳ್ಳಿಯ ಕುಸಗುಲ್ ಗ್ರಾಮದಲ್ಲಿ ಅಶೋಕ್ ಹಾಗೂ ಶಾರದಾ ಎಂಬವರನ್ನು ಆರೋಪಿ ಕೊಲೆ ಮಾಡಿದ್ದ. ತನಿಖೆ ವೇಳೆ ಆಸ್ತಿಗಾಗಿ ಮಗನೇ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿತ್ತು.
ಕೇವಲ ಎರಡು ಎಕರೆ ಜಮೀನಿಗಾಗಿ ಹೆತ್ತವರನ್ನೇ ಆರೋಪಿ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಕೊಲೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಕೊಲೆ ನಡೆದ ಸ್ಥಳದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.
ತುಮಕೂರು: ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ (BJP worker Shankutala Nataraj) ಅವರ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನ ವಿಜಯನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ತ್ರಿಶಾಲ್ (13) ಎಂದು ಗುರುತಿಸಲಾಗಿದೆ. ಮೃತ ಬಾಲಕ 7 ನೇ ತರಗತಿಯಲ್ಲಿ ಓದುತ್ತಿದ್ದ.
ತ್ರಿಶಾಲ್ ತನ್ನ ತಾಯಿ ಶಂಕುತಲಾ ಜೊತೆ ವಿಜಯನಗರದ 2 ನೇ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಶಾಲಾ ಸಮವಸ್ತ್ರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಾರಿವಾಳದ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ಜೊತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಡೆತ್ ನೋಟ್ ಇದೆ ಎನ್ನಲಾಗಿದ್ದು ಬಹಿರಂಗಗೊಂಡಿಲ್ಲ.
ಈ ಸಂಬಂಧ ಜಯನಗರ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡಿದ್ದಾರೆ.