Tag: police

  • ಶೀಲ ಶಂಕಿಸಿ ಪತ್ನಿ, ಅತ್ತೆಯ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌ ಮಾಡಿದ ದುಷ್ಕರ್ಮಿ

    ಶೀಲ ಶಂಕಿಸಿ ಪತ್ನಿ, ಅತ್ತೆಯ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌ ಮಾಡಿದ ದುಷ್ಕರ್ಮಿ

    ಬೆಂಗಳೂರು: ಶೀಲ ಶಂಕಿಸಿ ವ್ಯಕ್ತಿಯೊಬ್ಬ ಪತ್ನಿ (Wife) ಹಾಗೂ ಅತ್ತೆಯ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿದ ಘಟನೆ ಬನಶಂಕರಿಯಲ್ಲಿ ನಡೆದಿದೆ.

    ತಲ್ವಾರ್‌ನಿಂದ ದಾಳಿ ನಡೆಸಿದ ಆರೋಪಿ ಆಸೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ತನ್ನ ಪತ್ನಿ ಹೀನಾ ಕೌಸರ್ (25) ಅತ್ತೆ ಫರ್ವಿನ್ ತಾಜ್ ಮೇಲೆ ದಾಳಿ ನಡೆಸಿದ್ದಾನೆ. ಜ.14ರಂದು ಬನಶಂಕರಿ ದೇಗುಲದ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    10 ವರ್ಷಗಳ ಹಿಂದೆ ತಾಯಿಯ ಅಣ್ಣನ ಮಗ ಆಸೀಫ್‌ನ ಜೊತೆ ಹೀನಾ ಕೌಸರ್ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ವರ್ಷ ಪರ ಸ್ತ್ರೀ ಸಹವಾಸ ಮಾಡಿದ ಪತಿ, ಪತ್ನಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

    ಕಾಲೇಜು ಸ್ನೇಹಿತರಿಗೆ ಪತ್ನಿ ಮಾಡಿದ್ದ ಮೆಸೇಜ್ ನೋಡಿ ಅಕ್ರಮ ಸಂಬಂಧ ಇದೆ ಎಂದು ನಿತ್ಯ ಕಿರುಕುಳ ನೀಡುತ್ತಿದ್ದ. ಕಾಟ ತಾಳದೆ 8 ತಿಂಗಳ ಹಿಂದೆ ಮಗಳ ಜೊತೆ ತವರು ಮನೆಗೆ ಬಂದಿದ್ದ ಪತ್ನಿ, ಜೀವನಕ್ಕಾಗಿ ಕೆಲಸಕ್ಕೆ ಸೇರಿದ್ದಳು. ಆದರೂ ಪತ್ನಿಯ ಶೀಲ ಶಂಕಿಸಿ ಅತ್ತೆ ಮನೆಗೆ ಬಂದು ಮೂರು ಬಾರಿ ಹಲ್ಲೆ ಯತ್ನ ನಡೆಸಿದ್ದ.

    ಜ.14 ರಂದು ಅತ್ತೆ ಇಲ್ಲದಿದ್ದಾಗ ಏಕಾಏಕಿ ಮನೆಗೆ ನುಗ್ಗಿ ತಲ್ವಾರ್ ಮೂಲಕ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ. ಬಳಿಕ ಮನೆಗೆ ಬಂದ ಅತ್ತೆಯ ಮೇಲೂ ಸಹ ಆರೋಪಿ ದಾಳಿ ನಡೆಸಿದ್ದಾನೆ. ಕಿರುಚಾಟ ಕೇಳಿ ಅಕ್ಕಪಕ್ಕದವರು ಬರುತ್ತಿದ್ದಂತೆ ತಲ್ವಾರ್ ಬಿಟ್ಟು ಆರೋಪಿ ಪರಾರಿಯಾಗಿದ್ದ. ಗಾಯಗೊಂಡಿದ್ದ ಮಗಳು ಹಾಗೂ ತಾಯಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

  • ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು – ಶರಣಾದ ನಕ್ಸಲರ ಗೋಳು

    ಮುಂಡಗಾರು ಲತಾಗೆ ಥೈರಾಯ್ಡ್, ಮತ್ತೊಬ್ಬರಿಗೆ ಗುಂಡು ಬಿದ್ದು ಕೈ ನೋವು – ಶರಣಾದ ನಕ್ಸಲರ ಗೋಳು

    ಚಿಕ್ಕಮಗಳೂರು: ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಎದುರು ಶರಣಾದ ಆರು ಜನ ನಕ್ಸಲರನ್ನು (Naxalites) ಚಿಕ್ಕಮಗಳೂರು (Chikkamagaluru) ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ (Health) ತಪಾಸಣೆಗೆ ಒಳಪಡಿಸಲಾಗಿದೆ.

    ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ಆರೂ ಮಂದಿ ನಕ್ಸಲರನ್ನು ಗುರುವಾರ ರಾತ್ರಿಯೇ ನಗರಕ್ಕೆ ಕರೆತರಲಾಗಿತ್ತು. ಅವರನ್ನು ರಾಮನಹಳ್ಳಿ ಡಿಎಆರ್ ಘಟಕದಲ್ಲಿ ಇರಿಸಲಾಗಿತ್ತು. ಎಸ್‌ಪಿ ಡಾ.ವಿಕ್ರಮ್ ಅಮಟೆ ಅವರು ಶುಕ್ರವಾರ ಬೆಂಗಳೂರಿಗೆ ತೆರಳಿದ್ದರಿಂದ ಶನಿವಾರ ಅವರನ್ನು ಎಸ್‌ಪಿ ಅವರ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಯಿತು. ಬಳಿಕ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.

    ಆರೋಗ್ಯ ತಪಾಸಣೆ ವೇಳೆ ಸಣ್ಣಪುಟ್ಟ ನೋವುಗಳ ಬಗ್ಗೆ ವೈದ್ಯರ ಬಳಿ ನಕ್ಸಲರು ಹೇಳಿಕೊಂಡಿದ್ದಾರೆ. ಮುಂಡಗಾರು ಲತಾಗೆ ಥೈರಾಯ್ಡ್ ಸಮಸ್ಯೆ ಬಗ್ಗೆ ವೈದ್ಯರ ಬಳಿ ಹೇಳಿಕೊಂಡಿದ್ದಾರೆ. ಇನ್ನೊಬ್ಬರಿಗೆ ಕೈ ಮೇಲೆ ಗನ್ ಶಾಟ್ ಆಗಿರುವುದು ಪತ್ತೆಯಾಗಿದೆ. ಆರು ಮಂದಿಯಲ್ಲಿ ಬಹುತೇಕರಿಗೆ ಬಿಪಿ, ಶುಗರ್ ಇರುವುದು ಕೂಡ ಪತ್ತೆಯಾಗಿದೆ.

    ನಕ್ಸಲರ ವಿಚಾರಣೆ ನಡೆಸುವ ಹಿನ್ನೆಲೆ ಎನ್ಐಎ ಕೋರ್ಟ್‌ನಿಂದ ಅನುಮತಿ ಪಡೆದು ನಗರಕ್ಕೆ ಕರೆತರಲಾಗಿದೆ. ಶರಣಾದವರ ಪೈಕಿ ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ ನಾಲ್ವರ ಮೇಲೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಮುಂಡಗಾರು ಲತಾ ವಿರುದ್ಧ 33, ವನಜಾಕ್ಷಿ ವಿರುದ್ಧ 15 ಹಾಗೂ ಸುಂದರಿ ಮತ್ತು ಜಯಣ್ಣ ವಿರುದ್ಧ ತಲಾ 3 ಪ್ರಕರಣಗಳಿವೆ.

    ವಸಂತ್ ಹಾಗೂ ಜಿಶಾ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ತನಿಖಾಧಿಕಾರಿಗಳು ಸ್ಥಳ ಮಹಜರಿಗೆ ಕರೆದುಕೊಂಡು ಹೋಗದಿರುವ ಹಿನ್ನೆಲೆಯಲ್ಲಿ ಆರೂ ಮಂದಿ ಡಿಆರ್ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. 14 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ನಕ್ಸಲರ ವಿರುದ್ಧದ ಪ್ರಕರಣಗಳ ಬಗ್ಗೆ ನಗರದಲ್ಲಿಯೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಶೃಂಗೇರಿ, ಜಯಪುರ, ಕೊಪ್ಪ ಠಾಣೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಅಕ್ರಮ ಬಂದೂಕಿನ ಪ್ರಕರಣದ ವಿಚಾರಣೆ ಇಲ್ಲ
    ಜಯಪುರ ಸಮೀಪ ಕಿತ್ತಲೆಗಂಡಿ ಅರಣ್ಯದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದ ಬಂದೂಕುಗಳ ಬಗ್ಗೆ ಈಗ ಯಾವುದೇ ವಿಚಾರಣೆ ನಡೆಯುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ಬಂದೂಕುಗಳ ಕುರಿತು ತನಿಖೆ ನಡೆಯುತ್ತದೆ ಎನ್ನಲಾಗುತ್ತಿದೆ. ಬಂದೂಕು, ಮದ್ದುಗುಂಡುಗಳು ಪತ್ತೆಯಾದಾಗ ಅಪರಿಚಿತರ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

  • ಸ್ಥಳೀಯರ ಸಹಾಯದಿಂದಲೇ ಮಂಗಳೂರು ಬ್ಯಾಂಕ್‌ ಲೂಟಿ! – ಪೊಲೀಸ್‌ ತನಿಖೆಯ ಸ್ಫೋಟಕ ಮಾಹಿತಿ

    ಸ್ಥಳೀಯರ ಸಹಾಯದಿಂದಲೇ ಮಂಗಳೂರು ಬ್ಯಾಂಕ್‌ ಲೂಟಿ! – ಪೊಲೀಸ್‌ ತನಿಖೆಯ ಸ್ಫೋಟಕ ಮಾಹಿತಿ

    – ದರೋಡೆಗೆ ಕೈಜೋಡಿಸಿದ್ದ ವ್ಯಕ್ತಿಯ ಪತ್ತೆಗೆ ಬಲೆ
    – ಕೇವಲ 5 ನಿಮಿಷದಲ್ಲಿ 10 ಕೋಟಿ ದೋಚಿ ಪರಾರಿ

    ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ (Kotekar Co Operative Bank Robbery) ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣವನ್ನು (Gold) ದೋಚಲು ದರೋಡೆಕೋರರು ಭಾರೀ ಪ್ಲಾನ್ ಮಾಡಿದ್ದಾರೆ.ಆದರೆ ದರೋಡೆಕೋರರ ಕೃತ್ಯಕ್ಕೆ ಸಹಕಾರ ನೀಡಿದ್ದು ಸ್ಥಳೀಯ ವ್ಯಕ್ತಿಯೇ ಎಂಬ ಸ್ಪೋಟಕ ಮಾಹಿತಿ ಪೊಲೀಸರಿಗೆ (Police) ಸಿಕ್ಕಿದೆ.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಕಳೆದ ಕೆಲ ದಿನಗಳಿಂದ ಬಿಜಾಪುರ,ಬೀದರ್, ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳೇ ಸಾಕ್ಷಿ.ಅದರಲ್ಲೂ ಮಂಗಳೂರಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ದರೋಡೆ ರಾಜ್ಯದಲ್ಲೇ ಅತೀ ದೊಡ್ಡ ದರೋಡೆ ಪ್ರಕರಣವಾಗಿದೆ.

     

    ಬ್ಯಾಂಕ್‌ನಲ್ಲಿದ್ದ ಸುಮಾರು 10 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣವನ್ನು ಹಾಡಹಗಲಲ್ಲೇ ದರೋಡೆ ಮಾಡಲಾಗಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ದರೋಡೆ ನಡೆದು ದಿನ ಕಳೆದರೂ ಈವರೆಗೂ ಆರೋಪಿಗಳ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಭಾರೀ ಪ್ಲಾನ್ ಮಾಡಿಕೊಂಡೇ ದರೋಡೆಗೆ ಬಂದಿದ್ದ ದರೋಡೆಕೋರರು, ಪರಾರಿಯಾಗಲು ಅಷ್ಟೇ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ದರೋಡೆ ಮಾಡಲು ಸ್ಥಳೀಯ ವ್ಯಕ್ತಿಯೋರ್ವನ ಸಹಕಾರ ಇದೆ ಎಂಬ ಸ್ಪೋಟಕ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಂಗಳೂರು ಬ್ಯಾಂಕ್‌ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?

    ಈ ಬ್ಯಾಂಕಿನ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸ್ಥಳೀಯ ವ್ಯಕ್ತಿಯೇ ಈ ದರೋಡೆಯ ಮಾಸ್ಟರ್ ಮೈಂಡ್ ಎನ್ನುವುದು ಪೊಲೀಸರಿಗೆ ಸಿಕ್ಕಿರುವ ಸದ್ಯದ ಮಾಹಿತಿ. ಇದಕ್ಕೆ ಪೂರಕವೆಂಬಂತೆ ಸಿಸಿ ಕ್ಯಾಮೆರಾ ಡಿವಿಆರ್ ಬದಲಾಯಿಸುವ ದಿನ, ಚಿನ್ನ ಪರಿವೀಕ್ಷಕ ಲಾಕರ್ ಓಪನ್ ಮಾಡುವ ಸಮಯ, ದರೋಡೆ ಮಾಡಲು ನಿಗದಿಮಾಡಿದ್ದ ದಿನ ಶುಕ್ರವಾರ ಮಧ್ಯಾಹ್ನ 1 ಗಂಟೆ.

     

    ಬ್ಯಾಂಕ್‌ ಆಸುಪಾಸಿನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು ಶುಕ್ರವಾರ ಮಧ್ಯಾಹ್ನ 1 ರಿಂದ 1:30 ರೊಳಗೆ ಅಂಗಡಿಯ  ವ್ಯಾಪಾರಿಗಳು ಮಸೀದಿಗೆ ನಮಾಜ್‌ಗೆ ಹೋಗುತ್ತಾರೆ. ಹೀಗಾಗಿ ಕೇವಲ 5 ನಿಮಿಷದಲ್ಲೇ ಸಿಕ್ಕಿದ ಚಿನ್ನಾಭರಣವನ್ನು ದೋಚಿಕೊಂಡು ಬರೋ ಪ್ಲಾನ್ ಮಾಡಿದ್ದಾರೆ. ಅದರಂತೆ ಸರಿಯಾಗಿ 1 ಗಂಟೆ 10 ನಿಮಿಷಕ್ಕೆ ಬಂದ ದರೋಡೆಕೋರರು 1 ಗಂಟೆ 16 ನಿಮಿಷಕ್ಕೆ ಚಿನ್ನಾಭರಣವನ್ನು ಗೋಣಿ ಚೀಲಕ್ಕೆ ಹಾಕಿ  ಕಾರಿಗೆ ತುಂಬಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಬೆಳಗ್ಗೆಯೇ ತುಂತುರು ಮಳೆ

    ಬ್ಯಾಂಕ್ ದರೋಡೆ ಮಾಡಲು ಬೇಕಾದ ಎಲ್ಲಾ ಮಾಹಿತಿಯನ್ನ ಸ್ಥಳೀಯ ವ್ಯಕ್ತಿಯೇ ಮಾಡಿದ್ದಾನೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಆ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆತನನನ್ನು ವಶಕ್ಕೆ ಪಡೆಯಲು ಹುಡುಕಾಟ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಈ ದರೋಡೆಯ ಹಿಂದೆ ಸ್ಥಳೀಯರ ಕೈವಾಡ ಇದೆ ಎಂಬ ಅನುಮಾನ ನಿಜವಾಗುವ ಸಾಧ್ಯತೆಯಿದೆ.

     

  • ಬಡ ಹೆಣ್ಮಕ್ಳೇ ಟಾರ್ಗೆಟ್, ಅಪ್ರಾಪ್ತೆಯರನ್ನೂ ಬಿಡದೇ ರೇಪ್ – ಕಾಮುಕನ ಮೊಬೈಲ್‌ನಲ್ಲಿ ರಾಶಿ ರಾಶಿ ವಿಡಿಯೋ!

    ಬಡ ಹೆಣ್ಮಕ್ಳೇ ಟಾರ್ಗೆಟ್, ಅಪ್ರಾಪ್ತೆಯರನ್ನೂ ಬಿಡದೇ ರೇಪ್ – ಕಾಮುಕನ ಮೊಬೈಲ್‌ನಲ್ಲಿ ರಾಶಿ ರಾಶಿ ವಿಡಿಯೋ!

    ಹುಬ್ಬಳ್ಳಿ: ಪ್ರೀತಿಸುವ ನೆಪದಲ್ಲಿ ಬಡ ಹೆಣ್ಣು ಮಕ್ಕಳನ್ನು ಬುಟ್ಟಿಗೆ ಹಾಕಿಕೊಂಡು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಕಾಮುಕನನ್ನು ಹುಬ್ಬಳ್ಳಿ (Hubballi) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಶರಾವತಿ ನಗರದ ಕೆಇಬಿ ಲೇಔಟ್ ನಿವಾಸಿ ಅಶ್ಪಾಕ್ ಜೋಗನ್‌ಕೊಪ್ಪ (38) ಎಂದು ಗುರುತಿಸಲಾಗಿದೆ. ಆತ ಹತ್ತಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಹಾಗೂ ಅಪ್ರಾಪ್ತೆಯರ ಜೊತೆ ಪ್ರೀತಿಯ ನಾಟಕವಾಡಿದ್ದಾನೆ. ಅಲ್ಲದೇ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ ಮಾಡಿಕೊಂಡಿದ್ದ. ವಿಡಿಯೋ ಇಟ್ಟುಕೊಂಡು ಹೇಳಿದಂತೆ ಕೇಳಬೇಕು ಎಂದು ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.

    ಆರೋಪಿ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಜೆರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದ. ಇದೇ ಅಂಗಡಿಗೆ ಬರುವ ಬಡ ಹೆಣ್ಣು ಮಕ್ಕಳನ್ನ ಬಳಸಿಕೊಂಡಿದ್ದಾನೆ. ಹಣದಾಸೆ ಮತ್ತು ಪ್ರೀತಿಸುವ ಆಟವಾಡಿ ಬಡ ಹೆಣ್ಣುಮಕ್ಕಳ ಜೊತೆಗೆ ರಾಸಲೀಲೆ ನಡೆಸಿದ್ದಾನೆ. ಅಲ್ಲದೇ ವಿಡಿಯೋ ಕಾಲ್‌ನಲ್ಲಿ ಮಹಿಳೆಯರು ಬಟ್ಟೆ ಬಿಚ್ಚಿಸಿ ರೆಕಾರ್ಡ್ ಮಾಡಿಕೊಂಡಿದ್ದಾನೆ.

    ಅಪ್ರಾಪ್ತ ಬಾಲಕಿಯೊಬ್ಬಳ ಪೋಷಕರಿಂದ ದುಷ್ಕರ್ಮಿಯ ವಿರುದ್ಧ ದೂರು ದಾಖಲಿಸಿದ್ದಳು. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಆರೋಪಿಯ ವಿಕೃತ ಮುಖ ಬಯಲಾಗಿದೆ.

  • ನ್ಯಾಯ ಕೇಳಿ ಬರುವ ಮಹಿಳೆಯರನ್ನು ಮಂಚಕ್ಕೆ ಕರೆದ ಪಿಎಸ್‌ಐ – ಪತ್ನಿಯಿಂದಲೇ ಗಂಭೀರ ಆರೋಪ

    ನ್ಯಾಯ ಕೇಳಿ ಬರುವ ಮಹಿಳೆಯರನ್ನು ಮಂಚಕ್ಕೆ ಕರೆದ ಪಿಎಸ್‌ಐ – ಪತ್ನಿಯಿಂದಲೇ ಗಂಭೀರ ಆರೋಪ

    – ಪಿಎಸ್‌ಐ ನಿತ್ಯಾನಂದಗೌಡ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್

    ಚಿಕ್ಕಮಗಳೂರು: ನನ್ನ ಪತಿ ಪೊಲೀಸ್ (Police) ಠಾಣೆಗೆ ನ್ಯಾಯ ಕೇಳಿ ಬರುತ್ತಿದ್ದ ಮಹಿಳೆಯರನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ನನಗೆ 50 ಲಕ್ಷ ರೂ. ವರದಕ್ಷಿಣೆ (Dowry) ತರುವಂತೆ ಕಿರುಕುಳ ನೀಡುತ್ತಾರೆ ಎಂದು ಕಳಸ (Kalasa) ಪಿಎಸ್‌ಐ ನಿತ್ಯಾನಂದಗೌಡ (PSI Nithyanandagowda) ವಿರುದ್ಧ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

    ನಿತ್ಯಾನಂದಗೌಡರ ತಂಗಿ, ತಂಗಿ ಗಂಡನಿಂದಲೂ ಹಲ್ಲೆ, ಅವಾಚ್ಯ ಶಬ್ಧಗಳ ಬಳಕೆ ಮಾಡಿ ನಿಂದಿಸುತ್ತಾರೆ. ಆತ ಕೆಲಸ ಮಾಡಿರುವ ಠಾಣೆಗಳಿಗೆ ಕಷ್ಟ ಎಂದು ಬರುವ ಹಾಗೂ ಪಾಸ್‌ಪೋರ್ಟ್‌ಗೆ ಬರುವ ಮಹಿಳೆಯರನ್ನ ಮಂಚಕ್ಕೆ ಕರೆಯುತ್ತಾರೆ. ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ನಾನು ಅವರ ರೂಂಗೆ ಹೋದಾಗ ಕಾಂಡೋಮ್‌ಗಳು ಪತ್ತೆಯಾಗಿದ್ದವು ಎಂದು ಅವರ ಪತ್ನಿ ಆರೋಪಿಸಿದ್ದಾರೆ.

    ಮುಸ್ಲಿಮರು ಪಿಎಸ್‌ಐಗೆ ಹೊಡೆಯಲು ಬಂದಾಗ ಎಸ್‌ಪಿ ಅವರನ್ನು ರಕ್ಷಿಸಿದ್ದರು. ಕೋಟಾ ಠಾಣೆಯಲ್ಲೂ ಮಹಿಳೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆ ಒಬ್ಬಳನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದರು. ಆ ಮಹಿಳೆಗೆ 4 ಲಕ್ಷ ರೂ. ಹಣ ಕೊಟ್ಟು ಬಚಾವ್ ಆಗಿದ್ದಾರೆ ಎಂದು ಆರೋಪಿಸಿಸಲಾಗಿದೆ.

    ಈ ಸಂಬಂಧ ಪಿಎಸ್‌ಐ ಪತ್ನಿ ನೀಡಿದ ದೂರಿನ ಅಡಿಯಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  • ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ಹೊತ್ತೊಯ್ದು ಬಾಡೂಟ – 7 ಮಂದಿ ಅರೆಸ್ಟ್

    ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ಹೊತ್ತೊಯ್ದು ಬಾಡೂಟ – 7 ಮಂದಿ ಅರೆಸ್ಟ್

    ಹಾಸನ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ (Hassan) ಕರುವೊಂದನ್ನು (Cow) ಕದ್ದು ಬಾಡೂಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು, ಕಡಿದು ಮಾಂಸದೂಟ ಮಾಡಿದ್ದಾರೆ. ಮಂಗಳವಾರ ಕರುವನ್ನು ದುಷ್ಕರ್ಮಿಗಳು ಕದ್ದಿದ್ದರು. ಕರುವಿಗಾಗಿ ಹುಡುಕಾಟ ನಡೆಸಿದಾಗ, ಮಡಬಲು ಗ್ರಾಮದ ರೈಲ್ವೆ ಗೇಟ್ ಸಮೀಪ ಕರುವಿನ ರುಂಡ ಪತ್ತೆಯಾಗಿತ್ತು.

    ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅದೇ ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.

    ಆರೋಪಿಗಳು ಸಾಕ್ಷ್ಯ ನಾಶಕ್ಕಾಗಿ ರುಂಡ, ಕರುಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಬೆಳಗಾಗಿದ್ದು ಜಮೀನು ಕೆಲಸಕ್ಕೆ ರೈತರು ಬರುತ್ತಿರುವುದನ್ನು ಕಂಡು ರುಂಡವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

    ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನ ಮರ್ಡರ್ ಮಾಡಿಸಿದ ಖತರ್ನಾಕ್ ಲೇಡಿ!

    ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನ ಮರ್ಡರ್ ಮಾಡಿಸಿದ ಖತರ್ನಾಕ್ ಲೇಡಿ!

    – ಹತ್ಯೆ ವಿಚಾರ ಕೇಳಿ ಮೂರ್ಛೆ ಹೋದಂತೆ ನಟಿಸಿದ್ದ ಪತ್ನಿ

    ಹಾಸನ: ಚನ್ನರಾಯಪಟ್ಟಣದ (Channarayapatna) ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೇ (Wife) ತನ್ನ ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಹತ್ಯೆ ನಡೆಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

    ಶುಕ್ರವಾರ ಮುಂಜಾನೆ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಂಜುಂಡೇಗೌಡ ಎಂಬವರ ಹತ್ಯೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಗ್ರಾಮಸ್ಥರು ನಂಜುಂಡೇಗೌಡರ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಯಲಾಗಿದೆ.

    14 ವರ್ಷಗಳ ಹಿಂದೆ ನಂಜುಂಡೇಗೌಡರ ಮದುವೆಯಾಗಿತ್ತು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜೊತೆ ಕುಂಬಾರಹಳ್ಳಿಯಲ್ಲಿ ಅವರು ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಮಹಿಳೆ, ನಂತರ ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.

    ಅರುಣ್‌ಗೆ ಇಬ್ಬರು ಮಕ್ಕಳಿದ್ದು, ಪತ್ನಿಯಿಂದ ದೂರವಿದ್ದ. ಈ ಹಿಂದೆ ಮಹಿಳೆ ಹಾಗೂ ಅರುಣ್ ಅಕ್ರಮ ಸಂಬಧದ ವಿಚಾರವಾಗಿ ನಂಜುಂಡೇಗೌಡ ಪೊಲೀಸ್ ಠಾಣೆಗೆ ದೂರು ನಿಡಿದ್ದರು. ಬಳಿಕ ರಾಜಿ – ಪಂಚಾಯ್ತಿ ನಡೆಸಿ ಹೊಂದಿಕೊಂಡು ಹೋಗುವಂತೆ ಕುಟುಂಬಸ್ಥರು ತಿಳುವಳಿಕೆ ಹೇಳಿದ್ದರು. ಅಲ್ಲದೇ ಅಕ್ರಮ ಸಂಬಂಧಕ್ಕೆ ಯಾರೂ ಅಡ್ಡಿ ಬರಬಾರದೆಂದು ಪತಿಯನ್ನು ಅವರ ಸಂಬಂಧಿಕರಿಂದ ಮಹಿಳೆ ದೂರ ಮಾಡಿದ್ದಳು. ಆದರೆ ಎರಡು ಹೆಣ್ಣುಮಕ್ಕಳಿಗಾಗಿ ನಂಜುಂಡೇಗೌಡ ಎಲ್ಲವನ್ನು ಸಹಿಸಿಕೊಂಡಿದ್ದರು.

    ಕೆಲ ದಿನಗಳ ಹಿಂದೆ ಎರಡು ಬಾರಿ ನಂಜುಂಡೇಗೌಡರ ಮೇಲೆ ಅರುಣ್ ಮತ್ತು ಆತನ ಗ್ಯಾಂಗ್ ದಾಳಿ ಮಾಡಿತ್ತು. ಈ ವೇಳೆ ಅದೃಷ್ಟವಶಾತ್ ಬಚಾವಾಗಿದ್ದರು. ಮೂರನೇ ಬಾರಿ ಮಿಸ್ ಆಗಬಾರದು ಎಂದು ಮೂರು ಕಡೆ ಕೊಲೆ ಮಾಡಲು ಹಂತಕರು ಸ್ಕೆಚ್ ಹಾಕಿದ್ದರು. ಅದರಂತೆ ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆಯಿರುವ ಬಾರೆಯ ಬಳಿ ಮರದಪಟ್ಟಿಗೆ ಉದ್ದವಾದ 50ಕ್ಕೂ ಹೆಚ್ಚು ಮೊಳೆ ಹೊಡೆದು, ಹುಲ್ಲಿನಿಂದ ಮುಚ್ಚಿ ವಾಹನ ಪಂಚರ್ ಮಾಡಿದ್ದರು. ಪಂಚರ್ ಆದ ವಾಹನದಿಂದ ಇಳಿಯುತ್ತಿದ್ದಂತೆ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗ್‌ನಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಹತ್ಯೆಯ ವಿಚಾರ ಮಹಿಳೆಗೆ ತಿಳಿಯುತ್ತಿದ್ದಂತೆ ಅರ್ಧ ಗಂಟೆ ಮೂರ್ಛೆ ಹೋದಂತೆ ನಟಿಸಿದ್ದಳು.

    ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಆನ್‌ಲೈನ್ ಗೇಮ್‌ನಲ್ಲಿ 20 ಸಾವಿರ ರೂ. ನಷ್ಟ – ಬುದ್ಧಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

    ಆನ್‌ಲೈನ್ ಗೇಮ್‌ನಲ್ಲಿ 20 ಸಾವಿರ ರೂ. ನಷ್ಟ – ಬುದ್ಧಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ

    ತುಮಕೂರು: ಆನ್‌ಲೈನ್ ಗೇಮ್ (Online Game)ಆಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರು (Tumkuru) ನಗರದ ಹೊರಪೇಟೆಯಲ್ಲಿ ನಡೆದಿದೆ.

    ನೇಣಿಗೆ ಶರಣಾದ ಯುವಕನನ್ನು ಟಿ.ಎಸ್.ಭರತ್ (24) ಎಂದು ಗುರುತಿಸಲಾಗಿದೆ. ಯುವಕ ಇತ್ತೀಚೆಗೆ ಆನ್‌ಲೈನ್ ಗೇಮ್‌ನಲ್ಲಿ 20 ಸಾವಿರ ರೂ. ಹಣ ಕಳೆದುಕೊಂಡಿದ್ದ. ಈ ವಿಚಾರ ಆತನ ತಾಯಿಗೆ ಗೊತ್ತಾಗಿ ಇನ್ನೂ ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿ ಹೇಳಿದ್ದರು. ಇದೇ ವಿಚಾರಕ್ಕೆ ಯುವಕ ತನ್ನ ಮನೆ ಬಳಿಯ ಹಳೆ ಹೆಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • ಮೊಳೆ ಇಟ್ಟು ವಾಹನ ಪಂಚರ್ – ಡೋರ್ ತೆಗೆದು ಇಳಿಯುತ್ತಿದ್ದಂತೆ ಭೀಕರ ಮರ್ಡರ್!

    ಮೊಳೆ ಇಟ್ಟು ವಾಹನ ಪಂಚರ್ – ಡೋರ್ ತೆಗೆದು ಇಳಿಯುತ್ತಿದ್ದಂತೆ ಭೀಕರ ಮರ್ಡರ್!

    ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಚನ್ನರಾಯಪಟ್ಟಣದ (Channarayapatna) ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹತ್ಯೆಯಾದ ವ್ಯಕ್ತಿಯನ್ನು ನಂಜುಂಡೇಗೌಡ (44) ಎಂದು ಗುರುತಿಸಲಾಗಿದೆ. ರೈತರಿಂದ ಹಾಲು ಸಂಗ್ರಹ ಮಾಡಿಕೊಂಡು ಡೈರಿಗೆ ಹಾಲು ಹಾಕಲು ಮಹೀಂದ್ರ ಜಿತೋ ವಾಹನದಲ್ಲಿ ನಂಜುಂಡೇಗೌಡ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಮರದ ಪಟ್ಟಿಗೆ ಮೊಳೆ ಇಟ್ಟು ವಾಹನ ಪಂಚರ್ ಮಾಡಿದ್ದಾರೆ. ವಾಹನ ಪಂಕ್ಚರ್ ಆದ ಕೂಡಲೇ ಕೆಳಗಿಳಿದ ನಂಜುಂಡೇಗೌಡರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ.

    ದುಷ್ಕರ್ಮಿಗಳು ಲಾಂಗ್‌ಗಳಿಂದ ನಂಜುಂಡೇಗೌಡರ ತಲೆ, ಕುತ್ತಿಗೆ, ಕೈಯನ್ನು ಕತ್ತರಿಸಿದ್ದಾರೆ. ಬಳಿಕ ಲಾಂಗ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

    ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ?

    Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ?

    ಮುಂಬೈ: ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದ ಬಾಲಿವುಡ್‌ ನಟ ಸೈಫ್ ಅಲಿ ಖಾನ್ (Saif Ali Khan) ಅವರ ಮೂವರು ಸಿಬ್ಬಂದಿಯನ್ನು ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಸೈಫ್ ಅಲಿ ಖಾನ್ ಅವರನ್ನು ಯಾರು ಇರಿದಿದ್ದಾರೆ ಎಂಬುದರ ಕುರಿತು ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ವಶಕ್ಕೆ ಪಡೆದ ಮೂವರ ಪೈಕಿ ದಾಳಿ ನಡೆಸಿದ ವ್ಯಕ್ತಿಯ ಜೊತೆ ಸಂಬಂಧ ಹೊಂದಿರುವ ಮನೆಯ ಕೆಲಸದಾಕೆಯನ್ನು ವಿಚಾರಣೆ ನಡೆಸುತ್ತಾರೆ. ಇದನ್ನೂ ಓದಿ: Saif Ali Khan ಮೇಲೆ ಅಟ್ಯಾಕ್ ಆದಾಗ ಕರೀನಾ ಕಪೂರ್ ಎಲ್ಲಿದ್ದರು?

     

    ರಾತ್ರಿ ಏನಾಯ್ತು?
    ನಸುಕಿನ ಜಾವ 2:30 ರ ವೇಳೆಗೆ ಸೈಫ್‌ ಮೇಲೆ ದಾಳಿ ನಡೆದಿದೆ. ರಾತ್ರಿ ದಾಳಿಕೋರ ಸೈಫ್‌ ಮನೆಗೆ ಬಂದಿದ್ದಾನೆ. ಈತ ಮನೆಗೆ ಬಂದಿದ್ದನ್ನು ನೋಡಿ ಕೆಲಸದಾಕೆ ಗಲಾಟೆ ಮಾಡಿದ್ದಾಳೆ. ಈ ಗಲಾಟೆಯ ಶಬ್ದ ಕೇಳಿ ಸೈಫ್‌ ಇಬ್ಬರು ಇರುವ ಸ್ಥಳಕ್ಕೆ ಬಂದಿದ್ದಾರೆ. ಇಬ್ಬರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದಾಗ ಸೈಫ್‌ ಮೇಲೆ ದಾಳಿ ನಡೆದಿದೆ ಎಂದು  ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಒಳಗೆ ನುಗ್ಗಿದವನು ಮತ್ತು ಸೈಫ್‌ ಅವರ ಮನೆ ಕೆಲಸದಾಕೆಯ ಜೊತೆ ಸಂಬಂಧ ಇರಬಹುದು ಶಂಕೆ ವ್ಯಕ್ತವಾಗಿದೆ. ದಾಳಿಗೆ ಎರಡು ಗಂಟೆಗಳ ಮೊದಲು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಳಿಕೋರನ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್‌ ಒಳಗಡೆ ಇರುವ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

    ದಾಳಿಕೋರನ ಗುರುತು ಮತ್ತು ಉದ್ದೇಶದ ಕುರಿತು ಹೆಚ್ಚಿನ ವಿವರ ತಿಳಿಯಲು ಪೊಲೀಸರು ಮನೆಯ ಸಹಾಯಕ ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ದಾಳಿಕೋರನೊಂದಿಗೆ ಕೆಲಸದಾಕೆಯ ಸಂಬಂಧವನ್ನು ತನಿಖೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.