Tag: police

  • ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ – ಇಬ್ಬರು ಆರೋಪಿಗಳ ಕಾಲಿಗೆ ಗುಂಡು!

    ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ – ಇಬ್ಬರು ಆರೋಪಿಗಳ ಕಾಲಿಗೆ ಗುಂಡು!

    ಕಾರವಾರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಅಂಕೋಲಾ (Ankola) ಪೊಲೀಸರು ಗುಂಡು ಹಾರಿಸಿದ್ದಾರೆ.

    ಗುಂಡೇಟು ತಿಂದ ಆರೋಪಿಗಳನ್ನು ಮಂಗಳೂರು (Mangaluru) ಮೂಲದ ತಲ್ಲತ್ತ ಮತ್ತು ನವಫಾಲ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ, ಜ.29 ರಂದು ರಾಮನಗುಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಪತ್ತೆಯಾಗಿದ್ದ ಕಾರಿನಲ್ಲಿ ಸಿಕ್ಕ ಒಂದು ಕೋಟಿ ರೂ. ಪ್ರಕರಣದಲ್ಲಿ ಬಂಧಿತರಾಗಿದ್ದರು.ಇದನ್ನೂ ಓದಿ: Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ

    ಸ್ಥಳ ಮಹಜರಿಗಾಗಿ ಆರೋಪಿಗಳನ್ನ ಅಂಕೋಲಾ ಕಡೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಪತಿಗೆ ಶಾಕ್‌ – 4 ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ!

    ಘಟನೆಯಲ್ಲಿ ಮೂವರು ಪೊಲೀಸರ ಕಾಲಿಗೆ ಮತ್ತು ತಲೆಗೆ ಗಾಯವಾಗಿದೆ. ಗಾಯಾಳುಗಳನ್ನ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ ಭೇಟಿ ನೀಡಿದ್ದಾರೆ.

    ಕಾರು ಪತ್ತೆಯಾದ ತಿಂಗಳ ಬಳಿಕ ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು. ಕಾರಿನಲ್ಲಿ ಪತ್ತೆಯಾಗಿದ್ದು ದರೋಡೆ ಮಾಡಿ ಕೊಂಡೊಯ್ಯುತ್ತಿದ್ದ ಹಣ ಎಂದು ಶಂಕಿಸಲಾಗಿತ್ತು. ಇದನ್ನೂ ಓದಿ: 180 ರೂ. ಟೋಲ್‌ ಉಳಿಸಲು ಹೋಗಿ ದುರಂತ ಅಂತ್ಯ – ಒಂದೇ ಕುಟುಂಬದ ನಾಲ್ವರ ಸಾವು

  • ಪೊಲೀಸ್‌ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ

    ಪೊಲೀಸ್‌ ಗಂಡ, ಹೆಂಡತಿಗೆ ಸಿಕ್ತು ಮುಖ್ಯಮಂತ್ರಿ ಪದಕ

    ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ, ಪತ್ನಿ ಇಬ್ಬರೂ ಒಟ್ಟಿಗೆ ಮುಖ್ಯಮಂತ್ರಿ ಪದಕಕ್ಕೆ (CM Medal) ಭಾಜನರಾಗಿರುವ ಅಪರೂಪದ ಪ್ರಸಂಗ ನಡೆದಿದೆ.

    ಇನ್‌ಸ್ಪೆಕ್ಟರ್‌ ಶಿವರುದ್ರಪ್ಪ ಮೇಟಿ, ಡಿಎಂ ಪಿಎಸ್‌ಐ ಭವ್ಯ ದಂಪತಿ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ದಂಪತಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಬೆಲೆ ಏರಿಕೆಗೆ ಖಂಡನೆ – 2ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಅಹೋರಾತ್ರಿ ಧರಣಿ

    2008 ರಲ್ಲಿ ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ ಆಗಿ ಶಿವರುದ್ರಪ್ಪ ಮೇಟಿ ಆಯ್ಕೆಯಾದರು. ಈ ಬ್ಯಾಚ್‌ನಲ್ಲಿ ಅತಿ ಚಿಕ್ಕ ವಯಸ್ಸಿನ ಸಬ್ ಇನ್‌ಸ್ಪೆಕ್ಟರ್‌ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಕಲಬುರಗಿಯ ನಾಗನಹಳ್ಳಿ ಪೊಲೀಸ್ ಟ್ರೇನಿಂಗ್‌ನಲ್ಲಿ ತರಭೇತಿ ಪಡೆದು, 2010 ರಲ್ಲಿ ಸಿವಿಲ್ ಸಬ್ ಇನ್‌ಸ್ಪೆಕ್ಟರ್‌ ಆಗಿ ಆಯ್ಕೆಯಾದರು. ಮಂಗಳೂರು ಬರ್ಕೆ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುವಾಗ ಕಿಡಿಗೇಡಿಗಳಿಗೆ ದುಸ್ವಪ್ನರಾಗಿದ್ದರು.

    ಭೂಗತ ಪಾತಕಿ ಬನ್ನಜೆ ರಾಜ್‌ನ ನಕಲಿ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಕೇಸ್‌ನ ತನಿಖೆ, ಜಿಲ್ಲಾ ಕಾರಾಗ್ರಹದಲ್ಲಿ ನಡೆಯುವ ಅಕ್ರಮಗಳ ತಡೆ, ಕೋಮುಗಲಭೆ ತಡೆಗಟ್ಟುವಲ್ಲಿ ಯಶಸ್ವಿಯಾದರು. ನಂತರ ದಾವಣಗೆರೆ ಜಿಲ್ಲೆಯ ಅಜಾದ್ ನಗರ, ಸಂಚಾರ ಠಾಣೆ, ಚನ್ನಗಿರಿ, ಸಂತೆಬೆನೂರ್ ಠಾಣೆಯಲ್ಲಿ ಅತಿ ಹೆಚ್ಚು ಗಾಂಜಾವನ್ನು ವಶಪಡಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ. ಶ್ರೀಗಂಧ ಕಳ್ಳತನ ಕೇಸ್, ನಕಲಿ ಬಂಗಾರ ಕೇಸ್‌ಗಳೊಂದಿಗೆ ಸ್ವತ್ತು ಕಳ್ಳತನ ಕೇಸ್ ಪತ್ತೆ ಮಾಡಿದ್ದಾರೆ. ನಂತರ ಪ್ರಮೋಷನ್ ಆಗಿ ಪ್ರಸ್ತುತ ತುಮಕೂರು ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ವಿರುದ್ದ ಸಾಕಷ್ಟು ಕೇಸ್‌ಗಳನ್ನು ಮಾಡಿದ್ದಾರೆ. ಈ ಎಲ್ಲಾ ಸೇವೆಯನ್ನ ಗುರುತಿಸಿ ಇಂದು ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಬೆಳಗ್ಗೆಯೇ ತುಂತುರು ಮಳೆ

  • ಬಾಡಿಗೆ ವಿಚಾರಕ್ಕೆ ಕಿರಿಕ್ – ಕುಡುಕರಿಂದ ಆಟೋ ಚಾಲಕನ ಮೇಲೆ ಬಿಯರ್ ಬಾಟಲ್‍ನಿಂದ ಹಲ್ಲೆ

    ಬಾಡಿಗೆ ವಿಚಾರಕ್ಕೆ ಕಿರಿಕ್ – ಕುಡುಕರಿಂದ ಆಟೋ ಚಾಲಕನ ಮೇಲೆ ಬಿಯರ್ ಬಾಟಲ್‍ನಿಂದ ಹಲ್ಲೆ

    ದಾವಣಗೆರೆ: ಆಟೋ ಬಾಡಿಗೆ ವಿಚಾರಕ್ಕೆ ಕುಡುಕರು ಚಾಲಕನ ತೆಲೆಗೆ ಬಿಯರ್ ಬಾಟಲ್‍ನಿಂದ ಹಲ್ಲೆ ಮಾಡಿರುವುದು ದಾವಣಗೆರೆಯ (Davanagere) ನಿಟ್ಟುವಳ್ಳಿಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಆಟೋ ಚಾಲಕನನ್ನು ಕೊಳೆನಹಳ್ಳಿ ಚಂದ್ರಯ್ಯ (27) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಬಾರ್‌ನಲ್ಲಿ ಕುಡಿದು ಮನೆಗೆ ಹೋಗಲು ಇಬ್ಬರು ಕುಡುಕರು ಆಟೋ ನಿಲ್ಲಿಸಿದ್ದಾರೆ. ಬಳಿಕ ಬಾಡಿಗೆ ಹಣ ಜಾಸ್ತಿ ಹೇಳ್ತಿಯಾ ಎಂದು ಆಟೋ ಚಾಲಕನಿಗೆ ಥಳಿಸಿ, ಬಾಟಲ್‍ನಿಂದ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ.

    ಕೂಡಲೇ ಸ್ಥಳೀಯರು ಹಲ್ಲೆಗೊಳಗಾದ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಂದ್ರಯ್ಯಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ

    ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ

    ಚಿತ್ರದುರ್ಗ: ಯುಗಾದಿ (Ugadi) ಪ್ರಯುಕ್ತ ಚಿತ್ರದುರ್ಗದ (Chitradurga) ವಿವಿಧೆಡೆ ಜೂಜಾಟದಲ್ಲಿ ತೊಡಗಿದ್ದ 575 ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಒಟ್ಟು 108 ಪ್ರಕರಣಗಳು ದಾಖಲಾಗಿದ್ದು, 7.40 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆ ಅನೇಕರು ಜೂಜಾಟದಲ್ಲಿ (Gambling) ತೊಡಗಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು 575 ಜೂಜುಕೋರರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ – ಆಡಿಯೋದಲ್ಲಿ ಮಾತನಾಡಿರುವ ಪುಷ್ಪಾ ಯಾರು? ಹಿನ್ನೆಲೆ ಏನು?

    ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎಂದು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಯಾರೆಲ್ಲ ಹೊಸ ಪಕ್ಷ ಕಟ್ಟಿದ್ದರು? ರಚನೆ ಮಾಡಿದ್ದು ಯಾಕೆ? ಕೊನೆಗೆ ಏನಾಯ್ತು?

  • ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

    ಪೊಲೀಸರ ಮೇಲೆ ಹಲ್ಲೆ, ಪರಾರಿಗೆ ಯತ್ನ – ದರೋಡೆಕೋರನ ಕಾಲಿಗೆ ಗುಂಡೇಟು

    ಗದಗ: ಹೈಟೆಕ್ ದರೋಡೆ ಗ್ಯಾಂಗ್ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗುವ ವೇಳೆ ಪೊಲೀಸರಿಂದ ಗುಂಡೇಟು ತಿಂದ ಘಟನೆ ಜಿಲ್ಲೆಯ ಮುಂಡರಗಿ (Mundaragi) ತಾಲೂಕಿನ ಡಂಬಳ (Dambala) ಹಾಗೂ ಡೋಣಿ ಗ್ರಾಮದ ಮಧ್ಯೆ ನಡೆದಿದೆ.

    ಆರೋಪಿ ಜಯಸಿಂಹ ಮೊಡಕೆರ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ದರೋಡೆಕೋರನ ಕಾಲಿಗೆ ಎರಡು ಸುತ್ತು ಗುಂಡೇಟು ಹಾರಿಸಿದ್ದಾರೆ. ಇದನ್ನೂ ಓದಿ: ಮೋದಿ ಖಾಸಗಿ ಕಾರ್ಯದರ್ಶಿಯಾಗಿ ಯುವ ಐಎಫ್‌ಎಸ್‌ ಅಧಿಕಾರಿ ನಿಧಿ ತಿವಾರಿ ನೇಮಕ

    ಈ ನಟೋರಿಯಸ್ ಗ್ಯಾಂಗ್ ಮೊಬೈಲ್ ಸಂಪರ್ಕ ಬಿಟ್ಟು ಇನ್ಸ್ಟಾದ ಮೂಲಕ ಸಂಪರ್ಕ ಹೊಂದಿದ್ದರು. ಕಳ್ಳತನ, ದರೋಡೆ ಮಾಡಿ ಮಾಹಿತಿ ಸಿಗದಂತೆ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನುಸುತ್ತಿದ್ದ ಗ್ಯಾಂಗ್‌ನನ್ನು ಬಂಧಿಸುವಲ್ಲಿ ಕೊನೆಗೂ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

    ಆರೋಪಿ ಮಂಜುನಾಥ ಮೊಡಕೆರ್, ರಮೇಶ್ ಮೊಡಕೆರ್ ಹಾಗೂ ಜಯಸಿಂಹ ಮೊಡಕೆರ್‌ರನ್ನು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆತರುತ್ತಿದ್ದರು. ಜಯಸಿಂಹ ಕೈಗೆ ಹಾಕಿದ್ದ ಬೇಡಿಯಿಂದ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ ಅವರು ಆರೋಪಿ ಜಯಸಿಂಹನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ದರೋಡೆ, ಮನೆ ಕಳ್ಳತನ ಸೇರಿದಂತೆ ಹಲವು ಪ್ರಕರಣದ ಮೋಸ್ಟ್ ವಾಟೆಂಡ್ ನಟೋರಿಯಸ್ ದರೋಡೆಕೋರ ಗ್ಯಾಂಗ್ ಇದಾಗಿತ್ತು. ಇದನ್ನೂ ಓದಿ: 300 ಕಿಮೀ ವೇಗದಲ್ಲಿ ಚಾಲನೆ; ಲ್ಯಾಂಬೊರ್ಗಿನಿ ಕಾರು ಹತ್ತಿಸಿ ಫುಟ್‌ಪಾತ್‌ನಲ್ಲಿದ್ದ ಕಾರ್ಮಿಕರಿಗೆ ಗಾಯ!

    ಗಾಯಾಳು ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಎಸ್.ಪಿ, ಬಿ.ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದರು. ಆರೋಪಿ ಜಯಸಿಂಹ ಮೊಡಕೆರ್ ಹಾಗೂ ಪೊಲೀಸ್ ಸಿಬ್ಬಂದಿ ವೀರೇಶ್ ಬಿಸ್ನಳ್ಳಿ ಆರೋಗ್ಯ ವಿಚಾರಿಸಿದರು.

  • ಜೈಲ್‍ಮೇಟ್‍ಗಳಿಂದ ಸಂಬಂಧಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ!

    ಜೈಲ್‍ಮೇಟ್‍ಗಳಿಂದ ಸಂಬಂಧಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ!

    ದಾವಣಗೆರೆ: ಅವರಿಬ್ಬರು ಶಾಲಾ ಕಾಲೇಜ್‍ನಲ್ಲಿ ಪರಿಚಯವಾಗಿ ಸ್ನೇಹಿತರಾದವರಲ್ಲ. ಬದಲಾಗಿ ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋಗಿದ್ದವರು. ಈ ಜೈಲ್‍ಮೇಟ್‍ಗಳಿಬ್ಬರು ಜೈಲಿಂದ ಹೊರಗೆ ಬಂದು ತಮ್ಮ ಸಂಬಂಧಿಕರ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಮತ್ತೆ ದಾವಣಗೆರೆ (Davanagere) ಪೊಲೀಸರ (Police) ಬಲೆಗೆ ಬಿದ್ದಿದ್ದಾರೆ.

    ಬಂಧಿತ ಆರೋಪಿಗಳನ್ನು ಮಂಜಪ್ಪ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ನಗರದ ಎಸ್‍ಎಸ್ ಲೇಔಟ್‍ನಲ್ಲಿ ಕಳೆದ ಮೂರು ದಿನಗಳ ಹಿಂದೆ ಹಗಲಿನ ವೇಳೆಯೇ ಒಂಟಿಯಾಗಿ ಮನೆಯಲ್ಲಿದ್ದ ವೃದ್ಧೆ ಗಂಗಮ್ಮ ಎನ್ನುವರ ಮೇಲೆ ಹಲ್ಲೆ ನಡೆಸಿ 15 ತೊಲ ಬಂಗಾರ ಹಾಗೂ ನಗದನ್ನು ದೋಚಿದ್ದರು. ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದು, ಕಳ್ಳನ ಚಹರೆ ಪತ್ತೆಹಚ್ಚಿ 2 ದಿನದಲ್ಲೇ ದರೋಡೆ ಮಾಡಿದವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೂರು ವರ್ಷಗಳಿಂದ ಪಾಕ್‌ ಜೈಲಲ್ಲಿದ್ದ ಭಾರತದ ಮೀನುಗಾರ ನೇಣಿಗೆ ಶರಣು

    ಬಂಧಿತ ಆರೋಪಿ ನವೀನ್ ಅತ್ಯಾಚಾರ ಹಾಗೂ ಕೊಲೆ ಕೇಸ್ ಸೇರಿದಂತೆ, ಬರೋಬ್ಬರಿ 51 ಕೇಸ್‍ಗಳಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಬುಧವಾರ ರಾತ್ರಿ ಪಂಚನಾಮೆಗೆ ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಗುಂಡು ಹಾರಿಸಿ ಬಂಧಿಸಿದ್ದಾರೆ.

    ದರೋಡೆಕೋರ ನವೀನ್ ಈ ಹಿಂದೆ ಇಂತಹದ್ದೇ ಒಂದು ಕೇಸ್‍ನಲ್ಲಿ ತುಮಕೂರು ಜೈಲು ಸೇರಿದ್ದ, ಅದೇ ಜೈಲಿಗೆ ದರೋಡೆಕೋರನಿಂದ ಹಲ್ಲೆಗೊಳಗಾದ ಗಂಗಮ್ಮನ ತಂಗಿಯ ಮಗ ಮಂಜಪ್ಪ ಕೂಡ ಕೊಲೆ ಕೇಸ್‍ನಲ್ಲಿ ತುಮಕೂರು ಜೈಲಿನಲ್ಲಿದ್ದ. ಆಗ ಇಬ್ಬರಿಗೂ ಪರಿಚಯವಾಗಿತ್ತು, ಜೈಲಿನಿಂದ ಬಿಡುಗಡೆಯಾದ ನಂತರ ಚಂದ್ರಪ್ಪ ಕಳ್ಳರಿಗೆ ದರೋಡೆಕೋರರಿಗೆ ಜಾಮೀನು ಕೊಡುವ ಕೆಲಸ ಮಾಡುತ್ತಾ ದರೋಡೆಕೋರರ ಜೊತೆ ಉತ್ತಮ ಸಂಬಂಧ ಹೊಂದಿದ್ದ.

    ಮಂಜಪ್ಪ ದೊಡ್ಡಮ್ಮನ ಮನೆಯಲ್ಲಿ ಅಪಾರ ಪ್ರಮಾಣದ ಹಣ ಒಡವೆಗಳು ಇರುವುದನ್ನು ತಿಳಿದುಕೊಂಡು, ನವೀನ್‍ನನ್ನು ತನ್ನ ಸ್ನೇಹಿತ ಎಂದು ಗಂಗಮ್ಮನ ಮನೆಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದ್ದ. ಅಲ್ಲದೇ ಮನೆಯಲ್ಲಿ ಯಾವ ಸಮಯದಲ್ಲಿ ಯಾರು ಇರೋದಿಲ್ಲ, ಹೇಗೆ ದರೋಡೆ ಮಾಡಬಹುದು ಎಂದು ಇಬ್ಬರು ಸ್ಕೆಚ್ ಕೂಡ ಹಾಕಿದ್ದರು. ಅದರಂತೆ ದರೋಡೆ ಕೂಡ ನಡೆಸಿ ಒಡವೆ ಹಂಚಿಕೊಳ್ಳುವ ಸಮಯದಲ್ಲಿ ಪೊಲೀಸರ ಅಥಿತಿಯಾಗಿದ್ದಾರೆ. ಇದನ್ನೂ ಓದಿ: ತಾಯಿಗೆ ಕೆಟ್ಟ ಸನ್ನೆ ಮಾಡಿದ್ದವನ ತಲೆ ಕಡಿದು ಪೊಲೀಸ್ ಠಾಣೆಗೆ ತಂದಿದ್ದವನಿಗೆ ಜೀವಾವಧಿ ಶಿಕ್ಷೆ

  • ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ

    ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ

    – ಅನಾಥರಾದ ಮೃತ ದಂಪತಿಯ ನಾಲ್ಕು ಮಕ್ಕಳು

    ವಿಜಯಪುರ: ಕತ್ತು ಹಾಗೂ ಕಾಲಿಗೆ ಸೀರೆಯಿಂದ ಬಿಗಿದ ಸ್ಥಿತಿಯಲ್ಲಿ ಪತ್ನಿ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದೆ.

    ಸಿದ್ದಪ್ಪ ಹರನಾಳ ಹಾಗೂ ಆತನ ಪತ್ನಿ ಮೇಘಾ ಹರನಾಳ ಶವ ಪತ್ತೆಯಾಗಿದೆ. ಎಂಟು ವರ್ಷಗಳ ಹಿಂದೆ ಮೇಘಾಳನ್ನ ಸಿದ್ದಪ್ಪ ಹರನಾಳ ಮದುವೆಯಾಗಿದ್ದ. ಪತಿ ಸಿದ್ದಪ್ಪನೇ ಪತ್ನಿ ಮೇಘಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತ ಮೇಘಾಳ ತಾಯಿ ಗದ್ದೆಮ್ಮ ಹೊಸಮನಿ ಅವರು ಈ ಆರೋಪ ಮಾಡಿದ್ದಾರೆ.

    ಮೃತ ಸಿದ್ದಪ್ಪನ ತಾಯಿ ಶಾಂತಮ್ಮ ಹಾಗೂ ಸಹೋದರ ಶ್ರೀಕಾಂತ ಕಿರುಕುಳವೇ ಇದಕ್ಕೆ ಕಾರಣ ಎಂದು ಗದ್ದೆಮ್ಮ ದೂರಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಾಲಣ್ಣ ನಂದಗಾವಿ ಹಾಗೂ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳೆದ ಎರಡ್ಮೂರು ವರ್ಷಗಳಿಂದ ಸಿದ್ದಪ್ಪ ಹಾಗೂ ಮೇಘಾ ಸಂಸಾರದಲ್ಲಿ ಜಗಳವಾಗುತ್ತಾ ಬಂದಿತ್ತು. ರಾಜಿ ಪಂಚಾಯಿತಿ ಮಾಡಿ ಚೆನ್ನಾಗಿರಿ ಎಂದು ಹೇಳಿದ್ದೆವು. ಈಗ ನಮ್ಮ ಮಗಳನ್ನು ಕೊಲೆ ಮಾಡಿ ಅಳಿಯ ನೇಣಿಗೆ ಶರಣಾಗಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ದಂಪತಿಗೆ ನಾಲ್ಕು ಮಕ್ಕಳಿದ್ದು, ನಾಲ್ವರು ಅನಾಥರಾಗಿದ್ದಾರೆಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

    ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಶವಗಳನ್ನ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರ ಮಾಡಲಿದ್ದಾರೆ. ಪೊಲೀಸರ ತನಿಖೆಯಲ್ಲಿ ಘಟನೆಯ ಕುರಿತು ಸತ್ತಾಂಶ ಹೊರಬೀಳಲಿದೆ.

  • ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    – ಮಾದಕ ವಸ್ತುವಿಗಾಗಿ ಜೈಲಲ್ಲಿ ಪರದಾಟ, ಮೌನಕ್ಕೆ ಶರಣಾದ ಹಂತಕರು

    ಲಕ್ನೋ: ಪತಿಯನ್ನು (Husband)  ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಅವಳ ಪ್ರೇಮಿ ಸಾಹಿಲ್ ಶುಕ್ಲಾ ಜೈಲಿನಲ್ಲಿ ಒಟ್ಟಿಗೆ ಇರಲು ಬಯಸಿದ್ದರು. ಆದರೆ ಜೈಲು ಕೈಪಿಡಿಯ ಪ್ರಕಾರ ಅದು ಸಾಧ್ಯವಿಲ್ಲದ ಕಾರಣ ಇಬ್ಬರನ್ನೂ ಬೇರೆ ಬೇರೆ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಮೀರತ್‌ನ (Meerut) ಚೌಧರಿ ಚರಣ್ ಸಿಂಗ್ ಜೈಲಿನ ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಬ್ಬರು ಮಾದಕ ವ್ಯಸನಿಗಳೆಂದು ತಿಳಿದುಬಂದಿದೆ. ಇಬ್ಬರೂ ಮಾದಕ ವಸ್ತುವಿಗಾಗಿ ಜೈಲಲ್ಲಿ ಹಂಬಲಿಸುತ್ತಿದ್ದಾರೆ. ಇಬ್ಬರೂ ಸಹ ಕೈದಿಗಳ ಜೊತೆ ಮಾತನಾಡದೇ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿನಲ್ಲಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೈಲು ಸಿಬ್ಬಂದಿಗೆ ಅವರ ಮೇಲೆ ನಿಗಾ ಇಡಲು ತಿಳಿಸಲಾಗಿದೆ. ಮುಸ್ಕಾನ್ ಜೈಲಿಗೆ ಬಂದ ಮೊದಲ ದಿನ ಏನನ್ನೂ ತಿನ್ನಲಿಲ್ಲ. ಈಗ ಊಟ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿಗಳ ಕುಟುಂಬದವರು ಯಾರೂ ಅವರನ್ನು ಭೇಟಿ ಮಾಡಲು ಇನ್ನೂ ಬಂದಿಲ್ಲ. ಮುಸ್ಕಾನ್ ಅವರ ಕುಟುಂಬ ಆಕೆಯ ಪರವಾಗಿ ವಕೀಲರನ್ನು ನೇಮಿಸುವುದಿಲ್ಲ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಪ್ರಕರಣವನ್ನು ವಾದಿಸಲು ಸರ್ಕಾರಿ ವಕೀಲರನ್ನು ನೇಮಿಸಬೇಕು ಎಂದು ವಿನಂತಿಸಿದ್ದರು ಎನ್ನಲಾಗಿದೆ.

    ಕಳೆದ ವಾರ ಬಂಧನಕ್ಕೊಳಗಾದ ನಂತರ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ಭಾಗವಾಗಿ ವಿವರವಾದ ವಿಚಾರಣೆಗಾಗಿ ಅವರ ಕಸ್ಟಡಿಗೆ ಕೋರುವುದಾಗಿ ಮೀರತ್ ಪೊಲೀಸರು ತಿಳಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕಳೆದ ವಾರ ಮುಸ್ಕಾನ್ ಮತ್ತು ಸಾಹಿಲ್‌ನನ್ನು ಬಂಧಿಸಲಾಗಿತ್ತು. ಸೌರಭ್ ಕಳೆದ ತಿಂಗಳು ಮನೆಗೆ ಬಂದಿದ್ದರು. ಮಾ.4 ರಂದು ಸೌರಭ್‌ಗೆ ಮಾದಕ ವಸ್ತು ನೀಡಿ ನಂತರ ಇರಿದು ಕೊಲ್ಲಲಾಗಿತ್ತು. ನಂತರ ಅವಳು ಮತ್ತು ಸಾಹಿಲ್ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಸೀಲ್‌ ಮಾಡಿದ್ದರು. ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.

    ಸೌರಭ್ ಮತ್ತು ಮುಸ್ಕಾನ್ 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳಿದ್ದಾಳು. ಸೌರಭ್ ಕುಟುಂಬದೊಂದಿಗೆ ಮುಸ್ಕಾನ್‌ನ ಸಂಬಂಧ ಹಾಳಾಗಿತ್ತು. ಇದರಿಂದ ದಂಪತಿಗಳು ಬಾಡಿಗೆ ಮನೆ ಮಾಡಿಕೊಂಡಿದ್ದರು. 2019ರಲ್ಲಿ ಸೌರಭ್ ತನ್ನ ಹೆಂಡತಿಗೆ ಸಾಹಿಲ್ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಬಳಿಕ ವಿಚ್ಛೇದನಕ್ಕೆ ಯೋಚಿಸಿದ್ದರು. ಆದರೆ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಹಿಂದೆ ಸರಿದಿದ್ದರು. ಬಳಿಕ ಲಂಡನ್‌ಗೆ ತೆರಳಿ ಕೆಲಸ ಮಾಡುತ್ತಿದ್ದರು. ಸೌರಭ್‌ ಕುಟುಂಬಸ್ಥರು ಹಣಕ್ಕಾಗಿ ಮುಸ್ಕಾನ್‌ ಅವರನ್ನು ಮದುವೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ

    ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ

    ನಾಗ್ಪುರ: ಮಾರ್ಚ್ 17 ರಂದು ಭುಗಿಲೆದ್ದ ಹಿಂಸಾಚಾರದ ಮಾಸ್ಟರ್‌ಮೈಂಡ್ ಎಂದು ಆರೋಪಿಸಲಾಗಿರುವ ಫಹೀಮ್ ಶಮೀಮ್ ಖಾನ್ (Fahim Shamim Khan) ಎಂಬಾತನನ್ನು ನಾಗಪುರ ಪೊಲೀಸರು (Nagpur Police) ಬಂಧಿಸಿದ್ದಾರೆ. ಮೈನಾರಿಟೀಸ್ ಡೆಮೋಕ್ರಟಿಕ್ ಪಾರ್ಟಿಯ (MDP) ನಗರ ಅಧ್ಯಕ್ಷನಾಗಿರುವ ಫಹೀಮ್, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

    ಪೊಲೀಸರು ಫಹೀಮ್ ಖಾನ್‌ನ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಗಣೇಶ್‌ಪೇಠ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಫಹೀಮ್ ಖಾನ್‌ನ ಹೆಸರು ಸೇರ್ಪಡೆಯಾಗಿದ್ದು, ಹಿಂಸಾಚಾರ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಆತ ಭಾವನಾತ್ಮಕ ಭಾಷಣವೊಂದನ್ನು ಮಾಡಿರುವ ವೀಡಿಯೋ ಸಾಕ್ಷ್ಯವೊಂದು ಪೊಲೀಸರ ಕೈಗೆ ಸಿಕ್ಕಿದೆ. ಈ ಭಾಷಣವೇ ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಶೇ.4ರಷ್ಟು ಹೊಸ ಮೀಸಲಾತಿ ನೀಡುವುದು ಕಾನೂನುಬಾಹಿರ – ಬಿಜೆಪಿ ವಿರೋಧ

    38 ವರ್ಷದ ಫಹೀಮ್ ಖಾನ್, ಯಶೋಧರ ನಗರದ ಸಂಜಯ್ ಬಾಗ್ ಕಾಲೊನಿಯ ನಿವಾಸಿಯಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ನಾಗ್ಪುರ ಕ್ಷೇತ್ರದಿಂದ ಎಂಡಿಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಿದ ಈತ 6.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದ. ಇದನ್ನೂ ಓದಿ: ಹಿಂದೂ ಯುವತಿ ಹತ್ಯೆ ಕೇಸ್‌ – ಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

    ಬಂಧಿತ ಫಹೀಮ್ ಖಾನ್‌ನನ್ನು ಮಾರ್ಚ್ 21 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ನಗರದಲ್ಲಿ ಶಾಂತಿ ಸ್ಥಾಪಿಸಲು ಕರ್ಫ್ಯೂ ಜಾರಿಯಲ್ಲಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮುಂದುವರೆದಿದೆ. ಪೊಲೀಸರು ಘಟನೆಯ ತನಿಖೆಯನ್ನು ತೀವ್ರಗೊಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಡಿಯೋಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: IPL ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಬಾಲಿವುಡ್‌ ತಾರೆಯರು

    ಔರಂಗಜೇಬ್ ಅಪ್ರಸುತ್ತ ಎಂದ ಆರ್‌ಎಸ್‌ಎಸ್:
    ಹಿಂಸಾಚಾರದ ಬಗ್ಗೆ ಮಾತನಾಡಿದ ಸುನೀಲ್ ಅಂಬೇಕರ್, ಔರಂಗಜೇಬ್ ಇಂದಿನ ದಿನಗಳಲ್ಲಿ ಪ್ರಸ್ತುತವಲ್ಲ, ಯಾವುದೇ ರೀತಿಯ ಹಿಂಸಾಚಾರವು ಸಮಾಜದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಆರ್‌ಎಸ್‌ಎಸ್ ಹಿಂಸಾಚಾರವನ್ನು ಖಂಡಿಸುವ ಜೊತೆಗೆ ಈ ವಿವಾದದಲ್ಲಿ ಶಾಂತಿಯ ಮಾರ್ಗವನ್ನು ಸೂಚಿಸಿದೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಬಿಲ್‌ಗೆ ಸಹಿ ಹಾಕಬೇಡಿ – ರಾಜ್ಯಪಾಲರ ಭೇಟಿ ಮಾಡಿ, ಮನವಿ ಸಲ್ಲಿಸಿದ ಬಿಜೆಪಿ

  • ಚಿತ್ರದುರ್ಗ| ಪೊಲೀಸರ ಕಾರ್ಯಾಚರಣೆ – ಅಕ್ರಮ ಕಬ್ಬಿಣ ಸಾಗಣೆ ದಂಧೆಯಲ್ಲಿ ತೊಡಗಿದ್ದ 6 ಮಂದಿಯ ಬಂಧನ

    ಚಿತ್ರದುರ್ಗ| ಪೊಲೀಸರ ಕಾರ್ಯಾಚರಣೆ – ಅಕ್ರಮ ಕಬ್ಬಿಣ ಸಾಗಣೆ ದಂಧೆಯಲ್ಲಿ ತೊಡಗಿದ್ದ 6 ಮಂದಿಯ ಬಂಧನ

    ಚಿತ್ರದುರ್ಗ: ಹಾಡಹಗಲೇ ಹೈವೆ ಪಕ್ಕ ಐರನ್ ಸ್ಮಗ್ಲಿಂಗ್ (Iron Smuggling) ದಂಧೆ ನಡೆಸುತ್ತಿದ್ದ ವೇಳೆ ದಾವಣಗೆರೆ ಐಜಿ ಸ್ಕ್ವಾಡ್ ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದು, 12 ಲಕ್ಷ ಮೌಲ್ಯದ ಕಬ್ಬಿಣ ರಾಡ್ ವಶಕ್ಕೆ ಪಡೆದುಕೊಂಡಿರುವ ಪ್ರಕರಣ ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು (Molakalmuru) ತಾಲ್ಲೂಕಿನ ಬೈರಾಪುರ ಗ್ರಾಮದ ಬಳಿ ಬೆಳಕಿಗೆ ಬಂದಿದೆ.

    ದಾಳಿಯಲ್ಲಿ ಕಾಂಗ್ರೆಸ್ ಮುಖಂಡ ತಮ್ಮಣ್ಣ ಸೇರಿ ಒಟ್ಟು ಆರು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡ ತಮ್ಮಣ್ಣ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಪ್ರತಿ ಹಬ್ಬಗಳ ಆಚರಣೆಯ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಈತನ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ರಾಜಕಾರಣದ ಬಲದಿಂದ ಅಕ್ರಮವಾಗಿ ಕಬ್ಬಿಣ ದಂಧೆಯಲ್ಲಿ ತೊಡಗಿದ್ದ ಈತನ ಜಾಲವನ್ನು ಪೊಲೀಸರು ಇಂದು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ತುಮಕೂರು| ಜಯಮಂಗಲಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು

    ಈ ದಾಳಿಯಲ್ಲಿ 20 ಟನ್ ತೂಕದ ಕಬ್ಬಿಣ ಹಾಗೂ ಮೂರು ಲಾರಿ ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಪೂರ್ವವಲಯ ಐಜಿ ರವಿಕಾಂತೇ ಗೌಡ ಮತ್ತು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು, ಜಿಂದಾಲ್ ಐರನ್ ಫ್ಯಾಕ್ಟರಿಗಳಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಲಾರಿಗಳ ಚಾಲಕರ ಜೊತೆ ಕಾಂಗ್ರೆಸ್ ಮುಖಂಡ ತಮ್ಮಣ್ಣ ಡೀಲ್ ಕುದುರಿಸಿ ಅಕ್ರಮವಾಗಿ ಐರನ್ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: 6-7 ಸಾವಿರ ಕೋಟಿ ತೆರಿಗೆ ಜಾಸ್ತಿ ಮಾಡಿರೋದು ನಿಜ – ಗ್ಯಾರಂಟಿಗಳಿಗೆ ಸುಮ್ಮನೆ ಹಣ ಬರುತ್ತಾ?: ಸಿಎಂ

    ಪ್ರಕರಣದ ಎ1 ಆರೋಪಿ ಬೈರಾಪುರ ಗ್ರಾಮದ ತಮ್ಮಣ್ಣ, ಮತ್ತು ಹರೀಶ್, ತಿಪ್ಪೇಸ್ವಾಮಿ, ಗಿರಿಸಿದ್ದಪ್ಪ, ಪರಶುರಾಮ್, ಯರ್ರಿಸ್ವಾಮಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಐಜಿ ಸ್ಕ್ವಾಡ್ ಪಿಎಸ್‌ಐ ಮೋಹನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಬಗ್ಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒತ್ತುವರಿ ಮಾಡಿಲ್ಲ ಎಂದಾದರೆ ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು: ಡಿ.ಕೆ.ಶಿವಕುಮಾರ್ ಪ್ರಶ್ನೆ