Tag: police

  • ಕೊನೆ ಕ್ಷಣದಲ್ಲಿ ಡಿಜಿಪಿ ಪ್ರಮೋಷನ್‌ಗೆ ತಡೆ – ಅಲೋಕ್ ಕುಮಾರ್‌ಗೆ ಇಲಾಖೆಯಲ್ಲೇ ಪಿತೂರಿ?

    ಕೊನೆ ಕ್ಷಣದಲ್ಲಿ ಡಿಜಿಪಿ ಪ್ರಮೋಷನ್‌ಗೆ ತಡೆ – ಅಲೋಕ್ ಕುಮಾರ್‌ಗೆ ಇಲಾಖೆಯಲ್ಲೇ ಪಿತೂರಿ?

    ಬೆಂಗಳೂರು: 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್‌ (Alok Kumar) ಅವರಿಗೆ ಪೊಲೀಸ್ ಇಲಾಖೆಯೇ (Police Department) ಬೆನ್ನಿಗೆ ಚೂರಿ‌ ಇರಿದ ಆರೋಪ ಕೇಳಿಬಂದಿದೆ.

    ಹೌದು. ಬುಧವಾರದಿಂದ ಎಡಿಜಿಪಿ ಹುದ್ದೆಯಿಂದ ಡಿಜಿಪಿಯಾಗಿ ಅಲೋಕ್‌ ಕುಮಾರ್‌ ಬಡ್ತಿ ಪಡೆಯಬೇಕಿತ್ತು. ಆದರೆ ಕುಮಾರಸ್ವಾಮಿ (Kumaraswamy) ಮುಖ್ಯಮಂತ್ರಿ ಅವಧಿಯಲ್ಲಿ ನಡೆದಿದೆ ಎನ್ನಲಾದ 5 ವರ್ಷದ ಹಳೆ ಫೋನ್ ಟ್ಯಾಪಿಂಗ್ ಪ್ರಕರಣದ (Phone Tapping) ಬಗ್ಗೆ ಸರ್ಕಾರ ಇಲಾಖಾ ತನಿಖೆಗೆ ಆದೇಶ ನೀಡಿ ಬಡ್ತಿಯನ್ನು ತಡೆ ಹಿಡಿದಿದೆ.

    ಈ ತಿಂಗಳ 5 ರಂದು ಪ್ರಕರಣ ಇತ್ಯರ್ಥವಾಗಿದೆ ಎಂದು ಸರ್ಕಾರ ಆರ್‌ಟಿಐನಲ್ಲಿ ಉತ್ತರ ನೀಡಿದೆ. ಆದರೆ ಮೇ 9 ರಂದು ಇಲಾಖಾ ತನಿಖೆಗೆ ಆದೇಶಿಸಿ ನೋಟಿಸ್‌ ನೀಡಲಾಗಿದೆ. ಈ ನೋಟಿಸ್‌ ಮೇಲೂ ಅಲೋಕ್‌ ಕುಮಾರ್ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ (CAT) ತಡೆಯಾಜ್ಞೆ ತಂದಿದ್ದು ಮುಂದಿನ ವಿಚಾರಣೆಯನ್ನು ಜೂನ್ 10 ಕ್ಕೆ ಮುಂದೂಡಿಕೆ ಮಾಡಲಾಗಿದೆ.  ಇದನ್ನೂ ಓದಿ: ಎಡಿಜಿಪಿ ಅಲೋಕ್‌ ಕುಮಾರ್‌ಗೆ ಮುಂಬಡ್ತಿ ನೀಡದೇ 6 ವರ್ಷದ ಹಳೆ ಕೇಸ್‌ ಕೆದಕಿದ ಸರ್ಕಾರ

    ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್

    ಅಧಿಕಾರಿಗಳೇ ಅಡ್ಡಿ?
    ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕುರ್ಚಿ ಮೇಲೆ ಕೆಲ ಎಡಿಜಿಪಿಗಳು ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅಲೋಕ್‌ ಕುಮಾರ್‌ಗೆ ಈಗ ಪ್ರಮೋಷನ್ ನೀಡಿದರೆ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ)ಹೊಸದಾಗಿ ಅಧಿಕಾರ ಸ್ವೀಕರಿಸಿದ ಸಲೀಂ ಅವರ ನಂತರ ಡಿಜಿ ಅಂಡ್ ಐಜಿಪಿ ರೇಸ್‌ನಲ್ಲಿ ಇವರ ಹೆಸರು ಬರುತ್ತದೆ. ಈ ಹುದ್ದೆಯನ್ನು ತಪ್ಪಿಸಲು ಹುನ್ನಾರ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅಲೋಕ್‌ ಕುಮಾರ್‌ ಬಗ್ಗೆ ಇಲ್ಲಸಲ್ಲದ ವಿಚಾರ ಹೇಳಿ ಬಡ್ತಿಯನ್ನು ತಡೆ ಹಿಡಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

    ಸದ್ಯ ದಯಾನಂದ್‌ ಅವರು ನಗರ ಪೊಲೀಸ್‌ ಆಯುಕ್ತರಾಗಿದ್ದಾರೆ. ಇವರಿಗೆ ಡಿಜಿಪಿಯಾಗಿ ಬಡ್ತಿ ನೀಡಿದರೆ ಅವರನ್ನು ಆ ಪಟ್ಟದಿಂದ ಇಳಿಸಬೇಕಾಗುತ್ತದೆ. ದಯಾನಂದ್‌ ಪಟ್ಟದಿಂದ ಇಳಿದರೆ ತಮಗೆ ಆಯುಕ್ತರ ಹುದ್ದೆ ಸಿಗಬಹುದು ಎಂಬ ಲೆಕ್ಕಾಚಾರವನ್ನು ಕೆಲವರು ಹಾಕಿದ್ದಾರೆ ಎಂಬ ಮಾತುಗಳು ಪೊಲೀಸ್‌ ವಲಯದಿಂದ ಕೇಳಿ ಬಂದಿದೆ. ಇದನ್ನೂ ಓದಿ: Exclusive: ಕಾಮಿಡಿ ಕಿಲಾಡಿ ಸ್ಟಾರ್‌, ನಟ ಮಡೆನೂರು ಮನು ವಿರುದ್ಧ ರೇಪ್‌ ಕೇಸ್‌

    ಈ ಹಿಂದೆ ಅಲೋಕ್‌ ಕುಮಾರ್‌ ಕೇವಲ 45 ದಿನಗಳ ಕಾಲ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದರು. ನಂತರ ಹುದ್ದೆಯನ್ನು ಕಿತ್ತುಕೊಳ್ಳಲಾಗಿತ್ತು. ಈಗ ಡಿಜಿಪಿ ಪ್ರೊಮೋಷನ್ ಸಹ ಕಸಿಯಲಾಗಿದ್ದು, ಅನ್ಯಾಯದ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ಅಲೋಕ್ ಕುಮಾರ್ ಪತ್ರ ಬರೆದಿದ್ದಾರೆ.

     

  • ಎಡಿಜಿಪಿ ಅಲೋಕ್‌ ಕುಮಾರ್‌ಗೆ ಮುಂಬಡ್ತಿ ನೀಡದೇ 6 ವರ್ಷದ ಹಳೆ ಕೇಸ್‌ ಕೆದಕಿದ ಸರ್ಕಾರ

    ಎಡಿಜಿಪಿ ಅಲೋಕ್‌ ಕುಮಾರ್‌ಗೆ ಮುಂಬಡ್ತಿ ನೀಡದೇ 6 ವರ್ಷದ ಹಳೆ ಕೇಸ್‌ ಕೆದಕಿದ ಸರ್ಕಾರ

    ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ (Alok Kumar) ಅವರಿಗೆ ಮುಂಬಡ್ತಿ ನೀಡದ ಸರ್ಕಾರ 6 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು.ಈ ಹಿಂದೆ ಕೇಳಿ ಬಂದಿದ್ದ ಫೋನ್‌ ಟ್ಯಾಪಿಂಗ್‌ (Phone Tapping) ಹಾಗೂ ಅಕ್ರಮವಾಗಿ ಮೊಬೈಲ್‌ ಕರೆ ವಿವರ(ಸಿಡಿಆರ್‌) ಪಡೆದ ಪ್ರಕರಣದಲ್ಲಿ ಅಲೋಕ್‌ ಕುಮಾರ್‌ ವಿರುದ್ಧ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ ಎನ್ನಲಾಗುತ್ತಿದೆ.

    ಇಲಾಖಾ ವಿಚಾರಣೆಗೆ ಆದೇಶ ನೀಡುವುದಾದರೆ ಈ ಹಿಂದೆಯೇ ನೀಡಬಹುದಿತ್ತು. ಆದರೆ ಡಿಜಿಪಿ ಸ್ಥಾನಕ್ಕೆ ಪದೋನ್ನತಿ ಸಿಗುವ ಸಮಯದಲ್ಲೇ  ಹಳೆಯ ಪ್ರಕರಣವನ್ನು ಕೆದಕ್ಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರದ ಈ ನಡೆಗೆ ಹಿರಿಯ ಐಪಿಎಸ್ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಒಂದು ಡಿಜಿಪಿ ಸ್ಥಾನ ತೆರವಾದ ಹಿನ್ನೆಲೆ 1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಲೋಕ್‌ ಕುಮಾರ್‌ ಅವರಿಗೆ ಈ ತಿಂಗಳಲ್ಲಿ ಡಿಜಿಪಿ ಆಗಿ ಮುಂಬಡ್ತಿ ಸಿಗಬೇಕಿತ್ತು. ಆದರೆ ಈಗ ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಇದರಿಂದಾಗಿ ಅದೇ ಬ್ಯಾಚ್‌ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜೈಶಂಕರ್‌ ಕರೆ ಬೆನ್ನಲ್ಲೇ ತಾಲಿಬಾನ್‌ ವಿದೇಶಾಂಗ ಸಚಿವರನ್ನೇ ಬೀಜಿಂಗ್‌ಗೆ ಕರೆಸಿ ಪಾಕ್‌ ಜೊತೆ ಕೈ ಕುಲುಕಿಸಿದ ಚೀನಾ!

    ಫೋನ್‌ಟ್ಯಾಪಿಂಗ್‌, 50ಕ್ಕೂ ಹೆಚ್ಚು ಮಂದಿಯ ಸಿಡಿಆರ್‌ ಪಡೆದ ಆರೋಪದಡಿ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಲಾಗಿದ್ದು, ಈ ಕುರಿತು ಅಲೋಕ್‌ ಕುಮಾರ್‌ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಏನಿದು ಪ್ರಕರಣ?
    ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಲೋಕ್‌ ಕುಮಾರ್‌ ಸಿಸಿಬಿ ಮುಖ್ಯಸ್ಥರಾಗಿದ್ದರು. 2019 ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಲು ಕಾಂಗ್ರೆಸ್​-ಜೆಡಿಎಸ್​ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು. ಈ ವೇಳೆ ಕುಮಾರಸ್ವಾಮಿ ಸರ್ಕಾರ ಕೆಲ ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್‌ ಟ್ಯಾಪಿಂಗ್‌ ಮತ್ತು ಸಿಡಿಆರ್‌ ಸಂಗ್ರಹಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಚರ್ಚೆ ಜೋರಾಗುತ್ತಿದ್ದ ಸಮಯದಲ್ಲೇ ಕುಮಾರಸ್ವಾಮಿ ಅವರು ಅಲೋಕ್‌ ಕುಮಾರ್‌ ಅವರನ್ನು ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫೋನ್‌ ಟ್ಯಾಪಿಂಗ್‌ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಲೋಕ್‌ ಕುಮಾರ್‌ ಮನೆ ಮೇಲೆ ದಾಳಿ ಸಹ ನಡೆಸಿತ್ತು. ಈ ವೇಳೆ ಭಾಸ್ಕರ್‌ರಾವ್‌ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್‌ ಟ್ಯಾಪಿಂಗ್‌ ಮಾಡಿದ್ದ ಆಡಿಯೋ ಒಂದು ವೈರಲ್‌ ಮಾಡಲಾಗಿತ್ತು. ಇದನ್ನೂ ಓದಿ:  ಪರಂಗೆ ಇಡಿ ಈಟಿ – 140 ಕೋಟಿ ವ್ಯವಹಾರ ನಡೆದ್ರೂ 95 ಕೋಟಿಗೆ ಖರೀದಿ?

    ಅಲೋಕ್‌ ಕುಮಾರ್‌ ಸಿಎಟಿ ಮೂಲಕ ತಡೆಯಾಜ್ಞೆ ತಂದಿದ್ದರೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಬಿ-ರಿಪೋರ್ಟ್‌ ಅನ್ನು ಭಾಸ್ಕರ್‌ರಾವ್‌ ಪ್ರಶ್ನಿಸಿದ್ದರು.

  • ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ

    ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ

    ಮೈಸೂರು: ನಗರದ (Mysuru) ಹೊರವಲಯದ ಕಾಲೇಜೊಂದರ ಬಳಿ ಯುವತಿಯೊಬ್ಬಳ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಮೃತ ಯುವತಿ ಕಳೆದ ಮೂರು ವರ್ಷಗಳಿಂದ ಮಕ್ಕಳ ಡೇ ಕೇರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ಕೆ.ಆರ್ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಡೇ ಕೇರ್‌ನಿಂದ ತೆರಳಿದ್ದಳು. ಆಸ್ಪತ್ರೆಯಿಂದ ಹೊರಡುವಾಗ ತಂದೆಗೆ ಕರೆ ಮಾಡಿದ್ದಳು. ಈ ವೇಳೆ, ಮಳೆ ಬರುತ್ತಿದೆ ಆಟೋದಲ್ಲಿ ಹೋಗುವಂತೆ ತಂದೆ ತಿಳಿಸಿದ್ದರು. ಆದರೆ ಆಕೆ ಮನೆಗೆ ವಾಪಸ್ ಆಗಿರಲಿಲ್ಲ. ಇಂದು (ಬುಧವಾರ) ಯುವತಿಯ ಮೃತದೇಹ ಪತ್ತೆಯಾಗಿದೆ.

    ಮೃತ ಯುವತಿಯ ಸೋದರ ಮಾವ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ಮೃತದೇಹ ನೋಡಿದಾಗ ನಾವು ಕೇವಲ ಕೊಲೆ ಎಂದುಕೊಂಡಿದ್ದೆವು. ಮೃತದೇಹದ ಮೇಲೆ ಪ್ಯಾಂಟ್ ಉಲ್ಟಾ ಹಾಕಲಾಗಿತ್ತು, ಅಂದರೆ ಅತ್ಯಾಚಾರದ ನಂತರ ಕೊಲೆ ಮಾಡಿ ಬಟ್ಟೆ ತೊಡಿಸಿರಬಹುದು. ಬಡವರ ಹೆಣ್ಣು ಮಕ್ಕಳಿಗೆ ಈ ರೀತಿಯಾಗುತ್ತಿದೆ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ಸಿಸಿಬಿ ಕಚೇರಿ ಜಲಾವೃತ | ಬೊಮ್ಮನಹಳ್ಳಿ -ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 3 ಅಡಿ ನೀರು

    ಬೆಂಗಳೂರಿನ ಸಿಸಿಬಿ ಕಚೇರಿ ಜಲಾವೃತ | ಬೊಮ್ಮನಹಳ್ಳಿ -ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 3 ಅಡಿ ನೀರು

    ಬೆಂಗಳೂರು: ಭಾರೀ ಮಳೆಗೆ (Rain) ಶಾಂತಿನಗರ ಸಿಸಿಬಿ ಕಚೇರಿ (CCB Office) ಸಂಪೂರ್ಣ ಜಲಾವೃತಗೊಂಡಿದೆ.

    ಮಹಾಮಳೆಗೆ ರಾಜಕಾಲುವೆ ನೀರು ಒಳಗೆ ನುಗ್ಗಿದ್ದರಿಂದ ಗ್ರೌಂಡ್ ಫ್ಲೋರ್ ನಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನಿಂತಿದೆ. ಇದನ್ನೂ ಓದಿBengaluru Rain| ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್ – ಶಿವಾನಂದ ಸರ್ಕಲ್‌ ಅಂಡರ್‌ ಪಾಸ್‌ ಮುಳುಗಡೆ

    ದಾಖಲೆಗಳು ಹಾಳಾಗಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಈಗ ಚಿಂತೆ ಆರಂಭವಾಗಿದೆ. ಜೊತೆಗೆ ಕೊಳಚೆ ನೀರು ಕೆಟ್ಟ ವಾಸನೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ.  ಇದನ್ನೂ ಓದಿ: ಬೆಂಗಳೂರಲ್ಲಿ ವರುಣನ ಅಬ್ಬರ – 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲೆಯ ಮಳೆ

    ಬೊಮ್ಮನಹಳ್ಳಿ ಮತ್ತು ಸಿಲ್ಕ್ ಬೋರ್ಡ್ ರಸ್ತೆ (Bommanahalli – Silk Board) ಜಲಾವೃತಗೊಂಡಿದ್ದು ಮುಖ್ಯ ರಸ್ತೆಯಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದೆ. ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ಕಡೆ ಹೋಗುವ ರಸ್ತೆಯಲ್ಲಿ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.

     

  • ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

    ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

    ಉಡುಪಿ: ಇಬ್ಬರು ಬುರ್ಖಾಧಾರಿ ಮಹಿಳೆಯರು ಮಗುವನ್ನು ಅಪಹರಿಸಲು ಯತ್ನಿಸಿರುವುದು ಉಡುಪಿಯ (Udupi) ಕಾಪು (Kapu) ತಾಲೂಕಿನ ಬೆಳಪು ಗ್ರಾಮದಲ್ಲಿ ನಡೆದಿದೆ. ಈ ವೇಳೆ, ತಡೆಯಲು ಬಂದ ಮಗುವಿನ ತಾಯಿಗೆ ಬುರ್ಖಾಧಾರಿ ಮಹಿಳೆಯರು ಚಾಕು ಇರಿದಿದ್ದಾರೆ.

    ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾಲೋನಿಯ ಮೊಹಮ್ಮದ್ ಅಲಿ ಮನೆಗೆ ಇಬ್ಬರು ಬುರ್ಖಾಧಾರಿಗಳು ಬಂದು, ಶೌಚಾಲಯ ಬಳಸುತ್ತೇವೆ ಎಂದು ಮನೆಗೆ ಪ್ರವೇಶಿಸಿದ್ದರು. ಈ ವೇಳೆ ಓರ್ವ ಬುರ್ಖಾಧಾರಿ ಮಹಿಳೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನ ಎತ್ತಿಕೊಂಡು ಓಡಿ ಹೋಗಲು ಯತ್ನಿಸಿದ್ದಾಳೆ. ಇದನ್ನೂ ಓದಿ: Kolar | ವಿದ್ಯುತ್ ತಂತಿ ಸ್ಪರ್ಶಿಸಿ ಸಾರಿಗೆ ನೌಕರ ಸಾವು

    ತಕ್ಷಣ ಮಹಿಳೆಯನ್ನು ಮಗುವಿನ ತಾಯಿ ತಾಬರಿಸ್ ತಡೆದಿದ್ದಾರೆ. ಈ ವೇಳೆ ಮಗುವನ್ನು ಬಿಟ್ಟು, ತಾಬರಿಸ್‍ಗೆ ಮಹಿಳೆಯರು ಚಾಕು ಇರಿದು ಪರಾರಿಯಾಗಿದ್ದಾರೆ.

    ಶಿರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಧರಿಸಿದ್ದ ಬುರ್ಖಾ ಬೆಳಪು ರೈಲ್ವೇ ಹಳಿಯ ಮೇಲೆ ಪತ್ತೆಯಾಗಿದೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿಯನ್ನು ಹಗ್ ಮಾಡ್ತೀನಿ – ಪೋಸ್ಟ್ ಹಾಕಿ ಪೊಲೀಸರ ಅತಿಥಿಯಾದ ಯುವಕ

  • 13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

    13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

    ಬಳ್ಳಾರಿ: ಎರಡು ಕೊಲೆ ಹಾಗೂ 13 ಎಟಿಎಂ (ATM) ಕಳ್ಳತನ ಸೇರಿದಂತೆ ಸುಮಾರು 30 ಪ್ರಕರಣಗಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನಿಗೆ ಸಿರುಗುಪ್ಪ ಪೊಲೀಸರು (Police) ಗುಂಡೇಟು ನೀಡಿದ್ದಾರೆ.

    ಆರೋಪಿ ಅಮರೇಶ್ ಗುಂಡೇಟು ತಿಂದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಪ್ರಕರಣವೊಂದರ ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಸಿರುಗುಪ್ಪ ಸಿಪಿಐ ಹನುಮಂತಪ್ಪ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆರೋಪಿ ಇದನ್ನು ಲೆಕ್ಕಿಸದೇ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇದನ್ನೂ ಓದಿ: ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಆರೋಪಿ ಅಮರೇಶ್ ಕರ್ನಾಟಕ ಹಾಗೂ ಆಂದ್ರದ ಎರಡೂ ರಾಜ್ಯಗಳಲ್ಲಿ ಕಳ್ಳತನ ಮಾಡುವಾಗ ಕೊಲೆ ಮಾಡಿದ್ದ. ಈತನ ಮೇಲೆ ಎರಡು ಕೊಲೆ, 6 ಡಕಾಯಿತಿ, 13 ಎಟಿಎಂ ಕಳ್ಳತನದಲ್ಲಿ ಭಾಗಿಯಾದ ಆರೋಪಗಳಿವೆ.

    ಘಟನೆಯಲ್ಲಿ ಪೇದೆ ವಿರೂಪಾಕ್ಷ ಗೌಡ ಹಾಗೂ ಮಾರುತಿಯವರಿಗೆ ಗಾಯಗಳಾಗಿದ್ದು, ಅವರಿಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸ್ಲೀಪರ್‌ ಬಸ್‌ನಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ – ಐವರು ಸಜೀವ ದಹನ

  • ಆಪರೇಷನ್ ಸಿಂಧೂರ | ಬೆಂಗ್ಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತ ಪೊಲೀಸರ ಹದ್ದಿನ ಕಣ್ಣು

    ಆಪರೇಷನ್ ಸಿಂಧೂರ | ಬೆಂಗ್ಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಸುತ್ತ ಪೊಲೀಸರ ಹದ್ದಿನ ಕಣ್ಣು

    ಬೆಂಗಳೂರು: ಆಪರೇಷನ್ ಸಿಂಧೂರ(Operation Sindoor) ಪ್ರತೀಕಾರದ ಬೆನ್ನಲ್ಲೇ ದೇಶಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇದೀಗ ಐಪಿಎಲ್ ಮ್ಯಾಚ್ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂನ(Chinnaswamy Stadium) ಸುತ್ತಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

    ಪ್ರಮುಖ ಸ್ಥಳಗಳು ಹಾಗೂ ಜನಕೇಂದ್ರಿತ ಸ್ಥಳಗಳಲ್ಲಿ ಟೈಟ್ ಸೆಕ್ಯುರಿಟಿ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದೀಗ ಪೊಲೀಸರು ಎಲ್ಲಾ ಕಡೆಗಳಲ್ಲಿ ಹೆಚ್ಚಿನ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಿಂದ ಪಡಿಕ್ಕಲ್ ಔಟ್ – ಮತ್ತೊಬ್ಬ ಕನ್ನಡಿಗನಿಗೆ ಮಣೆ ಹಾಕಿದ ಆರ್‌ಸಿಬಿ

    ಐಪಿಎಲ್ ಮ್ಯಾಚ್ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂನ ಪ್ರತೀ ಗೇಟ್ ಬಳಿಯೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮೂರು ಪಾಳಿಗಳಲ್ಲಿ 70ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೇ 13ರಂದು ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಪಂದ್ಯ ನಡೆಯಲಿದೆ.

  • ದಾವಣಗೆರೆ | ರೌಡಿಶೀಟರ್ ಮುಖಕ್ಕೆ ಪೆಪ್ಪರ್ ಸ್ಪ್ರೈ ಮಾಡಿ ಕೊಲೆ

    ದಾವಣಗೆರೆ | ರೌಡಿಶೀಟರ್ ಮುಖಕ್ಕೆ ಪೆಪ್ಪರ್ ಸ್ಪ್ರೈ ಮಾಡಿ ಕೊಲೆ

    ದಾವಣಗೆರೆ: ನಗರದಲ್ಲಿ (Davanagere) ಹಾಡಹಗಲೇ ಕುಖ್ಯಾತ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾರೆ.

    ಹತ್ಯೆಗೀಡಾದ ರೌಡಿಶೀಟರ್‌ನನ್ನು ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಎಂದು ಗುರುತಿಸಲಾಗಿದೆ. ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಯೊಂದರ ಮುಂಭಾಗದಲ್ಲಿ ಕೊಲೆ ಮಾಡಲಾಗಿದೆ. ಹತ್ಯೆಗೀಡಾದ ರೌಡಿಶೀಟರ್ ರಿಯಲ್ ಎಸ್ಟೇಟ್ (Real Estate) ಸೆಟಲ್ಮೆಂಟ್ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ವಿಚಾರಣಾಧೀನ ಕೈದಿ ಪೊಲೀಸ್ ವಶಕ್ಕೆ

    ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳು ಸಂತೋಷ್ ಮುಖಕ್ಕೆ ಪೆಪ್ಪರ್ ಸ್ಪ್ರೈ ಮಾಡಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ದಾವಣಗೆರೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಹತ್ಯೆಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: `ಹೌಸ್‌ ಅರೆಸ್ಟ್‌’ ಶೋನಲ್ಲಿ ಸೆಕ್ಸ್‌ ಪೊಸಿಷನ್‌ಗೆ ಒತ್ತಾಯ – ನಟ ಅಜಾಜ್ ಖಾನ್‌ಗೆ ಸಮನ್ಸ್

  • ಕುಡುಪು ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ: ಭರತ್ ಶೆಟ್ಟಿ

    ಕುಡುಪು ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ: ಭರತ್ ಶೆಟ್ಟಿ

    -ಈ ಪ್ರಕರಣವನ್ನು ಧರ್ಮ ಎತ್ತಿ ಯಾಕೆ ನೋಡಬೇಕು; ಬಿಜೆಪಿ ಶಾಸಕ ಪ್ರಶ್ನೆ

    ಮಂಗಳೂರು: ಕುಡುಪು (Kudupu) ಗುಂಪು ಹತ್ಯೆ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ ಎಂದು ಮಂಗಳೂರು ಉತ್ತರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ (Dr.Y Bharath Shetty) ಆರೋಪಿಸಿದ್ದಾರೆ.

    ಮಂಗಳೂರಿನಲ್ಲಿ (Mangaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡುಪಿನಲ್ಲಿ ದುರಾದೃಷ್ಟಕರ ಘಟನೆ ನಡೆದಿದೆ. ಆದರೆ ಅಲ್ಲಿ ನಡೆದ ಕ್ರೈಂನ್ನು ಕ್ರೈಂ ದೃಷ್ಟಿಕೋನದಲ್ಲೇ ನೋಡಬೇಕು. ಕೆಲವರು ಮೃತಪಟ್ಟ ವ್ಯಕ್ತಿಯ ಜಾತಿ, ಧರ್ಮ ನೋಡುತ್ತಿದ್ದಾರೆ. ಅಲ್ಲದೇ ಘಟನೆಗೆ ರಾಜಕೀಯ ಬಣ್ಣ ನೀಡಲಾಗುತ್ತಿದ್ದು, ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ

    ದೇಶದಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಪ್ರತೀಕಾರದ ಭಾವನೆ ಎದ್ದಿದೆ. ಇಂತಹ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಹಾಕಿದರೆ ಯಾರೂ ಬಿಡಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಆದರೆ ಇದರಲ್ಲಿ ಘಟನೆಯನ್ನು ಜಾತಿ ಎತ್ತಿ ಯಾಕೆ ನೋಡಬೇಕು. ಇಸ್ರೇಲ್ ಯುದ್ಧ ವೇಳೆ ಎಷ್ಟು ಜನ ಕಾಂಗ್ರೆಸಿಗರು ಇಸ್ರೇಲ್ ಬಾವುಟ ಸುಡುವ ಕೆಲಸ ಮಾಡಿದ್ದಾರೆ. ಈಗ ಯಾಕೆ ಪಾಕಿಸ್ತಾನ ಧ್ವಜ ಸುಟ್ಟಿಲ್ಲ. ಯಾರೋ ಸುಟ್ಟಾಗ ಇವರಿಗೇಕೆ ಸಿಟ್ಟು. ವೈದ್ಯೆಯೊಬ್ಬಳು ಪಾಕ್ ಪರ ಕಮೆಂಟ್ ಹಾಕಿದಾಗ ಯಾಕೆ ಇವರು ಪ್ರತಿಕ್ರಿಯೆ ಕೊಟ್ಟಿಲ್ಲ. ಯುದ್ಧ ಸನ್ನಿವೇಶ ಎದುರಾಗಿರುವ ಹೊತ್ತಲ್ಲಿ ಕಾಂಗ್ರೆಸಿಗರು ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಪಣ – ಸೈಲೆಂಟ್ ಪ್ಲ್ಯಾನಿಂಗ್, ಮೋದಿ ನಿಗೂಢ ನಡೆ

    ಬೆಂಗಳೂರಿನಲ್ಲಿ (Bengaluru) ಗೋವಿನ ಕೆಚ್ಚಲು ಕೊಯ್ದವನೂ ಅರೆಸ್ಟ್ ಆದಾಗ ಮಾನಸಿಕ ಅಸ್ವಸ್ಥ ಎಂದಾಗಿತ್ತು. ಈಗ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದಾಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ಪಾಕ್ ಪರ ಮನಸ್ಥಿತಿ ಇದ್ದವರು, ಅಂಥ ಘೋಷಣೆ ಹಾಕೋರೆಲ್ಲ ಮಾನಸಿಕ ಅಸ್ವಸ್ಥರೇ ಆಗಿದ್ದಾರೆ. ದೇಶದಲ್ಲಿ ಇಂತಹ ಮಾನಸಿಕ ಅಸ್ವಸ್ಥರ ಗುಂಪು ಹೆಚ್ಚಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದವನ ಹತ್ಯೆ ಕೇಸ್ – ಮೂವರು ಪೊಲೀಸರು ಸಸ್ಪೆಂಡ್

    ಈ ಪ್ರಕರಣದಲ್ಲಿ ಪೊಲೀಸರು (Police) ಕೆಲವು ಅಮಾಯಕರನ್ನು ಫಿಕ್ಸ್ ಮಾಡಲು ಹೊರಟಿದ್ದಾರೆ. ಯಾರನ್ನೋ ಫಿಕ್ಸ್ ಮಾಡಲು ಹೋದರೆ ನಾವು ಸುಮ್ಮನಿರಲು ಆಗುವುದಿಲ್ಲ. ಪೊಲೀಸರ ಮೇಲೆ ರಾಜಕೀಯ ಒತ್ತಡ ಹಾಕಿ ಕೆಲವರನ್ನು ಬಂಧಿಸಲಾಗುತ್ತಿದೆ. ಈ ಘಟನೆಯಲ್ಲಿ ಪೊಲೀಸರ ಮೇಲೆ ಒತ್ತಡ ಹಾಕದೇ ಕೆಲಸ ಮಾಡಲು ಬಿಡಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ, ಅವರ ಕೆಲಸ ಮಾಡಲಿ. ಮೃತಪಟ್ಟ ವ್ಯಕ್ತಿ ಮುಸ್ಲಿಂ ಎಂಬುದು 2 ದಿನಗಳ ನಂತರವೇ ಗೊತ್ತಾಗಿದ್ದು, ಮುಸ್ಲಿಂ ಅಂತಾ ಕೊಂದರು ಎನ್ನುವುದು ವೈಷಮ್ಯ ಬಿತ್ತುವ ಕೆಲಸ ಎಂದರು

  • ಒಂದು ವರ್ಷದ ಮಗುವಿನ ಎದುರೇ ಜೋಲಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

    ಒಂದು ವರ್ಷದ ಮಗುವಿನ ಎದುರೇ ಜೋಲಿಗೆ ನೇಣು ಬಿಗಿದುಕೊಂಡು ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಒಂದು ವರ್ಷದ ಮಗುವಿನ ಎದುರೇ ಮಹಿಳೆಯೊಬ್ಬಳು ಜೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಚಿಕ್ಕಬಳ್ಳಾಪುರ (Chikkaballapura) ನಗರದ ಸಿಎಂಸಿ ಬಡಾವಣೆಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಝಾನ್ಸಿ (23) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಈಶ್ವರ್, ಕ್ರೈನ್ ಅಪರೇಟರ್ ಆಗಿದ್ದು, ಮನೆಗೆ ಊಟಕ್ಕೆ ಬಂದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ತಾಯಿಯ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರೆ, ಮಗು ತಾಯಿಯ ಕಾಲುಗಳ ಬಳಿ ಮಲಗಿತ್ತಂತೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.