Tag: police

  • ರಾಜಹಂಸ ಬಸ್ ಪಲ್ಟಿ- ಇಬ್ಬರು ಪ್ರಯಾಣಿಕರ ಕೈ ತುಂಡು

    ಮೈಸೂರು: ರಾಜಹಂಸ ಬಸ್ ಪಲ್ಟಿಯಾಗಿ ಇಬ್ಬರು ಪ್ರಯಾಣಿಕರ ಕೈಗಳು ತುಂಡಾಗಿರುವ ಘಟನೆ ಜಿಲ್ಲೆಯ ನಂಜನಗೂಡಿನ ಗೋಳೂರು ಕ್ರಾಸ್ ಬಳಿ ನಡೆದಿದೆ

    ಇಂದು ಬೆಳಗಿನ ಜಾವ 4 ಗಂಟೆ ವೇಳೆಯಲ್ಲಿ ಈ ಅವಘಢ ಸಂಭವಿಸಿದೆ. ರಾಜಹಂಸ ಬಸ್ ಪಲ್ಟಿಯಾಗಿದ್ದರಿಂದ ಇಬ್ಬರ ಕೈ ತುಂಡಾಗಿದೆ. ನಾಲ್ವರ ಕೈ ಮೂಳೆ ಮುರಿತವಾಗಿದ್ದು, ಮತ್ತೊಬ್ಬರಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತದೆ.

    ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಕಡಬಗೆರೆ ಶೂಟೌಟ್ ಕೇಸ್: ಅಗ್ನಿ ಶ್ರೀಧರ್ ಮನೆಯಲ್ಲಿ ಪೊಲೀಸರ ಶೋಧ

    ಬೆಂಗಳೂರು: ಕಡಬಗೆರೆ ಶ್ರೀನಿವಾಸ್ ಹತ್ಯೆ ಸಂಚು ಕೇಸ್‍ನಲ್ಲಿ ರೌಡಿ ಶೀಟರ್ ರೋಹಿತ್ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ ಬರಹಗಾರ ಅಗ್ನಿ ಶ್ರೀಧರ್ ಮನೆಯ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿ ಶೋಧ ಆರಂಭಿಸಿದ್ದಾರೆ.

    ಕಡಬಗೆರೆ ಸೀನನ ಆಪ್ತ ರಮೇಶ್‍ಗೆ ರೌಡಿ ರೋಹಿತ್ ಬೆದರಿಕೆ ಹಾಕಿದ್ದ. ಶೂಟೌಟ್ ನಡೆಯುವುದಕ್ಕೂ 4 ದಿನ ಮೊದಲು ರಮೇಶ್ ಮತ್ತು ಕಡಬಗೆರೆ ಶ್ರೀನಿವಾಸ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

    ಶೂಟೌಟ್ ನಡೆದ ಬಳಿಕ ಅಗ್ನಿ ಶ್ರೀಧರ್ ಮನೆಯಲ್ಲಿ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಡಗಿರಬಹುದು ಎನ್ನುವ ಶಂಕೆಯ ಆಧಾರದಲ್ಲಿ ಪೊಲೀಸರು ಕೋರ್ಟ್‍ನಿಂದ ಸಂರ್ಚ್ ವಾರೆಂಟ್ ಪಡೆದು ಕುಮಾರಸ್ವಾಮಿ ಲೇಔಟ್ ನಲ್ಲಿರುವ ಮನೆಯಲ್ಲಿ ಶೋಧ ಆರಂಭಿಸಿದ್ದಾರೆ.

    ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿಗಳಾದ ಹರ್ಷ, ನಾರಾಯಣ್, ಶರಣಪ್ಪ, ಅನುಚೇತ್ ನೇತೃತ್ವದಲ್ಲಿ ಪೊಲೀಸರು ಇಂದು ಫೀಲ್ಡಿಗೆ ಇಳಿದು ಶೋಧ ಆರಂಭಿಸಿದ್ದಾರೆ.

    ಶ್ರೀಧರ್ ಮನೆಯಲ್ಲಿ ಶೋಧ ಯಾಕೆ?
    ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬಲಗೈ ಬಂಟ ಸತೀಶ್ ಬಂಧನವಾಗಿತ್ತು. ವಿಚಾರಣೆ ವೇಳೆ ಸತೀಶ್ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಗ್ನಿ ಶ್ರೀಧರ್ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

  • ಚಿಕ್ಕೋಡಿ: ಒಂದು ಮನೆ ಸೇರಿ ನಾಲ್ಕು ಅಂಗಡಿಗಳ ಸರಣಿ ಕಳ್ಳತನ

    – ಕಳ್ಳರನ್ನು ಬೆನ್ನಟ್ಟಿದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

    ಬೆಳಗಾವಿ: ಒಂದು ಮನೆ, ಮೆಡಿಕಲ್ ಸೇರಿ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

    ನಾಲ್ಕು ಜನರ ಕಳ್ಳರ ತಂಡ ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಅಂಗಡಿಗಳಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ. ಕಳ್ಳರನ್ನು ಕಂಡು ಹಿಡಿಯಲು ಹೋದ ಶ್ರೀಕಾಂತ್ ಹಳಜೋಳೆ ಎಂಬವರ ಮೇಲೆ ಕಳ್ಳರು ರಾಡ್ ದಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಶ್ರೀಕಾಂತ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಿ ಜನರ ಆತಂಕ ನಿವಾರಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

  • ಟೈರ್ ಬಸ್ಟ್: ಕಾರ್ ಪಲ್ಟಿಯಾಗಿ ಓರ್ವ ಸಾವು, ಆರು ಜನಕ್ಕೆ ಗಂಭೀರ ಗಾಯ

    ಬೆಳಗಾವಿ: ಟೈರ್ ಬಸ್ಟ್ ಆಗಿ ಕಾರ್ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿ 6 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಸ್ಥವನಿಧಿ ಘಾಟ್ ಬಳಿ ನಡೆದಿದೆ.

    ಏಳು ಜನ ಗಾಯಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಮಲ್‍ರಾಜ್ ರಾಮಲಿಂಗಂ (22) ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 5 ಜನರಿಗೆ ಗಂಭೀರ ಗಾಯವಾಗಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಪಾಂಡಿಚೇರಿಯಿಂದ ಮಹಾರಾಷ್ಟ್ರದ ವಿಟಾಗೆ 7 ಜನ ಸ್ನೇಹಿತರು ಮದುವೆಗೆ ತೆರಳತ್ತಿದ್ದಾಗ ಈ ಘಟನೆ ಸಂಭವಿಸಿದ್ದು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಗೆಳೆಯರೇ ಯುವಕನಿಗೆ ಕಂಠ ಪೂರ್ತಿ ಕುಡಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ರು!

    ಬೆಂಗಳೂರು: ಇಂದು ನಗರದ ಹೊರವಲಯದ ಬೊಮ್ಮನಹಳ್ಳಿ ಸಮೀಪದ ಬಂಡೆಪಾಳ್ಯದಲ್ಲಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗೆಳಯರೇ ಯುವಕನಿಗೆ ಕಂಠ ಪೂರ್ತಿ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಅರುಣ್ ಕೊಲೆಯಾದ ಯುವಕ. ಈತನ ಗೆಳಯರಾದ ಅಶೋಕ್ ಮತ್ತು ಆಕಾಶ್ ಇಬ್ಬರೂ ಸೇರಿ ಇಂದು ಬೆಳಗ್ಗೆ ಕೊಲೆ ಮಾಡಿದ್ದಾರೆ. ಕಳೆದ 15 ದಿನಗಳ ಹಿಂದೆ ಅಶೋಕ್ ಮತ್ತು ಅರುಣ್ ನಡುವೆ ಸಣ್ಣಪುಟ್ಟ ವಿಚಾರಕ್ಕಾಗಿ ಗಲಾಟೆ ನಡೆದಿತ್ತು. ಅಂದು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರೆ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದರು.

    ಅರುಣ್

    ಇಂದು ಅದೇ ವಿಷಯಕ್ಕಾಗಿ ಅಶೋಕ್ ಮತ್ತು ಅರುಣ್ ನಡುವೆ ಗಲಾಟೆ ನಡೆದಿದ್ದು, ಅಶೋಕ್ ಮತ್ತು ಆಕಾಶ್ ಜೊತೆ ಸೇರಿ ಅರುಣ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಅರುಣ್

    ಸದ್ಯಕ್ಕೆ ಮೃತ ದೇಹವನ್ನು ನಗರದ ಸೇಂಟ್ ಜಾನ್ ಆಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಕೊಂದಳಾ ಪತ್ನಿ…?

    ರಾಯಚೂರು: ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನೇ ಪತ್ನಿ ಕೊಂದಿರುವ ಘಟನೆ ನಡೆದಿದೆ. 43 ವರ್ಷದ ಬಸವನಗೌಡ ಕೊಲೆಯಾಗಿರುವ ವ್ಯಕ್ತಿ. ಪತ್ನಿ ದೇವಮ್ಮ ಗಂಡನನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಅಕ್ಕಪಕ್ಕದ ಮನೆಯ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ನಿನ್ನೆ ರಾತ್ರಿ ಗಂಡ ಹೆಂಡತಿ ನಡುವೆ ಜಗಳ ಜೋರಾಗಿ ನಡೆದಿದ್ದು ಪತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಕುತ್ತಿಗೆಗೆ ಹಗ್ಗ ಬಿಗಿದು ಬಸವನಗೌಡನನ್ನ ಕೊಲೆ ಮಾಡಲಾಗಿದೆ. ಆದ್ರೆ ಪತ್ನಿ ದೇವಮ್ಮ ಮಾತ್ರ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನನ್ನು ನಾನೇ ನೇಣಿನ ಕುಣಿಕೆಯಿಂದ ಕೆಳಗಿಳಿಸಿದ್ದೇನೆ ಎಂದು ಹೇಳಿದ್ದಾಳೆ.

    ಬಸವನಗೌಡನ ಕುತ್ತಿಗೆ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತುಗಳಿದ್ದು. ಅಸಹಜ ಸಾವು ಅಂತ ಪ್ರಕರಣ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ತುರ್ವಿಹಾಳ ಪೊಲೀಸರು ದೇವಮ್ಮನನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.

  • ಲಾರಿಗಳ ಮುಖಾಮುಖಿ ಡಿಕ್ಕಿ- ಓರ್ವ ಚಾಲಕ ಸಾವು, ಇನ್ನೋರ್ವ ಗಂಭೀರ

    ರಾಯಚೂರು: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಸ್ಕಿ ಪಟ್ಟಣದ ಮುದಬಾಳ ಕ್ರಾಸ್‍ನಲ್ಲಿ ನಡೆದಿದೆ.

    ಆಂಧ್ರ ಮೂಲದ ತ್ರಿಪಾಲ್ (28) ಮೃತ ಚಾಲಕ. ಮತ್ತೋರ್ವ ಚಾಲಕ ಲಿಂಗಸಗೂರು ತಾಲೂಕಿನ ಕೆಂಬಾವಿ ಗ್ರಾಮದ ದಶರಥ ಎಂಬವರು ಒಂದು ಕಾಲನ್ನು ಕಳೆದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

    ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡಿವೆ. ಲಾರಿಗಳು ಅಪ್ಪಚ್ಚಿಯಾಗಿದ್ದರಿಂದ ಪೊಲೀಸರು ಚಾಲಕನ ಮೃತದೇಹವನ್ನ ಜೆಸಿಬಿ ಮೂಲಕ ಹೊರತೆಗೆದಿದ್ದಾರೆ. ಎರಡೂ ಲಾರಿಗಳ ಕ್ಲೀನರ್‍ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದ 3 ತಿಂಗಳಿನಲ್ಲಿ ಆರೋಪಿ ಅರೆಸ್ಟ್

    ಬೆಂಗಳೂರು: ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ 2016ರ ನವೆಂಬರ್‍ನಲ್ಲಿ ಸಿ ರಿಪೋರ್ಟ್ ಸಲ್ಲಿಸಿದ್ದರು. ಸಿ ರಿಪೋರ್ಟ್ ಸಲ್ಲಿಸಿದ್ದ ಮೂರೇ ತಿಂಗಳ ಒಳಗಡೆ ಆರೋಪಿ ಮಧುಕರ್ ರೆಡ್ಡಿಯ ಬಂಧನವಾಗಿದೆ.

    ಆಂಧ್ರಪ್ರದೇಶ, ತಮಿಳುನಾಡು ಸೇರಿ ಹಲವೆಡೆ ಸಿಕ್ಕಿರುವ ಸಾಕ್ಷ್ಯಗಳನ್ನು ಆಧಾರಿಸಿ ಹುಡುಕಾಟ ನಡೆಸಿದ್ದೇವೆ ಆದರೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದರು.

    ಸಿ ರಿಪೋರ್ಟ್ ಸಲ್ಲಿಕೆಯಾಗಿದ್ದರೂ ವಿಶೇಷ ತಂಡಗಳು ಆರೋಪಿ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಿವೆ. ಸಣ್ಣ ಸುಳಿವು ಸಿಕ್ಕರೂ ನ್ಯಾಯಾಲಯದ ಅನುಮತಿ ಪಡೆದು ಮತ್ತೆ ಪ್ರಕರಣದ ತನಿಖೆ ಮುಂದುವರಿಸಲಾಗುವುದು ಪೊಲೀಸರು ತಿಳಿಸಿದ್ದರು.

    ಏನಿದು ಸಿ ರಿಪೋರ್ಟ್
    ಪ್ರಕರಣ ನಡೆದಿರುತ್ತದೆ. ಆದರೆ, ತನಿಖೆ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳಿಂದ ಆರೋಪಿ ಸಿಕ್ಕಿಲ್ಲ ಎನ್ನುವುದನ್ನು ನ್ಯಾಯಾಲಯಕ್ಕೆ ತಿಳಿಸಲು ಸಿ ರಿಪೋರ್ಟ್ ಸಲ್ಲಿಸಲಾಗುತ್ತದೆ.

    10 ಲಕ್ಷ ರೂ. ಬಹುಮಾನ:
    ರಾಜ್ಯ ಸರ್ಕಾರ ಆರಂಭದಲ್ಲಿ ಆರೋಪಿ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿತ್ತು. ಆದರೆ 2014ರ ನವೆಂಬರ್ 29 ರಂದು ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದರು. ಆರೋಪಿಯ ಪತ್ತೆಗಾಗಿ 500ಕ್ಕೂ ಹೆಚ್ಚು ಸಿಬ್ಬಂದಿ, 15 ವಿಶೇಷ ತಂಡಗಳು ಕೆಲಸ ಮಾಡಿತ್ತು.

    ಅಂದು ಏನಾಗಿತ್ತು?
    2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್  ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ 2013ರ ನ.19ರಂದು ಬೆಳಗ್ಗೆ 7.10ರ ಸುಮಾರಿಗೆ ಹಲ್ಲೆ ನಡೆಸಿದ್ದ.

    ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ. ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

  • ಎಟಿಎಂ ಹಲ್ಲೆಕೋರ ಸಿಕ್ಕಿ ಬಿದ್ದಿದ್ದು ಹೇಗೆ?

    ಬೆಂಗಳೂರು: ಎಟಿಎಂ ಹಲ್ಲೆಕೋರ ಕೊನೆಗೂ ಸಿಕ್ಕಿದ್ದಾನೆ. ಮೂರು ವರ್ಷಗಳ ಕಾಲ ಬೆಂಗಳೂರು ಪೊಲೀಸರ ತಲೆ ತಿಂದಿದ್ದ ಆರೋಪಿಯನ್ನು ಆಂಧ್ರದ ಮದನಪಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಮಧುಕರ್ ರೆಡ್ಡಿ ಬಂಧಿತ ಆರೋಪಿ. ಜ.31 ರ ಸಂಜೆ ಮಧುಕರ ರೆಡ್ಡಿಯನ್ನು ಮದನಪಲ್ಲಿಯ ನಿಮ್ಮನಪಲ್ಲಿ ಸಂಚಾರಿ ಪೊಲೀಸರು ಗುರುತಿಸಿದ್ದರು. ಎಟಿಎಂ ಸಿಸಿಟಿವಿ ಫೋಟೋ ಗುರುತಿನ ಆಧಾರದಲ್ಲಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಆರಂಭಿಸಿದ್ದರು.

    ವಿಚಾರಣೆಯ ಆರಂಭದಲ್ಲಿ ಅನುಮಾನಸ್ಪಾದವಾಗಿ ಮಾತನಾಡುತ್ತಿದ್ದ. ಮೂರು ದಿನಗಳಿಂದ ಸತತ ವಿಚಾರಣೆ ಬಳಿಕ ಬೆಂಗಳೂರಿನಲ್ಲಿ ಎಟಿಎಂ ಒಳಗಡೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಧರ್ಮಾವರಂನಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ಈತನ ಮೇಲೆ ಕಡಪ ಜೈಲಿನಿಂದ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಹಿಂದೂಪುರ ಮತ್ತು ಮದನಪಲ್ಲಿ ಮಧುಕರ್ ರೆಡ್ಡಿ ವಾಸವಾಗಿದ್ದ ವಿಚಾರ ಈಗ ತಿಳಿದು ಬಂದಿದೆ.

    ಆರಂಭದಲ್ಲಿ ಆರೋಪಿಯ ಮಾಹಿತಿಯನ್ನು ಪೊಲೀಸರು ಲೀಕ್ ಮಾಡಿರಲಿಲ್ಲ. ಕೊನೆಗೆ ಮಧುಕರ್ ರೆಡ್ಡಿಯೇ ಆರೋಪಿ ಎಂದ ಬಳಿಕ ಸ್ಪಷ್ಟನೆ ನೀಡಿದ್ದಾರೆ.

    ಅಂದು ಏನಾಗಿತ್ತು?: 2013ರ ನವೆಂಬರ್ 19ರಂದು ಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಮೇಲೆ ಅಪರಿಚಿತ ವ್ಯಕ್ತಿ ಎಲ್‍ಐಸಿ ಕಟ್ಟಡದಲ್ಲಿರುವ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ.

    ಹಲ್ಲೆ ನಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃತ್ಯ ನಡೆದು 3 ವರ್ಷ ಕಳೆದಿದ್ದರೂ ಆರೋಪಿ ಸಿಕ್ಕಿರಲಿಲ್ಲ. ಹಲ್ಲೆಯಿಂದ ಗಾಯಗೊಂಡಿದ್ದ ಜ್ಯೋತಿ ಉದಯ್ ಅವರು ಕೆಲವು ತಿಂಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖರಾಗಿ ಬ್ಯಾಂಕಿನಲ್ಲಿ ಕೆಲಸ ಮುಂದುವರಿಸಿದ್ದಾರೆ. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

    https://www.youtube.com/watch?v=RXXpBObVE1Q

  • ಪತಿ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡ ಪತ್ನಿ

    ರಾಯಚೂರು: ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಎಗ್ಗಸನಹಳ್ಳಿಯಲ್ಲಿ ನಡೆದಿದೆ. ಇದೇ ವೇಳೆ ರಕ್ಷಣೆಗೆ ಬಂದ ಪತಿ ಹಾಗೂ ಮಗ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.

    ಜಮಲಮ್ಮ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಜಮಲಮ್ಮ ಅವರಿಗೆ ಪತಿ ಮಾಜಿ ನಕ್ಸಲ್ ಜಿಂದಪ್ಪ ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಪ್ರತಿದಿನ ದೈಹಿಕ ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ಜಮಲಮ್ಮ ಪತಿಯ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಮಲಮ್ಮ ಅವರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದರು.

    ಬೆಂಕಿಯ ಜ್ವಾಲೆಯಿಂದ ಉರಿಯುತ್ತಿದ್ದ ಜಮಲಮ್ಮ ಪತಿ ಜಿಂದಪ್ಪರನ್ನು ಬಿಗಿಯಾಗಿ ಹಿಡಿದಿದ್ದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಪಕ್ಕದ ಮನೆಯಲ್ಲಿದ್ದ ಮಗ ಭಾಸ್ಕರ್ ಸ್ಥಳಕ್ಕೆ ಧಾವಿಸಿ ತಂದೆ ತಾಯಿಯನ್ನ ಉಳಿಸುವ ಪ್ರಯತ್ನದಲ್ಲಿ ಅವ್ರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜಮಲಮ್ಮ ಅವರಿಗೆ ಶೇಕಡ 90ರಷ್ಟು ಭಾಗ ಸುಟ್ಟಗಾಯಗಳಾಗಿದ್ದು, ಜಿಂದಪ್ಪನವರು ಸ್ಥಿತಿಯೂ ಗಂಭೀರವಾಗಿದೆ. ಮೂರು ಜನ ಗಾಯಾಳುಗಳನ್ನೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.