Tag: police

  • ಸಾಲಬಾಧೆ: ವಿಷಸೇವಿಸಿ ಮೂವರು ರೈತರ ಆತ್ಮಹತ್ಯೆ

    ಹಾವೇರಿ/ಹಾಸನ/ಮಂಡ್ಯ: ಸಾಲಭಾದೆ ತಾಳಲಾರದೆ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯದ ಹಾವೇರಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದಿವೆ.

    ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದಲ್ಲಿ ಈರನಗೌಡ ನೀಲನಗೌಡ (40) ಆತ್ಮಹತ್ಯೆಗೆ ಶರಣಾದ ರೈತ. ಈರನಗೌಡ ಅವರು ಆರು ಎಕರೆ ಜಮೀನು ಹೊಂದಿದ್ದು, ಬ್ಯಾಂಕ್ ಮತ್ತು ಕೈ ಸಾಲ ಸೇರಿದಂತೆ 20 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮತ್ತು ಹತ್ತಿ ಮಳೆ ಬಾರದೇ ಕೈ ಕೊಟ್ಟಿದ್ದರಿಂದ ಇಂದು ಬೆಳಗ್ಗೆ ತಮ್ಮ ಜಮೀನಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾಸನ-ರುದ್ರೇಗೌಡ

    ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿಯ ರೈತ ರುದ್ರೇಗೌಡ (58) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರೇಗೌಡ ಅವರು ಬ್ಯಾಂಕ್ ಮತ್ತು ಕೈ ಸಾಲ ಸೇರಿದಂತೆ 7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ ಜಮೀನು ಬಳಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ, ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಂಡ್ಯ-ಯುವ ರೈತ ಮಧುಕುಮಾರ್

    ಇನ್ನೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದ ಯುವ ರೈತ ಮಧುಕುಮಾರ್ (23) ಮಂಗಳವಾರ ರಾತ್ರಿ ವಿಷ ಸೇವಿಸಿದದ್ರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮಧುಕುಮಾರ್ ಒಂದೂವರೆ ಎಕರೆ ಭೂಮಿಯಲ್ಲಿ ಭತ್ತ ಬೆಳದಿದ್ದರು. ಇತ್ತೀಚಿಗೆ ಜಮೀನಿನಲ್ಲಿ ಕೊರಸಿದ್ದ ಬೋರವೆಲ್‍ನಲ್ಲಿ ನೀರು ಬಂದಿರಲಿಲ್ಲ. ಮಧುಕರ್ ಬೇಸಾಯಕ್ಕೆಂದು ಎರಡೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇನ್ನು ಮುಂದೆ ರೌಡಿಗಳ ಆಕ್ರಮ ಆಸ್ತಿಯನ್ನು ಕಲೆ ಹಾಕಲಿದ್ದಾರೆ ಪೊಲೀಸರು

    ಬೆಂಗಳೂರು: ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ ಆಸ್ತಿಗಳನ್ನು ಕಲೆ ಹಾಕಲಾಗುವುದು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಬಾಳ್ಕರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ಸ್ಥಳೀಯ ಠಾಣೆಗಳಿಗೆ ದೂರು ನೀಡಿ, ಇಲ್ಲವಾದಲ್ಲಿ ನಮ್ಮ ಬಳಿ ಬನ್ನಿ ಎಂದು ಅವರು ಹೇಳಿದರು.

    ಬೆಂಗಳೂರಿನಲ್ಲಿ ಅಂಡರ್ ವರ್ಲ್ಡ್ ಮಾಫಿಯಾ, ರಿಯಲ್ ಎಸ್ಟೇಟ್, ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ಗುಂಪಿನಲ್ಲಿದ್ದರೆ ಮಾತ್ರ ಅವರು ರೌಡಿಗಳು, ಒಬ್ಬರೆ ಇದ್ದರೆ ಇವರು ಪುಕ್ಕಲರು. ಭೂಮಾಫಿಯಾ, ಗಾರ್ಬೆಜ್ ಮಾಫಿಯಾ, ಸಂಬಂಧ ವಿಲ್ಲದ ವಿಚಾರಗಳಿಗೆ ತಲೆಹಾಕುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಟಾಟಾ ರಮೇಶ ನೀಡಿದ ದೂರಿನನ್ವಯ ಮಂಗಳವಾರ ಅಗ್ನಿ ಶ್ರೀಧರ್ ನಿವಾಸದ ಮೇಲೆ 150 ಕೂ ಹೆಚ್ಚು ಅಧಿಕಾರಿ ಹಾಗು ಸಿಬ್ಬಂದಿಯಿಂದ ದಾಳಿ ನಡೆಸಿದ್ದೆವು. ದಾಳಿ ನಡೆಸಿದ್ದ ಸಂದರ್ಭದಲ್ಲಿ ಅಕ್ರಮ ಶಸ್ತ್ರಸ್ತ್ರಗಳು ಪತ್ತೆಯಾಗಿವೆ. ಶ್ರೀಧರ್‍ಗೆ ಲಘು ಹೃದಯಘಾತವಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ನಡೆಸಲಾಗ್ತಿದೆ.

    ಏಳು ಮಂದಿ ಆರೋಪಿಗಳ ಮೇಲೆ ಕುಮಾರಸ್ವಾಮಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೋಹಿತ್ ಅಲಿಯಾಸ್ ಒಂಟೆ ಮತ್ತು ಸೈಲೆಂಟ್ ಸುನಿಲನ್ನು ಟಾಟಾ ರಮೇಶ್ ಕೊಲೆ ಬೆದರಿಕೆ ಮೇಲೆ ವಿಚಾರಣೆ ನಡೆಸಲಾಗ್ತಿದೆ. ಕಬಡಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವರು ಶಾಮೀಲಾಗಿರುವ ಶಂಕೆ ಇದ್ದು ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

  • ಯುವತಿ ಕಣ್ಣೆದುರೇ ಹೊಟ್ಟೆಗೆ ಚಾಕು ಚುಚ್ಚಿಕೊಂಡ ಯುವಕ

    ಮಂಡ್ಯ: ಯುವತಿಯೊಬ್ಬಳು ತನ್ನ ಪ್ರೀತಿಯನ್ನ ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಎದುರೇ ಭಗ್ನ ಪ್ರೇಮಿ ತನ್ನ ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.

    ಹಾಸನ ಮೂಲದ 29 ವರ್ಷದ ಯುವಕ ಉಮೇಶ್ ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ. ಉಮೇಶನಿಗೆ ಯುವತಿ ಸಂಬಂಧಿಕಳೇ ಆಗಿದ್ದು ಹಲವು ವರ್ಷಗಳಿಂದ ಆಕೆಯನ್ನ ಪ್ರೀತಿ ಮಾಡುತ್ತಿದ್ದ. ಆದ್ರೆ ಯುವತಿ ಉಮೇಶನ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಮಂಗಳವಾರ ರಾತ್ರಿ ಉಮೇಶ್ ಯುವತಿ ವಾಸವಿದ್ದ ರೂಮ್ ಬಳಿ ಬಂದಿದ್ದಾನೆ. ನನ್ನನ್ನು ಪ್ರೀತಿಸು, ಇಲ್ಲದಿದ್ರೆ ನಿನ್ನ ಕಣ್ಣೆದುರೇ ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

    ಯುವತಿ ಉಮೇಶನ ಮಾತಿಗೆ ಕರಗದಿದ್ದಾಗ, ಯುವಕ ಕೈಯಲ್ಲಿದ್ದ ಚಾಕುವಿನಿಂದ ಹೊಟ್ಟೆಗೆ ಚುಚ್ಚಿಕೊಂಡಿದ್ದಾನೆ. ಇದನ್ನ ಗಮನಿಸಿದ ಸ್ಥಳೀಯರು ತಕ್ಷಣ ಉಮೇಶನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಅಕ್ರಮ ಸಿಎಚ್ ಪೌಡರ್ ದಂಧೆ: ರಾಯಚೂರಿನಲ್ಲಿ ಸೇಂದಿಗೆ ದಾಸರಾದ ಚಿಕ್ಕಮಕ್ಕಳು

    ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆಗೆ ಈಗ ಅಪ್ರಾಪ್ತರು ಬಲಿಯಾಗುತ್ತಿದ್ದಾರೆ. ಎಗ್ಗಿಲ್ಲದೆ ರೈಲ್ವೆ ನಿಲ್ದಾಣದಲ್ಲೇ ಬಾಲಕರು ಕಲಬೆರಿಕೆ ಸೇಂದಿಯನ್ನ ಕುಡಿದು ತೂರಾಡುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಮಜ್ಜಿಗೆಯ ಹಾಗೇ ಕಾಣೋ ಕಲಬೆರಿಕೆ ಸಿಎಚ್ ಪೌಡರ್ ಸೇಂದಿ ಕ್ಲೋರಲ್ ಹೈಡ್ರೇಟ್ ರಾಸಾಯನಿಕದಿಂದ ತಯಾರಾಗೋ ಸ್ಲೋ ಪಾಯಿಸನ್. ಆಂಧ್ರ, ತೆಲಂಗಾಣದಲ್ಲಿ ಸಿಗುವ ಸೇಂದಿಯಲ್ಲಿ ಸಿಎಚ್ ಪೌಡರ್ ಬೆರಿಸಿ ಮಾರಾಟ ಮಾಡಲಾಗುತ್ತಿದೆ. ಇದನ್ನ ಕುಡಿಯಲು ರಾಯಚೂರು, ಯಾದಗಿರಿ ಜಿಲ್ಲೆಯಿಂದಲೂ ಚಿಕ್ಕಮಕ್ಕಳು, ಯುವಕರು ತೆಲಂಗಾಣದ ಕೃಷ್ಣಾ ಗ್ರಾಮಕ್ಕೆ ತೆರಳುತ್ತಾರೆ. ಕಂಠಪೂರ್ತಿ ಕುಡಿದು ಬಾಟಲ್‍ಗಳಲ್ಲಿ ಸೇಂದಿಯನ್ನ ತರುತ್ತಿದ್ದಾರೆ. ಅಕ್ರಮ ದಂಧೆಗೆ ಮಕ್ಕಳು, ವಯೋವೃದ್ಧರನ್ನ ಬಳಸಿಕೊಳ್ಳುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಈ ಹಿಂದೆಯೇ ವರದಿ ಮಾಡಿತ್ತು. ಆದ್ರೆ ಈಗ ಚಿಕ್ಕ ಮಕ್ಕಳೇ ಸೇಂದಿಗೆ ದಾಸರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿದರೂ ಕೇಳುವವರಿಲ್ಲ.

    ರಾಜ್ಯದಲ್ಲಿ ಈಚಲು ಮರಗಳಿಂದ ಇಳಿಸುವ ಸೇಂದಿ ಮಾರಾಟ ನಿಷೇಧವಾದಾಗಿನಿಂದ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆ ಜೋರಾಗಿದೆ. ಇಷ್ಟು ದಿನ ಕೂಲಿ ಕಾರ್ಮಿಕರು, ದುಡಿದು ದಣಿವ ಬಡವರ್ಗದ ಜನ, ಸ್ಲಂ ನಿವಾಸಿಗಳು ಇದನ್ನ ಕುಡಿಯುತ್ತಿದ್ದರು. ಈಗ ಚಿಕ್ಕ ಚಿಕ್ಕ ಮಕ್ಕಳು ಸಹ ರಾಜಾರೋಷವಾಗಿ ರೈಲು ನಿಲ್ದಾಣದಲ್ಲೇ ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು ಒಂದು ಸಾವಿರ ಜನರನ್ನ ಬಲಿ ತೆಗೆದುಕೊಂಡಿರುವ ಸೇಂದಿ ಪೊಲೀಸ್ ಹಾಗೂ ರೈಲ್ವೆ ಇಲಾಖೆ ನಿರ್ಲಕ್ಷ್ಯದಿಂದ ಈಗ ಮಕ್ಕಳನ್ನೂ ಬಲಿತೆಗೆದುಕೊಳ್ಳಲು ಮುಂದಾಗಿದೆ.

    ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದ್ರೆ ಸಿಎಚ್ ಪೌಡರ್ ಸಾಗಣೆ, ಮಾರಾಟ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಆಗಾಗ ಪೊಲೀಸರು ದಾಳಿ ನಡೆಸಿದಾಗ ಸುಮ್ಮನಾಗುವ ದಂಧೆಕೋರರು ಪುನಃ ದಂಧೆಗಿಳಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸಿಎಚ್ ಪೌಡರ್ ದಂಧೆ ತನ್ನ ವ್ಯಾಪ್ತಿಯನ್ನ ವಿಸ್ತರಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಮಾತ್ರ ಯಾವ ಗಂಭೀರ ಕ್ರಮಗಳಿಗೂ ಮುಂದಾಗುತ್ತಿಲ್ಲ. ಈಗಲಾದ್ರೂ ಚಿಕ್ಕ ಮಕ್ಕಳ ಭವಿಷ್ಯವನ್ನ ಕಾಪಾಡಲು ಸರ್ಕಾರ ಮುಂದಾಗಬೇಕಿದೆ. ಅಕ್ರಮ ದಂಧೆಗೆ ಅಂತ್ಯ ಕಾಣಿಸಬೇಕಿದೆ.

     

  • ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ಹೇಗಾಯ್ತು? ಏನೇನು ಸಿಕ್ಕಿದೆ?

    ಬೆಂಗಳೂರು: ಕಾಂಗ್ರೆಸ್ ಮುಖಂಡ, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವತ್ತು ಬೆಂಗಳೂರಿನ ಅಂಡರ್ ವರ್ಲ್ಡ್ ಗಢಗಢ ನಡುಗಿದೆ.

    ಈಗಾಗಲೇ ಪೊಲೀಸರ ವಶದಲ್ಲಿರುವ ಬಿಜೆಪಿ ಶಾಸಕರ ಬಲಗೈ ಬಂಟ ಸತೀಶ್ ನೀಡಿದ ಮಾಹಿತಿ ಮೇರೆಗೆ ಇವತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಇಸ್ರೋ ಲೇಔಟ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ

    ಐವರು ಡಿಸಿಪಿಗಳ ತಂಡ ದಾಳಿ ನಡೆಸಿ ರೌಡಿ ಒಂಟೆ ರೋಹಿತ್, ಸೈಲೆಂಟ್ ಸುನೀಲ ಸೇರಿದಂತೆ ಕೆಲ ಆರೋಪಿಗಳನ್ನು ಹುಡುಕಾಡಿದೆ. ಪೊಲೀಸ್ ದಾಳಿ ವೇಳೆ ಅಗ್ನಿ ಶ್ರೀಧರ್ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತವಾಗಿದ್ದು ಆಂಬುಲೆನ್ಸ್‍ನಲ್ಲೇ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಚ್ಚನ್ ಸೇರಿದಂತೆ ಪೊಲೀಸರು 7 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.

    ದಾಳಿ ಹೇಗಾಯ್ತು?
    ಟಾಟಾ ರಮೇಶ್ ಹಾಗೂ ಕಡಬಗೆರೆ ಶ್ರೀನಿವಾಸ್‍ಗೆ ಒಂಟೆ ರೋಹಿತ್, ಸೈಲೆಂಟ್ ಸುನೀಲ ಬೆದರಿಕೆ ಹಾಕಿದ್ದರು. ಇವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಬೆನ್ನತ್ತಿದ್ದಾಗ ಇಬ್ಬರು ಪತ್ರಕರ್ತ ಅಗ್ನಿ ಶ್ರೀಧರ್ ಮನೆಯಲ್ಲಿದ್ದಾರೆ ಎನ್ನುವ ಶಂಕೆ ಆಧಾರದಲ್ಲಿ ದಾಳಿ ನಡೆಸಲಾಯಿತು.

    ತಕ್ಷಣ ಸರ್ಚ್ ವಾರೆಂಟ್ ಪಡೆದು ಐವರು ಡಿಸಿಪಿಗಳ ತಂಡದಿಂದ ಏಕಕಾಲಕ್ಕೆ ದಾಳಿ ನಡೆಯುತ್ತದೆ. ಸರ್ಚ್ ವಾರೆಂಟ್ ಇಲ್ಲದ ಕಾರಣ 10 ನಿಮಿಷ ಗೇಟ್ ಮುಂದೆ ಪೊಲೀಸರನ್ನು ಅಗ್ನಿ ಶ್ರೀಧರ್ ನಿಲ್ಲಿಸುತ್ತಾರೆ. ಈ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿದ್ದ 10ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.

    ದಾಳಿ ವೇಳೆ ಮನೆಯಲ್ಲಿ ಲೈಸೆನ್ಸ್ ಇಲ್ಲದ ಗನ್, ಮಾರಕಾಸ್ತ್ರಗಳು ಹಾಗೂ 70 ವಿದೇಶಿ ಮದ್ಯದ ಬಾಟಲ್‍ಗಳು, ಗಾಂಜಾ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಈ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಅಗ್ನಿ ಶ್ರೀಧರ್ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಅಗ್ನಿ ಶ್ರೀಧರ್ ಆಪ್ತ, ಭೂಗತಪಾತಕಿ ಚೋಟಾ ರಾಜನ್ ಸಹಚರನಾಗಿದ್ದ ಅಮಾನ್ ಅಲಿಯಾಸ್ ಸೈಯದ್ ಅಮಾನುಲ್ಲಾ ಬಚ್ಚನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್ ನೋಡಲು ಬಂದ ವೇಳೆ ರಾತ್ರಿ 8.30ರ ವೇಳೆ ಸೈಲೆಂಟ್ ಸುನೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸೈಲೆಂಟ್ ಸುನೀಲನ ಗಾಯತ್ರಿನಗರ, ಪ್ರಕಾಶ್ ನಗರ, ಕುಮಾರಸ್ವಾಮಿ ಲೇಔಟ್‍ನ ಮನೆಗಳ ಮೇಲೆ ಪೊಲೀಸರು ಶೋಧ ನಡೆಸಿದ್ದರು.

  • ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ರೂ ಗಾಯಾಳು ದಂಪತಿಯನ್ನ ದಾರಿಯಲ್ಲೇ ಬಿಟ್ಟು ಹೋದ ಪೊಲೀಸರು

    – ಮಾನವೀಯತೆ ಮರೆತ ಪಣಂಬೂರು ಪೊಲೀಸರು

    ಮಂಗಳೂರು: ಎರಡು ಕುಟುಂಬಗಳ ಜಗಳದಲ್ಲಿ ತೀವ್ರ ಹಲ್ಲೆಗೊಳಗಾದ ದಂಪತಿಯನ್ನ ಪೊಲೀಸರು ಆಸ್ಪತ್ರೆಗೆ ಒಯ್ಯುವ ಬದಲು ನಡು ರಸ್ತೆಯಲ್ಲಿ ಬಿಟ್ಟು ಹೋದ ಘಟನೆ ಮಂಗಳೂರಿನ ಬೆಂಗ್ರೆ ಎಂಬಲ್ಲಿ ನಡೆದಿದೆ.

    ಮೆಹಮೂದ್ ಮತ್ತು ಅವರ ಪತ್ನಿ ಫಮೀನಾ ಎಂಬವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿತ್ತು. ಈ ಬಗ್ಗೆ ಸುದ್ದಿ ತಿಳಿದ ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮನೆಯಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಒಯ್ಯುವುದಾಗಿ ಹೇಳಿ ಜೀಪಿನಲ್ಲಿ ಕರೆದೊಯ್ದಿದ್ದರು. ಆದರೆ ದಾರಿ ಮಧ್ಯೆ ಕುಳೂರು ಎಂಬಲ್ಲಿ ಪೊಲೀಸರು ಗಾಯಾಳು ದಂಪತಿ ಮತ್ತು ಮಗುವನ್ನು ಜೀಪಿನಿಂದ ಇಳಿಸಿ ಹೋಗಿದ್ದರು.

    ವಿಷಯ ತಿಳಿದ ಡಿವೈಎಫ್‍ಐ ಕಾರ್ಯಕರ್ತರು ತೆರಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. 20 ನಿಮಿಷ ಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರೂ ಪೊಲೀಸರು ಆಗಮಿಸಿರಲಿಲ್ಲ. ಬಳಿಕ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಣಂಬೂರು ಪೊಲೀಸರ ಅಮಾನವೀಯತೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ರಾಯಚೂರು: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವು

    ರಾಯಚೂರು: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಮರಸ್ ಗ್ರಾಮದಲ್ಲಿ ಇಂದು ನಡೆದಿದೆ.

    ಯರಮರಸ್ ಗ್ರಾಮದ 30 ವರ್ಷದ ರಮೇಶ್ ಸಾವಿಗಿಡಾದ ವ್ಯಕ್ತಿ. ರಸ್ತೆ ಬದಿ ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ತಮಿಳುನಾಡು ಮೂಲದ ಲಾರಿ ಚಾಲಕ ಮುರುಗನ್ ನಿರ್ಲಕ್ಷ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ರಾಯಚೂರು- ಹೈದ್ರಾಬಾದ್ ಮುಖ್ಯ ರಸ್ತೆ ಗ್ರಾಮದಲ್ಲಿ ಹಾದು ಹೋಗುವುದರಿಂದ ಲಾರಿ ಸೇರಿ ದೊಡ್ಡ ವಾಹನಗಳು ವೇಗವಾಗಿ ಚಲಿಸುವುದೇ ಇಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಚಾಲಕ ಮುರುಗನ್ ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಮನೆಯಲ್ಲಿ ಪೊಲೀಸರ ಶೋಧ: ಅಗ್ನಿ ಶ್ರೀಧರ್‍ಗೆ ಲಘು ಹೃದಯಾಘಾತ

    ಬೆಂಗಳೂರು: ಬರಹಗಾರ ಅಗ್ನಿ ಶ್ರೀಧರ್‍ಗೆ ಲಘು ಹೃದಯಾಘಾತವಾಗಿದ್ದು, ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಡಬಗೆರೆ ಶ್ರೀನಿವಾಸ್ ಹತ್ಯೆ ಸಂಚು ಕೇಸ್‍ನಲ್ಲಿ ರೌಡಿ ಶೀಟರ್ ರೋಹಿತ್ ಕೈವಾಡದ ಶಂಕೆ ಇರುವ ಹಿನ್ನೆಲೆಯಲ್ಲಿ ಇಸ್ರೋ ಲೇಔಟ್‍ನಲ್ಲಿರುವ ಅಗ್ನಿ ಶ್ರೀಧರ್ ಮನೆಯ ಮೇಲೆ ಮಂಗಳವಾರ ಬೆಳಗ್ಗೆ ಪೊಲೀಸರು ದಾಳಿ ನಡೆಸಿ ಶೋಧ ಆರಂಭಿಸಿದ್ದರು.

    ಬೆಳಗ್ಗೆಯಿಂದ ಪೊಲೀಸರ ವಿಚಾರಣೆ ಉತ್ತರಿಸುತ್ತಿದ್ದ ಅಗ್ನಿ ಶ್ರೀಧರ್‍ಗೆ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತಕ್ಕೆ ತುತ್ತಾದರು. ಕೂಡಲೇ ಅವರನ್ನು ಅಂಬುಲೆನ್ಸ್ ನಲ್ಲಿ ಸಮೀಪದಲ್ಲಿದ್ದ ಸಾಗರ್ ಆಸ್ಪತ್ರೆಗೆ ದಾಖಲಿಸಲಾಯಿತು.

    ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬಲಗೈ ಬಂಟ ಸತೀಶ್ ಬಂಧನವಾಗಿತ್ತು. ವಿಚಾರಣೆ ವೇಳೆ ಸತೀಶ್ ರೋಹಿತ್ ಮತ್ತು ಸೈಲೆಂಟ್ ಸುನೀಲ್ ಅಗ್ನಿ ಶ್ರೀಧರ್ ಮನೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಕೋರ್ಟ್‍ನಿಂದ ಸರ್ಚ್ ವಾರೆಂಟ್ ಪಡೆದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಸಿಪಿಗಳಾದ ಹರ್ಷ, ನಾರಾಯಣ್, ಶರಣಪ್ಪ, ಅನುಚೇತ್ ನೇತೃತ್ವದಲ್ಲಿ ಪೊಲೀಸರು ಇಂದು ಫೀಲ್ಡಿಗೆ ಇಳಿದು ಶೋಧ ಆರಂಭಿಸಿದ್ದರು.

  • ಬಾಗಲಕೋಟೆಯಲ್ಲಿ ಕಳ್ಳ ಸ್ವಾಮಿಜಿಗಳಿಗೆ ಬಿತ್ತು ಚಪ್ಪಲಿ ಏಟು

    ಬಾಗಲಕೋಟೆ: ಸ್ವಾಮೀಜಿಗಳ ವೇಷ ಧರಿಸಿ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ನಕಲಿ ಸ್ವಾಮೀಜಿಗಳಿಗೆ ಗ್ರಾಮಸ್ಥರು ಚಪ್ಪಲಿ ಸೇವೆ ಮಾಡಿ ಪಾಠ ಕಲಿಸಿದ ಘಟನೆ ಬಾಗಲಕೋಟೆ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

    ಹಾಸನ ಜಿಲ್ಲೆಯ ಅರಸಿಕೇರಿ ಮೂಲದ ಶ್ರೀನಿವಾಸ್ ಮತ್ತು ರವಿ, ಎಂಬುವರೇ ನಕಲಿ ಸ್ವಾಮಿಗಳು. ಇವರು ಕಳ್ಳತನ ಮಾಡಿದ್ದಲ್ಲದೆ, ಗ್ರಾಮದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಹಾಗೂ ಮಹಿಳೆಯರು ನಕಲಿ ಸ್ವಾಮಿಗಳಿಗೆ ಚಪ್ಪಲಿಯಿಂದ ಸಖತ್ ಥಳಿಸಿದ್ದಾರೆ.

    ನಕಲಿ ಸ್ವಾಮಿಜಿಗಳಿಗೆ ಧರ್ಮದೇಟು ನೀಡಿದ ನಂತರ ಗ್ರಾಮಸ್ಥರು ಶ್ರೀನಿವಾಸ್ ಮತ್ತು ರವಿ ಇಬ್ಬರನ್ನು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ.

    https://www.youtube.com/watch?v=KcsCLb9QCd8

     

     

  • ಮಂಡ್ಯದಲ್ಲಿ ರೌಡಿ ಶೀಟರ್ ಅಶೋಕ್ ಪೈ ಹತ್ಯೆಗೆ ಯತ್ನ

    ಮಂಡ್ಯ: ರೌಡಿ ಶೀಟರ್ ಅಶೋಕ್ ಪೈ ಮನೆಗೆ ನುಗ್ಗಿದ 20 ಯುವಕರ ತಂಡ ಕೊಲೆಗೆ ಯತ್ನ ನಡೆಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿ ಗ್ರಾಮದ ಇಂದು ಬೆಳಗಿನ ಜಾವ ನಡೆದಿದೆ.

    ರೌಡಿಗಳಾದ ಜಡೇಜಾ ರವಿ, ಚೀರನಹಳ್ಳಿ ಶಂಕರ, ಚೀರನಹಳ್ಳಿ ಶಿವರಾಂ ಸೇರಿದಂತೆ ಹಲವರ ಹತ್ಯೆಯಲ್ಲಿ ಅಶೋಕ್ ಪೈ ಹೆಸರು ಕೇಳಿ ಬಂದಿತ್ತು. ಆದರೆ ಅಶೋಕ್ ಪೈ ಇತ್ತೀಚಿಗಷ್ಟೇ ಎಲ್ಲ ಆರೋಪದಿಂದ ಮುಕ್ತನಾಗಿ ಬಿಡುಗಡೆಯಾಗಿದ್ದ. ಬಿಡುಗಡೆ ನಂತರ ತನ್ನ ಪತ್ನಿ, ಮಗಳೊಂದಿಗೆ ಮಾದರಹಳ್ಳಿಯಲ್ಲಿ ಕೆಲ ದಿನಗಳಿಂದ ವಾಸವಾಗಿದ್ದನು.

    ಅಶೋಕ್ ಪೈ ಮಲಗಿದ್ದ ವೇಳೆ ಸುಮಾರು 20-25 ಯುವಕರ ತಂಡ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಏಕಾಏಕಿ ದಾಳಿ ನಡೆಸಿದ್ದಾರೆ. ತಕ್ಷಣ ಎಚ್ಚೆತ್ತ ಅಶೋಕ್ ಪೈ ತನ್ನ ಮಗಳೊಂದಿಗೆ ಮನೆಯ ಅಟ್ಟವನ್ನ ಹತ್ತಿ ಸಿಕ್ಕ ಸಿಕ್ಕ ವಸ್ತುಗಳಿಂದ ಪ್ರತಿ ದಾಳಿ ನಡೆಸಿದ್ದಾನೆ. ಅದನ್ನೂ ಲೆಕ್ಕಿಸದೇ ಪೈ ಮೇಲೆ ದಾಳಿ ಮಾಡಲು ಮುಂದಾದಾಗ, ತಲೆಯಿಂದ ಮನೆಯ ಶೀಟ್ ಮುರಿದು ಸಹಾಯಕ್ಕೆ ಕೂಗಿಕೊಂಡಿದ್ದಾನೆ. ತಕ್ಷಣ ಅಕ್ಕಪಕ್ಕದ ಮನೆಯವರು ಅಶೋಕ್ ಪೈ ಸಹಾಯಕ್ಕೆ ಬಂದಾಗ ದುಷ್ಕರ್ಮಿಗಳು ಬಂದಷ್ಟೇ ವೇಗವಾಗಿ ಪರಾರಿಯಾಗಿದ್ದಾರೆ.

    ಸುಮಾರು ಅರ್ಧ ಗಂಟೆ ನಡೆದ ಕಾಳಗದಲ್ಲಿ ಅಶೋಕ್ ಪೈ ದೇಹಕ್ಕೆ ಸಣ್ಣ ಪುಟ್ಟ ಗಾಯಗಳಾವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸರು ಒಂದು ಮೊಬೈಲ್, ಲಾಂಗ್, ಖಾರದ ಪುಡಿ ವಶಪಡಿಸಿಕೊಂಡಿದ್ದಾರೆ. ಸದ್ಯ ಅಶೋಕ್ ಪೈಗೆ ರಕ್ಷಣೆ ನೀಡಿದ್ದಾರೆ. ದಾಳಿಯ ಹಿಂದಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.