Tag: police

  • ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

    ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

    ದಾವಣಗೆರೆ: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ ಮೂವರನ್ನು ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಮೂಲತಃ ಹಾಸನದ ಸುನೀಲ್ ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮೀಕಾಂತ್ ಬಂಧಿತರಾಗಿದ್ದಾರೆ. ಈ ಮೂವರು ನಗರದಲ್ಲಿ ಅಕ್ರಮವಾಗಿ ಹಣ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು. ಇದೇ ಮೂವರು ಎರಡು ದಿನಗಳ ಹಿಂದೆ ದಾವಣಗೆರೆಯ ಲಾಡ್ಜ್‍ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.

    ದಾವಣಗರೆರಯಿಂದ ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಚೆಕ್‍ಪೋಸ್ಟ್ ಬಳಿ ಪೊಲೀಸರು ವಾಹನ ಪರಿಶೀಲಿಸುವಾಗ ಹಳೇ ನೋಟು ಪತ್ತೆಯಾಗಿದೆ. ಬಂಧಿತರಿಂದ 500 ಮುಖಬೆಲೆಯ 50 ಸಾವಿರ ರೂಪಾಯಿ ಹಾಗೂ 1000 ಮುಖಬೆಲೆಯ 20.5 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಬೆಂಗ್ಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಮೊರೆತ – ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಮೇಲೆ ದಾಳಿ

    ಬೆಂಗ್ಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಮೊರೆತ – ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಮೇಲೆ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ರೌಡಿಶೀಟರ್ ನಾಗೇಂದ್ರ ಅಲಿಯಾಸ್ ನಾಮನ ಮೇಲೆ ಮಂಗಳವಾರ ರಾತ್ರಿ 9.15ರ ಸುಮಾರಿಗೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಕೇವಲ ಹದಿನೈದು ದಿನಗಳಲ್ಲೇ ನಾಲ್ಕನೇಯ ಪೊಲೀಸ್ ಫೈರಿಂಗ್ ಇದಾಗಿದೆ.

    ನಾಗೇಂದ್ರ ಅಲಿಯಾಸ್ ನಾಮ ಚಾಮರಾಜಪೇಟೆಯ ರೌಡಿಶೀಟರ್. ಸುಮಾರು ಹದಿನಾಲ್ಕಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಈ ಭಾಗಿಯಾಗಿದ್ದ. ಎರಡು ಬಾರಿ ವಾರಂಟ್ ಜಾರಿಯಾಗಿದ್ರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಡ್ತಾ ಇದ್ದ ನಾಗೇಂದ್ರ ಈಗ ಪೊಲೀಸ್ ತುಪಾಕಿಯಿಂದ ಸಿಡಿದ ಗುಂಡಿಗೆ ಆರ್.ಆರ್.ನಗರದ ಆಸ್ಪತ್ರೆ ಸೇರಿದ್ದಾನೆ. ಆತ್ಮರಕ್ಷಣೆಗಾಗಿ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಶಿವಸ್ವಾಮಿ ಸಿಡಿಸಿದ ಗುಂಡು ನಾಗೇಂದ್ರನ ಕಾಲಿಗೆ ತಗುಲಿದೆ.

    ರಾತ್ರಿ ಆಗಿದ್ದೇನು?: ನಾಗೇಂದ್ರನ ಇರುವಿಕೆಯ ನಿಖರ ಮಾಹಿತಿ ಮೇರೆಗೆ ಕೆಂಗೇರಿ ಪಕ್ಕದ ಸೊನ್ನೇನಹಳ್ಳಿ ಲಿಂಕ್ ರಸ್ತೆಯ ನಿರ್ಜನ ಪ್ರದೇಶವೊಂದಕ್ಕೆ ಕ್ರೈಂ ಪೇದೆ ನವೀನ್ ಜೊತೆ ದೌಡಾಯಿಸಿದ್ದ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಶಿವಸ್ವಾಮಿ ನಾಗೇಂದ್ರನನ್ನು ಅಟ್ಟಾಡಿಸಿದ್ರು. ಈ ವೇಳೆ ಮಚ್ಚಿನ ಸಹಿತ ನಿರ್ಜನ ಪ್ರದೇಶದಲ್ಲಿದ್ದ ನಾಗೇಂದ್ರ ಇನ್ಸ್ ಪೆಕ್ಟರ್ ಶಿವಸ್ವಾಮಿಯ ಮೇಲೆ ಹಲ್ಲೆಗೆ ಮುಂದಾಗಿದ್ದ. ಗಲಭೆ ವೇಳೆ ಶಿವಸ್ವಾಮಿ ಆತ್ಮರಕ್ಷಣೆಗಾಗಿ ನಾಗೇಂದ್ರನ ಮೇಲೆ ಫೈರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಗೇಂದ್ರನ ಮೇಲೆ ಚಾಮರಾಜಪೇಟೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು.

    ಸದ್ಯ ಗಾಯಗೊಂಡಿರುವ ಇನ್ಸ್ ಪೆಕ್ಟರ್ ಶಿವಸ್ವಾಮಿ, ಪೇದೆ ನವೀನ್, ಹಾಗೂ ರೌಡಿಶೀಟರ್ ನಾಗೇಂದ್ರ ಮೂವರೂ ಆರ್.ಆರ್.ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಕಳೆದ ಒಂದು ತಿಂಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ನಾಲ್ಕನೆಯ ಫೈರಿಂಗ್ ಇದಾಗಿದೆ. ಸೋಲದೇವನಹಳ್ಳಿಯಲ್ಲಿ ಕೊಮ್ಮಘಟ್ಟ ಮಂಜ, ರಾಜಗೋಪಾಲ ನಗರದಲ್ಲಿ ಪವನ್, ಹೆಚ್.ಎಲ್.ನಲ್ಲಿ ಶಿವರಾಮರೆಡ್ಡಿ ಮತ್ತು ಈಗ ನಾಗೇಂದ್ರನ ಮೇಲೆ ಫೈರಿಂಗ್ ನಡೆದಿದೆ.

     

  • ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಮಗನನ್ನೇ ಕೊಂದ ತಾಯಿ!

    ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಮಗನನ್ನೇ ಕೊಂದ ತಾಯಿ!

    – ತಾಯಿ, ಪ್ರಿಯಕರನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಚಿಕ್ಕೋಡಿ: ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ತಾಯಿ ಮತ್ತು ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

    ಕಿರಣ ಕೆಂಗೇರಿ(14) ಶವ ಇಂದು ಮಧ್ಯಾಹ್ನ ನೇಣು ಬಿಗಿದ ಸ್ಥಿತಿಯಲ್ಲಿ ಜಮೀನಿನಲ್ಲಿ ಪತ್ತೆಯಾಗಿತ್ತು. ಈತನ ಶವದ ಬಳಿ ತಾಯಿ ರೇಶ್ಮಾ ಕೆಂಗೇರಿ ಮತ್ತು ಪ್ರಿಯಕರ ದಿಲೀಪ್ ಜೋಗೆ ಇರುವುದನ್ನು ನೋಡಿದ ಗ್ರಾಮಸ್ಥರು ಇವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

    ಇವರಿಬ್ಬರು ನಾವು ಕಿರಣನನ್ನು ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

    ಕಳೆದ ಹಲವು ವರ್ಷಗಳಿಂದ ಇವರಿಬ್ಬರು ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ತಾಯಿ ರೇಷ್ಮಾ, ಪ್ರಿಯಕರ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಯಿ ಮತ್ತು ಪ್ರಿಯಕರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದೀಗ ಪೊಲೀಸ್ ಠಾಣೆಗೆ ರೇಷ್ಮಾಳ ಗಂಡ ಆಗಮಿಸಿದ್ದು ಪಿಎಸ್‍ಐ ಸಮೀರ್ ಮುಲ್ಲಾ ವಿಚಾರಣೆ ನಡೆಸುತ್ತಿದ್ದಾರೆ.

    https://www.youtube.com/watch?v=8rm2wE2TQDM

  • ಸಾಲಬಾಧೆ: ಆತ್ಮಹತ್ಯೆಗೆ ಯತ್ನಿಸಿದ ರೈತ ಚಿಕಿತ್ಸೆ ಫಲಿಸದೇ ಸಾವು

    ಸಾಲಬಾಧೆ: ಆತ್ಮಹತ್ಯೆಗೆ ಯತ್ನಿಸಿದ ರೈತ ಚಿಕಿತ್ಸೆ ಫಲಿಸದೇ ಸಾವು

    ಬಾಗಲಕೋಟೆ: ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಬೀಳಗಿ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಬಸಪ್ಪ ಬೂಸರೆಡ್ಡಿ ಸಾವನ್ನಪ್ಪಿದ ರೈತ. ಒಂದು ವಾರದ ಹಿಂದೆ ಬಸಪ್ಪ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರ ಅಸ್ವಸ್ಥಗೊಂಡ ಬಸಪ್ಪರನ್ನು ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ರೈತ ಬಸಪ್ಪ ಮೃತಪಟ್ಟಿದ್ದಾರೆ.

    ರೈತ ಬಸಪ್ಪ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಈ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸಿನಿಮೀಯ ಶೈಲಿಯಲ್ಲಿ ಪೊಲೀಸರನ್ನೇ ಕೊಲ್ಲಲು ಯತ್ನಿಸಿದ ಡಕಾಯಿತರು

    ಸಿನಿಮೀಯ ಶೈಲಿಯಲ್ಲಿ ಪೊಲೀಸರನ್ನೇ ಕೊಲ್ಲಲು ಯತ್ನಿಸಿದ ಡಕಾಯಿತರು

    ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ಪೊಲೀಸರ ಮೇಲೆಯೇ ಡಕಾಯಿತರು ದಾಳಿ ನಡೆಸಿ, ಹತ್ಯೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿ ತಡರಾತ್ರಿ ನಡೆದಿದೆ.

    ಬೆಂಗಳೂರಿನ ಮಹದೇವಪುರ ಪೊಲೀಸರು ಸಂಚರಿಸುತ್ತಿದ್ದ ಖಾಸಗಿ ಇನ್ನೋವಾ ಕಾರಿಗೆ ಹಿಂಬದಿಯಿಂದ ಡಕಾಯಿತರು ತಮ್ಮ ಮಾರುತಿ ಸಿಯಾಝ್ ಕಾರಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾರೆ.

    ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣವೊಂದರ ಸಂಬಂಧ ಬಾಗೇಪಲ್ಲಿ ಮೂಲದವರು ಎನ್ನಲಾದ ಗಿರೀಶ್ ಹಾಗೂ ಪ್ರಸಾದ್ ಬಂಧನಕ್ಕೆ ಪೊಲೀಸರು ಬೆಂಗಳೂರು ನಗರದಿಂದ ಬರುತ್ತಿದ್ದರು. ಪೊಲೀಸರು ಬರುವ ಮಾಹಿತಿ ತಿಳಿದು ಡಕಾಯಿತರ ಗ್ಯಾಂಗ್ ಪೊಲೀಸರಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ಘಟನೆಯಲ್ಲಿ ಇನ್ನೋವಾ ಕಾರು ಪಲ್ಟಿಯಾಗಿದ್ದು ಅದೃಷ್ಟವಶಾತ್ ಇನ್ನೋವಾ ಕಾರಿನಲ್ಲಿದ್ದ ಪೊಲೀಸರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಅಪಘಾತದ ನಂತರ ಡಕಾಯಿತರ ಕಾರು ಸ್ವಲ್ಪ ದೂರದಲ್ಲಿ ಕೆಟ್ಟು ನಿಂತಿದ್ದು, ಕಾರು ಬಿಟ್ಟು ಡಕಾಯಿತರು ಪರಾರಿಯಾಗಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಟ್ರೋಲ್ ಹೈಕ್ಳು ವಿರುದ್ಧ ಸೈಬರ್ ಕ್ರೈಂನಲ್ಲಿ ದೂರು

    ಟ್ರೋಲ್ ಹೈಕ್ಳು ವಿರುದ್ಧ ಸೈಬರ್ ಕ್ರೈಂನಲ್ಲಿ ದೂರು

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯವುದೇ ಸಾಮಾಜಿಕ ಜಾಲಾತಾಣಗಳ ಪೇಜ್‍ಗಳನ್ನು ತೆರೆದರೆ ಸಾಕು ಅಲ್ಲೊಂದು ಟ್ರಾಲ್ ಜನಪ್ರಿಯವಾಗಿರುತ್ತೆ. ಆದ್ರೆ ಆ ಟ್ರಾಲ್‍ನಿಂದ ಸಾಕಷ್ಟು ಮಹಿಳೆಯರ ಮಾನ ಹಾನಿಯಾಗಿದೆ ಅಂತ ಇವತ್ತು ಟ್ರೋಲ್ ಹೈಕ್ಳು ಪೇಜ್ ಮೇಲೆ ಸೈಬರ್ ಕ್ರೈಮ್‍ನಲ್ಲಿ ಮಹಿಳೆಯರು ದೂರು ದಾಖಲು ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಹೈಕ್ಳು ಎನ್ನುವ ಪೇಜ್ ತುಂಬ ಜನಪ್ರಿಯ ಆಗುತ್ತಿದೆ. ಆದರೆ ಇವರ ಟ್ರಾಲ್‍ಗಳಿಂದ ಇಂದಿನ ಯುವ ಪೀಳಿಗೆಯ ಮೇಲೆ ತುಂಬಾನೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಇಂದಿನ ಯುವ ಪೀಳಿಗೆಯು ಹಾಳಾಗುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಾಗಿ ಈ ಟ್ರಾಲ್ ಮಹಿಳೆಯರ ಮೇಲೆಯೇ ಕೇಂದ್ರ ಬಿಂದುವಾಗಿ ಅವರನ್ನು ಚಿತ್ರ ವಿಚಿತ್ರವಾಗಿ ಟ್ರಾಲ್ ಮಾಡುತ್ತಿರುವುದರಿಂದ ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಎಂದು ಸಮಾನ ಮನಸ್ಕ ಮಹಿಳೆಯರ ಗುಂಪೊಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದೆ.

    ದೂರು ನೀಡುವುದಕ್ಕೂ ಮುನ್ನ ಇವರು ಟ್ರೋಲ್ ಪೇಜ್ ಕ್ರಿಯೆಟ್ ಮಾಡಿದವರ ಹತ್ತಿರ ಚಾಟ್ ಮಾಡಿದ್ದಾರೆ. ಈ ರೀತಿ ಟ್ರೋಲ್ ಮಾಡುತ್ತಿರುವುದರಿದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯ ಟ್ರಾಲ್‍ಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಈ ಮಾತನ್ನು ಕೇಳದೇ ಅವರು ಇವರಿಗೆ ಟ್ರಾಲ್ ಮಾಡಿ ಬೈದಿದ್ದಾರೆ. ಈ ಕಾರಣಕ್ಕಾಗಿ ಇಂದು ಸೈಬರ್ ಪೋಲೀಸರಿಗೆ ದೂರು ನೀಡಿದ ಯುವತಿಯರು ಇವರ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಮನವಿ ಮಾಡಿದ್ದಾರೆ.

    “ಕನ್ನಡ ಪರ ಕೆಲಸಗಳನ್ನು ಪ್ರಚಾರ ಮಾಡುವುದಾಗಿ ಹೇಳಿದ ಟ್ರೋಲ್ ಹೈಕ್ಳು ಪೇಜ್ ಇತ್ತಿಚಿನ ದಿನಗಳಲ್ಲಿ ಮಹಿಳೆಯರನ್ನು ನಿಂದಿಸಿ ಟ್ರಾಲ್ ಮಾಡುತ್ತಿದ್ದಾರೆ. ಇವರ ಟ್ರಾಲ್‍ಗಳನ್ನು ಪ್ರಶ್ನಿಸಿ ಚಾಟ್ ಮಾಡಿದ್ದಕ್ಕೆ ನಮ್ಮ ಜೊತೆಯೇ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಮಹಿಳೆಯರ ದೇಹದ ಬಗ್ಗೆ ವಿಡಂಬನೆ ಮಾಡಿ ಫನ್ ಮಾಡೋದು ಸರಿಯಲ್ಲ. ಪ್ರಶ್ನೆ ಕೇಳಿದ್ದಕ್ಕೆ, ನೀವು ಈ ರೀತಿ ಉರ್ಕೊಂಡ್ರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನಮ್ಮ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಈ ಕಾರಣಕ್ಕಾಗಿ ನಾವು ಟ್ರಾಲ್‍ಗಳು ಮತ್ತು ಟ್ರಾಲ್ ಯುಆರ್‍ಎಲ್ ನೀಡಿದ್ದೇವೆ. ಪೊಲೀಸರು ಯುಆರ್‍ಎಲ್‍ಗಳನ್ನು ತೆಗೆದುಕೊಂಡು ಟ್ರೇಸ್ ಮಾಡುವುದಾಗಿ ಹೇಳಿದ್ದಾರೆ”
    – ಸ್ನೇಹ ಕಿರಣ್, ದೂರು ನೀಡಿದವರು

  • ಬೆಂಗಳೂರಿನ ಮಹಿಳಾ ಪೊಲೀಸ್ ಪೇದೆ ಮೇಲೆ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ರೇಪ್!

    ಬೆಂಗಳೂರಿನ ಮಹಿಳಾ ಪೊಲೀಸ್ ಪೇದೆ ಮೇಲೆ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ರೇಪ್!

    – ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್‍ನಿಂದ ಅತ್ಯಾಚಾರ

    ಬೆಂಗಳೂರು: ನಗದರಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಮಹಿಳಾ ಪೊಲೀಸ್ ಪೇದೆ ಮೇಲೆ ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್‍ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಇನ್ಸ್ ಪೆಕ್ಟರ್ ಹೇಮರಾಜ್ ಗುರ್ಜರ್ ತನ್ನ ಮೇಲೆ ಅತ್ಯಾಚಾರವೆಸಗಿರೋದಾಗಿ 29 ವರ್ಷದ ಮಹಿಳಾ ಸಿಐಎಸ್‍ಎಫ್ ಪೇದೆ ಆರೋಪಿಸಿದ್ದಾರೆ.

    ಏನಿದು ಆರೋಪ: ಮದುವೆಯಾಗೋದಾಗಿ ನಂಬಿಸಿ, ಪೋಷಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಯಲಹಂಕ ಉಪನಗರದ ನಿವಾಸಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಂತರ ಮದುವೆಯಾಗೋಕೆ ಹೇಮರಾಜ್ ನಿರಾಕರಿಸಿದ್ದು, ಮದುವೆಯಾಗುವಂತೆ ಮಹಿಳಾ ಪೊಲೀಸ್ ಪೇದೆ ಒತ್ತಾಯಿಸಿದ್ದಾರೆ. ಈ ವೇಳೆ ಆತ ತನಗೆ ಮೊದಲೆ ಮದುವೆಯಾಗಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. 2013 ರಲ್ಲೇ ಮದುವೆಯಾಗಿ ಎರಡು ಮಕ್ಕಳಿದ್ದು, ಹೆಂಡತಿ ಮಕ್ಕಳು ರಾಜಸ್ಥಾನದಲ್ಲಿ ವಾಸವಿರೋದಾಗಿ ಹೇಳಿದ್ದಾನೆ.

    ಹೇಮರಾಜ್ ವಿರುದ್ಧ ದೂರು ನೀಡೋದಾಗಿ ಮಹಿಳಾ ಪೇದೆ ಹೇಳಿದಾಗ, ರಾಜಸ್ಥಾನದಿಂದ ಬಂದ ಹೇಮರಾಜ್ ತಂದೆ ಸೃಜನ್ ಸಿಂಗ್ ಹಾಗೂ ಸಹೋದರ ನಿಹಾಲ ಸಿಂಗ್ ಮದುವೆಗೆ ನಿರಾಕರಿಸಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ಮಹಿಳಾ ಪೊಲೀಸ್ ಪೇದೆ ಮಾರ್ಚ್ 5 ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಆದರೆ ದೂರು ದಾಖಲಾಗಿ 9 ದಿನಗಳಾದ್ರೂ ಬಾಗಲೂರು ಪೊಲೀಸರು ಆರೋಪಿಯನ್ನ ಬಂಧಿಸಿಲ್ಲ. ಕನಿಷ್ಟ ಪಕ್ಷ ಪೊಲೀಸರು ಆತನನ್ನು ಕರೆದು ವಿಚಾರಣೆ ಕೂಡ ನಡೆಸಿಲ್ಲ. ಪೊಲೀಸರ ನಡೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟದೆ ಅಂತಾ ಮಹಿಳಾ ಪೊಲೀಸ್ ಪೇದೆ ಅಳಲು ತೋಡಿಕೊಂಡಿದ್ದಾರೆ.

  • ಸಿಲ್ಲಿ ಕಾರಣಕ್ಕೆ 3 ವರ್ಷದ ಮಗಳನ್ನ ಕೊಂದೇ ಬಿಟ್ಟ!

    ಸಿಲ್ಲಿ ಕಾರಣಕ್ಕೆ 3 ವರ್ಷದ ಮಗಳನ್ನ ಕೊಂದೇ ಬಿಟ್ಟ!

    ಹೈದರಾಬಾದ್: ಕುಡುಕ ತಂದೆಯೋರ್ವ ಮೂರು ವರ್ಷದ ಹೆಣ್ಣು ಮಗುವನ್ನು ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಒತ್ತಿ ಕೊಲೆ ಮಾಡಿರೋ ಘಟನೆ ಹೈದ್ರಾಬಾದ್‍ನಲ್ಲಿ ನಡೆದಿದೆ.

    ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡೋ ಸುರೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಸುರೇಶ್ ತನ್ನ ಪತ್ನಿ ಜ್ಯೋತಿಯೊಂದಿಗೆ ಜಗಳವಾಡಿದ್ದು, ಬಳಿಕ 3 ವರ್ಷದ ಮಗಳು ಕೀರ್ತಿಯನ್ನ ಕರದಿದ್ದಾನೆ. ಆದ್ರೆ ಕರೆದಾಗ ಮಗಳು ಹತ್ತಿರ ಬರಲಿಲ್ಲ ಎಂಬ ಕೋಪಕ್ಕೆ ಮಗುವನ್ನು ಹೊಡೆದು, ಗೋಡೆಗೆ ತಲೆಯನ್ನ ಹಿಡಿದು ಒತ್ತಿದ್ದಾನೆ. ಈ ವೇಳೆ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದ್ದು, ಜ್ಞಾನ ತಪ್ಪಿದೆ. ಬಳಿಕ ಸುರೇಶ್ ಮಗುವನ್ನು ಹತ್ತಿರದ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಆಗಲೇ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೀರ್ತಿ ಮೊದಲೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ದೇಹದಲ್ಲಿ ಶಕ್ತಿ ಇರಲಿಲ್ಲ. ಹೀಗಾಗಿ ಗೋಡೆಗೆ ಒತ್ತಿ ಹಿಡಿದಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿರೋದಾಗಿ ಇಲ್ಲಿನ ಪೊಲೀಸ್ ಅಧಿಕಾರಿ ಎಸ್ ವೆಂಕಟ್ ರೆಡ್ಡಿ ಹೇಳಿದ್ದಾರೆ.

    ಮಗು ಸಾವನ್ನಪ್ಪಿರುವುದು ತಿಳಿದ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಮೂರು ವರ್ಷದ ಕೀರ್ತಿ ತಂದೆ ಸುರೇಶ್ ಜೊತೆ ಅಷ್ಟೊಂದು ಅನ್ಯೋನ್ಯವಾಗಿರಲಿಲ್ಲ. ಇದರಿಂದ ಸುರೇಶ್‍ಗೆ ಕೋಪ ಬರುತ್ತಿತ್ತು. ಈ ಮಗು ನನ್ನದಲ್ಲ ಅಂತಾ ಪತ್ನಿ ಜೊತೆ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ. ಮೂರು ವರ್ಷಗಳ ಹಿಂದೆ ಸುರೇಶ್ ಜ್ಯೋತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಮದುವೆಗೆ ಮುಂಚೆಯೇ ಇವರಿಗೆ ಮಗುವಾಗಿತ್ತು ಎಂದು ವರದಿಯಾಗಿದೆ.

  • ಹಾಡಹಗಲೇ ಸಿಬ್ಬಂದಿಗೆ ಗನ್ ತೋರಿಸಿ ಉಡುಪಿ ಮೋರ್ ಸೂಪರ್ ಮಾರ್ಕೆಟ್‍ನಲ್ಲಿ ದರೋಡೆ

    ಹಾಡಹಗಲೇ ಸಿಬ್ಬಂದಿಗೆ ಗನ್ ತೋರಿಸಿ ಉಡುಪಿ ಮೋರ್ ಸೂಪರ್ ಮಾರ್ಕೆಟ್‍ನಲ್ಲಿ ದರೋಡೆ

    ಉಡುಪಿ: ಹಾಡಹಗಲೇ ಮೋರ್ ಸೂಪರ್ ಮಾರ್ಕೆಟ್ ದರೋಡೆಯಾಗಿದೆ. ಮಣಿಪಾಲದಲ್ಲಿರುವ ಮೋರ್ ಸೂಪರ್ ಮಾರ್ಕೆಟ್‍ಗೆ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ನುಗ್ಗಿ ಮೂರು ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.

    ಮಣಿಪಾಲದಲ್ಲಿರುವ ಸೂಪರ್ ಮಾರ್ಕೆಟ್‍ಗೆ ಮಂಕಿ ಕ್ಯಾಪ್ ಹಾಕಿಕೊಂಡು ನುಗ್ಗಿದ ಇಬ್ಬರು ಮ್ಯಾನೇಜರ್‍ಗೆ ಪಿಸ್ತೂಲ್ ತೋರಿಸಿದ್ದಾರೆ. ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೋರ್ ಸಿಬ್ಬಂದಿಗೆ ತಲವಾರನ್ನು ಸಹ ಬೀಸಿದ್ದಾರೆ. ಪಿಸ್ತೂಲ್ ತಲೆಗಿಟ್ಟು ಕಾಸು ಕೇಳಿದ್ದಾರೆ. ಈ ಸಂದರ್ಭ ಮ್ಯಾನೇಜರ್ ಕಿವಿಗೆ ಗಾಯವಾಗಿದೆ. ಹೆದರಿದ ಮ್ಯಾನೇಜರ್ ಕ್ಯಾಬಿನ್‍ನಲ್ಲಿದ್ದ ಮೂರು ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳ ಕೈಗಿಟ್ಟಿದ್ದಾರೆ. ಕಾಸು ಕೈಗೆ ಸಿಗುತ್ತಿದ್ದಂತೆ ಇಬ್ಬರು ಮುಸುಕುಧಾರಿಗಳು ಪರಾರಿಯಾಗಿದ್ದಾರೆ. ಮೋರ್ ಸಿಬ್ಬಂದಿ ಕೂಡಲೇ ಮಣಿಪಾಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಮೋರ್ ಸಿಬ್ಬಂದಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಶ್ಚರ್ಯಕರ ವಿಷಯವೇನಂದ್ರೆ ಮೋರ್ ಸೂಪರ್ ಮಾರ್ಕೆಟಲ್ಲಿ ಯಾವುದೇ ಸಿಸಿಟಿವಿಯಿಲ್ಲ. ಮೋರ್ ನಿಯಮದ ಪ್ರಕಾರ ತಮ್ಮ ಸೂಪರ್ ಮಾರ್ಕೆಟ್‍ನಲ್ಲಿ ಸಿಸಿಟಿವಿ ಅಳವಡಿಸುವುದಿಲ್ಲ.

    ಮೋರ್ ಗ್ರಾಹಕರಿಗೆ ಸಿಸಿಟಿವಿ ಹಾಕಿದ್ರೆ ಅವಮಾನವಾಗುತ್ತದೆ. ಹೀಗಾಗಿ ಸಿಸಿಟಿವಿಯನ್ನು ಮಳಿಗೆಯ ಒಳಗೆ ಅಳವಡಿಸಿಲ್ಲ. ರಾಜ್ಯಾದ್ಯಂತ ಯಾವ ಮೋರ್ ಮಾರ್ಕೆಟಲ್ಲೂ ಸಿಸಿಟಿವಿ ಅಳವಡಿಸುವುದಿಲ್ಲ ಎಂದು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ.

     

  • ಬೀದರ್: ನಾಲ್ವರು ಸರಗಳ್ಳರ ಬಂಧನ, ಚಿನ್ನಾಭರಣ ವಶ

    ಬೀದರ್: ನಾಲ್ವರು ಸರಗಳ್ಳರ ಬಂಧನ, ಚಿನ್ನಾಭರಣ ವಶ

    ಬೀದರ್: ಬಹುದಿನಗಳಿಂದ ಪೊಲೀಸರಿಗೆ ಬೇಕಾಗಿದ್ದ ನಾಲ್ವರು ಸರಗಳ್ಳರನ್ನು ಬೀದರ್ ನಗರದ ಗಾಂಧಿಗಂಜ್ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

    ಮೈಕಲ್ ಕೊಡ್ಲಿಕರ್, ಉಮೇಶ್ ಭಾವಿದೊಡ್ಡಿ, ವಿನಯ್‍ಕುಮಾರ್ ಭಾವಿಕಟ್ಟಿ ಮತ್ತು ನಿಶಾಂತ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ ಎರಡು ಪಲ್ಸರ್ ಬೈಕ್ ಹಾಗು 5.50 ಲಕ್ಷ ರೂ. ಬೆಲೆಬಾಳುವ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬಂಧಿತರ ಮೇಲೆ ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ನಡೆದ ಕಾರ್ಯಚಾರಣೆ ಮಾಡಲಾಗಿತ್ತು.