ಬೆಂಗಳೂರು:`ಹಲವು ಕಾರಣಗಳಿಂದಾಗಿ 1981 ರಿಂದ 1998ರ ಅವಧಿಯವರೆಗೂ ನಾನು ಭೂಗತ ಜಗತ್ತಿನಲ್ಲಿ ಇದ್ದೆ. 1986ರಲ್ಲಿ ನಡೆದ ಕುಖ್ಯಾತ ಭೂಗತ ಪಾತಕಿ ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೆ. ತುಂಡರಿಸದ ಸರಪಣಿ ರೀತಿ ಹತ್ತು ಹಲವು ಘಟನಾವಳಿಗಳ ನಡೆದು ಹೋದ ಕಾರಣ ನಾನು 13 ವರ್ಷ ಭೂಗತ ಪ್ರಪಂಚದಲ್ಲಿ ಇದ್ದೆ’ ಎಂದು ಅಗ್ನಿ ಶ್ರೀಧರ್ ಡಿಜಿಪಿ ಆರ್‍ಕೆ ದತ್ತಾಗೆ ಸಲ್ಲಿಸಿರುವ ಮನವಿಯೇ ಈಗ ಆತನಿಗೆ ಉರುಳಾಗುವ ಸಾಧ್ಯತೆಯಿದೆ.
ಹೌದು.ಭೂಗತ ಜಗತ್ತಿನ ದಿನಗಳ ಬಗ್ಗೆ ವಿವರಣೆ ಇರುವ ಮನವಿ ಪತ್ರವನ್ನು ಡಿಜಿಪಿಗೆ ಅಗ್ನಿ ಶ್ರೀಧರ್ ಕೊಟ್ಟಿದ್ದ. ಕೊತ್ವಾಲ್ ಮರ್ಡರ್ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವ ಅಂಶವನ್ನು ಅಗ್ನಿ ಶ್ರೀಧರ್ ಈ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದ. ಈ ಅಂಶವನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಮತ್ತೆ ಈ ಕೊಲೆ ಕೇಸಿಗೆ ಮರು ಜೀವ ನೀಡಲು ಬೆಂಗಳೂರು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ.ಇವತ್ತು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಅಗ್ನಿಶ್ರೀಧರ್ ಮನವಿ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಅಂಥ ಹೇಳಿದ್ದಾರೆ.
ಇದನ್ನೂ ಓದಿ: Exclusive : ಅಗ್ನಿ ಶ್ರೀಧರ್ ರಕ್ಷಣೆ ಮುಂದಾಗಿದ್ದ ಸರ್ಕಾರದ ಪ್ರಭಾವಿ ಸಚಿವ
ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ದರ್ಪ ತೋರಿಸಿ ನನ್ನ ಮೇಲೆ ಸುಳ್ಳು ಆರೋಪ ದಾಖಲಿಸಿದ್ದಾರೆ. ಆದರೆ ನಾನು ಈಗ ಭೂಗತ ಜಗತ್ತಿನಿಂದ ಹೊರ ಬಂದಿದ್ದೇನೆ. ಈ ಪ್ರಕರಣದಲ್ಲಿ ನಾನು ವಿಲನ್ ಅಲ್ಲ. ನಿಂಬಾಳ್ಕರ್ ನನಗೆ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಅಗ್ನಿ ಶ್ರೀಧರ್ ಮನವಿ ಮಾಡಿದ್ದ.
ಏನಿದು ಕೊತ್ವಾಲ್ ಮರ್ಡರ್ ಕೇಸ್?
80ರ ದಶಕದಲ್ಲಿ ಕೊತ್ವಾಲ್ ರಾಮಚಂದ್ರಪ್ಪ ಬೆಂಗಳೂರಿನ ಅಂಡರ್ ವಲ್ರ್ಡ್ ಡಾನ್ ಆಗಿದ್ದ. 1986ರ ಮಾರ್ಚ್ 22 ರಂದು ಕುಣಿಗಲ್ ಸಮೀಪ ತೋಟದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದರು. ಈ ಕೊಲೆ ಪ್ರಕರಣದಲ್ಲಿ ಜೈರಾಜ್, ಸೀತಾರಾಮ್ ಶೆಟ್ಟಿ, ಶ್ರೀಧರ್‍ಮೂರ್ತಿ ಅಲಿಯಾಸ್ ಅಗ್ನಿಶ್ರೀಧರ್ ಸೇರಿದಂತೆ ಅನೇಕರನ್ನು ಆರೋಪಿಗಳನ್ನಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಕೋರ್ಟ್‍ನಲ್ಲಿ ಖುಲಾಸೆ :
ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬಂದಿದ್ದವರು ಹೆದರಿಕೊಂಡು ಹೋಗಿದ್ದರಂತೆ. ಸಾಕ್ಷ್ಯಗಳ ಕೊರತೆಯಿಂದಾಗಿ ಕೊತ್ವಾಲ್ ಕೊಲೆ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿತ್ತು. ಈಗ ಅಗ್ನಿ ಶ್ರೀಧರ್ ಕೊತ್ವಾಲ್ ಕೊಲೆ ಕೇಸ್‍ನಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಹಿ ಹಾಕಿರುವ ಪತ್ರವನ್ನು ಡಿಜಿಗೆ ನೀಡಿದ್ದು ಈ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.
ದಾಳಿಯಾಗಿದ್ದು ಯಾಕೆ?
ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ಸ್‍ಗೆ ಆಶ್ರಯ ನೀಡಿದ್ದ ಮಾಹಿತಿ ಮೇರೆಗೆ ಇತ್ತೀಚೆಗೆ ಪೊಲೀಸರು ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಿದೇಶಿ ಮದ್ಯ ದೊರಕಿತ್ತು. ದಾಳಿ ನಡೆದಾಗ ಅತಿಯಾದ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರಿಂದ ಅಗ್ನಿ ಶ್ರೀಧರ್ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಶ್ರೀಧರ್ ಆಪ್ತ, ಬಲಗೈ ಬಂಟ ಬಚ್ಚನ್ ಸೇರಿದಂತೆ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸಾಗರ್ ಆಸ್ಪತ್ರೆಯ ಸ್ಪೆಶಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಧರ್, ಬಂಧನದ ಭೀತಿ ಹಿನ್ನೆಲೆಯಲ್ಲಿ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿತ್ತು.
https://www.youtube.com/watch?v=ZhUvTr8EtIk







































