Tag: police

  • ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಇದು ಅಂತ್ಯವಲ್ಲ. ಅಕ್ರಮ ವಿರುದ್ಧ ಹೋರಾಟದ ಆರಂಭ: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ

    ಉಡುಪಿ: ಇದು ಅಂತ್ಯ ಅಲ್ಲ.., ಮರಳುಗಾರಿಕೆ ವಿರುದ್ಧದ ಹೊರಾಟದ ಆರಂಭ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳುವ ಮೂಲಕ ಮರಳು ಕಳ್ಳರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಜಿಲ್ಲಾಧಿಕಾರಿಗಳು ಮಾತನಾಡಿ, ಅಕ್ರಮದ ವಿರುದ್ಧದ ಹೋರಾಟದ ಆರಂಭ ಮಾಡಿದ್ದೇವೆ. ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿ- ಎಸಿಯ ಮೇಲೆ ಇಂತಹ ಅಮಾನವೀಯ ಘಟನೆ ಉಡುಪಿಯಂತಹ ಜಿಲ್ಲೆಯಲ್ಲಿ ನಡೆದದ್ದು ವಿಷಾದನೀಯ. ಇದರ ಹಿಂದೆ ಮರಳು ಮಾಫಿಯಾದ ಕೈವಾಡ ಇರಬಹುದು. ಪೊಲೀಸರ ತನಿಖೆಯಲ್ಲಿ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು. ನಿನ್ನೆ ರಾತ್ರಿ ಕಂಡ್ಲೂರಿನ ಭಯಾನಕ ವಾತಾವರಣ ನನ್ನನ್ನು ಕೆಲಕಾಲ ಕಂಗೆಡುವಂತೆ ಮಾಡಿತು ಎಂದು ತಡರಾತ್ರಿಯ ಭಯಾನಕ ಸನ್ನಿವೇಶವನ್ನು ನೆನಪಿಸಿಕೊಂಡರು.

    ಸ್ಥಳೀಯ ಪೊಲೀಸ್ ಠಾಣೆಗಳಿಗೆ, ತಹಶೀಲ್ದಾರ್, ಎಸಿ ಕಚೇರಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿ ದಾಳಿ ಮಾಡಿದ ಎಲ್ಲಾ ಪ್ರಕರಣಗಳು ಫೇಲ್ ಆಗಿತ್ತು. ಹೀಗಾಗಿ ಈ ಬಾರಿ ಗೌಪ್ಯವಾಗಿ ದಾಳಿ ನಡೆಸಿದ್ದೇವೆ ಎಂದರು.

    ಕುಂದಾಪುರದ ತನಕ ಸುಮಾರು 20 ಬೈಕ್‍ಗಳಲ್ಲಿ ನಮ್ಮನ್ನು ಹಿಂಭಾಲಿಸಿಕೊಂಡು ದುಷ್ಕರ್ಮಿಗಳು ಬಂದರು. ಅವರಿಂದ ತಪ್ಪಿಸಿಕೊಂಡು ಉಡುಪಿಯ ತನಕ ಬಂದಿದ್ದೇವೆ. ಈ ಘಟನೆ ದುರಾದೃಷ್ಟಕರ ಎಂದರು. ಉಡುಪಿ ಜಿಲ್ಲೆಯ ಸಚಿವ ಪ್ರಮೋದ್ ಮಧ್ವರಾಜ್, ಜನಪ್ರತಿನಿಧಿಗಳು ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಬೆಂಬಲ ಸಿಕ್ಕಿದೆ. ಸಾರ್ವಜನಿಕರಿಂದ ಕೂಡಾ ಬೆಂಬಲ ಸಿಕ್ಕಿದೆ. ಜಿಲ್ಲೆಯ ಜನ ಕಾನೂನಿನ ಹೋರಾಟದ ಜೊತೆ ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಹೇಳಿದರು.

    https://www.youtube.com/watch?v=NKGXeOVp68g

     

  • ಹೆಂಡ್ತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಣ್ಣನ ಮಗನನ್ನ ಕೊಂದ ಚಿಕ್ಕಪ್ಪ

    ಹೆಂಡ್ತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಣ್ಣನ ಮಗನನ್ನ ಕೊಂದ ಚಿಕ್ಕಪ್ಪ

    ಬಾಗಲಕೋಟೆ: ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರನ ಮಗನನ್ನ ಚಿಕ್ಕಪ್ಪನೇ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋವಳ್ಳಿ ಗ್ರಾಮದಲ್ಲಿ ನಡೆದಿದೆ.

    25 ವರ್ಷದ ಪರುಶುರಾಮ ಮಾಳಗಿ ಕೊಲೆಯಾದ ವ್ಯಕ್ತಿ. ಮೃತ ಪರಶುರಾಮ ಚಿಕ್ಕಪ್ಪ ಕರಿಯಪ್ಪನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಅಲ್ಲದೇ ಪರಶುರಾಮನಿಗೆ ಮದುವೆಯಾಗಿ ಮಕ್ಕಳಾದ್ರೂ, ಚಿಕ್ಕಮ್ಮಳೊಂದಿಗಿನ ಅಕ್ರಮ ಸಂಬಂಧ ಬಿಟ್ಟಿರಲಿಲ್ಲ. ಈ ವಿಷಯ ಚಿಕ್ಕಪ್ಪನಾದ ಕರಿಯಪ್ಪನಿಗೆ ಇರಿಸುಮುರಿಸು ಉಂಟುಮಾಡಿತ್ತು.

    ಇದನ್ನೂ ಓದಿ: ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ

    ಭಾನುವಾರ ರಾತ್ರಿ ಪರಶುರಾಮ ಮಲಗಿರುವ ವೇಳೆಯಲ್ಲಿ ಕರಿಯಪ್ಪ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಜಮಖಂಡಿ ಡಿವೈಎಸ್‍ಪಿ ರಾಮನಗೌಡ ಹಟ್ಟಿ ಭೇಟಿ ನೀಡಿದ್ದು, ಆರೋಪಿ ಕರಿಯಪ್ಪ ಮಾಳಗಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

     

  • ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

    ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಪ್ರೀತ್ಸೋ.. ಪ್ರೀತ್ಸೋ ಎಂದು ಬೆನ್ನು ಬಿದ್ದಿರುವ ಯುವತಿಯೊಬ್ಬಳ ಕಾಟಕ್ಕೆ ಬಿಐಎಸ್‍ಎಲ್ (ವಿಶ್ವವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿಮಿಡೆಟ್)ನ ಮೆಕ್ಯಾನಿಕಲ್ ಎಂಜಿನಿಯರ್ ಯುವಕರೊಬ್ಬರು ದಿಗಿಲುಗೊಂಡಿದ್ದಾರೆ.

    ಹೇಮಂತ್ ಎಂಬವರೇ ಯುವತಿಯಿಂದ ತೊಂದರೆ ಅನುಭವಿಸುತ್ತಿರುವ ಎಂಜಿನಿಯರ್. ಇಂದು ಬೆಳ್ಳಂಬೆಳಗ್ಗೆ ಜಿಮ್ ಗೆ ಹೋಗಿದ್ದ ಹೇಮಂತ್ ಮೇಲೆ ಯುವತಿ ಹಾಗೂ ಆಕೆಯ ತಾಯಿ ಪಟ್ಟಣದ ಹೊಸಮನೆ ಮುಖ್ಯ ರಸ್ತೆಯಲ್ಲಿ ದಾಳಿ ಮಾಡಿದ್ದಾರೆ. ಹೇಮಂತ್‍ರನ್ನು ಹಿಡಿದು ಪರಚಿದ್ದಾರೆ. ಇವರ ದಾಳಿಗೆ ಕಂಗಾಲಾದ ಹೇಮಂತ್ ಪರಾರಿಯಾಗಿ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾರೆ. ಇತ್ತ ತಾಯಿ ಮಗಳು ಹೇಮಂತ್ ಬೈಕ್ ಬೀಳಿಸಿ, ಅದರ ಮೇಲೆ ಕಲ್ಲು ಎತ್ತಿಹಾಕಿದ್ದಾರೆ.

    ತನ್ನನ್ನು ಮದುವೆಯಾಗುವಂತೆ ಯುವತಿ ಪೀಡಿಸುತ್ತಿದ್ದು, ಮದುವೆಗೆ ಒಪ್ಪದ ಕಾರಣಕ್ಕೆ ಈ ತಾಯಿ-ಮಗಳು ನಿರಂತರವಾಗಿ ಟಾರ್ಚರ್ ಕೊಡುತ್ತಿದ್ದಾರೆ. ಈ ಮುಂಚೆ ನನ್ನ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದರು. ಈಗ ಹಲ್ಲೆ ಮಾಡಿದ್ದಾರೆ. ಜೀವನವೇ ಸಾಕು ಎಂಬಂತಾಗಿದೆ ಎಂದು ಹೇಮಂತ್ ಹೇಳಿದ್ದಾರೆ.

    ಹೇಮಂತ್ ಹೇಳಿದ್ದೇನು?: ನನಗೆ ಮೂರು ವರ್ಷದಿಂದ ಒಬ್ಬ ಯುವತಿ ಮದುವೆ ಆಗುವಂತೆ ಬೆನ್ನು ಬಿದ್ದಿದ್ದಾಳೆ. ಕಳೆದ ವರ್ಷ ಸೆಪ್ಟಂಬರ್‍ನಲ್ಲಿ ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ರು. ಕೊನೆಗೆ ಡಿಎನ್‍ಎ ರಿಪೋರ್ಟ್ ನೆಗಟಿವ್ ಬಂದ್ಮಲೇ ನನ್ನನ್ನ ಪ್ರಕರಣದಿಂದ ಕೈ ಬಿಡಲಾಗಿದೆ. ನಾನು ಮಾಡದಿರುವ ತಪ್ಪಿಗೆ ನಾಲ್ಕು ತಿಂಗಳು ಜೈಲಿನಲ್ಲಿದೆ. ಇವತ್ತು ನಾನು ಎಂದಿನಂತೆ ಜಿಮ್ ಗೆ ಹೋದಾಗ ತಾಯಿ-ಮಗಳು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇವರಿಂದ ನಾನು ತಪ್ಪಿಸಿಕೊಂಡು ಬಂದೆ. ಆದ್ರೆ ಅಲ್ಲೇ ಇದ್ದ ನನ್ನ ಬೈಕ್ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಈಗ ತಾವೇ ಆಸ್ಪತ್ರೆಗೆ ಹೋಗಿ ದಾಖಲಾಗಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಇವರಿಂದ ನನಗೆ ನ್ಯಾಯ ಕೊಡಿಸಿ. ಇಲ್ಲವಾದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಹೇಮಂತ್ ಹೇಳಿದ್ದಾರೆ.

    ಈ ಸಂಬಂಧ ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಕಲಬುರಗಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಕಲಬುರಗಿ ಹೊರವಲಯದ ಭೋಸ್ಗಾ ಕೆರೆ ಬಳಿ ನಡೆದಿದೆ.

    ಘಟನೆಯಿಂದ ಆರೋಪಿ ವಿಕ್ರಂ ಮೂಲಿಮನಿ(24) ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲಬುರಗಿ ನಗರದಲ್ಲಿ ಇತ್ತೀಚೆಗೆ ಶ್ರೀಕಾಂತ ರೆಡ್ಡಿ ಹಲ್ಲೆ ಸಂಬಂಧ ಮಾರ್ಕೆಟ್ ಸತೀಶನ ಸಹಚರ ರೌಡಿ ವಿಕ್ರಂ ಮೂಲಿಮನಿಯನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಜಪ್ತಿಗಾಗಿ ಇಂದು ಕರೆದುಕೊಂಡು ಹೋಗಿದ್ದರು. ಈ ಸಂಧರ್ಭದಲ್ಲಿ ರೌಡಿ ವಿಕ್ರಂ, ಪೇದೆ ಅಂಬಾದಾಸ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಪೊಲೀಸರು ರೌಡಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.

    ಸದ್ಯ ಗಾಯಾಳು ವಿಕ್ರಂನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಾಸ್ಥಾನದೊಳಗೆ ವಿಕಲಾಂಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕ

    ದೇವಾಸ್ಥಾನದೊಳಗೆ ವಿಕಲಾಂಗ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕ

    ಭುವನೇಶ್ವರ: ದೇವಾಲಯದಲ್ಲಿ ವಿಕಲಾಂಗ ಅಪ್ರಾಪ್ತೆಯ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಓಡಿಶಾದ ಬಾರಿಪಾದಾದಲ್ಲಿ ನಡೆದಿದೆ.

    ಇಲ್ಲಿನ ಸ್ವಾಮಿ ಜಗನ್ನಾಥ ದೇವಾಲಯದಲ್ಲಿ ಶುಕ್ರವಾರ ರಾತ್ರಿ 11 ವರ್ಷದ ಬಾಲಕಿ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಳು. ಈ ವೇಳೆ ದೇವಸ್ಥನ ನಿರ್ಜನವಾಗಿತ್ತು. ಈ ವೇಳೆ ದೇವಸ್ಥಾನದಲ್ಲಿದ್ದ 28 ವರ್ಷದ ಯುವಕ ಬಾಲಕಿಯನ್ನು ಮಂಟಪದ ಬಳಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತೆಯನ್ನು ಸ್ಥಳದಿಂದ ರಕ್ಷಿಸಲಾಗಿದ್ದು, ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ಪತ್ತೆಹಚ್ಚು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಾಲಕಿಯ ಸ್ಥಿತಿ ಗಂಭೀರವಾಗಿದ್ದರಿಂದ ಆಕೆಯನ್ನು ಕಟಕ್‍ನ ಎಸ್‍ಸಿಬಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರು ಹೇಳಿದ್ದಾರೆ.

    ಸ್ಥಳಕ್ಕೆ ಸಬ್-ಕಲೆಕ್ಟರ್ ಎಸ್.ಕೆ.ಪುರೋಹಿತ್ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಬಾಲಕಿಯ ಚಿಕಿತ್ಸಾ ವೆಚ್ಚಕ್ಕೆ 10,000 ರೂ. ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

     

  • ಮಂಡ್ಯ: ಮೀನುಗಾರರ ಬಲೆಗೆ ಸಿಕ್ತು ಎಟಿಎಂ ಯಂತ್ರ

    ಮಂಡ್ಯ: ಮೀನುಗಾರರ ಬಲೆಗೆ ಸಿಕ್ತು ಎಟಿಎಂ ಯಂತ್ರ

    ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಕರೆಯಲ್ಲಿ ಮೀನುಗಾರರು ಬೀಸಿದ ಬಲೆಗೆ ಮೀನು ಸಿಗುವ ಬದಲು ಎಟಿಎಂ ಯಂತ್ರ ಸಿಕ್ಕಿದೆ.

    ದರೋಡೆಕೋರರು ಎಟಿಎಂ ಯಂತ್ರವನ್ನು ಕದ್ದು ತಂದು ಅದರಲ್ಲಿಯ ಹಣವನ್ನು ತೆಗೆದು ಕೊನೆಗೆ ಯಂತ್ರವನ್ನು ಕೆರೆಗೆ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗಿದ್ದು, ಮೀನುಗಾರರು ಬೀಸಿದ್ದ ಬಲೆಗೆ ಎಟಿಎಂ ಯಂತ್ರ ಸಿಕ್ಕಿದೆ.

    ಇದನ್ನೂ ಓದಿ: ಎಸ್‍ಬಿಐ ಖಾತೆದಾರರಿಗೆ ಶಾಕ್- ಎಟಿಎಂಗಳಲ್ಲಿ ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ವಿತ್‍ಡ್ರಾ ಮಾಡಿದ್ರೆ ಶುಲ್ಕ 

    ಈ ಬಗ್ಗೆ ಕೂಡಲೇ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ನಾಗಮಂಗಲ ಪಟ್ಟಣ ಪೊಲೀಸರು ಕೆರೆಯಲ್ಲಿ ಪತ್ತೆಯಾದ ಎಟಿಎಂ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಎಟಿಎಂ ಯಂತ್ರ ಯಾವ ಬ್ಯಾಂಕಿಗೆ ಸೇರಿದ್ದು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

    ಇದನ್ನೂ ಓದಿ: ಹೊಸ ನೋಟುಗಳ ನಕಲು ತಡೆಗೆ ಸರ್ಕಾರ ಮಾಡಿರೋ ಪ್ಲಾನ್ ಏನು ಗೊತ್ತಾ? 

     

  • ಭೀಮಾನದಿಯಲ್ಲಿ ಅಪರಿಚಿತ ಶವ ಪತ್ತೆ: ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಿತ್ತಾಡಿದ ವಿಜಯಪುರ-ಕಲಬುರಗಿ ಪೊಲೀಸರು

    ಭೀಮಾನದಿಯಲ್ಲಿ ಅಪರಿಚಿತ ಶವ ಪತ್ತೆ: ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಿತ್ತಾಡಿದ ವಿಜಯಪುರ-ಕಲಬುರಗಿ ಪೊಲೀಸರು

    ವಿಜಯಪುರ: ಭೀಮಾ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಶವ ಬಿದ್ದಿರುವ ಜಾಗದ ಗಡಿ ವಿಷಯವಾಗಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯ ಪೊಲೀಸರ ನಡುವೆ ಇಂದು ಕಿತ್ತಾಟ ನಡೆದಿದೆ.

    ಇಂದು ಬೆಳಗ್ಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣೂರ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಿರೇ ಮಣೂರ ಗ್ರಾಮಗಳ ಮಧ್ಯೆಯಿರುವ ಸೇತುವೆ ಬಳಿ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಎರಡು ಗ್ರಾಮಗಳ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದರು.

    ಸ್ಥಳಕ್ಕೆ ಬಂದ ಇಂಡಿ ಮತ್ತು ಅಫಜಲಪುರ ಠಾಣೆಯ ಪೋಲಿಸರು ಶವ ಪತ್ತೆಯಾಗಿರುವ ಜಾಗ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸ್ಥಳದಿಂದ ಹಿಂದಿರುಗಿದ್ದರು. ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ನದಿ ತೀರದ ಜನ ಶವ ಹೊರತೆಗೆಯದಿದ್ರೆ ಇರುವ ಸ್ವಲ್ಪ ನೀರೂ ಮಲೀನವಾಗುತ್ತದೆ ಎಂದು ಪೊಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೊನೆಗೆ ಇಂಡಿ ಠಾಣೆಯ ಸಿಪಿಐ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶವವನ್ನು ನದಿಯಿಂದ ಹೊರ ತೆಗಯಲಾಗಿದೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹಾವೇರಿ: ಕಾರು ಪಲ್ಟಿ ಹೊಡೆದು ಇಬ್ಬರ ಸಾವು

    ಹಾವೇರಿ: ಕಾರು ಪಲ್ಟಿ ಹೊಡೆದು ಇಬ್ಬರ ಸಾವು

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರು ಮೂಲದ ರವೀಂದ್ರನ್ (35) ಮತ್ತು ಲಕ್ಷ್ಮೀ (30) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿಗ್ಗಾವಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಹುಬ್ಬಳ್ಳಿ ನಗರದಿಂದ ಬೆಂಗಳೂರಿಗೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಶಿಗ್ಗಾವಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

  • ಸೆಕ್ಸ್ ಗೆ ಒಪ್ಪದ್ದಕ್ಕೆ ಅಪ್ರಾಪ್ತೆಗೆ ಬಿಸಿ ಚಮಚದಿಂದ ಬರೆ ಹಾಕಿದ್ದ ಕಾಮುಕ ಅರೆಸ್ಟ್

    ಸೆಕ್ಸ್ ಗೆ ಒಪ್ಪದ್ದಕ್ಕೆ ಅಪ್ರಾಪ್ತೆಗೆ ಬಿಸಿ ಚಮಚದಿಂದ ಬರೆ ಹಾಕಿದ್ದ ಕಾಮುಕ ಅರೆಸ್ಟ್

    ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಸತತ ಎರಡು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

    ಶಿವಕುಮಾರ್ ಬಾಳೇಕುಂದ್ರಿ (22) ಸತತ ಎರಡು ವರ್ಷದಿಂದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಯುವಕ. ಅಪ್ರಾಪ್ತೆಯ ಪಕ್ಕದ ಮನೆಯವನೇ ಅಗಿದ್ದ ಶಿವಕುಮಾರ್ ಬಾಲಕಿ ಜೊತೆ ಆತ್ಮೀಯವಾದ ಒಡನಾಟ, ಸ್ನೇಹ ಬೆಳಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿಯ ವಿಡಿಯೋ, ಫೋಟೋ ತೆಗೆದು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ತಾನು ನಡೆಸಿದ ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ವಿಡಿಯೋವನ್ನು ಬಾಲಕಿಯ ಶಾಲೆಗೆ ಮತ್ತು ಮನೆಗೆ ಕಳುಹಿಸಿದ್ದಾನೆ.

    7ನೇ ತರಗತಿ ವಿದ್ಯಾರ್ಥಿನಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು. ಬಾಲಕಿ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಕಾಮುಕ ಬಿಸಿ ಚಮಚದಿಂದ ಬರೆ ಹಾಕಿತ್ತಿದ್ದ ಎಂದು ತಿಳಿದು ಬಂದಿದೆ.

    ಅಪ್ರಾಪ್ತ ಬಾಲಕಿ ಆರೋಪಿ ಶಿವಕುಮಾರ ಬಾಳೆಕುಂದ್ರಿ ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ, ಮಾನಸಿಕ ಕಿರುಕುಳ ನೀಡಿತಿದ್ದನು ಅಂತ ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾಳೆ.

    ಪೊಲೀಸರು ಶಿವಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂದಿಸಿದ್ದಾರೆ. ಪೊಲೀಸರು ಶಿವಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಮತ್ತು ಐಪಿಸಿ ಕಲಂ 323, 506,448, 376(2) ಅನ್ವಯ ಪ್ರಕರಣವನ್ನ ದಾಖಲಿಸಿದ್ದಾರೆ. ಇನ್ನು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

     

  • ನಂಜನಗೂಡಿನ ರಾಜೂರಿನಲ್ಲಿ ರಾಜಕೀಯ ಸಂಘರ್ಷ- ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಕಲ್ಲುತೂರಾಟ

    ನಂಜನಗೂಡಿನ ರಾಜೂರಿನಲ್ಲಿ ರಾಜಕೀಯ ಸಂಘರ್ಷ- ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಕಲ್ಲುತೂರಾಟ

    ಮೈಸೂರು: ನಂಜನಗೂಡು ಉಪ ಚುನಾವಣೆ ಕಣದಲ್ಲಿ ರಾಜಕೀಯ ಸಂಘರ್ಷ ನಡೆದಿದೆ. ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ನಡುವೆ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ.

    ನಂಜನಗೂಡು ತಾಲೂಕಿನ ರಾಜೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ನಟ ಜಗ್ಗೇಶ್ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಆಗಮಿಸುವುದಕ್ಕೂ ಮುನ್ನ ಗಲಾಟೆ ನಡೆದಿದೆ. ಗಲಾಟೆಯಲ್ಲಿ ರಾಜೂರು ಗ್ರಾಮದ ಬಸವರಾಜು ಮತ್ತು ಚಿನ್ನಮ್ಮ ಎಂಬವರಿಗೆ ಗಾಯಗಳಾಗಿದೆ. ಗಾಯಳಾಗಳನ್ನು ನಂಜನಗೂಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಲು ತೂರಾಟದಲ್ಲಿ ಗಾಯಗೊಂಡಿರುವ ಚಿನ್ನಮ್ಮರಿಗೆ ಮಾತು ಬರುವುದಿಲ್ಲ ಎಂದು ತಿಳಿದುಬಂದಿದೆ.

    ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜೂರು ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ನಂಜನಗೂಡು ಮತಕ್ಷೇತ್ರ ಪ್ರತಿಷ್ಠೆಯ ಕಣವಾದ್ದರಿಂದ ಈ ರೀತಿಯ ಗಲಾಟೆಗಳು ನಡೆಯುತ್ತಿವೆ ಎನ್ನಲಾಗಿದೆ.