Tag: police

  • ಸಿಗರೇಟ್ ತರಲ್ಲ ಅಂದಿದ್ದಕ್ಕೆ ಚಾಕುವಿನಿಂದ ಇರಿದು ಗೆಳೆಯನನ್ನು ಕೊಂದೇ ಬಿಟ್ರು!

    ಸಿಗರೇಟ್ ತರಲ್ಲ ಅಂದಿದ್ದಕ್ಕೆ ಚಾಕುವಿನಿಂದ ಇರಿದು ಗೆಳೆಯನನ್ನು ಕೊಂದೇ ಬಿಟ್ರು!

    ಬೆಂಗಳೂರು: ಸಿಗರೇಟ್ ತರಲ್ಲ ಅಂತಾ ಹೇಳಿದಕ್ಕೆ ಗೆಳೆಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಹಳೆ ಬಾಗಲೂರು ಲೇಔಟ್ ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

    ಮೊಹಮ್ಮದ್ ಅಲಿ (30) ಸ್ನೇಹಿತರಿಂದಲೇ ಕೊಲೆಯಾದ ವ್ಯಕ್ತಿ. ಕೆಲ ವರ್ಷಗಳ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ತನ್ನ ಹಳೆಯ ಗೆಳೆಯರಾದ ವಾಹಿದ್, ಮುಜಾಮಿಲ್ ಮತ್ತು ಸಬಾರಕ್ ಎಂಬವರನ್ನು ಶನಿವಾರ ರಾತ್ರಿ ಭೇಟಿಯಾಗಿದ್ದರು.

    ಎಲ್ಲರೂ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮೊಹಮ್ಮದ್‍ಗೆ ಗೆಳೆಯರು ಸಿಗರೇಟ್ ತರಲು ಹೇಳಿದ್ದಾರೆ. ಸಿಗರೇಟ್ ತರಲು ಮೊಹಮ್ಮದ್ ಒಪ್ಪದೇ ಇದ್ದಾಗ ಗೆಳೆಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸ್ನೇಹಿತರು ಮೊಹಮ್ಮದ್‍ಗೆ ಚಾಕುವಿನಿಂದ ಇರಿದಿದ್ದಾರೆ.

    ಮೊಹಮ್ಮದ್ ಕೂಗಾಟ ಕೇಳಿದ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4 ಗಂಟೆಗೆ ಮೊಹಮ್ಮದ್ ಅಲಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಆಟೋ ಡ್ರೈವರ್‍ಗಳಾದ ವಾಹಿದ್, ಮುಜಾಮಿಲ್, ಸಬಾರಕ್ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸ ಬ್ರಹ್ಮಪುರದಲ್ಲಿ ಮಹಿಳೆಯೊಬ್ರು ಇಂದು ಬೆಳ್ಳಂಬೆಳಗ್ಗೆ ನ್ಯಾಯಕ್ಕಾಗಿ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಧರಣಿ ಯಾಕೆ?: ಹುಬ್ಬಳ್ಳಿ ಮೂಲದ ಗೀತಾ, ಹರಿಹರದ ಗೋವಿಂದ ಎಂಬವರನ್ನ 8 ವರ್ಷದ ಹಿಂದೆ ವಿವಾಹ ಆಗಿದ್ದರು. ಬಳಿಕ ಮನೆಯವರ ಕಿರುಕುಳ ತಾಳಲಾರದೇ ತವರು ಮನೆಗೆ ಹೋಗಿದ್ರು. ಅಲ್ಲದೆ ಗಂಡನ ಮೇಲೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಆದ್ರೆ ಇದೀಗ ತಮ್ಮ ಮಗುವಿನ ಭವಿಷ್ಯದ ದೃಷ್ಠಿಯಿಂದ ತನಗೆ ಪತಿ ಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಹೀಗಾಗಿ ಇಂದು ಬೆಳಗ್ಗೆಯಿಂದ ಗಂಡನ ಮನೆಯ ಮುಂದೆ ಮಗಳ ಜೊತೆ ಧರಣಿ ಕುಳಿತುಕೊಂಡಿದ್ದಾರೆ. ಆದರೆ ಗಂಡನ ಮನೆಯವರು ಮಾತ್ರ ಯಾವುದಕ್ಕೂ ಲೆಕ್ಕ ಹಾಕುತ್ತಿಲ್ಲ. ಗೀತಾ ಪತಿ ಮಾತ್ರ ಬೆಳಗ್ಗೆಯಿಂದ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದು, ಯಾವುದಕ್ಕೂ ಸ್ಪಷ್ಟನೆ ನೀಡುತ್ತಿಲ್ಲ.

    ಗಂಡನ ಜೊತೆ ಜೀವನ ಮಾಡದೇ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಮನೆ ಮುಂದೆಯೇ ಮಗುವಿನ ಜೊತೆ ಕುಳಿತು ಗೀತಾ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

     

  • ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

    ಉಡುಪಿ: ಪತ್ನಿಗೆ ನ್ಯಾಯ ದೊರಕಿಸಿ ಎಂದ ಪೇದೆಗೆ ಸಸ್ಪೆಂಡ್ ಭಾಗ್ಯ!

    ಉಡುಪಿ: ಉಡುಪಿಯಲ್ಲಿ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕಾಶ್ ಅವರ ಗರ್ಭಿಣಿ ಪತ್ನಿ ಜೊತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪಿ ಕುಮಾರ್ ಗೆ ಪೊಲೀಸರು ಬೆಂಬಲವಾಗಿ ನಿಂತಿರುವ ಆರೋಪ ಕೇಳಿ ಬಂದಿದೆ.

    ನಡೆದಿದ್ದೇನು?:  ಏಪ್ರಿಲ್ 5 ರಂದು ಮಲ್ಪೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕಾಶ್ ಪತ್ನಿ ಜ್ಯೋತಿ ಗರ್ಭಿಣಿಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಮೆಡಿಕಲೊಂದರ ಸಮೀಪದಲ್ಲಿ ಕುಮಾರ್ ಎಂಬ ಯುವಕ ಕಣ್ಣೊಡೆದು ಮೈತಟ್ಟುವ ಮೂಲಕ ಕಿರುಕುಳ ನೀಡಿದ್ದನು. ಇದನ್ನು ಪ್ರಶ್ನಿಸಿದ ಪ್ರಕಾಶ್ ಆತನಿಗೆ ಎರಡೇಟು ಕೊಟ್ಟಿದ್ದರು. ಅಲ್ಲದೇ ಪತ್ನಿಯ ಮೇಲೆ ಕಿರುಕುಳ ನೀಡಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದಾಗ ಪುಂಡಾಟಿಕೆ ಮಾಡಿದ ಯುವಕ ಕುಮಾರ್ ಮೇಲೆ ಕೇಸು ದಾಖಲಿಸದಂತೆ ರಾಜಕೀಯ ನಾಯಕರ ಒತ್ತಡ ತರಲಾಗಿದೆ ಎಂದು ತಿಳಿದು ಬಂದಿದೆ.

    ಆರೋಪಿ ಕುಮಾರ್

    ಕಿರುಕುಳ ನೀಡಿದ ಯುವಕನಿಗೆ ಪೊಲೀಸ್ ಬೆಂಬಲ?: ಆರೋಪಿ ಕುಮಾರ್, ಉಡುಪಿ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಫಿಶ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದಾನೆ. ಮಧ್ವರಾಜ್ ಒಡೆತನದ ರಾಜ್ ಫಿಶ್ ಮಿಲ್ ನೌಕರನಾಗಿರೋ ಕುಮಾರ್ ಘಟನೆಯ ಬಗ್ಗೆ ಸಚಿವರ ಪತ್ನಿ ಬಳಿ ದೂರು ನೀಡಿದ್ದನಂತೆ. ಅಂತೆಯೇ ಪತಿ ಪ್ರಮೋದ್ ಮಧ್ವರಾಜ್ ಗೆ ಪತ್ನಿ ದೂರು ನೀಡಿದ್ದಾರೆ.

    ಪೇದೆ ಸಸ್ಪೆಂಡ್: ಇತ್ತ ತಮ್ಮ ಪತ್ನಿಗೆ ಕಿರುಕುಳ ನೀಡಿದ ಆರೋಪಿ ಕುಮಾರ್ ವಿರುದ್ಧ ಪ್ರಕಾಶ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡಿದ್ದಾರೆ. ಮಲ್ಪೆ ಠಾಣೆಯ ಕಾನ್‍ಸ್ಟೇಬಲ್ ಪ್ರಕಾಶ್‍ರನ್ನು ಅಮಾನತು ಮಾಡಿಸಿದ್ದಾರೆ. ಈ ಬಗ್ಗೆ ಪತ್ನಿ ಜ್ಯೋತಿ ಉಡುಪಿ ನಗರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದ್ರೆ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ನಮಗೆ ಗೊತ್ತೇ ಇಲ್ಲ. ಏನಿದು ಪ್ರಕರಣ ಅನ್ನೋ ಉತ್ತರ ನೀಡುತ್ತಿದ್ದಾರೆ ಅಂತಾ ಹೇಳಲಾಗಿದೆ.

    ಹಲ್ಲೆ ಸರಿಯಲ್ಲ: ನಮ್ಮ ಕಂಪನಿಯ ಕಾರ್ಮಿಕನ ಮೇಲೆ ಪೇದೆ ಹಲ್ಲೆ ನಡೆಸಿದ್ದು ಸರಿಯಲ್ಲ. ಹಲ್ಲೆಯಿಂದಾಗಿ ಕಂಪನಿಯ ಟ್ರ್ಯಾಕ್ಟರ್ ಚಾಲಕ ಕುಮಾರ್ ಬೆನ್ನು ಮೂಳೆಗೆ ಪೆಟ್ಟಾಗಿದೆ. ಪೊಲೀಸರು ಆ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಸಸ್ಪೆಂಡ್ ಮಾಡಿದ ಮೇಲೆ ಪೇದೆ ಪತ್ನಿ ಕಂಪ್ಲೆಂಟ್ ಮಾಡಿರಬಹುದು. ಚಾಲಕ ಕುಮಾರ್ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ನಾವು ನಮ್ಮ ಕಂಪನಿಯಿಂದಲೇ ಆತನ ಪರವಾಗಿ ದೂರು ನೀಡಿದ್ದೇವೆ ಅಂತಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

  • ದಾವಣಗೆರೆಯಲ್ಲಿ ಎಸಿ, ತಹಶೀಲ್ದಾರ್ ಹತ್ಯೆಗೆ ಯತ್ನ

    ದಾವಣಗೆರೆಯಲ್ಲಿ ಎಸಿ, ತಹಶೀಲ್ದಾರ್ ಹತ್ಯೆಗೆ ಯತ್ನ

    ದಾವಣಗೆರೆ: ದಾವಣಗೆರೆಯಲ್ಲಿ ಎಸಿ ಹಾಗೂ ತಹಶೀಲ್ದಾರ್ ಕೊಲೆಗೆ ಯತ್ನ ನಡೆದಿದೆ.

    ದಾವಣಗೆರೆ ತಾಲೂಕಿನ ಹಳೇ ಬಾತಿಯ ದರ್ಗಾ ಬಳಿ ಇರುವ ಉಮಾಪತಿ ಎಂಬವರ ದಾಸ್ತಾನು ಮಳಿಗೆ ಮೇಲೆ ಇಂದು ಅಧಿಕಾರಿಗಳು ನಡೆಸಿದ್ರು. ಈ ವೇಳೆ ಅಕ್ರಮ ಪಡಿತರ ದಾಸ್ತಾನು ವಶಕ್ಕೆ ಮುಂದಾದ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಹಾಗೂ ತಹಸೀಲ್ದಾರ್ ಸಂತೋಷ್ ಅವರ ಮೇಲೆ ಕಿಡಿಗೇಡಿಗಳು ಟೆಂಪೋ ಹತ್ತಿಸಲು ಮುಂದಾಗಿದ್ದರು. ಅಲ್ಲದೆ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ರು. ಇದೇ ವೇಳೆ ಅಧಿಕಾರಿಗಳ ಹಾಗೂ ದಾಸ್ತಾನು ಮಾಲೀಕರ ಜೊತೆ ಮಾತಿನ ಚಕಮಕಿಯೂ ನಡೆದಿದೆ.

    ಅಲ್ಲದೆ ಮಾಧ್ಯಮಗಳನ್ನು ಕಂಡು ಕಿಡಿಗೇಡಿಗಳಿಂದ ಹೊಸ ನಾಟಕವಾಡಿದ್ರು. ಅಧಿಕಾರಿಗಳು 5 ಲಕ್ಷ ಲಂಚ ಕೇಳಿದ್ರು. ನಾನು 50 ಸಾವಿರ ಕೊಡೋಕೆ ಹೋದೆ. ಮಾಧ್ಯಮದವರೇ ನೋಡಿ, ವಿಡಿಯೋ ಮಾಡ್ಕೊಳ್ಳಿ. ಅಧಿಕಾರಿಗಳು ಲಂಚ ಕೇಳ್ತಿದ್ದಾರೆ ಅಂತ ನಾಟಕವಾಡಿದ್ರು. ಘಟನೆ ಸಂಬಂಧ ಪೆÇಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

    ಏಪ್ರಿಲ್ 2 ರಂದು ರಾತ್ರಿ ಉಡುಪಿಯಲ್ಲಿ ಉವಿಭಾಗಾಧಿಕಾರಿ ಜೊತೆ ಸೇರಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಮರಳು ಮಾಫಿಯಾ ಕಾಯಾಚರಣೆಗೆ ಹೋಗಿದ್ದಾಗ ಅವರ ಮೇಲೆ ಕೊಲೆ ಯತ್ನ ನಡೆದಿತ್ತು.

    ಇದನ್ನೂ ಓದಿ: ಉಡುಪಿಯಲ್ಲಿ ಮರಳು ಮಾಫಿಯಾ ಅಟ್ಟಹಾಸ: ಡಿಸಿ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು

     

  • ಅಪಘಾತದಲ್ಲಿ ರೈತ ಸಾವು ಎಂದು ದಾಖಲಾಗಿದ್ದ ಕೇಸ್‍ಗೆ ಟ್ವಿಸ್ಟ್- ಕೊಲೆ ಎಂದು ಗೊತ್ತಾಗಿದ್ದು ಹೀಗೆ

    ಅಪಘಾತದಲ್ಲಿ ರೈತ ಸಾವು ಎಂದು ದಾಖಲಾಗಿದ್ದ ಕೇಸ್‍ಗೆ ಟ್ವಿಸ್ಟ್- ಕೊಲೆ ಎಂದು ಗೊತ್ತಾಗಿದ್ದು ಹೀಗೆ

    ರಾಯಚೂರು: ಆಕ್ಸಿಡೆಂಟ್ ಕೇಸೊಂದು ಪೊಲೀಸರ ಸಮಯೋಚಿತ ತನಿಖೆಯಿಂದಾಗಿ ಮರ್ಡರ್ ಎಂದು ಸಾಬೀತಾಗಿದೆ. ನೀರಿನ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಜಮೀನಿಗೆ ನೀರು ಬಿಡುತ್ತಿಲ್ಲ ಅಂತ ಜಗಳ ತೆಗೆದು ರೈತನನ್ನ ಕೊಲೆ ಮಾಡಿರುವ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಎನ್ ಗಣೇಕಲ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    40 ವರ್ಷದ ಮಹೇಶ್ ಕೊಲೆಯಾಗಿರುವ ರೈತ. ಮಹೇಶ್ ಅವರ ಪಕ್ಕದ ಜಮೀನಿನ ರೈತ ಆಂಜಿನಪ್ಪ ಕೊಲೆ ಆರೋಪಿ. ನಾರಾಯಣಪುರ ಬಲದಂಡೆ ಕಾಲುವೆ ನೀರಿಗಾಗಿ ಇವರಿಬ್ಬರ ಮಧ್ಯೆ ಹಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಏಪ್ರಿಲ್ 4ರಂದು ಜಗಳ ವಿಪರೀತ ಮಟ್ಟಕ್ಕೆ ಹೋಗಿ ದೊಣ್ಣೆಯಿಂದ ಹೊಡೆದು ಮಹೇಶ್‍ನನ್ನ ಕೊಲೆ ಮಾಡಿದ್ದ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿ ಆಂಜಿನಪ್ಪ ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ್ದ. ಬೈಕ್ ಅಪಘಾತದಲ್ಲಿ ಮಹೇಶ್ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆದ್ರೆ ಗಬ್ಬೂರು ಠಾಣೆಯ ಪೊಲೀಸರು ಮಹೇಶನ ಮೈಮೇಲಿನ ಗಾಯದ ಗುರುತುಗಳಿಂದ ಅನುಮಾನಗೊಂಡು ತನಿಖೆ ನಡೆಸಿದಾಗ ಆಂಜಿನಪ್ಪ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಅಂಜಿಪ್ಪನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

     

  • ಕ್ಯಾಂಟರ್, ಬೈಕ್ ಡಿಕ್ಕಿ: ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ

    ಕ್ಯಾಂಟರ್, ಬೈಕ್ ಡಿಕ್ಕಿ: ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ

    ಮಂಡ್ಯ: ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಣ್ಣೇಕೊಪ್ಪಲು ಗ್ರಾಮದ ಗೇಟ್ ಬಳಿ ನಡೆದಿದೆ.

    ರಾಮನಗರ ಮೂಲದ 25 ವರ್ಷದ ಉದ್ದೀನ್ ಲಡ್ಡು ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ. ಇನ್ನು ಬೈಕ್ ಹಿಂಬದಿ ಸವಾರ ಲೋಹಿತ್ ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್ ಕೊಳ್ಳೆಗಾಲದಿಂದ ಮುತ್ತತ್ತಿ ಕಡೆಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಕ್ಯಾಂಟರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

    ಅಪಘಾತಕ್ಕೆ ಕ್ಯಾಂಟರ್ ಹಾಗೂ ಬೈಕ್ ಚಾಲಕರ ಅತಿಯಾದ ವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ತುಮಕೂರು: ಬಾರ್ ಬೀಗ ಮುರಿದು ಕಳ್ಳತನ- ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ತುಮಕೂರು: ಬಾರ್ ಬೀಗ ಮುರಿದು ಕಳ್ಳತನ- ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    – ಕಲಬುರಗಿಯ ದಾಲ್ ಮಿಲ್‍ನಲ್ಲಿ ಕಳ್ಳರ ಕಾಟ

    ತುಮಕೂರು/ಕಲಬುರಗಿ: ಕುದುರೆ ಗಾಡಿಯಲ್ಲಿ ಬಂದ ನಾಲ್ಕು ಜನ ಕಳ್ಳರ ಗುಂಪು ತುಮಕೂರಿನ ಬಾರ್ ವೊಂದರ ಬೀಗ ಮುರಿದು ಕಳ್ಳತನ ಮಾಡಿದೆ. ತುಮಕೂರಿನ ಹನುಮಂತಪುರದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಕಿಂಗ್ಸ್ ಕಾಟೇಜ್ ಬಾರ್ ನಲ್ಲಿ ಕಳ್ಳತನ ನಡೆದಿದೆ.

    ಅಂಗಡಿಯಲ್ಲಿ ದುಬಾರಿ ಬೆಲೆಯ ಡ್ರಿಂಕ್ಸ್, ಟಿವಿ, ಡಿವಿಡಿ, ಜೊತೆಗೆ 30 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಕಳ್ಳರು ಕುದುರೆ ಗಾಡಿಯಲ್ಲಿ ಬಂದು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

    ಕಲಬುರಗಿ ದಾಲ್ ಮಿಲ್ ಮಾಲೀಕರು ಕಳೆದ ಕೆಲ ವರ್ಷಗಳಿಂದ ಕಳ್ಳರ ಹಾವಳಿಯಿಂದ ಕಂಗೆಟ್ಟಿದ್ದಾರೆ. ಇದೀಗ ಮತ್ತೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಕಪನೂರ ಇಂಡಸ್ಟ್ರೀಸ್‍ನ ಸಂಗಾಪುರಿ ಪಲ್ಸಸ್, ಲಕ್ಷ್ಮೀ ದಾಲ್ ಮಿಲ್ ಸೇರಿದಂತೆ ಒಟ್ಟು 4 ದಾಲ್ ಮಿಲ್‍ಗಳಲ್ಲಿ ಇದೀಗ ಮತ್ತೆ ಕಳ್ಳತನವಾಗಿವೆ. ಏಪ್ರಿಲ್ 4 ಮತ್ತು ಏಪ್ರಿಲ್ 6ರ ಮಧ್ಯರಾತ್ರಿ ಈ ಘಟನೆ ನಡೆದಿದೆ.

    ಕಳೆದ ಎರಡು ವರ್ಷದಿಂದ ನಿರಂತರ ಕಳ್ಳತನ ನಡೆಯುತ್ತಿರುವ ಕಾರಣ ಔಟ್ ಪೊಲೀಸ್ ಚೆಕ್ ಪೋಸ್ಟ್ ಮಾಡಲಾಗಿದೆ. ಆದರೆ ಕಳ್ಳರ ಹಾವಳಿ ಮಾತ್ರ ನಿರಂತರವಾಗಿ ನಡೆಯುತ್ತಿರುವ ಕಾರಣ ದಾಲ್ ಮಿಲ್ ಮಾಲೀಕರ ನಿದ್ದೆಗೆಡಿಸಿದೆ. ಈ ಸಂಬಂಧ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=uclcQMMwub4

    https://www.youtube.com/watch?v=ahATmkxzXa8

  • ಗುಂಡ್ಲುಪೇಟೆ ಬೈ ಎಲೆಕ್ಷನ್: ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟುಗಳು!

    ಗುಂಡ್ಲುಪೇಟೆ ಬೈ ಎಲೆಕ್ಷನ್: ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟುಗಳು!

    – ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರಿಂದ ಹಲ್ಲೆ ಆರೋಪ

    ಚಾಮರಾಜನಗರ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಹಣವಿರುವುದುನ್ನು ಪತ್ತೆ ಮಾಡಿದ ಬಿಜೆಪಿ ಕಾರ್ಯಕರ್ತರು ಓರ್ವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

    ಮನೋಜ್ ಬಂಧಿತ ಆರೋಪಿ. ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂದೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಹಣವಿರುವ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಮಾಹಿತಿ ಸಿಕ್ಕಿತ್ತು.

    ಕೂಡಲೇ ಕಾರ್ಯಕರ್ತರು ಕಾರಿನ ಬಳಿ ತೆರಳಿದಾಗ 2 ಸಾವಿರದ 20 ಕಂತೆ ಕಾರಿನಲ್ಲಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಕಾರಿನಲ್ಲಿ ಒಟ್ಟು 4 ಜನ ಇದ್ರು. ಅದರಲ್ಲಿ ಮೂವರು ಓಡಿ ಹೋಗಿದ್ದಾರೆ. ಮನೋಜ್‍ನನ್ನು ಕಾರ್ಯಕರ್ತರು ಹಿಡಿದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ನಗರ ಪೊಲೀಸರು ಕಾರನ್ನು ಬಚಾವ್ ಮಾಡಲು ಯತ್ನಿಸಿದ್ದಾರೆ. ಆದ್ರೆ ಬಿಜೆಪಿ ಕಾರ್ಯಕರ್ತರು ಮನೋಜ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದ್ರೆ ಈ ಹಣ ಕಾಂಗ್ರೆಸ್ ನವರದ್ದು ಅಂತಾ ಆರೋಪ ವ್ಯಕ್ತವಾಗುತ್ತಿದೆ.

    ಪೋಲಿಸರಿಂದ ಹಲ್ಲೆ: ಮನೋಜ್‍ನನ್ನು ಪೊಲೀಸರಿಗೆ ಹಿಡಿದು ಕೊಟ್ಟ ಬಿಜೆಪಿ ಕಾರ್ಯಕರ್ತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

    ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸ್ ಪೇದೆ ಮಲ್ಲು ಮತ್ತು ವೆಂಕಟೇಶ್ ಬಿಜೆಪಿ ಕಾರ್ಯಕರ್ತ ಚಂದ್ರು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟ ಬಳಿಕ ಪೊಲೀಸರು ಆರೋಪಿ ವಿರುದ್ಧ ನಾಲ್ಕೂವರೆ ಲಕ್ಷ ರೂ. ಬದಲು ಕೇವಲ 12, 500 ರೂ. ಅಂತಾ ಬರೆದುಕೊಂಡಿದ್ದರು. ಇದನ್ನು ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಪೊಲೀಸ್ ಪೇದೆಯೊಬ್ಬರು ಮೊಬೈಲ್ ಕಸಿದು ವೀಡಿಯೋ ಡಿಲಿಟ್ ಮಾಡಿ ಬಳಿಕ ಹಲ್ಲೆ ಮಾಡಿದ್ದಾರೆ. ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗುರುವಾರ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕರ್ತರಿಗೆ ವಿಡಿಯೋ ಹಂಚಿಕೆ ಮಾಡುತ್ತಿರುವ ವಿಡಿಯೋವನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

    https://www.youtube.com/watch?v=WprObSX324k

     

  • 1 ಮೆಸೇಜ್‍ನಿಂದ 6 ಜಿಲ್ಲೆಯ ಪೊಲೀಸರು ಹುಡುಕ್ತಿದ್ದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾದಳು!

    1 ಮೆಸೇಜ್‍ನಿಂದ 6 ಜಿಲ್ಲೆಯ ಪೊಲೀಸರು ಹುಡುಕ್ತಿದ್ದ ಬಾಲಕಿ ಬೆಂಗಳೂರಿನಲ್ಲಿ ಪತ್ತೆಯಾದಳು!

    ಬೆಂಗಳೂರು: ಕೊಡಗಿನ ವಿರಾಜಪೇಟೆಯಿಂದ ಮನೆಬಿಟ್ಟು ತೆರಳಿದ್ದ ಬಾಲಕಿ ದೀಕ್ಷಿತಾ ಬೆಂಗಳೂರಿನ ಬಾಗಲಕುಂಟೆಯ ಪಿಜಿಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.

    ಎಟಿಎಂ  ಮತ್ತು ಮೊಬೈಲ್ ನಂಬರ್ ಆಧಾರಿಸಿ ವಿರಾಜಪೇಟೆ ಪೊಲೀಸರು ಮತ್ತು ಮಾವ ಹರೀಶ್ ದೀಕ್ಷಿತಾಳನ್ನು ಪತ್ತೆ ಮಾಡಿದ್ದಾರೆ.

    ಸಿಕ್ಕಿದ್ದು ಹೇಗೆ?
    ಪ್ರಥಮ ಪಿಯುಸಿ ಫೇಲ್ ಆದ ಹಿನ್ನೆಲೆ ಮನೆ ಬಿಟ್ಟು ತೆರಳಿದ್ದ ಬಾಲಕಿ ಆಲ್ಟೋ ಕಾರ್‍ನಲ್ಲಿ ಮೂರು ದಿನಗಳಿಂದ ಮೈಸೂರು, ಮಂಡ್ಯ, ತುಮಕೂರು, ಶಿರಾ ಸುತ್ತಾಡಿ ಬೆಂಗಳೂರು ತಲುಪಿದ್ದಳು. ಬುಧವಾರ ಜಾಲಹಳ್ಳಿ ಕ್ರಾಸ್‍ನ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ಹಣವನ್ನು ದೀಕ್ಷಿತಾ ಡ್ರಾ ಮಾಡಿದ್ದಳು. ಎಟಿಎಂನಲ್ಲಿ ಹಣ ಡ್ರಾ ಮಾಡಿದ ಮೆಸೇಜ್ ಬ್ಯಾಂಕ್‍ಗೆ ಹೋಗಿತ್ತು. ಅಷ್ಟೇ ಅಲ್ಲದೇ ಬುಧವಾರ ದೀಕ್ಷಿತಾ ತಂದೆಯಾಗಿರುವ ಸುರೇಶ್ ಅವರ ಮೊಬೈಲ್‍ಗೆ ಬಾಗಲಕುಂಟೆ ವ್ಯಾಪ್ತಿಯಿಂದ ಮಿಸ್ ಕಾಲ್ ಬಂದಿತ್ತು. ಈ ಕರೆ ಬಂದ ಜಾಗದಲ್ಲಿ ಎಲ್ಲ ಜಡೆ ಹುಡುಕಾಡಿದಾಗ ಒಂದು ಕಡೆ ಕಾರು ನಿಂತುಕೊಂಡಿರುವುದು ಕಾಣಿಸಿತ್ತು. ಕಾರು ನಿಂತಿರುವುದನ್ನು ನೋಡಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳಲ್ಲಿ ಸುರೇಶ್ ವಿಚಾರಿಸಿದಾಗ ಇಲ್ಲಿ ಒಬ್ಬಳು ಹುಡುಗಿ ನಿನ್ನೆ ಬಂದಿದ್ದಾಳೆ. ಮೇಲುಗಡೆ ಇರುವ ಪಿಜಿಯಲ್ಲಿ ಇದ್ದಾಳೆ ಎಂದು ತಿಳಿಸಿದ್ದಾರೆ.

    ಇದಾದ ಬಳಿಕ ಮಾವ ಮತ್ತು ಪೊಲೀಸರು ಪಿಜಿ ಮಾಲೀಕರಿಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ತೋರಿಸಿ ಮನವರಿಕೆ ಮಾಡಿಕೊಟ್ಟ ಬಳಿಕ ದೀಕ್ಷಿತಾ ಪತ್ತೆಯಾಗಿದ್ದಾಳೆ. ಮಾವ ಹರೀಶ್ ಅವರನ್ನು ನೋಡಿದ ದೀಕ್ಷಿತಾ ಗಾಬರಿಯಾಗಿದ್ದು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋಗಲು ಈಗ ಸಿದ್ಧತೆಗಳು ನಡೆದಿದೆ.

    ಏನಿದು ಪ್ರಕರಣ?
    ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಸುರೇಶ್ ಎಂಬುವವರ ಮಗಳು ದೀಕ್ಷಿತಾ(17) 4 ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ತಂದೆ ಮಗಳನ್ನು ಹೋಟೆಲ್ ಹೋಗೋಣ ಬಾ ಎಂದು ಕರೆದಿದ್ದರು. ಆದ್ರೆ ತಂದೆಯೊಂದಿಗೆ ಹೋಗದ ದೀಕ್ಷಿತಾ, ‘ನೀನು ಬೈಕ್ ನಲ್ಲಿ ಹೋಗು ನಾನು ಮತ್ತೆ ಬರುತ್ತೇನೆ’ ಎಂದು ಹೇಳಿದ್ದಳು.

    ಮಗಳ ಮಾತು ಕೇಳಿ ಸುರೇಶ್ ಬೈಕ್ ನಲ್ಲಿ ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಈಕೆ ಮನೆಯಲ್ಲಿದ್ದ ತಂದೆಯ ಎಟಿಎಂ ಕಾರ್ಡ್ ತೆಗೆದುಕೊಂಡು ಕೆ.ಎ.02 ಝೆಡ್ 3394 ನೋಂದಣಿಯ ಆಲ್ಟೊ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಳು.

    ಇತ್ತ ದೀಕ್ಷಿತಾ ಮನೆ ಬಿಟ್ಟು ಹೋಗಿದ್ದಾಳೆಂದು ತಿಳಿದ ಪೋಷಕರು ಹುಡುಕಾಟಕ್ಕೆ ಆರಂಭಿಸಿದ್ದರು. ಪೋಷಕರು ಗೋಣಿಕೊಪ್ಪ ಮಾರ್ಗವಾಗಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದಾರೆ. ಆದರೆ ದೀಕ್ಷಿತಾ ಬಗ್ಗೆ ಸುಳಿವು ಸಿಕ್ಕದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ದೀಕ್ಷಿತಾಳ ಪತ್ತೆ ಕಾರ್ಯ ಆರಂಭಿಸಿದ್ದರು.

    ಬುಧವಾರ ಬೆಳಗ್ಗೆ ಮಂಡ್ಯ ರಾಮನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿನಿ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದ  ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ದೀಕ್ಷಿತಾ ಪತ್ತೆಗಾಗಿ 6 ಜಿಲ್ಲೆಯ ಪೋಲಿಸರು ಹುಡುಕಾಟ ನಡೆಸುತ್ತಿದ್ದರು.

  • ಗಂಡ-ಹೆಂಡತಿ ಜಗಳದಲ್ಲಿ ಮೂಗು ತೂರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಮಾಜಿ ಸೈನಿಕ

    ಗಂಡ-ಹೆಂಡತಿ ಜಗಳದಲ್ಲಿ ಮೂಗು ತೂರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಮಾಜಿ ಸೈನಿಕ

    ರಾಮನಗರ: ಗಂಡ-ಹೆಂಡತಿ ಜಗಳದಲ್ಲಿ ಪದೇ ಪದೇ ಮೂಗು ತೂರಿಸಿ ಮಗಳ ಪರ ನಿಂತು ತನ್ನನ್ನು ನಿಂದಿಸ್ತಾ ಇದ್ದ ಅತ್ತೆಯನ್ನ ಮಾಜಿ ಸೈನಿಕನೊಬ್ಬ ಹತ್ಯೆ ಮಾಡಿದ್ದಾನೆ.

    ರಾಮನಗರ ತಾಲೂಕಿನ ಕೆಂಚನಕುಪ್ಪೆ ಗ್ರಾಮದಲ್ಲಿ ಬಿಎಸ್‍ಎಫ್ ಮಾಜಿ ಸೈನಿಕ ನಾಗರಾಜ್ ಅತ್ತೆ ಚಿಕ್ಕತಿಮ್ಮಮ್ಮ (65) ಅವರನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.

    ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿ ಗ್ರಾಮದವನಾದ ನಾಗರಾಜ್, ಬಿಎಸ್‍ಎಫ್ ನಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿಯಲ್ಲಿ ದೇಶ ಸೇವೆ ಮಾಡಿದ್ದ. ಮೂವತ್ತು ವರ್ಷಗಳ ಹಿಂದೆ ಮೃತಳ ಪುತ್ರಿ ಮಂಗಳಾ ಎಂಬುವವರನ್ನ ಮದುವೆಯಾಗಿದ್ದ. ದಂಪತಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ. ನಾಗರಾಜ್ ಕಳೆದ ಆರು ವರ್ಷಗಳಿಂದ ಕೆಂಚನಕುಪ್ಪೆ ಗ್ರಾಮದಲ್ಲಿಯೇ ನೆಲೆಸಿದ್ದನು.

    ಇತ್ತೀಚಿಗೆ ನಾಗರಾಜ್ ಸಂಸಾರದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಹೀಗೆ ವಾರದ ಹಿಂದೆ ಕೂಡ ಜಗಳ ನಡೆದಿತ್ತು. ಈ ಸಂಬಂಧ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಅಲ್ಲದೆ ನಿನ್ನೆ ರಾತ್ರಿ ಕೂಡ ಗಲಾಟೆ ನಡೆದು ಮಂಗಲಾ ತನ್ನ ತಾಯಿ ಮನೆ ಸೇರಿದ್ದರು. ಇದೇ ವಿಚಾರವಾಗಿ ಮಚ್ಚು ಹಿಡಿದು ಅತ್ತೆ ಮನೆ ಬಳಿ ಬಂದ ನಾಗರಾಜ್, ಪತ್ನಿ ಮಂಗಳರನ್ನ ಹುಡುಕಿದ್ದಾನೆ. ಈ ವೇಳೆ ನಾಗರಾಜ್ ಕೈಯಲ್ಲಿ ಮಚ್ಚು ಕಂಡ, ಅತ್ತೆ ಚಿಕ್ಕತಿಮ್ಮಮ್ಮ ನಾಗರಾಜ್ ನನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ನಾಗರಾಜ್ ಮಚ್ಚಿನಿಂದ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

    ಸ್ಥಳಕ್ಕೆ ಬಿಡದಿ ಠಾಣಾ ಪೊಲೀಸರು ಆಗಮಿಸಿಸದ್ದು, ನಾಗರಾಜ್ ನನ್ನು ಬಂಧಿಸಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.