Tag: police

  • ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಜೀವಂತ – ಮಾಹಿತಿ ಆಯೋಗದಿಂದ ಗೃಹ ಇಲಾಖೆಗೆ ನೋಟಿಸ್

    ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಜೀವಂತ – ಮಾಹಿತಿ ಆಯೋಗದಿಂದ ಗೃಹ ಇಲಾಖೆಗೆ ನೋಟಿಸ್

    ಬೆಂಗಳೂರು: ಶಿಸ್ತಿನ ಪೊಲೀಸ್ ಇಲಾಖೆಯಲ್ಲೇ ಅಶಿಸ್ತು ತಾಂಡವವಾಡ್ತಿದೆ. ಪೊಲೀಸ್ ಮಹಾನಿರ್ದೇಶಕರಿಂದ ಹಿಡಿದು ಇನ್ಸ್‍ಪೆಕ್ಟರ್ ಮನೆವರೆಗೂ ಪೊಲೀಸ್ ಜೀತದಾಳುಗಳಿದ್ದಾರೆ. ಬೆಳಗ್ಗೆ ಕಸ ಹೊಡೆಯೋದ್ರಿಂದ ಹಿಡಿದು ಹೆಂಡತಿ ಮಕ್ಕಳ ಬಟ್ಟೆ ಒಗೆಯೋಕು ಪೊಲೀಸ್ರೇ ಬೇಕು. ಕೇವಲ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ, ಸಚಿವ ಕೆ.ಜೆ ಜಾರ್ಜ್ ಮನೆಯಲ್ಲಿಯೇ ಪೊಲೀಸ್ ಜೀತದಾಳುಗಳಿದ್ದಾರೆ.

    ಮಾಹಿತಿ ಆಯೋಗವೇ ಕೇಳಿದ ಮಾಹಿತಿಯಲ್ಲಿ 100ಕ್ಕೂ ಹೆಚ್ಚು ಆರ್ಡರ್ಲಿ ಇದ್ದಾರೆ ಅಂತ ಸ್ವತಃ ಗೃಹ ಇಲಾಖೆಯೇ ಒಪ್ಪಿಕೊಂಡಿದೆ. ಈ ಸಂಬಂಧ ಗೃಹ ಇಲಾಖೆಗೆ ಮಾಹಿತಿ ಆಯೋಗ ನೊಟೀಸ್ ನೀಡಿದೆ. ಮಾಹಿತಿ ಆಯೋಗದ ಮುಖ್ಯ ಆಯುಕ್ತರು ನೋಟಿಸ್ ನೀಡಿದ್ದು, ಸರ್ಕಾರದ ಆದೇಶ ಪಾಲನೆ ಮಾಡಿ. ಆದೇಶ ಅನುಷ್ಠಾನಗೊಳಿಸಿ ಒಂದು ತಿಂಗಳೊಳಗೆ ವಾಸ್ತವ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ.

    ಶಿಸ್ತು ಪಾಲಿಸಬೇಕಾದ ಇಲಾಖೆಯಲ್ಲಿ ಅಶಿಸ್ತು ಇದೆ. ಆರ್ಡರ್ಲಿ ರದ್ದು ಮಾಡಿ ಸರ್ಕಾರ ಆದೇಶಿಸಿದೆ. ಆದರೂ ಮೌಖಿಕ ಆದೇಶದ ಮೂಲಕ ಆರ್ಡರ್ಲಿ ಪದ್ದತಿ ಮುಂದುವರಿದಿದೆ. ಇದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಮಾಹಿತಿ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

    ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಇಂದಿನಿಂದಲೇ ರಾಜ್ಯಾದ್ಯಂತ ಆರ್ಡರ್ಲಿ ಇರಲ್ಲ ಅಂತ ಹೇಳಿದ್ರು. ಈಗಾಗಲೇ ರಾಜ್ಯದಲ್ಲಿ ಮೂರು ಸಾವಿರ ಆರ್ಡರ್ಲಿ ಇದ್ದಾರೆ. ಅದಕ್ಕೆ ಇರುವ ಅಧಿಕಾರಿಗಳಿಗೆ ಬೇರೆಯವರ ನೇಮಕ ಮಾಡಿಕೊಡಲಾಗುತ್ತೆ. ಅವರನ್ನೆಲ್ಲಾ ಇನ್ಮುಂದೆ ಮುಕ್ತಿಗೊಳಿಸುತ್ತೇವೆ. ಸದ್ಯ ಪ್ರೋಸಸ್ ನಡೆಯುತ್ತಿದ್ದು, ಸದ್ಯದಲ್ಲೇ ಎಲ್ಲಾ ಆರ್ಡರ್ಲಿ ಇರಲ್ಲ ಅಂದ್ರು.

  • ಬೆಂಗಳೂರು ಗೋಶಾಲೆಯಲ್ಲಿ ಮೂಕಪ್ರಾಣಿಗಳ ಮಾರಣಹೋಮ

    ಬೆಂಗಳೂರು ಗೋಶಾಲೆಯಲ್ಲಿ ಮೂಕಪ್ರಾಣಿಗಳ ಮಾರಣಹೋಮ

    – ಗುಬ್ಬಿಯಲ್ಲಿ ರಾಸು ಬಿಡಿಸಿಕೊಳ್ಳೋಕೆ ಹೋದ್ರೆ ಟ್ರಸ್ಟಿಯಿಂದ  ಪೊಲೀಸರಿಗೆ ಧಮ್ಕಿ

    ತುಮಕೂರು: ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ನಡೆಸುತ್ತಿರುವ ಗೋ ಶಾಲೆಗಳಲ್ಲಿ ಜಾನುವಾರುಗಳ ಮೇಲೆ ನಿರಂತರ ದೌರ್ಜನ್ಯ ನಡೀತಿದೆ. ಮೇವು, ನೀರು, ಶುಚಿತ್ವ ಇಲ್ಲದೆ ನೂರಾರು ಮೂಕಪ್ರಾಣಿಗಳು ಬಲಿಯಾಗುತ್ತಿವೆ.

    ತುಮಕೂರು ಮತ್ತು ಬೆಂಗಳೂರಲ್ಲಿ ನಡೆದ ಈ ಘಟನೆ ನೋಡಿದ್ರೆ ಎಂಥವರಿಗೂ ಮರುಕ ಹುಟ್ಟದೇ ಇರದು. ಬೆಂಗಳೂರಿನ ಮಹಾದೇವಪುರದಲ್ಲಿರೋ ‘ಬೆಂಗಳೂರು ಗೋ ಶಾಲೆ’ ಯಲ್ಲಿ ಒಂದರ ಹಿಂದೆ ಒಂದರಂತೆ ಜಾನುವಾರುಗಳು ಸಾಯುತ್ತಿವೆ. ಮೂಕಪ್ರಾಣಿಗಳಿಗೆ ಸರಿಯಾದ ಚಿಕಿತ್ಸೆ ನೀಡದೇ ಸಾಯುತ್ತಿವೆ. ಸತ್ತ ದೇಹವನ್ನೂ ಕೂಡಾ ಕ್ರಮಬದ್ಧವಾಗಿ ಮಣ್ಣು ಮಾಡದೇ ಜಾನುವಾರುಗಳ ಮೃತದೇಹವನ್ನು ಒಂದರ ಮೇಲೆ ಒಂದು ರಾಶಿ ಹಾಕಿದ್ದನ್ನು ಕಂಡರೆ ನಿಜಕ್ಕೂ ಕರುಳು ಕಿತ್ತು ಬರುತ್ತದೆ.

    ಇನ್ನೊಂದೆಡೆ ಶುಕ್ರವಾರದಂದು ತುಮಕೂರು ಜಿಲ್ಲೆ ಗುಬ್ಬಿಯಲ್ಲಿದ್ದ ಧ್ಯಾನ್ ಗೋರಕ್ಷಣಾ ಟ್ರಸ್ಟ್ ನ ಗೋಶಾಲೆಯಲ್ಲಿ ರೈತರ ಹಸುಗಳನ್ನು ಬಿಡಿಸಿಕೊಡಲು ಹೋದಾಗ ಟ್ರಸ್ಟಿ ನಂಸಿನಿ ಮಟಾನಿ ಪೊಲೀಸರಿಗೇ ಆವಾಜ್ ಹಾಕಿದ್ದಾರೆ. ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತಿದ್ದಾರೆ ಎಂಬ ಆರೋಪದ ಮೇಲೆ 40 ಜಾನುವಾರುಗಳನ್ನು ವಶಕ್ಕೆ ಪಡೆದು ಈ ಗೋಶಾಲೆಗೆ ನೀಡಲಾಗಿತ್ತು. ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪೊಲೀಸರು ಗೋವುಗಳನ್ನು ಬಿಡಿಸಬೇಕಿತ್ತು. ಆದ್ರೆ ಗೋರಕ್ಷಕಿ ನಂದಿನಿ ಮಟಾನಿ ದುಡ್ಡು ಕೊಡದೇ ಇದ್ರೆ ಹಸುಗಳನ್ನು ಬಿಡಲ್ಲ ಎಂದು ಪೊಲೀಸರಿಗೇ ಆವಾಜ್ ಹಾಕಿದ್ದಾರೆ. ನಂತರ ಪೊಲೀಸರು ಬಂದ ದಾರಿಗೆ ಸುಂಕ ಇಲ್ಲದೆ ವಾಪಸ್ಸಾಗಿದ್ದಾರೆ.

    ಬೆಂಗಳೂರು ಮತ್ತು ಗುಬ್ಬಿಯಲ್ಲಿರುವ ಗೋಶಾಲೆ ಒಬ್ಬರೇ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಕೇಂದ್ರ ಸಚಿವರೊಬ್ಬರ ಬೆಂಬಲ ಇವರಿಗೆ ಇದೆ ಎಂದು ಹೇಳಲಾಗಿದೆ.

  • ಬಸ್ ಮತ್ತು ಬೈಕ್ ಡಿಕ್ಕಿ- ತಂದೆ ಸಾವು, ಮಗನಿಗೆ ಗಂಭೀರ ಗಾಯ

    ಬಸ್ ಮತ್ತು ಬೈಕ್ ಡಿಕ್ಕಿ- ತಂದೆ ಸಾವು, ಮಗನಿಗೆ ಗಂಭೀರ ಗಾಯ

    ಹಾವೇರಿ: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಬ್ರಿಡ್ಜ್ ಬಳಿ ನಡೆದಿದೆ.

    60 ವರ್ಷದ ಬಸಪ್ಪ ಮುದಿ ಸಾವನ್ನಪ್ಪಿದ್ದ ದುರ್ದೈವಿ. ಇನ್ನೂ ಬೈಕ್‍ನಲ್ಲಿದ್ದ ಬಸಪ್ಪರ ಮಗ ಗಣೇಶ್ (22) ಅವರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ರಾಣೇಬೆನ್ನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಣೇಶ್ ಬೈಕ್ ಚಲಾಯಿಸುತ್ತಿದ್ದರು. ಸಾರಿಗೆ ಬಸ್ ಬೆಂಗಳೂರಿನಿಂದ ಗದಗ ತೆರಳುತಿತ್ತು.

    ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮಗಳಿಗೆ ಮದುವೆ ಮಾಡಿಸಲು 19ರ ಹಿಂದೂ ಯುವಕನನ್ನ ಅಪಹರಿಸಿ, ಮುಂಜಿ ಮಾಡಿಸಲು ಮುಂದಾದ ತಂದೆ

    ಮಗಳಿಗೆ ಮದುವೆ ಮಾಡಿಸಲು 19ರ ಹಿಂದೂ ಯುವಕನನ್ನ ಅಪಹರಿಸಿ, ಮುಂಜಿ ಮಾಡಿಸಲು ಮುಂದಾದ ತಂದೆ

    ಮಂಡ್ಯ: ನಮ್ಮ ಮಗನನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲು ಹೊರಟಿದ್ದಾರೆ ಎಂದು ಪೋಷಕರು ಪೊಲೀಸ್ ಠಾಣೆ ಮಟ್ಟಿಲೇರಿರೋ ವಿಚಿತ್ರವಾದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಕೆ.ಶ್ರೀನಿವಾಸ್ ಎಂಬವರ ಮಗ ಚಂದನ್ ಮುಸ್ಲಿಂ ಧರ್ಮದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದ್ರಿಂದ ಹುಡುಗಿ ಮನೆಯವವರು ಚಂದನ್‍ನನ್ನ ಅಪಹರಿಸಿ ಮುಂಜಿ ಮಾಡವ ಮೂಲಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಯುವಕನ ತಂದೆ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ.

    ಯೂಸಫ್ ಅನ್ನೋ ವ್ಯಕ್ತಿ ತನ್ನ ಮಗಳ ಪ್ರೀತಿ ವಿಚಾರ ಇಟ್ಟುಕೊಂಡು ನನ್ನ ಮಗನಿಗೆ ಬಲವಂತವಾಗಿ ಮುಂಜಿ ಮಾಡಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಲು ಹೊರಟಿದ್ದಾರೆ. ನನ್ನ ಮಗನಿಗಿನ್ನೂ 19 ವರ್ಷ. ಕಾನೂನಿನ ಪ್ರಕಾರ ಆತನಿಗೆ ಮದುವೆ ಮಾಡಲು ಸಾಧ್ಯವಿಲ್ಲ. ಆದ್ರೂ ಕೂಡ ಇದನ್ನು ಲೆಕ್ಕಿಸದೆ ನನ್ನ ಮಗನನ್ನು ಅಪಹರಿಸಿದ್ದಾರೆ. ಆದ್ದರಿಂದ ನನ್ನ ಮಗನನ್ನ ರಕ್ಷಿಸಿ ಎಂದು ಚಂದನ್ ತಂದೆ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ

     

  • ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

    ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

    ಬೆಂಗಳೂರು: ಗಂಡನಿಗೆ ಪ್ಲೀಸ್ ಅಳ್ಬೇಡಿ, ನಾನು ಮನೆ ಬಿಟ್ಟು ಹೋಗ್ತಾಯಿದ್ದೀನಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಇಂದು ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ ಆಗಿದ್ದಾಳೆ.

    ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರದ ಬಳಿಕ ಶ್ರೀನಿವಾಸ ಅವರ ಪತ್ನಿ ಜ್ಯೋತಿ ಇಂದು ಮಗು ಸಹಿತ ಪೊಲೀಸ್ ಠಾಣೆಯಲ್ಲಿ ಕಾಣಿಕೊಂಡಿದ್ದು, ಈಗ ದಂಪತಿ ಒಂದಾಗಿದ್ದಾರೆ.

    ಹೋಗಿದ್ದು ಎಲ್ಲಿಗೆ?
    ನಾನು ಯಾರ ಜೊತೆನೂ ಓಡಿ ಹೋಗಿರಲಿಲ್ಲ. ನನ್ನ ಸಂಬಂಧಿಯಾಗಿರುವ ಸಕಲೇಶಪುರದ ತಿಮ್ಮಮ್ಮ ಎಂಬವರ ಮನೆಗೆ ಹೋಗಿದ್ದೆ. ಅಲ್ಲದೆ ನಾನು ಹಾಗೂ ನನ್ನ ಗಂಡನ ನಡುವೆ ಕೆಲ ಮನಸ್ತಾಪ ಬಂದಿದ್ದು ಜಗಳವಾಡಿ ಮನೆ ಬಿಟ್ಟು ಹೋಗಿದ್ದೆ ಎಂದು ಜ್ಯೋತಿ ತಿಳಿಸಿದ್ದಾರೆ.

    ಇಷ್ಟು ದಿನಗಳಿಂದ ನಾಪತ್ತೆಯಾಗಿದ್ದ ಪತ್ನಿ ಜ್ಯೋತಿ ಮತ್ತು ಮಗಳು ಮರಳಿ ಬಂದಿದ್ದಾರೆ. ಇದ್ರಿಂದ ಖುಷಿಯಾಗಿದೆ. ಮುಂದೆ ಇಬ್ಬರೂ ಚೆನ್ನಾಗಿ ಇರ್ತೀವಿ. ಯಾವುದೇ ಮನಸ್ತಾಪ ಬರದಂತೆ ಪತ್ನಿಯನ್ನು ನೋಡಿಕೊಳ್ತೇನೆ ಎಂದು ಶ್ರೀನಿವಾಸ ಹೇಳಿದ್ದಾರೆ.

    ಏನಿದು ಪ್ರಕರಣ?
    ಇಪ್ಪತ್ತು ದಿನದ ಹಿಂದೆ ಚನ್ನರಾಯಪಟ್ಟಣದ ಪ್ಲವರ್ ಡೆಕೊರೇಟ್ ಕೆಲಸ ಮಾಡುವ ನಾಗರಾಜು ತನ್ನ ಪತ್ನಿಯ ಜ್ಯೋತಿಯ ತಲೆಕೆಡಿಸಿ, ತನ್ನ ಹೆಂಡತಿ ಮಗುವಿನ ಜೊತೆ ನಾಪತ್ತೆಯಾಗಿದ್ದಾನೆ ಎಂದು ಪತಿ ಶ್ರೀನಿವಾಸ್ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಮನೆಯಿಂದ ಹೋಗುವ ಮುನ್ನ ಪತ್ನಿ ಜ್ಯೋತಿ ಗಂಡನಿಗೆ ಕಡೆಯ ಬಾರಿ ಪ್ರೀತಿಯ ಲೆಟರ್ ಬರೆದಿದ್ದು, “ನಿಮ್ಮನ್ನ ಬಿಟ್ಟು ಹೋಗುತ್ತಿದ್ದೇನೆ sorry ಪ್ಲೀಸ್ ಅಳ್ಬೇಡಿ” ಎಂದು ಬರೆದಿದ್ದಾಳೆ. ಅಲ್ಲದೇ ಮನೆಯಲ್ಲಿದ್ದ ಬಿಡಿಗಾಸು, ಒಡವೆ ಸೇರಿದಂತೆ ಅಡುಗೆ ಮಾಡಲು ತಂದಿದ್ದ ತರಕಾರಿ ಸಾಂಬಾರು ಪದಾರ್ಥಗಳನ್ನೆಲ್ಲ ಎತ್ತಿಕೊಂಡು ಹೋಗಿದ್ದಾಳೆ ಎಂದು ಪತಿ ಶ್ರೀನಿವಾಸ್ ಹೇಳಿದ್ದರು.

    ಐದು ವರ್ಷದ ಹಿಂದೆ ಮಂಡ್ಯ ಮೂಲದ ಶ್ರೀನಿವಾಸ್, ಚನ್ನರಾಯಪಟ್ಟಣದ ಜ್ಯೋತಿ ಎಂಬುವವರು ಪ್ರೀತಿಸಿ ಮದುವೆಯಾಗಿದ್ದರು. ಬೆಂಗಳೂರಿನ ಪೀಣ್ಯಾದ ಗಾರ್ಮೆಂಟ್ಸ್ ನಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾಗ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾಗಿದ್ದರು. ಪತಿ ಶ್ರೀನಿವಾಸ್ ತನ್ನ ಪತ್ನಿಯನ್ನು ಪ್ರತಿನಿತ್ಯ ತಾನೇ ಕೈಯಾರ ಅಡುಗೆ ಮಾಡಿ ಕೈತ್ತುತ್ತು ತಿನ್ನಿಸುತಿದ್ದರು. ಹೆಂಡತಿಯ ಕೈಕಾಲು ಒತ್ತೋದು, ಆಕೆಯ ಬಟ್ಟೆ ಒಗೆಯೊದು, ನಂತರ ತಾನೇ ಆಕೆಯ ತಲೆ ಬಾಚಿ ಶೃಂಗಾರ ಮಾಡಿ ಸ್ನೋ ಪೌಡರ್ ಹಾಕಿ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ಬಡವನಾದ್ರು ಸುಖಃದಲ್ಲಿಯೇ ಪ್ರೀತಿಸುತಿದ್ದರು.

    ಹೆಂಡತಿ ಹಾಗೂ ಮುದ್ದಾದ ನಾಲ್ಕು ವರ್ಷದ ಹೆಣ್ಣು ಮಗು ನೋಡದಿರುವ ಶ್ರೀನಿವಾಸ್ ಫೋಟೋ ಹಿಡಿದುಕೊಂಡು ಇಬ್ಬರ ಪತ್ತೆಗಾಗಿ ಬೀದಿಬೀದಿ ಸುತ್ತುತಿದ್ದರು. ಅಲ್ಲದೆ ಕ್ಯಾಮೆರಾ ಮುಂದೆ ಆಗಿದೆಲ್ಲ ಆಗಿದೆ ಪ್ಲೀಸ್ ಮನೆಗೆ ಬಾ ಎಂದು ಕಣ್ಣೀರಿಟ್ಟಿದ್ದರು.

     

  • ಲಾರಿ-ಕಾರು ಡಿಕ್ಕಿ: ಕಾರು ಚಾಲಕ ಸ್ಥಳದಲ್ಲಿಯೇ ಸಾವು

    ಲಾರಿ-ಕಾರು ಡಿಕ್ಕಿ: ಕಾರು ಚಾಲಕ ಸ್ಥಳದಲ್ಲಿಯೇ ಸಾವು

    ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಬಳಿ ಲಾರಿ-ಕಾರು ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುರಪುರ ನಗರದ ರಂಗಂಪೇಟೆಯ ನಿವಾಸಿ ಸಿದ್ದಾರ್ಥ ಎತ್ತಿನಮನಿ (28) ಮೃತಪಟ್ಟ ಚಾಲಕ. ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದ್ದು ಸಿದ್ದಾರ್ಥ ಸಾವನ್ನಪ್ಪಿದ್ದಾರೆ. ಘಟನೆ ನಂತರ ಲಾರಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.

    ಈ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ

    ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ದಾಳಿ

    ಹಾವೇರಿ: ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಚಿರತೆ ಎರಗಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದ ಬಳಿ ನಡೆದಿದೆ.

    ಶೇಖಪ್ಪ ಕಮಟಳ್ಳಿ (40) ಗಾಯಗೊಂಡ ರೈತ. ಜಮೀನಿಗೆ ನೀರು ಹಾಯಿಸಲು ತೆರಳುತ್ತಿದ್ದ ವೇಳೆ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದ್ದು, ಕಾಲು ಮತ್ತು ಮೈ, ಕೈಗೆ ಪರಚಿ ಗಾಯ ಮಾಡಿದೆ. ಶೇಕಪ್ಪ ಅವರನ್ನು ಈಗ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮದ ಬಳಿಯೇ ಚಿರತೆಗಳು ಬಿಡಾರ ಹೂಡಿವೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಮೂರು ಚಿರತೆಗಳು ಬೋನಿಗೆ ಬಿದ್ದಿವೆ. ಚಿರತೆ ದಾಳಿಯಿಂದ ಕಡೂರು, ಕುಡುಪಲಿ, ಬುಳ್ಳಾಪುರ ಗ್ರಾಮದ ಜನರು ಆಂತಕಪಡುತ್ತಿದ್ದಾರೆ.

    ಸ್ಥಳಕ್ಕೆ ಹಿರೇಕೆರೂರು ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ದಾಯಾದಿ ಕಲಹ: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ, ಒಂದು ಕಾರು ಜಖಂ

    ದಾಯಾದಿ ಕಲಹ: ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ, ಒಂದು ಕಾರು ಜಖಂ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲ ತಾಲೂಕಿನ ಹುಚ್ಚೇಗೌಡನ ಪಾಳ್ಯದಲ್ಲಿ ದಾಯಾದಿ ಕಲಹ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಮಾರಾಕಾಸ್ತ್ರಗಳಿಂದ ಹೊಡೆದಾಡಿಕೊಂಡಿವೆ.

    ಮಂಗಳವಾರ ರಾತ್ರಿ ಸಿದ್ದರಾಜು ಎಂಬವರು ಮನೆಗೆ ನುಗ್ಗಿದ ಮುರಳಿ ಹಾಗು ತಿಮ್ಮರಾಜು ಕಡೆಯವರು ಎನ್ನಲಾದ ಇಪ್ಪತ್ತಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳಿಂದ ಮನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಒಡೆದು ಹಾಕಿದ್ದು, ಕಾರನ್ನು ಸಹ ಜಖಂಗೊಳಿಸಿದ್ದಾರೆ. ಜಮೀನು ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.

    ಗಲಾಟೆಯಲ್ಲಿ ಗಾಯಗೊಂಡವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿದ್ದರಾಜು ಕುಟುಂಬಸ್ಥರು ತಮಗೆ ಜೀವ ಬೆದರಿಕೆಯಿದ್ದು, ನಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇತ್ತ ಮುರಳಿ ಎಂಬವರು ಸಹ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ತುಮಕೂರು: ಮಳೆಗಾಗಿ ದೇವರ ಮೊರೆ ಹೋದ ಪೊಲೀಸರು

    ತುಮಕೂರು: ಮಳೆಗಾಗಿ ದೇವರ ಮೊರೆ ಹೋದ ಪೊಲೀಸರು

    ತುಮಕೂರು: ಮಳೆಗಾಗಿ ಪೊಲೀಸರೇ ದೇವರ ಮೊರೆ ಹೋಗಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪೊಲೀಸರು ಮಳೆಗಾಗಿ ಶನಿ ಮಹಾತ್ಮಾ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಒಂದು ತಿಂಗಳ ಹಿಂದೆ ಪಾವಗಡ ಪಟ್ಟಣ, ತಿರುಮಣಿ, ವೈಎನ್ ಹೊಸಕೋಟೆ ಹಾಗೂ ಅರಸಿಕೆರೆ ಸೇರಿದಂತೆ ನಾಲ್ಕೂ ಠಾಣೆಯ ಪೊಲೀಸರು ಪಟ್ಟಣದ ಶನಿಮಹಾತ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸಿಪಿಐ ಆನಂದ್ ಮತ್ತು ಶ್ರೀ ಶೈಲ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಪೂಜೆಯಲ್ಲಿ ಭಾಗಿಯಾಗಿದ್ರು.

    ಪಾವಗಡ ತಾಲೂಕಿನಲ್ಲಿ ಮಳೆಯಿಲ್ಲದೆ ನೀರಿನ ಸಮಸ್ಯೆ ತಲೆದೋರಿತ್ತು. ನೀರಿಲ್ಲದೆ ಬೆಳೆಗಳು ಒಣಗಿಹೋಗಿತ್ತು. ಅಲ್ಲದೆ ಬಿಸಿಲ ತಾಪದಿಂದ ಜನರು ತತ್ತರಿಸಿ ಹೋಗಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸರು ವೈಯಕ್ತಿಕವಾಗಿ ವಂತಿಗೆ ಸಂಗ್ರಹಿಸಿ ವರುಣನ ಕೃಪೆಗಾಗಿ ದೇವರ ಮೊರೆಹೋಗಿದ್ದಾರೆ.

  • ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

    ಮಧ್ಯಪ್ರದೇಶದಲ್ಲಿ ಗೋಲಿಬಾರ್‍ಗೆ ಐದು ಬಲಿ: ಈರುಳ್ಳಿ, ಬೇಳೆಗೆ ಬೆಂಬಲ ಬೆಲೆ ಕೇಳಿದ್ದಕ್ಕೆ ಗುಂಡು

    ಮಂಡ್‍ಸೌರ್: ಮಧ್ಯಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಐದು ಮಂದಿ ರೈತರು ಮೃತಪಟ್ಟಿದ್ದಾರೆ.

    ಈರುಳ್ಳಿ ಹಾಗೂ ಬೇಳೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರ ನಡೆಸುತ್ತಿರುವ ಹೋರಾಟ ಇವತ್ತು ಮಂಡ್‍ಸೌರ್ ಜಿಲ್ಲೆಯಲ್ಲಿ ಹಿಂಸಾರೂಪಕ್ಕೆ ತಿರುಗಿತ್ತು. ಮಂಡ್‍ಸೌರ್ ಜಿಲ್ಲೆಯ ಪಿಪ್ಲಿಯಾಮಂಡಿ ಪ್ರದೇಶದಲ್ಲಿ ರೈತರು-ಪೊಲೀಸರ ಮಧ್ಯೆ ಘರ್ಷಣೆ ನಡೆಯಿತು.

    ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಫೈರಿಂಗ್ ಮಾಡಿದ್ರು. ಘಟನೆಯಲ್ಲಿ ಕನ್ನಯ್ಯಲಾಲ್ ಪಾಟಿದಾರ್ ಹಾಗೂ ಬನ್‍ಶೀ ಪಾಟೀದಾರ್ ಅನ್ನೋರು ಸೇರಿ ಐವರು ರೈತರು ಬಲಿಯಾಗಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ.

    ಮಂಡ್‍ಸೌರ್‍ನಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ವದಂತಿ ಹರಡದಂತೆ ಕೆಲ ಪ್ರದೇಶಗಳ್ಲಿ ಇಂಟರ್‍ನೆಟ್ ಸೇವೆ ರದ್ದು ಮಾಡಲಾಗಿದೆ. ಘಟನೆ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

    ಗೋಲಿಬಾರ್ ಖಂಡಿಸಿ ಬುಧವಾರ ಮಧ್ಯಪ್ರದೇಶ ಬಂದ್‍ಗೆ ಕಿಸಾನ್ ಮಜ್ದೂರ್ ಸಂಘ ಕರೆ ನೀಡಿದೆ. ಆದ್ರೆ ರೈತರ ಎಲ್ಲಾ ಬೇಡಿಕೆ ಈಡೇರಿಕೆ ಸರ್ಕಾರ ಕ್ರಮಕೈಗೊಂಡಿದೆ. ನಮ್ಮದು ರೈತ ಸರ್ಕಾರ ಅಂತ ಸಿಎಂ ಶಿವರಾಜ್ ಚೌವ್ಹಾಣ್ ಹೇಳಿದ್ದಾರೆ.

    ಪೊಲೀಸರು ಶೂಟ್ ಮಾಡಿಲ್ಲ ಸಮಾಜಘಾತುಕರು ಈ ಕೃತ್ಯ ಎಸಗಿದ್ದಾರೆ ಅಂತ ಗೃಹ ಸಚಿವ ಭೂಪೇಂದ್ರ ಸಿಂಗ್ ಹೇಳಿದ್ರೆ, ಉಜ್ಜೈನಿ ಎಸಿ ಓಂ ಝಾ ಮಾತ್ರ ಪೊಲೀಸರೇ ಶೂಟ್ ಮಾಡಿದ್ರಿಂದ ರೈತರು ಸಾವನ್ನಪ್ಪಿದ್ದಾರೆ ಅಂತ ಹೇಳಿರೋದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.

    ಮೃತ ರೈತರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಈ ಮಧ್ಯೆ, ದೇಶದ ರೈತರ ಜೊತೆ ಕೇಂದ್ರ ಸರ್ಕಾರ ಯುದ್ಧ ಮಾಡ್ತಿದೆ. ರೈತರು ಹಕ್ಕುಗಳನ್ನ ಕೇಳಿದ್ರೆ ಬುಲೆಟ್ ಪ್ರಯೋಗಿಸೋದು ಬಿಜೆಪಿಯ `ನವಭಾರತ’ ಅಂತ ರಾಹುಲ್ ಗಾಂಧಿ ಟೀಕಿಸಿದ್ದಾರೆ.