Tag: police

  • ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ

    ಧಾರವಾಡ: ಆಸ್ತಿವಿವಾದದ ಹಿನ್ನೆಲೆಯಲ್ಲಿ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಶಾಂತಿ ನಗರದಲ್ಲಿ ನಡೆದಿದೆ.

    ಯಲ್ಲವ್ವ ನಾಯ್ಕರ್, ಭಾರತಿ ಪತಂಗಿ, ಪ್ರದೀಪ್ ಪತಂಗಿ ಎಂಬವರು ಗಂಭೀರವಾಗಿ ಗಾಯಗೊಂಡರು. ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಯಲ್ಲವ್ವಾ ನಾಯ್ಕರ್ ಮತ್ತು ಮಗಳು ಭಾರತಿ ಪಂತಂಗಿ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗವಾಡ ಗ್ರಾಮದ ನಿವಾಸಿಗಳಾಗಿದ್ದು, ಕೆಲವು ವರ್ಷಗಳಿಂದ ಹುಬ್ಬಳ್ಳಿಗೆ ಕೆಲಸವನ್ನು ಅರಿಸಿಕೊಂಡು ಬಂದಿದ್ದರು.

    ಆದ್ರೆ ಯಲ್ಲವ್ವಾರ ಪತಿಗೆ ಇಬ್ಬರು ಹೆಂಡತಿಯರು. ಯಲ್ಲವ್ವಾ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು ಹೀಗಾಗಿ ಯಲ್ಲವ್ವಾ ಪತಿಯ ಹೆಸರಲ್ಲಿ ಇದ್ದ 14 ಎಕರೆ ಜಮೀನು ವಿವಾದ ಸವದತ್ತಿ ಕೋರ್ಟ್ ನಲ್ಲಿತ್ತು. ಕಾರಣ ಸವದತ್ತಿ ಕೋರ್ಟ್ ಕೆಲ ದಿನಗಳ ಹಿಂದೆ ಆದೇಶ ನೀಡಿದ್ದು ಯಲ್ಲವ್ವಾರಿಗೆ ನ್ಯಾಯಾಲಯ ಹೆಚ್ಚಿನ ಭಾಗವನ್ನು ನೀಡಿ ಆದೇಶ ಮಾಡಿತ್ತು. ಇದನ್ನು ಸಹಿಸದ ಯಲ್ಲವ್ವಾರಂಡನ ಮೊದಲ ಪತ್ನಿಯ ಮಗ ಈ ಕೃತ್ಯ ಮಾಡಿರುವುದಾಗಿ ಗಾಯಾಳುಗಳು ಆರೋಪಿಸಿದ್ದಾರೆ.

    ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಕಾಲೇಜ್ ಫಂಕ್ಷನ್ ಮುಗಿಸಿ ಮನೆಗೆ ಹೊರಟ ಯುವಕ ಮಸಣ ಸೇರಿದ!

    ಕಾಲೇಜ್ ಫಂಕ್ಷನ್ ಮುಗಿಸಿ ಮನೆಗೆ ಹೊರಟ ಯುವಕ ಮಸಣ ಸೇರಿದ!

    ಬೆಂಗಳೂರು: ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕಾಲೇಜ್ ಫಂಕ್ಷನ್ ಮುಗಿಸಿ ಮನೆಗೆ ಹೊರಟಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    23 ವರ್ಷದ ಸಚಿನ್ ಮೃತ ದುರ್ದೈವಿ. ಸೋಮಾವಾರ ರಾತ್ರಿ 9.30ಕ್ಕೆ ಕಾಲೇಜ್ ಫಂಕ್ಷನ್ ಮುಗಿಸಿಕೊಂಡು ಮನೆಯತ್ತ ಹೋಗುವ ವೇಳೆ ರಾಜ್ ಕುಮಾರ್ ಸಮಾಧಿ ಮುಂಭಾಗ ಬರುತ್ತಿದ್ದಂತೆ ಲಾರಿಯೊಂದು ಹಿಂಬದಿಯಿಂದ ಸಚಿನ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸಚಿನ್ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಯಶವಂತಪುರ ನಿವಾಸಿಯಾಗಿದ್ದ ಮೃತ ಸಚಿನ್ ಯೂತ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಖಾಸಗಿ ಕಾಲೇಜೊಂದರಲ್ಲಿ ಬಿಸಿಎ ವ್ಯಾಸಂಗ ಮುಗಿಸಿ ಅಲ್ಲೇ ಕೆಲಸ ಮಾಡಿಕೊಂಡಿದ್ರು. ಘಟನೆಯ ಬಳಿಕ ಚಾಲಕನ ಸಹಿತ ಲಾರಿಯನ್ನು ವಶಕ್ಕೆ ಪಡೆದಿರುವ ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

  • ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಡಿಐಜಿ ರೂಪಾ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ.

    ಹೌದು, ಡಿಐಜಿ ರೂಪಾ ಮತ್ತು ಗುಪ್ತಚರ ಇಲಾಖೆಯ ಡಿಜಿಪಿ ಎಂಎನ್ ರೆಡ್ಡಿ ಅವರನ್ನು ವರ್ಗಾವಣೆ ಗೊಳಿಸಿ ಆದೇಶಿಸಿದೆ. ರೂಪಾ ಅವರನ್ನ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.

    ಬಂಟ್ವಾಳ ಗಲಾಟೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಎಂಎನ್ ರೆಡ್ಡಿ ಅವರನ್ನು ಎಸಿಬಿಗೆ ಸರ್ಕಾರ ವರ್ಗಾಯಿಸಿದೆ. ಗುಪ್ತಚರ ಇಲಾಖೆಯ ಐಜಿಯಾಗಿ ಅಮೃತ್ ಪೌಲ್ ನೇಮಕವಾಗಿದ್ದರೆ, ಕಾರಾಗೃಹದ ಎಡಿಜಿಪಿಯಾಗಿ ಮೇಘರಿಕ್ ನೇಮಕವಾಗಿದ್ದಾರೆ.

     

    https://youtu.be/VUvHqCfFg0E

     

    https://youtu.be/5NYUIeTEy-8

  • ಹೆಂಡ್ತಿಗೆ ಆ್ಯಸಿಡ್ ಕುಡಿಸಿದವನಿಗೆ ಪ್ರಮೋಷನ್ – ಜೀವಂತ ಶವವಾದ ಹೆಣ್ಣಿಗೆ ಖಾಕಿಯಿಂದ ಅನ್ಯಾಯ

    ಹೆಂಡ್ತಿಗೆ ಆ್ಯಸಿಡ್ ಕುಡಿಸಿದವನಿಗೆ ಪ್ರಮೋಷನ್ – ಜೀವಂತ ಶವವಾದ ಹೆಣ್ಣಿಗೆ ಖಾಕಿಯಿಂದ ಅನ್ಯಾಯ

    ಬಳ್ಳಾರಿ: ರಿಪಬ್ಲಿಕ್ ಆಪ್ ಬಳ್ಳಾರಿಯಲ್ಲಿ ಮಾತ್ರ ಪೊಲೀಸರಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನಿದೆ. ಇದಕ್ಕೆ ಸಾಕ್ಷಿ ಈ ಸ್ಟೋರಿ. ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಹೆಂಡ್ತಿ ಹತ್ತಿರ ಡೈವೋರ್ಸ್ ಕೇಳಿದ. ಡೈವೋರ್ಸ್ ಸಿಗಲಿಲ್ಲ ಅಂತ ಪತ್ನಿಗೆ ಆಸಿಡ್ ಕುಡಿಸಿದ. ಇದೀಗ ಅದೇ ವ್ಯಕ್ತಿಗೆ ಶಿಕ್ಷೆ ನೀಡೋ ಬದಲು ಪೊಲೀಸ್ ಇಲಾಖೆ ಪ್ರಮೋಷನ್ ನೀಡಿದೆ.

    ಹೌದು. ಬಳ್ಳಾರಿಯ ಕೌಲಬಜಾರ ನಿವಾಸಿಯಾಗಿದ್ದ ಆಶಾಳನ್ನು 2006ರಲ್ಲಿ ಲಕ್ಷಾಂತರ ರೂಪಾಯಿ ವರದಕ್ಷಿಣೆ ಪಡೆದು ಪೇದೆ ವೆಂಕಟೇಶ್ ಮದುವೆಯಾಗಿದ್ದ. ಮದುವೆ ನಂತರ ವರದಕ್ಷಿಣೆ ದಾಹಕ್ಕಾಗಿ ನಿತ್ಯ ಜಗಳವಾಡುತ್ತಿದ್ದನು. ಮದುವೆಯಾಗಿ 2 ಮಕ್ಕಳಾದ ನಂತರ ಸುಖವಾಗಿ ಸಂಸಾರ ಮಾಡಬೇಕಿದ್ದ ಪೇದೆ ವೆಂಕಟೇಶ, ಕಳೆದ ವರ್ಷ ಜುಲೈ 11ರಂದು ಪೊಲೀಸ ವಸತಿ ನಿಲಯದಲ್ಲೆ ಆಸಿಡ್ ಕುಡಿಸಿದ್ದಾನೆ. ಈ ಕುರಿತು ಬಳ್ಳಾರಿಯ ಕೌಲಬಜಾರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಆದ್ರೆ ಪೊಲೀಸರು ತಮ್ಮ ಇಲಾಖೆಯ ಮಾನ ಮರ್ಯಾದೆ ಮುಚ್ಚಿಕೊಳ್ಳಲು ಪೇದೆಯ ಪರವಾಗಿಯೇ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಆಕೆಯೇ ಮನನೊಂದು ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಅಂತ ಚಾರ್ಜ್‍ಶೀಟ್ ಸಲ್ಲಿಸಿ ಇಡೀ ಪ್ರಕರಣವನ್ನೇ ಹಳ್ಳ ಹಿಡಿಸಿದ್ದರು. ಈಗ ಇದೇ ರಾಕ್ಷಸನಿಗೆ ಹುದ್ದೆಯಲ್ಲಿ ಬಡ್ತಿ ನೀಡಿದ್ದಾರೆ.

    ನ್ಯಾಯಾಲಯಕ್ಕೆ ಸುಳ್ಳು ಚಾರ್ಜ್‍ಶೀಟ್ ನೀಡಿದವನಿಗೆ ಈಗ ಪ್ರಮೋಷನ್ ಕೊಡ್ತಿದ್ದಾರೆ. ಅಧಿಕಾರದ ಅಮಲು ತಲೆಗೇರಿ ಇನ್ನೊಬ್ಬ ಮಹಿಳೆಗೆ ಅನ್ಯಾಯ ಆಗೋ ಮೊದಲು ಎಸ್‍ಪಿ ಸಾಹೇಬ್ರು ನ್ಯಾಯ ಕೊಡಿಸಬೇಕಾಗಿದೆ.

     

  • ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನಿಗೆ ಥಳಿತ

    ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನಿಗೆ ಥಳಿತ

    ಕೊಪ್ಪಳ: ನಗರದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನಿಗೆ ಸ್ಥಳೀಯರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಗರದ ದೇವರಾಜ ಅರಸ ಕಾಲೋನಿ ನಿವಾಸಿ ಜಾಫರ್ ಎಂಬಾತನೇ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಆಟೋ ಚಾಲಕ. ಮಹಿಳೆಯೊಬ್ಬರು ನಗರದ ಬಸ್ ನಿಲ್ದಾಣದಿಂದ ಗಂಜ್ ಸರ್ಕಲ್ ವರೆಗೆ ಬಿಡುವಂತೆ ಆಟೋ ಹತ್ತಿದ್ದಾರೆ. ಗಂಜ್ ಸರ್ಕಲ್ ಗೆ ಬಿಡುವ ಬದಲು ಎಪಿಎಂಸಿ ಯಾರ್ಡ ಒಳಗೆ ಕರೆದುಕೊಂಡು ಹೋಗಿ ಮಹಿಳೆಯ ಕೈ ಹಿಡಿದು ಎಳೆದಾಡಿದ್ದಾನೆ.

    ಕೂಡಲೇ ಮಹಿಳೆ ಜಾಫರ್‍ನಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಸ್ಥಳೀಯರು ಮಹಿಳೆಯನ್ನು ವಿಚಾರಿಸಿದಾಗ ಆಟೋ ಚಾಲಕನ ದೌರ್ಜನ್ಯದ ಬಗ್ಗೆ ತಿಳಿದು ಬಂದಿದೆ. ಈ ಬಗ್ಗೆ ಕೇಳಲು ಹೋದ ಸ್ಥಳೀಯರ ಮೇಲೆಯೇ ಆಟೋ ಚಾಲಕ ಎಗರಾಡಿದ್ದಾನೆ. ಕೊನೆಗೆ ಆಟೋ ಚಾಲಕನಿಗೆ ಥಳಿಸಿ ಆತನನ್ನ ನಗರ ಠಾಣಾ ಪೊಲೀಸರ ವಶಕ್ಕೆ ನೀಡಿದ್ದಾರೆ.

     

  • ಕ್ರೀಡಾಂಗಣದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

    ಕ್ರೀಡಾಂಗಣದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

    ಹಾಸನ: ವ್ಯಕ್ತಿವೊಬ್ಬ ಜಿಲ್ಲಾ ಕ್ರೀಡಾಂಗಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿ ರೂಪ್ ಕುಮಾರ್ (45) ಎಂದು ಗುರುತಿಸಲಾಗಿದೆ. ಈತ ನಗರದ ಕುಂಬಾರ ಬೀದಿ ನಿವಾಸಿಯಾಗಿದ್ದು, ಆತ್ಮಹತ್ಯೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಇಂದು ಬೆಳಗ್ಗೆ ಕ್ರೀಡಾಂಗಣಕ್ಕೆ ವಾಯು ವಿಹಾರಕ್ಕಾಗಿ ಬಂದ ಸಾರ್ವಜನಿಕರು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ.

  • ದಕ್ಷಿಣ ಕನ್ನಡ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಐಜಿಪಿ ಹರಿಶೇಖರನ್ ಎತ್ತಂಗಡಿ?

    ದಕ್ಷಿಣ ಕನ್ನಡ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಐಜಿಪಿ ಹರಿಶೇಖರನ್ ಎತ್ತಂಗಡಿ?

    ಬೆಂಗಳೂರು: ದಕ್ಷಿಣ ಕನ್ನಡ ಗಲಭೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಎತ್ತಂಗಡಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ದಕ್ಷಿಣ ಕನ್ನಡ ಗಲಭೆಯ ಪರಿಸ್ಥಿತಿ ನಿಭಾಯಿಸುವಲ್ಲಿ ಹರಿಶೇಖರನ್ ವಿಫಲವಾಗಿದ್ದಾರೆ. ಗಲಭೆ ವೇಳೆ ಕೂಡಲೇ ಶಾಂತಿ ಸಭೆ ನಡೆಸಲಿಲ್ಲ. ಎರಡೂ ಸಮಾಜದ ಮುಖಂಡರ ಮನವೊಲಿಸಿಲ್ಲ ಅಂತ ಸಿಎಂ ಕಿಡಿಕಾರಿದ್ದಾರೆ.

    ಬಿಜೆಪಿ ಮುಖಂಡರಿಗೆ ಸಹಾನುಭೂತಿ ತೋರಿಸಿದ ಪೊಲೀಸರ ಬಗ್ಗೆಯೂ ಸಿಎಂ ಕೆಂಗಣ್ಣು ಬೀರಿದ್ದಾರೆ. ಹೀಗಾಗಿ, ಈ ಹಿಂದೆ ದಕ್ಷಿಣ ಕನ್ನಡ ಎಸ್‍ಪಿಯಾಗಿದ್ದ ಭೂಷಣ್ ಜಿ ಬೊರಸೆ ವಿರುದ್ಧವೂ ಕಿಡಿಕಾರಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಸಿಎಂ ಸಿಟ್ಟು ಹೊರಹಾಕಿದ್ದರು.

    https://www.youtube.com/watch?v=4C5xONzT-FI

  • ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ಹುಂಡಿ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

    ತುಮಕೂರು: ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಯತ್ನಿಸುತಿದ್ದ ಕಳ್ಳರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ತಿಪಟೂರು ತಾಲೂಕಿನ ಬಿದರೆಗುಡಿಯ ಬಿದರಾಂಬಿಕಾ ದೇವಸ್ಥಾನದ ಹುಂಡಿ ಕದಿಯಲು ಹೊಂಚು ಹಾಕುತಿದ್ದಾಗ ಕಳ್ಳರು ಗ್ರಾಮಸ್ಥರ ಕೈಗೆ ಸಿಕ್ಕಿಬಿದಿದ್ದಾರೆ. ಚನ್ನರಾಯಪಟ್ಟಣದ ಹಿರಿಸಾವೆಯ ಮೂಲದವರಾದ ನಿಖಿಲ್ ಮತ್ತು ಲಯನ್‍ನನ್ನು ಗ್ರಾಮಸ್ಥರು ದೇವಸ್ಥಾನದ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.

    ಬಳಿಕ ಹೊನವಳ್ಳಿ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಈ ನಡುವೆ ಮತ್ತೊಬ್ಬ ಕಳ್ಳ ನರಸಿಂಹ ಮೂರ್ತಿ ಎಂಬಾತ ಪರಾರಿಯಾಗಿದ್ದಾನೆ. ಇವರು ವೃತ್ತಿಪರ ಕಳ್ಳರಾಗಿದ್ದು ಬ್ಯಾಗಲ್ಲಿ ಎಕ್ಸೆಲ್ ಬ್ಲೇಡ್ ಸೇರಿದಂತೆ ಬೀಗ ಮುರಿಯುವ ಹಲವು ಆಯುಧಗಳು ಪತ್ತೆಯಾಗಿವೆ. ಈ ಸಂಬಂಧ ಹೊನ್ನಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ

    ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಲಾರಿ

    ಧಾರವಾಡ: ಹತ್ತಿ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿರುವ ಘಟನೆ ಹುಬ್ಬಳ್ಳಿಯ ಬೆಂಗಳೂರು ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನೇಕಾರ ನಗರದ ಬಳಿ ಲಾರಿ ಪಲ್ಟಿ ಆಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ತಮಿಳುನಾಡು ಮೂಲದ ಲಾರಿ ಇದಾಗಿದ್ದು, ಕಾರವಾರದಿಂದ ಗಬ್ಬೂರು ಮಾರ್ಗವಾಗಿ ತಮಿಳುನಾಡಿಗೆ ತೆರಳುತ್ತಿತ್ತು. ಆದರೆ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬೃಹತ್ ಲಾರಿ ಪಲ್ಟಿಯಾಗಿದೆ.

     

    ಅಪಘತದ ಬಳಿಕ ಸ್ಥಳದಲ್ಲಿಯೇ ಲಾರಿ ಬಿಟ್ಟು ಲಾರಿ ಚಾಲಕ ಹಾಗೂ ಸಹಾಯಕ ಪರಾರಿಯಾಗಿದ್ದಾರೆ. ಕಾರಣ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ದಟ್ಟನೆ ಹೆಚ್ಚಾಗಿತ್ತು. ಬಳಿಕ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸರಿಂದ ಭೇಟಿ ನೀಡಿ ಸಂಚಾರ ನಿಯಂತ್ರಣ ಸುಗಮಗೊಳಿಸಿದ್ದಾರೆ.

  • ತಡೆಗೋಡೆಗೆ ಡಿಕ್ಕಿಯಾಗಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್- ಇಬ್ಬರ ಕೈ ಕಟ್

    ತಡೆಗೋಡೆಗೆ ಡಿಕ್ಕಿಯಾಗಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್- ಇಬ್ಬರ ಕೈ ಕಟ್

    ರಾಮನಗರ: ದೇವರ ಸನ್ನಿಧಿಗೆ ಪೂಜೆಗೆಂದು ಹೊರಟಿದ್ದ ಭಕ್ತಾದಿಗಳಿದ್ದ ಖಾಸಗಿ ಬಸ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ಅರಣ್ಯ ಪ್ರದೇಶದ ಒಳಗೆ ನುಗ್ಗಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ ಬಳಿ ನಡೆದಿದೆ.

    ಸಂಗಮ ಸಮೀಪದ ಮಡಿವಾಳದ ಶಿವನಾಂಕರೇಶ್ವರ ದೇವಾಲಯಕ್ಕೆ ಚಾಮರಾಜನಗರದಿಂದ 50ಕ್ಕೂ ಹೆಚ್ಚು ಮಂದಿ ಹೊರಟಿದ್ದರು. ಮಡಿವಾಳ ಸಮೀಪದ ಸಂಗಮದ ಮೊದಲ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ತಡೆಗೋಡೆಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದ ಒಳಗೆ ನುಗ್ಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಕೈ ಮುರಿದಿದ್ದು 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ಗಾಯಾಳುಗಳನ್ನು ಕನಕಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಘಟನೆ ಸಂಬಂಧ ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.