Tag: police

  • ದಕ್ಷಿಣ ಕನ್ನಡದ ಕಡಬದಲ್ಲಿ ಬಿಜೆಪಿ ಮುಖಂಡನ ಮೇಲೆ ಯದ್ವಾತದ್ವಾ ಹಲ್ಲೆ: ವಿಡಿಯೋ

    ದಕ್ಷಿಣ ಕನ್ನಡದ ಕಡಬದಲ್ಲಿ ಬಿಜೆಪಿ ಮುಖಂಡನ ಮೇಲೆ ಯದ್ವಾತದ್ವಾ ಹಲ್ಲೆ: ವಿಡಿಯೋ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಡಬದಲ್ಲಿ ಕಳೆದ ಭಾನುವಾರ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ರಮೇಶ್ ಕಲ್ಪುರೆ ಅವರಿಗೆ ತಂಡವೊಂದು ಗಂಭೀರ ಹಲ್ಲೆ ನಡೆಸಿರುವ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗಿದೆ.

    ಹೌದು, ರಮೇಶ್ ಕಲ್ಪುರೆ ಅವರು ಸಾಮಗ್ರಿ ಖರೀದಿಸಿ ತಮ್ಮ ಜೀಪಿನಲ್ಲಿ ತುಂಬುತ್ತಿದ್ದ ವೇಳೆ ಏಕಾಏಕಿ ಅವರ ಮೇಲೆ ತಂಡವೊಂದು ಬಂದು ಯದ್ವಾತದ್ವಾ ಹಲ್ಲೆ ನಡೆಸಿತ್ತು. ಇದು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿತ್ತು.

    ಈ ವೇಳೆ ಅಲ್ಲಿದ್ದ ಸ್ಥಳೀಯರು ಜಮಾಯಿಸಿ ಆರೋಪಿಗಳನ್ನು ಹಿಡಿದು ಪಲೀಸರಿಗೆ ಒಪ್ಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಾದ ಪ್ರಕಾಶ, ಟಿನ್ಸನ್, ಸನೂಷ್, ಲಿಜೋ, ಸಂತೋಷ್ ಎಂಬವರನ್ನು ಬಂಧಿಸಿದ್ದರು.

    https://www.youtube.com/watch?v=tnymLyoHm8M

  • ಮಂಡ್ಯ: ಜೈಲಿನಲ್ಲೇ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಶರಣು

    ಮಂಡ್ಯ: ಜೈಲಿನಲ್ಲೇ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಶರಣು

    ಮಂಡ್ಯ: ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.

    ರಾಘವೇಂದ್ರ (33) ಆತ್ಮಹತ್ಯೆಗೆ ಶರಣಾದ ಕೈದಿ. ಸರಗಳ್ಳತನದ ಆರೋಪದಲ್ಲಿ ರಾಘವೇಂದ್ರ ಕಳೆದ ಮೂರುವರೆ ತಿಂಗಳ ಹಿಂದೆಯೇ ಜೈಲು ಸೇರಿದ್ದ. ಆದರೆ ಅಂದಿನಿಂದ ಇಂದಿನವರೆಗೂ ರಾಘವೇಂದ್ರನನ್ನ ನೋಡಲು ಅವರ ಮನೆಯವರು ಯಾರೂ ಬಂದಿರಲಿಲ್ಲ.

    ರಾಘವೇಂದ್ರನಿಗೆ ಜಾಮೀನು ಕೊಡಿಸಲೂ ಕುಟುಂಬದವರೂ ಪ್ರಯತ್ನಿಸಿರಲಿಲ್ಲ. ಹೀಗಾಗಿ ಕೈದಿ ರಾಘವೇಂದ್ರ ಮನನೊಂದಿದ್ದು ಗುರುವಾರ ಮಧ್ಯರಾತ್ರಿ ಎಲ್ಲರೂ ಮಲಗಿರುವ ವೇಳೆ ಜೈಲಿನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ತನಗೆ ಹೊದ್ದುಕೊಂಡು ಮಲಗಲು ಕೊಟ್ಟಿದ್ದ ಹೊದಿಕೆಯನ್ನೇ ನೇಣಿಗೆ ಕುಣಿಕೆ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಂಡ್ಯ ಎಸ್ಪಿ ರಾಧಿಕಾ ಜೈಲು ಅಧಿಕಾರಿಯಿಂದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಉಡುಪಿ: ಪಿಕಪ್ ವಾಹನದಲ್ಲಿ ಕೈಕಾಲು ಕಟ್ಟಿ ಅಕ್ರಮವಾಗಿ 27 ಹಸುಗಳ ಸಾಗಾಟ

    ಉಡುಪಿ: ಪಿಕಪ್ ವಾಹನದಲ್ಲಿ ಕೈಕಾಲು ಕಟ್ಟಿ ಅಕ್ರಮವಾಗಿ 27 ಹಸುಗಳ ಸಾಗಾಟ

    ಉಡುಪಿ: ಬೊಲೆರೋ ಪಿಕಪ್ ವಾಹನದಲ್ಲಿ ಗೋವುಗಳ ಅಕ್ರಮ ಸಾಗಾಟಕ್ಕೆ ಜಿಲ್ಲೆಯ ಕುಂದಾಪುರ ಪೊಲೀಸರು ತಡೆಯೊಡ್ಡಿದ್ದಾರೆ.

    27 ಗೋವುಗಳನ್ನು ಕುಂದಾಪುರದ ಮಾವಿನಕಟ್ಟೆಲ್ಲಿಂದ ಮಂಗಳೂರು ಕಡೆಗೆ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ವಾಹನವನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಬೆಳಕಿಗೆ ಬಂದಿದೆ.

    ಪಿಕಪ್ ವಾಹನದಲ್ಲಿ ನಾಲ್ಕೈದು ಹಸುಗಳನ್ನು ಸಾಗಾಟ ಮಾಡುವುದು ಕಷ್ಟಸಾಧ್ಯ. ಆದರೆ ಹಸುಗಳ ಕೈಕಾಲು ಕಟ್ಟಿ ಅಮಾನವೀಯವಾಗಿ 27 ಹಸುಗಳನ್ನು ತುಂಬಿಸಲಾಗಿತ್ತು. ಈ ನಡುವೆ ಉಸಿರುಗಟ್ಟಿ ಒಂದು ಹಸು ಟೆಂಪೋದೊಳಗೆ ಸಾವನ್ನಪ್ಪಿದೆ. ಪೊಲೀಸರು ಆ ವಾಹನ ನಿಲ್ಲಿಸುತ್ತಿದ್ದಂತೆ ವಾಹನ ಬಿಟ್ಟು ಚಾಲಕ ಮತ್ತು ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದಾರೆ.

    ಕುಂದಾಪುರದಿಂದ ಮಂಗಳೂರಿಗೆ ಗೋವುಗಳ ಅಕ್ರಮ ಸಾಗಾಟವಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಪಿಕಪ್ ವಾಹನ ಮಂಗಳೂರು ರಿಜಿಸ್ಟ್ರೇಷನ್‍ದಾಗಿದ್ದು, ಹುಸೇನ್ ಎಂಬವರಿಗೆ ಈ ವಾಹನ ಸೇರಿದೆ.

    ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಆರೋಪಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಮಾರಾಟ ಮಾಡಿದ ಹಸುಗಳೋ ಅಥವಾ ಕದ್ದ ಹಸುಗಳೋ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಅನುಮಾನಾಸ್ಪದವಾಗಿ ಓಡಾಡ್ತಿದ್ದವರನ್ನ ಸಾರ್ವಜನಿಕರೇ ಹಿಡಿದುಕೊಟ್ರೂ ತನಿಖೆ ನಡೆಸದೆ ಬಿಟ್ಟು ಕಳಿಸಿದ ಪೊಲೀಸರು

    ಅನುಮಾನಾಸ್ಪದವಾಗಿ ಓಡಾಡ್ತಿದ್ದವರನ್ನ ಸಾರ್ವಜನಿಕರೇ ಹಿಡಿದುಕೊಟ್ರೂ ತನಿಖೆ ನಡೆಸದೆ ಬಿಟ್ಟು ಕಳಿಸಿದ ಪೊಲೀಸರು

    ಬೆಂಗಳೂರು: ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್ ಅಂತ ಗೊತ್ತಿದ್ರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ವಾಹನವೊಂದರಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದುಕೊಟ್ಟರೂ ತನಿಖೆ ನಡೆಸಲು ಪೊಲೀಸರು ಸೋಮಾರಿತನ ತೋರಿರುವುದು ಬೆಳಕಿಗೆ ಬಂದಿದೆ.

    ಪಶ್ಚಿಮ ಬಂಗಾಳದ ಅನುಮಾನಾಸ್ಪದ ಕಾರೊಂದು ನಗರದಲ್ಲಿ ಓಡಾಡುತ್ತಿರುವುದನ್ನು ಮನಗಂಡ ಜನ ಹಿಡಿದುಕೊಟ್ರೂ ಪೊಲೀಸರು ಮಾತ್ರ ಡೋಂಟ್‍ಕೇರ್ ಎಂದಿದ್ದಾರೆ. ಗುರುವಾರ ರಾತ್ರಿ ನೃಪತುಂಗ ರಸ್ತೆಯಲ್ಲಿ ಬಿಎಂಡಬ್ಲ್ಯು ಕಾರಿನಲ್ಲಿ ನಾಲ್ವರು ಅಪರಿಚಿತರು ಓಡಾಡುತ್ತಿದ್ದರು. ಅನುಮಾನಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಗಮನಿಸಿದ ಶಶಾಂಕ್ ಎಂಬವರು ತಕ್ಷಣ ಅಲ್ಲೆ ಇದ್ದ ಟ್ರಾಫಿಕ್ ಪೊಲೀಸರ ಸಹಾಯದಿಂದ ಆರೋಪಿಯೊಬ್ಬನನ್ನು ಹಲಸೂರು ಪೊಲೀಸರಿಗೆ ಹಿಡಿದುಕೊಟ್ಟಿದ್ದರು. ಆದ್ರೆ ಆರೋಪಿಗಳ ಬಗ್ಗೆ ತನಿಖೆಯನ್ನೂ ನಡೆಸದೇ ಎಎಸ್‍ಐ ಭೀಮಾನಾಯ್ಕ್ ಹಾಗೇ ಬಿಟ್ಟು ಕಳಿಸಿದ್ದಾರೆ. ಯಾಕೆ ಬಿಟ್ಟು ಬಿಟ್ರಿ ಅಂದ್ರೆ ತಲೆನೋವು ಅಂದಾ ಅದ್ಕೆ ಬಿಟ್ಟೆ ಅಂತಾ ಉಡಾಫೆ ಉತ್ತರ ನೀಡಿದ್ದಾರೆ.

    ಬೆಂಗಳೂರು ಪೊಲೀಸರ ಈ ಬೇಜವಾಬ್ದಾರಿತನದ ಬಗ್ಗೆ ಆರ್ಮಿ ಫೋರಂ ಅಧ್ಯಕ್ಷ ಶಶಾಂಕ್ ಅಸಮಾಧಾನಗೊಂಡು ಹಿರಿಯ ಪೊಲೀಸರಿಗೆ ದೂರು ನೀಡಿದ್ದಾರೆ. ಆಗಸ್ಟ್ 15 ಹತ್ತಿರ ಬರ್ತಿದ್ದು ಬೆಂಗಳೂರು ಕೂಡ ಉಗ್ರರ ಟಾರ್ಗೆಟ್ ಅಂತ ಗೊತ್ತಿದ್ರೂ ಪೊಲೀಸರಿಂದಲೇ ಕರ್ತವ್ಯಲೋಪ ಎಸಗಿರೋದಕ್ಕೆ ಶಶಾಂಕ್ ಆಕ್ರೋಶಗೊಂಡಿದ್ದಾರೆ.

    ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಕೊಡಿ ಅಂತಾರೆ. ಆದ್ರೆ ಮಾಹಿತಿ ಕೊಟ್ರೂ ಪೊಲೀಸರು ಕಾರ್ಯೋನ್ಮುಕರಾಗದಿರುವುದು ವಿಷಾದನೀಯ ಎಂದು ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.

     

     

  • ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ಕೈ ಚಳಕ ತೋರಿಸಿದ ಕಳ್ಳರು

    ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ಕೈ ಚಳಕ ತೋರಿಸಿದ ಕಳ್ಳರು

    ಚಿಕ್ಕಬಳ್ಳಾಪುರ: ನಗರದಲ್ಲಿ ರಾತ್ರೋರಾತ್ರಿ ಕಳ್ಳರು ತಮ್ಮ ಕೈ ಚಳಕವನ್ನು ತೋರಿಸಿ ಕೋ ಆಪರೇಟಿವ್ ಸೊಸೈಟಿಗೆ ನುಗ್ಗಿ 50 ಸಾವಿರ ರೂ. ಕಳ್ಳತನ ಮಾಡಿದ್ದಾರೆ.

    ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿ ಇರುವ ಹೇಮಗಿರಿ ಕೋ ಆಪರೇಟಿವ್ ಸೊಸೈಟಿಯ ಷಟರ್ ಮುರಿದು ನಗದು ಕಳವು ಮಾಡಿದ್ದಾರೆ.

    ಈ ಕಳ್ಳರು 50 ಸಾವಿರು ನಗದು, ಸಿಸಿಟಿವಿ ಫುಟೇಜ್ ನ ಡಿವಿಆರ್ ಕದ್ದೊಯ್ದಿದ್ದಾರೆ. ಸೊಸೈಟಿ ಕೆಳಗೆ ಇರುವ ಜ್ಯುವೆಲ್ಲೆರಿ ಅಂಗಡಿಗೂ ಕಳ್ಳತನಕ್ಕೆ ಯತ್ನಿಸಿದ್ದರೂ ವಿಫಲವಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

    ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

    ನೆಲಮಂಗಲ: ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಣ್ಣ ನೇತೃತ್ವದಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು.

    ಇನ್ನೂ ಈ ಒಂದು ಪೆರೇಡ್ ನಲ್ಲಿ ಬಂಡೆ ಮಂಜ, ಬಂಡೆ ಮಂಜನ ಸಹೋದರ ಉಮೇಶ್, ಗಣೇಶನ ಗುಡಿ ರಂಗ, ಜಯನಗರದ ಕಾಸೀಮ್, ವಂದಲ್ ರವಿ, ನಾಗರಾಜು, ಕಾಲೋನಿ ಪ್ರವೀಣ್, ಸೇರಿದಂತೆ ಅನೇಕ ರೌಡಿಗಳು ಭಾಗಿಯಾಗಿದ್ದು, ರೌಡಿಗಳಿಗೆ ವೃತ್ತ ನಿರೀಕ್ಷಕ ಶಿವಣ್ಣ ಖಡಕ್ ವಾರ್ನಿಂಗ್ ನೀಡಿದರು.

     

  • ಸಾರಿಗೆ ಬಸ್ಸಿಗೆ ಖಾಸಗಿ ಶಾಲೆಯ ವ್ಯಾನ್ ಡಿಕ್ಕಿ – 15 ವಿದ್ಯಾರ್ಥಿಗಳಿಗೆ ಗಾಯ

    ಸಾರಿಗೆ ಬಸ್ಸಿಗೆ ಖಾಸಗಿ ಶಾಲೆಯ ವ್ಯಾನ್ ಡಿಕ್ಕಿ – 15 ವಿದ್ಯಾರ್ಥಿಗಳಿಗೆ ಗಾಯ

    ಹಾವೇರಿ: ಸಾರಿಗೆ ಬಸ್ ಮತ್ತು ಖಾಸಗಿ ಶಾಲೆಯ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹದಿನೈದಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ನಡೆದಿದೆ.

    ಸರ್ಕಾರಿ ಬಸ್ ಹುಬ್ಬಳ್ಳಿಯಿಂದ ಹಾನಗಲ್ ನತ್ತ ಹೋಗುತ್ತಿತ್ತು. ಈ ವೇಳೆ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.

    ಗಾಯಗೊಂಡ 15 ವಿದ್ಯಾರ್ಥಿಗಳನ್ನ ಬಂಕಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

     

  • ಮಗಳಿಗೆ ಬ್ಲೂ ಫಿಲ್ಮ್ ತೋರಿಸುತ್ತಿದ್ದ ತಂದೆಯ ಬಂಧನ

    ಮಗಳಿಗೆ ಬ್ಲೂ ಫಿಲ್ಮ್ ತೋರಿಸುತ್ತಿದ್ದ ತಂದೆಯ ಬಂಧನ

    ಮುಂಬೈ: ಮಗಳಿಗೆ ಪದೇ ಪದೇ ಸೆಕ್ಸ್ ಫಿಲ್ಮ್ ಗಳನ್ನು ತೋರಿಸುತ್ತಿದ್ದ ಕಾಮುಕ ತಂದೆಯನ್ನು ಮುಂಬೈನ ಮಲಾಡ್ ಪೊಲೀಸರು ಬಂಧಿಸಿದ್ದಾರೆ.

    40 ವರ್ಷದ ಕಾಮುಕ ತಂದೆ ತನ್ನ 12 ವರ್ಷದ ಮಗಳಿಗೆ ಅಶ್ಲೀಲ ವಿಡಿಯೋಗಳನ್ನ ತೋರಿಸುವ ಮೂಲಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಈ ಬಗ್ಗೆ ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದು, ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಂತ್ರಸ್ತ ಬಾಲಕಿ ತನ್ನ ಪೋಷಕರೊಂದಿಗೆ ಮಲಾಡ್‍ನಲ್ಲಿ ವಾಸವಾಗಿದ್ದು, ಒಬ್ಬ ಅಣ್ಣನೂ ಇದ್ದಾನೆ. ಆರೋಪಿ ತಂದೆ ದೀರ್ಘ ಕಾಲದಿಂದ ಮಗಳಿಗೆ ಈ ರೀತಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಬಾಲಕಿ ಇದನ್ನ ಸಹಿಸಿಕೊಂಡೇ ಬಂದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆದ್ರೆ ತಂದೆಯ ವರ್ತನೆ ಮಿತಿ ಮೀರಿದಾಗ ತಾಯಿಯ ಬಳಿ ಹೇಳಿಕೊಂಡಿದ್ದಾಳೆ.

    ತಂದೆಯ ವರ್ತನೆಯ ಬಗ್ಗೆ ಬಾಲಕಿ ಈ ಹಿಂದೆಯೇ ಹಲವು ಬಾರಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಆದ್ರೆ ತಾಯಿ ಪ್ರತಿ ಬಾರಿ ತನ್ನ ಗಂಡನಿಗೆ ಬುದ್ಧಿವಾದ ಹೇಳಿ ಇದು ತಪ್ಪು ಎಂದು ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದ್ರೆ ಈ ಬಾರಿ ಬಾಲಕಿ ಮತ್ತೊಮ್ಮೆ ತಾಯಿಯ ಬಳಿ ದೂರು ಹೇಳಿದಾಗ ದಂಪತಿಯ ಮಧ್ಯೆ ಜಗಳವಾಗಿದೆ. ನಂತರ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಐಪಿಸಿ ಸೆಕ್ಷನ್ 354, 506 ಹಾಗೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಯನ್ನ ಗುರುವಾರದಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದಿದ್ದಾರೆ.

     

  • ನನ್ನ ಗಂಡ ಮಿಸ್ಸಿಂಗ್, ಪ್ಲೀಸ್ ಹುಡುಕಿಕೊಡಿ ಎಂದು ಗರ್ಭಿಣಿಯಿಂದ ದೂರು ದಾಖಲು

    ನನ್ನ ಗಂಡ ಮಿಸ್ಸಿಂಗ್, ಪ್ಲೀಸ್ ಹುಡುಕಿಕೊಡಿ ಎಂದು ಗರ್ಭಿಣಿಯಿಂದ ದೂರು ದಾಖಲು

    ಮಂಡ್ಯ: ತನ್ನ ಪತಿಯನ್ನು ಹುಡುಕಿಕೊಡಿ ಎಂದು ಮಹಿಳೆಯೊಬ್ಬರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕೆ.ಆರ್.ಸಾಗರ ನಿವಾಸಿ ಸವಿತಾ ಎಂಬವರೇ ಗಂಡ ರಾಘವೇಂದ್ರರ ಹುಡುಕಾಟದಲ್ಲಿದ್ದಾರೆ. ನಗರದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಜುಲೈ 6ರಿಂದ ನಾಪತ್ತೆಯಾಗಿದ್ದಾನೆ. ಕೆಲಸವಿದೆ ಎಂದು ಮನೆಯಲ್ಲಿ ಗರ್ಭಿಣಿಯನ್ನು ಬಿಟ್ಟು ಹೋದ ರಾಘವೇಂದ್ರ ಇದೂವರೆಗೂ ಹಿಂದುರುಗಿ ಬಂದಿಲ್ಲ.

    ಇದನ್ನೂ ಓದಿ: ನಿಮ್ಮನ್ನ ಬಿಟ್ಟು ಹೋಗ್ತಿದ್ದೀನಿ, Sorry ಪ್ಲೀಸ್ ಅಳ್ಬೇಡಿ: ಗಂಡನಿಗೆ ಪತ್ರ ಬರೆದು ಮಗುವಿನೊಂದಿಗೆ ಬೇರೊಬ್ಬನ ಜೊತೆ ಪರಾರಿ!

    ಮನೆಯಿಂದ ಹೋದ ಬಳಿಕ ರಾಘವೇಂದ್ರರ ಮೊಬೈಲ್ ಸಂಪರ್ಕಕ್ಕೂ ಸಿಕ್ಕಿಲ್ಲ. ಎಂಟು ವರ್ಷಗಳ ಹಿಂದೆ ರಾಘವೇಂದ್ರ ಮತ್ತು ಸವಿತಾ ಪ್ರೀತಿಸಿ ಮದುವೆಯಾಗಿದ್ರು. ನಂತ್ರ ಕೆ.ಆರ್.ಸಾಗರದಲ್ಲಿ ವಾಸವಾಗಿದ್ದಾರೆ. ಇತ್ತ ರಾಘವೇಂದ್ರ ಹೋಗುವಾಗ ತನಗೆ ಸಂಬಂಧಪಟ್ಟ ದಾಖಲೆಗಳನ್ನು ಸಹ ತೆಗೆದುಕೊಂಡು ಹೋಗಿದ್ದಾನೆ. ಇದ್ರಿಂದಾಗಿ ಆತಂಕಗೊಂಡಿರುವ ಪತ್ನಿ ಸವಿತಾ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗಂಡನನ್ನು ಹುಡುಕಿಕೊಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

     

     

     

  • ಮಕ್ಕಳಾಗದ್ದಕ್ಕೆ ಪತ್ನಿಗೆ ವಿಷ ಕೊಟ್ಟು ಹತ್ಯೆಗೈದ ಪೊಲೀಸ್!

    ಮಕ್ಕಳಾಗದ್ದಕ್ಕೆ ಪತ್ನಿಗೆ ವಿಷ ಕೊಟ್ಟು ಹತ್ಯೆಗೈದ ಪೊಲೀಸ್!

    ಯಾದಗಿರಿ: ಮಕ್ಕಳಾಗದ್ದಕ್ಕೆ ಪತ್ನಿಗೆ ಪೇದೆ ಪತಿ ವಿಷ ಕೊಟ್ಟು ಸಾಯಿಸಿದ ಅಮಾನವೀಯ ಘಟನೆ ಯಾದಗಿರಿಯ ಗ್ರಾಮೀಣ ಠಾಣೆಯ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ನಡೆದಿದ್ದು, ಸೋಮವಾರ ಪತ್ನಿ ಹಣಮಂತಿ ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನಡೆದಿದ್ದೇನು?: ಯಾದಗಿರಿಯ ಕಿಲ್ಲನಕೇರಾ ಗ್ರಾಮದ ನಿವಾಸಿ ಹಾಗೂ ಯಾದಗಿರಿ ನಗರ ಠಾಣೆ ಪೊಲೀಸ್ ಪೇದೆಯಾದ ಮಹೇಂದ್ರ ಹಾಗೂ ರಾಯಚೂರನ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ನಿವಾಸಿ ಹಣಮಂತಿಗೆ 8 ವರ್ಷದ ಹಿಂದೆ ಮದುವೆಯಾಗಿತ್ತು. ಆದ್ರೆ ಈವರೆಗೂ ಮಕ್ಕಳಾಗಿರಲಿಲ್ಲ. ಹೀಗಾಗಿ ಪೇದೆ ಮಹೇಂದ್ರ ಪತ್ನಿ ಹಣಮಂತಿ ಜೊತೆ ಜಗಳವಾಡುತ್ತಿದ್ದನು. ಅಲ್ಲದೇ ಬೇರೆ ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಸಿಟ್ಟುಗೊಂಡ ಪತಿ ಮಹೇಂದ್ರ ಪತ್ನಿಗೆ ವಿಷ ಕೊಟ್ಟಿದ್ದಾನೆ. ವಿಷ ಸೇವಿಸಿದ ಪರಿಣಾಮ ಹಣಮಂತಿ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟದ್ದಾರೆ.

    ಪತ್ನಿ ಸಾವಿನ ಬಳಿಕ ಮಹೇಂದ್ರ ಪರಾರಿಯಾಗಿದ್ದಾನೆ. ಇದೀಗ ಹಣಮಂತಿ ಪೋಷಕರು ನಗರ ಠಾಣೆಯಲ್ಲಿ ಕೊಲೆಯ ಬಗ್ಗೆ ದೂರು ನೀಡಿದ್ದು, ಘಟನೆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.