Tag: police

  • ರೈಲ್ವೆ ಇಲಾಖೆಯ ಹಳೇ ವಸ್ತುಗಳನ್ನ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

    ರೈಲ್ವೆ ಇಲಾಖೆಯ ಹಳೇ ವಸ್ತುಗಳನ್ನ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ

    ಯಾದಗಿರಿ: ಕಳ್ಳನೊಬ್ಬ ರೈಲ್ವೆ ಇಲಾಖೆಯ ಹಳೇ ವಸ್ತುಗಳನ್ನು ಕಳ್ಳತನ ಮಾಡಲು ಹೋಗಿ ಪೊಲೀಸರ ಅಥಿತಿಯಾಗಿರುವ ಘಟನೆ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಕೇಬಲ ವಯರ್ ಸೇರಿದಂತೆ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ವಸ್ತುಗಳನ್ನ ಬೀದರ ಮೂಲದ ಶಿವಪ್ಪ ಎಂಬವನು ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.

    ಕಳ್ಳತನ ಮಾಡಿ ವಸ್ತುಗಳನ್ನ ಸಾಗಣೆ ಮಾಡುವಾಗ ಆರ್‍ಪಿಎಫ್ ಎಎಸ್‍ಐ ಎಮ್‍ಜಿ ಅಲಿಬೇಗ್ ಹಾಗೂ ಸಿಬ್ಬಂದಿ ರಾಚಣ್ಣಗೌಡ ಪಾಟೀಲ್ ಕಳ್ಳನನ್ನು ಬಂಧಿಸಿದ್ದಾರೆ. ಸುಮಾರು 5 ಸಾವಿರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಕಳ್ಳನಿಂದ ಆರ್‍ಪಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈ ಕುರಿತು ಯಾದಗಿರಿ ರೈಲ್ವೆ ಭದ್ರತಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಶಿವಪ್ಪನನ್ನು ನ್ಯಾಯಾಲಯಕ್ಕೆ ಹಾಜರಪಡಿಸಿಲಾಗಿತ್ತು. ಸದ್ಯ ಅರೋಪಿಯನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿದೆ.

  • ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾಗಳ ಮೇಲೆ ಪೊಲೀಸ್ ದಾಳಿ- ಮದ್ಯಬಾಟಲಿಗಳು ಪೀಸ್‍ಪೀಸ್

    ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾಗಳ ಮೇಲೆ ಪೊಲೀಸ್ ದಾಳಿ- ಮದ್ಯಬಾಟಲಿಗಳು ಪೀಸ್‍ಪೀಸ್

    ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಮದ್ಯದಂಗಡಿಗಳ ಕಡಿವಾಣಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿ ಒಂದು ತಿಂಗಳು ಕಳೆದಿದೆ. ಆದರೆ ಈ ಮಹತ್ವದ ಆದೇಶಕ್ಕೂ ಕ್ಯಾರೆ ಎನ್ನದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಡಾಬಾ ಹಾಗೂ ಹೋಟೆಲ್‍ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.

    ಡಾಬಾ ಹಾಗೂ ಹೋಟೆಲ್ ಮಾಲೀಕರು ರಾಜಾರೋಷವಾಗಿ ಆಕ್ರಮ ಮದ್ಯ ಮಾರಾಟದಲ್ಲಿ ತೊಡಗಿದ್ದರು. ಹೀಗಾಗಿ ಕಳೆದ ರಾತ್ರಿ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸಿಂಗಂ ಎಂದೇ ಹೆಸರಾಗಿರುವ ಪಿಎಸ್‍ಐ ಮಂಜುನಾಥ್, ಡಾಬಾಗಳ ಮೇಲೆ ದಿಢೀರ್ ದಾಳಿ ನಡೆಸಿ ಮದ್ಯದ ಬಾಟಲಿಗಳನ್ನ ಪೀಸ್ ಪೀಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

    ಪಟ್ಟಣದ ಮನೋಜ್, ತಿರುಮಲ, ವೈಟಿ, ಫಿಶ್‍ಲ್ಯಾಂಡ್, ನರ್ತಕಿ ಹಾಗೂ ಇನ್ನಿತರ ಡಾಬಾಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಎಣ್ಣೆ ಬಾಟಲಿಗಳು ಸೇರಿದಂತೆ ಆರು ಜನರನ್ನ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಮದ್ಯದ ಗುಂಗಿನಲ್ಲಿದ್ದ ನೂರಾರು ಎಣ್ಣೆ ಪ್ರೀಯರು ಸಂದಿಗೊಂದಿ ಎನ್ನದೆ ದಿಕ್ಕಾಪಾಲಾಗಿ ಓಡಿಹೋದ ಘಟನೆಯೂ ನಡೆದಿದೆ.

    ಇಡೀ ರಾತ್ರಿ ಪಿಎಸ್‍ಐ ಮಂಜುನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಎಣ್ಣೆ ಪ್ರಿಯರಿಗೆ ಹಾಗೂ ಡಾಬಾ ಮಾಲೀಕರಿಗೆ ನಿದ್ದೆ ಕೆಡಿಸಿ ಖಡಕ್ ಎಚ್ಚರಿಕೆಯನ್ನ ನೀಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ನೆಲಮಂಗಲ ಪಟ್ಟಣದ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿನಿತ್ಯ ಅಪಘಾತ ಪ್ರಕರಣಗಳು ಸಂಭವಿಸುತ್ತಿದ್ದು, ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನ ಗಾಳಿಗೆ ತೂರಿದ್ದ ಮಾಲೀಕರಿಗೆ ಈ ದಾಳಿ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ರಾಜ್ಯದ ಎಲ್ಲ ಪೊಲೀಸರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ದಂಧೆಗಳಿಗೆ ಕಡಿವಾಣ ಹಾಕಿದ್ರೆ ಕುಡಿತದಿಂದ ಸಂಭವಿಸುವ ಅಪಘಾತದಿಂದ ಸಾವಿರಾರು ಜೀವಗಳ ಉಳಿಯುವಿಕೆಗೆ ನಾಂದಿಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

  • 18 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಐದು ಮಂದಿ ಅರೆಸ್ಟ್

    18 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಐದು ಮಂದಿ ಅರೆಸ್ಟ್

    ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರದಲ್ಲಿ ಕಸಾಯಿಖಾನೆಗೆ ಸಾಗಿಸುತಿದ್ದ 18 ಜಾನುವಾರುಗಳನ್ನ ಸಾಗಾಟ ಮಾಡುತ್ತಿದ್ದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

    ಅಂಕೋಲ ಮೂಲದ ರಾಘವೇಂದ್ರ ನಾಯ್ಕ್, ಸುರೇಶ್, ಶಿರಗುಂಜಿಯ ಬೊಮ್ಮಯ್ಯ, ಬೀರಯ್ಯ, ದೇವದಾಸ್ ನಾಯ್ಕ್ ಎಂಬವರು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು. ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಭಟ್ಕಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ವೇಳೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು ಐವರಿಂದ ಸುಮಾರು 6 ಲಕ್ಷ ರೂ. ಮೌಲ್ಯದ ಮಹೇಂದ್ರ ಪಿಕಪ್ ಹಾಗೂ 1.60 ಲಕ್ಷ ರೂ. ಮೌಲ್ಯದ 15 ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ, ಮಗಳು, ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆಗೈದ ಬ್ಯಾಂಕ್ ಉದ್ಯೋಗಿ

    ಪತ್ನಿ, ಮಗಳು, ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆಗೈದ ಬ್ಯಾಂಕ್ ಉದ್ಯೋಗಿ

    ತುಮಕೂರು: ಮಾನಸಿಕ ಖಿನ್ನತೆಗೊಳಗಾಗಿದ್ದ ಬ್ಯಾಂಕ್ ಉದ್ಯೋಗಿಯೊಬ್ಬ ತನ್ನ ಪತ್ನಿ, ಮಗಳು ಹಾಗೂ ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.

    ಪಾವಗಡದ ರೇನ್ ಗೇಜ್ ಬಡಾವಣೆಯಲ್ಲಿ ವಾಸವಿದ್ದ ಎಸ್‍ಬಿಐ ಬ್ಯಾಂಕ್ ನ ಉದ್ಯೋಗಿ ರವಿ ಎಂಬಾತ ತನ್ನ ಪತ್ನಿ ಮಾಧವಿ, ಅತ್ತೆ ಪದ್ಮಾವತಿ ಹಾಗೂ ಮಗಳು ಪ್ರಳವಿಕಾ ಮೇಲೆ ಮನಸೋ ಇಚ್ಚೆಯಂತೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.

    ತಡರಾತ್ರಿ ನಿದ್ದೆಯಲ್ಲಿದ್ದ ಪತ್ನಿ ಮಾಧವಿ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದ್ದು, ತಡೆಯಲು ಹೋದ ಮಗಳು ಹಾಗೂ ಅತ್ತೆಗೂ ಸಹ ಮಚ್ಚು ಬೀಸಿದ್ದಾನೆ. ತೀವ್ರವಾಗಿ ಗಾಯಗೊಂಡ ಮೂವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಎಸ್‍ಬಿಐ ನಲ್ಲಿ ಕ್ಯಾಶಿಯರ್ ಆಗಿರುವ ರವಿ ಕಳೆದ ಎರಡು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಅಲ್ಲದೆ ಇತ್ತೀಚೆಗೆ ಬೇರೆಡೆ ವರ್ಗವಾಗಿದ್ದರೂ ಸಹ ಹೋಗಿರಲಿಲ್ಲ. ಈ ಬಗ್ಗೆ ಪತ್ನಿ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ- ರೊಚ್ಚಿಗೆದ್ದ ಗ್ರಾಮಸ್ಥರಿಂದ ಲಾರಿಗಳಿಗೆ ತಡೆ

    ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ- ರೊಚ್ಚಿಗೆದ್ದ ಗ್ರಾಮಸ್ಥರಿಂದ ಲಾರಿಗಳಿಗೆ ತಡೆ

    ರಾಯಚೂರು: ಜಿಲ್ಲೆಯಲ್ಲಿ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಆದರೆ ಕಳ್ಳತನದಿಂದ ಹೊರರಾಜ್ಯಕ್ಕೆ ನೂರಾರು ಟನ್‍ಗಟ್ಟಲೇ ಅಕ್ರಮ ಮರಳು ಸಾಗಣೆಯಾಗುತ್ತಿದೆ.

    ದೇವದುರ್ಗ ತಾಲೂಕಿನ ಮೆದರಗೋಳ ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ರಾತ್ರಿ ಹಗಲೆನ್ನದೇ ನಿಯಮಬಾಹಿರವಾಗಿ ಮರಳುಗಾರಿಕೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಾತ್ರೋರಾತ್ರಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳನ್ನ ತಡೆದು ಗಲಾಟೆ ಮಾಡಿದ್ದಾರೆ.

    ಕಳ್ಳ ಸಾಗಣೆದಾರರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. 5 ವರ್ಷದ ಅವಧಿಗೆ 3 ಲಕ್ಷದ 19 ಸಾವಿರ ಮೆಟ್ರಿಕ್ ಟನ್ ಮರಳುಗಾರಿಕೆಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಈಗಾಗಲೇ ಲೆಕ್ಕವಿಲ್ಲದಷ್ಟು ಮರಳನ್ನ ಅಕ್ರಮ ಸಾಗಣೆ ಮಾಡಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.

    ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸ್ಥಳೀಯ ಹೋರಾಟಗಾರರಾದ ರಘುವೀರ್ ನಾಯಕ್ ಅವರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

  • ಕನ್ನಡಿಗರನ್ನು ಕೆಣಕಿದ್ದಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ತಲೆದಂಡ!

    ಕನ್ನಡಿಗರನ್ನು ಕೆಣಕಿದ್ದಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ತಲೆದಂಡ!

    ಬೆಂಗಳೂರು: ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ ಬೆನ್ನಲ್ಲೇ, ಕಾಕತಾಳೀಯವೋ ಏನೋ ಎಂಬಂತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಲೆದಂಡವಾಗಿದೆ.

    ಎಡಿಜಿಪಿ ಪ್ರವೀಣ್ ಸೂದ್ ಅವರನ್ನು ಆಧುನೀಕರಣ ಮತ್ತು ಸಂಪರ್ಕ ವಿಭಾಗಕ್ಕೆ ವರ್ಗ ಮಾಡಲಾಗಿದೆ. ತೆರವಾದ ಪೊಲೀಸ್ ಆಯುಕ್ತರ ಸ್ಥಾನಕ್ಕೆ 1989ರ ಬ್ಯಾಚ್ ಅಧಿಕಾರಿ ಹಾಗೂ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಟಿ.ಸುನೀಲ್ ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ.

    ಪ್ರವೀಣ್ ಸೂದ್ ನೇಮಕ ಮಾಡಿ ಕೇವಲ ಏಳು ತಿಂಗಳಷ್ಟೆ ಆಗಿದ್ದು, ದಿಢೀರ್ ವರ್ಗಾವಣೆ ಪೊಲೀಸ್ ಇಲಾಖೆಯಲ್ಲಿ ಆಶ್ಚರ್ಯ ಮೂಡಿಸಿದೆ. ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಕನ್ನಡಿಗರ ವಿರುದ್ಧ ದೇಶದ್ರೋಹ, ಎರಡು ಭಾಷೆಗಳ ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಜಾಮೀನು ರಹಿತ ಕೇಸು ಹಾಕಿದ್ದರು ಎನ್ನುವ ಆರೋಪ ಪ್ರವೀಣ್ ಸೂದ್ ಮೇಲೆ ಕೇಳಿ ಬಂದಿತ್ತು.

    ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ, ವರ್ಗಾವಣೆಯಾಗಿದ್ದ ಎ.ಎಂ.ಪ್ರಸಾದ್ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ರಾಜ್ಯ ಗುಪ್ತದಳದ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಈ ಬೆಳವಣಿಗೆಗಳ ನಡುವೆ, ಇಂದು ನಿವೃತ್ತಿಯಾದ ಸತ್ಯನಾರಾಯಣರಾವ್‍ಗೆ ಕೊನೆಯ ಅರ್ಧ ಗಂಟೆಗಾಗಿ ಸ್ಥಾನ ಕೊಟ್ಟು ನಿವೃತ್ತಿ ಮಾಡಲಾಗಿದೆ. ಅಗ್ನಿಶಾಮಕ ದಳದ ಡಿಜಿಯಾಗಿ ಸರ್ಕಾರ ಸತ್ಯನಾರಾಯಣ್ ಅವರನ್ನು ನೇಮಿಸಿತ್ತು. ಆದರೆ, ಅಧಿಕಾರ ಸ್ವೀಕರಿಸದೆಯೇ ಸತ್ಯನಾರಾಯಣರಾವ್ ನಿವೃತ್ತಿಯಾಗಿದ್ದಾರೆ. ತೆರವಾದ ಈ ಸ್ಥಾನವನ್ನು ನಾಳೆಯಿಂದ ಡಿಜಿಪಿ ನೀಲಮಣಿ ರಾಜು ತುಂಬಲಿದ್ದಾರೆ.

    ಕನ್ನಡ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಕ್ಕೆ ನಿಮ್ಮನ್ನು ವರ್ಗಮಾಡಲಾಗಿದ್ಯಾ ಎನ್ನುವ ಪ್ರಶ್ನೆಗೆ ಪ್ರವೀಣ್ ಸೂದ್ ಸರ್ಕಾರವನ್ನೇ ಕೇಳಬೇಕು ಎಂದು ಉತ್ತರಿಸಿದರು.

     

  • ಪಕ್ಕದ ಮನೆಯವಳಿಂದಲೇ 4 ವರ್ಷದ ಹೆಣ್ಣು ಮಗು ಕಿಡ್ನಾಪ್?

    ಪಕ್ಕದ ಮನೆಯವಳಿಂದಲೇ 4 ವರ್ಷದ ಹೆಣ್ಣು ಮಗು ಕಿಡ್ನಾಪ್?

    ಬಳ್ಳಾರಿ: ನಾಲ್ಕು ವರ್ಷದ ಹೆಣ್ಣು ಮಗುವನ್ನು ಪಕ್ಕದ ಮನೆಯ ಮಹಿಳೆಯೇ ಅಪಹರಿಸಿಕೊಂಡು ಹೋಗಿದ್ದಾಳೆ ಎನ್ನುವ ಆರೋಪವೊಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಕೇಳಿಬಂದಿದೆ.

    ಕಮಲಾಪುರ ಪಟ್ಟಣದ ಕುಂಟೆ ಎರಿಯಾ ನಿವಾಸಿಯಾದ ನೀಲಮ್ಮ ವಿರೇಶಪ್ಪ ದಂಪತಿಯ ಮಗಳಾದ ಮಲ್ಲೇಶ್ವರಿ ಎಂಬಾತ ಅಪಹರಣವಾದ ಬಾಲಕಿ.

    ಬಾಲಕಿ ಮಲ್ಲೇಶ್ವರಿ ಜುಲೈ 18 ರಂದು ಚಾಕಲೇಟ್ ತರಲು ಹೋದ ವೇಳೆಯಲ್ಲಿ ಪಕ್ಕದ ಮನೆಯ ಮಹಿಳೆ ಅಂಬಮ್ಮ ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಆರೋಪಿಸಿ ಮಲ್ಲೇಶ್ವರಿ ಪೋಷಕರು ಕಮಲಾಪುರ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದಾರೆ.

    ದೂರು ದಾಖಲಿಸಿಕೊಂಡಿರುವ ಕಮಲಾಪುರ ಪೊಲೀಸ್ ಠಾಣೆಯ ಪೊಲೀಸರು ಅಪಹರಣವಾದ ಬಾಲಕಿ ಮಲ್ಲೇಶ್ವರಿಯನ್ನ ಪತ್ತೆ ಮಾಡಲು ಹಾಗೂ ಕಿಡ್ನಾಪ್ ಮಾಡಿದ ಆರೋಪಿ ಮಹಿಳೆ ಅಂಬಮ್ಮರ ಬಗ್ಗೆ ಪ್ರಕಟಣೆ ಹೊರಡಿಸಿ ಬಾಲಕಿಯನ್ನು ಪತ್ತೆ ಮಾಡಲು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

  • ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿ ತಂದೆ, ಮಗ ಸಾವು

    ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಸ್ಥಳದಲ್ಲಿ ತಂದೆ, ಮಗ ಸಾವು

    ತುಮಕೂರು: ಕ್ವಾಲಿಸ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕ್ವಾಲಿಸ್ ವಾಹನದಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಲ್ಲೆಯಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ನರುಗನಹಳ್ಳಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್ ಸಿ ಕುಮಾರ್ ಹಾಗೂ ಅವರ ಮಗ ಜೀವನ ಮೃತಪಟ್ಟಿದ್ದಾರೆ.

    ತಂದೆ ಮಗ ಸೇರಿ ಹೊನ್ನುಡಿಕೆಯಿಂದ ತುಮಕೂರಿಗೆ ಬರುತಿದ್ದ ವೇಳೆ ದಾರಿ ಮಧ್ಯೆ ನರುಗನಹಳ್ಳಿ ಬಳಿ ಘಟನೆ ಸಂಭವಿಸಿದೆ. ಕುಣಿಗಲ್ ಕಡೆಗೆ ಹೋಗುತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಚಾಲಕ ತನ್ನ ಮುಂದಿದ್ದ ವಾಹನಕ್ಕೆ ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬಂದ ಕ್ವಾಲಿಸ್ ಗೆ ಡಿಕ್ಕಿ ಹೊಡೆದಿದ್ದಾನೆ.

    ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಸಾವಿನ ದವಡೆಯಲ್ಲಿದ್ದರೂ ಸಿಗದ ಆಂಬುಲೆನ್ಸ್, ಮೃತಪಟ್ಟ ಕಾರ್ಮಿಕ

    ಸಾವಿನ ದವಡೆಯಲ್ಲಿದ್ದರೂ ಸಿಗದ ಆಂಬುಲೆನ್ಸ್, ಮೃತಪಟ್ಟ ಕಾರ್ಮಿಕ

    ಮೈಸೂರು: ಹೃದಯಾಘಾತಗೊಂಡ ಕಾರ್ಮಿಕರೊಬ್ಬರಿಗೆ ಆಂಬುಲೆನ್ಸ್ ಸಿಗದ ಕಾರಣ ಮಾರ್ಗಮಧ್ಯೆ ಮೃತ ಪಟ್ಟ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸಂಗರಶೆಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೃತ ಪಟ್ಟ ಕಾರ್ಮಿಕ ಗಾಂಧಿ(55) ಆಂಧ್ರಪ್ರದೇಶದ ನಿವಾಸಿಯಾಗಿದ್ದು, ಮೈಸೂರಿಗೆ ತಂಬಾಕು ಕೃಷಿ ಕೆಲಸಕ್ಕಾಗಿ ಬಂದಿದ್ದರು. ಗ್ರಾಮದ ಚಂದ್ರು ಅವರ ಬಳಿ ತಂಬಾಕು ಎಲೆಗಳನ್ನು ಮುರಿದು ಕ್ಯೂರಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮುಂಜಾನೆ ಎಲೆಗಳನ್ನು ಮುರಿಯುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಬೆಟ್ಟದಪುರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚನೆ ನೀಡಿದ್ದು ತಕ್ಷಣವೇ ಚಂದ್ರು ಆಂಬುಲೆನ್ಸ್ ಸಿಬ್ಬಂದಿಗೆ ಸಂಪರ್ಕಿಸಿದ್ದಾರೆ. ಆಂಬುಲೆನ್ಸ್ ಸಿಗದ ಕಾರಣ ಚಂದ್ರು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣಕ್ಕೆ ಬರುತ್ತಿದ್ದಾಗ ಪಟ್ಟಣದ ಕ್ರೀಡಾಂಗಣ ಬಳಿ ಮತ್ತೊಮ್ಮೆ ತೀವ್ರ ಹೃದಯಾಘಾತಗೊಂಡು ಕಾರ್ಮಿಕ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ.

    ಈ ಘಟನೆ ಸಂಭವಿಸಿದ ನಂತರ ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ತುಮಕೂರು: ಗೋಣಿಚೀಲದಲ್ಲಿ ಕರುಗಳನ್ನು ಕಟ್ಟಿ ಕಸಾಯಿಖಾನೆಗೆ ಸಾಗಾಟ

    ತುಮಕೂರು: ಗೋಣಿಚೀಲದಲ್ಲಿ ಕರುಗಳನ್ನು ಕಟ್ಟಿ ಕಸಾಯಿಖಾನೆಗೆ ಸಾಗಾಟ

    ತುಮಕೂರು: ಜಿಲ್ಲೆಯಲ್ಲಿ ಜಾನುವಾರುಗಳನ್ನು ಅಮಾನವೀಯವಾಗಿ ಕೈ ಕಾಲುಗಳನ್ನು ಮುರಿದು ಗೋಣಿಚೀಲದಲ್ಲಿ ಹಾಕಿ ಕಸಾಯಿ ಖಾನೆಗೆ ಸಾಗಾಟ ಮಾಡುತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಹುಲಿಯೂರು ದುರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿ ನಿರ್ಧಯವಾಗಿ ದನಗಳ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವರ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಗಂಡು ಕರುಗಳನ್ನು ಕಡಿಮೆ ದುಡ್ಡಿಗೆ ಖರೀದಿಸಿ ಅವುಗಳ ಕೈಕಾಲು ಮುರಿದು ಚೀಲದಲ್ಲಿ ಕಟ್ಟಿ ಸಾಗಿಸಲಾಗುತ್ತಿದೆ.

    ದ್ವಿಚಕ್ರ ವಾಹನದಲ್ಲಿ ರಾಜರೋಷವಾಗಿ ಪ್ರತಿದಿನ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ಈ ವಿಷಯ ತಿಳಿದಿದ್ದರೂ ಮೌನವಾಗಿದ್ದಾರೆಂದು ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಹುಲಿಯೂರುದುರ್ಗ ಪೊಲೀಸ್ ಠಾಣೆ ಎದುರೇ ಕರುಗಳನ್ನು ಸಾಗಿಸಲಾಗುತ್ತದೆ. ಆದರೆ ಈವರೆಗೂ ಯಾರನ್ನು ಬಂಧಿಸಿಲ್ಲ. ಕುಣಿಗಲ್ ತಾಲೂಕಿನ ಹಲವೆಡೆ ಈ ರೀತಿ ಕರುಗಳನ್ನು ಸಾಗಾಟ ಮಾಡಲಾಗುತ್ತಿದೆ.

    ಹೆಣ್ಣು ಕರುಗಳನ್ನು ಸಾಕುವ ರೈತರು, ಗಂಡು ಕರುಗಳು ನಿರುಪಯುಕ್ತ ಎಂದು ಮಾರಾಟ ಮಾಡುತ್ತಿದ್ದಾರೆ. ಕರುಗಳ ಕೈ ಕಾಲು ಮುರಿದು ಚೀಲದಲ್ಲಿ ತರುವ ದೃಶ್ಯ ನೋಡಿದರೆ ಎಲ್ಲರ ಮನ ಕಲುಕುವಂತಿದೆ.