Tag: police department

  • ಸಾರ್ವಜನಿಕರಿಗಾಗಿ ಮಂಡ್ಯ ಪೊಲೀಸರಿಂದ ವೆಬ್‍ ಸೈಟ್ ಅನಾವರಣ

    ಸಾರ್ವಜನಿಕರಿಗಾಗಿ ಮಂಡ್ಯ ಪೊಲೀಸರಿಂದ ವೆಬ್‍ ಸೈಟ್ ಅನಾವರಣ

    ಮಂಡ್ಯ: ನಗರದ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ ಮಾಹಿತಿಗಾಗಿ ನೂತನ ವೆಬ್‍ ಸೈಟ್ ಒಂದು ಅನಾವರಣಗೊಂಡಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು http://www.mandyadistrictpolice.com/ ವೆಬ್‍ ಸೈಟ್ ಅನಾವರಣಗೊಳಿಸಿದರು.

    ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಾರ್ವಜನಿಕರಿಗೆ ಸಿಗಲೆಂದ ಈ ವೆಬ್‍ ಸೈಟನ್ನು ರೂಪಿಸಲಾಗಿದೆ. ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳು, ಕಚೇರಿಗಳು, ದೂರವಾಣಿ ಸಂಖ್ಯೆಗಳ ಮಾಹಿತಿ ಹಾಗೂ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಸಹಾಯವಾಣಿ ಸೇರಿದಂತೆ ಪೊಲೀಸ್ ಇಲಾಖೆಗೆ ಸಂಬಂಧಿಸಿದ ನೋಟಿಫಿಕೇಷನ್ ಗಳೂ ಕೂಡ ಈ ವೆಬ್‍ಸೈಟ್ ನಲ್ಲಿ ಲಭ್ಯವಾಗಲಿದೆ.

    ಜಿಲ್ಲಾ ಪೊಲೀಸ್ ವೆಬ್‍ಸೈಟನ್ನು ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.

  • 100ಕ್ಕೂ ಹೆಚ್ಚು ಪ್ರಕರಣಗಳ ಪತ್ತೆ – ಪೊಲೀಸ್ ಸಿಬ್ಬಂದಿಗೆ ಡಿಸಿಪಿ ಚನ್ನಣ್ಣನವರಿಂದ ಪ್ರವಾಸ, 1ಲಕ್ಷ ನಗದು, ಬೈಕ್ ನೀಡಿ ಗೌರವ

    100ಕ್ಕೂ ಹೆಚ್ಚು ಪ್ರಕರಣಗಳ ಪತ್ತೆ – ಪೊಲೀಸ್ ಸಿಬ್ಬಂದಿಗೆ ಡಿಸಿಪಿ ಚನ್ನಣ್ಣನವರಿಂದ ಪ್ರವಾಸ, 1ಲಕ್ಷ ನಗದು, ಬೈಕ್ ನೀಡಿ ಗೌರವ

    ಬೆಂಗಳೂರು: ಸುಮಾರು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಅವರು ವಿಶೇಷ ಬಹುಮಾನ ನೀಡಿ ಗೌರವಿಸಿದ್ದಾರೆ.

    ಪೊಲೀಸ್ ಸಿಬ್ಬಂದಿ ಶ್ರೀ.ಚಂದ್ರಕುಮಾರ್ ಅವರಿಗೆ ಈ ಬಹುಮಾನ ನೀಡಿ ಗೌರವಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ಕರ್ತವ್ಯವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಆದ್ದರಿಂದ ಅಂತಹ ಸಿಬ್ಬಂದಿಗಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಚಂದ್ರಕುಮಾರ್ ಅವರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಸರಗಳ್ಳನನ್ನು ಹಿಡಿದು ನೂರಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಶ್ರೀ.ಚಂದ್ರಕುಮಾರ್ ಅವರ ಈ ಅತ್ಯುತ್ತಮ ಕರ್ತವ್ಯವನ್ನು ಗುರುತಿಸಿ ಒಂದು ಲಕ್ಷ ನಗದು ಬಹುಮಾನ, ಒಂದು ಪಲ್ಸರ್ ಬೈಕ್ ಮತ್ತು ರಜೆಯೊಂದಿಗೆ ಕುಟುಂಬ ಸಮೇತ ಪ್ರವಾಸ ಆಯೋಜಿಸುವುದರ ಮೂಲಕ ಗೌರವಿಸಲಾಗಿದೆ.

    ಚಂದ್ರಕುಮಾರ್ ಅವರಿಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಬಹುಮಾನ ನೀಡಿ ಗೌರವಿಸಿದ್ದಾರೆ. ಈ ವಿಚಾರವನ್ನು ಸ್ವತಃ ಚನ್ನಣ್ಣನವರೇ ತಮ್ಮ ಟ್ಟಿಟ್ಟರ್ ನಲ್ಲಿ ಸನ್ಮಾನ ಮಾಡಿದ ಫೋಟೋ ಹಾಗೂ ಬೈಕಿನ ಫೋಟೋವನ್ನು ಪೋಸ್ಟ್ ಮಾಡಿ ಅಭಿನಂದಿಸಿದ್ದಾರೆ. ಈ ಮೂಲಕ ಚಂದ್ರಕುಮಾರ್ ಅವರು ಇತರರಿಗೆ ಮಾದರಿಯಾಗಿದ್ದಾರೆ.

  • ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

    ಮಂಡ್ಯ ಎಸ್ಪಿ ರಾಧಿಕಾ ಅಂಧಾ ದರ್ಬಾರ್ – ತಮ್ಮ ಮನೆ ಕೆಲಸಕ್ಕೆ ಬರೋಬ್ಬರಿ 18 ಪೇದೆಗಳು

    ಮಂಡ್ಯ: ನಗರದ ಎಸ್ಪಿ ರಾಧಿಕಾ ನಿವಾಸದಲ್ಲಿ ಆರ್ಡಲಿ ಪದ್ಧತಿ ಇದ್ದು, ತಮ್ಮ ಮನೆ ಕೆಲಸಕ್ಕೆ 18 ಜನ ಪೇದೆಗಳ ನಿಯೋಜನೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

    ತಮ್ಮ ನಿವಾಸದ ಗಾರ್ಡನ್ ಮತ್ತು ಬಟ್ಟೆ ತೊಳೆಯುವ ಕೆಲಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ತಮ್ಮ ಮನೆ ಕೆಲಸಕ್ಕೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಸ್ವತಃ ಅವರೇ ಈ ಬಗ್ಗೆ ಮಾತನಾಡಿದ್ದು, ನಾನು ಅನಧಿಕೃತವಾಗಿ ಯಾವುದೇ ಸಿಬ್ಬಂದಿಗಳಿಂದ ನಮ್ಮ ಮನೆ ಕೆಲಸ ಮಾಡಿಸುತ್ತಿಲ್ಲ ಎಂದು ಎಸ್‍ಪಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

    ಸರ್ಕಾರ ಓರ್ವ ಉನ್ನತ ಅಧಿಕಾರಿಯ ಸಹಾಯಕ್ಕಾಗಿ ಕೊಟ್ಟಿರುವ ಸೌಲಭ್ಯವನ್ನೆ ಬಳಸಿಕೊಳ್ಳುತ್ತಿದ್ದೇನೆ. ಸಹಾಯಕರಿಲ್ಲದೆ ಓರ್ವ ಅಧಿಕಾರಿಯಾಗಿ ಹೇಗೆ 24 ಗಂಟೆ ಕೆಲಸ ಮಾಡೋದು, ಕೊಟ್ಟಿರುವ ಸಿಬ್ಬಂದಿಗಳಿಂದ ನಾನು ಯಾವುದೇ ನನ್ನದಾಗಲಿ, ನನ್ನ ಮನೆಯದಾಗಲಿ ಅಥವಾ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಿಲ್ಲ. ಫೋನ್ ರಿಸೀವ್ ಮಾಡಲು, ಭದ್ರತೆ ನೀಡಲು ಮತ್ತು ಕಚೇರಿ ಸಹಾಯಕ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿದೆ ಅಷ್ಟೆ ಎಂದು ಹೇಳಿದ್ದಾರೆ.

    ಇದೇ ವೇಳೆ ಯಾರೋ ನಮ್ಮ ಇಲಾಖೆಯವರೇ ಆಗದವರು ಈ ರೀತಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಮೂಡಿಸಿದ್ದಾರೆ. ನಮ್ಮಲ್ಲಿ ಆ ರೀತಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಮಾಲಿ ಕೆಲಸ ಮಾಡಿಸುತ್ತಿಲ್ಲ. ಗೊಂದಲ ಸೃಷ್ಟಿಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತಿಳಿಸಿದ್ದಾರೆ.

  • ಕಳ್ಳತನವಾಗಿದ್ದ ಮನೆಯವರಿಗೆ ಹೊಸ ವರ್ಷದಂದು ಸರ್ಪ್ರೈಸ್ ಗಿಫ್ಟ್ ಕೊಟ್ಟ ಪೊಲೀಸರು

    ಕಳ್ಳತನವಾಗಿದ್ದ ಮನೆಯವರಿಗೆ ಹೊಸ ವರ್ಷದಂದು ಸರ್ಪ್ರೈಸ್ ಗಿಫ್ಟ್ ಕೊಟ್ಟ ಪೊಲೀಸರು

    ಬೆಂಗಳೂರು: ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹೊಸ ವರ್ಷಕ್ಕೆ ಪೊಲೀಸ್ ಇಲಾಖೆಯಿಂದ ಕೆಲವರಿಗೆ ಸರ್ಪ್ರೈಸ್ ಉಡುಗೊರೆ ದೊರೆತಿದೆ.

    ಹೊಸ ವರ್ಷಕ್ಕೆ ಪೊಲೀಸ್ ಇಲಾಖೆ ವಿನೂತನ ಕೊಡುಗೆ ನೀಡಿದ್ದು, ಕಳ್ಳತನವಾದ ಚಿನ್ನಾಭರಣವನ್ನು ಅವರವರ ಮನೆಗೆ ತಲುಪಿಸಿದ್ದಾರೆ. ಹೊಸ ವರ್ಷ ರಾತ್ರಿ 12 ಗಂಟೆಗೆ ಇನ್ಸ್ ಪೆಕ್ಟರ್ ಮುಖಾಂತರ ರಿಕವರಿಯಾಗಿದ್ದ ವಸ್ತುಗಳನ್ನು ವಾಪಸ್ ನೀಡಿದ್ದಾರೆ.

    ಕೋರ್ಟ್ ಅನುಮತಿ ಪಡೆದು ನಂತರ ಕಳ್ಳರಿಂದ ರಿಕವರಿ ಮಾಡಿಕೊಂಡಿದ್ದ ವಸ್ತುಗಳನ್ನು ಹೊಸ ವರ್ಷದ ಪ್ರಯುಕ್ತ ಸರ್ಪ್ರೈಸ್ ಆಗಿ ವಾಪಾಸ್ ನೀಡಿದ್ದಾರೆ. ಯಲಹಂಕ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜೇಗೌಡ, ವೆಂಕಟೇಶ್ವರಲು ದಂಪತಿಗೆ ತಾವು ಕಳೆದುಕೊಂಡಿದ್ದ 40 ಗ್ರಾಂ ಚಿನ್ನಾಭರಣವನ್ನು ಹಿಂತಿರುಗಿಸಿದ್ದಾರೆ. ಪೊಲೀಸರು ಹುಣಸಮಾರನಹಳ್ಳಿ ಮನೆಗೆ ದಿಢೀರ್ ಭೇಟಿ ಕೊಟ್ಟು ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದಾರೆ.

    ಬೊಮ್ಮನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್, ನಂದಕಿಶೋರ್ ಮನೆಗೆ ತೆರಳಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ್ದಾರೆ. ಹೀಗೆ ಪೊಲೀಸರು ಚಿನ್ನಾಭರಣ ಕಳೆದುಕೊಂಡಿದ್ದ ದಂಪತಿಗಳ ಮನೆಗೆ ಹೋಗಿ ವಸ್ತುಗಳನ್ನ ವಾಪಸ್ ನೀಡಿ ವಿಶಿಷ್ಟತೆ ಮೆರೆದಿದ್ದಾರೆ.

    ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ ಆದೇಶದ ಮೇರೆಗೆ ಪೊಲೀಸರು ಈ ಕರ್ತವ್ಯವನ್ನು ನೆರವೇರಿಸಿದ್ದಾರೆ.

  • ಕಲಂ 371(ಜೆ) ಅನುಷ್ಠಾನ ಗೊಂದಲ: ರಾಯಚೂರು ಪೊಲೀಸರ ಮುಂಬಡ್ತಿಯಲ್ಲಿ ತಾರತಮ್ಯ

    ರಾಯಚೂರು: ಶೈಕ್ಷಣಿಕ ಹಾಗೂ ಹುದ್ದೆಯ ಮುಂಬಡ್ತಿಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಅಭಿವೃದ್ದಿಗೆ ಪೂರಕವಾಗಬೇಕಿದ್ದ ಭಾರತ ಸಂವಿಧಾನದ ಅನುಚ್ಛೇದ 371 (ಜೆ) ರಾಯಚೂರಿನ ಪೊಲೀಸರಲ್ಲಿ ತಾರತಮ್ಯ ಮೂಡಿಸಿದೆ. ಕೇವಲ 5 ವರ್ಷ ಅನುಭವವಿರುವವರಿಗೆ ಬಡ್ತಿ ಸಿಗುತ್ತಿದ್ದರೆ, 15 ವರ್ಷ ದುಡಿದವರಿಗೆ ಯಾವುದೇ ಸೌಲಭ್ಯವಿಲ್ಲದಂತಾಗಿದೆ. ಹೋರಾಟಗಳ ಮೂಲಕ ಪಡೆದ ಸಾಂವಿಧಾನಿಕ ಹಕ್ಕು ಈಗ ಇಲ್ಲಿನ ಪೊಲೀಸರಿಗೆ ಮುಳುವಾಗಿದೆ. ಹೀಗಾಗಿ ಪೊಲೀಸರು ನ್ಯಾಯಕ್ಕಾಗಿ ಧ್ವನಿ ಎತ್ತಲು ಮುಂದಾಗಿದ್ದಾರೆ.

    2017 ಜನವರಿ 27 ರಂದು ರಾಯಚೂರು ಜಿಲ್ಲೆಯಲ್ಲಿ 43 ಜನರಿಗೆ ಸಿವಿಲ್ ಪೊಲೀಸ್ ಕಾನ್ಸಟೇಬಲ್ (ಸಿಪಿಸಿ) ಹುದ್ದೆಯಿಂದ ಸಿವಿಲ್ ಹೆಡ್ ಕಾನ್ಸಟೇಬಲ್ (ಸಿಹೆಚ್‍ಸಿ) ಹುದ್ದೆಗೆ ನೀಡಲಾಗಿರುವ ಮುಂಬಡ್ತಿಯಲ್ಲಿ ತಾರತಮ್ಯವಾಗಿದೆ. ಮುಂಬಡ್ತಿಗೆ ಸ್ಥಳೀಯ ವೃಂದ ಭರ್ತಿಯಾದ ಬಳಿಕ ಪರಸ್ಥಳೀಯ ವೃಂದದ ಹುದ್ದೆಗಳಿಗೆ ಸ್ಥಳೀಯರನ್ನೇ ಪರಿಗಣಿಸಲಾಗಿದೆ. ಆದ್ರೆ ಜೇಷ್ಠತೆಯ ಹಿರಿತನದ ಆಧಾರದ ಮೇಲೆ ಬಡ್ತಿ ಸಿಗದೆ ಇತ್ತೀಚಿಗೆ ಹುದ್ದೆಗೆ ಸೇರಿದವರಿಗೆ ಬಡ್ತಿ ನೀಡುವ ಮೂಲಕ 15 ವರ್ಷಗಳಷ್ಟು ಅನುಭವವಿರುವವರಿಗೆ ಅನ್ಯಾಯವಾಗಿದೆ. 2011 ರಲ್ಲಿ ಕೆಲಸಕ್ಕೆ ಸೇರಿದ 43 ಜನ ಈಗ ಹೆಡ್ ಕಾನ್ಸಟೇಬಲ್‍ಗಳಾಗಿದ್ದಾರೆ. ಆದ್ರೆ 2002, 2005, 2007, 2008 ಹಾಗೂ 2009 ನೇ ಸಾಲಿನಲ್ಲಿ ಕೆಲಸಕ್ಕೆ ಸೇರಿದವರಿಗೆ ಬಡ್ತಿ ನೀಡಲಾಗಿಲ್ಲ. ಕಲಂ 371 (ಜೆ) ಪ್ರಕಾರ ಪರಸ್ಥಳೀಯ ವೃಂದಕ್ಕೆ ಜೇಷ್ಠತೆಯಲ್ಲಿ ಕೆಳಗಿನಿಂದ ಮೇಲಕ್ಕೆ ಆಯ್ಕೆ ಮಾಡುತ್ತಿರುವುದೇ ಯಡವಟ್ಟಿಗೆ ಕಾರಣವಾಗಿದೆ. ಎಂದು ಆರೋಪಿಸಲಾಗಿದೆ.

    ಕಲಂ 371 ಜೆ ಪ್ರಕಾರ ಜಿಲ್ಲೆಯಲ್ಲಿ ಸ್ಥಳೀಯೇತರ ವೃಂದಕ್ಕೆ ಒಟ್ಟು 74 ಸಿಹೆಚ್‍ಸಿ ಹುದ್ದೆಗಳು ಲಭ್ಯವಾಗಿವೆ. ಇದರಲ್ಲಿ 29 ಜನ ಈಗಾಗಲೇ ಸಿವಿಲ್ ಹೆಡ್ ಕಾನ್ಸಟೇಬಲ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ 43 ಸಿವಿಲ್ ಹೆಡ್ ಕಾನ್ಸಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಆದ್ರೆ ರಾಜ್ಯಮಟ್ಟದಲ್ಲಿ ಜೇಷ್ಠತೆಯಲ್ಲಿ ಮೇಲಿದ್ದರು ಪರಸ್ಥಳೀಯ ವೃಂದದಲ್ಲಿ ಹಿಂದೆ ಬೀಳುವಂತಾಗಿದೆ. ಹೀಗಾಗಿ ಮುಂಬಡ್ತಿ ವಂಚಿತರಾದ ಪೊಲೀಸ್ ಕಾನ್ಸಟೇಬಲ್‍ಗಳು ತಾರತಮ್ಯ ಸರಿಪಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿದ್ದಾರೆ. ಸಂವಿಧಾನ ಅಳವಡಿಕೆಯಲ್ಲಿ ಗೊಂದಲಗಳು ಸೃಷ್ಠಿಯಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.

    ಕಲಂ 371(ಜೆ) ಅಡಿ ಎರಡೆರಡು ವೃಂದಗಳನ್ನಾಗಿ ಮಾಡಿ ಪ್ರಮೋಷನ್ ನೀಡುತ್ತಿರುವುದರಿಂದ ಜೇಷ್ಠತೆಯಲ್ಲಿ ಹಿರಿಯರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಶಿಕ್ಷಣ ಇಲಾಖೆಯಲ್ಲೂ ಇದೇ ಸಮಸ್ಯೆ ತಲೆದೋರಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕಿದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.