Tag: police department

  • 22.5 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

    22.5 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆ

    ಕಾರವಾರ: ಚುನಾವಣೆ ಬಳಿಕ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾದ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯವನ್ನ ಅಬಕಾರಿ ಇಲಾಖೆ ವತಿಯಿಂದ ಇಂದು ನಾಶಪಡಿಸಲಾಯಿತು.

    ಅಬಕಾರಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟು 109 ಅಕ್ರಮ ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಒಟ್ಟು 22,50,866 ಲಕ್ಷ ರೂ. ಮೌಲ್ಯದ ಗೋವಾ ಫೆನ್ನಿ, ಕರ್ನಾಟಕ ಹಾಗೂ ಇತರೇ ರಾಜ್ಯಗಳ ಮದ್ಯ ಸೇರಿ ಸುಮಾರು 8,654 ಲೀಟರ್ ಅಕ್ರಮ ಮದ್ಯವನ್ನ ವಶಪಡಿಸಿಕೊಳ್ಳಲಾಗಿತ್ತು. ಈ ಮದ್ಯವನ್ನು ಇಂದು ಅಬಕಾರಿ ಇಲಾಖೆ ಸಿಬ್ಬಂದಿ ನಾಶ ಮಾಡಿದ್ದಾರೆ.

    ವಶಪಡಿಸಿಕೊಳ್ಳಲಾಗಿದ್ದ ಅಕ್ರಮ ಗೋವಾ ಮದ್ಯವನ್ನ ಇಲಾಖೆ ಸಂಗ್ರಹಿಸಿ ಇಟ್ಟಿತ್ತು. ಇಂದು ಅಬಕಾರಿ ಉಪ ಆಯುಕ್ತರ ಕಚೇರಿ ಹಿಂಬದಿಯಲ್ಲಿಯೇ ಇಲಾಖೆಯ ಉಪ ಆಯುಕ್ತ ಎಲ್.ಮಂಜುನಾಥ್ ಹಾಗೂ ಸಿಬ್ಬಂದಿ ಸೇರಿ ಮದ್ಯವನ್ನು ಚೆಲ್ಲಿ ನಾಶಗೊಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಉಪಆಯುಕ್ತ ಎಲ್.ಮಂಜುನಾಥ್, ಚುನಾವಣೆ ನಂತರ ವಶಪಡಿಸಿಕೊಂಡಿದ್ದ ಮದ್ಯವನ್ನು ಇಂದು ನಾಶ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಸೇರಿಕೊಂಡು ಚುನಾವಣೆ ನಂತರ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಭಾರೀ ಪ್ರಮಾಣ ಮದ್ಯವನ್ನು ವಶಪಡಿಸಿಕೊಂಡಿತ್ತು. ದಾಖಲಾದ 109 ಮೊಕದ್ದಮೆಗಳಲ್ಲಿ ಸುಮಾರು 26 ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ನಮ್ಮ ವಶಕ್ಕೆ ನೀಡಿದ್ದಾರೆ. ಉಳಿದ 83 ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

  • ಅಪರಾಧ ತಡೆಯಲು ಪೊಲೀಸ್ ಇಲಾಖೆಯಿಂದ ಹೊಸ ಅಪ್ಲಿಕೇಷನ್ ಚಾಲನೆ

    ಅಪರಾಧ ತಡೆಯಲು ಪೊಲೀಸ್ ಇಲಾಖೆಯಿಂದ ಹೊಸ ಅಪ್ಲಿಕೇಷನ್ ಚಾಲನೆ

    ಬೆಂಗಳೂರು; ಸಿಲಿಕಾನ್ ಸಿಟಿಯಲ್ಲಿ ಅಪರಾಧವನ್ನು ತಡೆಯಲು ಪಣ ತೊಟ್ಟಿರುವ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ನೇತೃತ್ವದ ಪೊಲೀಸ್ ಇಲಾಖೆ ಹೊಸ ಶೇರ್ ಅಪ್ಲಿಕೇಷನ್‍ಗೆ ಚಾಲನೆ ನೀಡಿದೆ.

    ನಿಮ್ಮ ದೂರು ನಮ್ಮ ನೂರಿಗೆ ಎಂಬ ಯೋಜನೆಯ ಹೊಸ ತಂತ್ರಜ್ಞನದಿಂದ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪೊಲೀಸ್ ಇಲಾಖೆ ಹೊಸ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆಯಿಂದ ಶೇರ್ ಚಾಟ್ ಪೇಜ್ ಚಾಲನೆ ನೀಡಲಾಗಿದೆ.

    ಸುಮಾರು 14 ಭಾಷೆಗಳಲ್ಲಿ ವ್ಯವಹರಿಸಬಹುದಾದ ನೂತನ ತಂತ್ರಜ್ಞಾನದ ಈ ಅಪ್ಲಿಕೇಶನ್‍ನನ್ನು ನಗರ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ಸಾಮಾಜಿಕ ಜಾಲತಾಣಕ್ಕೆ ಶೇರ್ ಅಪ್ಲಿಕೇಶನ್ ಲೋಕಾರ್ಪಣೆ ಮಾಡಿದ್ದಾರೆ. ಕಮೀಷನರ್ ಆಗಿ ಆಯ್ಕೆಯಾದ ದಿನವೇ ಜನಸ್ನೇಹಿ ಆಡಳಿತ ನೀಡುವುದಾಗಿ ಹೇಳಿದ್ದ ಆಲೋಕ್ ಕುಮಾರ್ ಆ ನಿಟ್ಟಿನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

  • ಸ್ಮಶಾನದ ಜಾಗಕ್ಕೆ ಪೊಲೀಸರಿಂದ ಬೇಲಿ – ಶವ ಮಣ್ಣು ಮಾಡಲು ಪರದಾಡುತ್ತಿದ್ದಾರೆ ದಲಿತರು

    ಸ್ಮಶಾನದ ಜಾಗಕ್ಕೆ ಪೊಲೀಸರಿಂದ ಬೇಲಿ – ಶವ ಮಣ್ಣು ಮಾಡಲು ಪರದಾಡುತ್ತಿದ್ದಾರೆ ದಲಿತರು

    ರಾಮನಗರ: ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಮಶಾನದ ಜಾಗಕ್ಕೆ ಬೇಲಿ ಹಾಕಿರುವುದರಿಂದ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲೇ ದಲಿತರಿಗೆ ಸ್ಮಶಾನಕ್ಕೆ ಜಾಗವಿದ್ದರೂ ಅಂತ್ಯಸಂಸ್ಕಾರಕ್ಕೆ ಪರದಾಡುತ್ತಿರುವ ಘಟನೆ ನಡೆದಿದೆ.

    ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಸಮೀಪದ ಕರಿಕಲ್ ದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಸ್ಮಶಾನವಿದ್ದರೂ ಅದನ್ನು ಬಳಸದಂತಾಗಿದೆ. 2016 ರಲ್ಲಿ ಜಿಲ್ಲಾಧಿಕಾರಿಗಳು ಹೊನ್ನಿಗನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೇ ನಂಬರ್ 46 ಪಿ 1ರಲ್ಲಿ 1 ಎಕರೆ ಜಮೀನನ್ನ ಸ್ಮಶಾನಕ್ಕೆ ಮಂಜೂರು ಮಾಡಿದ್ದರು. ಆದರೆ ಗ್ರಾಮದ ಪಕ್ಕದಲ್ಲಿನ ಪೊಲೀಸ್ ತರಬೇತಿ ಕೇಂದ್ರವು ಸ್ಮಶಾನಕ್ಕೆ ನೀಡಿದ್ದ ಜಾಗವನ್ನ ತನ್ನದೆಂದು ಹೇಳಿ ತಡೆಗೋಡೆ ನಿರ್ಮಿಸಿಕೊಂಡಿದೆ.

    ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಡಳಿತ, ಸಿಎಂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಮಶಾನಕ್ಕಾಗಿ ಹೋರಾಟ ನಡೆಸಿದ್ದ ಗ್ರಾಮದ ಕಾಳಯ್ಯನ ಶವವನ್ನೇ ಸ್ಮಶಾನಕ್ಕೆ ಜಾಗ ಸಿಕ್ಕಿದ ನಂತರವೂ ಕೆರೆಯಲ್ಲಿ ಅಂತ್ಯಸಂಸ್ಕಾರ ನಡೆಸುವಂತಾಗಿದೆ. ಇಂದು ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಶವವನ್ನ ಸ್ಮಶಾನದ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಸಿದ್ದತೆ ನಡೆಸಿದಾಗ, ಪೊಲೀಸ್ ಬಂದೋಬಸ್ತ್ ಮೂಲಕ ಗ್ರಾಮಸ್ಥರನ್ನ ಹೆದರಿಸಿ, ಬೇರೆಡೆ ಅಂತ್ಯಸಂಸ್ಕಾರ ನಡೆಸುವಂತೆ ಮಾಡಲಾಗಿದೆ.

    ಇದರಿಂದ ರೊಚ್ಚಿಗೆದ್ದಿರುವ ಜನರು ಮಂಜೂರಾಗಿರುವ ಸ್ಮಶಾನದ ಜಾಗ ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಶವವನ್ನ ತಹಶಿಲ್ದಾರ್ ಕಚೇರಿ, ಇಲ್ಲವೇ ಜಿಲ್ಲಾಧಿಕಾರಿ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಸಿಎಂ ಫುಲ್ ಬ್ಯುಸಿ- ಪದಕ ಘೋಷಣೆಯಾಗಿ ವರ್ಷ ಕಳೆದ್ರೂ ಪೊಲೀಸ್ರಿಗೆ ಸಿಕ್ಕಿಲ್ಲ ಪದಕ ಭಾಗ್ಯ

    ಸಿಎಂ ಫುಲ್ ಬ್ಯುಸಿ- ಪದಕ ಘೋಷಣೆಯಾಗಿ ವರ್ಷ ಕಳೆದ್ರೂ ಪೊಲೀಸ್ರಿಗೆ ಸಿಕ್ಕಿಲ್ಲ ಪದಕ ಭಾಗ್ಯ

    ಬೆಂಗಳೂರು: ಮುಖ್ಯಮಂತ್ರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಘೋಷಣೆ ಆದ ಪದಕ ವಿತರಣೆಗೂ ಸಮಯ ಇಲ್ಲವಂತೆ. ಪೊಲೀಸ್ ಇಲಾಖೆ ಸಿಬ್ಬಂದಿಗೆ `ಮುಖ್ಯಮಂತ್ರಿಗಳ ಬಂಗಾರದ ಪದಕ’ ಘೋಷಣೆ ಮಾಡಿ ವರ್ಷ ಕಳೆದರೂ ಇನ್ನೂ ಅದನ್ನು ಪಡೆಯುವ ಭಾಗ್ಯ ಬಂದಿಲ್ಲ.

    ಹೌದು. 2017-18ನೇ ಸಾಲಿನಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳಿಗೆ `ಮುಖ್ಯಮಂತ್ರಿಗಳ ಬಂಗಾರದ ಪದಕ’ ಘೋಷಿಸಲಾಗಿತ್ತು. ಸಮಾರಂಭಕ್ಕೆ ಎರಡ್ಮೂರು ಬಾರಿ ಗೃಹ ಇಲಾಖೆ ಸಿಎಂ ಬಳಿ ಟೈಮ್ ಕೇಳಿತ್ತು. ಆದರೆ ಸಿಎಂ ಬ್ಯುಸಿ ಇದ್ದ ಕಾರಣಕ್ಕೆ ಈ ಕಾರ್ಯಕ್ರಮ ಹಾಗೆಯೇ ಬಾಕಿ ಉಳಿದಿದೆ. ಪ್ರತಿ ವರ್ಷವು ಚಾಚು ತಪ್ಪದೆ ನಡೆಯುತ್ತಿದ್ದ ಕಾರ್ಯಕ್ರಮವೀಗ ಮುಖ್ಯಮಂತ್ರಿಗಳ ಸಮಯಕ್ಕಾಗಿ ಕಾಯುವ ಪರಿಸ್ಥಿತಿ ಬಂದಿದೆ. ಇನ್ನೊಂದು ಕಡೆ ಪದಕ ಆಸೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೂ ಸಹ ನಿರಾಸೆಯಾಗಿದೆ.

    ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸುವವರಿಗೆ `ಮುಖ್ಯಮಂತ್ರಿಗಳ ಬಂಗಾರದ ಪದಕ’ ನೀಡಿ ಗೌವರ ಸಲ್ಲಿಸಲಾಗುತ್ತದೆ. 2017-18 ನೇ ಸಾಲಿನಲ್ಲಿ ಒಟ್ಟು 122 ಪೊಲೀಸರಿಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ಘೋಷಣೆಯಾಗಿದ್ದು, ಅದರಲ್ಲಿ 10 ಡಿಸಿಪಿ, 11 ಎಸಿಪಿ, 28 ಇನ್ಸ್‍ಪೆಕ್ಟರ್, 14 ಪಿಎಸ್‍ಐ, 15 ಎಎಸ್‍ಐ ಮತ್ತು 42 ಕಾನ್‍ಸ್ಟೇಬಲ್‍ಗಳಿದ್ದಾರೆ.

    ಪದಕ ಘೋಷಣೆಯಾಗಿ ವರ್ಷವಾದರು ಇನ್ನೂ ಸಿಬ್ಬಂದಿಗೆ ಅದು ಸಿಕ್ಕಿಲ್ಲ. ಇದರಿಂದ ಸರ್ಕಾರದ ಕಾರ್ಯವೈಖರಿಗೆ ಪೊಲೀಸ್ ಇಲಾಖೆ ಅಸಮಾದಾನ ವ್ಯಕ್ತಪಡಿಸುತ್ತಿದೆ. ಮುಖ್ಯಮಂತ್ರಿಗಳು ಕಾನೂನು ಸುವವ್ಯಸ್ಥೆ ಕಾಪಾಡುವವರಿಗೆ ಸಮಯ ನೀಡಿ, ಘೋಷಣೆಯಾಗಿರೋ ಪದಕ ನೀಡಿ ಅವರ ಕೆಲಸಕ್ಕೆ ಉತ್ತೇಜನ ನೀಡಬೇಕಿದೆ.

  • ಪೊಲೀಸ್ ಇಲಾಖೆ ದಂತಕತೆ- ನಾಪತ್ತೆಯಾಗಿದ್ದ ‘ದಂತ’ ದಿಢೀರ್ ಪ್ರತ್ಯಕ್ಷ

    ಪೊಲೀಸ್ ಇಲಾಖೆ ದಂತಕತೆ- ನಾಪತ್ತೆಯಾಗಿದ್ದ ‘ದಂತ’ ದಿಢೀರ್ ಪ್ರತ್ಯಕ್ಷ

    ಶಿವಮೊಗ್ಗ: ಎಸ್.ಪಿ ಕಚೇರಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಆನೆ ದಂತ ಕೊನೆಗೂ ಅನುಮಾನಾಸ್ಪದವಾಗಿ ಸಿಕ್ಕಿದೆ.

    ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೊಠಡಿಯೊಂದನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ಇದು ಪತ್ತೆಯಾಗಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಹೇಳಿದ್ದಾರೆ. ಆದರೆ, ದಂತದ ತಳಭಾಗದಲ್ಲಿ ಒಂದಷ್ಟು ಕತ್ತರಿಸಲಾಗಿದ್ದು, ಕತ್ತರಿಸಿರುವ ಗುರುತು ಸಹ ಹೊಸದಾಗಿದೆ. ಈ ದಂತ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರವು ಕಳೆದ ಜನವರಿಯಲ್ಲಿ ಸಿಐಡಿ ತನಿಖೆ ಒಪ್ಪಿಸಿದೆ.

    ಸಿಐಡಿ ತನಿಖೆ ಆರಂಭಗೊಳ್ಳುವ ಹಂತದಲ್ಲೇ ಎಸ್‍ಪಿ ಕಚೇರಿಯಲ್ಲೇ ದಂತ ಮೊಟಕು ದಂತ ಪತ್ತೆಯಾಗಿದ್ದು, ಇಲಾಖೆ ದಂತಕತೆ ಹೇಳುತ್ತಿದೆ ಎಂಬ ಶಂಕೆಗೆ ಕಾರಣವಾಗಿದೆ. 2011ರ ಫೆಬ್ರವರಿವರೆಗೂ ಎಸ್‍ಪಿ ಚೇಂಬರ್ ನಲ್ಲೇ ದಂತ ಇದ್ದ ಬಗ್ಗೆ ಪುರಾವೆಗಳಿವೆ. ನಂತರ ಇದೂವರೆಗೂ ಐವರು ಎಸ್‍ಪಿಗಳು ಬದಲಾಗಿದ್ದಾರೆ.

    ಎಸ್‍ಪಿ ಕಚೇರಿ ಆವರಣದಲ್ಲಿ ಇದ್ದ ಪುರಾತನ ಶಿಲ್ಪಗಳನ್ನು ಕುವೆಂಪು ವಿವಿ ಪ್ರಾಕ್ತನ ವಿಭಾಗಕ್ಕೆ ಕಳೆದ ವರ್ಷ ಒಪ್ಪಿಸುವ ಹಂತದಲ್ಲಿ ಈ ದಂತ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿತ್ತು. ಇಲಾಖೆ ತನಿಖೆ ನಡೆದು ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದಲೂ ತನಿಖೆ ನಡೆಯಿತು. ಆಗ ಪೊಲೀಸ್ ಇಲಾಖೆಗೆ ಸೇರಿದ ಎಲ್ಲಾ ಕಟ್ಟಡಗಳಲ್ಲೂ ಸಂಪೂರ್ಣ ಶೋಧ ನಡೆಸಲಾಗಿತ್ತು.

    ಆಗಲೂ ದಂತ ಪತ್ತೆ ಆಗದಿದ್ದಾಗ 22-5-2018ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ದಂತ ಕಳವು ಪ್ರಕರಣದ ಕುರಿತು ಅಧಿಕೃತವಾಗಿ ದೂರು ದಾಖಲಿಸಿ, ತನಿಖಾಧಿಕಾರಿಯನ್ನೂ ನೇಮಿಸಲಾಗಿತ್ತು. ಇಂತಹ ಯಾವ ತನಿಖೆ ವೇಳೆಯೂ ದೊರಕದ ದಂತ ಈಗ ದಿಢೀರನೇ ಎಸ್‍ಪಿ ಕಚೇರಿಯ ಹಳೆ ಸಾಮಗ್ರಿಗಳ ನಡುವೆ ಬಂದದ್ದಾರೂ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

    ದಂತ ನಾಪತ್ತೆ ಪ್ರಕರಣದಲ್ಲಿ ಅಮಾಯಕ ಪೊಲೀಸ್ ಪೇದೆಗಳ ಮೇಲೂ ಕ್ರಮ ಜರುಗಿಸಲಾಗಿತ್ತು. ಈ ದಂತ ನಾಪತ್ತೆ- ಪತ್ತೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂಬ ಶಂಕೆ ವ್ಯಾಪಕವಾಗಿದೆ. ಕಳೆದು ಹೋದ ದಂತ ಪತ್ತೆಯಾಗಿದ್ದು, ಮಂಗಳವಾರ ಪತ್ತೆ ಆಗಿದ್ದು, ಹೇಗೆ ಎಂಬ ಬಗ್ಗೆಯೇ ಮತ್ತೊಂದು ತನಿಖೆ ಅಗತ್ಯವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

    ಪೂಜ್ಯ ಗದ್ದುಗೆಯಲ್ಲಿ ಐಕ್ಯರಾದ ಶ್ರೀಗಳು

    ತುಮಕೂರು: ವಿಶ್ವಚೇತನ, ವಿಶ್ವರತ್ನ, ಕಾಯಕಯೋಗಿ, ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿಗಳ ಯುಗಾಂತ್ಯವಾಗಿದೆ. ಸೋಮವಾರ 11 ಗಂಟೆ 44 ನಿಮಿಷಕ್ಕೆ ಲಿಂಗೈಕ್ಯರಾದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದಯದಿಂದ ಬೀಳ್ಕೊಡುಗೆ ನೀಡಿದ್ದಾರೆ. ಸಿದ್ದಗಂಗಾ ಮಠದ ಆವರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿಯವರನ್ನು ಗದ್ದುಗೆಯಲ್ಲಿ ಐಕ್ಯ ಮಾಡಲಾಗಿದೆ.

    ಮಧ್ಯಾಹ್ನ 4.30ರ ವೇಳೆಗೆ ಆರಂಭವಾದ ಕ್ರಿಯಾ ವಿಧಾನ, ವಿಧಿ ವಿಧಾನಗಳು ಅಂತಿಮವಾಗಿ 8.30 ಗಂಟೆಗೆ ಪೂರ್ಣಗೊಂಡಿತು. ಶ್ರೀಗಳು ಚೈತನ್ಯ ಅವರ ದೇಹವನ್ನು ಬಿಟ್ಟು ಹೋದ ಬಳಿಕ ಅವರ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಕ್ರಿಯಾ ಸಮಾಧಿ ವಿಧಿ ವಿಧಾನ ಮಾಡಲಾಯಿತು. ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾತ್ರ ಲಿಂಗಾಯತ ಕ್ರಿಯಾಸಮಾಧಿ ಮಾಡಲಾಗುತ್ತದೆ.

    ಸಂಜೆ 4.30ಕ್ಕೆ ಆರಂಭವಾದ ಈ ಪ್ರಕ್ರಿಯೆಯಲ್ಲಿ ಕಿರಿಯ ಶ್ರೀಗಳು ಮುಂದಿದ್ದು ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದರು. 5 ಗಂಟೆಗೆ ಶ್ರೀಗಳು ಮಹಾ ಮಂಗಳಾರತಿ ಮಾಡಿದ ಬಳಿಕ ಮೆರವಣಿಗೆಗೆ ಆರಂಭ ಮಾಡಲಾಯಿತು. 5.15 ಗಂಟೆಗೆ ಸುಮಾರಿಗೆ ಲಿಂಗೈಕ್ಯ ದೇಹವನ್ನು 1 ಲಕ್ಷದ 1 ರುದ್ರಾಕ್ಷಿ ಹಾಗೂ ಹೂಗಳಿಂದ ಅಲಂಕಾರ ಮಾಡಿದ್ದ ವಿಮಾನಗೋಪುರದ ಮೂಲಕ ಅಂತಿಮ ಯಾತ್ರೆ ಮೆರವಣಿಗೆ ಆರಂಭ ಮಾಡಲಾಯಿತು.

    ಸಂಜೆ 6 ಗಂಟೆ ವೇಳೆಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ದಿನೇಶ್ ಗುಂಡೂರಾವ್, ವೀರಪ್ಪ ಮೊಯ್ಲಿ, ದೇಶಪಾಂಡೆ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಜನಾರ್ದನ ರೆಡ್ಡಿ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿ.ಸೋಮಣ್ಣ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು, ಸಂಸದರು, ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದು, ಗೌರವ ಸಲ್ಲಿಸಿದರು. ಬಳಿಕ 3 ಸುತ್ತು ಕುಶಾಲುತೋಪು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಲಿಂಗ ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಸಿಎಂ ಕುಮಾರಸ್ವಾಮಿ ಅವರು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಅಧಿಕೃತವಾಗಿ ಶ್ರೀಗಳ ಲಿಂಗಕಾಯವನ್ನು ಮಠಕ್ಕೆ ಹಸ್ತಾಂತರ ಮಾಡಿದರು. ರಾಷ್ಟ್ರಧ್ವಜ ಹೊದಿಸುವಾಗ “ಶ್ರೀಗಳಿಗೆ ಭಾರತರತ್ನ ನೀಡಿ” ಎನ್ನುವ ಘೋಷ ಕೇಳಿಬಂತು.

    ಪಂಚ ವಾದ್ಯಗಳ ಮೂಲಕ ಶಿವಯೋಗಿಗಳ ಗದ್ದುಗೆವರೆಗೂ ಮೆರವಣಿಗೆ ಮಾಡಲಾಯಿತು. “ಶಿವಕುಮಾರ ಸ್ವಾಮೀಜಿಗಳಿಗೆ, ನಡೆದಾಡುವ ದೇವರಿಗೆ ಜಯವಾಗಲಿ, ಅನ್ನ ದಾಸೋಹಿಗೆ ಜಯವಾಗಲಿ, ಜ್ಞಾನ ದಾಸೋಹಿಗೆ ಜಯವಾಗಲಿ” ಎಂಬ ಘೋಷ ಕೂಗುತ್ತಾ 3 ಪ್ರದಕ್ಷಿಣೆ ಮಾಡಿದ ಬಳಿಕ ಗದ್ದುಗೆಯ ಸಮಾಧಿ ಸ್ಥಳದಲ್ಲಿ ಐವರು ಸ್ವಾಮೀಜಿಗಳು ಈ ವೇಳೆ ಕ್ರಿಯಾ ವಿಧಿ ವಿಧಾನಗಳನ್ನು ಆರಂಭಿಸಿದರು. ಗದ್ದುಗೆ ಪೂಜೆ ಸ್ಥಳದಲ್ಲಿ ಕ್ರಿಯಾ ಸಮಾಧಿ ಶಾಸ್ತ್ರಗಳು, ಮಂತ್ರ ಪಠಣ ಮೂಲಕ ಕಾರ್ಯ ನಡೆಯಿತು. ಅಟವೀ ಶಿವಯೋಗಿಗಳ ಗದ್ದುಗೆಯ ಅರ್ಚಕರೂ ಕೂಡ ಈ ಪೂಜೆಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದಲೇ ನಡೆದ ಪೂಜೆ ಶಾಸ್ತ್ರಗಳನ್ನು ಕಿರಿಯ ಸ್ವಾಮೀಜಿಗಳು ಪೂರ್ಣಗೊಳಿಸಿದರು. ಕ್ರಿಯಾ ಸಮಾಧಿ ವೇಳೆ 10 ರಿಂದ 11 ಸಾವಿರ ವಿಭೂತಿ ಗಟ್ಟಿ, 20 ಚೀಲ ಅಂದರೆ 500 ಕೆಜಿ ಉಪ್ಪು, 10 ಚೀಲ ಮರಳು, 1001 ವಿವಿಧ ರೀತಿಯ ಪತ್ರೆಗಳನ್ನು ಬಳಕೆ ಮಾಡಲಾಗಿತ್ತು.

    ಕ್ರಿಯಾ ಸಮಾಧಿ: ವೀರಶೈವ ಲಿಂಗಾಯಿತ ಆಗಮೋಕ್ತ ಕ್ರಿಯಾ ಸಮಾಧಿ ವಿಧಿ ವಿಧಾನಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. 9 ಪಾದ ಆಳ, 9 ಪಾದ ಉದ್ದ, 5 ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ 3 ಹಂತಗಳಲ್ಲಿ ಮೆಟ್ಟಿಲು (ಸೋಪನ) ನಿರ್ಮಾಣ ಮಾಡಲಾಗಿರುತ್ತದೆ. ಶ್ರೀಗಳ ಪಾರ್ಥಿವ ಶರೀರವನ್ನು ಕೂರಿಸಲು ಆದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ಮಿಸಲಾಗಿತ್ತು. ಇದರಲ್ಲಿ ಶ್ರೀಗಳ ಐಕ್ಯವನ್ನಿಟ್ಟು, ವಿಭೂತಿ, ಪತ್ರೆ, ಉಪ್ಪು ಸೇರಿದಂತೆ ವಿವಿಧ ಬಿಲ್ವಪತ್ರೆಗಳನ್ನ ಕ್ರಿಯಾ ಸಮಾಧಿಯನ್ನು ಮುಚ್ಚಲಾಯಿತು.

    ಮೊದಲಿಗೆ ಪಾರ್ಥೀವ ಶರೀರಕ್ಕೆ ನಾಡಿನ ಪುಣ್ಯ ನದಿಗಳಿಂದ ತರಿದ್ದ ಪವಿತ್ರ ತೀರ್ಥದಿಂದ ಅಭಿಷೇಕ ನೆರವೇರಿಸಿ ಹೊಸ ಕಶಾಯ ವಸ್ತ್ರಗಳನ್ನು ಧಾರಣೆ ಮಾಡಲಾಯಿತು. ಈ ವೇಳೆ ಪಂಚಾಮೃತ ಹಾಗೂ ಪತ್ರೆ ಇಟ್ಟು ಪ್ರತಿ ಸೋಪಾನದಲ್ಲೂ ಅಭಿಷೇಕ ನಡೆಸಲಾಯಿತು.

    ಪಾರ್ಥಿವ ಶರೀರವನ್ನು ಗದ್ದುಗೆಯ ಒಳಭಾಗದ ಗೂಡಿನಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಕೂರಿಸಿ, ಕೈಗೆ ಇಷ್ಟ ಲಿಂಗವನ್ನು ನೀಡಲಾಯಿತು. ನಂತರ ರುದ್ರ ಚಮಕ ಪಠಣ ಮಾಡುತ್ತಾ ಪಾರ್ಥೀವ ಶರೀರಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಈ ವೇಳೆ ಶ್ರೀಗಳಿಗೆ ಮಹಾ ಮಂಗಳಾರತಿ ಹಾಗೂ ತಂಬಿಟ್ಟು, ಚಿಗಲಿ ಹಾಗೂ ಹಸಿ ಕಡಲೆಕಾಳು ನೈವೇದ್ಯ ನೆರವೇರಿಸಲಾಯಿತು. ಕೆಳ ಭಾಗದಲ್ಲಿ ಉಪ್ಪು, ಮೆಣಸು ನಂತರ ವಿಭೂತಿ ಗಟ್ಟಿಗಳಿಂದ ಲಿಂಗ ಶರೀರವನ್ನು ಮುಚ್ಚಲಾಯಿತು.

    https://www.youtube.com/watch?v=S5rWpX2kQ2g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಲಿಂಗೈಕ್ಯದಿಂದ ಹಿಡಿದು ಕ್ರಿಯಾ ವಿಧಾನವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಗೆ ಸಿಎಂ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ.

    ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೊಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕಾರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

    ರಾತ್ರಿಯೆಲ್ಲಾ ಮಠದ ಎನ್‍ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರು ರಾತ್ರಿ ಇಡೀ ನಿಂತು ಶ್ರಮವಹಿಸಿದ್ದೀರಾ. ರಾಜ್ಯ ಸರ್ಕಾರ ಪೊಲೀಸರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಮಠದ ಆವರಣದಲ್ಲಿ ಈ ಕುರಿತು ಭರವಸೆ ನೀಡುತ್ತಿದ್ದು, ಔರಾದ್ಕಾರ್ ವರದಿ ಜಾರಿ ಮಾಡುವ ಕಾರ್ಯ ಮಾಡಲಾಗುತ್ತದೆ. ಅಲ್ಲದೇ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಖುದ್ದು ಭೇಟಿ ಮಾಡಿ ಶಿಪಾರಸ್ಸು ಮಾಡುತ್ತೇನೆ. ಈ ಬಗ್ಗೆ ಭಕ್ತರಿಗೆ ಭರವಸೆ ನೀಡುತ್ತೇನೆ ಎಂದು ಸಿಎಂ ತಿಳಿಸಿದರು.

    ಮುಂದಿನ ಸಮಯದಲ್ಲೂ ಮಠಕ್ಕೆ ಆಗಮಿಸುವ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲಾವುದು. ನಾಡಿಗೆ ಪೊಲೀಸ್ ಇಲಾಖೆ ಸಲ್ಲಿಸಿರುವ ಸೇವೆಗೆ ರಾಜ್ಯದ ಜನರು ಕೂಡ ಅಭಿನಂದನೆ ಸಲ್ಲಿಸುತ್ತಾರೆ. ನಿಮ್ಮ ಉತ್ತಮ ಸೇವೆ ಹೀಗೇ ಮುಂದುವರಿಯಲಿ ಎಂದು ಮನವಿ ಮಾಡುತ್ತೇನೆ ಎಂದರು.

    https://www.youtube.com/watch?v=nE4fxo3zMMQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕ್‌ಗಳಲ್ಲಿ ನಮಾಜ್ ಮಾಡುವಂತಿಲ್ಲ: ಪೊಲೀಸರಿಂದ ಖಡಕ್ ನೋಟಿಸ್

    ಪಾರ್ಕ್‌ಗಳಲ್ಲಿ ನಮಾಜ್ ಮಾಡುವಂತಿಲ್ಲ: ಪೊಲೀಸರಿಂದ ಖಡಕ್ ನೋಟಿಸ್

    ಸಾಂದರ್ಭಿಕ ಚಿತ್ರ

    ಲಕ್ನೋ: ಪಾರ್ಕ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಂ ಉದ್ಯೋಗಿಗಳು ಶುಕ್ರವಾರದ ದಿನ ನಮಾಜ್ ಮಾಡುವುದನ್ನು ತಡೆಯಬೇಕೆಂದು ಉತ್ತರಪ್ರದೇಶ ಪೊಲೀಸರು ನೊಯ್ಡಾದಲ್ಲಿರುವ ಎಲ್ಲಾ ಕಚೇರಿ ಹಾಗೂ ಕಂಪನಿಗಳಿಗೆ ನೋಟಿಸ್ ನೀಡಿದ್ದಾರೆ.

    ಶುಕ್ರವಾರ ನಡೆಯುವ ನಮಾಜ್ ಅನ್ನು ಪಾರ್ಕ್ ಸೇರಿದಂತೆ ಇತರೆ ಯಾವುದೇ ತೆರೆದ ಸಾರ್ವಜನಿಕ ಸ್ಥಳಗಳಲ್ಲಿ ನಡೆಸದೇ, ಕೇವಲ ಮಸೀದಿಗಳಲ್ಲೇ ಮಾತ್ರ ನಡೆಸಬೇಕೆಂದು ಮುಸ್ಲಿಂ ನೌಕರರಿಗೆ ಸೂಚನೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರು ಆದೇಶ ನೀಡಿದ್ದಾರೆ.

    ಒಂದು ವೇಳೆ ಕಂಪನಿಗಳ ಉದ್ಯೋಗಿಗಳು ಪಾರ್ಕ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಕಂಡುಬಂದರೆ, ಅದಕ್ಕೆ ನೇರವಾಗಿ ಕಂಪನಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

    ಇತ್ತೀಚೆಗೆ ನೋಯ್ಡಾ ಸೇರಿದಂತೆ ಇತರೆ ನಗರಗಳಲ್ಲಿ ಪಾರ್ಕ್ ಗಳಲ್ಲೆ ನಮಾಜ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಪ್ರಮುಖವಾಗಿ ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳಿಗೆ ನೋಟಿಸ್ ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ರಾಜ್ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ರೀತಿಯ ಕ್ರಮವನ್ನು ಕೈಗೊಂಡಿದ್ದೇವೆ. ನಮಾಜ್ ಮಾಡುವವರು ಮಸೀದಿಗಳಿಗೆ ತೆರಳಿ ನಮಾಜ್ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

    ನೋಯ್ಡಾದ ಹಲವು ಕಂಪನಿಗಳ ನೌಕರರು ಪಾರ್ಕ್ ಗಳಲ್ಲೇ ನಮಾಜ್ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಹೀಗಾಗಿ ನೋಯ್ಡಾದ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ನೋಟಿಸ್ ನೀಡಿದ್ದೇವೆ. ಅಲ್ಲದೇ ಉದ್ಯೋಗಿಗಳು ಮಸೀದಿ, ಈದ್ಗಾ ಮೈದಾನಗಳಲ್ಲಿ ನಮಾಜ್ ಸಲ್ಲಿಸುವಂತೆ ಸೂಚನೆ ನೀಡಲು ಕಂಪನಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ನಿಧನದಿಂದ ಹಿಡಿದು ಅಂತ್ಯಕ್ರಿಯೆಯವರೆಗೂ ಅಚ್ಚುಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಯ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಂಠೀರವ ಸ್ಟೇಡಿಯಂ ಬಳಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಬೆಂಗಳೂರು ಹಾಗೂ ಮಂಡ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯ ಎಲ್ಲರು ಎರಡು ದಿನಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಭದ್ರತೆ ಒದಗಿಸಿದ್ದಾರೆ. ಬಹಳ ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿದರು.

    ಜನರಿಂದಲೂ ಪೊಲೀಸರು ಶ್ಲಾಘನೆ ಪಡೆದುಕೊಂಡಿದ್ದಾರೆ. ಪೊಲೀಸರು ಮುಂದಿನ ದಿನಗಳಲ್ಲಿ ಹೀಗೆಯೇ ಬಂದೋಬಸ್ತ್ ಒದಗಿಸುವ ಮೂಲಕ ಜನರ ಮೆಚ್ಚುಗೆ ಪಡೆಯಲಿ. ಪೊಲೀಸ್ ವಿಭಾಗಕ್ಕೆ ನನ್ನ ಅಭಿನಂದನೆಗಳು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಮೈದಾನಕ್ಕೆ ಯಾವೆಲ್ಲ ವಸ್ತು ತರುವಂತಿಲ್ಲ?

    ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಮೈದಾನಕ್ಕೆ ಯಾವೆಲ್ಲ ವಸ್ತು ತರುವಂತಿಲ್ಲ?

    ಬೆಂಗಳೂರು: 72 ಸ್ವಾತಂತ್ರ್ಯ ದಿನಾಚರಣೆಗೆ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ ಜೋರಾಗಿ ನಡೆಯುತ್ತಿದೆ.

    ಪೊಲೀಸ್ ಪಡೆ, ಹೊಂಗಾಡ್ರ್ಸ್, ಎನ್‍ಸಿಸಿ, ಶಾಲಾ ಮಕ್ಕಳು, ವಾದ್ಯಗೋಷ್ಠಿ ತಂಡ ಸೇರಿದಂತೆ ವಿವಿಧ ತಂಡಗಳು ಇಂದು ತಾಲೀಮು ನಡೆಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ಬೆಂಗಳೂರು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಜಂಟಿಯಾಗಿ ತಾಲೀಮು ಪರಿಶೀಲನೆ ನಡೆಸಿದರು.

    ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಮೈದಾನ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಭದ್ರತೆಗಾಗಿ ಮೈದಾನದ ಸುತ್ತ 1,500 ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 9 ಡಿಸಿಪಿ, 16 ಎಸಿಪಿ, 47 ಪಿಐ, 102 ಪಿಎಸ್‍ಐ, 77 ಎಎಸ್‍ಐ, 540 ಪಿಸಿ, 75 ಮಹಿಳಾ ಸಿಬ್ಬಂದಿ, 114 ಮಪ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೈದಾನದ ಸುತ್ತ ಮುತ್ತ 56 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದರು.

    ಇಷ್ಟೇ ಅಲ್ಲದೇ 9 ಕೆಎಎಸ್‍ಆರ್‍ಪಿ ತುಕಡಿ, 5 ಸಿಎಆರ್ ತುಕಡಿ, 3 ಅಗ್ನಿಶಾಮಕ ವಾಹನ, 2 ಆಂಬುಲೆನ್ಸ್, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿ-ಸ್ವಾಟ್, 1 ಆರ್ ಯಯವಿ ನಿಯೋಜನೆ, 4 ಬ್ಯಾಗೇಜ್ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ. ಮೈದಾನಕ್ಕೆ ಬರುವ ಸಾರ್ವಜನಿಕರು ಮೊಬೈಲ್, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ವಿಡಿಯೋ, ಸ್ಟಿಲ್ ಕ್ಯಾಮೆರಾ, ನೀರಿನ ಬಾಟಲ್, ಶಸ್ತ್ರಾಸ್ತ್ರ, ಚಾಕು, ಚೂರಿ, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲಿ, ಬಾವುಟ, ಪಟಾಕಿ, ಸ್ಫೋಟಕ ವಸ್ತು ತರುವಂತಿಲ್ಲ ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.

    ಆಗಸ್ಟ್ 15 ರಂದು ಹಸಿರು ಕರ್ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಸಾಂಕೇತಿಕವಾಗಿ ಗಿಡ ನೆಟ್ಟು ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಎಲ್ಲಾ ಸಾರ್ವಜನಿಕರಿಗೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews