Tag: police department

  • ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಇದು ಶೋಭೆ ತರಲ್ಲ: ರವಿಕುಮಾರ್

    ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಇದು ಶೋಭೆ ತರಲ್ಲ: ರವಿಕುಮಾರ್

    ಬೆಂಗಳೂರು: ಪೊಲೀಸ್ ಇಲಾಖೆಯನ್ನು ಅವಮಾನಿಸುವ ಕೆಲಸ ಮಿಣಿಮಿಣಿಯ ಖ್ಯಾತಿಯ ಕುಮಾರಸ್ವಾಮಿಗೆ ಶೋಭೆ ತರಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮನಸ್ಸೋ ಇಚ್ಚೆ ಮಾತಾಡುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ಮಾಡಿದ್ದಕ್ಕೆ ಪೋಲೀಸ್ ಇಲಾಖೆಯನ್ನು ಅಭಿನಂದಿಸಬೇಕಿತ್ತು.ಆದರೆ ಅವರನ್ನು ಅನುಮಾನಿಸುವ ಕೆಲಸ ಮಾಡಿದ್ದಾರೆ. ಇದು ಮಿಣಿಮಿಣಿ ಖ್ಯಾತಿಯ ಕುಮಾರಸ್ವಾಮಿಗೆ ಶೋಭೆ ತರಲ್ಲ ಎಂದಿದ್ದಾರೆ.

    ಕೊಲೆ ಬೆದರಿಕೆ ಇದ್ದರೆ ಸರ್ಕಾರಕ್ಕೆ ದೂರು ನೀಡಲಿ. ಸರ್ಕಾರ ಅವರಿಗೆ ಸೂಕ್ತ ಭದ್ರತೆ ಕೊಡುತ್ತೆ. ಈ ರೀತಿಯ ಮಾತುಗಳನ್ನು ಆಡುತ್ತಿರುವುದರಿಂದಲೇ ಅವರು ಒಂದೂ ಸ್ಥಾನ ಗೆಲ್ಲಲಿಲ್ಲ. ಹೀಗೆ ಮಾತಾಡುತ್ತಾ ಹೋದರೆ ಜೆಡಿಎಸ್ ನೆಲಕಚ್ಚಿ ಹೋಗುತ್ತದೆ. ಅವರು ರಾಜ್ಯದ ಘನತೆ ಎತ್ತಿ ಹಿಡಿಯುವ ಮಾತನ್ನಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಿಣಿಮಿಣಿ ಪೌಡರ್ ಅನ್ನೋದು, ಹದಿನೈದು ದಿನಕ್ಕೊಮ್ಮೆ ಸಿಡಿ ಬಿಡುಗಡೆ ಮಾಡೋದನ್ನ ಬಿಡಲಿ ಎಂದು ರವಿಕುಮಾರ್ ಕಿಡಿಕಾರಿದ್ದಾರೆ.

  • ಸಿಎಂ ಮುಂದೆ 25 ಬೇಡಿಕೆಗಳನ್ನ ಇಟ್ಟ ಪೊಲೀಸ್ ಸಿಬ್ಬಂದಿ

    ಸಿಎಂ ಮುಂದೆ 25 ಬೇಡಿಕೆಗಳನ್ನ ಇಟ್ಟ ಪೊಲೀಸ್ ಸಿಬ್ಬಂದಿ

    ಬೆಂಗಳೂರು: ವೇತನ ತಾರತಮ್ಯ ನಿವಾರಣೆ, ಪೊಲೀಸ್ ಕುಟುಂಬಗಳಿಗೆ ದೊರಕುವ ಸೌಲಭ್ಯ, ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕೆಳಹಂತದ ಪೊಲೀಸ್ ಸಿಬ್ಬಂದಿ ನಾಲ್ಕೈದು ವರ್ಷಗಳಿಂದ ಹೋರಾಟ ಮಾಡುತ್ತಾ ಮನವಿ ಪತ್ರವನ್ನ ಸಲ್ಲಿಸುತ್ತಾ ಬಂದಿದ್ದಾರೆ. ಈ ಬಾರಿ ಮಾರ್ಚ್ ತಿಂಗಳಲ್ಲಿ ಮಂಡನೆ ಆಗುವ 2020 -21ನೇ ಸಾಲಿನ ಬಜೆಟ್‍ನ್ನಲ್ಲಾದರೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪೊಲೀಸ್ ಸಿಬ್ಬಂದಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    ರಾಜ್ಯದ ವಿವಿಧ ಜಿಲ್ಲೆಗಳ 95 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಬೇರೆ ರಾಜ್ಯದ ಮಾದರಿಯಂತೆ ನಮಗೂ ಸೌಲಭ್ಯ ಕಲ್ಪಿಸಿ ಈ ಮನವಿ ಪತ್ರವನ್ನು ಖುದ್ದಾಗಿ ಓದಿ ನಿರ್ಧಾರ ತೆಗೆದುಕೊಂಡು ಬಜೆಟ್‍ನಲ್ಲಿ ಮಂಡಿಸಿ ಎಂದು ವಿನಮ್ರತೆಯಿಂದ ಬೇಡಿಕೊಂಡಿದ್ದಾರೆ.

    ಬೇಡಿಕೆಗಳೇನು?
    1. ರಾಘವೇಂದ್ರ ಔರಾದ್ಕರ್ ಅವರು ನೀಡಿರುವ ವರದಿಯನ್ನು ಪ್ರಸ್ತುತ ಬಜೆಟ್‍ನಲ್ಲಿ ಮಂಡಿಸಿ, ಇದಕ್ಕಾಗಿ 5,000 ಕೋಟಿ ರೂ. ಮೀಸಲು ಇಡಬೇಕು.

    2. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪಾಲಿಗೆ ಮರಣ ಶಾಸನವಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ, ಆ ಯೋಜನೆಯನ್ನು ಮೊದಲಿನಂತೆ ಸಂಪೂರ್ಣ ಯೋಜನೆಯಾಗಿ ಜಾರಿಮಾಡುವಂತೆ ಆಗ್ರಹ.

    3. ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿದ ಕೂಡಲೇ ಏಪ್ರಿಲ್ 1, 2020ರಿಂದ ಜಾರಿಗೆ ಬರುವಂತೆ ಎಲ್ಲಾ ಸರ್ಕಾರಿ ನೌಕರರಿಗೆ ಜಿಪಿಎಫ್ ಸೌಲಭ್ಯ ಜಾರಿಗೆ ಗೊಳಿಸಲು ಮನವಿ.

    4. ರಾಘವೇಂದ್ರ ಔರದ್ಕರ್ ವರದಿಯಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಮೂಲ ವೇತನದಲ್ಲಿ ಶೇ. 30ರಿಂದ 35ರಷ್ಟು ಹೆಚ್ಚಳ ಮಾಡಬೇಕು.

    5. ಪೊಲೀಸ್ ಇಲಾಖೆಯಲ್ಲಿನ ಎಲ್ಲಾ ಅಧಿಕಾರಿಗಳ ವೇತನ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಹೆಚ್ಚಾಳ ಮಾಡುವಂತೆ ಆಗ್ರಹ.

    6. ತೆಲಂಗಾಣ ರಾಜ್ಯದ ಮಾದರಿಯಂತೆ ಹೊಸದಾಗಿ ಸೇರಿದ ಪೊಲೀಸ್ ಕಾನ್ಸ್‌ಟೇಬಲ್ ವೇತನವನ್ನ 45 ಸಾವಿರ ರೂಪಾಯಿ ಮಾಡುವಂತೆ ಬೇಡಿಕೆ.

    7. ರಾಘವೇಂದ್ರ ಔರದ್ಕರ್ ಐಪಿಎಸ್, ಎಡಿಜಿಪಿ ಅವರ ವೇತನ ತಾರತಮ್ಯ ನಿವಾರಣ ಸಮಿತಿ ಮುಂದಿರುವ ಉಳಿದ ಹಣವನ್ನು ನೀಡುವುದರ ಬಗ್ಗೆ ಮನವಿ.

    8. ಪೊಲೀಸ್ ಕಾನ್ಸ್‌ಟೇಬಲ್ ಗಳಿಗೆ ನೀಡುವ ಸಾರಿಗೆ ಭತ್ಯೆಯನ್ನು 600 ರಿಂದ 2,000 ರೂಪಾಯಿಗೆ ಹೆಚ್ಚಳ ಮಾಡುವಂತೆ ವಿನಂತಿ.

    9. ಸ್ಪೆಷಲ್ ಕಿಟ್ ಭತ್ಯೆಯನ್ನು 40 ರೂಪಾಯಿಂದ 500 ರೂಪಾಯಿಗೆ ಹೆಚ್ಚಳ ಮಾಡುವಂತೆ ಆಗ್ರಹ.

    10. ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ನೋಡುವ ಪಡಿತರ ವಿತರಣಾ ಭತ್ಯೆಯನ್ನು 400 ರಿಂದ 4,000 ಸಾವಿರ ರೂಪಾಯಿ ಮಾಡುವಂತೆ ಮನವಿ.

    11. ವಾಯುವ್ಯ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಇರುವ ತಂತ್ರಾಂಶ ಆಧಾರಿತ ರಜೆಯ ನಿಯಮವನ್ನು ಪೊಲೀಸ್ ಇಲಾಖೆಯಲ್ಲಿ ಜಾರಿಗೆ ತರುವಂತೆ ಒತ್ತಾಯ.

    12. ಅರ್ಥಿಕ ಇಲಾಖೆ ಮಂಜೂರು ಮಾಡುತ್ತಿರುವ ವಾರದ ರಜೆಯ ಭತ್ಯೆ 200 ರೂಪಾಯಿಯನ್ನು ರದ್ದು ಮಾಡಿ ಖಾಯಂ ರಜೆ ನೀಡವಂತೆ ಆಗ್ರಹ.

    13. 2ನೇ ಶನಿವಾರ ಮತ್ತು 4 ನೇ ಶನಿವಾರದ ರಜೆಯ ಬದಲಾಗಿ ವಾರ್ಷಿಕವಾಗಿ ಒಂದು ತಿಂಗಳು ಹೆಚ್ಚುವರಿ ವೇತನವನ್ನು ನೀಡುವಂತೆ ಮನವಿ.

    14. ಪೊಲೀಸ್ ಪೇದೆಯಿಂದ ಹಿಡಿದು ಪಿಎಸ್‍ಐವರೆಗೂ ಸರ್ಕಾರಿ ರಜೆ ದಿನಗಳ ಸಂಬಳವನ್ನು ನೀಡುವ ಬದಲು ಆ ದುಡ್ಡನ್ನು ವಿವಿಧ ಭತ್ಯೆಗಳನ್ನ ನೀಡಲು ಬಳಸಲಾಗ್ತಿದೆ. ಹೀಗಾಗಿ ಸರ್ಕಾರಿ ರಜೆ ದಿನಗಳ ಸಂಬಳ ನೀಡಿ ಮತ್ತು ಭತ್ಯೆಯೂ ನೀಡಬೇಕಾಗಿ ವಿನಂತಿ.

    15. ಪೊಲೀಸ್ ಪೇದೆಯಿಂದ ಹಿಡಿದು ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನೀಡುವ ಭ್ಯತ್ಯೆಯನ್ನು ಪರಿಷ್ಕರಿಸಿ ಹೆಚ್ಚಳ ಮಾಡುವಂತೆ ಮನವಿ.

    16. ಕೇಂದ್ರದಲ್ಲಿ ಪೊಲೀಸ್ ಪೇದೆಯ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಒಂದು ಮಗುವಿಗೆ 25 ಸಾವಿರ ರೂಪಾಯಿ ನೀಡುವಂತೆ ರಾಜ್ಯದಲ್ಲೂ ಪೊಲೀಸ್ ಪೇದೆಯ ಮಕ್ಕಳಿಗೆ ಶಿಕ್ಷಣಕ್ಕೆ ಸಹಕರಿಸುವಂತೆ ಒತ್ತಾಯ.

    17. ಪೊಲೀಸ್ ಪೇದೆ ಮತ್ತು ಹೆಡ್ ಕಾನ್ಸ್‌ಟೇಬಲ್ ಗಳ ನಿಶ್ಚಿತ ಪ್ರಯಾಣ ಭತ್ಯೆಯನ್ನು ಹೆಚ್ಚಳ ಮಾಡುವಂತೆ ಮನವಿ.

    18. ಪ್ರತಿ ವರ್ಷ ಕನಿಷ್ಠ ಒಂದು ಸಲವಾದರೂ ಪೊಲೀಸ್ ಸಿಬ್ಬಂದಿ ಜೊತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಭೆ ಮಾಡುವಂತೆ ಬೇಡಿಕೆ.

    19. ಹಾಸನ ಜಿಲ್ಲಾ ಪೊಲಿಸ್ ಮಾದರಿಯಂತೆ ಪಿ.ಸಿ, ಹೆಚ್.ಸಿಗಳ ವಾರದ ರಜೆಯ ಭತ್ಯೆಯನ್ನು ಸಂಬಳದಲ್ಲಿ ಸೇರಿಸಿಕೊಡುವಂತೆ ಒತ್ತಾಯ.

    20. ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಒಂದು ತಿಂಗಳ ಕಾಲ ಉಚಿತವಾಗಿ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಸಂಚರಿಸಲು ಮನವಿ

    21. ಪೊಲೀಸ್ ಪೇದೆ, ಎಎಸ್‍ಐ, ಹೆಚ್.ಸಿ ಕರ್ತವ್ಯದ ಮೇಲೆ ಸಂಚರಿಸಲು ಖಾಯಂ ಉಚಿತ ಬಸ್ ಸೇವೆಗೆ ಆಗ್ರಹ.

    22. ಪೊಲೀಸ್ ಸಿಬ್ಬಂದಿಗೆ ಒಂದು ತಿಂಗಳ ಕುಟುಂಬದ ಜೊತೆ ಸಂಚಾರ ಮಾಡಲು ಉಚಿತ ರೈಲ್ವೆ ಪಾಸ್ ನೀಡುವಂತೆ ಮನವಿ.

    23. ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್ ಗೆ ಕರ್ತವ್ಯದ ಮೇಲೆ ಸಂಚರಿಸಲು ಭಾರತದಾದ್ಯಂತ ಉಚಿತ ರೈಲ್ವೆ ಖಾಯಂ ಬಸ್ ಪಾಸ್ ನೀಡುವಂತೆ ಆಗ್ರಹ.

    24. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ 8 ಗಂಟೆಗಳ ಕಾಲ ಕರ್ತವ್ಯದ ಸಮಯ ನಿಗದಿಪಡಿಸುವಂತೆ ಮನವಿ.

    25. ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು 8 ಗಂಟೆ ಮೀರಿ ಕೆಲಸ ಮಾಡಿದ್ದಲ್ಲಿ ಪ್ರತಿ ಗಂಟೆಗೆ 500 ರೂಪಾಯಿ ನೀಡುವಂತೆ ಒತ್ತಾಯ.

  • ಮಂಗಳೂರಿನಲ್ಲಿ ಎಲ್ಲಾ ಸಮಾವೇಶಗಳಿಗೆ ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆ

    ಮಂಗಳೂರಿನಲ್ಲಿ ಎಲ್ಲಾ ಸಮಾವೇಶಗಳಿಗೆ ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆ

    ಮಂಗಳೂರು: ಪೌರತ್ವ ಮಸೂದೆಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ, ಹಿಂಸಾಚಾರ, ಗೋಲಿಬಾರ್ ಘಟನೆಯ ಕಾವಿನಿಂದ ನಿಧಾನವಾಗಿ ಹೊರ ಬರುತ್ತಿರುವ ಮಂಗಳೂರು ಈಗ ಮತ್ತೊಂದು ಕದನಕ್ಕೆ ಸಿದ್ಧವಾಗುತ್ತಿದೆ.

    ಪೌರತ್ವ ಮಸೂದೆ ವಿರೋಧಿಸಿ ಈ ತನಕ ಹೋರಾಟಗಳು ನಡೆಯುತ್ತಿದ್ದರೆ, ಈಗ ಮಸೂದೆ ಪರವಾಗಿ ಸಮಾವೇಶ ನಡೆಸೋಕೆ ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಈ ಪರ – ವಿರೋಧ ಸಮಾವೇಶಗಳು ಮಂಗಳೂರಿನಲ್ಲಿ ಮತ್ತೆ ಶಾಂತಿ ಕದಡುವ ಕಾರಣ ಪೊಲೀಸರು ನಗರ ವ್ಯಾಪ್ತಿಯಲ್ಲಿ ಸಮಾವೇಶಕ್ಕೆ ಅನುಮತಿಯನ್ನೇ ನಿರಾಕರಿಸಿದ್ದಾರೆ.

    ಗಲಭೆಯಿಂದ ನಲುಗಿದ ಬಳಿಕ, ನಿಧಾನವಾಗಿ ಸುಧಾರಿಸುತ್ತಿರುವ ರಾಜ್ಯದ ಕಡಲನಗರಿ ಮಂಗಳೂರಿನಲ್ಲಿ ಮತ್ತೆ ಪೌರತ್ವ ಮಸೂದೆ ಕಿಚ್ಚು ಹಚ್ಚಲಿದೆ. ಅದಕ್ಕೆ ಕಾರಣವಾಗಿರುವುದು ಪೌರತ್ವ ಮಸೂದೆ ವಿರೋಧಿ ಮತ್ತು ಪರ ಇರುವ ಬಣಗಳ ಕಾದಾಟ. ಮಸೂದೆ ವಿಚಾರದಲ್ಲಿ ಮಂಗಳೂರು ನಗರದಲ್ಲಿ ದೊಡ್ಡ ಸಮಾವೇಶ ನಡೆಸಲು ಮುಸ್ಲಿಂ ಸಂಘಟನೆಗಳು ಹಾಗೂ ಬಿಜೆಪಿ ತುದಿಗಾಲಿನಲ್ಲಿ ನಿಂತಿದ್ದು, ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನಗರದ ಒಳಗೆ ಸಮಾವೇಶ ನಡೆಸುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

    ಇದರಿಂದಾಗಿ ಮುಸ್ಲಿಂ ಸಂಘಟನೆಗಳು ಜನವರಿ 4 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಕೈಗೊಂಡಿದ್ದ ಸಮಾವೇಶ ರದ್ದಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಮುಸ್ಲಿಂ ಸಂಘಟನೆಗಳ ಮನವಿಯನ್ನು ತಿರಸ್ಕರಿಸಿದ್ದು, ನಗರದ ಒಳಗೆ ಬದಲು ಹೊರಗಡೆ ಎಲ್ಲಾದರೂ ಸಮಾವೇಶ ಮಾಡುವಂತೆ ಸೂಚಿಸಿದ್ದಾರೆ.

    ಈ ನಡುವೆ ಜನವರಿ 12 ರಂದು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪೌರತ್ವ ಮಸೂದೆ ಪರವಾಗಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ತೀರ್ಮಾನಿಸಿದೆ. ಆದರೆ ಬಿಜೆಪಿ ಸಮಾವೇಶಕ್ಕೂ ಅನುಮತಿ ನೀಡದಂತೆ ಮುಸ್ಲಿಂ ಸಂಘಟನೆಗಳು ಪೊಲೀಸರಿಗೆ ಮನವಿ ಮಾಡಿದ್ದು ಅನುಮತಿ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

    ಈ ಮಧ್ಯೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ನೆಹರೂ ಮೈದಾನದಲ್ಲೇ ಸಮಾವೇಶ ನಡೆಸಲು ಅವಕಾಶ ನೀಡುವಂತೆ ಹಠ ಹಿಡಿದಿದೆ. ಪೊಲೀಸರು ಅವಕಾಶ ನೀಡುವವರೆಗೆ ಸಮಾವೇಶ ಮುಂದೂಡೋದಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್ ಹೇಳಿದ್ದಾರೆ. ಪರ ವಿರೋಧಿ ಸಮಾವೇಶಗಳ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಗೃಹ ಸಚಿವರ ಗಮನಕ್ಕೂ ತಂದಿದ್ದಾರೆ. ಪರಿಸ್ಥಿತಿ ತಿಳಿಗೊಳ್ಳುವ ತನಕ ಸಮಾವೇಶ ಮುಂದೂಡುವಂತೆ ಎರಡೂ ಕಡೆಗಳ ಮುಖಂಡರಿಗೆ ಕಮಿಷನರ್ ಮನವಿ ಮಾಡಿದ್ದಾರೆ.

  • ಹೊಸ ವರ್ಷದ ತುರ್ತು ಸೇವೆಗೆ ಆರೋಗ್ಯ ಕವಚ 108 ವಾಹನ ಸಜ್ಜು

    ಹೊಸ ವರ್ಷದ ತುರ್ತು ಸೇವೆಗೆ ಆರೋಗ್ಯ ಕವಚ 108 ವಾಹನ ಸಜ್ಜು

    ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯಲು ಆರೋಗ್ಯ ಕವಚ 108 ಅಂಬುಲೆನ್ಸ್‌ಗಳ ಸೇವೆಯನ್ನು ರಾಜ್ಯಾದ್ಯಂತ ಸುಸಜ್ಜಿತಗೊಳಿಸಲಾಗಿದೆ.

    ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಶೇ.30 ರಿಂದ 35ರಷ್ಟು ಅಪಘಾತದ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಂಬುಲೆನ್ಸ್‌ಗಳನ್ನು ಸುಸಜ್ಜಿತಗೊಳಿಸಲಾಗಿದೆ. 108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿದ್ದು, ಇದು ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆ ನಡೆಯುವ ನಗರಗಳಲ್ಲಿರುವ ಪೊಲೀಸ್ ನಿಯಂತ್ರಣ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ನೇರ ಸಂಪರ್ಕ ಕಲ್ಪಿಸುವ ಮೂಲಕ ಅವಘಡ ಸಂಭವಿಸಿದ ಸ್ಥಳಕ್ಕೆ ತ್ವರಿತವಾಗಿ ತಲುಪುವ ನಿಟ್ಟಿನಲ್ಲಿ ನೆರವಾಗುತ್ತದೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಆಚರಿಸುವ ನಗರಗಳಾದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರಿನಲ್ಲಿ ಅವಘಡ ಸಂಭವಿಸಿದ ಸ್ಥಳದಿಂದಲೇ ನೆರವಿನ ಹಸ್ತ ಚಾಚಲಾಗುವುದು. ಹೊಸ ವರ್ಷದ ರಾತ್ರಿ 11:45 ರಿಂದ 12:20ರವರೆಗೆ ಮೋಬೈಲ್ ಫೋನ್ ಸಂಪರ್ಕಗಳು ಬ್ಯುಸಿ ಮತ್ತು ಜಾಸ್ತಿಯಾಗುವ ಸಂಭವವಿರುವುದರಿಂದ ಪೋಲಿಸ್ ನಿಸ್ತಂತು (ವೈಫೈ) ಜಾಲದ ಮೂಲಕ ಅವಘಡಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸುವುದಕ್ಕಾಗಿ ಅಂಬುಲೆನ್ಸ್‌ಗಳನ್ನು ಹತ್ತಿರದ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತು ಅಗ್ನಿಶಾಮಕ ಇತ್ಯಾದಿಗಳಲ್ಲಿ ನಿಯೋಜಿಸಲಾಗಿದೆ. ಕಳೆದ ವರ್ಷಗಳಲ್ಲಿ ನಡೆದಿರುವ ಅವಘಡಗಳ ವರದಿ ಹಿನ್ನೆಲೆಯಲ್ಲಿ ಅಂಬುಲೆನ್ಸ್‌ಗಳನ್ನು ಸಜ್ಜುಗೊಳಿಸಲಾಗಿದೆ.

    ಹೆಚ್ಚಿನ ತುರ್ತು ಪರಿಸ್ಥಿತಿಗಳನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಕಾಲ್‍ಸೆಂಟರ್ ಮತ್ತು ಅಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಹಿಕ ರಜೆಗಳನ್ನು ರದ್ದುಗೊಳಿಸಲಾಗಿದೆ. ಮುಂಜಾಗೃತವಾಗಿಯೇ ಎಲ್ಲಾ ಅಂಬುಲೆನ್ಸ್‌ಗಳಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲಾಗಿದೆ.

    ಬೆಂಗಳೂರಲ್ಲಿನಲ್ಲಿಯೇ ಅತೀ ಹೆಚ್ಚು ಅಂದರೆ ಸುಮಾರು 72 ಅಂಬುಲೆನ್ಸ್ ವಾಹನಗಗಳು ಹಾಗೂ 19 ಬೈಕ್ ಅಂಬುಲೆನ್ಸ್‌ಗಳನ್ನ ನಿಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಸಾವು-ನೋವುಗಳು, ಅನಾಹುತಗಳ ಮಾಹಿತಿಯು ಪೊಲೀಸ್, ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, 108 ತುರ್ತು ಪ್ರತಿಸ್ಪಂದನ ಕೇಂದ್ರಕ್ಕೆ ಕರೆಗಳ ಸಂಖ್ಯೆ ಅತ್ಯಧಿಕವಾದಂತೆ ಹೆಚ್ಚುವರಿ ವೈದ್ಯರನ್ನು ತುರ್ತು ಪ್ರತಿಸ್ಪಂದನ ಕೇಂದ್ರಕ್ಕೆ ಒದಗಿಸುವುದು ಸೇರಿದಂತೆ ಹೆಚ್ಚುವರಿ ಸಂಪನ್ಮೂಲಗಳ ವ್ಯವಸ್ಥೆ ಮಾಡಲಾಗುವುದು.

  • ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ತೆಲಂಗಾಣದಂತೆ ವೇತನ ನೀಡಿ, ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ: ಶಶಿಧರ್ ವೇಣುಗೋಪಾಲ್

    ಹಾವೇರಿ: ಪೊಲೀಸ್ ಇಲಾಖೆಯ ಸಿಬ್ಬಂದಿಗೆ ತೆಲಂಗಾಣದಂತೆ ವೇತನ ನೀಡಿ. ಮುಂದಿನ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ತನ್ನಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಕದ ರಾಜ್ಯ ತೆಲಂಗಾಣದಲ್ಲಿ ಒಬ್ಬ ಸಿವಿಲ್ ಪೊಲೀಸ್ 45 ಸಾವಿರ ರೂ. ಸಂಬಳ ಪಡೆಯುತ್ತಾರೆ. ಆದರೆ ನಮ್ಮ ರಾಜ್ಯದಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ 30 ಸಾವಿರ ರೂ. ಪಡೆಯುತ್ತಾರೆ. ಈ ವೇತನ ತಾರತಮ್ಯ ನಾವು ಖಂಡಿಸುತ್ತೇವೆ. ಜೊತೆಗೆ ಒಂದು ತಿಂಗಳೊಳಗೆ ಔರಾದ್ಕರ್ ವರದಿ ಜಾರಿಗೆ ಮಾಡದಿದ್ದರೆ, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಗಳ ಸಹಭಾಗಿತ್ವದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

    ಪೊಲೀಸ್ ಇಲಾಖೆ ನಿತ್ಯ ಆಡಳಿತದಲ್ಲಿ ರಾಜಕಾರಣಿ ಕಪಿಮುಷ್ಠಿಯಲ್ಲಿ ಸಿಲುಕಿದೆ. ಇಲಾಖೆಯು ರಾಜಕಾರಣಿಗಳ ಅಣತಿ ಮೇಲೆ ಕಾರ್ಯನಿರ್ವಹಿಸುವ ಕೇಂದ್ರಗಳಾಗಿವೆ. ರಾಜಕೀಯ ನಾಯಕರ ಹಸ್ತಕ್ಷೇಪದಿಂದ ಇಲಾಖೆ ನಲುಗಿ ಹೋಗಿದೆ. ಸರಕಾರಗಳು ಬದಲಾದ ಸಮಯದಲ್ಲಿ ಪೊಲೀಸ್ ವರ್ಗಾವಣೆಯು ಒಂದು ರೀತಿಯಲ್ಲಿ ಹಣಗಳಿಸುವ ದಂಧೆಗಳಾಗಿ ಮಾರ್ಪಾಡು ಆಗಿವೆ. ಇಲಾಖೆಯಲ್ಲಿ ಕಾನೂನಿಗೆ ಅವಕಾಶ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪೊಲೀಸರಲ್ಲಿ ರಾಜಕೀಯ ವ್ಯವಸ್ಥೆಯಿಂದ ಅಸಹಾಯಕತೆ ಹೆಚ್ಚಾಗಿದೆ. ಇಲಾಖೆಯ ಸಿಬ್ಬಂದಿಗಳು ವೇತನ ತಾರತಮ್ಯ ಖಂಡಿಸಿ ಹೋರಾಟ ಮಾಡಿದ್ದು ನಿಜ. ಹೋರಾಟದ ಫಲವಾಗಿ ಔರಾದ್ಕರ್ ವರದಿ ಬಂದಿದೆ. ಈ ವರದಿ ತುಲನಾತ್ಮಕವಾಗಿ ವಾಸ್ತವಿಕ ವಿಚಾರಗಳನ್ನು ಹೊಂದಿದೆ. ಆದರೆ ವರದಿಯಂತೆ ಪೊಲೀಸ್ ಇಲಾಖೆಯಲ್ಲಿ ವೇತನ ಹೆಚ್ಚಳವಾಗಿಲ್ಲ ಎಂದರು. ಇದನ್ನು ಓದಿ: ಔರಾದ್ಕರ್ ವರದಿ ಜಾರಿಗೆ ಮತ್ತೆ ಕಣ್ಣಾಮುಚ್ಚಾಲೆ

    2018 ರಲ್ಲಿ ನೇಮಕಗೊಂಡ ಪೊಲೀಸ್ ಕಾನ್ಸಸ್ಟೆಬಲ್ 23,500 ರೂ. ವೇತನ ಪಡೆಯುತ್ತಾರೆ. ಆದರೆ 2012 ರಲ್ಲಿ ನೇಮಕಗೊಂಡವರು ಅಷ್ಟೇ ಪ್ರಮಾಣದಲ್ಲಿ ವೇತನ ಪಡೆಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ನಾವು ಸೇವಾ ಹಿರಿತನವನ್ನು ಪ್ರಶ್ನೆ ಮಾಡುತ್ತಿದ್ದೇವೆ. ವೇತನ ಪರಿಷ್ಕರಣೆ ಮಾಡಿ ಎನ್ನುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಂಡ ಸಾಮಾಜಿಕ ಜಾಲತಾಣದ ಮೂಲಕ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಕುಮಾರಸ್ವಾಮಿ ಸರ್ಕಾರ ನಾನು 420 ಸರ್ಕಾರ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಬಂಧಿಸಿದರು. ಆಡಳಿತ ನಡೆಸುವರು ನನ್ನ ಧ್ವನಿ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ನಿರ್ಲಕ್ಷ್ಯ ಸರಿಯಲ್ಲ: ಔರಾದ್ಕರ್ ವರದಿ ಜಾರಿ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ಮಾಡಬಾರದು. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಅದನ್ನು ಗೃಹ ಸಚಿವರು ಸರಿಯಾಗಿ ನಿಭಾಯಿಸಬೇಕು. ಇನ್ನು ಒಂದು ತಿಂಗಳೊಳಗೆ ವರದಿಯನ್ನು ಜಾರಿಗೆ ತರದಿದ್ದರೆ 3 ಹಂತದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಮೊದಲ ಹಂತದಲ್ಲಿ 35 ಸಾವಿರ ಸಿಬ್ಬಂದಿಗಳು, ಡಿಜಿಪಿ ಮನವಿ ಸಲ್ಲಿಸುವುದು. 2ನೇ ಹಂತದಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಹೋರಾಟ ಮಾಡುವುದು. 3ನೇ ಹಂತವಾಗಿ ಹೈ ಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಕಾನೂನ ಸಮರ ಮಾಡುತ್ತೇವೆ. ಈ ದೇಶ ನಮ್ಮದು, ಈ ಮಣ್ಣು ನಮ್ಮದು, ಇದನ್ನು ಹಾಳು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

  • ಜನರ ರಕ್ಷಣೆ ಮಾಡುವ ಪೊಲೀಸರ ಕುಟುಂಬದ ಕಣ್ಣೀರ ಕಥೆ

    ಜನರ ರಕ್ಷಣೆ ಮಾಡುವ ಪೊಲೀಸರ ಕುಟುಂಬದ ಕಣ್ಣೀರ ಕಥೆ

    ಬೆಳಗಾವಿ: ಪುಂಡಪೋಕರಿ ಹಾಗೂ ಕಳ್ಳ, ಕಾಕರಿಗೆ ಮೂಗುದಾರ ಹಾಕುವ ಖಾಕಿ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಿನ್ನಡೆ ಸಾಧಿಸುತ್ತಿದೆ. ನಾಲ್ಕೈದು ದಶಕಗಳಿಂದ ಪೊಲೀಸ್ ವಸತಿಗೃಹಗಳಲ್ಲಿ ನೂರಾರು ಪೊಲೀಸ್ ಕುಟುಂಬಗಳು ಸಮಸ್ಯೆಗೆ ಸಿಲುಕಿ ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲ ಸಂದರ್ಭದಲ್ಲಿ ಸಿಬ್ಬಂದಿಗಳ ಕುಟುಂಬಗಳು ಸೂರುತ್ತಿರುವ ಸೂರಿನ ಅಡಿಯಲ್ಲಿ ಕಾಲ ಕಳೆಯುವ ಅರ್ನಿವಾಯತೆ ಇದೆ. ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿ ಪಕ್ಕದಲ್ಲಿರುವ ಜಿಲ್ಲಾ ಪೊಲೀಸ್ ಕೇಂದ್ರಿಯ 200 ವಸತಿ ಗೃಹಗಳಲ್ಲಿ ಸಿಆರ್ ಸಿಬ್ಬಂದಿ ವಾಸವಾಗಿದ್ದಾರೆ. ಇಲ್ಲಿನ ಕುಟುಂಬಗಳು ಸಮರ್ಪಕ ನೀರಿನ ಸೌಲಭ್ಯ ಇಲ್ಲದೆ ಪರದಾಡುತ್ತಿವೆ. ನಾಲ್ಕೈದು ದಿನಕ್ಕೂಮ್ಮೆ ನೀರು ಹಾಗೂ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಕಾಡತೊಡಗಿದೆ. ನೀರನ್ನು ಶೇಖರಿಸುವ ಟ್ಯಾಂಕರ್ ಹಳೆಯದಾಗಿದ್ದು, ನೀರು ಕಲುಷಿತಗೊಂಡು ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು ಎಂದು ಇಲ್ಲಿನ ಮಹಿಳೆಯರು ಆರೋಪಿಸಿದ್ದಾರೆ.

    ಕಳಚಿದ ತಡೆಗೋಡೆ: 200ಕ್ಕೂ ಅಧಿಕ ವಸತಿಗೃಹಗಳ ಪೈಕಿ 30 ಮನೆಗಳು ಹಾಳಾಗಿವೆ. ಇನ್ನುಳಿದ ಗೃಹಗಳನ್ನು ಆಯುಕ್ತರ ಸಿಬ್ಬಂದಿಗಳ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ವಸತಿಗೃಹಗಳಿಗೆ ಸುತ್ತಲೂ ಸುಣ್ಣ-ಬಣ್ಣ ಬಳಿಯಲಾಗಿದೆ ಆದರೆ ಒಳಗಡೆ ಕುಟುಂಬಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಪಕ್ಕದಲ್ಲಿ ಚರಂಡಿ, ಕಸದ ರಾಶಿ ಹಾಗೂ ವಿದ್ಯುತ್ ದೀಪಗಳ ಕೊರತೆಯಿದೆ. ನಾಲ್ಕು ದಿಕ್ಕಿನಲ್ಲಿ ಗೋಡೆ ಹಾಳಾಗಿದರಿಂದ ಬೀದಿನಾಯಿಗಳಿಗೆ ಸೂಕ್ತ ಸ್ಥಳವಾಗಿದೆ. ಎಡಭಾಗದಲ್ಲಿ ಗೋಡೆ ಮಾಯವಾಗಿದ್ದು, ಈಗಿರುವ ಬೇಲಿ ಕಳಚಿಕೊಂಡಿದ್ದರಿಂದ ಕಳ್ಳರಿಗೆ, ಪುಂಡಪೋಕರಿಗಳಿಗೆ ಇಲಾಖೆ ಅವಕಾಶ ನೀಡಿದಂತಾಗಿದೆ. ಹೀಗಾಗಿ ಸಾರ್ವಜನಿಕರಿಗೆ ರಕ್ಷಣಾ ಒದಗಿಸುವ ಪೊಲೀಸ್ ಸಿಬ್ಬಂದಿ ಮನೆಗಳ ಭದ್ರತೆ ಗೋಡೆ ಕಳಚಿದೆ.

    ಸೊರಗಿದ ಉದ್ಯಾನವನ: ಬಿಡುವಿನ ವೇಳೆಯಲ್ಲಿ ಮಕ್ಕಳು, ವೃದ್ಧರಿಗಾಗಿ ನಿರ್ಮಿಸಲಾದ ವಾಯುವಿಹಾರ ನಿರ್ವಹಣೆ ಇಲ್ಲದೆ ಸೊರಗಿದ್ದು, ಸದ್ಯ ಸೌಂದರ್ಯದಿಂದ ಕಳೆದುಕೊಂಡು ಪಾಳುಬಿಂದತಾಗಿದೆ. 1500 ಜನರಿಗೆ ವಿಶ್ರಾಂತಿಯಾಗಬೇಕಿದ್ದ ಉದ್ಯಾನವನದಲ್ಲಿ ಕಸ, ಹುಲ್ಲು ಬೆಳೆದು ನಿಂತಿದೆ. ವಿದ್ಯಾರ್ಥಿಗಳು, ಕುಟುಂಬಸ್ಥರು ಈ ಕಡೆಗೆ ಬರುವುದೇ ವಿಶೇಷವಾಗಿದೆ. ಮಕ್ಕಳು ಮನೆಯ ಅಂಗಳವನ್ನು
    ಕ್ರೀಡಾ, ಉದ್ಯಾನವನ ಮಾಡಿಕೊಂಡಿದ್ದಾರೆ.

    ಶೀಘ್ರದಲ್ಲಿ ನೂತನ ವಸತಿಗೃಹ: ಹಳೆಯ ಗೃಹಗಳನ್ನು ನೆಲಸಮಗೊಳ್ಳಿಸಲಾಗುವುದು. ಲಿಂಗರಾಜ ಶಾಲೆಯ ಪಕ್ಕದಲ್ಲಿ 38 ವಸತಿಗೃಹಗಳ ಪೈಕಿ 6 ಪಿಎಸ್‍ಐ ಹಾಗೂ 23 ವಸತಿಗೃಹ ಪೇದೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಶಾಹುಪೂರದಲ್ಲಿ 12 ವಸತಿಗೃಹ ನಿರ್ಮಾಣವಾಗುತ್ತಿದೆ. ಕಾಕತಿ ನಿರ್ಮಿಣಿಸಲಾದ 12 ವಸತಿಗೃಹಗಳನ್ನು ಪೇದೆಗಳಿಗೆ ಶೀಘ್ರದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

    ಹೀರೆಬಾಗೆವಾಡಿಯಲ್ಲಿ ನೂತನವಾಗಿ ವಸತಿಗೃಹ ನಿರ್ಮಾಣವಾಗುತ್ತಿದೆ. ಜತೆಗೆ ಬೃಹತ್ ಪೊಲೀಸ್ ಆಯುಕ್ತಾಲಯ ತಲೆ ಎತ್ತಲಿದೆ. ಪೊಲೀಸ್ ಸಿಬ್ಬಂದಿಗಳಿಗೆ ವ್ಯವಸ್ಥೆ ಕಲ್ಪಿಸಲು ಇಲಾಖೆ ಸನ್ನದ್ಧವಾಗಿದೆ ಅನುದಾನದ ಯಾವುದೇ ಕೊರತೆಯಿಲ್ಲ. ಆಯುಕ್ತರ ಸಿಬ್ಬಂದಿಗಳಿಗೆ ನೀಡಲಾಗಿರುವ 48 ವಸತಿಗೃಹಗಳ ಸದ್ಯ ದುರಸ್ತಿ ಮಾಡಲಾಗಿದ್ದು, ಹೆಚ್ಚುವರಿ ವಸತಿಗೃಹಗಳಿಗಾಗಿ ಇಲಾಖೆ ಯೋಜನೆ ರೂಪಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ರಜೆ ಕೊರತೆ: ಜನಸಾಮನ್ಯರಿಗೆ ಸರ್ಪಗಾವಲಾಗಿರುವ ಪೊಲೀಸ್ ಸಿಬ್ಬಂದಿಗೆ ವಾರದ ಬಿಡುವ ಕಗ್ಗಂಟಾಗಿದೆ. ದಿನದ 24 ಗಂಟೆ ಕಾರ್ಯನಿರ್ವಸುವ ಪೊಲೀಸ್‍ರಿಗೆ ವಾರದ ರಜೆ ಅಗತ್ಯವಾಗಿದ್ದು, ಸರ್ಕಾರ ಈ ವ್ಯವಸ್ಥೆ ಕಲ್ಪಿಸಲು ಹಿಂದೇಟು ಹಾಕುತ್ತಿದೆ. ದುಡಿದ ವಾರದ ಭತ್ತೆಯನ್ನು ಸಿಬ್ಬಂದಿಎ ಸರ್ಕಾರ ನೀಡುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ಪೊಲೀಸ್ ಇಲಾಖೆಯಿಂದ ಹೊರಬಿದ್ದಿದೆ. ಜನಸಾಮಾನ್ಯರ ರಕ್ಷಣೆಗಾಗಿ ಹಗಳಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಸರ್ಕಾರ ಕೊರತೆಗಳನ್ನು ನೀಗಿಸಿ ಸೌಲಭ್ಯಕ್ಕಾಗಿ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ.

    ಸಿಬ್ಬಂದಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶೀಘ್ರದಲ್ಲೇ ನೂತನ ವಸತಿಗೃಹಗಳನ್ನು ಪೇದೆಗಳಿಗೆ ನೀಡಲಾಗುವುದು. ತಡೆಗೋಡೆ ನಿರ್ಮಿಸಲು ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಭದ್ರತೆಗಾಗಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್. ಲೋಕೆಶಕುಮಾರ್ ಹೇಳಿದ್ದಾರೆ.

    ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ, ಮಳೆ ಸಂದರ್ಭದಲ್ಲಿ ವಸತಿ ಸೂರಿನ ಸಮಸ್ಯೆಯಿದೆ. ಪೊಲೀಸ್ ಸಿಬ್ಬಂದಿಗಾಗಿ ನೂತನ ವಸತಿಗೃಹಗಳನ್ನು ನಿರ್ಮಾಣವಾಗುತ್ತಿವೆ. ತ್ಯಾಜ್ಯ ವಸ್ತುಗಳನ್ನು ಪಾಲಿಕೆ ನಿರ್ವಹಣೆ ಮಾಡುತ್ತಿಲ್ಲ ಕುಟುಂಬಗಳು ಬಿಸಾಡಿದ ಕಸದರಾಶಿ ರಸ್ತೆಯಲ್ಲಿ ನರ್ತನ ಮಾಡುತ್ತಿದೆ ಹೆಸರು ಹೆಳಲು ಇಚ್ಚಯಿಸದ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

  • ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

    ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

    ಕೊಪ್ಪಳ: ಶ್ವಾನ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನವೊಂದು ಸಾವನ್ನಪ್ಪಿದ ರಾತ್ರಿಯೇ ಅದರ ಸ್ನೇಹಿತನಾಗಿದ್ದ ಇನ್ನೊಂದು ಶ್ವಾನ ಕೂಡ ಕೊನೆಯುಸಿರೆಳೆದಿದ್ದು, ಈ ಮೂಲಕ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಹೌದು. ಕೊಪ್ಪಳ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೇತಕ್ ಹಾಗೂ ಟೆರರ್ ಹೆಸರಿನ ಎರಡು ಶ್ವಾನಗಳು ಶನಿವಾರ ಅಸುನೀಗಿವೆ. ಈ ಎರಡು ಶ್ವಾನಗಳು ಹಲವು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದವು. ಕಳೆದ ಎರಡು ತಿಂಗಳಿಂದ ಚೇತಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶನಿವಾರ ಮಧ್ಯಾಹ್ನ ಸಾವನ್ನಪ್ಪಿತ್ತು. ಈ ವೇಳೆ ಪೊಲೀಸರು ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ಮಾಡಿದ್ದರು.

    ಸ್ನೇಹಿತನನ್ನು ಕಳೆದುಕೊಂಡ ನೋವಿನಲ್ಲಿ ಶನಿವಾರ ರಾತ್ರಿ ಶ್ವಾನ ಟೆರರ್ ಕೂಡ ಸಾವನ್ನಪ್ಪಿದೆ. ಹಲವಾರು ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಎರಡೂ ಶ್ವಾನಗಳನ್ನ ಕಳೆದುಕೊಂಡ ಕೊಪ್ಪಳ ಪೊಲೀಸ್ ಸಿಬ್ಬಂದಿಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಒಟ್ಟಿನಲ್ಲಿ ಒಂದೇ ದಿನ ಎರಡೂ ಶ್ವಾನಗಳು ಮೃತಪಟ್ಟು ಸಾವಿನಲ್ಲೂ ಒಂದಾಗಿವೆ.

  • ಚಾಮರಾಜನಗರದಲ್ಲಿ 15 ಮಂದಿ ಅರೆಸ್ಟ್

    ಚಾಮರಾಜನಗರದಲ್ಲಿ 15 ಮಂದಿ ಅರೆಸ್ಟ್

    ಚಾಮರಾಜನಗರ: ಇಂದು ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಾಮರಾಜನಗರದಲ್ಲಿ 15 ಮಂದಿ ಬಂಧಿಸಲಾಗಿದೆ.

    ಬೆಳಗ್ಗೆ 10:30ಕ್ಕೆ ಅಯೋಧ್ಯೆ ತೀರ್ಪು ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಹಾಗೆಯೇ ರಾಜ್ಯದಲ್ಲಿಯೂ ನಿಗಾ ಇಡಲಾಗಿದ್ದು, ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚೆತ್ತಿರುವ ಚಾಮರಾಜನಗರ ಟೌನ್ ಪೋಲಿಸರು, ಮುಂಜಾಗ್ರತಾ ಕ್ರಮವಾಗಿ 15 ಮಂದಿ ಕಮ್ಯೂನಲ್ ಗೂಂಡಾಗಳನ್ನು ಬಂಧಿಸಿದ್ದಾರೆ.

    ಬೆಳಗ್ಗೆ 9 ಗಂಟೆಗೆ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಬಲ ಪ್ರದರ್ಶನ ನಡೆಯಲಿದೆ. ಚಾಮರಾಜನಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

    ಎಸ್ಪಿ, ಎಎಸ್ಪಿ, ಇಬ್ಬರು ಡಿವೈಎಸ್ಪಿ ಸೇರಿದಂತೆ 2000 ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

  • ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಅಯೋಧ್ಯೆ ತೀರ್ಪು – ಸೋಷಿಯಲ್ ಮೀಡಿಯಾಗಳಲ್ಲಿ ಪಾಲಿಸಲೇಬೇಕಾದ 9 ಸೂಚನೆಗಳು

    ಬೆಂಗಳೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡದಂತೆ ಸೂಚನೆ ನೀಡಿದ್ದಾರೆ.

    ಪರ-ವಿರೋಧ ತೀರ್ಪು ಬಂದರೆ ವಿಜಯೋತ್ಸವ ಆಚರಿಸುವುದಾಗಲೀ ಅಥವಾ ಘೋಷಣೆ ಕೂಗುವುದನ್ನಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ

    ಸಾರ್ವಜನಿಕರಿಗೆ ಸೂಚನೆಗಳು
    – ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‍ಗಳನ್ನು ಹಾಕಬೇಡಿ.

    – ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗಿದೆ.  ಇದನ್ನೂ ಓದಿ:ರಾಜ್ಯಾದ್ಯಂತ ಕಟ್ಟೆಚ್ಚರ – ಬಸ್ಸು ಆಟೋ, ಟ್ಯಾಕ್ಸಿ, ಮೆಟ್ರೋ ಯಥಾಸ್ಥಿತಿ

    – ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಪ್ಪು ಸಂದೇಶಗಳನ್ನು ಯಾರಿಗೂ ರವಾನಿಸಬೇಡಿ, ಈ ಬಗ್ಗೆ ಮಕ್ಕಳು, ಸಹೋದರ, ಸಹೋದರಿಯರು, ಅಕ್ಕಪಕ್ಕದವರು ಹಾಗೂ ಸಂಬಂಧಿಕರಿಗೆ ಈ ಮಾಹಿತಿಯನ್ನು ತಿಳಿಸಿ.

    – ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್‌ ಅಥವಾ ವೀಡಿಯೋ ಸಂದೇಶಗಳನ್ನು ಪೋಸ್ಟ್‌ ಮಾಡಬೇಡಿ. ಇದನ್ನೂ ಓದಿ:ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

    – ಯಾವುದೇ ರಾಜಕೀಯ ಹಾಗೂ ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು, ರವಾನಿಸುವುದು ಅಪರಾಧವಾಗಿದ್ದು ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಸುದ್ದಿಯ ಮೂಲವನ್ನು ಪರಿಶೀಲಿಸದೇ ಅದನ್ನು ಇತರರಿಗೆ ಕಳುಹಿಸಲು ಹೋಗಬೇಡಿ.

    – ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರವು ದೇಶದ ಅತೀ ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ಸದಸ್ಯರುಗಳು ಗಂಭೀರವಾಗಿ ಯೋಚಿಸಿ, ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವಂತಹ ಸಂದೇಶಗಳನ್ನು ಹಾಕಬೇಡಿ. ಇದನ್ನೂ ಓದಿ:ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

    – ಸಾಮಾಜಿಕ ಜಾಲತಾಣಗಳಲ್ಲಿ ಬಂದಂತಹ ಪ್ರಚೋದನಾತ್ಮಕ ಸಂದೇಶಗಳನ್ನು ಬೇರೆ ಗ್ರೂಪ್‍ಗಳಿಗೆ ಮರು ಕಳುಹಿಸುವುದು (Forward) ಕಂಡುಬಂದಲ್ಲಿ, ಸಂದೇಶವನ್ನು ಕಳುಹಿಸಿದ ವ್ಯಕ್ತಿ ಮತ್ತು ಗ್ರೂಪ್ ಅಡ್ಮಿನ್‍ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು.

    – ಈ ವಿಚಾರವು ದೇಶದ ಸಾರ್ವಭೌಮತ್ವ ಹಾಗೂ ಸೌಹಾರ್ದತೆಗೆ ನೇರವಾಗಿ ಪರಿಣಾಮ ಬೀರುವಂತಹ ವಿಚಾರವಾದ್ದರಿಂದ ಯಾವುದೇ ತಪ್ಪು ಸಂದೇಶವನ್ನು ರವಾನಿಸಬೇಡಿ.

    – ನ್ಯಾಯಾಲಯದ ತೀರ್ಪನ್ನು ನಿಂದಿಸಬೇಡಿ. ತೀರ್ಪಿನ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ಅಭಿಪ್ರಾಯವನ್ನು ಎಲ್ಲೂ ಹಂಚಿಕೊಳ್ಳಬೇಡಿ.

    ತಪ್ಪದೇ ಈ ಮೇಲ್ಕಂಡ ವಿಚಾರವನ್ನು ಎಲ್ಲರಿಗೂ ತಿಳಿಸಿ, ವಿಷಯದ ಸಂಬಂಧ ನಿಯಮಗಳ ಬಗ್ಗೆ ಗಮನಹರಿಸಿ ಹಾಗೂ ಗುಂಪುಗಳು ಸದಾ ಜಾಗರೂಕರಾಗಿ ಇರಿ. ಮಾದರಿ ಸಮಾಜಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.

  • ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಸೈಬರ್ ಕ್ರೈಂ- ಹೊಸ ಠಾಣೆ ತೆರೆಯಲು ಚಿಂತನೆ

    ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ ಸೈಬರ್ ಕ್ರೈಂ- ಹೊಸ ಠಾಣೆ ತೆರೆಯಲು ಚಿಂತನೆ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸೈಬರ್ ಕ್ರೈಂಗಳು ಹೆಚ್ಚಾಗುತ್ತಲೇ ಇದೆ. ಆದರೆ ಈ ಪ್ರಕರಣ ದಾಖಲಿಸಿಕೊಳ್ಳಲು ಒಂದೇ ಸೈಬರ್ ಕ್ರೈಂ ಪೊಲೀಸ್ ಠಾಣೆ ಇರುವ ಕಾರಣಕ್ಕೆ ಹೊಸ ಸೈಬರ್ ಪೊಲೀಸ್ ಠಾಣೆಗಳನ್ನ ತೆರೆಯುವ ಚಿಂತನೆ ನಡೆಯುತ್ತಿದೆ.

    ಟೆಕ್ನಾಲಜಿ ಮುಂದುವರಿದಂತೆ ಆನ್‍ಲೈನ್ ವಂಚಕರು, ಸಾಮಾಜಿಕ ಜಾಲಾತಣದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ಪ್ರಕರಣ ಹೀಗೆ ಹಲವು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಪ್ರಕರಣಗಳು ಸೈಬರ್ ಕ್ರೈಂ ವ್ಯಾಪ್ತಿಗೆ ಬರುವುದರಿಂದ ಪ್ರತಿನಿತ್ಯ 30 ರಿಂದ 40 ಬೇರೆ ಬೇರೆ ಪ್ರಕರಣಗಳು ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗುತ್ತಿವೆ. ನಗರದಲ್ಲಿ ಒಂದೇ ಸೈಬರ್ ಕ್ರೈಂ ಠಾಣೆ ಇರುವುದರಿಂದ ದಾಖಲಾಗಿರುವ ದೂರುಗಳನ್ನ ಬೇಧಿಸಲು ಸಾಕಷ್ಟು ವಿಳಂಬವಾಗುತ್ತಿದೆ.

    ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ದೊರಕಿಸಿಕೊಡಲು ಬೆಂಗಳೂರಿನ ಬೇರೆ ಬೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನ ಮಾಡಲು ಸರ್ಕಾರಕ್ಕೆ ಅನುಮತಿ ಕೇಳಲಾಗಿದೆ. ಸರ್ಕಾರ ಕೂಡ ಬಜೆಟ್‍ನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದೆ ಎನ್ನಲಾಗಿದೆ. ಈಗಿರುವ ಸೈಬರ್ ಪೊಲೀಸ್ ಠಾಣೆ ಸೇರಿದಂತೆ ಹೊಸದಾಗಿ ಎಂಟು ಸೈಬರ್ ಪೊಲೀಸ್ ಠಾಣೆಯನ್ನ ತೆರೆಯಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.