Tag: police department

  • ನಕಲಿ ಬಿತ್ತನೆ ಬೀಜದ ವಿಷಯದಲ್ಲಿ ಕೆಲ ರಾಜಕಾರಣಿಗಳಿಂದ ಒತ್ತಡ: ಬಿ.ಸಿ ಪಾಟೀಲ್

    ನಕಲಿ ಬಿತ್ತನೆ ಬೀಜದ ವಿಷಯದಲ್ಲಿ ಕೆಲ ರಾಜಕಾರಣಿಗಳಿಂದ ಒತ್ತಡ: ಬಿ.ಸಿ ಪಾಟೀಲ್

    ಹಾವೇರಿ: ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿ ಇಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳದಂತೆ ಕೆಲವು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ ನಾನು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಒತ್ತಡಕ್ಕೆ ಮಣಿದರೆ ರೈತರ ಪರಿಸ್ಥಿತಿ ತಾಯಿಯೇ ಮಗನಿಗೆ ವಿಷ ಹಾಕಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಳೆದ ವಾರ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ನಕಲಿ ಬಿತ್ತನೆ ಬೀಜ ಸಂಗ್ರಹ ಮಾಡಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ್ದರು ಎಂದು ತಿಳಿಸಿದ್ದಾರೆ.

    ದಾಳಿ ವೇಳೆ ಒಂದು 1 ಲಕ್ಷದ 685 ಕ್ವಿಂಟಲ್ ನಕಲಿ ಬಿತ್ತನೆ ಬೀಜವನ್ನು ಜಪ್ತಿ ಮಾಡಲಾಗಿದೆ. ಆದರೆ ಪೊಲೀಸ್ ಇಲಾಖೆ ಈವರೆಗೂ ಒಬ್ಬ ಆರೋಪಿಯನ್ನೂ ಬಂಧನ ಮಾಡಿಲ್ಲ. ಇದು ಬೇಸರದ ಸಂಗತಿ. ನಕಲಿ ಬೀಜ ಸಂಗ್ರಹ ಮಾಡಿದ್ದವರು ಮತ್ತು ನಕಲಿ ಬೀಜ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿ ಜೈಲಿಗೆ ಅಟ್ಟುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

    ನಕಲಿ ಬಿತ್ತನೆ ಬೀಜ ತಯಾರಿಸುತ್ತಿರುವ ಮೂಲವನ್ನು ಪತ್ತೆ ಮಾಡಿ ರೈತರಿಗೆ ಆಗುತ್ತಿರುವ ದೊಡ್ಡ ಅನ್ಯಾಯವನ್ನು ತಪ್ಪಿಸುವಂತೆ ಗೃಹ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ ಅವಧಿ ಮೀರಿದ ರಸಗೊಬ್ಬರ ಮಾರಾಟ ಮಾಡೋದು ಕಂಡುಬಂದರೆ ಅಂಥಾ ಅಂಗಡಿಗಳ ಲೈಸನ್ಸ್ ರದ್ದು ಮಾಡುವುದಾಗಿ ತಿಳಿಸಿದರು. ಪ್ರಸಕ್ತ ವರ್ಷ ರೈತರಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಆಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪಾಟೀಲ್ ಹೇಳಿದರು.

  • ಸೀಜ್ ಅದ ವಾಹನಗಳಿಗೆ ದಂಡ ವಿಧಿಸಲು ಸೂಚಿಸಿದ ಹೈಕೋರ್ಟ್ – ಯಾವ ವಾಹನಕ್ಕೆ ಎಷ್ಟು ಫೈನ್?

    ಸೀಜ್ ಅದ ವಾಹನಗಳಿಗೆ ದಂಡ ವಿಧಿಸಲು ಸೂಚಿಸಿದ ಹೈಕೋರ್ಟ್ – ಯಾವ ವಾಹನಕ್ಕೆ ಎಷ್ಟು ಫೈನ್?

    ಬೆಂಗಳೂರು: ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ.

    ಇಂದು ಬೆಳಗ್ಗೆ ಲಾಕ್‍ಡೌನ್ ವೇಳೆ ಸೀಜ್ ಆದ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಇದರ ಬೆನ್ನಲ್ಲೇ ಹೈಕೋರ್ಟ್ ಸೀಜ್ ಆದ ವಾಹನಗಳಿಗೆ ಫೈನ್ ಹಾಕಿ ನಂತರ ಬಿಡುಗಡೆ ಮಾಡುವಂತೆ ಸೂಚಿಸಿದೆ.

    ಹೈಕೋರ್ಟ್ ನೀಡಿರುವ ಆದೇಶದಲ್ಲಿ ಲಾಕ್‍ಡೌನ್ ವೇಳೆ ಸೀಜ್ ಮಾಡಲಾದ ವಾಹನಗಳಿಗೆ ಫೈನ್ ಹಾಕಿ ರಿಲೀಸ್ ಮಾಡಬೇಕು. ಅದರಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಒಂದು ಸಾವಿರ ದಂಡ ಮತ್ತು ದ್ವಿಚಕ್ರ ಮತ್ತು ಆಟೋ ರಿಕ್ಷಾಗಳಿಗೆ 500 ದಂಡ ವಿಧಿಸಬೇಕು. ಜೊತೆಗೆ ಇನ್ಶೂರೆನ್ಸ್ ಸೇರಿದಂತೆ ವಾಹನದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ವಾಹನಗಳನ್ನು ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ.

    ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಭಾಸ್ಕರ್ ರಾವ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ತೀರ್ಮಾನದಂತೆ ನಾಳೆಯಿಂದ ಸೀಜ್ ಆಗಿರುವ ವಾಹನಗಳ ಬಿಡುಗಡೆ ಮಾಡಲಾಗುತ್ತದೆ. ಆದರೆ ಏಕಾಏಕಿ ಜನರು ಬರುವ ಸಾಧ್ಯತೆಗಳು ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಹೀಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು.

    ಬೆಂಗಳೂರಿನಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ವಾಹನಗಳನ್ನು ಮಾರ್ಚ್ 30ರಿಂದ ಸೀಜ್ ಮಾಡಲಾಗಿದೆ. ಈವರೆಗೂ 47 ಸಾವಿರಕ್ಕೂ ಹೆಚ್ಚು ವಾಹನಗಳು ಸೀಜ್ ಆಗಿವೆ. ಈಗ ವಾಹನಗಳನ್ನು ದಾಖಲಾತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲವನ್ನೂ ಒಂದೇ ದಿನ ಕೊಡುವುದಿಲ್ಲ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು.

    ನಿನ್ನೆ, ಮೊನ್ನೆ ಸೀಜ್ ಮಾಡಿದ ವಾಹನಗಳನ್ನು ನಾಳೆಯೇ ರಿಲೀಸ್ ಮಾಡುವುದಿಲ್ಲ. ಮಾರ್ಚ್ 30ರಂದು ಸೀಜ್ ಆದ ವಾಹಗಳನ್ನ ಮೊದಲು ಬಿಡುಗಡೆ ಮಾಡುತ್ತೇವೆ. ಆ ಬಳಿಕ ಕ್ಯಾಲೆಂಡರ್ ಸಿದ್ಧಪಡಿಸಿ ಅದರಂತೆ ಸೀಜ್ ಮಾಡಿದ ವಾಹನಗಳನ್ನು ಮಾಲೀಕರಿಗೆ ವಾಪಸ್ ನೀಡುತ್ತೇವೆ. ಜೊತೆಗೆ ಕೋರ್ಟ್ ಫೈನ್ ನೋಡಿಕೊಂಡು ಆ ನಿಯಮದ ಪ್ರಕಾರ ಆಯಾಯ ಪೊಲೀಸ್ ಠಾಣೆಗಳಲ್ಲೇ ವಾಹನಗಳನ್ನು ರಿಲೀಸ್ ಮಾಡಲಾಗುವುದು ಎಂದಿದ್ದರು.

    ಇನ್ನುಮುಂದೆ ವಾಹನಗಳನ್ನು ಸೀಜ್ ಮಾಡಲ್ಲ ಎಂದುಕೊಂಡರೆ ಅದು ತಪ್ಪು. ಇವತ್ತು ಕೂಡ ನಾವು ವಾಹನಗಳನ್ನು ವಶಕ್ಕೆ ಪಡೆಯಬಹುದು. ಲಾಕ್‍ಡೌನ್ ಸಂಪೂರ್ಣವಾಗಿ ತೆಗೆಯುವವರೆಗೂ ಪಾಸ್ ಇಲ್ಲದ ವಾಹನಗಳನ್ನು ಸೀಜ್ ಮಾಡುತ್ತೇವೆ ಎಂದು ಬಾಸ್ಕರ್ ರಾವ್ ಅವರು ಎಚ್ಚರಿಕೆ ಕೂಡ ನೀಡಿದ್ದರು.

  • ಮಂಗಳೂರು ಪೊಲೀಸರಿಂದ ಪತ್ರಕರ್ತರಿಗೆ ಫೇಸ್‍ಶೀಲ್ಡ್ ವಿತರಣೆ

    ಮಂಗಳೂರು ಪೊಲೀಸರಿಂದ ಪತ್ರಕರ್ತರಿಗೆ ಫೇಸ್‍ಶೀಲ್ಡ್ ವಿತರಣೆ

    ಮಂಗಳೂರು: ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಫೀಲ್ಡ್ ನಲ್ಲಿರುವ ಪತ್ರಕರ್ತರಿಗೆ ಸೋಂಕು ತಗುಲುತ್ತಿರುವುದು ಆತಂಕವನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೋಲಿಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಅವರು ಪತ್ರಕರ್ತರ ಕಾಳಜಿ ಬಗ್ಗೆ ಗಮನ ಹರಿಸಿದ್ದಾರೆ.

    ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಕೊರೊನಾ ಸೋಂಕಿನಿಂದ ರಕ್ಷಣೆಗಾಗಿ ಫೇಸ್‍ಶೀಲ್ಡ್ ಅನ್ನು ವಿತರಿಸಿದ್ದಾರೆ. ಲಾಕ್‍ಡೌನ್ ನಡುವೆಯೂ ಪೊಲೀಸರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಸಾಮಾಜಿಕ ಕಾರ್ಯಕರ್ತರು ಜನರ ನಡುವೆ ಇರುತ್ತಾರೆ. ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಫೇಸ್‍ಶೀಲ್ಡ್ ಬಳಕೆ ಸೂಕ್ತ ಎಂಬುದು ಕಮಿಷನರ್ ಹರ್ಷಾ ಅವರ ಅಭಿಪ್ರಾಯವಾಗಿದೆ.

    ಹೀಗಾಗಿ ನಗರದ ಉರ್ವಾ ಸ್ಟೇಷನ್‍ನಲ್ಲಿ ಈ ಫೇಸ್‍ಶೀಲ್ಡ್ ಗಳನ್ನು ಪತ್ರಕರ್ತರಿಗೆ ವಿತರಿಸುವ ಕಾರ್ಯ ನಡೆಯಿತು. ಉರ್ವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶರೀಫ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪತ್ರಕರ್ತರಿಗೂ ಫೇಸ್‍ಶೀಲ್ಡ್ ಗಳನ್ನು ಆಯುಕ್ತರ ಪರವಾಗಿ ವಿತರಿಸಿದರು.

  • ಹಸಿದವರಿಗೆ ಹೊಟ್ಟೆ ತುಂಬಿಸಲು ‘ಕರುಣೆಯ ಗೋಡೆ’ ಕಟ್ಟಿದ ಪೊಲೀಸ್ ಇಲಾಖೆ

    ಹಸಿದವರಿಗೆ ಹೊಟ್ಟೆ ತುಂಬಿಸಲು ‘ಕರುಣೆಯ ಗೋಡೆ’ ಕಟ್ಟಿದ ಪೊಲೀಸ್ ಇಲಾಖೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು ಮುಂದಾಗಿದ್ದಾರೆ. ಕರುಣೆಯ ಗೋಡೆ ಎಂಬ ನೂತನ ಯೋಜನೆಯನ್ನು ಉದ್ಘಾಟನೆ ಮಾಡಿ ಬಡ ಜೀವಗಳಿಗೆ ನೆರವಾಗಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸ್ ನಿಲ್ದಾಣದ ಬಳಿ ಕರುಣೆಯ ಗೋಡೆ ಉದ್ಘಾಟಿಸಲಾಗಿದ್ದು, ತಹಶೀಲ್ದಾರ್ ಶ್ರೀನಿವಾಸಯ್ಯ, ಡಿವೈಎಸ್‍ಪಿ ಮೋಹನ್ ಕುಮಾರ್ ಮತ್ತು ಪಿಎಸ್‍ಐ ಮಂಜುನಾಥ್‍ರಿಂದ ಯೋಜನೆಗೆ ಚಾಲನೆ ದೊರಕಿದೆ.

    ಈ ಕರುಣೆಯ ಗೋಡೆಯಲ್ಲಿ ಬ್ರೆಡ್, ರಸ್ಕ್, ಬಿಸ್ಕತ್, ಹಣ್ಣುಗಳು, ನೀರಿನ ಬಾಟೆಲ್‍ಗಳನ್ನು ಇಡಲಾಗಿದೆ. ಬಡವರು, ಹಸಿದವರು ಇಲ್ಲಿ ಇಟ್ಟಿರುವ ಆಹಾರವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಅಗತ್ಯ ವಸ್ತುಗಳನ್ನು ನೀಡಿ ಬಡವರಿಗೆ ಸಹಾಯ ಮಾಡುವ ಮೂಲಕ ಪೊಲೀಸರ ಜೊತೆ ಕೈಜೊಡಿಸಿ ಎಂದು ಅಧಿಕಾರಿಗಳು ಕೋರಿಕೊಂಡಿದ್ದಾರೆ. ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್‍ರಿಂದ ಗೋಡೆ ನಿರ್ಮಾಣವಾಗಿದ್ದು, ಅಗತ್ಯವಿದ್ದವರೂ ಇಲ್ಲಿಂದ ಯಾವ ವಸ್ತುವನ್ನಾದರೂ ತೆಗೆದುಕೊಳ್ಳಬಹುದಾಗಿದೆ.

    ಈ ಬಗ್ಗೆ ಡಿವೈಎಸ್‍ಪಿ ಮೋಹನ್ ಕುಮಾರ್ ಮಾತನಾಡಿ, ಹಸಿದವರ ಹೊಟ್ಟೆ ತುಂಬುವ ಕಾರ್ಯಕ್ಕೆ ನಮ್ಮ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ.ಚನ್ನಣ್ಣವರ್ ನೇತೃತ್ವದಲ್ಲಿ ಈ ಕಾರ್ಯ ರೂಪುಗೊಂಡಿದ್ದು ಸಂತಸ ತಂದಿದೆ. ಉಳ್ಳವರು ಇಲ್ಲಿ ಇಟ್ಟು, ಹಸಿದವರು ಪಡೆದುಕೊಳ್ಳುವ ಕಾರ್ಯವನ್ನ ನಮ್ಮ ಟೌನ್ ಪಿಎಸ್‍ಐ ನೇತೃತ್ವದಲ್ಲಿ ಸಿಬ್ಬಂದಿಗಳು ಮಾಡಿದ್ದಾರೆ ಎಂದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮಲ್ಲಯ್ಯ, ಹೇಮಂತ್ ಕುಮಾರ್ ಪಿಳ್ಳಪ್ಪ, ರಾಜಮ್ಮ ಮತ್ತಿತರು ಉಪಸ್ಥಿತರಿದ್ದರು. ಹಾಗೆಯೇ ಇಂದು ನೂರಾರು ಜನ ಈ ಯೋಜನೆಯ ಸದುಪಯೋಗ ಪಡೆದುಕೊಂಡರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪೊಲೀಸರಿಂದ ರಸ್ತೆ ಬ್ಲಾಕ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಪೊಲೀಸರಿಂದ ರಸ್ತೆ ಬ್ಲಾಕ್

    ಯಾದಗಿರಿ: ಕೊರೊನಾ ಗ್ರೀನ್ ಝೋನ್ ಇರುವ ಕಾರಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಂಪೂರ್ಣವಾಗಿ ಮರೆತು ಜನರನ್ನು ರಸ್ತೆಗಿಳಿಸಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು.

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಯಾದಗಿರಿ ಪೊಲೀಸ್ ಇಲಾಖೆ, ನಗರದ ಪ್ರಮುಖ ರಸ್ತೆಗಳನ್ನೆಲ್ಲ ಬಂಬು ಮತ್ತು ಬ್ಯಾರಿಕೇಡ್ ನಿಂದ ರಸ್ತೆ ಬ್ಲಾಕ್ ಮಾಡಿದೆ. ಇನ್ನೂ ಕೆಲವು ಕಡೆ ರಸ್ತೆಗಳಿಗೆ ಮುಳ್ಳು ಬೇಲಿ ಹಾಕಲಾಗಿದೆ.

    ನಗರದಲ್ಲಿ ಎಲ್ಲಾ ರಸ್ತೆಗಳು ಒನ್ ವೇ ಮಾಡಿ, ಅನಾವಶ್ಯಕವಾಗಿ ರಸ್ತೆಗಿಳಿಯುವ ವಾಹನಗಳನ್ನು ತಪಾಸಣೆ ಮಾಡಿ ಅವುಗಳ ಮೇಲೆ ಪ್ರಕರಣ ದಾಖಲಿಸಿ, ಸೀಜ್ ಮಾಡಲಾಗುತ್ತಿದೆ. ರಸ್ತೆ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

  • ಪುಟ್ಟ ಮಗು ನೋಡುವ ಆಸೆ ಕಿತ್ಕೊಂಡ ಕೊರೊನಾ-ಆರಕ್ಷಕರ ನೋವಿನ ಕಥೆ

    ಪುಟ್ಟ ಮಗು ನೋಡುವ ಆಸೆ ಕಿತ್ಕೊಂಡ ಕೊರೊನಾ-ಆರಕ್ಷಕರ ನೋವಿನ ಕಥೆ

    ಬೆಂಗಳೂರು: ಕೊರೊನಾ ವಿರುದ್ಧ ಯುದ್ಧದಲ್ಲಿ ಗೆಲ್ಲಬೇಕೆಂದು ಆರೋಗ್ಯ ಇಲಾಖೆ ಮತ್ತು ಗೃಹ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಹೀಗಾಗಿ ಹಗಲಿರುಳು ಕೆಲಸದಲ್ಲಿ ಎರಡು ಇಲಾಖೆಯ ಸಿಬ್ಬಂದಿ ನಿರತರಾಗಿದ್ದಾರೆ. ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯ ಪಿಎಸ್‍ಐ ಪ್ರತಾಪಗೌಡ ಪಾಟೀಲ್ ಅವರು ತಮ್ಮ ಪುಟ್ಟ ಮಗುವಿನ ಮುಖ ನೋಡಲು ಕಾಯುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಊರಿಗೆ ತೆರಳಿ ಮುದ್ದು ಕಂದನ ಮುಖ ನೋಡಲು ಆಗುತ್ತಿಲ್ಲ.

    ಪಿಎಸ್‍ಐ ಪ್ರತಾಪಗೌಡ ಪಾಟೀಲ್ 11 ದಿನಗಳ ಹಿಂದಷ್ಟೇ ಎರಡನೇ ಮಗುವಿಗೆ ತಂದೆಯಾಗಿದ್ದರು. ಎಂಟು ವರ್ಷಗಳ ಬಳಿಕ ಎರಡನೇ ಮಗು ಆಗಿದ್ದರಿಂದ ಸಂತಸದಲ್ಲಿದ್ದರು. ತನ್ನ ಪುಟ್ಟ ಪಾಪುವನ್ನ ಒಮ್ಮೆಯಷ್ಟೆ ನೋಡಿ ಕಣ್ತುಂಬಿಕೊಂಡಿದ್ದರು. ಮಗು ಜನಿಸಿದ ಎರಡೇ ದಿನಕ್ಕೆ ಸರ್ಕಾರ ಲಾಕ್‍ಡೌನ್ ಆದೇಶ ಜಾರಿಗೊಳಿಸಿತ್ತು. ಇನ್ನು ಕೆಲಸ ಮುಗಿಸಿ ಮನೆಗೆ ಹೋದ್ರೆ ಮುದ್ದು ಕಂದಮ್ಮನನ್ನು ಎತ್ತಿ ಮುದ್ದಾಡಬೇಕೆಂದು ಅನ್ನಿಸುತ್ತದೆ.

    ಹೀಗಾಗಿ ಮಗುವಿನ ಆರೋಗ್ಯದ ಬಗ್ಗೆ ಆತಂಕಗೊಂಡ ಪ್ರತಾಪ್ ಗೌಡ, ಪತ್ನಿ ಹಾಗೂ ಮಕ್ಕಳನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ ಗೆ ಕಳುಹಿಸಿದ್ದಾರೆ. ಸಾರ್ವಜನಿಕರ ರಕ್ಷಣೆಗಾಗಿ ಮನೆ ಮಠ, ಮಡದಿ ಮಕ್ಕಳನ್ನ ತೊರೆದು ಇಡೀ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ತನ್ನ ಪುಟ್ಟ ಕಂದನ ಜೊತೆ ಕಾಲ ಕಳೆಯೋ ಆಸೆ ಇದ್ದರೂ ಜನರ ಸೇವೆಗಾಗಿ ನಿಂತಿದ್ದಾರೆ.

  • ಬಿಸಿಲನಾಡಲ್ಲಿ 5 ಲಕ್ಷ ಸಸಿ ನೆಡುವ ಅಭಿಯಾನ – ಪೊಲೀಸ್ ಇಲಾಖೆ ಕೆಲಸಕ್ಕೆ ಇಡೀ ನಗರವೇ ಸಾಥ್

    ಬಿಸಿಲನಾಡಲ್ಲಿ 5 ಲಕ್ಷ ಸಸಿ ನೆಡುವ ಅಭಿಯಾನ – ಪೊಲೀಸ್ ಇಲಾಖೆ ಕೆಲಸಕ್ಕೆ ಇಡೀ ನಗರವೇ ಸಾಥ್

    ರಾಯಚೂರು: ಐದು ಲಕ್ಷ ಸಸಿಗಳನ್ನ ನೆಡುವ ಕಾರ್ಯಕ್ರಮ ಅಂಗವಾಗಿ ನಗರದಲ್ಲಿಂದು ಪೊಲೀಸ್ ಇಲಾಖೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಾವಿರಾರು ಬೀಜಗಳನ್ನ ನೆಡುವ ಕಾರ್ಯಕ್ರಮಕ್ಕೆ ಪೊಲೀಸ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

    ಡೈರಿ ಹಾಲಿನ ಖಾಲಿ ಪ್ಯಾಕೆಟ್‍ಗಳಲ್ಲಿ, ನೀರಿನ ಬಾಟಲ್, ಅಡುಗೆ ಎಣ್ಣೆಯ ಪ್ಲಾಸ್ಟಿಕ್ ಪ್ಯಾಕೆಟ್‍ಗಳಲ್ಲಿ ಮಣ್ಣು ಗೊಬ್ಬರ ತುಂಬಿ ಬೀಜ ಹಾಕಿ ಸಸಿಗಳನ್ನು ತಯಾರಿಸುವ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಚಾಲನೆ ನೀಡಿದರು. ಜೊತೆಗೆ 186ನೇ ವಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನೂ ಮುಂದುವರಿಸಲಾಯಿತು.

    ಈಗಾಗಲೇ ಬೇಸಿಗೆಯ ಬಿರು ಬಿಸಿಲು ಆರಂಭವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ತಾಪಮಾನ ಕಡಿಮೆಗೊಳಿಸಲು ನಾವು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ಕೆ ಕೈ ಜೋಡಿಸಿದಲ್ಲಿ ಮುಂದಿನ ಮಳೆಗಾಲದ ವೇಳೆಗೆ ನಾವು ಐದು ಲಕ್ಷ ಸಸಿಗಳನ್ನು ಬೆಳೆಸುವ ಕಾರ್ಯ ಯಶಸ್ವಿಗೊಳಿಸಲು ಸಾಧ್ಯ ಎಂದು ವೇದಮೂರ್ತಿ ಹೇಳಿದರು.

    ಜಿಲ್ಲಾ ಪೋಲಿಸ್ ಇಲಾಖೆ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ನಗರಸಭೆ, ಶಿಲ್ಪಾ ಫೌಂಡೇಶನ್, ಗ್ರೀನ್ ರಾಯಚೂರು ಮತ್ತು ರಾಯಚೂರು ನಗರದ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಚ್.ಆರ್. ಕುಮಾರ್, ಡಿ.ಎ.ಆರ್ ಪೊಲೀಸ್ ಉಪಾಧೀಕ್ಷಕರಾದ ಪ್ರಮಾನಂದ ಘೋಡ್ಕೆ ಮತ್ತು ಆರ್.ಪಿ.ಐ ಕೇದಾರನಾಥ ಭಾಗವಹಿಸಿದ್ದರು.

     

  • ಜನಸ್ನೇಹಿ ಕಾರ್ಯಕ್ರಮ ರೂಪಿಸಿದ ಹಾಸನ ಪೊಲೀಸ್ ಇಲಾಖೆ

    ಜನಸ್ನೇಹಿ ಕಾರ್ಯಕ್ರಮ ರೂಪಿಸಿದ ಹಾಸನ ಪೊಲೀಸ್ ಇಲಾಖೆ

    ಹಾಸನ: ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹಾಸನ ಎಸ್‍ಪಿ ಜಿಲ್ಲೆಯಲ್ಲಿ ವಿನೂತನ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಪ್ರತಿ ಎರಡು ವಾರಗಳಿಗೊಮ್ಮೆ ಶುಕ್ರವಾರದಂದು ಹಾಸನ ಎಸ್‍ಪಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಹಾಸನ ಜಿಲ್ಲೆಯ ಯಾರೇ ಆದರೂ ತಮಗಾಗುತ್ತಿರುವ ಅಥವಾ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳನ್ನು ಫೋನ್ ಮೂಲಕ ಎಸ್‍ಪಿಯವರಿಗೆ ತಿಳಿಸಬಹುದಾಗಿದೆ. ಸ್ವತಃ ಎಸ್‍ಪಿಯವರೇ ಖುದ್ದು ಫೋನ್ ರಿಸೀವ್ ಮಾಡಿ ಮಾತನಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ.

    ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ನಿರಂತರವಾಗಿ ನಡೆಯಲಿದೆ. ಪ್ರತಿ ಎರಡು ವಾರಗಳಿಗೆ ಒಮ್ಮೆ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ, ಒಮ್ಮೆ ತಾವು ಹೇಳಿಕೊಂಡ ಸಮಸ್ಯೆ ಬಗೆಹರಿಯದಿದ್ರೆ, ಮತ್ತೆ ಕರೆ ಮಾಡುವ ಮೂಲಕ ಎಸ್‍ಪಿಯವರ ಬಳಿ ತಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿಸಬಹುದಾಗಿದೆ.

    ಹಾಸನ ಎಸ್‍ಪಿಯವರ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಜನ ಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅಲ್ಲಿ ನಮಗೆ ಸರಿಯಾದ ಸ್ಪಂದನೆ ಸಿಗದಿರಬಹುದು ಅಥವಾ ಕೆಲವೊಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಭಯಪಡಬಹುದು. ಇಂತಹ ಸಮಯದಲ್ಲಿ ನಾವೇ ನೇರವಾಗಿ ಎಸ್‍ಪಿಯವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಬಹುದಾಗಿದೆ. ಆಗ ಎಸ್‍ಪಿಯವರೇ ಖುದ್ದು ನಮ್ಮ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಮಸ್ಯೆ ಬಗೆಹರಿಸಲು ಸೂಚಿಸುತ್ತಾರೆ. ಇದರಿಂದ ಪೊಲೀಸ್ ಇಲಾಖೆಯ ಬಗ್ಗೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

  • ಶಾಂತಿ ಸುವ್ಯವಸ್ಥೆ ಕಾಪಾಡಲು ಮಂಡ್ಯ ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್

    ಶಾಂತಿ ಸುವ್ಯವಸ್ಥೆ ಕಾಪಾಡಲು ಮಂಡ್ಯ ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್

    – ಮಂಡ್ಯದಲ್ಲಿ 38 ರೌಡಿಗಳನ್ನ ಗಡಿಪಾರು ಮಾಡಲು ನಿರ್ಧಾರ

    ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸಕ್ಕರೆ ನಾಡು ಮಂಡ್ಯ ಪುಡಿ ರೌಡಿಗಳ ಅಟ್ಟಹಾಸಕ್ಕೆ ನಲುಗಿದ್ದು, ಕಳೆದೆರಡು ತಿಂಗಳಿಂದ ಒಂದಲ್ಲಾ ಒಂದು ಅಪರಾಧ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಇಂತಹ ಅಪರಾಧ ಪ್ರಕರಣಗಳು ತಡೆಗಟ್ಟಲು ಪೊಲೀಸ್ ಇಲಾಖೆ ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ. ಜಿಲ್ಲಾಡಳಿತ ಜೊತೆ ಸೇರಿ ಜಿಲ್ಲೆಯ ರೌಡಿಶೀಟರ್‌ಗಳನ್ನ ಗಡಿಪಾರು ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮುಂದಾಗಿದೆ.

    ಕಳೆದೆರಡು ತಿಂಗಳಿನಿಂದ ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿವೆ. ಕಳೆದ ಡಿಸೆಂಬರ್ ನಿಂದ ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ 5ಕ್ಕೂ ಹೆಚ್ಚು ಕೊಲೆ, 10ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಮತ್ತು ಹಲವು ಸರಗಳ್ಳತನ ಪ್ರಕರಣಗಳು ವರದಿಯಾಗಿವೆ. ಇದರಿಂದ ಸಾರ್ವಜನಿಕರ ನೆಮ್ಮದಿ ಕೆಟ್ಟಿದೆ. ಅಪರಾಧ ಪ್ರಕರಣಗಳು ಜಿಲ್ಲೆಯಲ್ಲಿ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಜಿಲ್ಲಾ ವ್ಯಾಪ್ತಿಯ 38 ರೌಡಿಶೀಟರ್‌ಗಳನ್ನು ಗಡಿಪಾರು ಮಾಡುವಂತೆ ಮಂಡ್ಯ ಎಸ್‍ಪಿ ಪರಶುರಾಮ್ ಜಿಲ್ಲಾಧಿಕಾರಿ ವೆಂಕಟೇಶ್‍ರವರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ವೆಂಕಟೇಶ್, ಇತ್ತೀಚೆಗೆ ಜಿಲ್ಲೆಯಲ್ಲಿ ಅಪರಾಧ ಜಾಸ್ತಿಯಾಗಿದೆ. ಸಾರ್ವಜನಿಕರ ಶಾಂತಿ ಕಾಪಾಡುವ ಸಲುವಾಗಿ ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ವಿಚಾರಣೆ ಆರಂಭಿಸಲಾಗಿದ್ದು, ಗಡಿಪಾರಿನ ಅವಧಿ ಹಾಗೂ ಗಡಿಪಾರು ವಾಪಸ್ ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.

    ಜಿಲ್ಲಾಧಿಕಾರಿ ಗಡಿಪಾರು ಆದೇಶ ಮಾಡುವ ಮುನ್ನವೇ ರೌಡಿಶೀಟರ್ ಓರ್ವನಿಗೆ ಕೆ.ಆರ್ ಪೇಟೆ ಪಿಎಸ್‍ಐ ಬೆವರಿಳಿಸಿದ್ದಾರೆ. ಶ್ರೀಮಂತರನ್ನು ಬೆದರಿಸಿ ಹಣವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದ ಆರೋಪಿಗೆ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ವಾರ್ನಿಂಗ್ ಕೊಟ್ಟಿದ್ದಾರೆ. ಬದಲಾಗದಿದ್ದರೆ ಎನ್‍ಕೌಂಟರ್ ಲಿಸ್ಟ್‌ಗೆ ಸೇರಿಸಿ ಮುಗಿಸಿಬಿಡುತ್ತೀನಿ. ಇದು ಓಲ್ಡ್ ಪೊಲೀಸಿಂಗ್ ಅಲ್ಲ ಅಂತ ವಾರ್ನ್ ಮಾಡಿದ್ದಾರೆ. ವಾರ್ನ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಿಎಸ್‍ಐ ಬ್ಯಾಟರಾಯಗೌಡಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

  • ಬಂಧಿತ, ಗಾಯಗೊಂಡ ಆರೋಪಿಗಳಿಗೆ ಚಿಕಿತ್ಸೆ ಕಡ್ಡಾಯ: ಪೊಲೀಸ್ ಇಲಾಖೆ

    ಬಂಧಿತ, ಗಾಯಗೊಂಡ ಆರೋಪಿಗಳಿಗೆ ಚಿಕಿತ್ಸೆ ಕಡ್ಡಾಯ: ಪೊಲೀಸ್ ಇಲಾಖೆ

    ಬೆಂಗಳೂರು: ಬಂಧಿತ ಆರೋಪಿಗಳು ಮತ್ತು ಗಾಯಗೊಂಡ ಆರೋಪಿಗಳಿಗೆ ಕಡ್ಡಾಯವಾಗಿ ತಪ್ಪದೆ ಠಾಣಾಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿಸಬೇಕು ಅಂತ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಶಿಫಾರಸು ಮೇಲೆ ಪೊಲೀಸ್ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ. ಅಲ್ಲದೆ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.

    ವಿಚಾರಣಾಧೀನ ಕೈದಿ ಸಂಜು ಸಂಜೀವ್ ಕುಮಾರ್ ಅಸಹಜ ಸಾವಿನ ಪ್ರಕರಣದಿಂದ ಈ ಮಹತ್ವದ ಸುತ್ತೋಲೆ ಇಲಾಖೆ ಹೊರಡಿಸಿದೆ. ಅಪರಾಧ ಪ್ರಕರಣದಲ್ಲಿ ಅಥವಾ ಇತರೆ ಸಂದರ್ಭಗಳಲ್ಲಿ ಬಂಧಿತ ಆರೋಪಿಗಳಿಗೆ ಯಾವ ಯಾವ ನಿಯಮ ಪಾಲನೆ ಮಾಡಬೇಕು ಅಂತ ಸುಪ್ರೀಂಕೋರ್ಟ್ ಡಿಕೆ ಬಸು ವಿರುದ್ಧ ಪಶ್ಚಿಮ ಬಂಗಾಳ ರಾಜ್ಯದ ಪ್ರಕರಣದಲ್ಲಿ 11 ಅಂಶಗಳ ಕಾರ್ಯಸೂಚಿಯನ್ನು ನೀಡಿದೆ. ಈ ಮಾರ್ಗಸೂಚಿಯನ್ನ ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಿದೆ.

    ಬಂಧಿತ ಆರೋಪಿಗೆ ವೈದ್ಯಕೀಯ ಚಿಕಿತ್ಸೆ ಅಥವಾ ಪರೀಕ್ಷೆ ಒಳಪಡಿಸುವ ಕುರಿತಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿ 8 ನೇ ಅಂಶದಲ್ಲಿ ಸೂಚನೆ ನೀಡಲಾಗಿದೆ. ಈ ಮಾರ್ಗಸೂಚಿ ಅನ್ವಯ ಬಂಧಿತ ಆರೋಪಿಗೆ ಪ್ರತಿ 48 ಗಂಟೆಗೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಸಬೇಕು ಅಂತ ಸೂಚನೆ ನೀಡಲಾಗಿದೆ. ಈ ಆದೇಶ ಪಾಲಿಸುವಂತೆ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

    ಬಂಧಿತ ಆರೋಪಿಯನ್ನ ಬಂಧನದ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಆರೋಪಿ ಪರೀಕ್ಷೆಗೆ ಪೊಲೀಸರು ಮೊದಲ ಆದ್ಯತೆ ಕೊಡಬೇಕು. ಬಂಧಿತ ಆರೋಪಿ ಆರೋಗ್ಯ ಸ್ಥಿತಿ ವಿಷಮಿಸದಂತೆ ಅಗತ್ಯ ಕ್ರಮವಹಿಸಬೇಕು ಅಂತ ಇಲಾಖೆ ಸುತ್ತೋಲೆಯ ಉಲ್ಲೇಖ ಮಾಡಿದೆ. ಯಾವುದೇ ಠಾಣೆಗಳು ಮಾರ್ಗಸೂಚಿ ಪಾಲನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.