Tag: Police Constable

  • ಬಾಲ್ಕನಿಯಲ್ಲಿ ಕುಳಿತಿದ್ದ ಮಹಿಳೆ -ನಗ್ನವಾಗಿ ಹೊರ ಬಂದ  ಕಾನ್ಸ್‌ಟೇಬಲ್

    ಬಾಲ್ಕನಿಯಲ್ಲಿ ಕುಳಿತಿದ್ದ ಮಹಿಳೆ -ನಗ್ನವಾಗಿ ಹೊರ ಬಂದ ಕಾನ್ಸ್‌ಟೇಬಲ್

    ಮುಂಬೈ: ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಬಾಲ್ಕನಿಯಲ್ಲಿ ಕುಳಿತಿದ್ದ ಮಹಿಳೆ ಮುಂದೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಸಂಪೂರ್ಣ ಬೆತ್ತಲಾಗಿ ಬಂದು ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.

    ಈ ಘಟನೆ ಮುಂಬೈನ ನೆಹರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 10ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮಹಿಳೆ ನೀಡಿದ ದೂರಿನನ್ವಯ ಪೊಲೀಸ್ ಕಾನ್ಸ್‌ಟೇಬಲ್ ಹರಿಶ್ಚಂದ್ರ ಲಾಹನೆಯನ್ನು ಬಂಧಿಸಲಾಗಿತ್ತು.

    ಏನಿದು ಪ್ರಕರಣ?
    ಮಹಿಳೆ ಪ್ರತಿ ದಿನದಂತೆ ಆ ದಿನ ಕೂಡ ಎಲ್ಲ ಕೆಲಸ ಮುಗಿಸಿ ಬಾಲ್ಕನಿಯಲ್ಲಿ ರೆಸ್ಟ್ ಮಾಡುತ್ತಿದ್ದರು. ಇದೇ ವೇಳೆ ಮಹಿಳೆ ಮನೆ ಮುಂದೆ ವಾಸವಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಹರಿಶ್ಚಂದ್ರ, ಮನೆಯ ಬಳಿ ನಿಂತು ಅಶ್ಲೀಲ ಶಬ್ಧ ಬಳಸಿ ಮಾತನಾಡಿದ್ದಾನೆ. ಆದರೆ ಕಾನ್ಸ್‌ಟೇಬಲ್ ಮಹಿಳೆಗೆ ಏನು ಹೇಳುತ್ತಿದ್ದಾನೆಂದು ಅರ್ಥವಾಗುಷ್ಟರಲ್ಲಿ ಆತ ಮನೆಯೊಳಗೆ ಹೋಗಿದ್ದನು. ಮತ್ತೆ ಕೆಲವೇ ಕ್ಷಣದಲ್ಲಿ ಆತ ಸಂಪೂರ್ಣವಾಗಿ ಬೆತ್ತಲಾಗಿ ಹೊರಬಂದಿದ್ದು, ಆತನನ್ನು ನೋಡಿ ಮಹಿಳೆ ದಾಂಗಾಗಿದ್ದಾರೆ ಎಂದು ಇನ್ಸ್ ಪೆಕ್ಟರ್ ವಿಲಾಶ್ ಶಿಂಧೆ ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಹರಿಶ್ಚಂದ್ರ ನಗ್ನವಾಗಿ ಬಂದು ಮಹಿಳೆ ಮುಂದೆ ಕೆಟ್ಟದಾಗಿ ವರ್ತಿಸಿದ್ದಾನೆ. ಕೂಡಲೇ ಮಹಿಳೆ ಮನೆಯೊಳಗೆ ಓಡಿ ಹೋಗಿದ್ದು, ಪೊಲೀಸ್ ಠಾಣೆಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.

    ಮುಂಬೈ ಪೊಲೀಸರು ಹರಿಶ್ಚಂದ್ರ ವಿರುದ್ಧ ಐಪಿಸಿ ಸೆಕ್ಸನ್ 354ಎ ಮತ್ತು 509 ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್ ನಲ್ಲಿ ಆತನಿಗೆ ಜಾಮೀನು ಸಿಕ್ಕಿದ್ದು, ಹೊರ ಬಂದಿದ್ದಾನೆ. ಆದರೆ ಪೊಲೀಸ್ ಇಲಾಖೆ ಆತನನ್ನು ಕೆಲಸದಿಂದ ಅಮಾನತು ಮಾಡಿದೆ. ಈ ಕುರಿತು ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಗೆ ಪೊಲೀಸಪ್ಪನಿಂದ ಹಲ್ಲೆ

    ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಗೆ ಪೊಲೀಸಪ್ಪನಿಂದ ಹಲ್ಲೆ

    ಹಾಸನ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನದ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ ನಡೆದಿದೆ.

    ನಾಗೇಶ್ ಹಲ್ಲೆ ಮಾಡಿದ ಪೇದೆ. ನಾಗೇಶ್ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ 12.30ರ ವೇಳೆ ಬಸ್ ಕಾಯುತ್ತಿದ್ದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ.

    ಮಂಗಳವಾರ ರಾತ್ರಿ ಸುಮಾರು 12.30ಕ್ಕೆ ಪ್ರೀತಿ ಫ್ಯಾಷನ್ ಅಂಗಡಿಯ ಇಬ್ಬರು ಯುವಕರು ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೇದೆ ಸುಖಾಸುಮ್ಮನೆ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಪೇದೆ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಇಬ್ಬರು ಯುವಕರು ಅಂಗಡಿಯಲ್ಲಿ ಮಲಗಿ ನಂತರ ಬಸ್‍ಗೆ ಹೋಗುವಾಗ ಪೊಲೀಸ್ ಪೇದೆ ದರ್ಪ ತೋರಿದ್ದಾರೆ. ಕುಡುಕ ಪೇದೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದು, ಪೇದೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

    ಕಳೆದ ವಾರ ಚನ್ನರಾಯಪಟ್ಟಣ ಎಎಸ್‍ಐ ಒಬ್ಬರು ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಸುದ್ದಿ ಆಗಿತ್ತು.

  • ನ್ಯಾಯ ಸಿಗ್ಬೇಕಾದ್ರೆ ನನ್ನೊಂದಿಗೆ ಅಡ್ಜೆಸ್ಟ್ ಆಗು- ಯುವತಿಗೆ ಪೇದೆ ಕಿರುಕುಳ

    ನ್ಯಾಯ ಸಿಗ್ಬೇಕಾದ್ರೆ ನನ್ನೊಂದಿಗೆ ಅಡ್ಜೆಸ್ಟ್ ಆಗು- ಯುವತಿಗೆ ಪೇದೆ ಕಿರುಕುಳ

    ಬೆಂಗಳೂರು: ಪ್ರಿಯಕರ ಮೋಸ ಮಾಡಿದ್ದಾನೆ, ನ್ಯಾಯ ಕೊಡಿಸಿ ಎಂದ ಯುವತಿಗೆ ಪೊಲೀಸ್ ಪೇದೆಯೊಬ್ಬ ಅಡ್ಜೆಸ್ಟ್ ಆಗಬೇಕು ಎಂದು ಹೇಳಿದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ವಿಜಯ್ ರಾಥೋಡ್ ಅಡ್ಜೆಸ್ಟ್ ಮಾಡಿಕೊಳ್ಳು ಎಂದ ಯುವತಿಗೆ ಹೇಳಿದ ಪೇದೆ. ಈತ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಯುವತಿ ಹಾಗೂ ವಿಜಯ್ ರಾಥೋಡ್ ನಡುವೆ ನಡೆದ ಆಡಿಯೋ ಸಂಭಾಷಣೆ ರೆಕಾರ್ಡ್ ಆಗಿದ್ದು, ಈ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಏನಿದು ಪ್ರಕರಣ?:
    ಯುವತಿ ತನ್ನ ಪ್ರಿಯಕರ ಮೋಸ ಮಾಡಿದ್ದಾನೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ವಿಜಯ್ ನಿಮಗೆ ಸಹಾಯ ಮಾಡುತ್ತೇನೆ ಎಂದು ಯುವತಿ ಬಾಳಿನಲ್ಲಿ ವಿಲನ್ ಆಗಿದ್ದಾನೆ.

    ಯುವತಿ ತನ್ನ ಪ್ರಿಯಕರನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಜಯ್‍ಗೆ ನೀಡಿದ್ದರು. ಆದರೆ ವಿಜಯ್ ನ್ಯಾಯ ಕೊಡಿಸುವುದಾಗಿ ಹೇಳಿ ಪ್ರಿಯಕರನ ವಿರುದ್ಧ ಇದ್ದ ಸಾಕ್ಷ್ಯಗಳನ್ನು ಡಿಲೀಟ್ ಮಾಡಿದ್ದಾನೆ. ಅಲ್ಲದೆ ಯುವಕನೊಬ್ಬನನ್ನು ನಂಬಿಸಿ ಯುವತಿಯಿಂದ ವಿಜಯ್ ಹಣ ವಸೂಲಿ ಮಾಡಿದ್ದಾನೆ. ಬಳಿಕ ಆ ಯುವಕನೂ ಸಿಗಲಿಲ್ಲ ಹಾಗೂ ಆತನಿಗೆ ನೀಡಿದ್ದ ಹಣವೂ ಬರಲಿಲ್ಲ.

    ಅವನಿಗೆ ಕೊಟ್ಟಿದ್ದ 50 ಲಕ್ಷ ಹಣ ವಾಪಸ್ ಕೊಡಿಸಿ ಎಂದು ಯುವತಿ ಪೇದೆ ಬಳಿ ಕೇಳಿಕೊಂಡಿದ್ದಾಳೆ. ಈ ವೇಳೆ ವಿಜಯ್ ನಿನಗೆ ನ್ಯಾಯ ಸಿಗಬೇಕೆಂದರೆ ನನ್ನ ಜೊತೆ ಅಡ್ಜೆಸ್ಟ್ ಆಗಬೇಕು ಎಂದು ಹೇಳಿದ್ದಾನೆ. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಆಗ ವಿಜಯ್ ಯುವತಿಗೆ ಕಿರುಕುಳ ನೀಡಿದ್ದಾನೆ. ಇಬ್ಬರೂ ಒಂದೇ ಜಾತಿ ಅಲ್ವಾ? ನಾವೇಕೆ ಜೊತೆ ಆಗಬಾರದು ಎಂದು ವಿಜಯ್ ಹಿಂಸೆ ಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

  • ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

    ಜಗಳ ಬಿಡಿಸಲು ಹೋದ ಪೇದೆಗೆ ಹೊಡೆದ ಕುಡುಕರು

    – ಕುಡುಕರಿಗೆ ಬಿತ್ತು ಸಾರ್ವಜನಿಕರಿಂದ ಗೂಸಾ

    ಬೆಳಗಾವಿ: ಜಗಳ ಬಿಡಿಸಲು ಹೋಗಿದ್ದ ಪೇದೆಗೆ ಇಬ್ಬರು ಕುಡುಕರು ಹೊಡೆದ ಘಟನೆ ಜಿಲ್ಲೆಯ ಕಿತ್ತೂರು ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ನಡೆದಿದೆ.

    ಪೇದೆಯ ಮೇಲೆ ಹಲ್ಲೆ ಮಾಡಿದ ಕುಡುಕರು ಕಿತ್ತೂರು ತಾಲೂಕಿನ ಗುಡಿ ಕೊಟಬಾಗಿ ಗ್ರಾಮದವರು ಎನ್ನಲಾಗಿದೆ. ಕಿತ್ತೂರು ಠಾಣೆಯ ಎಲ್.ಎಚ್.ನಾಯ್ಕರ್ ಹಲ್ಲೆಗೊಳಗಾದ ಪೇದೆ.

    ಮದ್ಯ ಸೇವಿಸಿದ್ದ ಇಬ್ಬರು ಯುವಕರು ಪೊಲೀಸ್ ಠಾಣೆಯ ಮುಂದೆ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ನೋಡಿದ ಪೇದೆ ಎಲ್.ಎಚ್.ನಾಯ್ಕರ್ ಅವರು ಜಗಳ ಬಿಡಿಸಲು ಹೋಗಿದ್ದರು. ಆದರೆ ಇಬ್ಬರು ಸೇರಿ ಪೇದೆಗೆ ಹೊಡೆದಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನರಿಕರು ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ. ಬಳಿಕ ಅವರನ್ನು ಪೊಲೀಸ್ ಠಾಣೆಗೆ ತಂದು ಬಿಟ್ಟಿದ್ದಾರೆ.

    ಕಿತ್ತೂರು ಪೋಲಿಸ್ ಠಾಣೆಯ ಸಿಬ್ಬಂದಿ ಮದುವೆಗೆ ತೆರಳಿದ್ದರಿಂದ ಕೇವಲ ಇಬ್ಬರು ಮಾತ್ರ ಇದ್ದರು. ಹೀಗಾಗಿ ಕುಡುಕರು ಅವಾಂತರ ಮಾಡಿದ್ದಾರೆ.

  • ಬಂಧಿಸಲು ಹೋಗಿದ್ದ ಪೇದೆಗೆ ಆರೋಪಿಯಿಂದ ಕಪಾಳ ಮೋಕ್ಷ

    ಬಂಧಿಸಲು ಹೋಗಿದ್ದ ಪೇದೆಗೆ ಆರೋಪಿಯಿಂದ ಕಪಾಳ ಮೋಕ್ಷ

    ಚಿಕ್ಕಬಳ್ಳಾಪುರ: ಬಂಧಿಸಲು ಹೋಗಿದ್ದ ಪೇದೆಯೊಬ್ಬರಿಗೆ ಆರೋಪಿ ಕಪಾಳ ಮೋಕ್ಷ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೀರ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೀರ್ಜೇನಹಳ್ಳಿ ಗ್ರಾಮದ ಎನ್.ಮೂರ್ತಿ ನಂದಗುಡಿ ಪೊಲೀಸ್ ಠಾಣೆಯ ಪೇದೆ ಶಿವಲಿಂಗಯ್ಯ ಅವರ ಕಪಾಳಕ್ಕೆ ಹೊಡೆದಿದ್ದಾನೆ.

    ವಂಚನೆ ಆರೋಪದಡಿ ಎನ್.ಮೂರ್ತಿ ವಿರುದ್ಧ ಹೊಸಕೋಟೆ ತಾಲೂಕಿನ ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಆರೋಪಿಯನ್ನು ಬಂಧಿಸಲು ದಫೇದಾರ್ ಶಿವಲಿಂಗಯ್ಯ ಅವರು ಬೀರ್ಜೇನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಬಂಧನವನ್ನು ವಿರೋಧಿಸಿದ ಎನ್.ಮೂತಿ ಶಿವಲಿಂಗಯ್ಯ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

    ಶಿವಲಿಂಗಯ್ಯ ಅವರು ಕೊನೆಗೂ ಆರೋಪಿಯನ್ನು ಬಂಧಿಸಿ ನಂದಗುಡಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಎನ್.ಮೂರ್ತಿ ವಿರುದ್ಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೃದಯಾಘಾತದಿಂದ ಕರ್ತವ್ಯನಿರತ ಪೇದೆ ಠಾಣೆಯಲ್ಲೇ ಸಾವು

    ಹೃದಯಾಘಾತದಿಂದ ಕರ್ತವ್ಯನಿರತ ಪೇದೆ ಠಾಣೆಯಲ್ಲೇ ಸಾವು

    ಚಿಕ್ಕಮಗಳೂರು: ರಾತ್ರಿಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಠಾಣೆಯಲ್ಲಿ ನಡೆದಿದೆ.

    ಯೋಗೀಶ್ (32) ಮೃತಪಟ್ಟ ಪೇದೆ. ಗುರುವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಯೋಗೀಶ್ ಠಾಣೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರೇ ಸಿಬ್ಬಂದಿ ತಕ್ಷಣ ಯೋಗೀಶ್‍ನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಗೀಶ್ ಸಾವನ್ನಪ್ಪಿದ್ದಾರೆ.

    ಇದು ಆತ್ಮಹತ್ಯೆಯೋ ಅಥವಾ ಸಹಜ ಸಾವೋ ಎನ್ನುವುದು ಮರಣೋತ್ತರ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಆದರೆ ಸದ್ಯಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಹೇಳಲಾಗ್ತಿದೆ. ಮೃತ ಯೋಗೀಶ್ ಮೂಲತಃ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದ ಮೈಲಿಮನೆ ನಿವಾಸಿಯಾಗಿದ್ದು, 2009ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಕ್ತನಿಗೆ ಅಡ್ಡಿ ಮಾಡಬೇಡಿ – ಸರತಿ ಸಾಲಿನಲ್ಲಿ ನಿಂತು ಕೃಷ್ಣದರ್ಶನ ಮಾಡಿದ ರಕ್ಷಣಾ ಸಚಿವೆ

    ಭಕ್ತನಿಗೆ ಅಡ್ಡಿ ಮಾಡಬೇಡಿ – ಸರತಿ ಸಾಲಿನಲ್ಲಿ ನಿಂತು ಕೃಷ್ಣದರ್ಶನ ಮಾಡಿದ ರಕ್ಷಣಾ ಸಚಿವೆ

    ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ನಾಮಪತ್ರ ಸಲ್ಲಿಸಲಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಥ್ ನೀಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಕೃಷ್ಣ ಮಠಕ್ಕೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಮತ್ತಿತರರ ಜೊತೆ ಭೇಟಿ ನೀಡಿದ್ದಾರೆ.

    ಕನಕ ನವಗ್ರಹ ಕಿಂಡಿಯ ಮೂಲಕ ಸಚಿವೆ ಕೃಷ್ಣದರ್ಶನ ಮಾಡಿದರು. ಪರ್ಯಾಯ ಪಲಿಮಾರು ಸ್ವಾಮೀಜಿ ಸಚಿವರಿಗೆ ಕೃಷ್ಣ ಪ್ರಸಾದ, ಸೀರೆ ನೀಡಿ ಗೌರವಿಸಿದರು. ಇದೇ ಸಂದರ್ಭ ರಕ್ಷಣಾ ಸಚಿವೆ ಭಕ್ತರೊಬ್ಬರ ಜೊತೆ ಸೌಜನ್ಯತೆ ಮೆರೆದ ಘಟನೆ ನಡೆದಿದೆ. ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನಕ್ಕೆ ತರಳಿದ್ದ ನಿರ್ಮಲ ಸೀತಾರಾಮನ್ ಮುಂಭಾಗ ಭಕ್ತರೊಬ್ಬರು ಕೃಷ್ಣ ದರ್ಶನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಆ ಭಕ್ತರೊಬ್ಬರನ್ನು ಬದಿಗೆ ಕಳುಹಿಸಲು ಮುಂದಾದರು.

    ಈ ಸಂದರ್ಭ ಪೊಲೀಸರನ್ನು ರಕ್ಷಣಾ ಸಚಿವೆ ತಡೆದಿದ್ದಾರೆ. ಭಕ್ತನಿಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಎಲ್ಲರಂತೆ ಸರದಿಯಲ್ಲಿ ನಿಂತು ದರ್ಶನ ಕೈಗೊಂಡ ನಿರ್ಮಲಾ ಸೀತಾರಾಮನ್ ನಡೆ ಭಕ್ತರಿಗೆ ಮೆಚ್ಚುಗೆಯಾಗಿದೆ. ನಂತರ ಉಡುಪಿ ಕೃಷ್ಣ ಮಠದ ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಮಾಡಿ ತೆರಳಿದ್ದಾರೆ.

  • ಸೂಪರ್ ಸಿಂಗರ್ ಶೋಗೆ ಬೆಂಗ್ಳೂರಿನ ಪೊಲೀಸ್ ಪೇದೆ ಆಯ್ಕೆ

    ಸೂಪರ್ ಸಿಂಗರ್ ಶೋಗೆ ಬೆಂಗ್ಳೂರಿನ ಪೊಲೀಸ್ ಪೇದೆ ಆಯ್ಕೆ

    ಬೆಂಗಳೂರು: ಪೊಲೀಸರು ಅಂದರೆ ಸಾಮಾನ್ಯವಾಗಿ ಸದಾ ಒತ್ತಡದ ನಡುವೆ ಕೆಲಸ ಮಾಡುತ್ತಾರೆ. ಬೇರೆ ಯಾವುದೇ ಕೆಲಸ ಮಾಡುವುದಕ್ಕೆ ಟೈಂ ಕೂಡ ಇರಲ್ಲ ಎನ್ನುವುದು ವಾಡಿಕೆ. ಆದರೆ ಇಲ್ಲೊಬ್ಬ ಪೇದೆ ತನ್ನ ಹಾಡು, ಸಾಹಿತ್ಯದ ಮೂಲಕವೇ ಫೇಮಸ್ ಆಗಿದ್ದು, ಅಲ್ಲದೇ ಖಾಸಗಿ ವಾಹಿನಿಯ ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

    ವಿ. ಸುಬ್ರಮಣಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಬ್ರಮಣಿ ಇಲಾಖೆ ಮಟ್ಟದ ಕಾರ್ಯಕ್ರಮಗಳು, ಜನಸ್ನೇಹಿ ಪೊಲೀಸ್ ಕಾರ್ಯಕ್ರಮಗಳಲ್ಲಿ ಹಾಡುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

    ಯಾವಾಗ ಪೇದೆ ಸುಬ್ರಮಣಿ ಇಷ್ಟೊಂದು ಮಧುರವಾಗಿ ಹಾಡುವುದಕ್ಕೆ ಶುರು ಮಾಡಿದರೋ, ಜೊತೆಯಲ್ಲಿದ್ದ ಸಹ ಸಿಬ್ಬಂದಿ, ಹಿರಿಯ ಅಧಿಕಾರಿಗಳು, ಸುಬ್ರಮಣಿ ಗಾಯನಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದರು. ಪರಿಣಾಮ ತೆಲಗು ಭಾಷೆಯ ಪ್ರತಿಷ್ಠಿತ ಖಾಸಗಿ ವಾಹಿನಿ ಸೂಪರ್ ಸಿಂಗರ್ ಕಾರ್ಯಕ್ರಮದ ಹತ್ತಿರ ಬಳಗದಲ್ಲಿ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸದ್ಯ ಸೂಪರ್ ಸಿಂಗರ್ ಕಾರ್ಯಕ್ರಮ ಈಗಷ್ಟೇ ಪ್ರಾರಂಭವಾಗಿದ್ದು, ಸೂಪರ್ ಸಿಂಗರ್ ಕಾರ್ಯಕ್ರಮಕ್ಕೆ ಆಯ್ಕೆಯಾದ ನಮ್ಮ ಪೊಲೀಸ್ ಕಾನ್ಸ್‍ಟೇಬಲ್‍ಗೆ ಸುಬ್ರಮಣಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.

  • ಸುತ್ತೂರು ಜಾತ್ರೆಯಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಅವಾಂತರ- ಛೀಮಾರಿ ಹಾಕಿದ್ರು ಭಕ್ತರು

    ಸುತ್ತೂರು ಜಾತ್ರೆಯಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಅವಾಂತರ- ಛೀಮಾರಿ ಹಾಕಿದ್ರು ಭಕ್ತರು

    ಮೈಸೂರು: ಜಾತ್ರೆ ನಡೆಯುತ್ತಿದ್ದ ವೇಳೆ ಪೊಲೀಸ್ ಪೇದೆಯೋರ್ವ ಕುಡಿದ ಮತ್ತಿನಲ್ಲಿ ದೌಲತ್ತು ತೋರಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಜಿಲ್ಲೆಯ ಸುತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಕೌವಲಂದೆ ಪೊಲೀಸ್ ಠಾಣೆಯ ಪೇದೆ ಮಹದೇವಸ್ವಾಮಿ ಇಂತಹ ದುರ್ವತನೆ ತೋರಿದ್ದಾರೆ. ಜಾತ್ರೆಯಲ್ಲಿ ಕುಡಿದು ಕರ್ತವ್ಯಕ್ಕೆ ಬಂದ ಪೇದೆ ಮಹದೇವಸ್ವಾಮಿ ಕ್ಯಾಂಟೀನ್‍ನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಊಟ ಖಾಲಿಯಾಗಿದೆ ಟೀ ಇದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ಉತ್ತರಕ್ಕೆ ಕೋಪಗೊಂಡ ಪೇದೆ ಹೋಟೆಲ್‍ನಲ್ಲಿದ್ದ ಟೀ ಫ್ಲಾಸ್ಕ್ ಒಡೆದು ರೋಷಾವೇಷ ಪ್ರದರ್ಶಿಸಿದ್ದಾರೆ. ದೇವರ ಜಾತ್ರೆಗೆ ಬಂದ ಪೊಲೀಸರೇ ಈ ರೀತಿ ಬೇಜವಾಬ್ದಾರಿ ವರ್ತನೆ ಮೆರೆದರೆ ಹೇಗೆ ಎಂದು ಸ್ಥಳೀಯರು ಪೇದೆ ವಿರುದ್ಧ ಗರಂ ಆಗಿದ್ದಾರೆ.

    ನಂತರ ಕಾರಿನಲ್ಲಿ ಕುಳಿತ ಮಹದೇವಸ್ವಾಮಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಪೇದೆಯ ಕಾರು ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಗು ಕೈಮುಗಿದು ಕ್ಷಮೆಯಾಚಿಸಿದ ಬಳಿಕ ಪೇದೆ ಮಹದೇವಸ್ವಾಮಿಯನ್ನು ಜನರು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುಟ್ಟುಹಬ್ಬದ ದಿನವೇ ಪೊಲೀಸ್ ಪೇದೆ ಸಾವು

    ಹುಟ್ಟುಹಬ್ಬದ ದಿನವೇ ಪೊಲೀಸ್ ಪೇದೆ ಸಾವು

    ಚೆನ್ನೈ: ಹುಟ್ಟುಹಬ್ಬದ ದಿನವೇ ಬುಲೆಟ್ ನಿಂದ ಗಾಯಗೊಂಡಿರುವ ಸ್ಥಿತಿಯಲ್ಲಿ ಪೊಲೀಸ್ ಪೇದೆಯೊಬ್ಬರ ಮೃತದೇಹ ನಗರದಲ್ಲಿ ಪತ್ತೆಯಾಗಿದೆ.

    26 ವರ್ಷದ ಜಿ. ಮಣಿಕಂಠನ್ ಮೃತ ಪೊಲೀಸ್ ಪೇದೆ. ಮೃತ ಮಣಿಕಂಠನ್ ತಿರುವರೂರ್ ಜಿಲ್ಲೆಯವರು ಎಂದು ತಿಳಿದು ಬಂದಿದ್ದು, ಭಾನುವಾರ ಬೆಳಗ್ಗೆ ಮಣಿಕಂಠನ್ ಮೃತಪಟ್ಟಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ಬುಲೆಟ್ ಗಾಯದಿಂದ ಮೃತಪಟ್ಟಿದ್ದರು. ಮಣಿಕಂಠನ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮಣಿಕಂಠನ್ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮಣಿಕಂಠನ್ ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಈ ಕುರಿತು ತನಿಖೆ ಮಾಡುತ್ತಿದ್ದೇವೆ. ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾನುವಾರವೇ ಮಣಿಕಂಠನ್ ಹುಟ್ಟುಹಬ್ಬವಿತ್ತು. ಆದರೆ ವಿಪರ್ಯಾಸವಾಗಿ ಅಂದೇ ಪೇದೆ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv