Tag: Police Constable

  • ಅನುಮತಿ ಪಡೆಯದೇ ರಜೆ – ರಾಜಭವನದ ಸಿಬ್ಬಂದಿ 6 ತಿಂಗಳು ಸಸ್ಪೆಂಡ್

    ಅನುಮತಿ ಪಡೆಯದೇ ರಜೆ – ರಾಜಭವನದ ಸಿಬ್ಬಂದಿ 6 ತಿಂಗಳು ಸಸ್ಪೆಂಡ್

    ಬೆಂಗಳೂರು: ಅನುಮತಿ ಪಡೆಯದೇ ರಜೆ ಹಾಕಿ ಕರ್ತವ್ಯ ಲೋಪವೆಸಗಿದ ಹಿನ್ನಲೆಯಲ್ಲಿ ರಾಜಭವನದ ಮೂವರು ಪೊಲೀಸ್ ಸಿಬ್ಬಂದಿಯನ್ನು 6 ತಿಂಗಳು ಅಮಾನತು ಮಾಡಲಾಗಿದೆ.

    ಕೆಎಸ್‍ಐಎಸ್‍ಎಫ್ ಪೇದೆಗಳಾದ ಹುಚ್ಚೇಗೌಡ, ತಿಮ್ಮಯ್ಯ, ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ರಾಜಭವನದಿಂದ ಯಾವುದೇ ಅನುಮತಿ ಪಡೆಯದೆ ಈ ಪೇದೆಗಳು ತಮ್ಮ ವರ್ಗಾವಣೆ ಸಂಬಂಧ ಐಎಸ್‍ಡಿ ಮೇಲಾಧಿಕಾರಿ ಭೇಟಿಗೆ ತೆರಳಿದ್ದರು. ಹೀಗಾಗಿ 1ನೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೆಂಟ್ ಮತ್ತು ಶಿಸ್ತು ಪ್ರಾಧಿಕಾರಿ ಎ. ನಾಗರಾಜ್ ಈ ಮೂವರನ್ನು ಅನಾನತು ಮಾಡಿ ಆದೇಶ ನೀಡಿದ್ದಾರೆ.

    ಹಲವು ದಿನಗಳಿಂದ ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗಳು ವರ್ಗಾವಣೆಗಾಗಿ ಹೋಗಿದ್ದರು ಎನ್ನುವ ಕಾರಣ ನೀಡಿ ಅವರನ್ನ ಅಮಾನತು ಮಾಡಲಾಗಿದೆ. 6 ತಿಂಗಳ ಕಾಲ ಅಮಾನತು ಮಾಡಿ, ಈ ಬಗ್ಗೆ ತನಿಖೆಗೆ ಕಮಾಂಡೆಂಟ್ ನಾಗರಾಜ್ ಆದೇಶಿಸಿದ್ದಾರೆ.

  • ಮುಖ್ಯ ಪೇದೆಗೆ ಚಾಕು ಇರಿದ ದುಷ್ಕರ್ಮಿಗಳು

    ಮುಖ್ಯ ಪೇದೆಗೆ ಚಾಕು ಇರಿದ ದುಷ್ಕರ್ಮಿಗಳು

    ಬೆಂಗಳೂರು: ಮಫ್ತಿಯಲ್ಲಿದ್ದ ಮುಖ್ಯ ಪೇದೆಗೆ ದುಷ್ಕರ್ಮಿಗಳು ಹೊಟ್ಟೆಯ ಭಾಗಕ್ಕೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಚಾಮುಂಡಿ ನಗರದಲ್ಲಿ ನಡೆದಿದೆ.

    ನಾಗರಾಜ್ ದುಷ್ಕರ್ಮಿಗಳಿಂದ ಚಾಕು ಇರಿತಕೊಳಗಾದ ಮುಖ್ಯ ಪೇದೆ. ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಪುಡಾರಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು. ಚಾಮುಂಡಿ ನಗರದಲ್ಲಿ ಪುಡಾರಿಗಳನ್ನ ಮಟ್ಟ ಹಾಕಲು ನಾಗರಾಜ್ ಮಪ್ತಿಯಲ್ಲಿ ಸ್ಥಳಕ್ಕೆ ಹೋಗಿದ್ದರು. ನಾಲ್ಕೈದು ಮಂದಿ ಪುಡಾರಿಗಳು ನಿರ್ಮಾಣ ಹಂತದ ಕಟ್ಟದ ಒಳಗಡೆ ಕುಳಿತು ತಲೆ ಹರಟೆ ಮಾಡುತ್ತಿದ್ದರು.

    ಕೂಡಲೇ ನಾಗರಾಜ್ ಪುಂಡರನ್ನ ಬಂಧಿಸಲು ಹೋಗಿದ್ದಾರೆ. ನಾಲ್ಕೈದು ಯುವಕರಲ್ಲಿ ಮೂವರು ನಾಗರಾಜ್ ಬಳಿ ಇದ್ದ ವಾಕಿಟಾಕಿ ನೋಡಿ ಎಸ್ಕೇಪ್ ಆಗಿದ್ದಾರೆ. ಉಳಿದ ಇಬ್ಬರನ್ನ ಬಂಧಿಸಿ ಠಾಣೆಗೆ ಕರೆತರಲು ಮುಂದಾಗಿದ್ದ ನಾಗರಾಜ್ ಹೊಟ್ಟೆಯ ಭಾಗಕ್ಕೆ ಚಾಕು ಚುಚ್ಚಿ ಎಸ್ಕೇಪ್ ಆಗಿದ್ದಾರೆ.

    ಘಟನೆಯಲ್ಲಿ ಗಾಯಗೊಂಡಿರುವ ನಾಗಾರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ. ನಗರ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ತನ್ನ ಮುಂದೆ ಕಣ್ಣೀರಿಟ್ಟ ವೃದ್ಧೆಯನ್ನು ಅಪ್ಪಿಕೊಂಡ ಪೊಲೀಸ್- ವಿಡಿಯೋ ವೈರಲ್

    ತನ್ನ ಮುಂದೆ ಕಣ್ಣೀರಿಟ್ಟ ವೃದ್ಧೆಯನ್ನು ಅಪ್ಪಿಕೊಂಡ ಪೊಲೀಸ್- ವಿಡಿಯೋ ವೈರಲ್

    ನವದೆಹಲಿ: ಸಾಮಾನ್ಯವಾಗಿ ಪೊಲೀಸರು ಅಂದ್ರೆ ಹೆದರಿಸಿ, ಬೆದರಿಸಿ ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ಕೆಲವೊಂದು ಮಾಹಿತಿಗಳನ್ನು ಕೆದಕುತ್ತಾರೆ. ಆದರೆ ಇಲ್ಲೊಬ್ಬರು ಪೊಲೀಸ್ ಪೇದೆ ತನ್ನ ಮುಂದೆ ಕಣ್ಣೀರಿಟ್ಟ ವೃದ್ಧೆಯನ್ನು ಅಪ್ಪಿಕೊಂಡು ಅವರ ದುಃಖದಲ್ಲಿ ತಾನೂ ಪಾಲುದಾರನಾಗಿದ್ದಾರೆ.

    ಪಂಜಾಬಿನ ಪೊಲೀಸ್ ಪೇದೆ ತನ್ನ ತಾಯಿಯಂತೆ ಆಲಂಗಿಸಿಕೊಂಡು ಅಮಾಧಾನ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖಥ್ ವೈರಲ್ ಆಗುತ್ತಿದೆ. 56 ಸೆಕೆಂಡ್ ಇರೋ ಈ ವಿಡಿಯೋವನ್ನು ಇಂಡಿಯನ್ ಪೊಲೀಸ್ ಫೌಂಡೇಶನ್ ಎಂಬ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದೆ. ಆ ಬಳಿಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಸಂಚರಿಸಿದೆ.

    ವಿಡಿಯೋದಲ್ಲೇನಿದೆ?
    ಮಗ ಮಲೇಷ್ಯಾದಲ್ಲಿ ಬಂಧಿತನಾಗಿರುವ ವಿಚಾರದ ಬಗ್ಗೆ ಮಾತನಾಡುವಾಗ ವೃದ್ಧೆ ತನ್ನ ಕಥೆಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಆಕೆಯ ಕಣ್ಣೀರು ಒರೆಸಿದ್ದು ಮಾತ್ರವಲ್ಲದೇ ಕೂಡಲೇ ವೃದ್ಧೆಯನ್ನು ಅಪ್ಪಿಕೊಂಡು ಸಮಾಧಾನ ಹೇಳಿದ್ದಾರೆ. ಅಲ್ಲದೆ ನಿಮ್ಮ ಮಗ ಆದಷ್ಟು ಬೇಗ ನಿಮ್ಮ ಮಡಿಲು ಸೇರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಈ ಮೂಲಕ ಪೊಲೀಸ್ ಪೇದೆ ಇದೀಗ ಇತರರಿಗೆ ಮಾದರಿಯಾಗಿದ್ದಾರೆ. ಹಿರಿ ಜೀವದ ಕಷ್ಟವನ್ನು ಗಮನವಿಟ್ಟು ಕೇಳಿದ್ದಲ್ಲದೇ ಆಕೆಯ ಕಣ್ಣೀರು ಒರೆಸುವ ಮೂಲಕ ನಿಜಕ್ಕೂ ಇತರರಿಗೆ ಮಾದರಿಯಾಗಿದ್ದಾರೆ ಎಂದು ಇಂಡಿಯನ್ ಪೊಲೀಸ್ ಫೌಂಡೇಶನ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದೆ.

    ಸದ್ಯ ಈ ವಿಡಿಯೋವನ್ನು ಸುಮಾರು 25 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 2 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಲ್ಲದೆ ನೆಟ್ಟಿಗರು ಪೊಲೀಸ್ ಕೆಲಸವನ್ನು ಶ್ಲಾಘಿಸಿದ್ದಾರೆ.

    https://twitter.com/IPF_ORG/status/1198257945558933506?ref_src=twsrc%5Etfw%7Ctwcamp%5Etweetembed%7Ctwterm%5E1198257945558933506&ref_url=https%3A%2F%2Fwww.indiatoday.in%2Ftrending-news%2Fstory%2Fpunjab-cop-comforts-elderly-woman-in-emotional-viral-video-internet-is-in-tears-1622619-2019-11-26

  • ಮತ್ತು ಬರುವ ಔಷಧಿ ಮಿಶ್ರಿತ ಜ್ಯೂಸ್ ಕುಡಿಸಿ ರೇಪ್ – ಪೇದೆ ವಿರುದ್ಧ ಗಂಭೀರ ಆರೋಪ

    ಮತ್ತು ಬರುವ ಔಷಧಿ ಮಿಶ್ರಿತ ಜ್ಯೂಸ್ ಕುಡಿಸಿ ರೇಪ್ – ಪೇದೆ ವಿರುದ್ಧ ಗಂಭೀರ ಆರೋಪ

    ಚಿತ್ರದುರ್ಗ: ಪೊಲೀಸ್ ಪೇದೆ ವಂಚನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಚಿತ್ರದುರ್ಗದಲ್ಲಿ ಕೇಳಿ ಬಂದಿದೆ.

    ಚಿತ್ರದುರ್ಗ ಡಿಎಆರ್ ಪೇದೆ ರೇಣುಕಪ್ಪ ವಿರುದ್ಧ ಆರೋಪ ಕೇಳಿ ಬಂದಿದೆ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಡಿಎಆರ್ ಪೊಲೀಸ್ ಪೇದೆ ಸಂಚು ರೂಪಿಸಿದ್ದಾರೆ. ರೇಣುಕಪ್ಪ ಹಣ ಹಿಂತಿರುಗಿಸುವುದಾಗಿ ಮನೆಗೆ ಕರೆಸಿಕೊಂಡು ಮತ್ತು ಬರುವ ಔಷಧಿ ಮಿಶ್ರಿತ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ, “ಜ್ಯೂಸ್ ಕುಡಿಸಿದ ನಂತರ ರೇಣುಕಪ್ಪ ಹಾಗೂ ಅವರ ಪತ್ನಿ ನನ್ನ ಅಶ್ಲೀಲ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಿ ನನ್ನ ಬಳಿಯಿದ್ದ ಹಣ ಹಾಗೂ ಚಿನ್ನವನ್ನು ಪಡೆದಿದ್ದಾರೆ. ನಾನು ಈ ಬಗ್ಗೆ ಮಹಿಳೆ ಎಸ್‍ಪಿ ಕಚೇರಿಗೆ ಹೋಗಿ ನ್ಯಾಯ ಕೊಡಿಸಿ ಎಂದು ಮನವಿ ಕೂಡ ಮಾಡಿದೆ. ಈ ಪ್ರಕರಣ ಮುಗಿಯುವವರೆಗೂ ರೇಣುಕಪ್ಪ ಅಮಾನತು ಆಗಬೇಕು” ಎಂದು ಹೇಳಿದ್ದಾರೆ.

    ಜೂನ್ 3, 2019ರಂದು ಪೇದೆ ರೇಣುಕಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಚಿತ್ರದುರ್ಗ ಮಹಿಳಾ ಠಾಣೆ ಸಿಬ್ಬಂದಿ ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

  • ಪ್ರೀತ್ಸೆ ಎಂದು ಮಹಿಳಾ ಪೇದೆ ಹಿಂದೆ ಬಿದ್ದ ಪಿಸಿ ವಿರುದ್ಧ ದೂರು ದಾಖಲು

    ಪ್ರೀತ್ಸೆ ಎಂದು ಮಹಿಳಾ ಪೇದೆ ಹಿಂದೆ ಬಿದ್ದ ಪಿಸಿ ವಿರುದ್ಧ ದೂರು ದಾಖಲು

    ಬೆಂಗಳೂರು: ಪಿಸಿಯೊಬ್ಬ ಮಹಿಳಾ ಪೇದೆಗೆ ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಸಂತೋಷ್ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಪಾಗಲ್ ಪೇದೆ. ಸಂತೋಷ್ ಹಾಗೂ ಮಹಿಳಾ ಪೇದೆ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಬಳಿಕ ಸಂತೋಷ್, ಮಹಿಳಾ ಪೇದೆಗೆ ಪ್ರಪೋಸ್ ಮಾಡಿದ್ದನು.

    ಇವರಿಬ್ಬರ ಮದುವೆಗೆ ಸಂತೋಷ್ ಮನೆಯಲ್ಲಿ ಒಪ್ಪದಿದ್ದಾಗ ಮಹಿಳೆ ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಳು. ಬಳಿಕ ಸಂತೋಷ್ ಪ್ರೀತಿಸುವಂತೆ ಮಹಿಳೆಗೆ ದುಂಬಾಲು ಬಿದ್ದಿದ್ದನು. ಇದರಿಂದ ಮನನೊಂದ ಮಹಿಳಾ ಪೇದೆ ಅಶೋಕ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನಾನು ಆಟೋಮೆಷನ್(ಟಿಎಂಸಿ)ನಲ್ಲಿ ಪಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮೊದಲು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಇದೇ ಠಾಣೆಯಲ್ಲಿ ಸಂತೋಷ್ ಕುಮಾರ್ ಕೆಲಸ ಮಾಡುತ್ತಿದ್ದರು. ಒಂದು ದಿನ ಸಂತೋಷ್ ಅವರು ನನಗೆ ಪ್ರಪೋಸ್ ಮಾಡಿದ್ದರು. ನಾನು ಕೂಡ ಅವರ ಪ್ರೀತಿಯನ್ನು ಒಪ್ಪಿದೆ. ಬಳಿಕ ಸಂತೋಷ್ ಮನೆಯವರು ನಮ್ಮ ಪ್ರೀತಿಯನ್ನು ಒಪ್ಪದಿದ್ದಾಗ ನಾನು ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದೆ.

    ನಾನು ಮಾತನಾಡುವುದನ್ನು ನಿಲ್ಲಿಸಿದ್ದಕ್ಕೆ ಸಂತೋಷ್ ನಾನು ಕೆಲಸಕ್ಕೆ ಹೋಗುವಾಗ ಬರುವಾಗ ಹಿಂಬಾಲಿಸಿ ಮಾತನಾಡಿಸುತ್ತಿದ್ದು, ಬೆದರಿಕೆ ಕೂಡ ಹಾಕುತ್ತಿದ್ದಾರೆ. ಅಕ್ಟೊಬರ್ 3 ಹಾಗೂ 4ರಂದು ಸಂತೋಷ್ ನನ್ನ ಮನೆ ಬಳಿ ಕುಡಿದು ಬಂದು ಕೆಟ್ಟದಾಗಿ ನಿಂದಿಸಲು ಶುರು ಮಾಡಿದ್ದರು. ಅದಾದ ಬಳಿಕ ಮತ್ತೆ 5ರಂದು ಮನೆ ಬಳಿ ಬಂದು ಕೆಟ್ಟದಾಗಿ ನಿಂದಿಸಿದಲ್ಲದೇ ನನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಹೀಗಾಗಿ ಸಂತೋಷ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎಂದು ಮನವಿ ಮಾಡಿಕೊಳ್ಳುತ್ತೇನೆ.

  • ಅತ್ಯಾಚಾರ ಸಂತ್ರಸ್ತೆ ಮೇಲೆ ಪೇದೆಯಿಂದ ಮತ್ತೆ ರೇಪ್

    ಅತ್ಯಾಚಾರ ಸಂತ್ರಸ್ತೆ ಮೇಲೆ ಪೇದೆಯಿಂದ ಮತ್ತೆ ರೇಪ್

    ನವದೆಹಲಿ: ಅತ್ಯಾಚಾರ ಸಂತ್ರಸ್ತ ಬಾಲಕಿ ಮೇಲೆ ಪೊಲೀಸ್ ಪೇದೆಯೊಬ್ಬ ಮತ್ತೆ ರೇಪ್ ಮಾಡಿರುವ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.

    ಅತ್ಯಾಚಾರ ಸಂತ್ರಸ್ತೆಯು 16 ವರ್ಷದವಳಾಗಿದ್ದಾಳೆ. ವಿಶ್ರಾಮ್ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಪೇದೆ. ದೆಹಲಿಯ ಉಸ್ಮಾನ್‍ಪುರ ಬಳಿಯ ಯಮುನಾ ಖಾದರ್ ಪ್ರದೇಶದಲ್ಲಿ ವಿಶ್ರಾಮ್ ಕೃತ್ಯ ಎಸಗಿದ್ದಾನೆ.

    ಆಗಿದ್ದೇನು?:
    ಯುವಕನೊಬ್ಬ ಬಾಲಕಿಯನ್ನು ಸೋಮವಾರ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಆತನ ವಿರುದ್ಧ ದೂರು ನೀಡಲು ಸಂತ್ರಸ್ತ ಬಾಲಕಿ ಹಾಗೂ ಪೋಷಕರು ಪೊಲೀಸ್ ಠಾಣೆಗೆ ಹೋಗಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಾಳೆ ಬನ್ನಿ, ಆರೋಪಿ ಯುವಕನ ಪೋಷಕರನ್ನು ಕರೆಯಿಸಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದರು.

    ಪೊಲೀಸ್ ಪೇದೆ ವಿಶ್ರಾಮ್ ಸಂತ್ರಸ್ತೆಯ ಮನೆಗೆ ಗುರುವಾರ ಬಂದಿದ್ದ. ಈ ವೇಳೆ ಬಾಲಕಿಯನ್ನು ಆಪ್ತ ಸಮಾಲೋಚನೆಗಾಗಿ ಸ್ವಯಂ ಸೇವಾ ಸಂಸ್ಥೆಗೆ ಕರೆದೊಯ್ಯುಬೇಕು. ನನ್ನ ಜೊತೆಗೆ ಕಳುಹಿಸಿಕೊಡಿ ಎಂದು ಪೋಷಕರನ್ನು ನಂಬಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ. ಆದರೆ ಮಾರ್ಗ ಮಧ್ಯೆದ ಯಮುನಾ ಖಾದರ್ ಪ್ರದೇಶದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ವಿಶ್ರಾಮ್ ಬಾಲಕಿಗೆ ಸ್ವಲ್ಪ ಹಣ ನೀಡಿ, ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಮನೆಗೆ ಹೋಗವಂತೆ ಹೇಳಿ, ಅಲ್ಲಿಂದ ಪರಾರಿಯಾಗಿದ್ದಾನೆ. ಪೇದೆಯ ಕೃತ್ಯದಿಂದ ಗಾಬರಿಗೊಂಡು ಮನೆಗೆ ಮರಳಿ ಬಾಲಕಿ ಪೋಷಕರ ಮುಂದೆ ಘಟನೆಯನ್ನು ಹೇಳಿಕೊಂಡಿದ್ದಾಳೆ. ತಕ್ಷಣವೇ ಸಂತ್ರಸ್ತೆಯ ಪೋಷಕರು ಹಾಗೂ ಸ್ಥಳೀಯರು ಸೇರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ, ಆರೋಪಿ ಪೊಲೀಸ್ ಪೇದೆಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

    ಈ ಸಂಬಂಧ ಅತ್ಯಾಚಾರ ಪ್ರಕರಣ ಮತ್ತು ಪೋಕ್ಸೊ ಕಾಯಿದೆ ಅಡಿ ಪೊಲೀಸ್ ಪೇದೆ ಮಿಶ್ರಾಮ್ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಆರೋಪಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ದೆಹಲಿ ಕೇಂದ್ರ ಡಿಸಿಪಿ ಮಂದೀಪ್ ರಾಂಧವ್ ಹೇಳಿದ್ದಾರೆ.

  • ಅಟ್ಟಿಸಿಕೊಂಡು ಬಂದವರಿಂದ ತಪ್ಪಿಸಿಕೊಳ್ಳಲು ಗುಂಡು ಹಾರಿಸಿದ ಪೊಲೀಸ್: ವಿಡಿಯೋ

    ಅಟ್ಟಿಸಿಕೊಂಡು ಬಂದವರಿಂದ ತಪ್ಪಿಸಿಕೊಳ್ಳಲು ಗುಂಡು ಹಾರಿಸಿದ ಪೊಲೀಸ್: ವಿಡಿಯೋ

    ನವದೆಹಲಿ: ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯನ್ನು ಸ್ಥಳೀಯರು ಥಳಿಸಿ, ಅಟ್ಟಿಸಿಕೊಂಡು ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

    ಕಾಲಿಂದಿ ಕುಂಜ್ ಪ್ರದೇಶದ ಜೆಜೆ ಕಾಲೋನಿಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಸಾರ್ವಜನಿಕರಿಂದ ಪೊಲೀಸ್ ಪೇದೆ ರಾಮ್‍ಕಿಶನ್ ತಪ್ಪಿಸಿಕೊಂಡಿದ್ದಾರೆ. ರಾಮ್‍ಕಿಶನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಅಶೋಕ್ ಹಾಗೂ ಗುಡ್ಡಿ ಎಂದು ಗುರುತಿಸಲಾಗಿದೆ.

    ಪೇದೆ ರಾಮ್‍ಕಿಶನ್ ಶನಿವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಜೆಜೆ ಕಾಲೋನಿಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು, ಇಲ್ಲಿ ಯಾಕೆ ನಿಂತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಪೇದೆಯ ಬಳಿಗೆ ಬಂದ ಅಶೋಕ್ ಹಾಗೂ ಗುಡ್ಡಿ ವಾಗ್ವಾದ ಆರಂಭಿಸಿದರು. ಈ ವೇಳೆ ಕಾಲೋನಿಯ ಅನೇಕರು ಸೇರಿ ರಾಮ್‍ಕಿಶನ್ ಅವರನ್ನು ಸುತ್ತುವರಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಬೈಕ್ ಅನ್ನು ಹಾನಿಗೊಳಿಸಿದ್ದಾರೆ.

    ಪರಿಸ್ಥಿತಿ ಕೈ ಮೀರುತ್ತಿದ್ದಂತೆ ರಾಮ್‍ಕಿಶನ್ ಅವರು ಬೈಕ್ ಅನ್ನು ಅಲ್ಲಿಯೇ ಬಿಟ್ಟು ಸ್ಥಳೀಯರಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮಹಿಳೆ ಸೇರಿದಂತೆ ಕೆಲವರು ಅವರ ಬೆನ್ನು ಹತ್ತಿದರು. ಅವರಿಂದ ತಪ್ಪಿಸಿಕೊಳ್ಳಲು ರಾಮ್‍ಕಿಶನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದು, ಮತ್ತೊರ್ವನಿಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.

  • ಲಾರಿಗೆ ಬೈಕ್ ಡಿಕ್ಕಿ – ಕರ್ತವ್ಯ ನಿರತ ಪೊಲೀಸ್ ಪೇದೆ ಸ್ಥಳದಲ್ಲೇ ಸಾವು

    ಲಾರಿಗೆ ಬೈಕ್ ಡಿಕ್ಕಿ – ಕರ್ತವ್ಯ ನಿರತ ಪೊಲೀಸ್ ಪೇದೆ ಸ್ಥಳದಲ್ಲೇ ಸಾವು

    ಗದಗ: ಕರ್ತವ್ಯದಲ್ಲಿದ್ದ ವೇಳೆ ರಸ್ತೆ ಅಪಘಾತದಲ್ಲಿ ಸಂಭವಿಸಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಬಳಿ ನಡೆದಿದೆ.

    ಪೊಲೀಸ್ ಪೇದೆ ಶಿವಪ್ರಕಾಶ ಲೂಟಿಮಠ(31) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪೇದೆಯು ಗದಗದಿಂದ ಮುಂಡರಗಿಗೆ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಶಿವಪ್ರಕಾಶ್ ಗದಗ ಇಂಟಲಿಜೆನ್ಸ್ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೊಸಡಂಬಳ ಬಳಿ ರಸ್ತೆಯಲ್ಲಿ ಬೈಕ್‍ನಲ್ಲಿ ಬರುತ್ತಿದ್ದ ಪೇದೆ ಹಿಂಬದಿಯಿಂದ ಲಾರಿಯೊಂದಕ್ಕೆ ಡಿಕ್ಕಿಹೊಡೆದಿದ್ದಾರೆ.

    ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಪೇದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೇದೆಯ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದೆ-ಎಫ್‍ಐಆರ್ ದಾಖಲು

    ಪೇದೆಯ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದೆ-ಎಫ್‍ಐಆರ್ ದಾಖಲು

    ಲಕ್ನೋ: ಉತ್ತರ ಪ್ರದೇಶದ ದೌರಹಾರ ಲೋಕಸಭಾ ಕ್ಷೇತ್ರದ ಸಂಸದೆ ರೇಖಾ ವರ್ಮಾ, ಕರ್ತವ್ಯನಿರತ ಪೊಲೀಸ್ ಪೇದೆಯ ಕೆನ್ನೆಗೆ ಬಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್ ಪೇದೆ ಸಂಸದೆ ವಿರುದ್ಧ ದೂರು ದಾಖಲಿಸಿದ್ದಾರೆ.

    ಸಂಸದೆಯಾಗಿ ಆಯ್ಕೆಯಾಗಿರುವ ರೇಖಾ ವರ್ಮಾರಿಗೆ ಭಾನುವಾರ ಮೊಹಮ್ಮದಿ ಪಟ್ಟಣದಲ್ಲಿ ಸನ್ಮಾನ ಸಮಾರಂಭವಿತ್ತು. ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ರಾತ್ರಿ ಸುಮಾರು 11 ಗಂಟೆಗೆ ಸಂಸದೆ ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೇದೆ ಶ್ಯಾಮ್ ಸಿಂಗ್ ಆರೋಪಿಸಿದ್ದಾರೆ.

    ಪೇದೆಯ ಆರೋಪವೇನು?
    ಲಖೀಮಪುರದ ಮೊಹಮ್ಮದಿ ಠಾಣೆಯ ಪೇದೆಯಾಗಿರುವ ಶ್ಯಾಮ್ ಸಿಂಗ್ ಪಟ್ಟಣಕ್ಕೆ ಆಗಮಿಸಿದ್ದ ಸಂಸದೆಗೆ ಭದ್ರತಾ ಸಿಬ್ಬಂದಿಯಾಗಿದ್ದರು. ಸಂಜೆ ಕಾರ್ಯಕ್ರಮ ಮುಗಿಸಿ ಸಂಸದೆಯನ್ನು ತಮ್ಮ ಠಾಣಾ ವ್ಯಾಪ್ತಿಯ ಗಡಿ ಪಾರು ಮಾಡಿ ವಂದನೆ ಸಲ್ಲಿಸಿ ಹಿಂದಿರುಗಿದ್ದರು. ಕೆಲ ಸಮಯದ ಬಳಿಕ ಫೋನ್ ಕರೆ ಮಾಡಿದ ಸಂಸದೆ ಹಿಂದಿರುಗಿ ಬರುವಂತೆ ಸೂಚಿಸಿದರು. ರೇಖಾ ವರ್ಮಾರ ಆದೇಶದಂತೆ ಹೋದಾಗ ನನ್ನನ್ನು ಕರೆದು ಕಪಾಳಕ್ಕೆ ಬಾರಿಸಿ, ಸುಧಾರಣೆ ಆಗು ಇಲ್ಲವಾದಲ್ಲಿ ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶ್ಯಾಮ್ ಸಿಂಗ್ ದೂರಿನಲ್ಲಿ ದಾಖಲಿಸಿದ್ದಾರೆ.

    ದೂರಿನನ್ವಯ ಪೊಲೀಸರು ಸಂಸದೆ ರೇಖಾ ವರ್ಮಾರ ವಿರುದ್ಧ ಐಪಿಸಿ ಸೆಕ್ಷನ್ 332 (ಉದ್ದೇಶಪೂರ್ವಕವಾಗಿ ಸರ್ಕಾರಿ ನೌಕರನ ಮೇಲೆ ಹಲ್ಲೆ), 353 (ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸುವಿಕೆ), 504 (ಉದ್ದೇಶಪೂರ್ವಕವಾಗಿ ಅವಮಾನಿಸೋದು) ಮತ್ತು 506 (ಜೀವ ಬೆದರಿಕೆ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಹಲ್ಲೆಯ ಸಮಯದಲ್ಲಿ ಸರ್ಕಾರಿ ವಾಹನದಲ್ಲಿ ಅರುಣ್ ಕುಮಾರ್, ದರೇಗಾ ಗೌರವ್ ಸಿಂಗ್, ಪೇದೆಗಳಾದ ಪಂಕಜ್ ರಜಪೂತ್ ಮತ್ತು ವಿವೇಕ್ ರಾವತ್ ಇದ್ದರು ಎಂದು ಶ್ಯಾಮ್ ಸಿಂಗ್ ತಿಳಿಸಿದ್ದಾರೆ. ಈ ಕುರಿತು ಸಂಸದೆ ಇದೂವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

  • ಲಾಠಿಯನ್ನೇ ಕೊಳಲು ಮಾಡಿಕೊಂಡ ಪೊಲೀಸ್ ಪೇದೆ

    ಲಾಠಿಯನ್ನೇ ಕೊಳಲು ಮಾಡಿಕೊಂಡ ಪೊಲೀಸ್ ಪೇದೆ

    ಹುಬ್ಬಳ್ಳಿ: ಪೊಲೀಸರಿಗೆ ಲಾಠಿ ರುಚಿ ತೋರಿಸುವುದು ಅಭ್ಯಾಸ. ಆದರೆ ನಗರದ ಪೊಲೀಸ್ ಪೇದೆಯೊಬ್ಬರು ಅದೇ ಲಾಠಿಯನ್ನು ಕೊಳಲು ಮಾಡಿಕೊಂಡು ಕೇಳುಗರನ್ನು ತಲೆದೂಗುವಂತೆ ಮಾಡಿದ್ದಾರೆ.

    ಹೌದು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹವಾಲ್ದಾರ್ ಚಂದ್ರಕಾಂತ್ ಹುಟಗಿ ಎಂಬವರೇ ಲಾಠಿಯನ್ನು ಕೊಳ್ಳಲು ಮಾಡಿ ಸುದ್ದಿಯಾಗಿದ್ದಾರೆ. ಇವರು ತನ್ನ ಲಾಠಿಯಿಂದ ಮನೋಜ್ಞವಾಗಿ ಕೊಳಲು ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಫೈಬರ್ ಲಾಠಿಯಲ್ಲೇ ಲಯಬದ್ಧವಾಗಿ ಕೊಳಲು ನುಡಿಸುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅವರು ಕೊಳಲಿನಲ್ಲಿ ರಾಜಕುಮಾರ್ ಅವರ ಹಳೇ ಹಾಡುಗಳನ್ನು ನುಡಿಸುವುದನ್ನು ಕೇಳಿದ ಸಾಮಾಜಿಕ ಜಾಲತಾಣಿಗರು ಇವರ ಕೊಳಲ ನಾದಕ್ಕೆ ಮಾರು ಹೋಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಚಂದ್ರಕಾಂತ್, ಡ್ಯೂಟಿಯಲ್ಲಿರುವವಾಗ ಬೋರ್ ಆದರೆ ನಾನು ಲಾಠಿಯನ್ನು ಕೊಳಲಾಗಿ ಮಾಡಿಕೊಂಡು ಹಾಡುಗಳನ್ನು ನುಡಿಸುತ್ತೇನೆ. 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿ ನಡೆದ ದತ್ತ ಪೀಠದ ಸಂದರ್ಭದಲ್ಲಿ ನನ್ನನ್ನು ಅಲ್ಲಿಗೆ ಡ್ಯೂಟಿಗೆಂದು ನೇಮಿಸಿದ್ದರು. ಈ ಸಂದರ್ಭದಲ್ಲಿ ನನಗೆ ಈ ಉಪಾಯ ಹೊಳೆಯಿತು ಎಂದಿದ್ದಾರೆ.

    ಕೆಲಸದಲ್ಲಿರುವಾಗ ಕೆಲ ಸಮಯ ನನಗೆ ಬೋರಾಗುತ್ತಿದೆ. ಹೀಗಾಗಿ ನಾನು ಡ್ರಿಲ್ಲಿಂಗ್ ಅಂಗಡಿಗೆ ತೆರಳಿ ನನ್ನ ಫೈಬರ್ ಲಾಠಿಯಲ್ಲಿ ತೂತುಗಳನ್ನು ಮಾಡಿಕೊಡುವಂತೆ ಕೇಳಿದ್ದೆ. ಈ ಮೂಲಕ ಕೊಳಲು ಊದಲು ಪ್ರಯತ್ನಿಸಿದೆ. ಅದು ಸಾಧ್ಯವೂ ಆಯ್ತು. ಲಾಠಿಯಲ್ಲಿ ನಾನು ಹಾಡುಗಳನ್ನು ನುಡಿಸಿದಾಗ ನನ್ನ ಸಹೋದ್ಯೋಗಿಗಳು ಅಚ್ಚರಿಗೊಂಡರು ಎಂದರು.

    ಚಂದ್ರಕಾಂತ್ ಅವರು ತಮ್ಮ ಮಗಳ ಜೊತೆ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ನನ್ನ ಈ ಹವ್ಯಾಸಕ್ಕೆ ಸಹೋದ್ಯೋಗಿಗಳು ಕೂಡ ನನಗೆ ಬೆಂಬಲ ನೀಡುತ್ತಿದ್ದಾರೆ. ಸಹೋದ್ಯೋಗಿಗಳ ಜೊತೆ ಚಾರಣ ಹೊರಟಾಗ ನಾನು ನನ್ನ ಲಾಠಿಯನ್ನೂ ತೆಗೆದುಕೊಂಡು ಹೋಗುತ್ತೇನೆ. ಚಾರಣದ ಸಂದರ್ಭದಲ್ಲಿ ಲಾಠಿ ಮೂಲಕ ಹಾಡುಗಳನ್ನು ನುಡಿಸಿ ಅವರಿಗೆ ಮನರಂಜನೆಯನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.