ಬೆಳಗಾವಿ/ಚಿಕ್ಕೋಡಿ: ಮೇ 19ರಂದು ಹಸೆಮಣೆ ಏರಬೇಕಿದ್ದ ಚಿಕ್ಕೋಡಿ ಪೊಲೀಸ್ ಠಾಣೆಯ ಪೇದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
28 ವರ್ಷದ ರಾಮ್ ನಾಯಿಕ್ ಅಪಘಾತದಲ್ಲಿ ಮೃತ ಪೇದೆ. ಇಂದು ಕೆಲಸ ಮುಗಿಸಿ ಗೋಕಾಕ್ ತಾಲೂಕಿನ ಸ್ವಗ್ರಾಮ ಪಾಮಲದಿನ್ನಿಗೆ ಬೈಕಿನಲ್ಲಿ ಹೊರಟಿದ್ದರು. ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದ ಬಳಿಯ ಬೆಳಗಲಿ ಕ್ರಾಸ್ ನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಾಮ್ ನಾಯಿಕ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೃತ ಪೇದೆಯ ಮದುವೆ ಇದೇ ಮೇ 19ರಂದು ನಿಗದಿಯಾಗಿತ್ತು. ಸದ್ಯ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಚಿಕ್ಕೋಡಿಯ ಸರ್ಕಾರ ಆಸ್ಪತ್ರೆಯಲ್ಲಿರಿಸಲಾಗಿದೆ. ಘಟನೆ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಗಂಡ-ಹೆಂಡತಿ ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ತೆಲೆಗೆ ಕೊಡಲಿ ಏಟು ಬಿದ್ದಿದ್ದು, 14 ಹೊಲಿಗೆ ಹಾಕಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹರೆಕಲ್ಲ ದೊಡ್ಡಿಯಲ್ಲಿ ಘಟನೆ ನಡೆದಿದ್ದು, ದಂಪತಿಗಳ ಜಗಳ ಬಿಡಿಸಲು ಹೋಗಿದ್ದ ಪೇದೆ ತಲೆಗೆ ಕೊಡಲಿ ಪೆಟ್ಟು ಬಿದ್ದಿದೆ. ಶನಿವಾರ ಗ್ರಾಮದ ವೆಂಕಟರಾಮು- ಆಶಾ ದಂಪತಿ ಜಗಳವಾಡಿಕೊಂಡಿದ್ದಾರೆ. ದೂರು ಬಂದ ಹಿನ್ನೆಲೆ ಮುಖ್ಯ ಪೇದೆ ಗುರುಶಾಂತಪ್ಪ ಜಗಳ ಬಿಡಿಸಲು ತೆರಳಿದ್ದು, ಈ ವೇಳೆ ಪಾನಮತ್ತನಾಗಿದ್ದ ಪತಿ ವೆಂಕಟರಾಮು ಪೇದೆಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.
ತೀವ್ರವಾಗಿ ಗಾಯಗೊಂಡ ಪೇದೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದಂಪತಿಯನ್ನು ಬಂಧಿಸಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.
ಚಿತ್ರದುರ್ಗ: ಪೊಲೀಸ್ ಪೇದೆ ಕರ್ತವ್ಯ ಮರೆತು ಸಮವಸ್ತ್ರದಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಪಲ್ಲವಗೆರೆ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ರಾಜು ಚವ್ಹಾಣ್ ಅವರನ್ನು ಭರಮಸಾಗರದ ಚೆಕ್ ಪೋಸ್ಟ್ ಗೆ ಪರಿಶೀಲನೆಗಾಗಿ ಹಾಕಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆ 40 ದಿನಗಳ ಕಾಲ ಲಾಕ್‍ಡೌನ್ ಮಾಡಲಾಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದು, ಎಲ್ಲಡೆ ಮದ್ಯ ಮಾರಟಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ಫುಲ್ ಖುಷಿಯಾದ ಪೇದೆ ರಾಜು ಚವ್ಹಾಣ್ ಕರ್ತವ್ಯ ಮರೆತು ತಮ್ಮ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದಾರೆ.
ಲಾಕ್‍ಡೌನ್ ಸಡಲಿಕೆಯಿಂದಾಗಿ ನಿನ್ನೆ ಪಲ್ಲವಗೆರೆ ಗ್ರಾಮದ ಸುತ್ತ ಬೀಟ್‍ಗೆ ಹಾಕಲಾಗಿತ್ತು. ಅದರಂತೆ ಕರ್ತವ್ಯ ನಿರ್ವಹಿಸಲು ಹೋಗಿದ್ದ ರಾಜು ಈರುಳ್ಳಿ ಜಮೀನಿನ ಮರದ ಕೆಳಗೆ ಕುಳಿತು ಗ್ರಾಮದ ಸ್ನೇಹಿತರ ಜೊತೆ ಪೋಲಿಸ್ ಸಮವಸ್ತ್ರದಲ್ಲಿಯೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾರ್ಟಿಯಲ್ಲಿ ಕುಡಿದು ಅಲ್ಲಿನ ಯುವಕರಿಗೆ ಕಾನೂನಿನ ಪಾಠ ಮಾಡಿದ್ದಾರೆ. ನಿವೃತ್ತ ಯೋಧರಾಗಿರುವ ರಾಜು, 2017ರಲ್ಲಿ ಸೇನೆಯಿಂದ ಬಂದು ಪೊಲೀಸ್ ಇಲಾಖೆಗೆ ಸೇರಿದ್ದರು ಎಂದು ಹೇಳಲಾಗುತ್ತಿದೆ. ಇವರ ಕೃತ್ಯದಿಂದಾಗಿ ಖಡಕ್ ಪೊಲೀಸರಿಗೆ ಇರಿಸುಮುರಿಸು ಉಂಟಾಗಿದ್ದು, ರಾಜು ಅವರ ನಿರ್ಲಕ್ಷ್ಯ ಹಾಗೂ ಬೇಜಾವಬ್ದಾರಿತನಕ್ಕೆ ಸಿಬ್ಬಂದಿ ತಲೆತಗ್ಗಿಸುವಂತಾಗಿದೆ. ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಚಿತ್ರದುರ್ಗ ಎಸ್ಪಿ ರಾಧಿಕಾ.ಜಿ ಪೇದೆ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲಾತಾಣಗಳಲ್ಲಿ ನಡೆದಿದೆ.
-ಕೊರೊನಾ ತಗುಲಿದ್ದೇ ನಿಗೂಢ
-ವಿಕ್ಟೋರಿಯಾ ಆಸ್ಪ್ರತ್ರೆ, ಖಾಸಗಿ ಸಂಸ್ಥೆ, ಸರ್ಕಾರಿ ಕಚೇರಿಗೂ ಕಂಟಕ?
ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಸೋಂಕು ತಗುಲಿರೋದು ಸೋಮವಾರ ದೃಢಪಟ್ಟಿದೆ. ಈ ಪೇದೆಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿದ್ದು, ಉತ್ತರಕ್ಕಾಗಿ ಆರೋಗ್ಯ ಇಲಾಖೆ ತೆಲೆಕೆಡಿಸಿಕೊಂಡಿದೆ.
ಕೊರೊನಾ ಪಾಸಿಟಿವ್ ಪೇದೆಗೆ ಸೋಂಕು ಹೇಗೆ ತಗುಲಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಪಘಾತದ ಕಾರಣದಿಂದ ಇಪ್ಪತ್ತು ದಿನ ರಜೆಯಲ್ಲಿದ್ದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೇದೆಗೆ ಇಬ್ಬರು ಅಣ್ಣಂದಿರು. ಮೂವರು ಜೊತೆಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮೊದಲನೇ ಅಣ್ಣ ವೈದ್ಯ, ಎರಡನೇ ಅಣ್ಣ ಬಯೋಕಾನ್ ಸಂಸ್ಥೆಯ ಉದ್ಯೋಗಿ. ಎರಡನೇ ಅತ್ತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ. ಹಾಗಾಗಿ ಅತ್ತಿಗೆಯಿಂದಲೇ ಪೇದೆಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.
ಸೋಂಕಿತ ಪೇದೆಯ ಮತ್ತೊಬ್ಬ ಅತ್ತಿಗೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೇದೆಯ ಪತ್ನಿ ಮತ್ತು ಮಗು ಸಹ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 45 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ರೆ ವಿಕ್ಟೋರಿಯಾ ಆಸ್ಪತ್ರೆ, ಬಯೋಕಾನ್ ಸಂಸ್ಥೆ, ಕಂದಾಯ ಇಲಾಖೆಯ ಕಚೇರಿ, ಸೋದರನ ಆಸ್ಪತ್ರೆಯ ಸಿಬ್ಬಂದಿಗೆ ಕ್ವಾರಂಟೈನ್ ಮಾಡಬೇಕಾಗುತ್ತದೆ.
ಪೊಲೀಸರಲ್ಲಿಯೂ ಆತಂಕ: ಪೇದೆ ರಜೆಗೂ ತೆರಳುವ ಮುನ್ನ 15 ದಿನ ಠಾಣೆಗೆ ಬಂದಿದ್ದರು. ಚೆಕ್‍ಪೋಸ್ಟ್ ನಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಈ ನಡುವೆ ಮಂಡ್ಯ ಜಿಲ್ಲೆಯ ಮಳವಳ್ಳಿಗೂ ಭೇಟಿ ನೀಡಿದ್ದರು. ಒಂದು ವೇಳೆ ಮಳವಳ್ಳಿಗೆ ಭೇಟಿ ನೀಡಿದ್ದಾಗ ಅಥವಾ ಅತ್ತಿಗೆಯಿಂದ ಸೋಂಕು ತಗುಲಿರೋದು ದೃಢಪಟ್ಟರೇ ಪೊಲೀಸರು ನಿಟ್ಟುಸಿರು ಬಿಡಬಹುದು. ಕರ್ತವ್ಯದಲ್ಲಿದ್ದಾಗಲೇ ಸೋಂಕು ತಗುಲಿದ್ದು ಖಾತ್ರಿಯಾದ್ರೆ ಇಡೀ ಪೊಲೀಸ್ ಠಾಣೆಯನ್ನ ಬಂದ್ ಮಾಡಿ, ಎಲ್ಲ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಬೇಕಾಗುತ್ತದೆ. ಪೇದೆಗೆ ಅಪಘಾತವಾದಾಗ ಆರೋಗ್ಯ ವಿಚಾರಿಸಲು ಠಾಣೆಯ ಕೆಲ ಸಿಬ್ಬಂದಿ ಆತನ ಮನೆಗೆ ತೆರಳಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ.
– ಪ್ರೇಮ ವಿವಾಹದಿಂದ ಬೆಂಬಲಕ್ಕೆ ನಿಲ್ಲದ ಪೋಷಕರು
– ಪೇದೆಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ಯಾದಗಿರಿ: ಕೊರೊನಾ ವಾರಿಯರ್ಸ್ ಗಳು ವೈಯಕ್ತಿಕ ಜೀವನಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರ ಜೀವ ಉಳಿಸುವ, ಸೋಂಕು ಹರಡದಂತೆ ದಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆ ಯಾದಗಿರಿಯ ಪೊಲೀಸ್ ಪೇದೆಯೊಬ್ಬರು ಬಾಣಂತಿ ಪತ್ನಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ದಿನದ 18 ಗಂಟೆ ಡ್ಯೂಟಿ ನಿರ್ವಹಿಸುತ್ತಿದ್ದಾರೆ.
ಕೊರೊನಾ ಲಾಕ್‍ಡೌನ್‍ನಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು ತಮ್ಮ ವೃತ್ತಿ ಪರಾಕಾಷ್ಠೆಯನ್ನು ಮೆರೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರ ಜೊತೆ ಪೊಲೀಸ್ ಕಾರ್ಯ ಸಹ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಇಂತಹ ಪೊಲೀಸ್ ಇಲಾಖೆಯಲ್ಲಿ ಕೆಲ ಪೇದೆಗಳು ಎಲೆಮರೆಯ ಕಾಯಿಗಳಂತೆ, ತಮ್ಮ ವೈಯಕ್ತಿಕ ಬದುಕನ್ನು ಸಹ ಬಲಿಕೊಟ್ಟು ಕೊರೊನಾ ಯುದ್ಧದಲ್ಲಿ ಹೊರಾಡುತ್ತಿದ್ದಾರೆ. ಇದನ್ನೂ ಓದಿ: ಅಮ್ಮಾ ನೀನು ಬಂದ್ಯಾ? -21 ದಿನಗಳ ಬಳಿಕ ತಾಯಿಯ ಮಡಿಲು ಸೇರಿದ ಕಂದಮ್ಮ
ಯಾದಗಿರಿ ನಗರ ಠಾಣೆಯ ವಿಶೇಷ ಶಾಖೆಯ ಪೇದೆ ಸಾಬರೆಡ್ಡಿ ಅವರು ಮನೆಯ ವಿರೋಧದ ನಡುವೆಯೂ ಏಳು ವರ್ಷಗಳಿಂದ ಪ್ರೀತಿಸಿದ್ದ ಗೆಳತಿಯನ್ನು ಕೈ ಹಿಡಿದಿದ್ದರು. ಇದರಿಂದಾಗಿ ಅವರು ಕುಟುಂಬವರಿಂದ ದೂರವಾಗಿದ್ದಾರೆ. ಸಾಬರೆಡ್ಡಿ ದಂಪತಿ ಪ್ರೀತಿಯ ಸಂಕೇತವಾಗಿ ಆರು ತಿಂಗಳ ಮಗು ಈಗ ಮಡಿಲಲ್ಲಿದೆ.
ಪತ್ನಿ ಹೆರಿಗೆಯ ಸಮಯದಲ್ಲಿ ಕೆಲಸದ ಜೊತೆ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ಮಾಡಿಸುವ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈಗ ಪತ್ನಿ ಮಗುವಿಗೆ ಮಗುವಿಗೆ ಜನ್ಮ ನೀಡಿದ್ದು, ಆರು ತಿಂಗಳ ಆರೈಕೆ ಹೊಣೆ ಸಾಬರೆಡ್ಡಿ ಅವರ ಮೇಲಿದೆ. ಹೀಗಿದ್ದರೂ ಅದನ್ನು ಬದಿಗೊತ್ತಿರುವ ಸಾಬರೆಡ್ಡಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆಯುತ್ತಿದ್ದಾರೆ.
ದಿನದ 18 ಗಂಟೆ ಲಾಕ್‍ಡೌನ್ ಕಾನೂನು ಕಾಪಾಡುವ ಸಾಬರೆಡ್ಡಿ ಅವರು, ಮಧ್ಯರಾತ್ರಿ ಪತ್ನಿ ಮಗು ಮಲಗಿದ ಬಳಿಕ ಮನೆಗೆ ಹೋಗುತ್ತಾರೆ. ಅಷ್ಟೇ ಅಲ್ಲದೆ ಬೆಳಗ್ಗೆ ಪತ್ನಿಗಿಂತ ಮೊದಲೇ ಎದ್ದು ಠಾಣೆಗೆ ಬಂದು ಕಾರ್ಯಕ್ಕೆ ಹಾಜರಾಗುತ್ತಾರೆ. ಕೆಲವು ಬಾರಿ ರಾತ್ರಿ ತಡವಾದರೆ ಠಾಣೆಯಲ್ಲಿಯೇ ಮಲಗಿ ಬಿಡುತ್ತಾರೆ. ಪತ್ನಿ ಮತ್ತು ಮಗುವಿನ ಸ್ವಹಿತಾಸಕ್ತಿಗಿಂತ ಜನರ ಹಿತ ಮೊದಲು ಎನ್ನುವ ಸಾಬರೆಡ್ಡಿ, ಕೊರೊನಾ ವಿರುದ್ಧ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.
ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಈಡೀ ದೇಶವೇ ಲಾಕ್‍ಡೌನ್ ಆಗಿದ್ದು, ಬಡ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನರಿತ ಶಿವಮೊಗ್ಗದ ಪೊಲೀಸ್ ಪೇದೆಯೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ದಿನಸಿ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ಪೇದೆ ಲಕ್ಷ್ಮಣ್ ಅವರು ಸದ್ಯ ಭದ್ರಾವತಿ ತಾಲೂಕಿನ ಉಂಬ್ಳೆಬೈಲು ಉಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಂಬ್ಳೆಬೈಲು ಗ್ರಾಮದಲ್ಲಿ ಕಡು ಬಡವರನ್ನು ಗುರುತಿಸಿ ಅವರಿಗೆ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಟೀ ಪುಡಿ, ಖಾರದ ಪುಡಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಕಿಟ್‍ನ್ನು ಸ್ವತಃ ತಾವೇ ವಿತರಿಸಿದ್ದಾರೆ.
ಉಂಬ್ಳೆಬೈಲು ಗ್ರಾಮದ 10 ಕುಟುಂಬಗಳಿಗೆ ಆಹಾರದ ಕಿಟ್ ಅನ್ನು ವಿತರಿಸಿದ್ದು, ಪೇದೆ ಲಕ್ಷ್ಮಣ್ ಮಾಡಿರುವ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತುಮಕೂರು: ವಾಲ್ಮೀಕಿ ವಿಗ್ರಹ ಸ್ಥಾಪನೆಯ ವಿವಾದದ ಗಲಾಟೆಯಲ್ಲಿ ಪೊಲೀಸ್ ಪೇದೆ ಊರಿನವರನ್ನೆಲ್ಲ ಬೂಟಿನಿಂದ ಒದೆಯುತ್ತೇವೆ ಎಂದು ಆವಾಜ್ ಹಾಕಿದ್ದಾರೆ. ಪೊಲೀಸ್ ಪೇದೆಯ ಈ ದರ್ಪದ ಮಾತಿಗೆ ಆಕ್ರೋಶಗೊಂಡ ನಾಯಕ ಸಮುದಾಯದ ಯುವಕರು ಪೇದೆಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ಒಬಳಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ವೈ.ಎನ್.ಹೊಸಕೋಟೆ ಠಾಣೆಯ ಪೇದೆ ಶಿವರಾಜ್ ಸಾರ್ವಜನಿಕರ ಎದುರು ದರ್ಪ ತೋರಿದ್ದಾರೆ.
ಒಬಳಾಪುರ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಯ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಈ ಪುತ್ಥಳಿ ನಿರ್ಮಾಣವಾಗುತ್ತಿದ್ದ ಜಾಗ ನಮಗೆ ಸೇರಿದ್ದು ಎಂದು ಗೊಲ್ಲ ಸಮುದಾಯದವರು ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ನಿಲ್ಲಿಸಿ ಎಂದು ಹೇಳಲು ಪೇದೆ ಶಿವರಾಜ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಮಾಧಾನದಿಂದ ತಿಳಿ ಹೇಳುವುದನ್ನು ಬಿಟ್ಟು ಆವಾಜ್ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಊರಿನವರನ್ನೆಲ್ಲ ಬೂಟಿನಿಂದ ಒದೆಯುತ್ತೇವೆ ಎಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಪೇದೆಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು: ಕಾಶ್ಮೀರಿ ಯುವತಿ ಟೆಕ್ಕಿ ಪಾಲಿಗೆ ಪೊಲೀಸ್ ಪೇದೆಯೊಬ್ಬರು ಆಪತ್ಬಾಂಧವನಾಗಿದ್ದಾರೆ. ಪೇದೆಯ ಜವಾಬ್ದಾರಿಯುತ ಸಹಾಯದಿಂದ ಯುವತಿಗೆ ಬೆಂಗಳೂರಲ್ಲಿ ಕೆಲಸ ಸಿಕ್ಕಿದೆ.
ಹೌದು. ಕೆಲ ದಿನಗಳ ಹಿಂದೆ ಕೆಲಸ ಅರಸಿ ಸಂದರ್ಶನಕ್ಕೆಂದು ಕಾಶ್ಮೀರದಿಂದ ಮರಿಯಾ ಎಂಬವರು ರಾಜಧಾನಿಗೆ ಬಂದಿದ್ದರು. ಇಲ್ಲಿನ ಮಾನ್ಯತಾ ಟೆಕ್ ಪಾರ್ಕಿನ ಖಾಸಗಿ ಕಂಪನಿಗೆ ಇಂಟರ್ ವ್ಯೂಗೆ ಬಂದಿದ್ದರು. ಈ ವೇಳೆ ಇಂಟರ್ ವ್ಯೂಗೆ ಹೋಗುವ ತರಾತುರಿಯಲ್ಲಿ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸಮೇತವಿದ್ದ ಬ್ಯಾಗ್ ಕಳೆದುಕೊಂಡಿದ್ದರು.
ಇದೇ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ್ದ ಸಂಪಿಗೆಹಳ್ಳಿ ಠಾಣೆಯ ಪೊಲೀಸ್ ಪೇದೆ ಸದಾಶಿವ ಬೆಳಗಲಿ, ಯುವತಿ ಕಳೆದುಕೊಂಡಿದ್ದ ಬ್ಯಾಗನ್ನ ಸ್ಥಳೀಯ ಕಾನ್ ಸ್ಟೇಬಲ್‍ಗೆ ನೀಡಿದ್ದರು. ಯುವತಿಯ ಫೊನ್ ನಂಬರ್ ಸಿಗದೇ ಪೇದೆ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದರು.
ಮರುದಿನ ಯುವತಿ ಇ-ಲಾಸ್ಟ್ ನಲ್ಲಿ ದೂರು ದಾಖಲಿದ್ದರು. ಈ ಮಾಹಿತಿ ಪಡೆದುಕೊಂಡ ಕೂಡಲೇ ಪೊಲೀಸ್ ಪೇದೆ, ಯುವತಿಗೆ ಕರೆ ಮಾಡಿ ಕಳೆದುಕೊಂಡಿದ್ದ ದಾಖಲಾತಿಗಳನ್ನ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದರು. ಈ ಮೂಲಕ ಯುವತಿ ತನ್ನ ಅಧಿಕೃತ ದಾಖಲೆಗಳನ್ನು ಸಬ್ಮಿಟ್ ಮಾಡಿ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ.
ಬೆಂಗಳೂರು: ಸಿಸಿಬಿ ಪೊಲೀಸ್ ಪೇದೆಯೊಬ್ಬರು ಸ್ಪಾ ಮಾಲೀಕರೊಬ್ಬರಿಂದ ಕಂತೆ ಕಂತೆ ಹಣ ಪಡೆದಿರುವ ವಿಡಿಯೋ ಬಹಿರಂಗವಾಗಿದೆ.
ರಾಜಾಜಿನಗರದ ಸ್ಪಾ ಬಳಿ ಹೋದ ಇಬ್ಬರು ಪೇದೆಗಳು, ಮಾಲೀಕನಿಗೆ “ನೀವೇನು ಭಯಪಡಬೇಡಿ ಹಿರಿಯ ಅಧಿಕಾರಿಗಳನ್ನು ನಾವು ನೋಡಿಕೊಳ್ಳುತ್ತೇವೆ. ಸಿಸಿಬಿ ಹಿರಿಯ ಅಧಿಕಾರಿಗಳು ರೇಡ್ ಮಾಡುವಾಗ ನಮಗೆ ಮೊದಲೇ ಇಂತಹ ದಿನ ನಿಮ್ಮ ಏರಿಯಾದಲ್ಲಿ ರೇಡ್‍ಗೆ ಬರುತ್ತೇವೆ, ಹುಷಾರಾಗಿ ಎಂದು ನಮಗೆ ವಾಟ್ಸಾಪ್ ಕಾಲ್ ಮಾಡಿ ಹೇಳುತ್ತಾರೆ. ನಾವು ಆಗ ಎಲ್ಲಾ ಅಕ್ರಮ ಚಟುವಟಿಕೆಗಳ ನಡೆಯುವ ಜಾಗದ ಮಾಲೀಕರಿಗೆ ಅಲರ್ಟ್ ಮಾಡಿಬಿಡ್ತೀವಿ. ಸೀನಿಯರ್ ಆಫೀಸರ್ ಗಳ ಬಗ್ಗೆ ನೀವೇನು ಭಯಪಡಬೇಡಿ” ಎಂದು ಹೇಳಿದ್ದಾರೆ.
ಸದ್ಯ ಇಬ್ಬರು ಪೇದೆ ಸ್ಪಾ ಮಾಲೀಕರ ಬಳಿ ಹಣ ಪಡೆದಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಡಿಸಿಪಿ ಕುಲ್ ದಿಲ್ ಕುಮಾರ್ ಜೈನ್ ಮಾತನಾಡಿ, ವಿಡಿಯೋ ವಿಚಾರ ನಮ್ಮ ಗಮನಕ್ಕೆ ಬಂದಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು,
ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ಕೆಲವು ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಈ ಆರೋಪಕ್ಕೆ ಇಂದು ಪೊಲೀಸ್ ಪೇದೆಯೋರ್ವ ಎಸಿಬಿ ಬಲೆಗೆ ಬಿದ್ದಿರುವುದು ಮತ್ತಷ್ಟು ಪುಷ್ಠಿ ನೀಡಿದೆ.
ಹೌದು. ಶಿವಮೊಗ್ಗದಲ್ಲಿ ಇಂದು ಎಸಿಬಿ ಡಿವೈಎಸ್‍ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಮರಳು ಸಾಗಾಣಿಕೆಗೆ ಅನುಕೂಲ ಮಾಡಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಪೇದೆಯೋರ್ವನನ್ನು ಎಸಿಬಿ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.
ತುಂಗಾನಗರ ಠಾಣೆಯ ಪೇದೆ ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ಪೇದೆ. ದಾಳಿಯಲ್ಲಿ ಎಸಿಬಿ ಡಿವೈಎಸ್‍ಪಿ ಮನೋಜ್‍ಕುಮಾರ್, ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಸೇರಿದಂತೆ ಇತರೆ ಸಿಬ್ಬಂದಿ ಭಾಗಿಯಾಗಿದ್ದರು. ನಾರಾಯಣಸ್ವಾಮಿ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಅಬ್ದುಲ್ ಸಲೀಂ ಬಳಿ ಇಂದು ಗೋಪಾಳ ಬಸ್ ನಿಲ್ದಾಣ ಸಮೀಪ 7 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಪೇದೆಯನ್ನು ಹಾಗೂ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.