Tag: Police Commissioner

  • ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಸಿಎಂ ನಿವಾಸದೊಳಗೆ ಬಿತ್ತು ಗಾಲ್ಫ್ ಚೆಂಡು: ಪೊಲೀಸ್ ವಾಹನದ ಗಾಜು ಜಖಂ

    ಬೆಂಗಳೂರು: ಗಾಲ್ಫ್ ಚೆಂಡು ಗೃಹಕಚೇರಿ ಕೃಷ್ಣಾ ನಿವಾಸದ ಒಳಗೆ ಬಿದ್ದಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ವಾಹನದ ಗಾಜು ಜಖಂ ಗೊಂಡಿದೆ.

    ಕೃಷ್ಣಾ ನಿವಾಸದ ಪಕ್ಕದಲ್ಲಿಯೇ ಇರುವ ಗಾಲ್ಫ್ ಮೈದಾನದಿಂದ ಚೆಂಡು ಹಾರಿ ಬಂದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕಾಕತಾಳೀಯ ಅಂದರೆ ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಗಾಲ್ಫ್ ಚೆಂಡುಗಳು ಕೃಷ್ಣಾ ನಿವಾಸದೊಳಗೆ ಬಂದು ಬೀಳುತ್ತಿದ್ದವು. ಹೀಗಾಗಿ ಕುಮಾರಸ್ವಾಮಿ ಮೈದಾನದ ಸುತ್ತಲೂ 100 ಅಡಿ ಎತ್ತರದ ಬಲೆ ಹಾಕಿಸಿದ್ದರು. ಆದರೆ ಈಗ ಗಾಲ್ಫ್ ಚೆಂಡು ಅಷ್ಟು ಎತ್ತರದ ಬಲೆ ದಾಟಿ ಮತ್ತೆ ಕೃಷ್ಣಾ ನಿವಾಸದ ಒಳಗೆ ಬಂದು ಬಿದ್ದಿದೆ.

    ಗಾಲ್ಫ್ ಚೆಂಡು ವಶಕ್ಕೆ ಪಡೆದಿರುವ ಪೊಲೀಸರು, ಯಾರು ಹೊಡೆದಿದ್ದು ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

  • 10 ಸಾವಿರಕ್ಕಾಗಿ ಸ್ನೇಹಿತರನ್ನೇ ಕೊಲೆ ಮಾಡಿ ಜೈಲು ಸೇರಿದ್ರು

    10 ಸಾವಿರಕ್ಕಾಗಿ ಸ್ನೇಹಿತರನ್ನೇ ಕೊಲೆ ಮಾಡಿ ಜೈಲು ಸೇರಿದ್ರು

    ಹುಬ್ಬಳ್ಳಿ: ಕೇವಲ 10 ಸಾವಿರ ಹಣಕ್ಕಾಗಿ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ್, ಜೂನ್ 8 ರ ಮಧ್ಯರಾತ್ರಿ ಅಜಂತ ಹೋಟೆಲ್ ಬಳಿ ನಡೆದಿದ್ದ ಜೋಡಿ ಕೊಲೆಯ ಆರೋಪಿಗಳನ್ನ ಬಂಧಿಸಲಾಗಿದೆ. ಹಣದ ವ್ಯವಹಾರಕ್ಕಾಗಿ ಕೊಲೆ ಮಾಡಲಾಗಿದೆ. ಕೊಲೆಯ ಹಿಂದೆ ಹಳೆಯ ವೈಷಮ್ಯ ಇರುವ ಕುರಿತ ಶಂಕೆಯಿದೆ ಎಂದು ತಿಳಿಸಿದ್ದಾರೆ.

    ಏನಿದು ಘಟನೆ: ಕೆಲ ದಿನಗಳ ಹಿಂದೆ ನಗರದ ಅಜಂತ ಹೋಟೆಲ್ ಬಳಿ ಫೈರೋಜ್ ಇರ್ಷಾದ್ ಹಾಗೂ ರಿಯಾಜ್ ರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಕೊಲೆಯಾದ ಮೂರು ದಿನದಲ್ಲೇ ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

    ಅಖಿಲ್ ಬೇಪಾರಿ(23) ಇರ್ಷಾದ್ ಮಿಶ್ರಿಕೋಟಿ(26), ನವಲೂರು(25)  ಹಾಗೂ ಕೊಲೆಗೆ ಸಹಾಯ ಮಾಡಿದ ವಿರೇಶ್ ಸೊಟ್ನಾಳ(27) ಬಂಧಿತ ಆರೋಪಿಗಳು. ಕೆಲ ದಿನಗಳ ಹಿಂದೆ ಮೃತ ಫೈರೋಜ್ ಆರೋಪಿ ಇರ್ಷಾದ್ ಗೆ ಹತ್ತು ಸಾವಿರ ಹಣ ನೀಡಿದ್ದ. ಇದನ್ನು ವಾಪಸ್ ಕೇಳಿದ ಸಂದರ್ಭದಲ್ಲಿ ಇರ್ಷಾದ್ ಹಾಗೂ ಆತನ ಮೂವರು ಸ್ನೇಹಿತರು ಸೇರಿ ಫೈರೋಜ್ ಹಾಗೂ ರಿಯಾಜ್‍ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಕುರಿತು ವಿಚಾರಣೆ ವೇಳೆ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

    ಇದೇ ವೇಳೆ ಆರೋಪಿಗಳ ನಡುವೆ ಪ್ರೇಮ ಪ್ರಕರಣ ಕುರಿತು ವೈಷಮ್ಯ ಉಂಟಾಗಿತ್ತು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿರುವುದಾಗಿ ಮಾಹಿತಿ ನೀಡಿದ್ದು, ಆದರೆ ಇಂದಿನ ಕೊಲೆಗೆ ಹಣಕಾಸಿನ ವೈಷ್ಯಮ್ಯವೇ ಕಾರಣವೆಂದು ತಿಳಿಸಿದ್ದಾರೆ.