Tag: Police Commissioner

  • ಕೊಲೆ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ

    ಕೊಲೆ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ

    -50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್

    ಹುಬ್ಬಳ್ಳಿ: ಕೊಲೆ ಮಾಡಿದ ಆರೋಪಿಗಳನ್ನು ಶಿಕ್ಷಿಸುವ ಬದಲು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಅಪರಾಧ ಚಟುವಟಿಕೆಗಳನ್ನು ತಡೆಯುವ ಪೊಲೀಸರಿಗೆ ಮಾನಸಿಕ ಸ್ಥೈರ್ಯ ಕೊಡಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಸಿಬ್ಬಂದಿಗೆ ನೋಟಿಸ್ ನೀಡಿ ಸಸ್ಪೆಂಡ್ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ.

    ಸಮಾಜ ಅಂದ ಮೇಲೆ ಕೊಲೆ ಅಪರಾಧ ಚಟುವಟಿಕೆಗಳು ನಡೆಯುತ್ತಾನೆ ಇರುತ್ತವೆ. ಆದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಕಳಹಂತದ ಪೇದೆಗಳಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬಬೇಕು. ಆಗ ಮಾತ್ರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದು. ಹುಬ್ಬಳ್ಳಿ ಧಾರವಾಡ ಮಹನಾಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಅಪರಾಧ ಚಟುವಟಿಕೆಗಳಿಗೆ ಇದೀಗ ಪೊಲೀಸ್ ಪೇದೆಗಳನ್ನು ಹೊಣೆಯಾಗಿಸುವ ಯತ್ನ ನಡೆಯುತ್ತಿದೆ.

    ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಾಲ್ಕು ಕೊಲೆ, ಒಂದು ಶೂಟೌಟ್, ಸರಗಳ್ಳತನ ಸೇರಿದಂತೆ ಹಲವು ಗದ್ದಲ ಗಲಾಟೆ ಪ್ರಕರಣಗಳು ನಡೆದಿವೆ. ಈ ಅಪರಾಧ ಪ್ರಕರಣಗಳಿಗೆ ಇದೀಗ ಪೊಲೀಸ್ ಪೇದೆಗಳನ್ನೆ ಹೊಣೆಯಾಗಿಸಿ ಬರೋಬ್ಬರಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಲಾಗಿದೆ. ಹುಬ್ಬಳ್ಳಿ ವ್ಯಾಪ್ತಿಯಲ್ಲಿ 17 ಪೇದೆಗಳು, ಧಾರವಾಡ ಠಾಣೆಗಳ ವ್ಯಾಪ್ತಿಯಲ್ಲಿ 14 ಜನ ಪೇದೆಗಳನ್ನು ಅಮಾನತು ಮಾಡಿ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿರುವುದು ಪೊಲೀಸ್ ಪೇದೆಗಳ ಮಾನಸಿಕ ಸ್ಥೈರ್ಯವನ್ನೆ ಕುಂದಿಸಿದೆ. ಪಿಎಸ್‍ಐ, ಇನ್ಸ್‌ಪೆಕ್ಟರ್‌ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಇಲ್ಲದ ಶಿಕ್ಷೆ ನಮಗ್ಯಾಕೆ ಎಂದು ಪೇದೆಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಇದು ಸಿಬ್ಬಂದಿ ಮಾನಸಿಕ ಆತ್ಮಸ್ಥೈರ್ಯ ಕುಂದಿಸಿದಂತಾಗುತ್ತದೆ ಎಂದು ಹೇಳುತ್ತಿದ್ದಾರೆ.

  • ಪೊಲೀಸ್ ಕಮೀಷನರ್, ಡಿಸಿಪಿ ಬಳಿ ಕ್ಷಮೆಯಾಚಿಸಿದ್ದೇನೆ: ಸಂಸದ ಪ್ರತಾಪ್

    ಪೊಲೀಸ್ ಕಮೀಷನರ್, ಡಿಸಿಪಿ ಬಳಿ ಕ್ಷಮೆಯಾಚಿಸಿದ್ದೇನೆ: ಸಂಸದ ಪ್ರತಾಪ್

    ಮೈಸೂರು: ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ಅವರ ಬಳಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಪ್ರತಾಪ್, “ಕಾನ್‌ಸ್ಟೇಬಲ್‌ನಿಂದ ಕಮೀಷನರ್, ಎಸ್‍ಪಿವರೆಗೂ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮಾಧ್ಯಮದವರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬೇಡಿ. ಏಕೆಂದರೆ ಸೆಪ್ಟೆಂಬರ್ 27ರಂದು ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಮ್ಮ ಅಧಿದೇವತೆ ಎಂದು ನಾವು ಹೊತ್ತು ಮೆರೆಯುತ್ತೇವೆ. ಹಾಗೆಯೇ ಚಾಮುಂಡಿಗೆ ಅವಳು, ಇವಳು ಎಂದು ಮಾತನಾಡಿ ಪುಷ್ಪಾರ್ಚನೆ ಮಾಡಿದರೆ ಆ ದೇವರು ಹಾಗೂ ಸಮಾಜವನ್ನು ಮೆಚ್ಚುವುದಿಲ್ಲ. ಅದನ್ನು ತಡೆ ಹಾಕುವ ಕೆಲಸವನ್ನು ನಾವು ಮಾಡಿದ್ದೇವೆ. ಅದಕ್ಕೆ ಅನ್ಯತಾ ಬಯಸುವ ಅಗತ್ಯವಿಲ್ಲ ಎಂದರು.

    ನಾನು ಈಗಾಗಲೇ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ಬಳಿ ವೈಯಕ್ತಿಕವಾಗಿ ಹೋಗಿ ಅಂದು ಮನಸ್ಸಿಗೆ ನೋವಾಗಿತ್ತು, ಘಾಸಿಯಾಗಿತ್ತು. ಇಷ್ಟಾದರೂ ಸಹ ಅಪಚಾರ ಮಾಡುವ ಸಲುವಾಗಿ ಶಾಮಿಯಾನ ಹಾಕುತ್ತಿದ್ದರು. ಆ ಸಂದರ್ಭದಲ್ಲಿ ನಾನು ಆವೇಶದಲ್ಲಿ ಈ ರೀತಿ ಮಾತನಾಡಿದ್ದೇನೆ ಕ್ಷಮಿಸಿ ಎಂದು ಕೇಳಿದ್ದೇನೆ. ನಾವೆಲ್ಲ ಒಂದೇ ಕುಟುಂಬದಂತೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರತಾಪ್ ಸಿಂಹ ಅವರ ಸ್ಪಷ್ಟನೆ ನೀಡಿದರು.

    ನಡೆದಿದ್ದೇನು?
    ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಹಾಕುವಾಗ ನೀವು ಏನು ಮಾಡುತ್ತಿದ್ರಿ ಪೊಲೀಸರೇ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಅಲ್ಲದೆ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿದ್ದರು.

    ಆಗ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯ್ತಿ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದರು. ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲೀಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲೀಕರಿಗೆ ಪ್ರತಾಪ್ ಸಿಂಹ ಅವಾಜ್ ಹಾಕಿದ್ದರು.

  • ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾದ 5 ಮಕ್ಕಳು

    ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾದ 5 ಮಕ್ಕಳು

    – ಮಕ್ಕಳ ಆಸೆ ಈಡೇರಿಸಿದ ಭಾಸ್ಕರ್ ರಾವ್
    – ಮಕ್ಕಳಿಂದ ಪೊಲೀಸರಿಗೆ ಧನ್ಯವಾದ

    ಬೆಂಗಳೂರು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಐದು ಮಕ್ಕಳ ಕೊನೆಯ ಆಸೆಯನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈಡೇರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ರುತನ್ ಕುಮಾರ್, ಮಹಮದ್ ಶಕೀಬ್, ಅರ್ಷಾಥ್ ಪಾಷಾ, ಶ್ರಾವಣಿ ಬಂಟ್ಟಾಳ, ಸಯ್ಯದ್ ಇಮಾದ್ ಸೇರಿ 5 ಮಂದಿ ಮಕ್ಕಳ ನಗರ ಪೋಲೀಸ್ ಆಯುಕ್ತರನ್ನಾಗಿ ಮಾಡುವ ಮೂಲಕ ಅವರ ಕೊನೆಯ ಆಸೆ ಈಡೇರಿಸಿದರು. 5 ಮಕ್ಕಳಿಗೆ ಗಾರ್ಡ್ ಆಫ್ ಹಾನರ್ ಕೊಟ್ಟು ಕಮೀಷನರ್ ಸೀಟ್ ಅಲಂಕರಿಸಲು ಅನುವು ಮಾಡಿಕೊಟ್ಟರು. ಡಾಗ್ ಸ್ಕ್ವಾಡ್ ಕರೆದು ಅವರನ್ನ ಪರಿಚಯ ಮಾಡಿಸುವ ಕೆಲಸ ಕೂಡ ಮಾಡಿ ಪುಟಾಣಿಗಳ ಆಸೆ ಈಡೇರಿಸಲಾಯಿತು.

    ಪೊಲೀಸ್ ಆಯಕ್ತರಾಗಿ ಕೆಲ ನಿಮಿಷ ಅಧಿಕಾರ ಚಲಾಯಿಸಿದ ಪುಟಾಣಿ ರುತನ್ ಕುಮಾರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಟ ದರ್ಶನ್ ಐರಾವತ ಸಿನಿಮಾ ನೋಡಿ ನಾನು ಕೂಡ ಪೊಲೀಸ್ ಆಫೀಸರ್ ಆಗಬೇಕು ಎನ್ನುವ ಆಸೆ ಹುಟ್ಟಿಕೊಂಡಿತ್ತು. ಭಗವಂತ ನನ್ನ ಆಸೆಯನ್ನು ಗಿಡವಾಗಿ ಇರುವಾಗಲೇ ಚಿವುಟಿ ಹಾಕಿದ್ದಾನೆ. ತಾತ್ಕಾಲಿಕ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟ ಬೆಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.

  • ಸಿಸಿ ಕ್ಯಾಮೆರಾ ಚೆಕ್ ಮಾಡಿ- ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ

    ಸಿಸಿ ಕ್ಯಾಮೆರಾ ಚೆಕ್ ಮಾಡಿ- ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ

    ಬೆಂಗಳೂರು: ಉಗ್ರರ ದಾಳಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

    ಯಾವುದೇ ಕ್ಷಣದಲ್ಲಿ ಉಗ್ರರರು ದಾಳಿ ಮಾಡಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಭದ್ರತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

    ಎಲ್ಲಾ ಆಯ ಕಟ್ಟಿನ ಸ್ಥಳಗಳಲ್ಲಿ ಭಾರೀ ಭದ್ರತೆ ಒದಗಿಸಬೇಕು. ಪ್ರತಿಯೊಂದು ಜಾಗದಲ್ಲಿಯೂ ಸಿಸಿಟಿವಿ ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಪ್ರಮುಖ ಸ್ಥಳಗಳಲ್ಲಿ ಖುದ್ದು ಇದ್ದು ಭದ್ರತೆ ನೋಡಿಕೊಳ್ಳಬೇಕು. ನಗರದಲ್ಲಿ ಅನುಮಾನಾಸ್ಪದ ರೀತಿಯ ವ್ಯಕ್ತಿ, ವಾಹನ, ಬ್ಯಾಗ್‍ಗಳನ್ನು ತಪಾಸಣೆ ಮಾಡಿ ಎಂದು ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

    ಪ್ರೈವೆಟ್ ಸೆಕ್ಯೂರಿಟಿ ಗಾರ್ಡ್ ಗಳನ್ನು ಭದ್ರತೆಗೆ ಬಳಸಿಕೊಳ್ಳಿ. ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ರೌಂಡ್ಸ್ ನಲ್ಲಿ ಇರಬೇಕು. ತಮ್ಮ ವ್ಯಾಪ್ತಿಯ ಆಯಕಟ್ಟಿನ ಪ್ರದೇಶದಲ್ಲಿ ಹಿರಿಯ ಅಧಿಕಾರಿಗಳು ಮೊಕಾಂ ಹುಡಬೇಕು. ನೈಟ್ ರೌಂಡ್ಸ್ ಇರುವ ಅಧಿಕಾರಿಗಳು ಅನುಮಾನಾಸ್ಪದ ವ್ಯಕ್ತಿ ಹಾಗೂ ವಾಹನ ಕಂಡು ಬಂದರೆ ವಶಕ್ಕೆ ಪಡೆಯಬೇಕು. ಪಿಜಿ, ಹಾಸ್ಟೆಲ್,ಅಪಾಟ್ರ್ಮೆಂಟ್, ಮಸೀದಿ, ದೇವಸ್ಥಾನಗಳ ಬಳಿ ಪೊಲೀಸರು ತಪಾಸಣೆ ನಡೆಸಬೇಕು ಎಂದು ಆದೇಶ ನೀಡಿದ್ದಾರೆ.

    ತಮ್ಮ ತಮ್ಮ ಪ್ರದೇಶದ ಬಿಟ್ ಪೊಲೀಸರು ಅಲರ್ಟ್ ಆಗಿರಬೇಕು. ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಸಂಪೂರ್ಣ ತಪಾಸಣೆ ಮಾಡಬೇಕು. ಚೆಕ್ ಪೋಸ್ಟ್ ಗಳು, ನಗರದ ಒಳಗೆ ಹೊರಗೆ ಹೋಗುವ ವಾಹನಗಳ ತಪಾಸಣೆಯಾಗಬೇಕು. ವಿಧಾನಸೌಧ, ಬಸ್ ನಿಲ್ದಾಣ, ರೈಲ್ವೇ ಸ್ಟೇಷನ್, ಮಾಲ್, ಮಾರ್ಕೆಟ್ ಸುತ್ತಮುತ್ತ ಹೈ ಅಲರ್ಟ್ ಆಗಿರಿ. ಎಲ್ಲಾ ಕಡೆ ಕೆಎಸ್‍ಆರ್ ಪಿ ನಿಯೋಜನೆ ಮಾಡಬೇಕು ಎಂದು ಸೂಚಿಸಿದ್ದಾರೆ.

  • ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

    ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಗಾವಣೆ

    ಬೆಂಗಳೂರು: ನಗರದ ಪೊಲೀಸ್ ಆಯುಕ್ತರಾಗಿ ನೇಮಕವಾದ ಕೆಲವೇ ದಿನಗಳಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ನೂತನ ಸರ್ಕಾರ ಆದೇಶ ನೀಡಿದ್ದು, ಈ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿದೆ.

    ಎಡಿಜಿಪಿ ಆಗಿದ್ದ ಅಲೋಕ್ ಕುಮಾರ್ ಅವರನ್ನು 45 ದಿನಗಳ ಹಿಂದೆಯಷ್ಟೇ ಮೈತ್ರಿ ಸರ್ಕಾರ ನಗರದ ಆಯುಕ್ತರನ್ನಾಗಿ ನೇಮಕ ಮಾಡಿತ್ತು. ಸದ್ಯ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‍ಆರ್ ಪಿ) ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಕೆಎಸ್‍ಆರ್ ಪಿ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಅವರನ್ನು ಪೊಲೀಸ್ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.

    ಸಮ್ಮಿಶ್ರ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ವೇಳೆ ನಿಯಮಗಳನ್ನು ಮೀರಿ ಆದೇಶ ಮಾಡಿರುವುದೇ ಅವರ ವರ್ಗಾವಣೆ ಕಾರಣ ಎನ್ನಲಾಗಿದೆ. ಅಲೋಕ್ ಕುಮಾರ್ ಅವರನ್ನು ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿದ್ದ ಸಂದರ್ಭದಲ್ಲೂ ಕೆಲವರು ನೇಮಕ ಕುರಿತು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸದ್ಯ ನೂತನ ಸರ್ಕಾರ ವರ್ಗಾವಣೆ ಮಾಡಿ ಈ ವಿವಾದಕ್ಕೆ ತೆರೆ ಎಳೆದಿದೆ.

    ಸದ್ಯ ನೂತನವಾಗಿ ಆಯ್ಕೆ ಆಗಿರುವ ಭಾಸ್ಕರ್ ರಾವ್ ಅವರು ಬೆಂಗಳೂರಿನವರೇ ಆಗಿದ್ದು, ಆ ಮೂಲಕ ಬೆಂಗಳೂರು ನಗರದವರೆ ಕಮಿಷನರ್ ಆಗಿದ್ದಾರೆ. ಅಲೋಕ್ ಕುಮಾರ್ ಸೇರಿದಂತೆ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

    ಯಾರು ಎಲ್ಲಿಗೆ ವರ್ಗಾವಣೆ?
    ಹೇಮಂತ್ ನಿಂಬಾಳ್ಕರ್- ಐಜಿಪಿ, ಆಡಳಿತ, ಬೆಂಗಳೂರು
    ರವಿಕಾಂತೇಗೌಡ – ಜಂಟಿ ಆಯುಕ್ತ, ಪಶ್ಚಿಮ, ಬೆಂಗಳೂರು ನಗರ
    ದೇವರಾಜ್ – ಎಸ್‍ಪಿ, ಸಿಐಡಿ
    ಆರ್ ಚೇತನ್ – ಎಸ್‍ಪಿ, ಕೋಸ್ಟಲ್ ಸೆಕ್ಯುರಿಟಿ
    ಎಂ ಅಶ್ವಿನಿ – ಡಿಸಿಪಿ, ಗುಪ್ತಚರ, ಬೆಂಗಳೂರು
    ಉಮೇಶ್ ಕುಮಾರ್ – ಡಿಸಿಪಿ, ಅಗ್ನಿಶಾಮಕದಳ

  • ವಿಧಾನಸೌಧ ಸುತ್ತಮುತ್ತ 2 ದಿನ ನಿಷೇಧಾಜ್ಞೆ ಜಾರಿ

    ವಿಧಾನಸೌಧ ಸುತ್ತಮುತ್ತ 2 ದಿನ ನಿಷೇಧಾಜ್ಞೆ ಜಾರಿ

    ಬೆಂಗಳೂರು: ಕಳೆದ ಮಂಗಳವಾರದಂದು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇದೀಗ ಮತ್ತೆ ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಸೋಮವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತ-ಮುತ್ತ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

    ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಮಧ್ಯಾಹ್ನ 12 ಗಂಟೆವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಸೆಕ್ಷನ್ 144 ಸೆಕ್ಷನ್ ಅಡಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿಷೇಧಾಜ್ಞೆ ಜಾರಿಯಾಗಿದೆ.

    ಮಂಗಳವಾರದಂದು ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ನಿತೇಶ್ ಅಪಾರ್ಟ್‍ಮೆಂಟ್ ನಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಇಬ್ಬರಿಗಾಗಿ ನಡುರಸ್ತೆಯಲ್ಲಿ ಸಂಜೆ ಭಾರೀ ಹೈಡ್ರಾಮವೇ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಮಂಗಳವಾರ ಸಂಜೆ 6 ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರದ ಎಲ್ಲ ಬಾರ್, ಪಬ್ ಬಂದ್ ಆಗಿರುತ್ತದೆ ಎಂದು ತಿಳಿಸಿದ್ದರು. ಆದರೆ ಬುಧವಾರ ಮಧ್ಯಾಹ್ನ ನಿಷೇಧಾಜ್ಞೆಯನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು.

  • ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಅಲೋಕ್ ಕುಮಾರ್ ಸಭೆ

    ಸಿಎಂ ಸೂಚನೆ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಅಲೋಕ್ ಕುಮಾರ್ ಸಭೆ

    ಬೆಂಗಳೂರು: ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು ನಗರ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಸಿಎಂ ಸೂಚನೆ ಬೆನ್ನಲ್ಲೇ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಉನ್ನತ ಪೊಲೀಸ್ ಅಧಿಕಾರಗಳ ಸಭೆ ನಡೆದಿದೆ.

    ಇಂದು ಬೆಳಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಬಿಎಸ್‍ವೈ ಸೂಚಿಸಿದ್ದರು ಎಂಬುದಾಗಿ ತಿಳಿದುಬಂದಿದೆ.

    ಸಿಎಂ ಭೇಟಿಯಾದ ಬೆನ್ನಲ್ಲೇ ದಿಢೀರ್ ಸಭೆ ನಡೆಸಿರುವ ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳೊಂದಿಗೆ ಚರ್ಚೆ ನಡೆಸಿ ಸಿಎಂ ಸೂಚನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ನಗರದಲ್ಲಿ ಕಾನೂನು ವ್ಯವಸ್ಥೆ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೆಲವೇ ಗಂಟೆಗಳಲ್ಲಿ ಸಿದ್ಧತೆ ನಡೆಸಿದ್ದ ಪೊಲೀಸರು ಕಟ್ಟುನಿಟ್ಟಿನ ವ್ಯವಸ್ಥೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅಲೋಕ್ ಕುಮಾರ್ ಅವರು, ಪ್ರಮಾಣ ವಚನ ಕಾರ್ಯಕ್ರಮ ಏನೆಲ್ಲ ಭದ್ರತೆ ಮಾಡಬೇಕೋ ಅದನ್ನು ಮಾಡುತ್ತೇವೆ. ನಾವು ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಿದ್ದೇವೆ. ಕೇಂದ್ರದ ನಾಯಕರು ಬಂದರೆ ಹೆಚ್ಚುವರಿ ಭದ್ರತೆ ಒದಗಿಸುವುದಾಗಿ ಹೇಳಿದ್ದರು.

  • ಸಂಜಯ್ ನಗರ ಠಾಣೆ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್

    ಸಂಜಯ್ ನಗರ ಠಾಣೆ ಸಿಬ್ಬಂದಿಗೆ ಅಲೋಕ್ ಕುಮಾರ್ ಫುಲ್ ಕ್ಲಾಸ್

    – ಏನ್ಮಾಡ್ತಿದ್ದೀರ ನೀವೆಲ್ಲಾ? ಕ್ರೈಂ ಸಿಬ್ಬಂದಿ ಏನ್ ಕೆಲಸ ಮಾಡ್ತಿದ್ದೀರಾ?
    – ಸಿಬ್ಬಂದಿಯ ಚಳಿ ಬಿಡಿಸಿದ ಪೊಲೀಸ್ ಆಯುಕ್ತರು

    ಬೆಂಗಳೂರು: ಸಂಜಯ್ ನಗರ ಪೊಲೀಸ್ ಠಾಣೆಗೆ ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಂಜಯ್ ನಗರ ಠಾಣೆಯಲ್ಲಿ ಬರೋಬ್ಬರಿ 9 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ತಿಂಗಳಿಂದ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲೋಕ್ ಕುಮಾರ್ ಅವರು ಠಾಣೆಯ ಭೇಟಿ ನೀಡಿ, ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.

    ಏನ್ಮಾಡ್ತಿದ್ದೀರ ನೀವೆಲ್ಲಾ? ಕ್ರೈಂ ಸಿಬ್ಬಂದಿ ಏನ್ ಕೆಲಸ ಮಾಡ್ತಿದ್ದೀರಾ? ಇಷ್ಟೊಂದು ಪ್ರಕರಣಗಳು ನಡೆದರೂ ಆರಾಮಾಗಿ ಇದ್ದೀರಾ. ಆರೋಪಿಗಳ ಬಂಧನ ಯಾಕೆ ಆಗಿಲ್ಲ ಎಂದು ಚಳಿ ಬಿಡಿಸಿದರು.

    ಜೆಡಬ್ಲ್ಯು ಮ್ಯಾರಿಯೇಟ್ ಮಾಲೀಕ ದೀಪಕ್ ರಹೇಜ ಮತ್ತು ಪುತ್ರ ಆದಿತ್ಯ ರಹೇಜ ರಕ್ಷಣೆಗೆ ಸಂಜಯ್‍ನಗರ ಪೊಲೀಸರು ನಿಂತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 2014ರಲ್ಲಿ ಈ ಸಂಬಂಧ ವಂಚನೆ ಪ್ರಕರಣ ದಾಖಲಾಗಿತ್ತು. ಅಪ್ಪ-ಮಗ ಸೇರಿ ಸಾರ್ವಜನಿಕರಿಗೆ ಒಂದು ಕೋಟಿ ವಂಚನೆ ಮಾಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಇಬ್ಬರನ್ನೂ ಬಂಧಿಸಿಲ್ಲ. ಸಾಕಷ್ಟು ಬಾರಿ ವಾರೆಂಟ್ ಜಾರಿಯಾದರೂ ಬಂಧನವಾಗಿಲ್ಲ ಎಂದು ಗುಡುಗಿದರು.

    ಉಮೇಶ್ ನೋಡಿ ಇದು ಸರಿಯಾಗಿ ತನಿಖೆಯಾಗಬೇಕು. ಕೋರ್ಟ್ ನಿಂದ ಉದ್ಘೋಷಿತ ಅಪರಾಧಿ ಅಂತ ಸೂಚಿಸಿದರೂ ಆರೋಪಿಗಳನ್ನು ಹಿಡಿದಿಲ್ಲ. ಯಾರ್ಯಾರು ಸಿಬ್ಬಂದಿ ಜೆಡಬ್ಲ್ಯು ಮ್ಯಾರಿಯೇಟ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಅವರಿಗೆ ಸೂಚನೆ ನೀಡಿದರು.

    ಈ ವೇಳೆ ಅಲೋಕ್ ಕುಮಾರ್ ಅವರು, ಸಂಜಯನಗರ ಮೋಸ್ಟ್ ವಾಂಟೆಡ್ ರೌಡಿ ಯಾರು ಎಂದು ಪ್ರಶ್ನಿಸಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಸಂಜಯ್‍ನಗರ ಸಿಬ್ಬಂದಿ, ಶರಣಪ್ಪ ಸರ್ ಅಂತ ಉತ್ತರಿಸಿದರು. ಆಗ ಅಲೋಕ್ ಕುಮಾರ್ ಅವರು, ಯಾರಪ್ಪ ನೀನು? ದೊಡ್ಡ ರೌಡಿಯಾ? ಯಾವ ಊರು, ಸಂಜಯ್‍ನಗರದ ದಾದಾ ಆಗ್ಬೇಕಾ ನೀನು, ಎಷ್ಟು ವಯಸ್ಸು ಎಂದು ರೌಡಿ ಶರಣಪ್ಪಗೆ ಕೇಳಿದರು.

    ಅಲೋಕ್ ಕುಮಾರ್ ಅವರ ಖಡಕ್ ಪ್ರಶ್ನೆಗಳಿಗೆ ನಡುಗುತ್ತಲೇ ಉತ್ತರ ನೀಡಿದ ರೌಡಿ ಶರಣಪ್ಪ, ಸರ್ ನಾನು ಗುಲ್ಬರ್ಗ ಮೂಲದವನು. ಆಟೋ ಓಡಿಸುತ್ತಿದ್ದೇನೆ, 19 ವಯಸ್ಸು ಸರ್ ಎಂದು ಹೇಳಿದ. ಆಗ ಅಲೋಕ್ ಕುಮಾರ್ ಅವರು, ನಾನು ಗುಲ್ಬರ್ಗದಲ್ಲಿ ಕೆಲಸ ಮಾಡಿದ್ದೇನೆ. ಒಳ್ಳೆ ರೀತಿ ಬದುಕಿ. ಇಲ್ಲ ಗೊತ್ತಲ್ಲ ಎಂದು ರೌಡಿಶೀಟರ್ ಗೆ ವಾರ್ನಿಂಗ್ ಕೊಟ್ಟರು. ಬಳಿಕ, ಇವನನ್ನ ಕರ್ಕೊಂಡ್ ಹೋಗಿ ಕಟಿಂಗ್ ಶೇವಿಂಗ್ ಮಾಡಿಸಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

  • ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಗಂಧದ ಮರ ಕದ್ದ ಕಳ್ಳರು!

    ಪೊಲೀಸ್ ಕಮೀಷನರ್ ಕಚೇರಿ ಪಕ್ಕದಲ್ಲೇ ಗಂಧದ ಮರ ಕದ್ದ ಕಳ್ಳರು!

    ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಚೇರಿ ಕೂಗಳತೆ ದೂರದಲ್ಲೇ ಗಂಧದ ಮರಗಳ ಕಳ್ಳತನ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಇನ್‍ಫ್ಯಾಂಟ್ರಿ ರಸ್ತೆಯಲ್ಲಿರುವ ಕಮೀಷನರ್ ಕಚೇರಿ ಪಕ್ಕದಲ್ಲೇ ಇರುವ ಎಂಬೆಸ್ಸಿ ಅಪಾಟ್ರ್ಮೆಂಟ್‍ನಲ್ಲಿ ಗಂಧದ ಮರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಇದೇ ತಿಂಗಳ 21 ರಂದು ಘಟನೆ ನಡೆದಿದ್ದು, ಈ ವೇಳೆ ಮಚ್ಚು ದೊಣ್ಣೆಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿರುವ ಕಳ್ಳರು ಗಂಧದ ಮರವನ್ನು ಕಳ್ಳತನ ಮಾಡಿದ್ದಾರೆ.

    ಬೆಳಗಿನ ಜಾವ ಸುಮಾರು 3.55 ಸಮಯದಲ್ಲಿ ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಬಂದ ನಾಲ್ಕು ಕಳ್ಳರು ಅಪಾರ್ಟ್‍ಮೆಂಟ್ ಕಾಂಪೌಂಡ್ ಜಿಗಿದು ಒಳಪ್ರವೇಶ ಮಾಡಿದ್ದಾರೆ. ಅಲ್ಲದೇ ಈ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿ ಸ್ಥಳದಲ್ಲಿದ್ದ ಶ್ರೀಗಂಧ ಮರವನ್ನು ಯಂತ್ರದಿಂದ ತುಂಡರಿಸಿ ಕಳವು ಮಾಡಿದ್ದಾರೆ.

    ಘಟನೆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 10 ನೇ ಮಹಡಿ ಮೇಲಿಂದ ಜಿಗಿದು ಪೊಲೀಸ್ ಕಮಿಷನರ್ ಆತ್ಮಹತ್ಯೆ!

    10 ನೇ ಮಹಡಿ ಮೇಲಿಂದ ಜಿಗಿದು ಪೊಲೀಸ್ ಕಮಿಷನರ್ ಆತ್ಮಹತ್ಯೆ!

    ನವದೆಹಲಿ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಗರದ ಪೊಲೀಸ್ ಕಮಿಷನರ್‍ರೊಬ್ಬರು ಇಂದು ದೆಹಲಿಯ ಪೊಲೀಸ್ ಮುಖ್ಯ ಕಚೇರಿಯ 10 ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಪ್ರೇಮ್ ಬಲ್ಲಾ (53) ಆತ್ಮಹತ್ಯೆ ಮಾಡಿಕೊಂಡಿರುವ ಪೊಲೀಸ್ ಅಧಿಕಾರಿ. ಪ್ರೇಮ್ ಬಲ್ಲಾ ಅವರು ದೆಹಲಿಯ ಮುಖ್ಯ ಕಚೇರಿಯಲ್ಲಿ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರೇಮ್ ಬಲ್ಲಾ ಚಿಕಿತ್ಸೆಗೆಂದು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 5 ದಿನಗಳ ಹಿಂದೆಯಷ್ಟೆ ಮತ್ತೆ ಕೆಲಸಕ್ಕೆ ಹಿಂದಿರುಗಿದ್ದ ಕಮಿಷನರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾನಸಿಕವಾಗಿ ಕುಗ್ಗಿದ್ದ ಪ್ರೇಮ್ ಬಲ್ಲಾ ಇಂದು ಪೊಲೀಸ್ ಮುಖ್ಯ ಕಚೇರಿ ಕಟ್ಟಡದ 10 ನೇ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ್ ಅವರು ಕಟ್ಟಡದಿಂದ ಬಿದ್ದ ತಕ್ಷಣವೇ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ.

    ಪ್ರೇಮ್ ಬಲ್ಲಾ ಅವರು ಪೊಲೀಸ್ ಮುಖ್ಯಪೇದೆಯಾಗಿ 1986 ರಲ್ಲಿ ಪೊಲೀಸ್ ಇಲಾಖೆಯನ್ನು ಸೇರಿದ್ದರು. ನಂತರ 2016 ರಲ್ಲಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದರು. ಪ್ರೇಮ್ ಬಲ್ಲಾ ಅವರು ದೆಹಲಿ ಪೊಲೀಸ್ ಇಲಾಖೆಯಲ್ಲಿ ಓರ್ವ ಹಿರಿಯ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv