– ಸುರಕ್ಷ ಆ್ಯಪ್ ಬಳಸಲು ಸೂಚನೆ
ಬೆಂಗಳೂರು: ಪಶು ವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದು, ಯಾರೇ ಕರೆ ಮಾಡಿದರೂ ಕೇವಲ ಏಳು ಸೆಕೆಂಡ್‍ನಲ್ಲಿ ಪೊಲೀಸರು ಉತ್ತರಿಸುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.
ಹೈದ್ರಾಬಾದ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಸಹಾಯವಾಣಿ 100ಕ್ಕೆ ಕರೆ ಮಾಡಿ. ಕರೆ ಮಾಡಿದ ಏಳು ಸೆಕೆಂಡ್ ನಲ್ಲಿ ಸ್ವೀಕರಿಸಿ, ನಿಮ್ಮ ಸಮಸ್ಯೆ ಆಲಿಸುತ್ತಾರೆ. ಬೆಂಗಳೂರಿಗರು ಮಾತ್ರವಲ್ಲ ಹೊರಗಿನಿಂದ ಬಂದವರು ಸಹ ಕರೆ ಮಾಡಿ ದೂರು ನೀಡಿದರೆ ತಕ್ಷಣ ಸ್ಪಂದಿಸಲಾಗುವುದು. ಈ ಕುರಿತು ನಾನು ಶೇ.100ರಷ್ಟು ಭರವಸೆ ನೀಡುತ್ತೇನೆ. ಕರೆ ಮಾತ್ರವಲ್ಲ ಸಂದೇಶವನ್ನು ಸಹ ಕಳುಹಿಸಬಹುದು ಎಂದರು.
ಕರೆ ಮಾಡಿದ ಕೆಲವೇ ಸೆಕೆಂಡ್‍ನಲ್ಲಿ ಉತ್ತರಿಸುತ್ತಾರೆ. ಮಾತ್ರವಲ್ಲದೆ ಕೆಲವೇ ನಿಮಿಷಗಳಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸುತ್ತಾರೆ. ಬೆಂಗಳೂರಿಗರು ಭಯ ಪಡುವ ಅಗತ್ಯವಿಲ್ಲ. ಸಾರ್ವಜನಿಕ ಪ್ರತಿಯೊಂದು ಕರೆಗೆ ನಾವು ಸ್ಪಂದಿಸುತ್ತೇವೆ. ಸಾರ್ವಜಕರು ಈ ಕ್ಷಣದಿಂದಲೆ ಕರೆ ಮಾಡಬಹುದು. ಕರೆ ಮಾಡಿದ ಒಂಬತ್ತು ನಿಮಿಷದಲ್ಲಿ ನಾವು ಸ್ಥಳಕ್ಕೆ ಬರುತ್ತೇವೆ ಎಂದು ತಿಳಿಸಿದರು.
ಮಹಿಳೆಯರು ‘ಸುರಕ್ಷ’ ಆಪ್ ಬಳಸಬೇಕು, ಕೇವಲ ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಈ ಆ್ಯಪ್ ಬಳಸಬೇಕು. ನಿಮಗೆ ಸಮಸ್ಯೆ ಆದಾಗ ಆಪ್ ನಿಮಗೆ ಸಹಾಯ ಮಾಡುತ್ತದೆ. ಕೇವಲ ಒಂದು ಬಟನ್ ಒತ್ತುವುದರಿಂದ ಪೊಲೀಸರು ನೀವಿದ್ದ ಸ್ಥಳಕ್ಕೆ ಬರುತ್ತಾರೆ. ಅಲ್ಲದೆ ನಿಮ್ಮ ಮೊಬೈಲ್ ಕ್ಯಾಮೆರಾ ಆನ್ ಅಗುತ್ತೆ, ನಿಮಗೆ ಏನಾಗಿದೆ ಎಂಬುದು ಕಂಟ್ರೋಲ್ ರೂಮ್ ನಲ್ಲಿರುವವರಿಗೆ ತಿಳಿಯುತ್ತದೆ. ಎಲ್ಲರೂ ಇದನ್ನು ಬಳಸಬೇಕು ಎಂದರು.

26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ.

ರಿಮ್ಯಾಂಡ್ ಹೋಂನಲ್ಲಿ ಆರೋಪಿಗಳಿಂದ ಪೊಲೀಸರು ಸತ್ಯ ಕಕ್ಕಿಸುತ್ತಿದ್ದು, ತೆಲಂಗಾಣ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಂದ ಮೇಲೂ ಪಾಪಿಗಳು ಶವವನ್ನೂ ಬಿಡದೆ ಅತ್ಯಾಚಾರಗೈದಿದ್ದರು ಎನ್ನುವ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ದಿನ ಕಳೆದಂತೆ ಆರೋಪಿಗಳು ಪೊಲೀಸರ ಬಳಿ ಪಶುವೈದ್ಯೆಗೆ ಯಾವ ರೀತಿಯಲ್ಲೆಲ್ಲ ಹಿಂಸೆಕೊಟ್ಟು ಕೊಲೆ ಮಾಡಲಾಯ್ತು ಎನ್ನುವ ಸತ್ಯವನ್ನು ಬಾಯಿಬಿಡುತ್ತಿದ್ದಾರೆ. ಪ್ರಕರಣವನ್ನು ಪಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಬೇಕೆಂದು ಹೋರಾಟ ನಡೆಸಲಾಗುತ್ತಿದ್ದು, ವಿವಿಧ ರಾಜಕೀಯ ನಾಯಕರು ಸಹ ಈ ಕುರಿತು ಒತ್ತಾಯಿಸುತ್ತಿದ್ದಾರೆ.