Tag: Polali

  • ರಾಮಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗಲು ಪೊಳಲಿಯಲ್ಲಿ ವಿಶೇಷ ಪೂಜೆ

    ರಾಮಮಂದಿರ ನಿರ್ವಿಘ್ನವಾಗಿ ನಿರ್ಮಾಣವಾಗಲು ಪೊಳಲಿಯಲ್ಲಿ ವಿಶೇಷ ಪೂಜೆ

    ಮಂಗಳೂರು: ಅಯೋಧ್ಯೆಯಲ್ಲಿ ಇಂದು ಶ್ರೀರಾಮಚಂದ್ರನ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರೆವೇರಿಸಿದ್ದಾರೆ. ಹಾಗೆಯೇ ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಶಾಸಕರ ಜೊತೆಗೆ ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿಯವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾಮಮಂದಿರದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆದು ಆದಷ್ಟು ಬೇಗ ದೇಶದ ರಾಮಭಕ್ತರಿಗೆ ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆಯುವಂತಾಗಲಿ ಎಂದು ಪ್ರಾರ್ಥಿಸಲಾಯಿತು.

    ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡ ವೆಂಕಟೇಶ್ ನಾವಡ, ತಾ.ಪಂ ಸದಸ್ಯ ಯಶವಂತ ಪೊಳಲಿ, ಯುವ ಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್, ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ, ಲೋಕೇಶ್ ಭರಣಿ, ನಂದರಾಮ್ ರೈ, ಸುಕೇಶ್ ಚೌಟ, ವಾಮನ ಆಚಾರ್ಯ ಉಪಸ್ಥಿತರಿದ್ದರು.

  • ಮೋದಿ ಮತ್ತೆ ಪ್ರಧಾನಿ- ಮಂಗ್ಳೂರು ದಂಪತಿಯಿಂದ ಪೊಳಲಿಗೆ ಕಾಲ್ನಡಿಗೆ

    ಮೋದಿ ಮತ್ತೆ ಪ್ರಧಾನಿ- ಮಂಗ್ಳೂರು ದಂಪತಿಯಿಂದ ಪೊಳಲಿಗೆ ಕಾಲ್ನಡಿಗೆ

    ಮಂಗಳೂರು: ಮೋದಿ ಮತ್ತೆ ಪ್ರಧಾನಿಯಾಗಲು ಅಭಿಮಾನಿಗಳು ವಿವಿಧ ರೀತಿಯ ಹರಕೆ ಹೊತ್ತುಕೊಂಡಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿನ ದಂಪತಿ ಮೋದಿ ಪ್ರಧಾನಿಯಾಗಿದ್ದಕ್ಕಾಗಿ ಕಾಲ್ನಡಿಗೆಯಲ್ಲಿ 28 ಕಿಮೀ ಸಾಗಿ ದೇಗುಲ ದರ್ಶನ ಮಾಡಿದ್ದಾರೆ.

    ಮಂಗಳೂರಿನ ಶಕ್ತಿನಗರದ ರಾಜೇಶ್ ದಂಪತಿ ಈ ಹರಕೆ ಹೊತ್ತವರಾಗಿದ್ದು, ನಗರದ ಹೊರವಲಯದಲ್ಲಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಾನುವಾರ ಪಾದಯಾತ್ರೆ ಮಾಡಿದ್ದಾರೆ. ತಲೆಯಲ್ಲಿ ಅಕ್ಕಿಯ ಚೀಲ, ಕೈಯಲ್ಲಿ ಸೀಯಾಳ ಹಿಡಿದು ರಸ್ತೆಯುದ್ದಕ್ಕೂ ಪಾದಯಾತ್ರೆ ಮಾಡಿದ್ದಾರೆ.

    ರಾಜೇಶ್ ಜೊತೆ ಪತ್ನಿ ಮತ್ತು ಮಗಳು ಸಾಥ್ ನೀಡಿದ್ದಾರೆ. ಪೊಳಲಿ ದೇವಸ್ಥಾನಕ್ಕೆ ತೆರಳಲು ರಸ್ತೆ ಇದ್ದರೂ, ಗುಡ್ಡ, ಬೆಟ್ಟಗಳ ರೀತಿಯ ಏರು ತಗ್ಗುಗಳಿವೆ. ಇಂಥದ್ದರಲ್ಲಿ ತಲೆಯಲ್ಲಿ ಭಾರ ಹೊತ್ತುಕೊಂಡು ರಾಜೇಶ್ ಕಷ್ಟಪಟ್ಟು ಹರಕೆ ತೀರಿಸಿದ್ದು ವಿಶೇಷವಾಗಿತ್ತು.

  • ಸ್ವಯಂಸೇವಕಿಯಾಗಿ ದೇವಸ್ಥಾನದಲ್ಲಿ ತರಕಾರಿ ಹೆಚ್ಚಿದ ಶೋಭಾ ಕರಂದ್ಲಾಜೆ

    ಸ್ವಯಂಸೇವಕಿಯಾಗಿ ದೇವಸ್ಥಾನದಲ್ಲಿ ತರಕಾರಿ ಹೆಚ್ಚಿದ ಶೋಭಾ ಕರಂದ್ಲಾಜೆ

    ಮಂಗಳೂರು: ನಗರದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂತಿಮ ದಿನದಂದು ಸಂಸದೆ ಶೋಭಾ ಕರಂದ್ಲಾಜೆ ಸ್ವಯಂಸೇವಕರಾಗಿ ಕಾಣಿಸಿಕೊಂಡಿದ್ದಾರೆ.

    ಲೋಕಸಭೆ ಚುನಾವಣೆಯ ಅವಸರದ ಮಧ್ಯೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಅವರು ಅಲ್ಲಿನ ಪಾಕಶಾಲೆಗೆ ಭೇಟಿ ನೀಡಿ ಸ್ವಯಂಸೇವಕರ ಜೊತೆ ಬೆರೆತರು. ಬಳಿಕ ತರಕಾರಿ ಹೆಚ್ಚುತ್ತಿದ್ದ ಮಹಿಳೆಯರ ಜೊತೆಗೆ ತಾವೇ ತರಕಾರಿಗಳನ್ನು ಹೆಚ್ಚಿದರು. ಕೆಲಹೊತ್ತು ಮಹಿಳೆಯರ ಜೊತೆ ಹರಟಿದ ಶೋಭಾ ಮತ್ತವರ ತಂಡವು ಬಳಿಕ ದೇವರ ದರ್ಶನ ಮಾಡಿ, ಉಪಹಾರ ಸೇವಿಸಿ ನಿರ್ಗಮಿಸಿದರು.

    ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಇಂದು ಕೊನೆಯ ದಿನ. ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಅವರು ಪೊಳಲಿ ಕ್ಷೇತ್ರಕ್ಕೆ ಮೊನ್ನೆ ಭೇಟಿ ನೀಡಿದ್ದರು. ಆಗ ಸಂಸದೆ ಶೋಭಾ ಅವರು ಕೂಡ ಇದ್ದರು. ಆದರೆ ಶೋಭಾ ಕರಂದ್ಲಾಜೆ ಅವರು ಇಂದು ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ರಾಜರಾಜೇಶ್ವರಿಯ ದರ್ಶನ ಭಾಗ್ಯ ಪಡೆದರು.

    ಬ್ರಹ್ಮಕಲಶೋತ್ಸವದ ನಿಮಿತ್ತ ದಿನವೂ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪಾಕಶಾಲೆಯಲ್ಲಿ ನಿರಂತರವಾಗಿ ಊಟ, ಉಪಹಾರ ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ವೇಳೆ ಸಂಸದೆ ಶೋಭಾ ಅವರು ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದು ಗಮನ ಸೆಳೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv