Tag: Pod Taxi

  • ಇನ್ಮುಂದೆ ಮುಂಬೈ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ – ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್!

    ಇನ್ಮುಂದೆ ಮುಂಬೈ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ – ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್!

    ಮಹಾನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದಿನೇ ದಿನೇ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಈ ಟ್ರಾಫಿಕ್ ನಿಯಂತ್ರಣಕ್ಕಾಗಿ ಹೊಸ ಹೊಸ ರೀತಿಯ ಯೋಜನೆಗಳನ್ನು ಕೂಡ ಹಾಕಿಕೊಳ್ಳಲಾಗುತ್ತದೆ. ಉದಾಹರಣೆಗೆ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. 

    ಹೌದು, ದೇಶದ ವಿವಿಧೆಡೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಮೆಟ್ರೋ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹೀಗಿರುವಾಗ ಮುಂಬೈ ಮಹಾನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕಾಗಿ ಪಾಡ್ ಟ್ಯಾಕ್ಸಿ (Pod Taxi) ಜಾರಿಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಇತ್ತೀಚಿಗೆ ಮಾತನಾಡಿ, ಬುಲೆಟ್ ರೈಲು ನಿಲ್ದಾಣ ಮತ್ತು ಹೈಕೋರ್ಟ್ ಮಧ್ಯ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರ್ಲಾ ಮತ್ತು ಬಾಂಧ್ರಾ  ರೈಲು ನಿಲ್ದಾಣಗಳ ಮಧ್ಯೆ ಪಾಡ್ ಟ್ಯಾಕ್ಸಿ ನಿರ್ಣಾಯಕ ಕಾರ್ಯ ನಿರ್ವಹಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈ ನಗರದಾದ್ಯಂತ ಈಗಾಗಲೇ ಟ್ರಾಫಿಕ್ ನಿಯಂತ್ರಣಕ್ಕಾಗಿ ಹಾಗೂ ಸಾರಿಗೆ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಪಾಡ್ ಟ್ಯಾಕ್ಸಿ ಸೇವೆಯನ್ನ ಪರಿಚಯಿಸಲಾಗುವುದೆಂದು ದೇವೇಂದ್ರ ಫಡ್ನವೀಸ್ (Devendra Fadnavis) ತಿಳಿಸಿದ್ದಾರೆ. 

    ಇತ್ತೀಚಿನ ದಿನಗಳಲ್ಲಿ ಮುಂಬೈ ಹೈಕೋರ್ಟ್ ಹಾಗೂ ಬುಲೆಟ್ ರೈಲು ನಿಲ್ದಾಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕುರ್ಲಾ ಹಾಗೂ ಬಾಂಧ್ರಾ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಈ ಹಿನ್ನೆಲೆ  ಪಾಡ್ ಟ್ಯಾಕ್ಸಿ ಸೇವೆಯಿಂದ ಈ ನಿಲ್ದಾಣಗಳ ನಡುವಿನ ಜನಸಂದಣಿ ಕಡಿಮೆ ಹಾಗೂ ಸೇವೆ ಕಲ್ಪಿಸಲು ಸಹಾಯಕವಾಗುತ್ತದೆ.

    ಬಾಂದ್ರಾ ಮತ್ತು ಕುರ್ಲಾ ರೈಲು ನಿಲ್ದಾಣವು ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈ ಸ್ಪೀಡ್ ರೈಲು ಕಾರಿಡಾರ್ ನ ಆರು ಪ್ಲಾಟ್ಫಾರ್ಮ್ ಗಳನ್ನು ಹೊಂದಿರುವ ಭೂಗತ ರೈಲು ನಿಲ್ದಾಣವಾಗಿದೆ. ಅಲ್ಲದೆ ಮುಂಬೈನಲ್ಲಿ ಅಸ್ತಿತ್ವದಲ್ಲಿರುವ ಕೋರ್ಟ್ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಪೂರ್ವ ಬಾಂಧ್ರಾದಲ್ಲಿ 30 ಎಕರೆಗಳಲ್ಲಿ ಹೊಸ ಹೈಕೋರ್ಟ್ ನಿರ್ಮಿಸಲು ಯೋಜಿಸಲಾಗಿದೆ. ಹೀಗಾಗಿ ಇದೀಗ ಯೋಜಿಸಲಾಗಿರುವ ಪಾಡ್ ಟ್ಯಾಕ್ಸಿ ಸೇವೆಯನ್ನು ಬಾಂದ್ರಾ ಹಾಗೂ ಕುರ್ಲಾ ನಡುವೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗುವುದು ಮತ್ತು ಪಾಡ್ ಟ್ಯಾಕ್ಸಿ ಸೇವೆ ಸೇರಿದಂತೆ ಮುಂಬೈನ ಎಲ್ಲಾ ಸಾರಿಗೆ ವಿಧಾನಗಳಿಗೂ ಒಂದೇ ಕಾರ್ಡ್ ಜಾರಿಗೆ ತರಲು ನಿರ್ಧರಿಸಲಾಗಿದೆ.

    • ಪಾಡ್ ಟ್ಯಾಕ್ಸಿ ಹೇಗಿರುತ್ತೆ? 

    ಇದು ತಡೆರಹಿತ ಸಂಚಾರ ವ್ಯವಸ್ಥೆಯಾಗಿದ್ದು, ಚಾಲಕ ರಹಿತವಾಗಿರುತ್ತದೆ. ಇದು ಮೆಟ್ರೋರೀತಿಯಲ್ಲಿಯೇ ಕಾರ್ಯ ನಿರ್ವಹಿಸಲಿದ್ದು, ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿರುತ್ತದೆ. ಜೊತೆಗೆ ಇದು ಚಿಕ್ಕದೊಂದು ವಾಹನವಾಗಿದ್ದು, ಪ್ರಯಾಣದಲ್ಲಿ ಎರಡರಿಂದ ಆರು ಜನರನ್ನು ಮಾತ್ರ ಕೊಂಡೊಯ್ಯಲು ಅವಕಾಶವಿರುತ್ತದೆ. ಮೆಟ್ರೋರೀತಿಯಲ್ಲಿ ಹಳಿಗಳ ಮೇಲೆ ಇದು ಸಂಚರಿಸುತ್ತದೆ. ಇದು ಒಂದು ಖಾಸಗಿ ಟ್ಯಾಕ್ಸಿ ಸೇವೆಯಂತೆ ಕಾರ್ಯನಿರ್ವಹಿಸಲಿದ್ದು, ದೂರದ ಸ್ಥಳಗಳಿಗೆ ಕಡಿಮೆ ಸಮಯದಲ್ಲಿ ಕೊಂಡೊಯುತ್ತದೆ.

    • ಇದರ ಲಕ್ಷಣಗಳೇನು? 

    ಮುಖ್ಯವಾಗಿ ಪ್ರಯಾಣಿಕರು ತಮಗೆ ಟ್ಯಾಕ್ಸಿಯ ಅಗತ್ಯವಿದ್ದಾಗ ಈ ಪಾಡ್ ಟ್ಯಾಕ್ಸಿಗೆ ಕರೆ ಮಾಡಬಹುದು. ಕರೆ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ಟ್ಯಾಕ್ಸಿ ಪ್ರಯಾಣಿಕರನ್ನು ಕೊಂಡೊಯುತ್ತದೆ. 

    ಇದು ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು, ಜಿಪಿಎಸ್ ಹಾಗೂ ಕಂಪ್ಯೂಟರ್ ವ್ಯವಸ್ಥೆಗಳನ್ನ ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ. ಪಾಡ್ ಟ್ಯಾಕ್ಸಿಗೆ ಪ್ರತ್ಯೇಕವಾದ ಹಳಿ ಇರಲಿದ್ದು, ಮೆಟ್ರೋದಂತೆ ಎತ್ತರದಲ್ಲಿ ಚಲಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. 

    • ಟ್ರಾಫಿಕ್ ನಿಯಂತ್ರಣ ಹೇಗೆ? 

    ಪಾಡ್ ಟ್ಯಾಕ್ಸಿ ಸಂಚರಿಸಲು ವಿಭಿನ್ನ ಹಳಿಗಳನ್ನ  ಹೊಂದಿರುತ್ತದೆ. ಉದಾಹರಣೆಗೆ ಖಾಸಗಿ ಟ್ಯಾಕ್ಸಿ ಅಥವಾ ಇನ್ನಿತರ ಯಾವುದೇ ವಾಹನವನ್ನು ನೀವು ಬುಕ್ ಮಾಡಿದಾಗ ಆಗ ಸಂಚಾರದಟ್ಟಣೆಯ ಸಮಸ್ಯೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಈ  ಪಾಡ್ ಟ್ಯಾಕ್ಸಿಗಳು ಈ ಸಮಸ್ಯೆನ ಬಗೆಹರಿಸುವುದರ ಜೊತೆಗೆ ಇದು ಪ್ರವಾಸಿ ತಾಣಗಳಿಗೂ ಕೊಂಡೊಯ್ಯುತ್ತದೆ. ವಿಮಾನ ನಿಲ್ದಾಣ, ಪ್ರವಾಸಿ ತಾಣಗಳಂತಹ ಜನದಟ್ಟಣೆಯ ಪ್ರದೇಶದಲ್ಲಿ ಈ ಟ್ಯಾಕ್ಸಿ ಸೇವೆಗಳು ತುಂಬಾ ಅನುಕೂಲಕರವಾಗಲಿದೆ ಹಾಗೂ ವೆಚ್ಚಕ್ಕೆ ಹೋಲಿಸಿದರೆ ಇದು ಒಳ್ಳೆಯದು ಎನ್ನಲಾಗುತ್ತದೆ. 

    ಈ ಪಾಡ್ ಟ್ಯಾಕ್ಸಿ ಸೇವೆಯನ್ನು ಮೊದಲ ಬಾರಿಗೆ ಯುಎಇ ನಗರದ ಮಸ್ದಾರ್ ಎಂಬಲ್ಲಿ ಮೊದಲು ಬಳಸಲಾಯಿತು. ಯುನೈಟೆಡ್ ಕಿಂಗ್ಡಮ್ ನ ವಿಮಾನ ನಿಲ್ದಾಣದಲ್ಲಿ, ಟರ್ಮಿನಲ್ ಗಳಲ್ಲಿ ಹಾಗೂ ಪಾರ್ಕಿಂಗ್ ನಡುವೆ ಪ್ರಯಾಣಿಕರ ಸಂಚಾರಕ್ಕೆ ಈ ವ್ಯವಸ್ಥೆಯನ್ನು ಬಳಸಲಾಗುತ್ತಿತ್ತು. 

    ಇನ್ನು ಈಗಾಗಲೇ ಅಮೃತ್ಸರದ ಸುವರ್ಣ ದೇವಾಲಯದ ಬಳಿ ಪಾಡ್ ಟ್ಯಾಕ್ಸಿ ಯೋಜನೆ ಜಾರಿಗೆ ತರುವ ಕುರಿತು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಬೆಂಗಳೂರಿನಲ್ಲಿ ಓಡಲಿದೆ ಸಚಿವ ಜಾರ್ಜ್ ಅಂಡ್ ಕಂಪೆನಿಯ ಪಾಡ್ ಟ್ಯಾಕ್ಸಿ!

    ಬೆಂಗಳೂರಿನಲ್ಲಿ ಓಡಲಿದೆ ಸಚಿವ ಜಾರ್ಜ್ ಅಂಡ್ ಕಂಪೆನಿಯ ಪಾಡ್ ಟ್ಯಾಕ್ಸಿ!

    ಬೆಂಗಳೂರು: ಬಿಬಿಎಂಪಿಯು ಪಾಡ್ ಟ್ಯಾಕ್ಸಿ (ಪರ್ಸನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್-ಪಿಆರ್‍ಟಿಎಸ್) ಯೋಜನೆಯ ಟೆಂಡರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಎಂಬೆಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಸ್ಮಾರ್ಟ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರೈವೇಟ್ (ಎಸ್‍ಪಿಆರ್ ಟಿಎಸ್) ಲಿಮಿಟೆಡ್ ಕಂಪೆನಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

    ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಟ್ರಿನಿಟಿ ಸರ್ಕಲ್‍ನಿಂದ ವೈಟ್‍ಫೀಲ್ಡ್ ಹಾಗೂ ಮಾನ್ಯತಾ ಟೆಕ್ ಪಾರ್ಕ್ ನಿಂದ ಕೆ.ಆರ್ ಪುರದವರೆಗೆ ಪಾಡ್ ಟ್ಯಾಕ್ಸಿ ಸೇವೆ ನೀಡುವ ಕುರಿತು ಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದಿತ್ತು. ಆದರೆ ಈ ಟೆಂಡರ್‍ಗೆ ಎಸ್‍ಪಿಆರ್ ಟಿಎಸ್ ಕಂಪನಿ ಮಾತ್ರ ಅರ್ಜಿ ಸಲ್ಲಿಸಿದ ಕಾರಣ ಈ ಪಾಡ್ ಟ್ಯಾಕ್ಸಿಯ ನಿರ್ಮಾಣ ಯೋಜನೆಯ ಗುತ್ತಿಗೆ ಸಿಕ್ಕಿದೆ.

    ಜಾರ್ಜ್ ಸಹಭಾಗಿತ್ವದ ಎಂಬಸ್ಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಎಸ್‍ಪಿಆರ್ ಟಿಎಸ್ 7.5 ಕೋಟಿ ಭದ್ರತಾ ಠೇವಣಿಯನ್ನು ಜನವರಿ 10 ರಂದು ಇಟ್ಟಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ 5 ಕೋಟಿ ರೂ.ಗಳನ್ನು ಠೇವಣಿ ಇಡಲು ಬಿಬಿಎಂಪಿ ಬಿಡ್ಡಿಂಗ್ ಕಂಪನಿಗಳಿಗೆ ಷರತ್ತು ವಿಧಿಸಿತ್ತು. ಟೆಂಡರ್ ಪಡೆಯಲು ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವವಾಗಿತ್ತು.

    ಟೆಂಡರ್ ಪಡೆದಿರುವ ದೆಹಲಿ ಮೂಲದ ಎಸ್‍ಪಿಆರ್ ಟಿಎಸ್ ಕಂಪೆನಿ ಲಂಡನ್ ಹೀಥ್ರೂ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ ನೀಡುತ್ತಿದೆ. ಈ ಕಂಪನಿಯ ನಿರ್ದೇಶಕರಾದ ಧ್ರುವ್ ಮನೋಜ್ ಪಟೇಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಜನವರಿ 10 ರಂದು ನಾವು ಟೆಂಡರ್‍ಗೆ ಅರ್ಜಿ ಸಲ್ಲಿಸಿದ್ದೇವೆ. ಬಿಬಿಎಂಪಿ ರೂಪಿಸಿರುವ ನಿಯಮಗಳ ಪ್ರಕಾರ ಸಮಗ್ರ ಯೋಜನಾ ವರದಿಯನ್ನು ಸಲ್ಲಿಸಿದ್ದು, ಕ್ಯಾಬಿನೆಟ್ ಚರ್ಚೆಯಾಗಿ ಅನುಮತಿ ನೀಡಿದ 6 ತಿಂಗಳ ಒಳಗಡೆ ಕೆಲಸ ಪ್ರಾರಂಭಿಸುತ್ತೆವೆ. ಅಲ್ಲದೇ ಯೋಜನೆ ಆರಂಭವಾದ 30 ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುತ್ತೆವೆ ಎಂದು ತಿಳಿಸಿದರು.

    ಯೋಜನೆ ಜಾರಿ ಸಂಬಂಧ ಹೆಚ್ಚಿನ ಆಸಕ್ತಿ ತೋರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಧೃವ ಮನೋಜ್ ಪಟೇಲ್ ಧನ್ಯವಾದಗಳನ್ನು ಹೇಳಿದರು.

    ಪ್ರತಿ ಕಿಲೋಮೀಟರ್‍ಗೆ 50 ಕೋಟಿ ವೆಚ್ಚವಾಗುವ ಈ ಯೋಜನೆಯನ್ನು ಕಂಪನಿ ತನ್ನ ಟೆಕ್‍ಪಾರ್ಕ್‍ಗೆ ಅನುಕೂಲ ಆಗುವ ರೀತಿಯಲ್ಲಿ ಪಾಡ್ ಟ್ಯಾಕ್ಸಿಯ ಮಾರ್ಗ ಬದಲಾವಣೆ ಮಾಡಿದೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ ಇತ್ತೀಚೆಗೆ ಸಚಿವ ಜಾರ್ಜ್ ಅವರ ಮಗನ ಕಂಪನಿಗೆ ತೊಂದರೆ ಆಗುತ್ತೆ ಎಂದು ಬಿಬಿಎಂಪಿ ಸ್ಕೈವಾಕ್ ನಿರ್ಮಾಣವನ್ನೇ ಬೇರೆಡೆ ಸ್ಥಳಾಂತರ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈಗ ಸಚಿವ ಜಾರ್ಜ್‍ಗಾಗಿ ಸಹಭಾಗಿತ್ವದ ಕಂಪನಿಗೆ ಪಾಡ್ ಟ್ಯಾಕ್ಸಿ ಗುತ್ತಿಗೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಇದನ್ನೂ ಓದಿ: ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್

    ಟೆಂಡರ್ ಸಲ್ಲಿಕೆಗೆ ಬಿಬಿಎಂಪಿ ಆರಂಭದಲ್ಲಿ ಡಿಸೆಂಬರ್ 30 ಕೊನೆಯ ದಿನ ಎಂದು ಪ್ರಕಟಿಸಿತ್ತು. ಆದರೆ, ಕ್ರಿಸ್‍ಮಸ್ ರಜೆ ಇರುವುದರಿಂದ ಹಾಗೂ ಕೆಲ ಕಾರಣಗಳಿಂದ ಟೆಂಡರ್ ಅವಧಿಯನ್ನು ವಿಸ್ತರಿಸುವಂತೆ ಕಂಪೆನಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜನವರಿ 10ಕ್ಕೆ ವಿಸ್ತರಣೆಯಾಗಿತ್ತು.

    ಸಿಂಗಪುರದ ಆಲ್ಟ್ರಾ ಫೈರ್‍ವುಡ್ ಗ್ರೀನ್ ಟ್ರಾನ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್, ಅಮೆರಿಕದ ಸ್ಕೈ ಟ್ರ್ಯಾನ್ ಏಷಿಯಾ, ಜೆಪಾಡ್ಸ್ ಇಂಕ್ ಕಂಪೆನಿಗಳು ಆಸಕ್ತಿ ತೋರಿದ್ದು, ವಿಸ್ತೃತ ಯೋಜನಾ ವರದಿಗಳನ್ನೂ ಸಲ್ಲಿಸಿವೆ. ಇತ್ತೀಚೆಗೆ ತಾಂತ್ರಿಕ ಬಿಡ್ ನಡೆಯಿತು. ಪಾಡ್ ಟ್ಯಾಕ್ಸಿ ಯೋಜನೆ ಅನುಷ್ಠಾನದಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಕಂಪೆನಿಗೆ ಟೆಂಡರ್ ನೀಡಲಾಗುತ್ತದೆ ಎಂದು ಈ ಹಿಂದೆ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

    ಏನಿದು ಪಾಡ್ ಟ್ಯಾಕ್ಸಿ?
    ಪಾಡ್ ಟ್ಯಾಕ್ಸಿ ಸೇವೆ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಮೆಟ್ರೊ ರೈಲು ನಿಲ್ದಾಣಗಳಿಗೆ ಪೂರಕ ಸೇವೆ ಒದಗಿಸಲಿದೆ. ಪ್ರತಿ ಪಾಡ್ ಟ್ಯಾಕ್ಸಿ 3 ಮೀಟರ್ ಉದ್ದ, 2.2 ಮೀಟರ್ ಅಗಲವಿದ್ದು, ಕನಿಷ್ಠ 6 ಮಂದಿ ಪ್ರಯಾಣಿಸಬಹುದು. ಪ್ರತಿ ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಅಂದಾಜು 50 ಕೋಟಿ ರೂ. ವೆಚ್ಚವಾಗಲಿದೆ. ಖಾಸಗಿ ಕಂಪೆನಿಗಳೇ ಸಂಪೂರ್ಣ ಬಂಡವಾಳ ಹೂಡಲಿದ್ದು, ಯೋಜನೆಯ ಆರಂಭವಾದ ನಂತರ 30 ವರ್ಷ ನಿರ್ವಹಣೆ ಮಾಡಲಿವೆ. ಯೋಜನೆ ಅನುಷ್ಠಾನಕ್ಕೆ ಬೇಕಾದ ರಸ್ತೆ ವಿಭಜಕಗಳ ನಡುವೆ ಜಾಗವನ್ನು ಬಿಬಿಎಂಪಿ ನೀಡಲಿದೆ.

    ನಗರದಲ್ಲಿ ಮೊದಲ ಹಂತದಲ್ಲಿ ಟ್ರಿನಿಟಿ ಮೆಟ್ರೊ ನಿಲ್ದಾಣದಿಂದ ವೈಟ್‍ಫೀಲ್ಡ್‍ವರೆಗೆ 30 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಅಗರ, ದೊಮ್ಮಲೂರು, ಲೀಲಾ ಪ್ಯಾಲೇಸ್ ಹೋಟೆಲ್, ಬಿಇಎಂಎಲ್, ಎಚ್‍ಎಎಲ್ ವಿಮಾನ ನಿಲ್ದಾಣ, ಮಾರತ್ತಹಳ್ಳಿ, ಗಾಂಧಿ ನಗರ, ಬ್ರೋಕ್‍ಫೀಲ್ಡ್, ಪರಿಮಳ ಸನ್‍ರಿಡ್ಜ್, ನಲ್ಲೂರಹಳ್ಳಿ, ವರ್ಜೀನಿಯಾ ಮಾಲ್, ವೈಟ್‍ಫೀಲ್ಡ್ ನಿಲ್ದಾಣಗಳು ಬರಲಿವೆ. ಅಲ್ಲದೇ 2,000ಕ್ಕೂ ಅಧಿಕ ಪಾಡ್ ಟ್ಯಾಕ್ಸಿಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಪ್ರತಿ ಗಂಟೆಗೆ 15 ರಿಂದ 20 ಸಾವಿರ ಜನರು ಪಾಡ್ ಟ್ಯಾಕ್ಸಿ ಸೇವೆಯಲ್ಲಿ ಪ್ರಯಾಣಿಸಬಹುದಾಗಿದೆ.  ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!