Tag: PM

  • ಪ್ರಧಾನಿಗೆ ನಮಿಸಿದ್ದ ಡಿಸಿಎಂ- ವೈರಲ್ ವಿಡಿಯೋಗೆ ಅಶ್ವಥ್ ನಾರಾಯಣ ಸ್ಪಷ್ಟನೆ

    ಪ್ರಧಾನಿಗೆ ನಮಿಸಿದ್ದ ಡಿಸಿಎಂ- ವೈರಲ್ ವಿಡಿಯೋಗೆ ಅಶ್ವಥ್ ನಾರಾಯಣ ಸ್ಪಷ್ಟನೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಅವರು ನನಗೆ ಅಮೂಲ್ಯವಾದ ಸಲಹೆ ನೀಡಿದರು ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

    ವೈರಲ್ ವಿಡಿಯೋ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ ಡಿಸಿಎಂ, ಪ್ರಧಾನಿಯವರು ನಗರಕ್ಕೆ ಬಂದಾಗ ನಾನು ಅವರಿಗೆ ನಮಿಸಿದ್ದೆ. ಆಗ ಪ್ರಧಾನಿಗಳು ತಲೆ ಬಗ್ಗಿಸುವಂಥದ್ದೇನೂ ಬೇಡ, ನೀವೆಲ್ಲ ಯಾವಾಗಲೂ ತಲೆ ಎತ್ತಿಟ್ಟುಕೊಳ್ಳಬೇಕು ಎಂದು ಅಮೂಲ್ಯ ಸಲಹೆ ಕೊಟ್ಟಿರುವುದಾಗಿ ತಿಳಿಸಿದರು.

    ಈ ಮೂಲಕ ಪ್ರಧಾನಿಯವರು ಒಳ್ಳೆಯ ಮಾತನ್ನು ಹೇಳಿದ್ದಾರೆ. ಹೀಗಾಗಿ ಹಿರಿಯರಾದ ಪ್ರಧಾನಿಯವರ ಕಿವಿ ಮಾತು ಪಾಲಿಸುತ್ತೇನೆ. ಇದರಲ್ಲಿ ವೈರಲ್ ಆಗುವಂಥದ್ದು ಏನಿಲ್ಲ ಎಂದು ಸ್ಪಷ್ಟನೆ ನೀಡಿದರು.

    ವೈರಲ್ ವಿಡಿಯೋದಲ್ಲೇನಿದೆ?
    ಚಂದ್ರಯಾನ 2 ಲ್ಯಾಂಡಿಂಗ್ ವೀಕ್ಷಿಸಲೆಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಇಸ್ರೋಗೆ ತೆರಳುವವರಿದ್ದರು. ಹೀಗಾಗಿ ಅವರನ್ನು ನಗರಕ್ಕೆ ಬರಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಅಶ್ವಥ್ ನಾರಾಯಣ ಮೊದಲಾದ ನಾಯಕರು ಬಂದಿದ್ದರು. ಮೋದಿಯವರು ಯಲಹಂಕ ವಾಯುನೆಲೆಗೆ ಬರುತ್ತಿದ್ದಂತೆಯೇ ಸಿಎಂ ಅವರು ಹೂಗುಚ್ಛ ನೀಡಿ ಬರಮಾಡಿಕೊಂಡರು. ಹೀಗೆ ಸ್ವಾಗತಿಸುವ ವೇಳೆ ಅಶ್ವಥ್ ನಾರಾಯಣ ಅವರು ಪ್ರಧಾನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಈ ವೇಳೆ ಪ್ರಧಾನಿಯವರು ಕೆಲ ಹೊತ್ತು ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

  • ಪ್ರಧಾನಿ ಇಸ್ರೋಗೆ ತೆರಳಿದ್ದರಿಂದ ಪರಿಹಾರದ ಬಗ್ಗೆ ಮಾತನಾಡಲು ಆಗಿಲ್ಲ- ಸಿಎಂ

    ಪ್ರಧಾನಿ ಇಸ್ರೋಗೆ ತೆರಳಿದ್ದರಿಂದ ಪರಿಹಾರದ ಬಗ್ಗೆ ಮಾತನಾಡಲು ಆಗಿಲ್ಲ- ಸಿಎಂ

    ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋಗೆ ತೆರಳಿದ್ದಾರೆ. ಹೀಗಾಗಿ ಅವರಲ್ಲಿ ರಾಜ್ಯಕ್ಕೆ ಪರಿಹಾರ ಕೊಡುವ ವಿಚಾರದ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 7 ರಂದು ಪ್ರಧಾನಿ ಬೆಂಗಳೂರಿಗೆ ಬರುತ್ತಾರೆ. ಆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಸುವುದಾಗಿ ಹೇಳಿದ್ದರು. ಆದರೆ ಇಂದು ರಾಗ ಬದಲಿಸುವ ಮೂಲಕ ಜನರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ.

    ಪ್ರಧಾನಮಂತ್ರಿ ಬಂದು ಇಸ್ರೋಗೆ ತೆರಳಿದ್ದಾರೆ. ಅವರ ಜೊತೆ ಪರಿಹಾರದ ವಿಚಾರ ಮಾತನಾಡಲು ಆಗಲಿಲ್ಲ. ಆದರೆ, ಅವರಿಗೆ ರಾಜ್ಯದ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಶೀಘ್ರದಲ್ಲಿಯೇ ಪರಿಹಾರ ಘೋಷಣೆ ಆಗುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

    ದೆಹಲಿಗೆ ಹೋಗಿ ಇಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿದ್ದೇನೆ. ಈಗಾಗಲೇ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಬಂದು ಹೋಗಿದ್ದಾರೆ. ವಾಸ್ತವಿಕ ಪರಿಸ್ಥಿತಿ ಅವರಿಗೆ ಗೊತ್ತಿದೆ. ಸೂಕ್ತ ಪರಿಹಾರ ಸಿಗುತ್ತದೆ ಎಂದು ಮತ್ತೆ ಭರವಸೆ ನೀಡುವ ಮೂಲಕ ಪ್ರಧಾನಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • 2022ರೊಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಿ: ಮೋದಿ ಮನವಿ

    2022ರೊಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡಿ: ಮೋದಿ ಮನವಿ

    ನವದೆಹಲಿ: 2022 ರೊಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

    73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಹೆಚ್ಚಿನ ಹಣ ಹರಿದು ಬರುತ್ತಿದೆ. ಆದರೆ ದೇಶದ ಜನರು ರಜಾ ದಿನಗಳಲ್ಲಿ ಹೆಚ್ಚಾಗಿ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ನಮ್ಮ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ತುಂಬಾ ಅಪರೂಪ ಎಂಬಂತಾಗಿದೆ ಎಂದು ಹೇಳಿದರು.

    ದೇಶದ ಜನರು 2022ರ ಒಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಬೇಕಿದೆ. ಎಲ್ಲಿ ನೀವು ಪ್ರವಾಸಕ್ಕೆ ಹೋಗುತ್ತಿರೋ ಅಲ್ಲಿ ಹೊಸ ಜಗತ್ತು ನಿರ್ಮಿಸಬಹುದು. ಭಾರತೀಯರು ಹೋಗುವ ಸ್ಥಳಗಳಿಗೆ ವಿದೇಶಿಯರು ಕೂಡ ಬರುತ್ತಾರೆ. ಈ ಮೂಲಕ ನಮ್ಮ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು.

    ರೈತರಲ್ಲಿ ನನ್ನದೊಂದು ಮನವಿ ಇಡುತ್ತೇನೆ. ನಾವು ಈ ದೇಶವನ್ನು ತಾಯಿ ಎಂದುಕೊಳ್ಳುವವರು. ಆದರೆ ಭೂತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಹೊರತಾಗಿ ಹಾಳು ಮಾಡುತ್ತಿದ್ದೇವೆ. ಭಾರೀ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಸುರಿಯುತ್ತಿದ್ದೇವೆ. ಹಂತ ಹಂತವಾಗಿ ರಾಸಾಯನಿಕಗಳಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಸಾಗಬೇಕಿದೆ ಎಂದು ಕೇಳಿಕೊಂಡರು.

    ದೇಶವು ಬಾಹ್ಯಾಕಾಶದಲ್ಲಿ ಹೊಸ ಮೈಲುಗಲ್ಲು ಇಟ್ಟಿದೆ. ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಶೀಘ್ರದಲ್ಲೇ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ. ಇದು ನಮಗೆ ಹೆಮ್ಮೆ ತರುವ ವಿಚಾರವಾಗಿದೆ ಎಂದು ತಿಳಿಸಿದರು.

    https://www.youtube.com/watch?v=XWI-1Nqwnxc

  • ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವಾಗಲು ಅಭಿಯಾನ: ಮೋದಿ

    ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವಾಗಲು ಅಭಿಯಾನ: ಮೋದಿ

    – ಚೀಫ್ ಆಫ್ ಡಿಫೆನ್ಸ್ ನೇಮಕ: ಐತಿಹಾಸಿಕ ಘೋಷಣೆ
    – ಸೇನೆ ಬಗ್ಗೆ ಪ್ರಧಾನಿ ಮೆಚ್ಚುಗೆ

    ನವದೆಹಲಿ: ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ಬಚಾವ್ ಆಗಲು ಅಭಿಯಾನ ಆರಂಭವಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಚೀಲವನ್ನು ನಮ್ಮಿಂದ ನಿರೀಕ್ಷಿಸಬೇಡಿ ಎಂಬ ಬೋರ್ಡ್ ಪ್ರತಿ ಅಂಗಡಿಯಲ್ಲೂ ಇರಲಿ. ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್‍ಗಳನ್ನು ಬಳಕೆ ಮಾಡಬೇಕಿದೆ ಎಂದು ಜಾಗೃತಿ ಮೂಡಿಸಿದರು. ಇದನ್ನೂ ಓದಿ: ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರು ಪೂರೈಕೆ: ಪ್ರಧಾನಿ ಮೋದಿ

    ಸ್ವದೇಶಿಯ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಕೆ ಮಾಡಿ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸೋಣ. ದೇಶದಲ್ಲಿರುವ ಬಲಿಷ್ಠ ಸರ್ಕಾರವನ್ನು ಪ್ರಪಂಚವೇ ಗುರುತಿಸಿದೆ. ವಿದೇಶದಕ್ಕೆ ಪ್ರತಿ ಜಿಲ್ಲೆಯಿಂದಲೂ ಒಂದಲ್ಲ ಒಂದು ರೀತಿಯ ಉತ್ಪನ್ನಗಳು ರಫ್ತು ಮಾಡಬೇಕು ಎಂದು ತಿಳಿಸಿದರು.

    ದೇಶದ ಅಭಿವೃದ್ಧಿಗೆ ಶಾಂತಿ ಹಾಗೂ ಸುರಕ್ಷತೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಿದ ಸೈನಿಕರಿಗೆ, ಭದ್ರತಾ ಪಡೆಗೆ ನಾನು ನಮಿಸುತ್ತೇನೆ. ನಮ್ಮ ನೆರೆಯ ದೇಶಗಳು ಭಯೋತ್ಪಾದನೆಗೆ ತತ್ತರಿಸಿ ಹೋಗಿವೆ. ಭಾರತೀಯ ರಕ್ಷಣಾ ಪಡೆಯು ದೇಶದ ಸಂರಕ್ಷಣೆಗಾಗಿ ಪ್ರಶಂಸನೀಯ ಕೆಲಸ ಮಾಡಿವೆ ಎಂದರು.

    ಭೂ, ವಾಯು ಹಾಗೂ ನೌಕಾ ಪಡೆಗಳ ಮಧ್ಯೆ ಸಮನ್ವಯತೆ ತರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ನೇಮಕ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ಐತಿಹಾಸಿದ ಘೋಷಣೆ ಮಾಡಿದ್ದಾರೆ.

    ದೇಶವು ಬಾಹ್ಯಾಕಾಶದಲ್ಲಿ ಹೊಸ ಮೈಲುಗಲ್ಲು ಇಟ್ಟಿದೆ. ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

    https://www.youtube.com/watch?v=XWI-1Nqwnxc

  • ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರು ಪೂರೈಕೆ: ಪ್ರಧಾನಿ ಮೋದಿ

    ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರು ಪೂರೈಕೆ: ಪ್ರಧಾನಿ ಮೋದಿ

    – ಮಗು ಹುಟ್ಟಿಸುವ ಮುನ್ನ ಯೋಚನೆ ಮಾಡಿ
    – ನನಗಾಗಿ ಏನನ್ನೂ ಮಾಡಿಕೊಳ್ಳಲು ಅಧಿಕಾರಕ್ಕೆ ಬಂದಿಲ್ಲ
    – ಮೂಲ ಸೌಕರ್ಯಕ್ಕೆ 100 ಲಕ್ಷ ಕೋಟಿ ರೂ. ಮೀಸಲು

    ನವದೆಹಲಿ: ಜಲ ಜೀವನ್ ಮಿಷನ್ ಯೋಜನೆಯಿಂದಾಗಿ ದೇಶದ ಪ್ರತಿ ಮನೆ ಮನೆಗೂ ನಲ್ಲಿಯ ಮೂಲಕ ನೀರು ಪೂರೈಕೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿರುವ ಬಡತನವನ್ನು ಹಾಗೂ ಬಡವರ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ 2022ರ ವೇಳೆಗೆ ಪ್ರತಿ ಬಡವರಿಗೂ ಶಾಶ್ವತ ಮನೆ ನೀಡಲಾಗುತ್ತದೆ. 100 ಲಕ್ಷ ಕೋಟಿ ರೂ.ವನ್ನು ಮೂಲ ಸೌಕರ್ಯಕ್ಕೆ ಹಾಗೂ ಜಲ ಜೀವನ್ ಮೀಷನ್ ಯೋಜನೆಗೆ 3.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದರು.

    ನನಗಾಗಿ ಏನನ್ನೂ ಮಾಡಿಕೊಳ್ಳಲು ಅಧಿಕಾರಕ್ಕೆ ಬಂದಿಲ್ಲ. ನಾವು ಸಮಸ್ಯೆಗಳನ್ನು ಸಾಕಲ್ಲ, ದೂರ ತಳ್ಳುವುದೂ ಇಲ್ಲ. ಬದಲಾಗಿ ಅವುಗಳನ್ನು ಬಗೆಹರಿಸುತ್ತೇವೆ. ನಮ್ಮ ದೇಶವು ಬದಲಾವಣೆ ಕಾಣುತ್ತಿದೆ ಹಾಗೂ ಅಭಿವೃದ್ಧಿಯಾಗುತ್ತಿದೆ ಎಂದು ದೇಶದ ಸಾಮಾನ್ಯ ವ್ಯಕ್ತಿಯೂ ಹೇಳುತ್ತಿದ್ದಾರೆ. 130 ಕೋಟಿ ಜನರ ಮುಖದ ಮೇಲಿನ ಉತ್ಸಾಹ ನನಗೆ ಹೊಸ ಶಕ್ತಿ ತುಂಬಿದೆ ಎಂದು ಹೇಳಿದರು.

    ಸ್ವಾತಂತ್ರ್ಯ ಸಂದರ್ಭದ ನಡುವೆ ದೇಶದ ಹಲವು ಭಾಗಗಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮಳೆ ಹಾಗೂ ಪ್ರವಾಹದಿಂದ ಭಾರೀ  ನಷ್ಟ ಉಂಟಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಸಂತ್ರಸ್ತರ ಅಭಿವೃದ್ಧಿಗೆ ಶ್ರಮಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡಿದ್ದ 370ನೇ ಹಾಗೂ 35 (ಎ) ವಿಧಿಗಳನ್ನು ರದ್ದು ಮಾಡಿದ್ದೇವೆ. ಮುಸ್ಲಿಂ ಸಹೋದರಿಯರು ಹಾಗೂ ತಾಯಂದಿರಿಗಾಗಿ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ. ರೈತರಿಗಾಗಿ ಪ್ರಧಾನಿ ಮಂತ್ರಿ ಕಿಸಾನ್ ಯೋಜನೆ, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಜಾರಿಗೆ ತಂದಿದ್ದೇವೆ. ವೈದ್ಯಕೀಯ ಶಿಕ್ಷಣವನ್ನು ಪಾರದರ್ಶಕತೆ ಮಾಡಲಾಗಿದೆ. ಜಲ ಸಮಸ್ಯೆ ನಿವಾರಣೆಗಾಗಿ ಜಲಶಕ್ತಿ ಮಂತ್ರಾಲಯ ಆರಂಭಿಸಿದ್ದೇವೆ. ಈ ಮೂಲಕ ದೇಶದ ಅಭಿವೃದ್ಧಿಗೆ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಎನ್‍ಡಿಎ ನೇತೃತ್ವದ ಸರ್ಕಾರವು ಜಾರಿಗೆ ತಂದಿದೆ ಎಂದರು.

    ಅತ್ಯಾಚಾರಿಗಳಿಗೆ ಕಠಿಣ ನೀಡುವ ಕಾನೂನು ಜಾರಿಗೆ ತಂದಿದ್ದೇವೆ. ದೇಶದ ಪ್ರತಿಯೊಬ್ಬರ ಏಳಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ಹಂತ ಹಂತವಾಗಿ ಭಾರತವು ಅಭಿವೃದ್ಧಿ ಹೊಂದುತ್ತಿದೆ ಎಂದು ದೇಶದ ಜನರಿಗೆ ತಿಳಿಸಿದರು.

    ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಜೀವನನ್ನೇ ತ್ಯಾಗ ಮಾಡಿದ್ದಾರೆ. ಅವರಿಗೆ ನನ್ನ ನಮನಗಳು. ಕೆಲ ನಾಯಕರು ತಮ್ಮ ಯೌವನವನ್ನು ಜೈಲಿನಲ್ಲಿ ಕಳೆದರು. ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನನ್ನ ನಮನಗಳು ಎಂದರು.

    ನಮ್ಮ ಮುಸ್ಲಿಂ ಹೆಣ್ಣು ಮಕ್ಕಳ ತಲೆಯ ಮೇಲೆ ತ್ರಿವಳಿ ತಲಾಖ್ ತೂಗುಗತ್ತಿ ಇತ್ತು. ಹೀಗಾಗಿ ಅವರು ಭಯದಲ್ಲಿಯೇ ಜೀವನ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ತ್ರಿವಳಿ ತಲಾಖ್, ಬಾಲ್ಯವಿವಾಹ, ಅತ್ಯಾಚಾರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕಠಿಣ ಕಾನೂನು ಅವಶ್ಯಕವಾಗಿತ್ತು. ಅದನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದರು.

    ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಜನರ ಆಸೆ ಹಾಗೂ ಆಕಾಂಕ್ಷೆಯನ್ನು ಪೂರ್ಣಗೊಳಿಸುವುದು ನಮ್ಮ ಜವಾಬ್ದಾರಿ. ಸಂವಿಧಾನದ ವಿಧಿ 370 ರದ್ದು ಮಾಡಿದ್ದನ್ನು ರಾಜಕೀಯವಾಗಿ ಬಳಕೆ ಮಾಡುವುದು ಸರಿಯಲ್ಲ. ಒಂದು ವೇಳೆ 370ನೇ ವಿಧಿ ಅಷ್ಟು ಮುಖ್ಯ ಎನ್ನುವುದೇ ಆಗಿದ್ದರೆ ಅದನ್ನು ತಾತ್ಕಾಲಿಕವಾಗಿ ಏಕೆ ಇಟ್ಟಿರಿ? ನಿಮಗೆ ಅಷ್ಟೊಂದು ಬಹುಮತ ಇದ್ದಾಗಲೂ 370ನೇ ವಿಧಿಯನ್ನು ಶಾಶ್ವತವಾಗಿ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಜನಸಂಖ್ಯಾ ನಿಯಂತ್ರಣಕ್ಕೆ ಮನವಿ:
    ಜನಸಂಖ್ಯಾ ಸ್ಫೋಟ ಮಿತಿ ಮೀರಿ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಇದು ದೊಡ್ಡ ಸವಾಲು ಒಡ್ಡಲಿದೆ. ಮಗುವಿಗೆ ಜನ್ಮ ನೀಡುವ ಮುನ್ನ ಯೋಚಿಸಿ, ಮುಗುವಿನ ಎಲ್ಲ ಅವಶ್ಯಕತೆ ಪೂರೈಸಬಹುದೇ ಎಂಬುದನ್ನು ಯೋಚಿಸಿ ನಿರ್ಣಯ ಕೈಗೊಳ್ಳಿ ಎಂದು ಇದೇ ವೇಳೆ ಪ್ರಧಾನಿಯವರು ದೇಶದ ಜನರಲ್ಲಿ ಮನವಿ ಮಾಡಿಕೊಂಡರು.

  • ಶೀಘ್ರವೇ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡ್ಬೇಕು- ಸಿದ್ದರಾಮಯ್ಯ ಆಗ್ರಹ

    ಶೀಘ್ರವೇ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡ್ಬೇಕು- ಸಿದ್ದರಾಮಯ್ಯ ಆಗ್ರಹ

    – ಇಷ್ಟೊಂದು ಪ್ರವಾಹ ನಾನು ನೋಡಿಲ್ಲ
    – ಕೇಂದ್ರ 5 ಸಾವಿರ ಕೋಟಿ ವಿಶೇಷ ಅನುದಾನ ಕೊಡಬೇಕು
    – ಸಿಎಂ ಬಿಎಸ್‍ವೈ ವಿರುದ್ಧ ಕಿಡಿ
    – ನನ್ನ ಕ್ಷೇತ್ರಕ್ಕೆ ಬೆಡ್‍ಶೀಟ್ ಕೊಟ್ಟಿಲ್ಲ

    ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾಗಿದ್ದು, ಕೇಂದ್ರ ಸರ್ಕಾರಕ್ಕೆ ಗಂಭೀರತೆ ಇದ್ದರೆ ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಪ್ರವಾಹ ಪೀಡಿತವಾದ ಸ್ಥಳಗಳಿಗೆ ಭೇಟಿ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೈಮಾನಿಕ ಸಮೀಕ್ಷೆ ಮಾಡಿ ಹೋಗಿದ್ದಾರೆ. ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕಿತ್ತು. ಆದರೆ ಕೇಂದ್ರ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಪ್ರಧಾನಿ ಅವರೇ ವೈಮಾನಿಕ ಸಮೀಕ್ಷೆ ಮಾಡಬೇಕಿತ್ತು. ಆದರೆ ಮೋದಿ ಇನ್ನೂ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಬರುತ್ತಾರೆ. ಶಾ, ನಿರ್ಮಲಾ ಬರುವುದರಿಂದ ಗಂಭೀರತೆ ಬರಲ್ಲ. ಕೇಂದ್ರ ಸರ್ಕಾರಕ್ಕೆ ಗಂಭೀರತೆ ಇದ್ದರೆ ಮೋದಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡಬೇಕು. ಇದು ನನ್ನ ಆಗ್ರಹ ಎಂದರು.

    ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಬಂದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ 17 ಜಿಲ್ಲೆಗಳು ಜಲಾವೃತವಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆ ಆಗಿದ್ದು ನಮಗೆ ಪ್ರವಾಹ ಆಗಲು ಕಾರಣವಾಗಿದೆ. 6.5 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಮ್ ನಿಂದ ಹೊರ ಬಿಡುತ್ತಿದ್ದಾರೆ. ಇಷ್ಟು ನೀರು ಹೊರ ಬಿಟ್ಟಿರೋದು ಇದೇ ಮೊದಲು. ನಾನು ಇಷ್ಟು ನೀರು ಬಿಟ್ಟಿದ್ದು ನೋಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರ ತಕ್ಷಣ 5 ಸಾವಿರ ಕೋಟಿ ರೂ.ವನ್ನು ವಿಶೇಷ ಅನುದಾನವೆಂದು ಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು 6 ಸಾವಿರ ಕೋಟಿ ನಷ್ಟ ಎಂದು ಹೇಳಿದ್ದಾರೆ. ನನ್ನ ಪ್ರಕಾರ 1 ಲಕ್ಷ ಕೋಟಿ ನಷ್ಟ ಆಗಿದೆ. 10 ಲಕ್ಷ ಎಕರೆ ಬೆಳೆ ನಾಶ ಆಗಿದೆ. ಜಾನುವಾರು, ರಸ್ತೆ, ರೈಲ್ವೇ ಹಳಿ ಕುಸಿದಿವೆ. ಜಾನುವಾರುಗಳು ಕೊಚ್ಚಿ ಹೋಗಿವೆ. ಸರ್ಕಾರದ, ಖಾಸಗಿ ಆಸ್ತಿ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. 15-20 ಜನ ನಾಪತ್ತೆ ಆಗಿದ್ದಾರೆ. 25-30 ಜನ ಸತ್ತಿದ್ದಾರೆ ಅನ್ನೋ ರೀತಿಯಲ್ಲಿ ಸರ್ಕಾರ ಹೇಳುತ್ತಿದೆ. ಇಷ್ಟು ಪ್ರಮಾಣದಲ್ಲಿ ದೊಡ್ಡ ಪ್ರವಾಹ ಹಿಂದೆ ಆಗಿರಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

    ನಾನು ವಿಪಕ್ಷ ನಾಯಕನಾಗಿದ್ದಾಗ ಪ್ರವಾಹ ಆಗಿತ್ತು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರಲಿಲ್ಲ. ಆಗ ನಾವು ಅಂದಿನ ಪ್ರಧಾನಿಗೆ ಒತ್ತಾಯ ಮಾಡಿದ್ದೆವು. ಹೀಗಾಗಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಬಂದು ಭೇಟಿ ಕೊಟ್ಟಿದ್ದರು. ಮನಮೋಹನ್ ಸಿಂಗ್ ಅವರು ವೈಮಾನಿಕ ಸಮೀಕ್ಷೆ ಮಾಡಿ 1600 ಕೋಟಿ ಸ್ಥಳದಲ್ಲೇ ಕೊಟ್ಟಿದ್ದರು. ಈಗಿನ ಸರ್ಕಾರ ಎನ್‍ಡಿಆರ್‍ಎಫ್ ನಿಂದ 126 ಕೋಟಿ ಕೊಟ್ಟಿದ್ದಾರೆ ಎಂದು ಕೇಂದ್ರದ ವಿರುದ್ಧ ಗರಂ ಆದರು.

    ಸಿಎಂ ಯಡಿಯೂರಪ್ಪ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಅವರದ್ದೇ ಸರ್ಕಾರ ಇದೆ. 25 ಜನ ಸಂಸದರು ಇದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚು ಹಣ ಬಿಡುಗಡೆ ಮಾಡಿಸಬೇಕು. ಕೇಂದ್ರ ಸರ್ಕಾರ  NDRF ಹಣ ಬಿಟ್ಟು ಬೇರೆ ಹಣ ಕೊಟ್ಟಿಲ್ಲ. ಕೂಡಲೇ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಏನೂ ಆಗಿಲ್ಲ ಅನ್ನೋ ರೀತಿ ವರ್ತನೆ ಮಾಡುತ್ತಿದೆ. ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕೇವಲ ಎಮೋಷನ್ ವಿಚಾರದಲ್ಲಿ ರಾಜಕೀಯ ಮಾಡೋಕೆ ಆಗಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.

    ನವಿಲು ತೀರ್ಥ ಡ್ಯಾಂ ತುಂಬಿದೆ. ನನ್ನ ಕ್ಷೇತ್ರದ ಅನೇಕ ಹಳ್ಳಿಗಳೂ ಮುಗಿದೆ. ಪಟ್ಟದ ಕಲ್ಲಿನಲ್ಲಿ 10-15 ಜನ ಸಿಕ್ಕಿ ಹಾಕಿಕೊಂಡಿದ್ದಾರೆ. ಏರ್ ಲಿಫ್ಟ್ ಮಾಡಿಸಿ ಎಂದು ಹೇಳಿದ್ರೂ ಮಾಡೋಕೆ ಆಗಲಿಲ್ಲ. ನಾನು ಜಿಲ್ಲಾಧಿಕಾರಿಗೆ ಬೈದು ದೋಣಿ ಮೂಲಕ ಅವರನ್ನು ರಕ್ಷಣೆ ಮಾಡಿದೆವು. ಅಮಿತ್ ಶಾ ಹೋಂ ಮಿನಿಸ್ಟರ್ ಇದ್ದಾರೆ, ಇನ್ನೂ ಸ್ವಲ್ಪ ಹೆಲಿಕಾಪ್ಟರ್ ಕಳುಹಿಸಬೇಕು. ಡಿಸಿ ಕೂಡ ಹೆಲಿಕಾಪ್ಟರ್ ಕಳುಸುತ್ತಿಲ್ಲ ಎಂದು ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಸರ್ಕಾರ ಇಲ್ಲದಂತೆ ಆಗಿದೆ. ಇನ್ನೂ ಹೆಚ್ಚು ಗಂಜಿ ಕೇಂದ್ರಗಳನ್ನು ಪ್ರಾರಂಭ ಮಾಡಬೇಕು. ಬಾದಾಮಿ ಬಗ್ಗೆ ನಿತ್ಯ ಮಾಹಿತಿ ಪಡೆಯುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಬೆಡ್ ಶೀಟ್ ಕೊಟ್ಟಿಲ್ಲ. ಔಷಧಿ ಪೂರೈಕೆ ಇನ್ನೂ ಆಗಿಲ್ಲ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಸರ್ಕಾರಿ, ಖಾಸಗಿ ವೈದ್ಯರನ್ನು ಸರ್ಕಾರ ಬಳಸಿಕೊಳ್ಳಬೇಕು. ಜನರಿಗೆ ಆಹಾರ, ಬೆಡ್ ಶೀಟ್, ಕನಿಷ್ಟ ಸೌಲಭ್ಯ ಒದಗಿಸುವ ಕೆಲಸ ಆಗಬೇಕು. ಜಾನುವಾರುಗಳಿಗೆ ಅಗತ್ಯ ವ್ಯವಸ್ಥೆ ಕೂಡಲೇ ಮಾಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

    ಸಂತ್ರಸ್ತರ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ನಮ್ಮ ಕಾಂಗ್ರೆಸ್ ನಿಂದ ಎರಡು ತಂಡ ಹೋಗಿದೆ. ಸಂತ್ರಸ್ತರ ಕೇಂದ್ರದಲ್ಲಿ ಸೌಲಭ್ಯವಿಲ್ಲ ಎಂಬ ಮಾಹಿತಿ ಬಂದಿದೆ. ಕೂಡಲೇ ಪರಿಹಾರ ಕಾರ್ಯ ಮಾಡಬೇಕು. ಪ್ರಧಾನಿ ನಾಳೆ, ನಾಡಿದ್ದರಲ್ಲೇ ರಾಜ್ಯಕ್ಕೆ ಬರಬೇಕು. ಇನ್ನೂ ರಾಜ್ಯ ಸರ್ಕಾರ ರಿಪೋರ್ಟ್ ಕೇಂದ್ರಕ್ಕೆ ಕಳಿಸಿದ್ದಾರೆಯೋ ಇಲ್ಲವೋ ಗೊತ್ತಿಲ್ಲ. ಪ್ರಹ್ಲಾದ್ ಜೋಷಿ ವರದಿ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಸಿಎಂ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ 5 ಸಾವಿರ ಕೋಟಿ ರಾಜ್ಯಕ್ಕೆ ಬಿಡುಗಡೆ ಮಾಡಬೇಕು. ಹೆಚ್ಚು ಹೆಲಿಕಾಪ್ಟರ್ ಗಳನ್ನು ಕಳುಹಿಸಿ ಕೊಡಬೇಕು ಎಂದರು.

    ಕೇರಳ, ಮಹಾರಾಷ್ಟ್ರಕ್ಕೆ ಕೇಂದ್ರ ಹಣ ಕೊಟ್ಟಿದೆ. ಆದರೆ ರಾಜ್ಯಕ್ಕೆ ಇನ್ನೂ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಮಲತಾಯಿ ಧೋರಣೆ ಮಾಡಬಾರದು. 25 ಜನ ಸಂಸದರನ್ನ ಬಿಜೆಪಿಗೆ ಕೊಟ್ಟಿದೆ. ಯಡಿಯೂರಪ್ಪಗೆ ಅಹವಾಲು ಕೇಳಿದ್ದಕ್ಕೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಲಾಠಿಚಾರ್ಜ್ ಮಾಡಿಸೋದ್ರಲ್ಲಿ ಯಡಿಯೂರಪ್ಪ ನಿಸ್ಸೀಮರು. ಈ ಹಿಂದೆ ಗೋಲಿಬಾರ್ ಮಾಡಿಸಿದ್ದರು. ಹಸಿರು ಶಾಲು ಹಾಕಿಕೊಳ್ತಾರೆ. ಜನ ಕಷ್ಟ ಹೇಳಿದ್ದಕ್ಕೆ ಲಾಠಿಚಾರ್ಜ್ ಮಾಡಿಸಿದ್ದಾರೆ. ಇವರಿಗೆ ಮನುಷ್ಯತ್ವ ಇದೆಯಾ? ಕೂಡಲೇ ಯಡಿಯೂರಪ್ಪ ಪ್ರಧಾನಿ ಮನವರಿಕೆ ಮಾಡಿ ಪ್ರವಾಹ ಸ್ಥಳಕ್ಕೆ ಭೇಟಿ ಕೊಡಿಸಬೇಕು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಆಗಬೇಕು ಎಂದರು ಆಗ್ರಹಿಸಿದರು.

  • ಮೋದಿಗೆ ಅಭಿನಂದನೆ ಸಲ್ಲಿಸಿದ್ದ ಸುಷ್ಮಾ ಕೊನೆಯ ಟ್ವೀಟ್ ವೈರಲ್

    ಮೋದಿಗೆ ಅಭಿನಂದನೆ ಸಲ್ಲಿಸಿದ್ದ ಸುಷ್ಮಾ ಕೊನೆಯ ಟ್ವೀಟ್ ವೈರಲ್

    ನವದೆಹಲಿ: ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರು ಕೊನೆಯುಸಿರೆಳೆಯುವುದಕ್ಕೂ ಕೆಲವೇ ಗಂಟೆಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದರು. ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಕುರಿತು ಟ್ವೀಟ್ ಮಾಡಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನನ್ನ ಜೀವನಮಾನದಲ್ಲಿ ಈ ದಿನವನ್ನು ನೋಡಲು ನಾನು ಬಹುದಿನಗಳಿಂದ ಕಾಯುತ್ತಿದ್ದೆ ಎಂದು ತಿಳಿಸಿದ್ದರು.

    ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ. ಈ ಟ್ವೀಟನ್ನು ಸಾವಿರಾರು ಜನರು ರೀ ಟ್ಟೀಟ್ ಮಾಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದಾರೆ.

    ಸುಷ್ಮಾ ಸ್ವರಾಜ್ ಅವರ ಆರೋಗ್ಯದಲ್ಲಿ ಮಂಗಳವಾರ ರಾತ್ರಿ ಏರುಪೇರು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣವೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  • ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ – ವಿಪಕ್ಷವಿಲ್ಲದೆ ಸಂಸತ್‍ನಲ್ಲಿ ಮೋದಿ 2.0 ಸರ್ಕಾರದ ಆಟ

    ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ – ವಿಪಕ್ಷವಿಲ್ಲದೆ ಸಂಸತ್‍ನಲ್ಲಿ ಮೋದಿ 2.0 ಸರ್ಕಾರದ ಆಟ

    – ಮಾಜಿ ಪ್ರಧಾನಿಗಳಿಲ್ಲದ ಮೊದಲ ಸೆಷನ್

    ನವದೆಹಲಿ: ಇಂದಿನಿಂದ 17 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಸೋಲಿನ ಆಘಾತದಿಂದ ಹೊರಬರದ ಸ್ಥಿತಿಯಲ್ಲಿರುವ ಪ್ರತಿಪಕ್ಷ ನಾಯಕರ ನಿರಾಸಕ್ತಿ ನಡುವೆ ಕಲಾಪ ಆರಂಭವಾಗಲಿದ್ದು, ಇಂದು ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಜುಲೈ 26ರವರೆಗೆ ಒಟ್ಟು 40 ದಿನಗಳ ಕಾಲ ನಡೆಯುವ ಅಧಿವೇಶನಲ್ಲಿ ಮೊದಲೆರಡು ದಿನ ನೂತನ ಸಂಸದರಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ವಿರೇಂದ್ರ ಕುಮಾರ್ ಇಂದಿನಿಂದ ಎಲ್ಲಾ ನೂತನ ಸಂಸದರಿಗೆ ಪ್ರಮಾಣವಚನ ಭೋದಿಸಲಿದ್ದಾರೆ. ಇದೇ ತಿಂಗಳ 19ರಂದು ಸ್ಪೀಕರ್ ಹುದ್ದೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 20ರಂದು ಸಂಸತ್‍ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಜುಲೈ 4ರಿಂದ ಪ್ರಶ್ನೋತ್ತರ ಕಲಾಪ ಆರಂಭವಾಗಲಿದೆ.

    ಸುಗಮ ಕಲಾಪಕ್ಕೆ ಪ್ರಧಾನಿ ಮನವಿ:
    17ನೇ ಲೋಕಸಭೆಗೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರ ಭಾನುವಾರ ಸಂಸತ್ ಭವನದಲ್ಲಿ ಸರ್ವಪಕ್ಷ ನಾಯಕರ ಕರೆಯಲಾಗಿತ್ತು. ಸಭೆಯಲ್ಲಿ ಸಂಸತ್ ಅಧಿವೇಶನ ಸುಗಮವಾಗಿ ನಡೆಸಲು ಪ್ರತಿಪಕ್ಷಗಳು ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಬಜೆಟ್ ಮಂಡನೆಯ ಜೊತೆಗೆ ತ್ರಿವಳಿ ತಲಾಖ್ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮಂಡನೆ ಆಗಲಿದ್ದು, ಕಾವೇರಿದ ಚರ್ಚೆಗೆ ಕಾರಣವಾಗಲಿದೆ.

    ಸಂಸತ್‍ನಲ್ಲಿ ಗಟ್ಟಿಧ್ವನಿ ಕೇಳಲ್ಲ:
    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿಗಳು ಸೋಲನುಭವಿಸಿದ್ದಾರೆ. ಈ ಬಾರಿ ಬಹುತೇಕ ಸಂಸದರು ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ ದೇವೇಗೌಡ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ಸಂಸತ್ ಕಲಾಪವನ್ನು ತಪ್ಪಿಸಿಕೊಂಡ ಹಿರಿಯರೆನಿಸಿದ್ದಾರೆ. ಮೊದಲ ಅಧಿವೇಶನಕ್ಕೆ ವಿಪಕ್ಷಗಳ ನಿರಾಸಕ್ತಿ ಎದ್ದು ಕಾಣುತ್ತಿದೆ. ಮೊದಲ ದಿನ ಆಡಳಿತ ಪಕ್ಷವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ವಿಪಕ್ಷ ಇನ್ನೂ ಯಾವುದೇ ಕಾರ್ಯತಂತ್ರ ರೂಪಿಸಿಲ್ಲ. ಇದರ ಜೊತೆಗೆ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಸಂಸತ್ತಿನಲ್ಲಿ ತನ್ನ ವಿಪಕ್ಷ ನಾಯಕನನ್ನು ಘೋಷಣೆ ಮಾಡದೆ ಇರುವುದು ವಿಪಕ್ಷಗಳ ನಿರಾಸಕ್ತಿ ಎದ್ದು ಕಾಣಿಸುವಂತೆ ಮಾಡಿದೆ.

  • ಮೋದಿ ಮತ್ತೆ ಪ್ರಧಾನಿ- ಮಂಗ್ಳೂರು ದಂಪತಿಯಿಂದ ಪೊಳಲಿಗೆ ಕಾಲ್ನಡಿಗೆ

    ಮೋದಿ ಮತ್ತೆ ಪ್ರಧಾನಿ- ಮಂಗ್ಳೂರು ದಂಪತಿಯಿಂದ ಪೊಳಲಿಗೆ ಕಾಲ್ನಡಿಗೆ

    ಮಂಗಳೂರು: ಮೋದಿ ಮತ್ತೆ ಪ್ರಧಾನಿಯಾಗಲು ಅಭಿಮಾನಿಗಳು ವಿವಿಧ ರೀತಿಯ ಹರಕೆ ಹೊತ್ತುಕೊಂಡಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿನ ದಂಪತಿ ಮೋದಿ ಪ್ರಧಾನಿಯಾಗಿದ್ದಕ್ಕಾಗಿ ಕಾಲ್ನಡಿಗೆಯಲ್ಲಿ 28 ಕಿಮೀ ಸಾಗಿ ದೇಗುಲ ದರ್ಶನ ಮಾಡಿದ್ದಾರೆ.

    ಮಂಗಳೂರಿನ ಶಕ್ತಿನಗರದ ರಾಜೇಶ್ ದಂಪತಿ ಈ ಹರಕೆ ಹೊತ್ತವರಾಗಿದ್ದು, ನಗರದ ಹೊರವಲಯದಲ್ಲಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭಾನುವಾರ ಪಾದಯಾತ್ರೆ ಮಾಡಿದ್ದಾರೆ. ತಲೆಯಲ್ಲಿ ಅಕ್ಕಿಯ ಚೀಲ, ಕೈಯಲ್ಲಿ ಸೀಯಾಳ ಹಿಡಿದು ರಸ್ತೆಯುದ್ದಕ್ಕೂ ಪಾದಯಾತ್ರೆ ಮಾಡಿದ್ದಾರೆ.

    ರಾಜೇಶ್ ಜೊತೆ ಪತ್ನಿ ಮತ್ತು ಮಗಳು ಸಾಥ್ ನೀಡಿದ್ದಾರೆ. ಪೊಳಲಿ ದೇವಸ್ಥಾನಕ್ಕೆ ತೆರಳಲು ರಸ್ತೆ ಇದ್ದರೂ, ಗುಡ್ಡ, ಬೆಟ್ಟಗಳ ರೀತಿಯ ಏರು ತಗ್ಗುಗಳಿವೆ. ಇಂಥದ್ದರಲ್ಲಿ ತಲೆಯಲ್ಲಿ ಭಾರ ಹೊತ್ತುಕೊಂಡು ರಾಜೇಶ್ ಕಷ್ಟಪಟ್ಟು ಹರಕೆ ತೀರಿಸಿದ್ದು ವಿಶೇಷವಾಗಿತ್ತು.

  • ಇಂದು ಸಂಜೆ ಮೋದಿ ಕ್ಯಾಬಿನೆಟ್ ಸಭೆ- ಮೇ 26ಕ್ಕೆ ಪ್ರಮಾಣವಚನ?

    ಇಂದು ಸಂಜೆ ಮೋದಿ ಕ್ಯಾಬಿನೆಟ್ ಸಭೆ- ಮೇ 26ಕ್ಕೆ ಪ್ರಮಾಣವಚನ?

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಐತಿಹಾಸಿಕ ಗೆಲವು ಸಾಧಿಸಿದ್ದಾರೆ. ಭಾರೀ ಬಹುಮತ ಪಡೆದಿರುವ ಮೋದಿ ಮತ್ತೊಮ್ಮೆ ಪ್ರಮಾಣ ವಚನ ಸ್ವಿಕರಿಸುವುದು ಯಾವಾಗ ಅನ್ನೋದು ಸದ್ಯದ ಕುತೂಹಲವಾಗಿದೆ. ಇಂದು 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡಲಿರುವ ಪ್ರಧಾನಿ ಮೋದಿ ಹೊಸ ಸರ್ಕಾರ ರಚನೆಗೆ ಮುನ್ನುಡಿ ಬರೆಯಲಿದ್ದಾರೆ.

    ಮಾಜಿ ಪ್ರಧಾನಿ ಇಂದಿರಾಗಾಂಧಿ ಬಳಿಕ ಇತಿಹಾಸ ಸೃಷ್ಟಿಸಿರುವ ಪ್ರಧಾನಿ ಮೋದಿ, ಮತ್ತೊಮ್ಮೆ ಗದ್ದುಗೆ ಹಿಡಿಯಲಿದ್ದಾರೆ. ಪ್ರಚಂಡ ಬಹುಮತ ಪಡೆದ ಮೋದಿ ಪ್ರಮಾಣ ವಚನ ಸ್ವೀಕರಿಸುವುದು ಯಾವಾಗ ಎನ್ನುವ ಕುತೂಹಲ ಸದ್ಯ ದೇಶದ ಜನರಲ್ಲಿ ಮೂಡಿದೆ.

    ಅದಕ್ಕೆ ಮುನ್ನಡಿ ಎಂಬಂತೆ ಇಂದು ಪ್ರಧಾನಿ ಮೋದಿ 16 ಲೋಕಸಭೆ ವಿಸರ್ಜನೆ ಶಿಫಾರಸು ಮಾಡಲಿದ್ದಾರೆ. ಇಂದು ಸಂಜೆ ಸಚಿವ ಸಂಪುಟ ಸಭೆ ಕರೆದಿರುವ ಮೋದಿ, ತಮ್ಮ ಸಂಪುಟ ಸಚಿವರೊಂದಿಗೆ ಚರ್ಚಿಸಿ ಲೋಕಸಭೆಯನ್ನು ವಿಸರ್ಜನೆಗೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಿದ್ದಾರೆ. ಜೂನ್ 3 ರವರಗೆ 16 ನೇ ಲೋಕಸಭೆ ಅವಧಿ ಇದ್ದು ಪ್ರಧಾನಿ ಶಿಫಾರಸು ಪರಿಗಣಿಸಿ ಲೋಕಸಭೆ ವಿಸರ್ಜನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಲಿದ್ದಾರೆ. ಇದನ್ನೂ ಓದಿ: ಚೌಕಿದಾರನಿಗೆ ಪ್ರಜೆಗಳ ಪ್ರೀತಿ – ದೇಶಾದ್ಯಂತ ಈ ಬಾರಿಯೂ ನಮೋ ಸುನಾಮಿ

    ರಾಷ್ಟ್ರಪತಿಗಳ ಅಂಕಿತ ಬಳಿಕ ಲೋಕಸಭೆ ವಿಸರ್ಜನೆ ಆಗಲಿದ್ದು ಬಳಿಕ ಕೇಂದ್ರ ಚುನಾವಣಾ ಆಯೋಗದ ಮೂವರು ಆಯುಕ್ತರು 17 ನೇ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಅಂಕಿ ಅಂಶಗಳ ಮಾಹಿತಿ ನೀಡಲಿದ್ದಾರೆ. ಇದಾದ ಬಳಿಕ ಹೊಸ ಸರ್ಕಾರದ ರಚನೆಗೆ ಚಾಲನೆ ಸಿಗಲಿದೆ.

    ಇತಿಹಾಸ ಮರುಸೃಷ್ಠಿಸಲು ಪ್ಲಾನ್!:
    ಪ್ರಧಾನಿ ಮೋದಿ ಇದೇ ಮೇ 26 ಕ್ಕೆ ಪ್ರಮಾಣ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅಂದು ಈ ಅವಧಿಯ ಮೊದಲ ಮನ್ ಕೀ ಬಾತ್ ಪ್ರಸಾರವಾಗಲಿದೆಯಂತೆ. ಮನ್ ಕೀ ಬಾತ್ ಮೂಲಕ ಅಂದೇ ದೇಶನ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ದೇಶದ ಮಧ್ಯಮ ವರ್ಗ, ಯುವ ಜನಾಂಗವನ್ನ ಮೋದಿ ಆಕರ್ಷಿಸಿದ್ದು ಹೇಗೆ?

    ಅಷ್ಟಕ್ಕೂ ಮೋದಿ ಮೇ 26 ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿಕ್ಕೂ ಕಾರಣ ಇದೆ. ಕಳೆದ ಅವಧಿಯಲ್ಲಿ ಬಹಮತ ಪಡೆದಿದ್ದ ಮೋದಿ ಮೇ 26, 2014 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಾಗೀ ಈ ಬಾರಿಯೂ ಅಂದೇ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದು ಮೋದಿ ಅಭಿಲಾಷೆ ಎನ್ನಲಾಗಿದ್ದು ಅಂತರಾಷ್ಟ್ರೀಯ ಗಣ್ಯರ ಬರುವ ನೀರಿಕ್ಷೆಗಳಿದ್ದು ದಿನಾಂಕಗಳು ಹೊಂದಾಣಿಕೆಯಾದಲ್ಲಿ ಮೇ 26 ರಂದು ಎರಡನೇ ಅವಧಿಗೆ ಮೋದಿ ಪ್ರಧಾನಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

    https://www.youtube.com/watch?v=GAofgO5Sti8