Tag: PM

  • ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಬಂದ ನಂತರ ನಿಮ್ಮೊಂದಿಗೆ ಐಸ್‍ಕ್ರೀಂ ಸೇವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರಿಗೆ ಮಾತುಕೊಟ್ಟಿದ್ದರು. ಇದೀಗ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿಯುವ ಮೂಲಕ ಮೋದಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

    ಮೋದಿ ತಮ್ಮ ನಿವಾಸದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಿಂಧು ಜೊತೆ ಕೂತು ಐಸ್‍ಕ್ರೀಂ ಸೇವಿಸುತ್ತ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಫೋಟೋ ಹಂಚಿಕೊಂಡು ಧನ್ಯವಾದ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

    ಔತಣಕೂಟದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳೆಲ್ಲರೂ ಭಾಗವಹಿಸಿದ್ದರು. ಅವರೆಲ್ಲರೊಂದಿಗೆ ಮೋದಿ ಮಾತುಕತೆ ನಡೆಸಿ ಫೋಟೋಗೆ ಫೋಸ್ ನೀಡಿದ್ದಾರೆ. ಮೋದಿ ವಿಶೇಷವಾಗಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೆಚ್ಚಿನ ಚೂರ್ಮಾ ಮಾಡಿಸಿ ಊಟ ಬಡಿಸಿದ್ದಾರೆ. ಭಾರತದ ಕುಸ್ತಿಪಟುಗಳ ಮತ್ತು ಹಾಕಿ ತಂಡದ ಎಲ್ಲ ಆಟಗಾರರೊಂದಿಗೂ ಕೂಡ ಮೋದಿ ಕುಶಲೋಪರಿ ವಿಚಾರಿಸಿ ಅವರ ಸಾಧನೆಯನ್ನು ಮನಸಾರೆ ಕೊಂಡಾಡಿದರು.

  • ವಾಹನ ಗುಜುರಿ ನೀತಿ ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ: ಮೋದಿ

    ವಾಹನ ಗುಜುರಿ ನೀತಿ ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ: ಮೋದಿ

    ನವದೆಹಲಿ: ವಾಹನ ಗುಜುರಿ ನೀತಿಗೆ ಇಂದು ಚಾಲನೆ ನೀಡಿರುವುದು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, “ವಾಹನ ಸ್ಕ್ರ್ಯಾಪೇಜ್ ನೀತಿಗೆ ಇಂದು ಚಾಲನೆ ನೀಡಿರುವುದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸ್ಕ್ರ್ಯಾಪಿಂಗ್ ಮೂಲಸೌಕರ್ಯ ಸ್ಥಾಪನೆಗಾಗಿ ಗುಜರಾತ್‍ನಲ್ಲಿ ಹೂಡಿಕೆದಾರರ ಶೃಂಗಸಭೆಯು ಹೊಸ ಶ್ರೇಣಿಯ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಾನು ನಮ್ಮ ಯುವ ಮತ್ತು ನವೋದ್ಯಮಗಳನ್ನು ವಿನಂತಿಸುತ್ತೇನೆ. ಇದನ್ನೂ ಓದಿ: 20 ವರ್ಷದ ಹಳೆಯ ವಾಹನಗಳು ಗುಜುರಿಗೆ – ಸೀತಾರಾಮನ್‌ ಹೇಳಿದ್ದು ಏನು? ಏನಿದು ಗುಜುರಿ ನೀತಿ?

    ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ವಿಧಾನದ ಮೂಲಕ ಹಂತ ಹಂತವಾಗಿ ತೊಡೆದು ಹಾಕುವುದು ವಾಹನ ಗುಜರಿ ನೀತಿಯಾಗಿದೆ. ನಮ್ಮ ಗುರಿ ಕಾರ್ಯಸಾಧುವಾದ ಚಲಾವಣೆಯ ಆರ್ಥಿಕತೆಯನ್ನು ಸೃಷ್ಟಿಸುವುದು ಮತ್ತು ಎಲ್ಲ ಪಾಲುದಾರರಿಗೆ ಮೌಲ್ಯವನ್ನು ತಂದು ಅವರನ್ನು ಪರಿಸರಕ್ಕೆ ಜವಾಬ್ದಾರರನ್ನಾಗಿ ಮಾಡುವುದಾಗಿದ್ದು, ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ವಿಲೇವಾರಿ ಮಾಡಲು ವಾಹನ ಸ್ಕ್ರ್ಯಾಪಿಂಗ್ ನೀತಿಯು ಸಹಾಯ ಮಾಡುತ್ತದೆ. ಕಾರ್ಯಸಾಧ್ಯವಾದ ವರ್ತುಲ ಆರ್ಥಿಕತೆಯನ್ನು (#circulareconomy) ಅಭಿವೃದ್ಧಿಪಡಿಸುವುದು ಹಾಗೂ ಪರಿಸರದ ಬಗ್ಗೆ ಜವಾಬ್ದಾರಿಯೊಂದಿಗೆ ಎಲ್ಲಾ ಮಧ್ಯಸ್ಥಗಾರರಿಗೆ ಮೌಲ್ಯವನ್ನು ತರುವುದು ನಮ್ಮ ಉದ್ದೇಶವಾಗಿದೆ.” ಎಂದಿದ್ದಾರೆ. ಇದನ್ನೂ ಓದಿ: ಹಳೆಯ ಕಾರು ಗುಜುರಿಗೆ ಹಾಕಿ ಹೊಸ ಕಾರು ಖರೀದಿಸಿದರೆ ಶೇ.5 ರಿಯಾಯಿತಿ

    ಹೂಡಿಕೆದಾರರ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ:
    ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಹೂಡಿಕೆದಾರರ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮ ಅಥವಾ ವಾಹನ ಗುಜರಿ ನೀತಿಯಡಿಯಲ್ಲಿ ವಾಹನ ಗುಜರಿ ಮೂಲಸೌಕರ್ಯ ಸ್ಥಾಪನೆಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ ಅಲ್ಲಂಗ್ ನಲ್ಲಿ ಸಮಗ್ರ ಗುಜರಿ ತಾಣ ಅಭಿವೃದ್ಧಿಗೆ ಹಡಗು ಒಡೆಯುವ ಉದ್ಯಮದ ಜೊತೆ ಸಮನ್ವಯ ಸಾಧಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹಾಗೂ ಗುಜರಾತ್ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹಳೆ ವಾಹನಗಳ ಗುಜರಿ ನೀತಿಯ ಕರಡು ರೆಡಿ – ಮರು ನೋಂದಣಿ, ನವೀಕರಣಕ್ಕೆ 8 ಪಟ್ಟು ಶುಲ್ಕ

  • ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    – ಚಾಲನೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ದೇಶದಲ್ಲಿ ಡಿಜಿಟಲೀಕರಣ ಅತೀ ವೇಗವಾಗಿ ಹಬ್ಬುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಪಾವತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಇ-ರುಪೀಗೆ ಪ್ರಧಾನಿ  ಚಾಲನೆ ನೀಡಿದ್ದಾರೆ.

    ದೇಶದಲ್ಲಿ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ. ನೋಟು ಅಮಾನ್ಯದ ಬಳಿಕ ಡಿಜಿಟಲ್ ಪೇಮೆಂಟ್ ಭಾರತದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ದೊಡ್ಡ ದೊಡ್ಡ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಿ ಕೂಡ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ. ಈಗ ಇಂಟರ್‍ ನೆಟ್ ಸಂಪರ್ಕ ಇಲ್ಲದೇ ಹಣವನ್ನು ಕಳುಹಿಸಬಹುದಾದ ಸೇವೆಗೆ ಮೋದಿ ಚಾಲನೆ ನೀಡಿದರು.

    ಏನಿದು ಇ-ರುಪೀ?
    ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದು ನಗದು ರಹಿತವಾಗಿ, ಇಂಟರ್‍ ನೆಟ್ ಸಂಪರ್ಕವಿಲ್ಲದೆ, ಕ್ಯೂಆರ್ ಕೋಡ್ ಅಥವಾ ಎಸ್‍ಎಂಎಸ್ ಆಧಾರಿತ ಇ-ವೋಚರ್‍ ನ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನೂ ಓದಿ: ಠಾಣೆಗೆ ಮುತ್ತಿಗೆ ಹಾಕಿದ ಆಫ್ರಿಕಾ ಪ್ರಜೆಗಳ ವಿರುದ್ಧ ಲಾಠಿಚಾರ್ಜ್

    ಯಾರು ಇ-ರುಪೀ ಫಲಾನುಭವಿಗಳಿರುತ್ತಾರೋ ಅವರ ಮೊಬೈಲ್‍ಗೆ ಸಂದೇಶದ ಮೂಲಕ ಕಳುಹಿಸಬಹುದು. ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಬಳಸದೇ ಇ-ರುಪೀ ಸಂದೇಶದ ಮೂಲಕ ವೋಚರ್ ಬಳಸಬಹುದಾಗಿದೆ.

    ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

    ದೇಶದಲ್ಲಿ ಈಗಾಗಲೇ ಕೊರೊನಾದಿಂದಾಗಿ ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ಬದಲಾವಣೆಗಳು ನಡೆಯುತ್ತಿವೆ. ಇದರೊಂದಿಗೆ ಇದೀಗ ಡಿಜಿಟಲ್ ಕ್ಷೇತ್ರಕ್ಕೆ ಇ-ರುಪೀ ಕಾಲಿಡುತ್ತಿದೆ.

  • ನಮಗೆ ಮೀಸಲಾತಿ ಬಗ್ಗೆ ಪಾಠ ಮಾಡುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

    ನಮಗೆ ಮೀಸಲಾತಿ ಬಗ್ಗೆ ಪಾಠ ಮಾಡುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ನೀಟ್ ಮೂಲಕ ಅಖಿಲ ಭಾರತ ಕೋಟಾದಡಿಯಲ್ಲಿ ಸೇರ್ಪಡೆಗೊಳ್ಳುವ ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಆದರೆ ಇದೀಗ ಬಿಜೆಪಿ ಈ ಬಗ್ಗೆ ಬೇರೆ ರೀತಿ ಉತ್ತರ ಕೊಡುತ್ತಿದೆ. ಮೀಸಲಾತಿ ಬಗ್ಗೆ ನಮಗೆ ಪಾಠ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ ಮೂರರಂದು ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಹಿಂದುಳಿದ ಜಾತಿಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು. ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಅಖಿಲ ಭಾರತ ಕೋಟಾದಡಿಯಲ್ಲಿ ಪಡೆದಿರುವ ಶೇಕಡಾ 15ರಷ್ಟು ಸೀಟುಗಳಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದರು. ಮೀಸಲಾತಿ ನಿರಾಕರಣೆಯಿಂದಾಗಿ 2017ರಿಂದ 11000 ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿರುವುದನ್ನು ಸೋನಿಯಾ ಗಾಂಧಿಯವರು ಪತ್ರದಲ್ಲಿ ಉಲ್ಲೇಖಿಸಿ ಅಖಿಲಭಾರತ ಕೋಟಾದಲ್ಲಿಯೂ ಒಬಿಸಿಗಳಿಗೆ ಮೀಸಲಾತಿ ನೀಡಬೇಕೆಂದು ಆಗ್ರಹ ಪಡಿಸಿದ್ದರು. ಇದಕ್ಕಾಗಿ ಸೋನಿಯಾಗಾಂಧಿಯವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

    ನನ್ನ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಹತ್ತು ವರ್ಷ ಯುಪಿಎ ಸರ್ಕಾರವಿದ್ದಾಗ ಒಬಿಸಿ ಮೀಸಲು ಬಗ್ಗೆ ಸೋನಿಯಾಗಾಂಧಿ ಅವರಿಗೆ ಜ್ಞಾನ ಇರಲಿಲ್ಲವೇ? ಎಂದು ಪ್ರಶ್ನಿಸಿದೆ. ಬಿಜೆಪಿಯ ಬಡವರ, ರೈತರ, ದಲಿತರ, ಹಿಂದುಳಿದ ಜಾತಿಗಳ ವಿರೋಧಿ ಎನ್ನುವದು ನನಗೆ ಗೊತ್ತಿದೆ. ಆದರೆ ಈ ಪಕ್ಷ ಇಷ್ಟೊಂದು ಬೌದ್ದಿಕ ದಿವಾಳಿತನದಿಂದ ಬಳಲುತ್ತಿದೆ ಎಂದು ಗೊತ್ತಿರಲಿಲ್ಲ. ಇತ್ತೀಚಿನ ಇತಿಹಾಸವನ್ನಾದರೂ ಸರಿಯಾಗಿ ಓದಿಕೊಂಡು ಪ್ರತಿಕ್ರಿಯಿಸಿ ಎಂದು ಅವರಿಗೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್

    ಬಿಜೆಪಿ ನಾಯಕರ ಗಮನಕ್ಕಾಗಿ ಕೆಲವು ವಾಸ್ತವಾಂಶಗಳನ್ನು ಮುಂದಿಡ ಬಯಸುತ್ತೇನೆ. ಮೊದಲನೇಯದಾಗಿ, ದೇಶದಲ್ಲಿಯೇ ಮೊದಲಬಾರಿ ಅತ್ಯಂತ ವೈಜ್ಞಾನಿಕವಾದ ಎಲ್.ಜಿ ಹಾವನೂರು ವರದಿಯ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ತಂದುಕೊಟ್ಟಿರುವುದು ರಾಜ್ಯದ ದೇವರಾಜ್ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ.

    ಎರಡನೇಯದಾಗಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಸಂವಿಧಾನಕ್ಕೆ 104ನೇ ತಿದ್ದುಪಡಿ ಮಾಡಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ಐಐಟಿ ಮತ್ತು ಐಐಎಂ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಜಾರಿಗೆ ತರಲಾಯಿತು. ವಿ.ಪಿ ಸಿಂಗ್ ಅವರು ಮಂಡಲವರದಿ ಅನುಷ್ಠಾನದ ಮೂಲಕ ಹಿಂದುಳಿದ ಜಾತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾಗಿದ್ದ ಅರ್ಜುನ್ ಸಿಂಗ್ ಅವರು ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಸಂವಿಧಾನಕ್ಕೆ 104ನೇ ತಿದ್ದುಪಡಿಯ ಮೂಲಕ ಮೀಸಲಾತಿ ಕಲ್ಪಿಸಿದ್ದರು ಎಂದು ಮಾಹಿತಿ ಹಂಚಿಕೊಂಡರು.

    ಮನಮೋಹನ್ ಸಿಂಗ್ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಾಗ ಅದನ್ನು ವಿರೋಧಿಸಿದ್ದು ಬಿಜೆಪಿ. ಭಾರತೀಯ ಜನತಾ ಪಕ್ಷ ಸೈದ್ಧಾಂತಿಕವಾಗಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಗೆ ವಿರುದ್ಧವಾಗಿರುವ ಪಕ್ಷ. ಆರ್‍ಎಸ್‍ಎಸ್‍ನ ಮೋಹನ್ ಭಾಗವತ ಅವರು ಬಹಿರಂಗವಾಗಿಯೇ ಮೀಸಲಾತಿ ವಿರೋಧಿಸಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ದಿವಂಗತ ನ್ಯಾಯಮೂರ್ತಿ ರಾಮಾ ಜೋಯಿಸ್ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ಹುಟ್ಟಿನಿಂದಲೇ ಮೀಸಲಾತಿ ವಿರೋಧಿಯಾದ ಬಿಜೆಪಿ ಈಗ ರಾಜಕೀಯ ಅನಿವಾರ್ಯತೆಗೆ ಸಿಕ್ಕಿ ಮೀಸಲಾತಿಯನ್ನು ಒಪ್ಪಿಕೊಂಡಿದೆ ಅಷ್ಟೆ. ನಮ್ಮದು ಬದ್ಧತೆ, ಬಿಜೆಪಿಯದ್ದು ಆತ್ಮವಂಚನೆಯ ನಾಟಕ ಎಂದು ವಾಗ್ದಾಳಿ ನಡೆಸಿದರು.

    ರಾಜ್ಯದ ವೈದ್ಯಕೀಯ ಕಾಲೇಜುಗಳಿಂದ ಶೇಕಡಾ 15ರಷ್ಟು ಸೀಟುಗಳನ್ನು ಅಖಿಲಭಾರತ ಕೋಟಾಕ್ಕಾಗಿ ಕಿತ್ತುಕೊಂಡಿರುವುದೇ ಮಹಾದ್ರೋಹ. ಈ ನಿರ್ಧಾರವನ್ನು ಕೈಗೊಂಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ನಮ್ಮ ಭೂಮಿ, ನಮ್ಮವರ ತೆರಿಗೆ ಹಣದಿಂದ ನೀಡಿರುವ ವಿನಾಯಿತಿ-ರಿಯಾಯಿತಿಯಿಂದ ನಿರ್ಮಾಣಗೊಂಡ ವೈದ್ಯಕೀಯ ಕಾಲೇಜುಗಳ ಸೀಟನ್ನು ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಯಾಕೆ ಉಡುಗೊರೆಯಾಗಿ ನೀಡಬೇಕು? ಬಿಜೆಪಿ ನಾಯಕರು ಉತ್ತರಿಸಬೇಕಾಗುತ್ತದೆ ಎಂದರು.

    ಅಖಿಲಭಾರತ ಕೋಟಾಕ್ಕಾಗಿ ರಾಜ್ಯದ ಮೆಡಿಕಲ್ ಕಾಲೇಜುಗಳ ಸೀಟುಗಳನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುವುದನ್ನು ನಾನು ಮುಖ್ಯಮಂತ್ರಿಯಾಗಿರುವಾಗಲೇ ವಿರೋಧಿಸಿದ್ದೆ. ತಮಿಳುನಾಡು ಸರ್ಕಾರ ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ. ಅದರ ಮುಂದಿನ ವಿಚಾರಣೆ ಆಗಸ್ಟ್ 3ಕ್ಕೆ ಇದೆ. ನ್ಯಾಯಾಲಯದ ತೀರ್ಪಿನಿಂದ ಮುಖ ಉಳಿಸಿಕೊಳ್ಳಲು ನರೇಂದ್ರ ಮೋದಿ ಸರ್ಕಾರ ಅಖಿಲಭಾರತ ಕೋಟಾದಡಿಯಲ್ಲಿಯೂ ಒಬಿಸಿಗಳಿಗೆ ಶೇಕಡಾ 27ರಷ್ಟು ಮೀಸಲಾತಿಯನ್ನು ಘೋಷಿಸಿದೆ. ಹಿಂದುಳಿದ ಜಾತಿಯ ಬಗ್ಗೆ ಪ್ರಧಾನಿಗಳ ಈ ಕಾಳಜಿಯ ನಾಟಕಕ್ಕೆ ಮುಂಬರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯೂ ಕಾರಣವಾಗಿರಬಹುದು. ಉಳಿದಂತೆ ಪ್ರಧಾನಿಯವರ ಈ ಘೋಷಣೆಯಲ್ಲಿ ಯಾವುದೇ ಬದ್ಧತೆ ಇಲ್ಲ ಎಂದು ಟೀಕೆ ವ್ಯಕ್ತಪಡಿಸಿದರು.

  • ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

    ರಾಜ್ಯಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

    – ಮುಖ್ಯಮಂತ್ರಿಗಳಿಂದ 5 ಲಕ್ಷ ಲಸಿಕೆಗೆ ಬೇಡಿಕೆ

    ಬೆಂಗಳೂರು: ರಾಜ್ಯಾದ್ಯಂತ ವೈದ್ಯಕೀಯ, ಆಯುಷ್, ದಂತ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ರಾಜ್ಯಾದ್ಯಂತ ವೈದ್ಯಕೀಯ, ಆಯುಷ್, ದಂತ ವೈದ್ಯಕೀಯ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದ್ದು, ಕೊರೊನಾ ಲಸಿಕೆ ಪಡೆದಿರುವ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಮಾತ್ರ ಕಾಲೇಜು ಹಾಜರಾತಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕೋವಿಡ್ ನಿರ್ವಹಣೆಗಾಗಿ ಎಲ್ಲ ಜಿಲ್ಲೆಗಳಲ್ಲಿ ತರಬೇತಿ:
    ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ನಿರ್ವಹಣೆ ಸಂಬಂಧ ವೈದ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷ ಮೇಲಿನವರೆಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇದಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಸೋಂಕು ತಗುಲಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮಧ್ಯಮ, ಹಿರಿಯ ವಯಸ್ಸಿನವರಿಗೆ ನೀಡುವ ಚಿಕಿತ್ಸೆಯನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಈ ವಯೋಮಾನದವರಿಗೆ ಸೋಂಕು ಬಂದರೆ ಮಕ್ಕಳ ತಜ್ಞರ ಬಳಿಯೇ ಹೋಗಬೇಕೆಂದು ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯರಿಗೆ ತರಬೇತಿ ನೀಡಲಾಗುವುದು ಎಂದರು.

    ತರಬೇತಿಯನ್ನು ವಿಷಯ ತಜ್ಞರು ನೀಡುತ್ತಿದ್ದು, ಇದನ್ನು ದಾಖಲೆಯಾಗಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಇಲ್ಲಿ ನೀಡುವ ತರಬೇತಿಯನ್ನು ವೀಡಿಯೋ ರೆಕಾರ್ಡ್ ಮಾಡಿಸಿ ದಾಖಲಿಸಬೇಕು. ಇತರೆ ವೈದ್ಯರಿಗೂ ಈ ವಿಷಯ ತಿಳಿಸಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಉಮಾಪತಿಗೆ ಬ್ಲ್ಯಾಕ್‍ಮೇಲ್, ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಆಡಿಯೋ ಬಾಂಬ್

    ಡಾ.ದೇವಿಶೆಟ್ಟಿ ಸಮಿತಿ ಮೂರನೇ ಅಲೆ ಸಿದ್ಧತೆಗೆ ವರದಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಾಣು ರೂಪಾಂತರಗೊಳ್ಳುತ್ತಿದ್ದು, ಮುಂದುವರಿದ ದೇಶಗಳು ಕೂಡ ಎಡವಿದೆ. ಮೊದಲ ಅಲೆಯಲ್ಲಿ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದೇವೆ. ಎರಡನೇ ಅಲೆಗೆ ಮುನ್ನ ಮೂಲಸೌಕರ್ಯ ಹೆಚ್ಚಿಸಲಾಗಿದೆ. 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

    ಕೇರಳ, ಮಹಾರಾಷ್ಟ್ರ ಗಡಿ ಹಂಚಿಕೊಳ್ಳುವುದರಿಂದ ಕೋವಿಡ್ ಬಗ್ಗೆ ಎಚ್ಚರವಾಗಿರಬೇಕು. ಸೋಂಕು ಇನ್ನೂ ಇರುವುದರಿಂದ ಸುರಕ್ಷತಾ ಕ್ರಮ ವಹಿಸಬೇಕು. ಬೆಂಗಳೂರು ನಗರ ಜಿಲ್ಲೆ ಕೋವಿಡ್ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕಾಗಿ ಎಲ್ಲ ಸಿಬ್ಬಂದಿಗೆ ಧನ್ಯವಾದ ಎಂದರು.

    ಮಕ್ಕಳಿಗೆ ಚಿಕಿತ್ಸೆ:
    ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಆರೈಕೆಗಾಗಿ ವಿಶೇಷ ವಿಭಾಗ ಆರಂಭಿಸಲಾಗುತ್ತಿದೆ. ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಒದಗಿಸಲಾಗಿದೆ. ಹಲವು ದೇಶಗಳಲ್ಲಿ ಮೂರನೇ ಅಲೆ ಬಂದಿದೆ. ಮೈಮರೆತರೆ ಮೂರನೇ ಅಲೆ ನಾವೇ ಉಂಟುಮಾಡಿದಂತಾಗುತ್ತದೆ. ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಕನಿಷ್ಠ ಶೇ.70 ಜನಸಂಖ್ಯೆಗೆ ಲಸಿಕೆ ನೀಡುವವರೆಗೂ ಎಚ್ಚರ ಅಗತ್ಯ ಎಂದರು.

    ಪ್ರಧಾನಿಗಳು, ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು, ನಮ್ಮ ಮುಖ್ಯಮಂತ್ರಿಗಳು ದಿನಕ್ಕೆ 5 ಲಕ್ಷ ಲಸಿಕೆಗೆ ಬೇಡಿಕೆ ಇಟ್ಟಿದ್ದಾರೆ. ಒಂದು ತಿಂಗಳಲ್ಲಿ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈಗಾಗಲೇ 2.40 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದೇವೆ ಎಂದು ಸಿಎಂ ಮನವಿ ಮಾಡಿದ್ದಾರೆ. ಈ ತಿಂಗಳಲ್ಲೇ ಹೆಚ್ಚು ಲಸಿಕೆ ಸಿಗುವ ನಿರೀಕ್ಷೆ ಇದೆ ಎಂದರು.

    ಹೆಚ್ಚು ಎಚ್ಚರಿಕೆಯಿಂದಿರಬೇಕೆಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ. ಲಸಿಕೆ ಹೆಚ್ಚು ನೀಡಲು ಹಾಗೂ ಕಂಟೇನ್ ಮೆಂಟ್ ನಿಯಮ ಪಾಲಿಸಲು ಸೂಚಿಸಿದ್ದಾರೆ. ಈಗಾಗಲೇ ಮೂಲಸೌಕರ್ಯ ಹೆಚ್ಚಳಕ್ಕೆ 23 ಸಾವಿರ ಕೋಟಿ ರೂ. ಅನ್ನು ಕೇಂದ್ರ ನೀಡಿದೆ. ಇದನ್ನು ಗ್ರಾಮೀಣ ಆರೋಗ್ಯ ಮೂಲಸೌಕರ್ಯ ಹೆಚ್ಚಿಸಲು ಬಳಸಲು ಸಲಹೆ ನೀಡಲಾಗಿದೆ ಎಂದರು.

  • ಮೂರನೇ ಅಲೆ ಆತಂಕ ಆಮ್ಲಜನಕ ಉತ್ಪಾದನೆ ಪೂರೈಕೆ ಕುರಿತಂತೆ ಪ್ರಧಾನಿ ಸಭೆ

    ಮೂರನೇ ಅಲೆ ಆತಂಕ ಆಮ್ಲಜನಕ ಉತ್ಪಾದನೆ ಪೂರೈಕೆ ಕುರಿತಂತೆ ಪ್ರಧಾನಿ ಸಭೆ

    ನವದೆಹಲಿ: ದೇಶಾದ್ಯಂತ ಆಮ್ಲಜನಕ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆ ಮತ್ತು ಘಟಕಗಳ ಸ್ಥಾಪನೆಯ ಪ್ರಗತಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿಂದು ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಯಿತು.

    ದೇಶಾದ್ಯಂತ ಸ್ಥಾಪನೆಯಾಗುತ್ತಿರುವ ಪಿಎಸ್‍ಎ (Pressure Swing Adsorption) ಆಕ್ಸಿಜನ್ ಉತ್ಪಾದನಾ ಘಟಕಗಳ ನಿರ್ಮಾಣ ಪ್ರಗತಿ ಕುರಿತು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ವಿವರ ನೀಡಿದರು. ದೇಶಾದ್ಯಂತ 1,500ಕ್ಕಿಂತ ಹೆಚ್ಚಿನ ಪಿಎಸ್‍ಎ ಆಕ್ಸಿಜನ್ ಘಟಕಗಳು ತಲೆಎತ್ತಲಿದ್ದು, ಈ ಘಟಕಗಳ ನಿರ್ಮಾಣಕ್ಕೆ ಪಿಎಂ ಕೇರ್ ನಿಧಿ, ಸಾರ್ವಜನಿಕ ವಲಯದ ಘಟಕಗಳು ಮತ್ತು ವಿವಿಧ ಸಚಿವಾಲಯಗಳು ಅನುದಾನ ಒದಗಿಸುತ್ತಿವೆ. ಪಿಎಂ ಕೇರ್ ನಿಧಿಯಿಂದ ಅನುದಾನ ಪಡಿದಿರುವ ಪಿಎಸ್‍ಎ ಆಕ್ಸಿಜನ್ ಘಟಕಗಳು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರಗಳಲ್ಲಿ ತಲೆಎತ್ತಲಿವೆ. ಪಿಎಂ ಕೇರ್ ನಿಧಿಯ ಅನುದಾನ ಪಡೆದ ಈ ಎಲ್ಲಾ ಘಟಕಗಳು ಕಾರ್ಯಾಚರಣೆ ಆರಂಭಿಸಿದರೆ 4 ಲಕ್ಷಕ್ಕಿಂತ ಹೆಚ್ಚಿನ ಆಕ್ಸಿಜನೇಟೆಡ್ ಬೆಡ್ ಗಳಿಗೆ ಆಮ್ಲಜನಕ ಪೂರೈಸಲಿವೆ ಎಂದು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ತೆಂಗು ರಫ್ತಿಗೆ ಅವಕಾಶ, ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ: ಶೋಭಾ ಕರಂದ್ಲಾಜೆ

    ಈ ಎಲ್ಲಾ ಘಟಕಗಳು ಆದಷ್ಟು ಬೇಗ ಕಾರ್ಯಾಚರಣೆ ಆರಂಭಿಸುವುದನ್ನು ಖಾತ್ರಿಪಡಿಸಬೇಕು. ಇವು ಆಯಾ ರಾಜ್ಯ ಸರ್ಕಾರಗಳ ಜತೆ ನಿಕಟ ಸಂಪರ್ಕ ಸಾಧಿಸಿ, ಕಾರ್ಯಾಚರಣೆ ನಡೆಸುವುದನ್ನು ಖಚಿತಪಡಿಸಬೇಕು ಎಂದು ಪ್ರಧಾನಿ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಆಕ್ಸಿಜನ್ ಘಟಕಗಳ ತ್ವರಿತ ನಿರ್ಮಾಣ ಪ್ರಗತಿ ಕುರಿತು ರಾಜ್ಯ ಸರ್ಕಾರಗಳ ಉನ್ನತ ಅಧಿಕಾರಿಗಳ ಜೊತೆ ನಿಕಟ ಮತ್ತು ನಿರಂತರ ಸಂಪರ್ಕ ಸಾಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನ ಮಂತ್ರಿ ಅವರಿಗೆ ಮನವರಿಕೆ ಮಾಡಿದರು.

    ಆಕ್ಸಿಜನ್ ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ಮತ್ತು ಕಾರ್ಯಾಚರಣೆ ನಿರ್ವಹಣೆ ನಿಗಾ ವಹಿಸಲು ಆಸ್ಪತ್ರೆ ಸಿಬ್ಬಂದಿಗೆ ಸಾಕಷ್ಟು ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲೂ ತರಬೇತಾದ ಸಿಬ್ಬಂದಿ ಲಭ್ಯವಾಗುವುದನ್ನು ಖಾತ್ರಿಪಡಿಸುವಂತೆ ಪ್ರಧಾನಿ ಅವರು, ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಕ್ಷೇತ್ರದ ತಜ್ಞರು ಈಗಾಗಲೇ ತರಬೇತಿ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ದೇಶಾದ್ಯಂತ ಸುಮಾರು 8 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಪ್ರಧಾನಿ ಅವರಿಗೆ ತಿಳಿಸಿದರು. ದೇಶಾದ್ಯಂತ ಆಕ್ಸಿಜನ್ ಘಟಕಗಳ ಕಾರ್ಯದಕ್ಷತೆ ಮತ್ತು ಕಾರ್ಯ ನಿರ್ವಹಣೆ ಮೇಲೆ ನಿಗಾ ಇಡಲು ಐಒಟಿ (Internet of Things – IOT) ತಂತ್ರಜ್ಞಾನ ಅಳವಡಿಸುವಂತೆ ಪ್ರಧಾನ ಮಂತ್ರಿ ಅವರು ಸಲಹೆ ನೀಡಿದರು. ಆಕ್ಸಿಜನ್ ಘಟಕಗಳ ಕಾರ್ಯ ನಿರ್ವಹಣೆಗಾಗಿ ಐಒಟಿ ತಂತ್ರಜ್ಞಾನ ಅಳವಡಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಪ್ರಧಾನಿ ಅವರ ಗಮನಕ್ಕೆ ತಂದರು.

    ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಸಂಪುಟ ಕಾರ್ಯದರ್ಶಿ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

  • ಯೋಗ ಭರವಸೆಯ ಆಶಾಕಿರಣ: ಮೋದಿ

    ಯೋಗ ಭರವಸೆಯ ಆಶಾಕಿರಣ: ಮೋದಿ

    ನವದೆಹಲಿ: ಇಡೀ ಜಗತ್ತು ಇಂದು ಕೋವಿಡ್-19 ವಿರುದ್ಧ ಹೋರಾಡುತ್ತಿರುವಾಗ ಯೋಗ ನಮ್ಮ ಜೀವನದಲ್ಲಿ ಭರವಸೆಯ ಆಶಾಕಿರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ-ಕಾರ್ಯಕ್ರಮಗಳು ನಡೆದಿಲ್ಲ. ಆದರೂ ಜನರಲ್ಲಿ ಯೋಗದ ಬಗ್ಗೆ ಇರುವ ಉತ್ಸಾಹ, ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂದರು. ಇದನ್ನೂ ಓದಿ: ಬರೋಬ್ಬರಿ 54 ದಿನಗಳ ಬಳಿಕ ಇಂದಿನಿಂದ ಸಾರಿಗೆ ಬಸ್ ಸಂಚಾರ ಆರಂಭ

    ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ಕೊರೋನಾ ಚಿಕಿತ್ಸೆಯ ನಡುವೆ ಇಂದು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಿದ್ದಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಅಂತ ಪ್ರಧಾನಿ ಹೇಳಿದರು.

    ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ‘ಉತ್ತಮ ಆರೋಗ್ಯಕ್ಕಾಗಿ ಯೋಗ’ ಎಂಬುದಾಗಿದೆ. ಸದ್ಯದ ಪರಿಸ್ಥಿತಿ ಹಾಗೂ ಆರೋಗ್ಯದ ದೃಷ್ಟಿಯಿಂದ ಜನ ಯೋಗದ ಕಡೆ ಹೆಚ್ಚು ಗಮನಹರಿಸುತ್ತಿದ್ದಾರೆ. ಹೀಗಾಗಿ ಜನರು ಆರೋಗ್ಯಯುತವಾಗಿ ಬಾಳಲಿ ಎಂದು ತಿಳಿಸಿದರು.  ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಹೋಗೋಣ: ಸಿಎಂ ಠಾಕ್ರೆಗೆ ಪತ್ರ ಬರೆದ ಶಿವಸೇನೆ ಎಂಎಲ್‍ಎ

    ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ ಎಂದಿರುವ ಪ್ರಧಾನಿ, ಈಗ ಎಂ-ಯೋಗ ಅಪ್ಲಿಕೇಶನ್ ಲಭ್ಯವಿದೆ. ಈ ಅಪ್ಲಿಕೇಶನ್ ವಿಶ್ವದಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

  • ಲಾಕ್‍ಡೌನ್ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ: ಮೋದಿ

    ಲಾಕ್‍ಡೌನ್ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ: ಮೋದಿ

    ನವದೆಹಲಿ: ಜಿಲ್ಲೆಗೆ ಅನುಗುಣವಾಗುವಂತೆ ಕ್ರಮ ಕೈಗೊಳ್ಳಿ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಸಂಬಂಧ ಸಂಪೂರ್ಣ ಅಧಿಕಾರವನ್ನು ಡಿಸಿಗಳ ಹೆಗಲಿಗೆ ಹಾಕಿದ್ದಾರೆ.

    ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಪ್ರಧಾನಿ, ಲಾಕ್ ಡೌನ್ ನಿರ್ಧಾರವನ್ನು ಜಿಲ್ಲಾಡಳಿತದ ಹೆಗಲಿಗೆ ವಹಿಸಿದ್ದಾರೆ. ಜಿಲ್ಲೆಯ ಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

    ಜಿಲ್ಲಾಡಳಿತಕ್ಕೆ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಜಿಲ್ಲೆಗೆ ಅನುಗುಣವಾಗಿ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮೋದಿ ತಿಳಿಸಿದ್ದಾರೆ.  ಇದನ್ನು ಓದಿ: ಜಿಲ್ಲೆಯಲ್ಲಿ ಕಮಾಂಡರ್‌ನಂತೆ ಕೆಲಸ ಮಾಡಿ – ಡಿಸಿಗಳಿಗೆ ಸೂಚನೆ

    ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶ ಗೆದ್ದಂತೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಅಧಿಕಾರಿಗಳು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ ಎಂದರು.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು, ಕೋಲಾರ, ಮಂಡ್ಯ, ತುಮಕೂರು, ಕೊಡಗು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ ಮೊದಲಾದ ಜಿಲ್ಲೆಗಳ ಡಿಸಿಗಳ ಜೊತೆ ಪಿಎಂ ಇಂದು ಸಂವಾದ ನಡೆಸಿದರು.

  • ದೇಶದಲ್ಲಿ ಕಂಪ್ಲಿಟ್ ಲಾಕ್‍ಡೌನ್‍ಗೆ ಒಪ್ಪದ ಕೇಂದ್ರ – ರಾಜ್ಯಗಳಿಗೆ ಲಾಕ್‍ಡೌನ್ ಅಧಿಕಾರ ಕೊಟ್ಟ ಪ್ರಧಾನಿ

    ದೇಶದಲ್ಲಿ ಕಂಪ್ಲಿಟ್ ಲಾಕ್‍ಡೌನ್‍ಗೆ ಒಪ್ಪದ ಕೇಂದ್ರ – ರಾಜ್ಯಗಳಿಗೆ ಲಾಕ್‍ಡೌನ್ ಅಧಿಕಾರ ಕೊಟ್ಟ ಪ್ರಧಾನಿ

    – 2 ತಿಂಗಳು 5 ಕೆಜಿ ಉಚಿತ ಪಡಿತರ ಘೋಷಣೆ

    ನವದೆಹಲಿ: ದೇಶದಲ್ಲಿ ಕೊರೊನಾ ಮಹಾಸ್ಫೋಟಕ್ಕೆ ಬ್ರೇಕ್ ಹಾಕಲು ಸೋಂಕು ತಜ್ಞರಿಂದ ಹಿಡಿದು ಸುಪ್ರೀಂಕೋರ್ಟ್‍ವರೆಗೂ ಲಾಕ್‍ಡೌನ್ ಒಂದೇ ಮಾರ್ಗ ಎಂದು ಹೇಳ್ತಿದ್ದಾರೆ.

    ಲಾಕ್‍ಡೌನ್ ವಿಧಿಸಿದ್ರೂ, ವಿಧಿಸದಿದ್ರೂ ಆರ್ಥಿಕ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಇಂದಿನ ಮೋದಿ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಸುದ್ದಿ ಹರಡಿತ್ತು. ಆದರೆ ಮೋದಿ ಸರ್ಕಾರ ಇಡೀ ದೇಶದಲ್ಲಿ ಕಂಪ್ಲೀಟ್ ಲಾಕ್‍ಡೌನ್‍ಗೆ ಮನಸ್ಸು ಮಾಡಿಲ್ಲ. ಕಾದು ನೊಡುವ ತಂತ್ರಕ್ಕೆ ಶರಣಾಗಿದೆ.

    ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನೇ ನಡೆಸಿಲ್ಲ. ಸದ್ಯದ ಮಟ್ಟಿಗೆ ರಾಜ್ಯಗಳಿಗೆ ಲಾಕ್‍ಡೌನ್ ನಿರ್ಣಯಾಧಿಕಾರವನ್ನು ಮೋದಿ ಸರ್ಕಾರ ನೀಡಿದೆ. ಕೊರೊನಾ ಸಂಕಷ್ಟದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಹೆಚ್ಚುವರಿಯಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಪಿಎಲ್ ಪಡಿತರದಾರರಿಗೆ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು. ಇದರಿಂದ 80 ಕೋಟಿ ಭಾರತೀಯರಿಗೆ ಅನುಕೂಲವಾಗಲಿದೆ.

    ಸ್ಥಳೀಯವಾಗಿ ಜಾರಿ ಆಗ್ತಿರುವ ಲಾಕ್‍ಡೌನ್ ಪರಿಸ್ಥಿತಿ, ಮಳೆ ಇನ್ನಿತರೆ ಅಂಶಗಳನ್ನು ಪರಿಗಣಿಸಿ ಎರಡು ತಿಂಗಳು ಉಚಿತ ಆಹಾರ ಧಾನ್ಯ ನೀಡಲು ಕೇಂದ್ರ ತೀರ್ಮಾನಿಸಿದೆ.

  • ಪಿಎಂ ಕೇರ್ ಫಂಡ್‍ಗೆ 37 ಲಕ್ಷ ರೂ. ನೀಡಿದ ಪ್ಯಾಟ್ ಕಮ್ಮಿನ್ಸ್

    ಪಿಎಂ ಕೇರ್ ಫಂಡ್‍ಗೆ 37 ಲಕ್ಷ ರೂ. ನೀಡಿದ ಪ್ಯಾಟ್ ಕಮ್ಮಿನ್ಸ್

    ಮುಂಬೈ: ಐಪಿಎಲ್‍ನಲ್ಲಿ ಕೋಲ್ಕತ್ತಾ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಎರಡನೇ ಅಲೆಯ ನಡುವೆ ಭಾರತದಲ್ಲಿ ತಲೆದೂರಿರುವ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನಿಧಿಗೆ 50,000 ಡಾಲರ್ (37 ಲಕ್ಷ ರೂ.) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಕಮ್ಮಿನ್ಸ್, ನಾನು ಭಾರತ ದೇಶವನ್ನು ತುಂಬಾ ಇಷ್ಟಪಡುತ್ತೇನೆ. ಕಳೆದ ಹಲವು ವರ್ಷಗಳಿಂದ ನಾನು ಭಾರತಕ್ಕೆ ಬರುತ್ತಿದ್ದೇನೆ. ಬಂದಾಗಲೆಲ್ಲಾ ಇಲ್ಲಿನ ಜನ ಪ್ರೀತಿ, ವಾತ್ಸಲ್ಯದಿಂದ ಸಲಹುತ್ತಿದ್ದಾರೆ. ಆದರೆ ಇದೀಗ ಕೊರೊನಾ ಮಹಾಮಾರಿಯಿಂದ ಜನ ಬಳಲುತ್ತಿದ್ದಾರೆ. ಇದನ್ನು ಕಂಡು ನನಗೆ ತುಂಬಾ ದುಖಃವಾಗುತ್ತಿದೆ ಎಂದಿದ್ದಾರೆ.

    ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಕೂಡ ಐಪಿಎಲ್ ಪಂದ್ಯಾಟಗಳು ನಡೆಯುತ್ತಿರುವುದನ್ನು ಕಂಡು ನಾನು ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಭಾರತೀಯರಿಗೆ ಲಾಕ್‍ಡೌನ್ ಮಧ್ಯೆ ಕೆಲ ಕಾಲ ವಿಶ್ರಾಂತಿ ಮತ್ತು ಮನರಂಜನೆಯನ್ನು ನೀಡಲು ಐಪಿಎಲ್ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಾನೊಬ್ಬ ಆಟಗಾರನಾಗಿ ನನ್ನನ್ನು ಇಷ್ಟಪಡುವ ಜನರಿಗೆ ಸಹಾಯದ ಹಸ್ತ ಚಾಚಲು ಬಯಸುತ್ತೇನೆ. ಹಾಗಾಗಿ ಭಾರತದ ಪ್ರಧಾನಿ ಅವರ ನಿಧಿಗೆ ದೇಣಿಗೆ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿಗಾಗಿ ಈ ಹಣ ನೀಡಲು ಮುಂದಾಗಿದ್ದೇನೆ. ನಾನು ಇತರ ಐಪಿಎಲ್‍ನ ಸಹ ಆಟಗಾರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡುತ್ತೇನೆ. ನಾನು ಈಗಾಗಲೇ 50,000 ಡಾಲರ್‍ ಗಳನ್ನು ದೇಣಿಗೆಯಾಗಿ ನೀಡಿದ್ದೇನೆ ಎಂದು ತಿಳಿಸಿದರು.

    ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕಮ್ಮಿನ್ಸ್ ಈ ಬಾರಿಯ ಐಪಿಎಲ್‍ನಲ್ಲಿ 5 ಪಂದ್ಯಗಳಿಂದ 5 ವಿಕೆಟ್ ಪಡೆದರೆ ಬ್ಯಾಟಿಂಗ್‍ನಲ್ಲಿ ಒಟ್ಟು 82 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಕಮ್ಮಿನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 66ರನ್ (34 ಎಸೆತ, 4 ಬೌಂಡರಿ, 6ಸಿಕ್ಸ್) ಸಿಡಿಸಿ ಮಿಂಚಿದ್ದರು.