Tag: PM Relief Fund

  • ಹುಟ್ಟುಹಬ್ಬಕ್ಕೆ ಕೂಡಿಟ್ಟ 11,111 ರೂ. ಕೊರೊನಾ ಹೋರಾಟಕ್ಕೆ ನೀಡಿದ ಬಾಲಕಿ

    ಹುಟ್ಟುಹಬ್ಬಕ್ಕೆ ಕೂಡಿಟ್ಟ 11,111 ರೂ. ಕೊರೊನಾ ಹೋರಾಟಕ್ಕೆ ನೀಡಿದ ಬಾಲಕಿ

    – ಪ್ರತಿವರ್ಷ ಕೂಡಿಟ್ಟಿದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡ್ತಿದ್ದ ಪೋರಿ
    – ಮೋದಿ ತಾತ ಉತ್ತಮ ಕೆಲ್ಸ ಮಾಡ್ತಿದ್ದಾರೆ ಅದಕ್ಕೆ ಸಹಾಯ ಮಾಡ್ತಿದೀನಿ

    ಕೋಲಾರ: ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪುಟಾಣಿ ಬಾಲಕಿಯೊರ್ವಳು ಮಾದರಿಯಾಗಿದ್ದಾಳೆ.

    ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮೂಲದ 2ನೇ ತರಗತಿ ವಿದ್ಯಾರ್ಥಿನಿ ಚರಿತ ಆರ್. ರಾಯಲ್ ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ. ಹುಟ್ಟುಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಾಲಕಿ ನೀಡಿದ್ದಾಳೆ. ಕೋವಿಡ್-19 ಚಿಕಿತ್ಸೆಗಾಗಿ ತಾನೂ ಕೂಡಿಟ್ಟಿದ್ದ 11,111 ರೂಪಾಯಿ ಹಣವನ್ನು ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಬಾಲಕಿ ಹಸ್ತಾಂತರ ಮಾಡಿದ್ದಾಳೆ.

    ಪ್ರತಿವರ್ಷ ತನ್ನ ಹುಟ್ಟುಹಬ್ಬದ ದಿನ ಕೂಡಿಟ್ಟಿದ್ದ ಹಣವನ್ನು ಅನಾಥಶ್ರಮಕ್ಕೆ ನೀಡುತ್ತಿದ್ದ ವಿದ್ಯಾರ್ಥಿನಿ, ಈ ಬಾರಿ ಪ್ರಧಾನಮಂತ್ರಿ ರಿಲೀಫ್ ಫಂಡ್‍ಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಮಂಗಳವಾರ ಚರಿತಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಹುಟ್ಟುಹಬ್ಬದ ಹಿನ್ನೆಲೆ ಬಾಲಕಿ ದೇಣಿಗೆ ನೀಡಿದ್ದಾಳೆ. ಮೋದಿ ತಾತ ಉತ್ತಮ ಕೆಲಸ ಮಾಡ್ತಿದ್ದಾರೆ, ಆದ್ದರಿಂದ ಈ ನಿರ್ಧಾರ ಮಾಡಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

    ತನ್ನ ಪೋಷಕರಾದ ಲಾವಣ್ಯ ಹಾಗೂ ರಮೇಶ್ ಕುಮಾರ್ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಬಾಲಕಿ  ಹಣವನ್ನ ನೀಡಿದ್ದಾಳೆ. ವಿದ್ಯಾರ್ಥಿನಿಯ ಈ ಕಾರ್ಯಕ್ಕೆ ಕೋಲಾರ ಡಿಸಿ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಪಿಎಂ ಪರಿಹಾರ ನಿಧಿಗೆ 1 ಲಕ್ಷ ದೇಣಿಗೆ ನೀಡಿದ ಕವಿ ಕಣವಿ

    ಪಿಎಂ ಪರಿಹಾರ ನಿಧಿಗೆ 1 ಲಕ್ಷ ದೇಣಿಗೆ ನೀಡಿದ ಕವಿ ಕಣವಿ

    ಧಾರವಾಡ: ಸಾಹಿತಿಗಳೆಂದರೆ ಕೇವಲ ಕವಿತೆ, ಸಾಹಿತ್ಯ ರಚನೆಗೆ ಹಾಗೂ ಪ್ರಶಸ್ತಿಗಳನ್ನು ಸ್ವೀಕರಿಸಲು ಮಾತ್ರ ಸೀಮಿತವಲ್ಲ. ರಾಷ್ಟ್ರಕ್ಕೆ ಏನಾದರೂ ವಿಪತ್ತು ಎದುರಾದಾಗ ಅದಕ್ಕೆ ಸಹಾಯ ಮಾಡುವ ಹೃದಯವನ್ನೂ ಹೊಂದಿರುತ್ತಾರೆ ಎಂಬುದನ್ನು ಧಾರವಾಡ ಕಲ್ಯಾಣನಗರ ಚೆಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ಅವರು ಸಾಬೀತು ಮಾಡಿದ್ದಾರೆ.

    ಕೊರೊನಾ ನಿಯಂತ್ರಣಕ್ಕೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕವಿ ಕಣವಿ ಅವರು 1 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಉಳಿದ ಸಾಹಿತಿ ಹಾಗೂ ಕವಿಗಳಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಕಣವಿ ಅವರು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ದೇಣಿಗೆ ನೀಡಿದ ಮೊದಲ ಕವಿಯಾಗಿದ್ದಾರೆ.

    ಶಾಸಕ ಅರವಿಂದ ಬೆಲ್ಲದ ಅವರ ಮುಖಾಂತರ ಕವಿ ಕಣವಿ ಪಿಎಂ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ಮೊತ್ತದ ಚೆಕ್‍ನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದು ನನಗೆ ಖುಷಿಯಾಗಿದೆ. ಕೋಟ್ಯಧಿಪತಿಗಳಾದ ಕವಿಗಳು, ಸಾಹಿತಿಗಳು ಕೂಡ ಮುಕ್ತವಾಗಿ ಪರಿಹಾರ ನಿಧಿಗೆ ಸಹಾಯ ಮಾಡಬೇಕು. ಮುಂದೆಯೂ ಲಾಕ್‍ಡೌನ್ ವಿಸ್ತರಣೆ ಮಾಡಿದರೆ ಒಳ್ಳೆಯದು. ಜನ ಹೆಚ್ಚು ಹೊರಗಡೆ ಓಡಾಡಬಾರದು. ಮನೆ ಬಾಗಿಲಿಗೇ ತರಕಾರಿಗಳು ಬರುತ್ತಿದ್ದು, ಅವುಗಳನ್ನು ಖರೀದಿಸುವ ಮೂಲಕ ಹೆಚ್ಚು ಹೊರಗಡೆ ಹೋಗುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.

  • ಮುಂಗಡವಾಗಿ ಬಂದಿದ್ದ 3 ಕೋಟಿ ಹಣವನ್ನ ದೇಣಿಗೆ ನೀಡಿದ ರಾಘವ

    ಮುಂಗಡವಾಗಿ ಬಂದಿದ್ದ 3 ಕೋಟಿ ಹಣವನ್ನ ದೇಣಿಗೆ ನೀಡಿದ ರಾಘವ

    ಚೆನ್ನೈ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಅನೇಕ ನಟ-ನಟಿಯರು ಹಣದ ಸಹಾಯವನ್ನು ಮಾಡಿದ್ದಾರೆ. ಇದೀಗ ನೃತ್ಯ ನಿರ್ದೇಶಕ, ನಟ, ರಾಘವ್ ಲಾರೆನ್ಸ್ ತಮಗೆ ಮುಂಗಡವಾಗಿ ಬಂದಿದ್ದ ಮೂರು ಕೋಟಿ ಹಣವನ್ನು ಕೋವಿಡ್-19 ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

    ರಾಘವ ಲಾರೆನ್ಸ್ ಅವರು ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕೆಲಸ ಹಾಗೂ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಟ್ರಸ್ಟ್ 15ನೇ ವರ್ಷಕ್ಕೆ ಕಾಲಿಟ್ಟುತ್ತಿದೆ. ಇದನ್ನು ಸಂಭ್ರಮಿಸಲು ಮಂಗಳಮುಖಿಯರಿಗಾಗಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಟ್ರಸ್ಟ್ ಮೂಲಕ ಮಂಗಳಮುಖಿಯರಿಗಾಗಿ ಮನೆ ಕಟ್ಟಲು ಭೂಮಿಯನ್ನು ನೀಡಿದ್ದಾರೆ. ಇಷ್ಟೆಲ್ಲಾ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ರಾಘವ ಈಗ ಕೊರೊನಾ ಪರಿಹಾರ ನಿಧಿಗೂ ದೇಣಿಗೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

    ನಟ ರಾಘವ್ ಲಾರೆನ್ಸ್ ತಮಗೆ ಅಡ್ವಾನ್ಸ್ ಆಗಿ ಬಂದಿದ್ದ ಮೂರು ಕೋಟಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ನಟ ರಾಘವ ಲಾರೆನ್ಸ್‌ಗೆ ರಜನಿಕಾಂತ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ರಾಘವ ‘ಚಂದ್ರಮುಖಿ-2’ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅಡ್ವಾನ್ಸ್ ರೂಪದಲ್ಲಿ ರಾಘವ ಲಾರೆನ್ಸ್‌ಗೆ ಮೂರು ಕೋಟಿ ಹಣ ನೀಡಲಾಗಿತ್ತು. ಇದೀಗ ಅದೇ ಹಣವನ್ನು ರಾಘವ ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ರಾಘವ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    “ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮೆಲ್ಲರೊಂದಿಗೆ ಸಂತೋಷದ ಸುದ್ದಿ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನನ್ನ ಮುಂದಿನ ಪ್ರಾಜೆಕ್ಟ್‌ನಲ್ಲಿ ರಜನಿಕಾಂತ್ ಅವರ ‘ಚಂದ್ರಮುಖಿ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಹೀಗಾಗಿ ಈ ಸಿನಿಮಾಗಾಗಿ ಮುಂಗಡವಾಗಿ ಪಡೆದುಕೊಂಡಿರುವ ಮೂರು ಕೋಟಿ ಹಣವನ್ನು ನಾನು ಕೊರೊನಾ ವೈರಸ್ ಪರಿಹಾರ ನಿಧಿಗೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.

    https://www.facebook.com/offllawrence/photos/a.784659494979754/2618139101631775/?type=3&theater

    ಪಿಎಂ ಕೇರ್ಸ್ ನಿಧಿಗೆ 50 ಲಕ್ಷ, ತಮಿಳುನಾಡಿನ ಸಿಎಂ ಪರಿಹಾರ ನಿಧಿಗೆ 50 ಲಕ್ಷ, ಸಿನಿಮಾ ಒಕ್ಕೂಟಕ್ಕೆ 50 ಲಕ್ಷ, ನನ್ನ ಡ್ಯಾನ್ಸರ್ ಒಕ್ಕೂಟಕ್ಕೆ 50 ಲಕ್ಷ, ಅಂಗವಿಕಲ ಮಕ್ಕಳ ಕಲ್ಯಾಣಕ್ಕೆ 25 ಲಕ್ಷ ಮತ್ತು ನನ್ನ ಹುಟ್ಟೂರು ರಾಯಪುರಂ, ದೇಸಿಯನಗರಕ್ಕೆ 75 ಲಕ್ಷ ನೀಡಲು ಬಯಸುತ್ತೇನೆ. ಈ ಹಣದಿಂದ ಅಲ್ಲಿನ ದೈನಂದಿನ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಪೊಲೀಸರ ಸಹಾಯದಿಂದ ತಲುಪಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.

  • ಟ್ರೋಫಿ ಮಾರಿ ಪಿಎಂ ಪರಿಹಾರ ನಿಧಿಗೆ 4.30 ಲಕ್ಷ ನೀಡಿದ ಗಾಲ್ಫರ್ ಅರ್ಜುನ್

    ಟ್ರೋಫಿ ಮಾರಿ ಪಿಎಂ ಪರಿಹಾರ ನಿಧಿಗೆ 4.30 ಲಕ್ಷ ನೀಡಿದ ಗಾಲ್ಫರ್ ಅರ್ಜುನ್

    – ಕಷ್ಟಪಟ್ಟು ಗೆದ್ದಿದ್ದ 102 ಟ್ರೋಫಿಗಳ ಮಾರಾಟ
    – ದೇಶಕ್ಕೆ ಅಗತ್ಯವಿದ್ದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಅನೇಕ ಕ್ರಿಡಾಪಟುಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇದೀಗ ಭಾರತದ ಗಾಲ್ಫರ್ ಅರ್ಜುನ್ ಭಾಟಿ ತಾವು ಗೆದ್ದ ಟ್ರೋಫಿಗಳನ್ನು ಮಾರಾಟ ಮಾಡಿ ಪಿಎಂ ಕೇರ್ಸ್ ನಿಧಿಗೆ ಹಣ ನೀಡಿದ್ದಾರೆ.

    15 ವರ್ಷದ ಯುವ ಭಾರತೀಯ ಗಾಲ್ಫ್ ಆಟಗಾರ ಅರ್ಜುನ್ ಭಾಟಿ ತಾನು ಕಷ್ಟಪಟ್ಟು ಗೆದ್ದಿದ್ದ ಟ್ರೋಫಿಗಳನ್ನು ಮಾರಾಟ ಮಾಡಿ ಪಿಎಂ ಪರಿಹಾರ ನಿಧಿಗೆ ಬರೋಬ್ಬರಿ 4.30 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. 3 ವಿಶ್ವ ಗಾಲ್ಫ್ ಚಾಂಪಿಯನ್‍ಶಿಪ್ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಚಾಂಪಿಯನ್‍ಶಿಪ್ ಪ್ರಶಸ್ತಿಗಳು ಸೇರಿದಂತೆ ಎಲ್ಲ ಟ್ರೋಫಿಗಳನ್ನು ಮಾರಾಟ ಮಾಡಿದ್ದಾರೆ.

    ಗ್ರೇಟರ್ ನೋಯ್ಡಾ ಮೂಲದ ಭಾಟಿ ತನ್ನ ಟ್ರೋಫಿಗಳನ್ನು ಸಂಬಂಧಿಕರು ಮತ್ತು ಪೋಷಕರ ಸ್ನೇಹಿತರಿಗೆ ಮಾರಿರುವುದನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. “ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶಕ್ಕೆ ಈಗ ಕಠಿಣ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀವೆಲ್ಲರೂ ದೇಶಕ್ಕೆ ಸಹಾಯ ಮಾಡಲು ಮುಂದೆ ಬರಬೇಕು. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    “ಕಳೆದ 8 ವರ್ಷಗಳಲ್ಲಿ ನಾನು 102 ಟ್ರೋಫಿಗಳನ್ನು ಗೆದ್ದಿದ್ದೇನೆ. ನಾನು ಪಿಎಂ ಕೇರ್ಸ್ ನಿಧಿಗೆ 4 ಲಕ್ಷ ಮತ್ತು 30 ಸಾವಿರ ರೂ. ಕೊಡುಗೆ ನೀಡಿದ್ದೇನೆ. ಪ್ರತಿಯೊಬ್ಬರೂ ಈ ಸಮಯವನ್ನು ಬಳಸಿಕೊಳ್ಳಬೇಕು. ಹೀಗಾಗಿ ನೀವು ಸಹಾಯ ಮಾಡುವ ಮೂಲಕ ಮಾದರಿಯಾಗಬೇಕು” ಎಂದು ಹೇಳಿದರು.


    ಕೋವಿಡ್ -19 ವಿರುದ್ಧದ ಭಾರತದ ಹೋರಾಟದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಲು ನಾನು ಬಯಸಿದ್ದೆ. ಆದರೆ ನನಗೆ ಸ್ವಂತ ಸಂಪಾದನೆಯಿಲ್ಲದ ಕಾರಣ ನನ್ನ ಟ್ರೋಫಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಟ್ರೋಫಿಗಳನ್ನು ಮುಂದಿನ ದಿನವೂ ಗೆಲ್ಲಬಹುದು. ಆದರೆ ನನ್ನ ದೇಶಕ್ಕೆ ಅಗತ್ಯವಿರುವಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಹಣದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡರು.

    ನನ್ನ ಸಂಬಂಧಿಕರು ಮತ್ತು ನನ್ನ ಪೋಷಕರ ಸ್ನೇಹಿತರು ಟ್ರೋಫಿಗಳನ್ನು ಖರೀದಿಸಿದ್ದಾರೆ. ಟ್ರೋಫಿಗಳು ಇನ್ನೂ ನನ್ನ ಮನೆಯಲ್ಲಿವೆ. ಲಾಕ್‍ಡೌನ್ ಮುಗಿದ ನಂತರ ಅವುಗಳನ್ನು ಅವರವರ ಮನೆಗೆ ತಲುಪಿಸುತ್ತೇನೆ ಎಂದು ಭಾಟಿಯ ಹೇಳಿದರು.

    ಸೂಪರ್ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮೇರಿ ಕೋಮ್ ಮತ್ತು ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

  • ಪಿಎಂ ಪರಿಹಾರ ನಿಧಿಗೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ 1.08 ಕೋಟಿ ರೂ. ದೇಣಿಗೆ

    ಪಿಎಂ ಪರಿಹಾರ ನಿಧಿಗೆ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ 1.08 ಕೋಟಿ ರೂ. ದೇಣಿಗೆ

    ಬೆಂಗಳೂರು: ಕೊರೊನಾ ವೈರಸ್ ಪರಿಹಾರ ಕಾರ್ಯಗಳಿಗೆ ಸೈಕಲ್ ಪ್ಯೂರ್ ಅಗರಬತ್ತಿ ಕಂಪನಿಯು ಪಿಎಂ ಕೇರ್ಸ್ ಪರಿಹಾರ ನಿಧಿಗೆ 1.08 ಕೋಟಿ ದೇಣಿಗೆ ನೀಡಿದೆ.

    ಇದರ ಜೊತೆಗೆ ಮೈಸೂರಿನಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಹಾಗೂ ಪೊಲೀಸ್ ಸಿಬ್ಬಂದಿಗೆ ಆಹಾರ ಪೂರೈಕೆ ಮಾಡಲು 1 ಲಕ್ಷ ಕೊಟ್ಟಿದೆ. ಇದಲ್ಲದೇ ಸರ್ಕಾರಿ ಆಸ್ಪತ್ರೆಗೆ ಐದು ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಿದೆ. ಈ ವಿಚಾರವಾಗಿ ಮಾತನಾಡಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ ರಂಗ, `ದೊಡ್ಡ ಸವಾಲು ಎದುರಾಗಿದೆ. ಈ ಸವಾಲು ಎದುರಿಸಲು ನಾವೆಲ್ಲರೂ ಸರ್ಕಾರದೊಂದಿಗೆ ಕೈ ಜೋಡಿಸಿ ಹೋರಾಡಬೇಕು’ ಎಂದು ತಿಳಿಸಿದ್ದಾರೆ.

    ನಾವು ಪ್ರತಿ ಪ್ರಾರ್ಥನೆಯೊಂದಿಗೆ ಮತ್ತು ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ಜೊತೆಗೆ ನಿಲ್ಲುತ್ತೇವೆ. ನಮ್ಮ ತಾಯಿನಾಡು ಮತ್ತು ನಮ್ಮ ಕೊರೊನಾ ಯೋಧರನ್ನು ಬೆಂಬಲಿಸಲು ನಾವು ಒಟ್ಟಾಗಿ ಸೇರುವ ಸಮಯವಿದು. ಹಾಗಾಗಿ ನಾವು ಪಿಎಂ ಕೇರ್ಸ್ ಗೆ 1.08 ಕೋಟಿ ರೂ. ಅನ್ನು ವಿನಮ್ರವಾಗಿ ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

  • ಶೃಂಗೇರಿ ಮಠದಿಂದ ಕೊರೊನಾ ಹೋರಾಟಕ್ಕೆ 10 ಲಕ್ಷ ದೇಣಿಗೆ

    ಶೃಂಗೇರಿ ಮಠದಿಂದ ಕೊರೊನಾ ಹೋರಾಟಕ್ಕೆ 10 ಲಕ್ಷ ದೇಣಿಗೆ

    ಚಿಕ್ಕಮಗಳೂರು: ದೇಶಕ್ಕೆ ಮಾರಕವಾಗಿರೋ ಕೊರೊನಾ ವೈರಸ್‍ನಿಂದ ಬಂದಿರುವ ಸಂಕಷ್ಟ ನಿವಾರಣೆಗಾಗಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಜಿಲ್ಲೆಯ ಶೃಂಗೇರಿ ಮಠದ ಸಿಬ್ಬಂದಿ ವರ್ಗ 10 ಲಕ್ಷ ರೂಪಾಯಿಯನ್ನ ದೇಣಿಗೆಯಾಗಿ ನೀಡಿದೆ.

    ಎಲ್ಲಾ ಸಿಬ್ಬಂದಿ ತಮ್ಮ ಮಾಸಿಕ ವೇತನದಲ್ಲಿ ಈ ಹಣ ನೀಡಿದ್ದಾರೆ. ಅಷ್ಟೇ ಅಲ್ಲದೇ ದೇಶವೇ ಲಾಕ್‍ಡೌನ್ ಆಗಿ ಕೆಲಸ ಕಾರ್ಯಗಳೆಲ್ಲಾ ನಿಂತಿರುವುದರಿಂದ ನಿರ್ಗತಿಕರು, ನಿರಾಶ್ರಿತರು ಹಾಗೂ ತಾಲೂಕಿನಾದ್ಯಂತ ಅವಶ್ಯಕತೆ ಇರುವ ಜನರಿಗೆ ಮಠದ ವತಿಯಿಂದ ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡುತ್ತಿದೆ. ಇದನ್ನೂ ಓದಿ: ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ

    ಮಠದ ವಾಹನಗಳಲ್ಲಿ ಊಟ-ತಿಂಡಿಯನ್ನು ಜನರು ಇರುವಲ್ಲಿಗೆ ಹೋಗಿ ಮೂರು ಹೊತ್ತು ಕೂಡ ಆಹಾರ ತಲುಪಿಸಲಾಗುತ್ತಿದೆ. ಜನಸಾಮಾನ್ಯರು ಕೂಡ ಅಗತ್ಯವಿರುವವರಿಗೆ ಸಹಕಾರ ನೀಡಬೇಕೆಂದು ಮಠದ ಆಡಳಿತಾಧಿಕಾರಿ ಗೌರಿಶಂಕರ್ ಮನವಿ ಮಾಡಿದ್ದಾರೆ.

    ಜೊತೆಗೆ ಜನಸಾಮಾನ್ಯರು ಕೂಡ ತಮ್ಮ ಕೈಲಾದಷ್ಟು ಮಟ್ಟಿಗೆ ಪ್ರಧಾನಿ ನಿಧಿಗೆ ಸಹಕರಿಸುವಂತೆ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.