Tag: PM Imran Khan

  • ಜಪಾನ್-ಜರ್ಮನಿ ಗಡಿ ಹಂಚಿಕೊಂಡಿವೆ ಎಂದ ಇಮ್ರಾನ್ ಖಾನ್ ಕಾಲೆಳೆದ ನೆಟ್ಟಿಗರು

    ಜಪಾನ್-ಜರ್ಮನಿ ಗಡಿ ಹಂಚಿಕೊಂಡಿವೆ ಎಂದ ಇಮ್ರಾನ್ ಖಾನ್ ಕಾಲೆಳೆದ ನೆಟ್ಟಿಗರು

    – ಮಾಜಿ ಪತ್ನಿಯಿಂದಲೇ ವ್ಯಂಗ್ಯ, ವಿಡಿಯೋ ನೋಡಿ

    ಇಸ್ಲಾಮಾಬಾದ್: ಜಪಾನ್ ಹಾಗೂ ಜರ್ಮನಿ ದೇಶಗಳು ಗಡಿ ಹಂಚಿಕೊಂಡಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ.

    ಇಮ್ರಾನ್ ಖಾನ್ ಅವರು ಸೋಮವಾರ ಇರಾನ್‍ಗೆ ಭೇಟಿ ನೀಡಿದ್ದರು. ಈ ವೇಳೆ ಇರಾನ್ ಅಧ್ಯಕ್ಷ ರೌಹಾನಿ ಅವರ ಜೊತೆಗೆ ಜಂಟಿ ಸುದ್ದಿಗೋಷ್ಠಿ ವೇಳೆ ಇಮ್ರಾನ್ ಖಾನ್, ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಎರಡೂ ದೇಶಗಳು ಜಂಟಿಯಾಗಿ ಕಾರ್ಖಾನೆ ಸ್ಥಾಪಿಸಿವೆ ಎಂದು ಹೇಳಿಕೆ ನೀಡಿದ್ದರು.

    ಇಮ್ರಾನ್ ಖಾನ್ ಅವರ ತಪ್ಪನ್ನು ಗುರುತಿಸಿದ ಪಾಕ್ ಪತ್ರಕರ್ತರು, ಜಪಾನ್ ಈಶಾನ್ಯ ಏಷ್ಯಾದ ಪೆಸಿಫಿಕ್ ದ್ವೀಪದಲ್ಲಿದೆ. ಜರ್ಮನಿಯು ಯುರೋಪ್‍ನ ಮಧ್ಯದಲ್ಲಿದೆ. ಎರಡನೇ ಮಹಾಯುದ್ಧದ ವೇಳೆ ಎರಡೂ ದೇಶಗಳು ಮಿತ್ರರಾಷ್ಟ್ರಗಳಾಗಿದ್ದವು. ಆದರೆ ಪ್ರಧಾನಿ ಇಮ್ರಾನ್ ಅವರು ತಪ್ಪಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರು ವೀಡಿಯೊವನ್ನು ಟ್ವೀಟ್ ಮಾಡಿ ಮಾಡಿದ್ದು, ಜರ್ಮನಿ ಹಾಗೂ ಜಪಾನ್ ಗಡಿ ಹಂಚಿಕೊಂಡಿದ್ಯಾ? ಇದು ಪಾಕಿಸ್ತಾನದ ಪ್ರಧಾನಿಯವರ ಅಧ್ಯಯನ ಎಂದು ವ್ಯಂಗ್ಯವಾಡಿದ್ದಾರೆ.

    ಇಮ್ರಾನ್ ಖಾನ್ ಹೇಳಬೇಕಿದ್ದದ್ದು ಯುರೋಪಿಯನ್ ದೇಶಗಳಾದ ಜರ್ಮನಿ ಹಾಗೂ ಫ್ರಾನ್ಸ್ ಹೆಸರು. ಎರಡನೇ ಮಹಾಯುದ್ಧದ ನಂತರ ಈ ಎರಡೂ ದೇಶಗಳು ಆರ್ಥಿಕ ಹಾಗೂ ಸೇನಾ ಸಹಕಾರಕ್ಕೆ ಸಹಿ ಹಾಕಿದ್ದವು.

    ಈ ಹಿಂದೆಯೂ ಇಮ್ರಾನ್ ಖಾನ್ ಇಂತಹದ್ದೇ ಎಡವಟ್ಟು ಮಾಡಿಕೊಂಡಿದ್ದರು. ಆಫ್ರಿಕಾ ಮುಂದುವರಿಯುತ್ತಿರುವ ರಾಷ್ಟ್ರ ಎಂದು ಕಳೆದ ವರ್ಷ ಡಿಸೆಂಬರ್ ನಲ್ಲಿ ಹೇಳಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು.

  • ಮೋದಿಯನ್ನು ರಾವಣ, ದುರ್ಯೋಧನನಿಗೆ ಹೋಲಿಸಿದ ಸಿಎಂ ಇಬ್ರಾಹಿಂ

    ಮೋದಿಯನ್ನು ರಾವಣ, ದುರ್ಯೋಧನನಿಗೆ ಹೋಲಿಸಿದ ಸಿಎಂ ಇಬ್ರಾಹಿಂ

    ಬಾಗಲಕೋಟೆ: ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ, ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೋಲಿಸಿ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೇನೆಯನ್ನು ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಈಗ ಏನೇ ಇದ್ದರೂ ಕಾಲಾಯ ತಸ್ಮೈ ನಮಃ. ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಹೋಲಿಸಿ ಟೀಕಿಸಿದರು.

    ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಪಾಕ್ ಸಮಸ್ಯೆ ಬಗೆಹರಿಯುತ್ತದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ, ಪಾಕಿಸ್ತಾನಕ್ಕೂ ಮೋದಿಗೂ ಬಹಳ ಗಾಢವಾದ ಸಂಬಂಧವಿದೆ. ಅದಕ್ಕೆ ಕರೆಯದಿದ್ದರೂ ಮೋದಿ ನವಾಜ್ ಷರೀಫ್ ಮನೆಗೆ ಹೋಗಿದ್ದರು. ಕರೆಯದಿದ್ದರೂ ಯಾಕೆ ಹೋಗಿದ್ದರು ಎಂದು ಅವರು ಪ್ರಶ್ನಿಸಿ ಪ್ರತಿಕ್ರಿಯಿಸಿದರು.

    ಇಮ್ರಾನ್ ಖಾನ್ ಇದೇ ಮಾತನ್ನು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಅಂದಿದ್ದರೆ ಬೇರೆಯಾಗಿರುತ್ತಿತ್ತು. ಅಮಿತ್ ಶಾ ಥಕ ಥೈ, ಥಕ ಥೈ ಎಂದು ಕುಣಿಯೋಕೆ ಶುರು ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು. ಹಾಗೆಯೇ ಒಳ್ಳೆಯವರು ಹುಟ್ಕೊತಾರೆ, ಸಮಯವೇ ಇದಕ್ಕೆ ಉತ್ತರ ಕೊಡುತ್ತೆ. ಈಶ್ವರಪ್ಪ ಮುಸಲ್ಮಾನರಿಗೆ ಟಿಕೆಟ್ ಕೊಡಲ್ಲ ಅಂದಿದ್ದಾರೆ. ಆದ್ರೆ ಅವರಿಗೆ ಕುರುಬರಿಗೆ ಟಿಕೆಟ್ ಕೊಡಿಸಲು ಆಗಿಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.

  • ಮೋದಿ ಗೆದ್ದರೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತೆ: ಇಮ್ರಾನ್ ಖಾನ್

    ಮೋದಿ ಗೆದ್ದರೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತೆ: ಇಮ್ರಾನ್ ಖಾನ್

    – ಭಾರತದಲ್ಲಿ ಮುಸ್ಲಿಂ, ಮುಸ್ಲಿಮೇತರ ಮೇಲೆ ದಾಳಿ ಮಾಡಲಾಗುತ್ತಿದೆ

    ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಗುರುವಾರ ಮಾತನಾಡಿದ ಇಮ್ರಾನ್ ಖಾನ್ ಅವರು, ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭಾರತದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ನೋಡುತ್ತೇನೆ ಎಂದು ಯಾವತ್ತೂ ಯೋಚನೆ ಮಾಡಿರಲಿಲ್ಲ. ಭಾರತದಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    ಭಾರತೀಯ ಮುಸ್ಲಿಮರು ಹಲವು ವರ್ಷಗಳಿಂದಲೂ ತಮ್ಮ ಪರಿಸ್ಥಿತಿಯ ಬಗ್ಗೆ ಸಂತೋಷವಾಗಿದ್ದರು. ಆದರೆ ಈಗ ತೀವ್ರ ಹಿಂದೂ ರಾಷ್ಟ್ರೀಯತೆಯಿಂದಾಗಿ ಅವರಲ್ಲಿ ಆತಂಕ ಶುರುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಂತೆ ಭಯ ಮತ್ತು ರಾಷ್ಟ್ರೀಯತೆ ಭಾವದಿಂದಲೇ ಅಧಿಕಾರಕ್ಕೆ ಬಂದವರು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಭರವಸೆಯನ್ನು ಬಿಜೆಪಿಯು ದಶದ ಜನತೆ ನೀಡಿದೆ. ಇದು ಜಮ್ಮು-ಕಾಶ್ಮೀರದ ಜನರ ಆತಂಕಕ್ಕೆ ಕಾರಣವಾಗಿದ್ದು, ಇದು ಚಿಂತಿಸಬೇಕಾದ ವಿಷಯವಾಗಿದೆ ಎಂದು ಹೇಳಿದ್ದಾರೆ.

    ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಹಾಗೂ ಭಾರತದ ಮಧ್ಯೆ 1947ರಿಂದಲೂ ಹೋರಾಟ ನಡೆದಿದೆ. ಪುಲ್ವಾಮಾದಲ್ಲಿ 2019 ಫೆಬ್ರವರಿ 14ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಘ್ನಗೊಂಡಿತ್ತು. ಈ ದಾಳಿಯಲ್ಲಿ 40 ಸಿಆರ್‍ಪಿಎಫ್‍ನ 40 ಯೋಧರು ಹುತಾತ್ಮರಾಗಿದ್ದಾರೆ ಎಂದರು.

    ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾ ದಾಳಿಯನ್ನು ಮಾಡಿದೆ ಎನ್ನಲಾಗಿತ್ತು. ಇದು ಪಾಕಿಸ್ತಾನದ ಗಡಿ ದಾಟಿ ಭಾರತೀಯ ವಾಯು ಪಡೆ ವಿಮಾನಗಳು ಬಂದು ಉಗ್ರರ ಮೂರು ತರಬೇತಿ ನೆಲೆಯ ಮೇಲೆ ಬಾಂಬ್ ದಾಳಿ ಮಾಡಲು ಪ್ರೇರಣೆ ನೀಡಿತ್ತು ಎಂದು ಏರ್ ಸ್ಟ್ರೈಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಲೋಕಸಭಾ ಚುನಾವಣೆಗೆ ತಿರುವು ನೀಡುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರದಲ್ಲಿ ಪಾಕಿಸ್ತಾನದ ವಿರುದ್ಧ ಮಿಲಿಟರಿ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  • ಪ್ರಧಾನಿ ಮೋದಿಯೊಂದಿಗೆ ಮಾತುಕತೆಗೆ ಸಿದ್ಧ: ಪಾಕ್ ಪ್ರಧಾನಿ

    ಪ್ರಧಾನಿ ಮೋದಿಯೊಂದಿಗೆ ಮಾತುಕತೆಗೆ ಸಿದ್ಧ: ಪಾಕ್ ಪ್ರಧಾನಿ

    ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆಂದು ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಹೇಳಿದ್ದಾರೆ.

    ಪಾಕ್ ಪ್ರಧಾನಿಯಾಗಿ 100 ದಿನ ಪೂರೈಸಿರುವ ಇಮ್ರಾನ್ ಖಾನ್, ಗುರುವಾರ ಭಾರತೀಯ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಸೇನೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಇಲ್ಲ. ಕೇವಲ ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಬಹುದೆಂದು ಹೇಳಿದ್ದಾರೆ.

    ಸಮಸ್ಯೆಯನ್ನು ಬಗೆಹರಿಸಲು ಅಸಾಧ್ಯವೆಂದು ಹೇಳಲಾಗುವುದಿಲ್ಲ. ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧನಿದ್ದೇನೆ. ಅಲ್ಲದೇ ಪಾಕಿಸ್ತಾನ ತನ್ನ ಪ್ರದೇಶವನ್ನು ಉಗ್ರರು ಬಳಸಿಕೊಳ್ಳಲು ಬಿಡುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಇತ್ತೀಚೆಗೆ ಪಾಕ್ ವಿದೇಶಾಂಗ ಸಚಿವಾಲಾಯ ಇಸ್ಲಾಮಾಬಾದಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿತ್ತು. ಆದರೆ ಈ ಆಹ್ವಾನವನ್ನು ಭಾರತ ಖಡಾಖಂಡಿತವಾಗಿ ತಿರಸ್ಕರಿಸಿತ್ತು.

    ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಶಾಂತಿ ಮಾತುಕತೆ ಹಾಗೂ ಭಯೋತ್ಪಾದನೆ ಒಟ್ಟಾಗಿ ಸಾಗಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ಪಾಕ್ ಬಿಡುವವರೆಗೂ ಮಾತುಕತೆ ಅಸಾಧ್ಯ. ಹೀಗಾಗಿ ಪಾಕಿಸ್ತಾನದಲ್ಲಿ ನಡೆಯುವ ಸಾರ್ಕ್ ಸಭೆಯಲ್ಲಿ ಭಾರತ ಭಾಗಿಯಾಗುವುದಿಲ್ಲ. ಅಲ್ಲದೇ ಪಾಕ್ ಆಹ್ವಾನವನ್ನು ಪ್ರಧಾನಿ ಮೋದಿಯವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲವೆಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv