Tag: PM Cares

  • ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

    ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್

    ಬೆಂಗಳೂರು: ತೆಲಂಗಾಣದಲ್ಲಿ ಆಪರೇಷನ್ ಕಮಲ (Operation Kamala) ಶುರುವಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕರನ್ನು ಖರೀದಿಸಲು ಬಿಜೆಪಿ (BJP) ಸಾವಿರಾರು ಕೋಟಿ ಆಮಿಷ ಒಡ್ಡಿದೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಮಾಡಿದೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ (Congress), ಮೂಲಗಳ ಪ್ರಕಾರ ಆಪರೇಷನ್ ಕಮಲದ (Operation Kamala) ರೂವಾರಿಗಳು ಅಮಿತ್ ಶಾ (Amit Shah), ಬಿ.ಎಲ್ ಸಂತೋಷ್ ಹಾಗೂ ಜೆ.ಪಿ ನಡ್ಡಾ (JP Nadda). ಸಂಸ್ಕಾರ, ಚಾರಿತ್ರ್ಯ ಹಾಗೂ ನೈತಿಕ ರಾಜಕಾರಣದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿ.ಎಲ್.ಸಂತೋಷ್ ಮಾಡುವುದು ಮಾತ್ರ ಅನಾಚಾರ. ಆಪರೇಷನ್ ಕಮಲ ಯಾವ ಸಂಸ್ಕಾರ ಎಂದು ಪ್ರಶ್ನಿಸಿದೆ.

    ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಶಾಸಕರನ್ನು ಖರೀದಿಸಲು ಸಾವಿರಾರು ಕೋಟಿ ಆಮಿಷ ಒಡ್ಡಲಾಗಿದೆ. ಬಿಜೆಪಿಯವರಿಗೆ ಇಷ್ಟೊಂದು ದುಡ್ಡು ಬರುವುದು ಎಲ್ಲಿಂದ? ಆಪರೇಷನ್ ಕಮಲಕ್ಕೆ ಪಿಎಂ ಕೇರ್ (PM Cares) ನಿಧಿ ಬಳಸಲಾಗುತ್ತಿದೆಯೇ ಅಥವಾ ಭ್ರಷ್ಟಾಚಾರದಿಂದ ಗಳಿಸಿದ ಹಣ ಬಳಕೆಯಾಗುತ್ತಿದೆಯೇ? ನಾ ಖಾವೂಂಗಾ, ನಾ ಖಾನೇದೂಂಗಾ ಎನ್ನುವ ಮೋದಿಯವರೆ (Narendra Modi), ಆಪರೇಷನ್ ಕಮಲದ ಹಣದ ಮೂಲ ಯಾವುದು ತಿಳಿಸುವಿರಾ? ಎಂದು ಕುಟುಕಿದೆ.

    ಈಗಾಗಲೇ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಅಕ್ರಮವಾಗಿ ಅಧಿಕಾರಕ್ಕೇರಿರುವ ಬಿಜೆಪಿ (BJP) ಈಗ ತೆಲಂಗಾಣದಲ್ಲೂ ಅನಿಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲ ಯಶಸ್ವಿಯಾಗಿಲ್ಲ. ಏಕೆಂದರೆ ಆಪರೇಷನ್ ಕಮಲ ಬಿಜೆಪಿಯ ಅನೈತಿಕ ಶಿಶು. ಬಿಜೆಪಿಯವರು ಪ್ರಜಾಪ್ರಭುತ್ವದ ರಕ್ಷಕರಾಗದೇ ಭಕ್ಷಕರಾಗುತ್ತಿದ್ದಾರೆ ಎಂದು ಕಿಡಿ ಕಾರಿದೆ.

    Live Tv
    [brid partner=56869869 player=32851 video=960834 autoplay=true]

  • ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಡಿಯಲ್ಲಿ ರಾಯಚೂರಿನ 4 ಮಕ್ಕಳಿಗೆ ಸೌಲಭ್ಯ

    ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಡಿಯಲ್ಲಿ ರಾಯಚೂರಿನ 4 ಮಕ್ಕಳಿಗೆ ಸೌಲಭ್ಯ

    ರಾಯಚೂರು: ಪ್ರಧಾನಿ ಮೋದಿ ಪಿಎಂ ಕೇರ್ ಫಾರ್ ಚಿಲ್ಡ್ರನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ 4 ಮಕ್ಕಳಿಗೆ ಸೌಲಭ್ಯ ನೀಡಲಾಗುತ್ತಿದೆ. ಈ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಕಾರ್ಯಕ್ರಮದ ವಿವರಣೆ ನೀಡಿದರು.

    ನಗರದ ಜಿಲ್ಲಾ ಪಂಚಾಯತಿ ಕಚೇರಿ ವಿಸಿ ಹಾಲ್‍ನಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್, ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಹಾಗೂ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದರು. ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡಿರುವ ಜಿಲ್ಲೆಯ ನಾಲ್ಕು ಮಕ್ಕಳಿಗೆ ಪಿಎಂ ಕೇರ್ ಮೂಲಕ ಸಹಾಯ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

    ಈ ಯೋಜನೆ ಮೂಲಕ ಕೇಂದ್ರ ಸರ್ಕಾರದಿಂದ ಮಕ್ಕಳು 23ನೇ ವರ್ಷಕ್ಕೆ ಬಂದಾಗ 10 ಲಕ್ಷ ರೂ. ಸಹಾಯ ಧನ ನೇರವಾಗಿ ಆಯಾ ಫಲಾನುಭವಿ ಅಕೌಂಟ್‍ಗೆ ಜಮೆ ಆಗಲಿದೆ. ಮಕ್ಕಳ ಪೋಷಕರಿಗೆ ಪ್ರತಿ ತಿಂಗಳು 4 ಸಾವಿರ ನೀಡಲಾಗುತ್ತದೆ. ಕೇಂದ್ರೀಯ ವಿದ್ಯಾಲಯ ಸೇರಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ರಾಯಚೂರಿನ ನಾಲ್ಕು ಮಕ್ಕಳಿಗೆ ಈ ಸೌಲಭ್ಯ ನೀಡಲಾಗುತ್ತದೆ ಎಂದು ಸಂಸದ ಅಮರೇಶ್ವರ ನಾಯಕ್ ಪಿಎಂ ವಿಡಿಯೋ ಕಾನ್ಫರೆನ್ಸ್ ಬಳಿಕ ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?

  • ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?

    ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಗೆ ಇಂದು ಚಾಲನೆ: ಮಕ್ಕಳಿಗೆ ಏನು ಸಿಗುತ್ತೆ?

    ನವದೆಹಲಿ: ಕೋವಿಡ್ ಹೆಮ್ಮಾರಿಯಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಡಿ ಇವತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.

    ಇಂದು ಬೆಳಗ್ಗೆ 11 ಗಂಟೆಗೆ ಈ ಯೋಜನೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಪೋಸ್ಟ್‌ ಆಫೀಸ್‌ ಪಾಸ್‍ಬುಕ್ ಜೊತೆಗೆ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಕೂಡ ನೀಡಲಾಗುತ್ತದೆ ಎಂದು ಪ್ರಧಾನಿಮಂತ್ರಿಗಳ ಕಾರ್ಯಾಲಯ ತಿಳಿಸಿದೆ.

    baby covid-19

    2020 ಮಾರ್ಚ್ 11ರಿಂದ 2022ರ ಮಾರ್ಚ್ 28ರ ಅವಧಿಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಮಗ್ರ ರಕ್ಷಣೆಯ ಭಾಗವಾಗಿ ಈ ಮಕ್ಕಳಿಗೆ ವಸತಿ, ವಿದ್ಯೆ, ಸ್ಕಾಲರ್‌ಶಿಪ್‌  ಸಿಗಲಿದೆ. ಉನ್ನತ ಶಿಕ್ಷಣಕ್ಕೂ ನೆರವು ಸಿಗಲಿದೆ.

    23 ವರ್ಷಕ್ಕೆ ಬಂದಾಗ ಆರ್ಥಿಕವಾಗಿ ಸ್ವಯಂಸಮೃದ್ಧಿ ಹೊಂದಲು 10 ಲಕ್ಷ ರೂಪಾಯಿ ನೆರವು ಕೂಡ ಯೋಜನೆಯಡಿ ಸಿಗಲಿದೆ. ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪ್ರತ್ಯೇಕ ವೆಬ್ ಪೋರ್ಟಲ್ ತೆರೆಯಲಾಗಿದೆ. ಈವರೆಗೂ ಬಂದ ಅರ್ಜಿಗಳ ಪರಿಶೀಲನೆ ಆಗಿ, ಅನುಮೋದನೆಗೊಂಡ ಬಾಧಿತ ಮಕ್ಕಳಿಗೆ ಇಂದು ಪ್ರಧಾನಿ ಮೋದಿ ನೆರವು ನೀಡಲಿದ್ದಾರೆ.

    ಏನು ಸಿಗಲಿದೆ?
    ಮಾರ್ಚ್‌ 2022 ರಿಂದ ಪ್ರತಿ ತಿಂಗಳು 2,500 ರೂ. ಸ್ಪೈಫಂಡ್‌, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ 50,000 ರೂ. ಮತ್ತು ಆಯುಷ್ಮಾನ್‌ ಹೆಲ್ತ್‌ ಕಾರ್ಡ್‌ ಮೂಲಕ 5 ಲಕ್ಷ ರೂ. ವಿಮೆ ಸಿಗಲಿದೆ.

  • ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ಪಿಎಂ ಕೇರ್ಸ್‍ಗೆ 2.25 ಲಕ್ಷ, ಒಟ್ಟು 103 ಕೋಟಿ ದಾನ ನೀಡಿದ್ದಾರೆ ಪ್ರಧಾನಿ ಮೋದಿ

    ನವದೆಹಲಿ: ಪಿಎಂ ಕೇರ್ಸ್ ಫಂಡ್ ಕುರಿತು ಹಲವು ವಾದ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಪಿಎಂ ಕೇರ್ಸ್ ಫಂಡ್‍ಗೆ 2.25 ಲಕ್ಷ ರೂ. ದಾನ ನೀಡಿದ್ದಾರೆ. ಅಲ್ಲದೆ ಈವರೆಗೆ ಪ್ರಧಾನಿ ಮೋದಿ ದೇಶಕ್ಕಾಗಿ 103 ಕೋಟಿ ರೂ.ಗಳನ್ನು ದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಬುಧವಾರವಷ್ಟೇ ಪಿಎಂ ಕೇರ್ಸ್ ಫಂಡ್‍ನ ಆಡಿಟ್ ರಿಪೋರ್ಟ್ ನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ಮೋದಿ 2.25 ಲಕ್ಷ ರೂ.ಗಳನ್ನು ದಾನ ನೀಡಿರುವುದು ಬೆಳಕಿಗೆ ಬಂದಿದೆ.

    ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ ರಚಿಸಿತ್ತು. ಈ ಮೂಲಕ ದಾನಿಗಳಿಂದ ಸಹಾಯ ಕೋರಿತ್ತು. ಇದಕ್ಕೆ ದೇಶಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿ ಹಲವು ಗಣ್ಯರು, ನಟ, ನಟಿಯರು ಸೇರಿ ವಿವಿಧ ಕ್ಷೇತ್ರದ ಶ್ರೀಮಂತರು ಸಹಾಯ ಮಾಡಿದ್ದರು. ಈ ಮೂಲಕ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದರು.

    ಪ್ರಧಾನಿ ಮೋದಿಯವರ 2.25 ಲಕ್ಷ ರೂ. ಹೊರತುಪಡಿಸಿ, ಪಿಎಂ ಕೇರ್ಸ್ ರಚಿಸಿದ ಐದೇ ದಿನಗಳಲ್ಲಿ ಬರೋಬ್ಬರಿ 3,076 ಕೋಟಿ ರೂ. ಸಂಗ್ರಹವಾಗಿತ್ತು. ಇದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸ್ಮೃತಿ ಇರಾನಿ ಸೇರಿ ಬಿಜೆಪಿಯ ಬಹುತೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಮೊದಲಲ್ಲ ಈ ಹಿಂದೆ ಸಹ ಸಾರ್ವಜನಿಕರ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ಹಲವು ಬಾರಿ ದಾನ ನೀಡಿದ್ದಾರೆ. ಈ ಮೂಲಕ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ.

    ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯಕ್ರಮಗಳಿಂದ ಹಿಡಿದು, ಸ್ವಚ್ಛ ಗಂಗಾ(ಕ್ಲೀನ್ ಗಂಗಾ) ಯೋಜನೆಯವರೆಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ ದೇಶದ ದೀನ ದಲಿತರ ಉದ್ಧಾರಕ್ಕೂ ಹಣ ನೀಡಿದ್ದಾರೆ. ಹೀಗೆ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ದಾನ ನೀಡಿದ್ದು, ಇದರ ಒಟ್ಟು ಮೊತ್ತ 103 ಕೋಟಿ ರೂ.ಗೂ ಅಧಿಕವಾಗಿದೆ. 2019ರಲ್ಲಿ ಕುಂಭ ಮೇಳದ ನೈರ್ಮಲ್ಯ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಉಳಿತಾಯದ ನಿಧಿಯಿಂದ 21 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ.

    ದಕ್ಷಿಣ ಕೋರಿಯಾ ನೀಡಿದ ಸಿಯೋಲ್ ಶಾಂತಿ ಪ್ರಶಸ್ತಿಯ ಒಟ್ಟು 1.3 ಕೋಟಿ ರೂ.ಗಳ ಮೊತ್ತವನ್ನು ನಮಾಮಿ ಗಂಗಾ ಯೋಜನೆಗೆ ನೀಡಿದ್ದರು. ಈ ಮೂಲಕ ನದಿಯನ್ನು ಸ್ವಚ್ಛಗೊಳಿಸಲು ತಮ್ಮದೆಯಾದ ಕೊಡುಗೆ ನೀಡಿದ್ದರು.

    ಪ್ರಧಾನಿ ಮೋದಿ ತಮಗೆ ನೀಡಿದ ಮೊಮೊಂಟೋಗಳನ್ನು ಹರಾಜು ಹಾಕಿದ್ದು, ಇದರಿಂದ 3.40 ಕೋಟಿ ರೂ. ಸಂಗ್ರಹವಾಗಿತ್ತು. ಇದರ ಸಂಪೂರ್ಣ ಮೊತ್ತವನ್ನು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‍ಗೆ ದಾನವಾಗಿ ನೀಡಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ 2015ರ ವರೆಗೆ ತಮಗೆ ಬಂದ ಉಡುಗೊರೆ ಹಾಗೂ ಮೊಮೆಂಟೋಗಳನ್ನು ಹಾರಾಜು ಮಾಡಿದ್ದು, ಇದರಿಂದ ಸಹ 8.35 ಕೋಟಿ ರೂ.ಸಂಗ್ರಹವಾಗಿದೆ. ಇದರ ಸಂಪೂರ್ಣ ಮೊತ್ತವನ್ನು ಸಹ ನಮಾಮಿ ಗಂಗಾ ಯೋಜನೆಗೆ ನೀಡಿದ್ದಾರೆ.

    ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಂಡ ಬಳಿಕ 21 ಲಕ್ಷ ರೂ.ಗಳ ತಮ್ಮ ವೈಯಕ್ತಿಕ ಉಳಿತಾಯದ ಹಣವನ್ನು ಗುಜರಾತ್‍ನ ಸರ್ಕಾರಿ ಸಿಬ್ಬಂದಿಯ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೀಡಿದ್ದರು. ಮುಖ್ಯಮಂತ್ರಿಯಾಗಿದ್ದಾಗ ತಮಗೆ ನೀಡಿದ ಎಲ್ಲ ಉಡುಗೊರೆಗಳನ್ನು ಹರಾಜು ಮಾಡಿದಾಗ ಬಂದ ಒಟ್ಟು 89.96 ಕೋಟಿ ರೂ.ಗಳನ್ನು ಕನ್ಯಾ ಕೇಲವಾನಿ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಇತರ ನಾಯಕರಿಗೆ ಮಾದರಿಯಾಗಿದ್ದಾರೆ.

  • ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

    ಅನಾಥವಾಗಿ ಬಿದ್ದಿವೆ ಹತ್ತಕ್ಕೂ ಹೆಚ್ಚು ವೆಂಟಿಲೇಟರ್

    – ಪಿಎಂ ಕೇರ್ಸ್‍ನಿಂದ ನೀಡಿದ ಹೊಸ ವೆಂಟಿಲೇಟರ್ ಗಳು

    ಕೊಪ್ಪಳ: ಹಲವೆಡೆ ವೆಂಟಿಲೇಟರ್ ಗಳಿಲ್ಲ ಎಂದು ರೋಗಿಗಳು ನರಳುತ್ತಿದ್ದಾರೆ, ಕೆಲವರು ಸಾವನ್ನಪ್ಪುತ್ತಿದ್ದಾರೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ಈ ಆಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಹೊಸ ವೆಂಟಿಲೇಟರ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ.

    ಕೊಪ್ಪಳ ಜಿಲ್ಲೆಯ ಕೋವಿಡ್-19 ವಾರ್ಡ್ ಪಕ್ಕದ ಕೊಠಡಿಯಲ್ಲಿ ವೆಂಟಿಲೇಟರ್ ಅನಾಥವಾಗಿ ಬಿದ್ದಿವೆ. ಇದನ್ನು ಸೂಕ್ತ ರೀತಿಯಲ್ಲಿ ಅಳವಡಿಸಿ ರೋಗಿಗಳಿಗೆ ಸಹಾಯಕವಾಗುವಂತೆ ವ್ಯವಸ್ಥೆ ಕಲ್ಪಿಸುವ ಬದಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದೀಗ ವೆಂಟಿಲೇಟರ್ ಅನಾಥವಾಗಿ ಮೂಲೆಯಲ್ಲಿ ಬಿದ್ದಿವೆ. ವೆಂಟಿಲೇಟರ್ ಮಾನಿಟರ್ ಮಾಡಲು ಸೂಕ್ತ ಸಿಬ್ಬಂದಿ ಇಲ್ಲದ ಕಾರಣ ಅನಾಥವಾಗಿ ಬಿದ್ದಿದ್ದು, ಸೂಕ್ತ ಸಿಬ್ಬಂದಿ ನೇಮಿಸಿ, ವೆಂಟಿಲೇಟರ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡದೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಜಿಲ್ಲೆಯಲ್ಲಿ ಒಂದು ವಾರದಲ್ಲಿ 30ಕ್ಕೂ ಹೆಚ್ಚು ಜನ ಕೋವಿಡ್-19 ನಿಂದ  ಸಾವನ್ನಪ್ಪುತ್ತಿದ್ದಾರೆ. ಕಳೆದ ವಾರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ವೆಂಟಿಲೇಟರ್ ಕೊರತೆಯೇ ಸಾವಿಗೆ ಕಾರಣ ಎಂಬ ಆರೋಪ ಸಹ ಕೇಳಿ ಬಂದಿದೆ. ಇಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದರೂ ಆರೋಗ್ಯ ಇಲಾಖೆ ಮಾತ್ರ ವೆಂಟಿಲೇಟರ್ ಇನ್‍ಸ್ಟಾಲ್ ಮಾಡಿ, ಕಾರ್ಯಾರಂಭಿಸಿಲ್ಲ ಇದರಿಂದಾಗಿ ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಸುಮಾರು ಹತ್ತಕ್ಕೂ ಹೆಚ್ಚು ವೆಂಟಿಲೇಟರ್ ಗಳು ಇದೀಗ ಆಸ್ಪತ್ರೆಯಲ್ಲಿ ಅನಾಥವಾಗಿ ಬಿದ್ದಿವೆ.

    ಪಿಎಂ ಕೇರ್ಸ್ ನಿಂದ ಈ ವೆಂಟಿಲೇಟರ್ ಗಳನ್ನು ನೀಡಲಾಗಿದ್ದು, ಅಗತ್ಯ ಇರುವ ಆಸ್ಪತ್ರೆಗಳಿಗೆ ಈ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಇಷ್ಟಾದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಅವುಗಳ ಕಾರ್ಯಾರಂಭದ ಬಗ್ಗೆ ಚಿಂತಿಸಿಲ್ಲ.

  • ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ಪಿಎಂ ಕೇರ್ಸ್‍ನಿಂದ 2ನೇ ಹಂತದ ಅನುದಾನ ಬಿಡುಗಡೆ – ವೆಂಟಿಲೇಟರ್ ಖರೀದಿಗೆ ಆದ್ಯತೆ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ವೆಂಟಿಲೇಟರ್ ಗಳ ಖರೀದಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಎರಡನೇ ಹಂತದಲ್ಲಿ ಅನುದಾನ ಬಿಡುಗಡೆ ಮಾಡಿದೆ.

    ಎರಡನೇ ಹಂತದಲ್ಲಿ ಮೂರು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ದೇಶದಲ್ಲಿ ತಯಾರಾದ ವೆಂಟಿಲೇಟರ್ ಖರೀದಿಗೆ 2,000 ಕೋಟಿ ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಹಂಚಿಕೆ 1,000 ಕೋಟಿ ಮೀಸಲಿಟ್ಟಿದೆ.

    2,000 ಕೋಟಿ ವೆಚ್ಚ ದಲ್ಲಿ ಸುಮಾರು 50,000 ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಿದ್ದು ಈ ಪೈಕಿ 30,000 ವೆಂಟಿಲೇಟರ್ ಗಳನ್ನು ಭಾರತ್ ಎಲೆಕ್ಟ್ರಾನಿಕ್ಸ್ ತಯಾರಿಸುತ್ತಿದೆ. ಆಗ್ವಾ ಹೆಲ್ತ್‍ಕೇರ್ 10,000 ಎಎಂಟಿಝಡ್ ಬೇಸಿಕ್ 5,650 ಎಎಂಟಿಝಡ್ ಹೈ ಎಂಡ್ 4,000 ಹಾಗೂ ಅಲೈಡ್ ಮೆಡಿಕಲ್ ನಿಂದ 350 ವೆಂಟಿಲೇಟರ್ ಖರೀದಿಯಾಗಲಿದೆ.

    ಈವರೆಗೂ 2,923 ವೆಂಟಿಲೇಟರ್ ತಯಾರಿಸಿದ್ದು 1340 ವೆಂಟಿಲೇಟರ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಹಂಚಿಕೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 275, ದೆಹಲಿಗೆ 275, ಗುಜರಾತ್ 175, ಬಿಹಾರ್ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ ನೀಡಿದ್ದು ಮುಂದಿನ ಹಂತದಲ್ಲಿ 14,000 ವೆಂಟಿಲೇಟರ್ ಹಂಚಿಕೆಯಾಗಲಿದೆ.

    ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಾವಿರ ಕೋಟಿ ನೀಡಿದ್ದು, ಕಾರ್ಮಿಕರ ಜನಸಂಖ್ಯೆ ಆಧಾರದಡಿ ಅನುದಾನ ನೀಡಿದೆ. ಮಹಾರಾಷ್ಟ್ರ 181 ಕೋಟಿ, ಉತ್ತರ ಪ್ರದೇಶ 103 ಕೋಟಿ, ತಮಿಳುನಾಡು 83 ಕೋಟಿ, ಗುಜರಾತ್ 66 ಕೋಟಿ, ದೆಹಲಿ 55 ಕೋಟಿ, ಪಶ್ಚಿಮ ಬಂಗಾಳ 53 ಕೋಟಿ, ಬಿಹಾರ 51 ಕೋಟಿ, ಮಧ್ಯಪ್ರದೇಶ 50 ಕೋಟಿ, ರಾಜಸ್ಥಾನ 50 ಕೋಟಿ ಮತ್ತು ಕರ್ನಾಟಕ 34 ಕೋಟಿ ನೀಡಲಾಗಿದೆ.

    ಈ ಹಿಂದೆ ಮೊದಲ ಹಂತದಲ್ಲಿ 3,100 ಕೋಟಿ ಹಣವನ್ನು ಪಿಎಂ ಕೇರ್ಸ್ ನಿಂದ ಬಿಡುಗಡೆ ಮಾಡಲಾಗಿತ್ತು. ಮೊದಲ ಕಂತಿನಲ್ಲೂ ವೆಂಟಿಲೇಟರ್ ಖರೀದಿಗೆ ಎರಡು ಸಾವಿರ, ವಲಸೆ ಕಾರ್ಮಿರಿಗೆ ಸಾವಿರ ಹಾಗೂ ಲಸಿಕೆ ಅಭಿವೃದ್ಧಿ ನೂರು ಕೋಟಿ ಬಿಡುಗಡೆ ಮಾಡಲಾಗಿತ್ತು.

    ಪಿಎಂ ಕೇರ್ಸ್ ಗೆ ಕೋಟ್ಯಾಂತರ ರೂ. ದಾನ ಬಂದಿದ್ದು ಕೇಂದ್ರ ಸರ್ಕಾರ ಇದರ ಲೆಕ್ಕ ನೀಡುತ್ತಿಲ್ಲ ಮತ್ತು ಅದರ ಬಳಕೆ ಮಾಡುತ್ತಿಲ್ಲ ಎನ್ನುವ ಟೀಕೆಗಳು ಕೇಳಿ ಬಂದಿದ್ದವು. ಈ ಬಗ್ಗೆ ಮಾಹಿತಿ ನೀಡಲು ಸೂಚಿಸುವಂತೆ ಸುಪ್ರೀಂಕೋರ್ಟ್, ದೆಹಲಿ ಮದ್ರಾಸ್ ಸೇರಿಸಂತೆ ಹಲವು ಹೈಕೋರ್ಟ್ ಗಳಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಂದ ಅನುದಾನ ಬಿಡುಗಡೆ ಮಾಡಿದೆ.

  • ಪಿಎಂ ಕೇರ್ಸ್ ಫಂಡ್ ಅನುಮಾನ ಮೂಡಿಸಿದೆ, ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವಂತೆ ಪಿಐಎಲ್ ಸಲ್ಲಿಕೆ

    ಪಿಎಂ ಕೇರ್ಸ್ ಫಂಡ್ ಅನುಮಾನ ಮೂಡಿಸಿದೆ, ವೆಬ್‍ಸೈಟ್‍ನಲ್ಲಿ ಮಾಹಿತಿ ಪ್ರಕಟಿಸುವಂತೆ ಪಿಐಎಲ್ ಸಲ್ಲಿಕೆ

    ನವದೆಹಲಿ: ಪಿಎಂ ಕೇರ್ಸ್ ಫಂಡ್ ಗೆ ಬರುತ್ತಿರುವ ದೇಣಿಗೆ ಮೂಲ ಮತ್ತು ಅದನ್ನು ಯಾವ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸಲು ಸೂಚಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

    ಮಾಹಿತಿ ಹಕ್ಕು ಕಾಯ್ದೆಯಡಿ ಪಿಎಂ ಕೇರ್ಸ್ ಮಾಹಿತಿ ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಳಿಕ ಡಾ.ಎಸ್.ಎಸ್ ಹೂಡಾ ಅವರು ವಕೀಲ ಆದಿತ್ಯ ಹೂಡಾ ಮೂಲಕ ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸಲ್ಲಿಸಿದ್ದಾರೆ.

    ಸರ್ಕಾರಿ ಸ್ವಾಮ್ಯದ ಅಥಾವ ಸರ್ಕಾರಿ ನಿಯಂತ್ರಿತ ಎಲ್ಲ ಹಣಕಾಸು ಸಂಸ್ಥೆಗಳು ಮಾಹಿತಿ ಹಕ್ಕಿನಡಿ ಬರಲಿದೆ. ಪಿಎಂ ಕೇರ್ಸ್ ಟ್ರಸ್ಟ್ ಗೆ ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿದ್ದು, ಹಣಕಾಸು ಸಚಿವರು, ರಕ್ಷಣಾ ಸಚಿವರು ಮತ್ತು ಗೃಹ ಸಚಿವರು ಟ್ರಸ್ಟಿಗಳಾಗಿದ್ದಾರೆ ಹೀಗಾಗಿ ಪಿಎಂ ಕೇರ್ಸ್ ಕೂಡಾ ಸರ್ಕಾರದ ಹಣಕಾಸು ಸಂಸ್ಥೆಯಾಗಲಿದೆ. ಅಲ್ಲದೆ ಪಿಎಂ ಕೇರ್ಸ್ ಗೆ ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಂದ ದೊಡ್ಡ ಮೊತ್ತದ ಹಣ ಹರಿದು ಬಂದಿದೆ. ಸಾರ್ವಜನಿಕರು ಹಣ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಒಂದು ದಿನದ ಸಂಬಂಳವನ್ನು ನೀಡಿದ್ದಾರೆ. ಪಿಎಂ ಕೇರ್ಸ್ ಈಗ ಸಾರ್ವಜನಿಕ ಪ್ರಾಧಿಕಾರವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

    ಪಿಎಂ ಕೇರ್ಸ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದಾದರೆ ಇದಕ್ಕೆ ಹಣ ನೀಡುವಂತೆ ಸರ್ಕಾರ ಜನರನ್ನು ಪ್ರೇರೆಪಿಸಬಹುದಾ ಎಂದು ಕೋರ್ಟ್ ಪರಿಶೀಲಿಸಬೇಕು. ಮಾಹಿತಿ ಹಕ್ಕು ಆರ್ಟಿಕಲ್ 19(1)(ಎ) ಸಾರ್ವಜನಿಕ ಪ್ರಾಧಿಕಾರವಲ್ಲದಿದ್ದರೂ ಜನರ ಹಣ ವ್ಯಯದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇದನ್ನು ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

    ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಈ ಸಂದರ್ಭದಲ್ಲಿ ಪಿಎಂ ಕೇರ್ಸ್ ಫಂಡ್ ಯಾವುದಕ್ಕೆ ಹೇಗೆ ಬಳಕೆಯಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಬೇಕು. ಈ ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೊರೊನಾಗಾಗಿ ನಿಧಿ ಸ್ಥಾಪಿಸಿರುವಾಗ ಮಾಹಿತಿ ನೀಡಲು ಹಿಂಜರಿಕೆ ಯಾಕೆ ಹಾಗೂ ಇದರ ದುರ್ಬಳಕೆಯಾಗಿಲ್ಲ ಎನ್ನುವುದಾದರೆ ಮಾಹಿತಿ ನೀಡಲು ನಿರಾಕರಿಸುವುದೇಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿ ಜೂನ್ 10ರ ಬಳಿಕ ವಿಚಾರಣೆಗೆ ಬರಲಿದೆ.