Tag: plowing

  • ಉಳುಮೆ ಮಾಡಿ, ಬೀಜ ಬಿತ್ತಿದ ರೇಣುಕಾಚಾರ್ಯ

    ಉಳುಮೆ ಮಾಡಿ, ಬೀಜ ಬಿತ್ತಿದ ರೇಣುಕಾಚಾರ್ಯ

    ದಾವಣಗೆರೆ: ಶಾಸಕ ರೇಣುಕಾಚಾರ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಂಚಿನ ವೇಗದಲ್ಲಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನತೆಯ ಮನ ಗೆದ್ದಿದ್ದಾರೆ. ಅದೇ ರೀತಿ ಇದೀಗ ಉಳುಮೆ ಮಾಡಿ, ಬೀಜ ಬಿತ್ತುವ ಮೂಲಕ ತಮ್ಮ ಅಭಿಮಾನಿಯನ್ನು ಸಂತಸಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಅವರು ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಹೊನ್ನಾಳಿಗೆ ಆಗಮಿಸಿ, ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಬಿತ್ತನೆ ಕಾರ್ಯ ಮಾಡುತ್ತಿದ್ದರು, ಇವರು ಉಳುಮೆ ಮಾಡುತ್ತಿದ್ದ ಹೊಲದ ಬಳಿಯ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ಎಂ.ಪಿ.ರೇಣುಕಚಾರ್ಯ, ಜಮೀನಿಗೆ ಭೇಟಿ ನೀಡಿ ಅವರ ಅಪೇಕ್ಷೆಯಂತೆ ಜೊತೆಗೂಡಿ ಬೇಸಾಯ ಮಾಡಿ, ಬೀಜ ಬಿತ್ತುವ ಮೂಲಕ ಉತ್ಸಾಹ ತುಂಬಿದರು.

    ಶಾಸಕ ರೇಣುಕಾಚಾರ್ಯ ಮತ್ತೊಂದು ಮನಮುಟ್ಟುವ ಕೆಲಸ ಮಾಡಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿ ಮತ್ತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಈಗಾಗಲೇ ಹಲವು ದಿನಗಳಿಂದ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ಸೋಂಕಿತರ ಸೇವೆ ಮಾಡುತ್ತಿರುವ ರೇಣುಕಾಚಾರ್ಯ, ಕೇರ್ ಸೆಂಟರ್ ನಲ್ಲಿದ್ದ ಇಬ್ಬರು ಬಾಲಕಿಯರ ಹುಟ್ಟುಹಬ್ಬ ಆಚರಿಸಿದ್ದಾರೆ. ತಂದೆ, ತಾಯಿ ಊರಲ್ಲಿದ್ದರಿಂದ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಯಾರೂ ಇಲ್ಲ ಎಂಬ ಕೊರಗನ್ನು ನೀಗಿಸಿದ್ದಾರೆ. ಬಾಲಕಿಯರಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಕೋರಿದ್ದಾರೆ.

  • ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಲಾಕ್‍ಡೌನ್‍ನಲ್ಲಿ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡ್ತಿರುವ ನಟಿ ಕೀರ್ತಿ

    ಚೆನ್ನೈ: ಕೊರೊನಾ ಲಾಕ್‍ಡೌನ್ ಸಮಯವನ್ನು ಕೆಲವು ನಟ-ನಟಿಯರು ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಲಾಕ್‍ಡೌನ್‍ನಲ್ಲಿ ಏನು ಮಾಡುತ್ತಿದ್ದೇವೆ ಎಂದು ಶೇರ್ ಮಾಡುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ಕೊಡುತ್ತಿದ್ದಾರೆ. ಆದರೆ ತಮಿಳು ನಟಿಯೊಬ್ಬರು ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡೋದ್ರಲಿ ಬ್ಯುಸಿಯಾಗಿದ್ದಾರೆ.

    ತಮಿಳು ನಟಿ ಕೀರ್ತಿ ಪಾಂಡಿಯನ್ ಟ್ರ್ಯಾಕ್ಟರ್ ಓಡಿಸುತ್ತಾ ಹೊಲ ಉಳುಮೆ ಮಾಡುತ್ತಾ ತಮ್ಮ ಲಾಕ್‍ಡೌನ್ ಅವಧಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಾ ಲಾಕ್‍ಡೌನ್ ಸಮಯ ಕಳೆಯುತ್ತಿರುವ ನಟಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮತ್ತೆ ಕೃಷಿಯನ್ನು ಪ್ರಾರಂಭಿಸಿದ್ದೇನೆ ಎಂದು ಕ್ಯಾಪ್ಷನ್ ಜೊತೆಗೆ ಕ್ವಾರಂಟೈನ್, ಫಾರ್‍ಮಿಂಗ್ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವಿಟ್ಟರ್, ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

    ಮಲಯಾಳಂನಿಂದ ತಮಿಳಿಗೆ ರಿಮೇಕ್ ಆಗುತ್ತಿರುವ ಹೆಲನ್ ಸಿನಿಮಾದಲ್ಲಿ ಕೀರ್ತಿ ಪಾಂಡಿಯನ್ ಸದ್ಯ ನಟಿಸುತ್ತಿದ್ದಾರೆ. ಕೀರ್ತಿ ತಂದೆ ಅರುಣ್ ಪಾಂಡಿಯನ್ ಕೂಡ ನಟರಾಗಿದ್ದು, ಸಾಕಷ್ಟು ತಮಿಳಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.

    ಕೀರ್ತಿ ಅವರು ಪಕ್ಕಾ ಹಳ್ಳಿ ಹುಡುಗಿಯಂತೆ ಟ್ರ್ಯಾಕ್ಟರ್ ಹತ್ತಿ ಹೊಲ ಉಳುಮೆ ಮಾಡುತ್ತಿರುವ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಕೀರ್ತಿ ಅವರ ಹಳ್ಳಿ ಹುಡುಗಿ ಅವತಾರಕ್ಕೆ ಮನಸೋತಿದ್ದಾರೆ.

    https://www.instagram.com/p/B_FS5CTnDDg/

  • ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಸಚಿವ ಸಿ.ಟಿ ರವಿ

    ಟ್ರ್ಯಾಕ್ಟರ್ ಏರಿ ಉಳುಮೆ ಮಾಡಿದ ಸಚಿವ ಸಿ.ಟಿ ರವಿ

    ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಕೆಲ ಸಚಿವರು ಹಾಗೂ ಶಾಸಕರೂ ಕ್ಷೇತ್ರದಲ್ಲೇ ಇಲ್ಲ. ಈ ಮಧ್ಯೆ ಕ್ಷೇತ್ರದ ಅಭಿವೃದ್ಧಿ ಜೊತೆ, ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಜೊತೆ ಸಭೆ ನಡೆಸ್ತಿರೋ ಚಿಕ್ಕಮಗಳೂರು ಉಸ್ತುವಾರಿ ಹಾಗೂ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿ ಬಿಡುವಿನ ವೇಳೆಯಲ್ಲಿ ಅಪ್ಪಟ ರೈತರಾಗಿದ್ದಾರೆ.

    ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿರುವ ತಮ್ಮ ಫಾರ್ಮ್‍ಹೌಸ್‍ನಲ್ಲಿ ಟ್ರ್ಯಾಕ್ಟರ್ ಏರಿ ಸಿಟಿ ರವಿ ಅವರು 1 ಗಂಟೆಗಳ ಕಾಲ ಭೂಮಿಯನ್ನ ಹದ ಮಾಡಿದ್ದಾರೆ. ಭಾನುವಾರ ನಗರದಲ್ಲಿ ಉತ್ತಮ ಮಳೆಯಾಗಿದ್ದು, ಭೂಮಿ ಕೂಡ ಹಸಿಯಾಗಿರುವುದರಿಂದ ತಾವೇ ಟ್ರ್ಯಾಕ್ಟರ್ ಏರಿ ಭೂಮಿಯನ್ನ ಹದ ಮಾಡುವ ಮೂಲಕ ಸಚಿವರು ಉಳುಮೆ ಮಾಡಿದ್ದಾರೆ.

    ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಆಗಾಗಾ ಅಧಿಕಾರಿಗಳ ಜೊತೆ ಸಭೆ ನಡೆಸ್ತಿರೋ ಸಿ.ಟಿ ರವಿ ಅವರು ನಗರದ ನಿರಾಶ್ರಿತರು ಹಾಗೂ ಬಡವರಿಗೆ ಆಹಾರದ ಸಾಮಗ್ರಿ ಕೂಡ ವಿತರಿಸಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿಗೂ ಭೇಟಿ ನೀಡಿ, ಕೊರೊನಾ ನಿಯಂತ್ರಣಕ್ಕೆ ಹಾಗೂ ಈ ಮಹಾಮಾರಿ ಜಿಲ್ಲೆಗೆ ಬಾರದಂತೆ ಸೂಕ್ತ ಕ್ರಮಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಎತ್ತುಗಳು ಸಿಗದ್ದಕ್ಕೆ ಬೈಕ್ ಸಹಾಯದಿಂದ ಉಳುಮೆ

    ಎತ್ತುಗಳು ಸಿಗದ್ದಕ್ಕೆ ಬೈಕ್ ಸಹಾಯದಿಂದ ಉಳುಮೆ

    ದಾವಣಗೆರೆ: ಒಂದೆಡೆ ಜಿಲ್ಲೆಯಲ್ಲಿ ಮಳೆ ಸಮರ್ಪಕವಾಗಿ ಬಾರದೇ ರೈತರು ಕಂಗೆಟ್ಟಿದ್ದರೆ, ಇನ್ನೊಂದೆಡೆ ಉಳುಮೆ ಮಾಡಲು ಎತ್ತುಗಳು ಸಿಗದೇ ಕಂಗಾಲಾಗಿದ್ದು ಬೈಕ್ ಸಹಾಯದಿಂದ ಉಳುಮೆ ಮಾಡಲು ಮುಂದಾಗಿದ್ದಾರೆ.

    ಭೂಮಿ ಹದವಿದ್ದಾಗಲೇ ಉಳುಮೆ ಮಾಡಬೇಕು. ಆದರೆ, ಎತ್ತುಗಳಿಲ್ಲದ ರೈತರಿಗೆ ಈ ಸಂದರ್ಭದಲ್ಲಿ ಉಳುಮೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಅಲ್ಲದೆ, ಸೀಸನ್‍ನಲ್ಲಿ ಬಾಡಿಗೆಗೆ ಎತ್ತುಗಳೂ ಸಹ ಸಿಗುವುದಿಲ್ಲ. ಹೇಗಾದರೂ ಮಾಡಿ ಉಳುಮೆ ಮಾಡಬೇಕಲ್ಲ ಎಂದು ಚಿಂತಿಸಿದ ರೈತರು ಬೈಕ್ ಮೂಲಕ ಉಳುಮೆ ಮಾಡಲು ಮುಂದಾಗಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತರೊಬ್ಬರು ಎತ್ತುಗಳು ಸಿಗದೇ ಕಂಗಾಲಾಗಿದ್ದು, ಹೀಗಾಗಿ ಮನೆಯಲ್ಲಿದ್ದ ಬೈಕಿಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದಾರೆ. ರೈತ ನೀಲಪ್ಪ ಅವರು ಬೈಕಿಗೆ ಕುಂಟೆ ಕಟ್ಟಿ ಉಳುಮೆ ಮಾಡಿದ್ದು, ಹೊಲ ಉಳುಮೆ ಮಾಡಲು ಎತ್ತುಗಳು ಸಿಗದೇ ಬೈಕ್‍ಗೆ ಮೊರೆ ಹೋಗಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಒಬ್ಬರಿಗೆ ಉಳುಮೆ ಮಾಡಲು ಸಾಧ್ಯವಾಗದ ಕಾರಣ ನೀಲಪ್ಪ ಅವರ ಮಗ ಸಹ ತಂದೆಗೆ ಸಹಾಯ ಮಾಡಿದ್ದಾರೆ. ಎತ್ತು ಬಾಡಿಗೆ ಪಡೆದು ಉಳುಮೆ ಮಾಡಲು ಸುಮಾರು ಎರಡು ಸಾವಿರ ರೂ.ಹಣ ಬೇಕು. ಅಲ್ಲದೆ, ಈ ಸಂದರ್ಭದಲ್ಲಿ ಎತ್ತುಗಳೂ ಸಹ ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಹೀಗಾಗಿ ಬೈಕ್ ಮೂಲಕ ಉಳುಮೆ ಮಾಡುತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ.

    ಚನ್ನಗಿರಿ ತಾಲೂಕು ಬರಕ್ಕೆ ಸಿಲುಕಿದ್ದು ಸ್ವಲ್ಪ ಮಳೆಯಾದಾಗಲೂ ಸಹ ಎಲ್ಲರೂ ಉಳುಮೆ ಮಾಡುವುದರಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಎತ್ತುಗಳು ಸಿಗುವುದಿಲ್ಲ. ನಮಗೆ ಕೇವಲ ಅರ್ಧ ಎಕರೆ ಜಮೀನು ಇದ್ದು, ಹೀಗಾಗಿ ಬೈಕ್ ಮೂಲಕವೇ ಉಳುಮೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

  • ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯದಲ್ಲಿ ಉಳುಮೆ ಮಾಡುತ್ತಲೇ ಸಾವನ್ನಪ್ಪಿದ ಅನ್ನದಾತ

    ಮಂಡ್ಯ: ಜಮೀನಿನಲ್ಲಿ ಉಳುಮೆ ಮಾಡುವಾಗ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

    58 ವರ್ಷದ ಬೋರೆಗೌಡ ಎಂಬವರೇ ಹೃದಯಾಘಾತದಿಂದ ಸಾವನ್ನಪ್ಪಿದ ಕರ್ಮಯೋಗಿ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿತ್ತು. ಹೀಗಾಗಿ ಬೋರೆಗೌಡ ಅವರು ಶುಕ್ರವಾರ ಮಧ್ಯಾಹ್ನ ತಮ್ಮ ಮಗನಿಗೆ ಬಿತ್ತನೆ ಬೀಜ ತರಲು ಹೇಳಿ, ಜಮೀನಲ್ಲಿ ಉಳುಮೆ ಮಾಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದು ಬಿದಿದ್ದಾರೆ.

    ಈ ವೇಳೆ ಅಕ್ಕಪಕ್ಕದ ಜಮೀನಲ್ಲಿ ಕೆಲಸ ಮಾಡ್ತಿದ್ದ ರೈತರು ಬರುವಷ್ಟರಲ್ಲಿ ರೈತ ಬೋರೇಗೌಡ ಸಾವನ್ನಪ್ಪಿದ್ದಾರೆ. ಒಂದು ಕಡೆ ಉಳುಮೆಗೆಂದು ಕಟ್ಟಿದ್ದ ಎತ್ತುಗಳು, ಮತ್ತೊಂದು ಕಡೆ ಹೃದಯಾಘಾತದಿಂದ ಜಮೀನಲ್ಲೇ ಮೃತಪಟ್ಟ ರೈತನ ದೃಶ್ಯ ಎಂತಹವರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು.